-
ʼಸಿ ಟಿ ರವಿ, ಅಶ್ವತ್ಥನಾರಾಯಣ ಎಂಬ ಅವಿವೇಕಿಗಳು ಒಕ್ಕಲಿಗ ಸಮುದಾಯದ ವಿರುದ್ಧ ಬೇರೆಯವರನ್ನು ಎತ್ತಿ ಕಟ್ಟುತ್ತಿದ್ದಾರೆʼ
-
ಜಾತಿ, ಕೋಮುಗಳ ನಡುವೆ ದ್ವೇಷ ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ಪ್ರಯತ್ನಿಸುತ್ತಿದೆ: ಡಿಕೆಶಿ
ಸಿ ಟಿ ರವಿ ಮತ್ತು ಅಶ್ವತ್ಥನಾರಾಯಣ ಎಂಬ ಅವಿವೇಕಿಗಳು ಈ ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಒಕ್ಕಲಿಗ ಸಮುದಾಯದ ವಿರುದ್ಧ ಬೇರೆಯವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದರು.
ಬೆಳಗಾವಿಯಲ್ಲಿ ಸೋಮವಾರ ಮಾತನಾಡಿ, “ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನನನ್ನು ಒಕ್ಕಲಿಗರು ಕೊಂದರು, ಆ ಮೂಲಕ ಒಕ್ಕಲಿಗರು ದೇಶವಿರೋಧಿಗಳು, ಕೊಲೆಗಡುಕರು ಎಂದು ಅವರ ಗೌರವ, ಸ್ವಾಭಿಮಾನಕ್ಕೆ ಮಸಿ ಬಳಿಯಲಾಗುತ್ತಿದೆ” ಎಂದು ಆರೋಪಿಸಿದರು.
“ಇತಿಹಾಸದ ಯಾವ ದಾಖಲೆಯಲ್ಲಿ ಉರಿಗೌಡ ನಂಜೇಗೌಡ ಟಿಪ್ಪು ಸುಲ್ತಾನ್ ಕೊಂದರು ಎಂಬುದು ಇದೆ? ಬಿಜೆಪಿಯವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾರನ್ನು ಬೇಕಾದರೂ ಸೃಷ್ಟಿಸುತ್ತಾರೆ, ಯಾರ ಮನೆಯನ್ನು ಬೇಕಾದರೂ ಹಾಳು ಮಾಡುತ್ತಾರೆ” ಎಂದು ಹರಿಹಾಯ್ದರು.
“ಟಿಪ್ಪು ಇತಿಹಾಸದ ಬಗ್ಗೆ ರಾಷ್ಟ್ರಪತಿಗಳು ರಾಜ್ಯ ವಿಧಾನಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಟಿಪ್ಪು ಬದುಕು, ಸಾವು, ಸಾಧನೆ ಬಗ್ಗೆ ಹಲವು ಇತಿಹಾಸ ಪುಸ್ತಕಗಳಿವೆ. ಅವುಗಳಲ್ಲಿ ಇಲ್ಲದ ವಿಚಾರವನ್ನು ಇವರು ಸೃಷ್ಟಿಸಿದ್ದಾರೆ” ಎಂದರು.
ಇತಿಹಾಸ ತಿರುಚುವಲ್ಲಿ ಬಿಜೆಪಿ ಎತ್ತಿದ ಕೈ
“ಬಸವಣ್ಣ, ಕುವೆಂಪು, ನಾರಾಯಣ ಗುರು, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ಇತಿಹಾಸ ತಿರಿಚಿದ್ದ ಬಿಜೆಪಿ, ಈಗ ಉರಿಗೌಡ ನಂಜೇಗೌಡ ಎಂಬ ಹೆಸರಲ್ಲಿ ಒಕ್ಕಲಿಗರ ಇತಿಹಾಸ ತಿರುಚುತ್ತಿದೆ. ಜಾತಿ, ಕೋಮುಗಳ ನಡುವೆ ದ್ವೇಷ ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಮಂಡ್ಯ ಜಿಲ್ಲೆಗೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಾ. ದೇ. ಜವರೇಗೌಡ ಅವರ ಸಂಪಾದಕತ್ವದಲ್ಲಿ ‘ಸುವರ್ಣ ಮಂಡ್ಯ ‘ ಎಂಬ ಸಂಚಿಕೆ ತರಲಾಗಿತ್ತು. ಅದರ ಪರಿಸ್ಕೃತ ಸಂಚಿಕೆಯಲ್ಲಿ ಸಂಶೋಧಕ ಹ.ಕ. ರಾಜೇಗೌಡರು ಮಂಡ್ಯ ಐವತ್ತು; ಒಂದು ಪಕ್ಷಿ ನೋಟ ಎಂಬ ಲೇಖನ ಬರೆದಿದ್ದರು. ಅದರಲ್ಲಿ ದೊಡ್ಡನಂಜೆಗೌಡ, ಉರಿಗೌಡ ಎಂಬುವರು ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತಿದ್ದರು ಎಂದು ಉಲ್ಲೇಖವಿದೆ. ಇತಿಹಾಸದಲ್ಲಿ ಇಲ್ಲದ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖ ಮಾಡಿರುವ ಬಗ್ಗೆ ಕೆಲವರು ರಾಜೇಗೌಡರನ್ನು ಪ್ರಶ್ನಿಸಿದಾಗ ಒಕ್ಕಲಿಗರಿಗೆ ಪ್ರಾಮುಖ್ಯತೆ ಸಿಗಲಿ ಎಂದು ಹೀಗೆ ಬರೆದಿದ್ದೇನೆ, ಇರಲಿ ಬಿಡಿ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಈಗ ಸ್ಪಷ್ಟನೆ ನೀಡಲು ಹ.ಕ. ರಾಜೇಗೌಡರು ಜೀವಂತವಾಗಿ ಇಲ್ಲ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿ ಹೊಸ ಇತಿಹಾಸ ಸೃಷ್ಟಿಸಲು ಹೊರಟಿದೆ” ಎಂದು ಟೀಕಿಸಿದರು.
“ಒಕ್ಕಲಿಗ ಸಮುದಾಯದ ಹೆಸರನ್ನು ಬಳಸಿಕೊಂಡು ರಾಜಕೀಯವಾಗಿ ಬೆಳೆಯುತ್ತಿರುವ ಇವರು ಈಗ ಅದೇ ಸಮಾಜದ ಸ್ವಾಭಿಮಾನ ಮತ್ತು ಘನತೆಗೆ ಮಸಿ ಬಳಿಯುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಹಲವು ಸಂಘಟನೆಗಳು ನನಗೆ ಒತ್ತಡ ಹೇರುತ್ತಿದ್ದು, ಇತಿಹಾಸ ತಿರುಚುವ ಈ ಷಡ್ಯಂತ್ರ ಖಂಡಿಸಿ, ಅದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.