ಮಳೆ ಕೈಕೊಟ್ಟು ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಹಿನ್ನೆಲೆಯಲ್ಲಿ ಸಾಲದ ಹೊರೆ ಹೆಚ್ಚಾಗಿ ಮನನೊಂದ ರೈತರೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸಗಿ ತಾಲೂಕಿನ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಯಡಹಳ್ಳಿ ಗ್ರಾಮದ ದೇವಿಂದ್ರಪ್ಪ ಕೃಷ್ಣಪ್ಪ ಟೇಲರ್ (46) ಮೃತಪಟ್ಟ ರೈತ. ಕೃಷಿ ಚಟುವಟಿಕೆಗಳಿಗಾಗಿ ಸುರಪುರದ ಕರ್ನಾಟಕ ಬ್ಯಾಂಕ್‌ನಲ್ಲಿ ಸುಮಾರು ₹10 ಲಕ್ಷ ಸಾಲ ಮಾಡಿಕೊಂಡಿದ್ದರೆ, ಖಾಸಗಿ ವ್ಯಕ್ತಿಗಳಿಂದಲೂ ಸುಮಾರು ₹10 ಲಕ್ಷ ಕೈಸಾಲ ಪಡೆದಿದ್ದರು ಎನ್ನಲಾಗಿದೆ.
ಈ ವರ್ಷವೂ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಪ್ರದೇಶದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇವಿಂದ್ರಪ್ಪ ಅವರು ಬೆಳೆದಿದ್ದ ಬೆಳೆ ನಿರೀಕ್ಷೆಯಂತೆ ಕೈ ಸೇರಿರಲಿಲ್ಲ. ಒಂದೆಡೆ ಬೆಳೆ ನಷ್ಟ, ಮತ್ತೊಂದೆಡೆ ಸಾಲದ ಒತ್ತಡದಿಂದಾಗಿ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕೀಟನಾಶಕ ಸೇವಿಸಿದ್ದ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
This video cannot be played in your browser. Open the video directly
ಇದನ್ನು ಓದಿದ್ದೀರಾ? ಕಲಬುರಗಿ | ಹಸುಗೂಸನ್ನು ಕಸದ ರಾಶಿಗೆ ಎಸೆದು ಪರಾರಿ; ತಾಯಿ, ಅಜ್ಜಿ ಪೊಲೀಸರ ವಶಕ್ಕೆ
ದೇವಿಂದ್ರಪ್ಪ ಅವರ ಸಾವಿನಿಂದ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಪತ್ನಿ ಹಾಗೂ ಮೂವರು ಮಕ್ಕಳು ಸೇರಿದಂತೆ ಬಂಧುಗಳು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





