- ಬುಧವಾರ ಬೆಳಗ್ಗೆಯಿಂದ ಜ್ವರ ಹಾಗೂ ವಾಂತಿ–ಭೇದಿಯಿಂದ ಬಳಲಿದ ಮಕ್ಕಳು
- 140 ಜನರನ್ನು ಮತ್ತೆ ಪರೀಕ್ಷೆ ಮಾಡಿದಾಗ 40 ಜನರಲ್ಲಿ ವಾಂತಿ ಭೇದಿ ಪ್ರಕರಣ ಪತ್ತೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್‌ನ ಸಮುಚ್ಚಯದಲ್ಲಿ ಸುಮಾರು 118 ನಿವಾಸಿಗಳು ಕಲುಷಿತ ನೀರು ಸೇವಿಸಿ ‘ಗ್ಯಾಸ್ಟ್ರೋಎಂಟರೈಟಿಸ್’ನಿಂದ ಬಳಲುತ್ತಿದ್ದಾರೆ. ಈ ಪೈಕಿ 79 ಮಕ್ಕಳು ಅಸ್ವಸ್ಥಗೊಂಡಿದ್ದು, 2 ಮಕ್ಕಳ ಸ್ಥಿತಿ ಗಂಭೀರವಾಗಿದೆ.
ಕುಡಿಯುವ ನೀರಿನ ಟ್ಯಾಂಕ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿ ಜನರ ಜೀವಕ್ಕೆ ಕುತ್ತು ತಂದ ಆರೋಪದಡಿ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಿದ್ದ ಕಂಪನಿ ಹಾಗೂ ಇತರರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಬಿಎಂಪಿ ಆರೋಗ್ಯಾಧಿಕಾರಿ ಬಾಲಸುಂದರ್, “ಕಲುಷಿತ ನೀರು ಕುಡಿದು 118 ನಿವಾಸಿಗಳು ಅಸ್ವಸ್ಥಗೊಂಡಿದ್ದರು. ಇದರಲ್ಲಿ 79 ಮಕ್ಕಳಿದ್ದಾರೆ. ಈ ಪೈಕಿ 2 ಮಕ್ಕಳು ಅಡ್ಮಿಟ್ ಆಗಿದ್ದರು. ಅವರು ಕೂಡ ಇಂದು ಡಿಸ್ಚಾರ್ಜ್ ಆಗುತ್ತಿದ್ದಾರೆ. ಪ್ರತಿಯೊಂದು ಫ್ಲಾಟ್‌ಗೂ ಕೂಡ ನಮ್ಮ ವೈದ್ಯರ ತಂಡ ತೆರಳಿ ಚಿಕಿತ್ಸೆ ನೀಡುತ್ತಿದೆ. ಈ ವೇಳೆ, 140 ಜನರನ್ನು ಮತ್ತೆ ಪರೀಕ್ಷೆ ಮಾಡಿದಾಗ 35 ರಿಂದ 40 ಜನಕ್ಕೆ ವಾಂತಿ ಭೇದಿ ಪ್ರಕರಣ ಕಂಡುಬಂದಿದೆ. ಅವರಿಗೆ ಔಷಧಿ ಕೊಟ್ಟಿದ್ದೇವೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ” ಎಂದು ಹೇಳಿದರು.
“ಅಪಾರ್ಟ್‌ಮೆಂಟ್‌ಗೆ ಖಾಸಗಿ ಟ್ಯಾಂಕರ್‌ಗಳ ಜೊತೆಗೆ ನಾಲ್ಕು ಬೋರ್‌ವೆಲ್‌ಗಳ ನೀರು ಬಳಸಲಾಗುತ್ತಿದೆ. ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಜೂನ್ 5ರಂದು ಖಾಸಗಿ ಟ್ಯಾಂಕರ್‌ನಿಂದ ನೀರು ಖರೀದಿಸಿತು. ನಂತರ ಎಂಟು ಬ್ಲಾಕ್‌ಗಳ ಪೈಕಿ ಎರಡರಲ್ಲಿ ನಿವಾಸಿಗಳು ಅತಿಸಾರ ಮತ್ತು ವಾಂತಿಯಂತಹ ರೋಗಲಕ್ಷಣಗಳನ್ನು ಅನುಭವಿಸಿದರು. ಅಪಾರ್ಟ್‌ಮೆಂಟ್ ಇನ್ನೂ ನಿರ್ಮಾಣ ಹಂತದಲ್ಲಿದ್ದು, ಸೌಲಭ್ಯ ಕಲ್ಪಿಸುವ ಬಗ್ಗೆ ಬಿಲ್ಡರ್ ಮತ್ತು ಅಪಾರ್ಟ್‌ಮೆಂಟ್ ಮಾಲೀಕರ ನಡುವೆ ವಿವಾದಗಳಿವೆ” ಎಂದು ಬಾಲಸುಂದರ್ ತಿಳಿಸಿದರು.
“ಬಾಧಿತರಾದವರಲ್ಲಿ ಹೆಚ್ಚಿನವರು ಮಕ್ಕಳು. ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದ್ದು, ರೋಗಲಕ್ಷಣಗಳೊಂದಿಗೆ ಕ್ಲಿನಿಕ್‌ಗೆ ಬಂದವರಿಗೆ ಚಿಕಿತ್ಸೆ ನೀಡಲಾಗಿದೆ. ಬಿಬಿಎಂಪಿಯು ಅಪಾರ್ಟ್‌ಮೆಂಟ್‌ನ ನೀರಿನ ತೊಟ್ಟಿಯನ್ನು ಬ್ಲೀಚ್ ಮಾಡಿ ಕ್ಲೋರಿನೇಟ್ ಮಾಡಿದ್ದು, ಸದ್ಯಕ್ಕೆ ಹೊರಗಿನಿಂದ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದೆ” ಎಂದು ಹೇಳಿದರು.
“ಸುಮಾರು ಮೂರು ವರ್ಷಗಳಿಂದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿಲ್ಲ ಎಂದು ಆರೋಪಿಸಿ ಬಿಬಿಎಂಪಿ ಬಿಲ್ಡರ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಐಪಿಸಿ ಸೆಕ್ಷನ್ 277, 338 ಅಡಿ ಎಫ್‌ಐಆರ್ ದಾಖಲಾಗಿದೆ. ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಿದ್ದ ಕಂಪನಿ ಹಾಗೂ ಇತರರಿಗೆ ನೋಟಿಸ್ ನೀಡಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ‘ನಮ್ಮ ಮೆಟ್ರೋ’ ಯೋಜನೆಗಾಗಿ 203 ಮರ ಕಡಿಯಲು ಅನುಮತಿ ನೀಡಿದ ಹೈಕೋರ್ಟ್
“ಕುಡಿಯುವ ನೀರು ಪೂರೈಸಲು ದೊಡ್ಡ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಎಲ್ಲ ಫ್ಲ್ಯಾಟ್‌ಗಳಿಗೆ ಟ್ಯಾಂಕ್‌ಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತದೆ. ಆದರೆ, ಮೂರು ವರ್ಷಗಳಿಂದ ಟ್ಯಾಂಕ್ ಸ್ವಚ್ಛಗೊಳಿಸಿಲ್ಲ. ನಿರ್ವಹಣೆ ಕೊರತೆಯಿಂದಾಗಿ ನೀರು ಕಲುಷಿತಗೊಂಡಿದೆ. ಅದೇ ನೀರು ಕುಡಿದ ಮಕ್ಕಳು, ಬುಧವಾರ ಬೆಳಗ್ಗೆಯಿಂದ ಜ್ವರ ಹಾಗೂ ವಾಂತಿ–ಭೇದಿಯಿಂದ ಬಳಲುತ್ತಿದ್ದಾರೆ” ಎಂದು ಪೊಲೀಸರು ಹೇಳಿದರು.