ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಎದುರಾಗುತ್ತಿರುವ ಸಮಸ್ಯೆಗಳು, ದಾಖಲೆಗಳ ಕೊರತೆ, ಹೆಸರು-ವಯಸ್ಸು-ವಿಳಾಸದಲ್ಲಿನ ವ್ಯತ್ಯಾಸ ಹಾಗೂ ಆದಿವಾಸಿಗಳು ಸೇರಿದಂತೆ ಅಂಚಿನ ಸಮುದಾಯಗಳ ಆತಂಕಗಳ ಕುರಿತು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಪಾಲೆಮಾಡುವಿನಲ್ಲಿ ಪಬ್ಲಿಕ್ ಹಿಯರಿಂಗ್ ನಡೆಯಿತು.
ಸಾಮಾಜಿಕ ಹೋರಾಟಗಾರ, ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ವಿವಿಧ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನೂರಾರು SIR ಸಂತ್ರಸ್ತರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.
“ಜನ ಅಳುತ್ತಿರುವುದು ಮಾಧ್ಯಮದ ಕಣ್ಣಿಗೆ ಕಾಣುತ್ತಿಲ್ಲ”

ಸಭೆಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, SIR ಕುರಿತು ಸಂತ್ರಸ್ತರ ಅಹವಾಲುಗಳನ್ನು ಮಾಧ್ಯಮಗಳು ಇನ್ನಷ್ಟು ಗಂಭೀರವಾಗಿ ಗಮನಿಸಬೇಕು. “ಈ ಸಭೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಮಾಧ್ಯಮವನ್ನು ನಂಬಿಯೇ ಜನರು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಆದರೆ, ಮಾಧ್ಯಮ ಹೋದ ಕಡೆ ಎಲ್ಲವೂ ಸುದ್ದಿಯಾಗುವುದಿಲ್ಲ. ಜನರು ಅಳುತ್ತಿರುವುದು, ಅವರ ಸಮಸ್ಯೆಗಳು ಮಾಧ್ಯಮದ ಕಣ್ಣಿಗೆ ಕಾಣದಿರುವುದು ನೋವಿನ ಸಂಗತಿ” ಎಂದು ಅವರು ಹೇಳಿದರು.
This video cannot be played in your browser. Open the video directly
ಸಾಮಾಜಿಕ ಮಾಧ್ಯಮಗಳಲ್ಲಿಯೂ ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಆತಂಕಗಳಿವೆ. ಇತ್ತೀಚಿಗೆ ಕೇಂದ್ರ ಸರ್ಕಾರ ಯುಟ್ಯೂಬ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ವೀಡಿಯೊ ಡಿಲೀಟ್ ಮಾಡುವ ಹಂತಕ್ಕೆ ಬಂದಿದೆ ಎಂದು ಹೇಳಿದ ಅವರು, ಸಾಮಾನ್ಯ ಜನರ ಧ್ವನಿ ಸಾರ್ವಜನಿಕವಾಗಿ ಕೇಳಿಸಿಕೊಳ್ಳುವಂತೆ ಮಾಡುವುದು ನಾಗರಿಕ ಸಮಾಜದ ಜವಾಬ್ದಾರಿ ಎಂದರು.
“SIR ನಿರಂತರ ಪರಿಷ್ಕರಣೆ ಪ್ರಕ್ರಿಯೆಯಲ್ಲ; ಆರು ತಿಂಗಳಲ್ಲೇ ಮತ್ತೆ ಏಕೆ?”
ಮತದಾರರ ಪಟ್ಟಿಯ ಪರಿಷ್ಕರಣೆ ಚುನಾವಣಾ ಆಯೋಗದ ನಿರಂತರ ಜವಾಬ್ದಾರಿಯಾಗಿದೆ. ಹೊಸ ಮತದಾರರ ಸೇರ್ಪಡೆ, ಹೆಸರು-ವಿಳಾಸ ತಿದ್ದುಪಡಿ, ಮೃತರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳ ಪರಿಶೀಲನೆ ಸೇರಿದಂತೆ ಹಲವು ಪ್ರಕ್ರಿಯೆಗಳು ಸಾಮಾನ್ಯವಾಗಿ ನಡೆಯುತ್ತವೆ. ಆದರೆ, 2025ರ ಮತದಾರರ ಪಟ್ಟಿಯ ನಂತರ ಕೆಲವೇ ತಿಂಗಳಲ್ಲಿ ಇಂತಹ ದೊಡ್ಡ ಪ್ರಮಾಣದ SIR ಪ್ರಕ್ರಿಯೆ ಏಕೆ ಬೇಕಾಯಿತು ಎಂಬುದಕ್ಕೆ ಸ್ಪಷ್ಟ ಉತ್ತರ ಬೇಕು ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು. 2025ರ ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯ ನಂತರವೂ ಚುನಾವಣಾ ಪಟ್ಟಿಯ ತಿದ್ದುಪಡಿ ಮತ್ತು ಪರಿಶೀಲನಾ ಪ್ರಕ್ರಿಯೆಗಳು ಮುಂದುವರಿದಿದ್ದವು ಎಂಬುದು ಚುನಾವಣಾ ಆಯೋಗದ ದಾಖಲೆಗಳಿಂದಲೂ ಸ್ಪಷ್ಟವಾಗುತ್ತದೆ. 2025ರ ಸಾಮಾನ್ಯ ಪರಿಷ್ಕರಣೆಯ ಅಂತಿಮ ಪ್ರಕಟಣೆ ಜನವರಿ 6, 2025ರಂದು ನಡೆದಿತ್ತು.
ಹೆಸರು ಒಂದೇ, ದಾಖಲೆಗಳಲ್ಲಿ ಹಲವು ವ್ಯತ್ಯಾಸ
SIR ಪ್ರಕ್ರಿಯೆಯಲ್ಲಿ ಹೆಸರು, ವಯಸ್ಸು, ಇನಿಷಿಯಲ್, ವಿಳಾಸ ಸೇರಿದಂತೆ ಸಣ್ಣಪುಟ್ಟ ವ್ಯತ್ಯಾಸಗಳು ದೊಡ್ಡ ಸಮಸ್ಯೆಯಾಗುತ್ತಿವೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು. “ಹೆಸರು ಒಂದಿಷ್ಟು ಬದಲಾಗಿರಬಹುದು. ವಯಸ್ಸಿನಲ್ಲಿ ವ್ಯತ್ಯಾಸವಿರಬಹುದು. ಇನಿಷಿಯಲ್ ಇರಬಹುದು ಅಥವಾ ಇಲ್ಲದಿರಬಹುದು. ವಿಳಾಸ ಬದಲಾಗಿರಬಹುದು. ಇಂತಹ ಕಾರಣಗಳಿಂದ ವ್ಯಕ್ತಿಯ ನಾಗರಿಕತ್ವ ಅಥವಾ ಮತದಾನದ ಹಕ್ಕನ್ನೇ ಪ್ರಶ್ನಿಸುವುದು ಸರಿಯೇ?” ಎಂದು ಅವರು ಪ್ರಶ್ನಿಸಿದರು. ಚುನಾವಣಾ ಆಯೋಗದ ಸ್ವಂತ SIR ಪೋರ್ಟಲ್‌ನಲ್ಲಿಯೂ ಹಳೆಯ ಮತದಾರರ ಪಟ್ಟಿಯ ಹೆಸರು ಮತ್ತು ಪ್ರಸ್ತುತ ವಿವರಗಳಲ್ಲಿ spelling ವ್ಯತ್ಯಾಸಗಳಿರಬಹುದು ಎಂದು ಸೂಚಿಸಲಾಗಿದೆ.
“1950ರಲ್ಲಿ ಎಲ್ಲರ ಬಳಿಯೂ ದಾಖಲೆಗಳಿರಲಿಲ್ಲ”
ಸ್ವಾತಂತ್ರ್ಯಾನಂತರದ ಭಾರತದ ಸಾಮಾಜಿಕ ವಾಸ್ತವವನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್, ಮತದಾನದ ಹಕ್ಕು ಕೆಲವು ವರ್ಗದ ಜನರಿಗೆ ಮಾತ್ರ ಸೀಮಿತವಾಗದೆ ಎಲ್ಲ ಅರ್ಹ ನಾಗರಿಕರಿಗೂ ಇರಬೇಕು ಎಂಬ ತತ್ವವೇ ಭಾರತದ ಪ್ರಜಾಪ್ರಭುತ್ವದ ಮೂಲಭಾಗ ಎಂದು ಹೇಳಿದರು. “1950ರ ಸಂದರ್ಭದಲ್ಲಿ ದೇಶದಲ್ಲಿ ಬಹಳಷ್ಟು ಜನರು ಅವಿದ್ಯಾವಂತರಾಗಿದ್ದರು. ಎಲ್ಲರ ಬಳಿಯೂ ಜನನ ಪ್ರಮಾಣಪತ್ರ, ಶಾಲಾ ದಾಖಲೆ, ಭೂ ದಾಖಲೆಗಳಿರಲಿಲ್ಲ. ತಮ್ಮ ವಯಸ್ಸು ಅಥವಾ ಹುಟ್ಟಿದ ದಿನಾಂಕವನ್ನು ಜನರು ಬರ, ಗಾಂಧೀಜಿ ಬಂದ ವರ್ಷ, ಪ್ಲೇಗ್ ಬಂದ ಸಮಯದಂತಹ ಘಟನೆಗಳ ಆಧಾರದಲ್ಲಿ ಹೇಳುವ ಪರಿಸ್ಥಿತಿ ಇತ್ತು. ಆ ಕಾಲದ ಜನರ ಬಳಿ ದಾಖಲೆಗಳಿಲ್ಲವೆಂಬ ಕಾರಣಕ್ಕೆ ಅವರ ಹಕ್ಕುಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
“ಇಂದಿಗೂ ಬಡವರು, ಆದಿವಾಸಿಗಳು ದಾಖಲೆಗಳಿಗಾಗಿ ಅಲೆಯುತ್ತಿದ್ದಾರೆ”
ಕೊಡಗಿನ ಆದಿವಾಸಿಗಳು ಹಾಗೂ ಅಂಚಿನ ಸಮುದಾಯಗಳ ಬದುಕಿನ ವಾಸ್ತವವನ್ನು SIR ಪ್ರಕ್ರಿಯೆಯೊಂದಿಗೆ ಜೋಡಿಸಿದ ಅವರು, ಮನೆ ಇಲ್ಲದವರು, ಭೂಮಿ ಇಲ್ಲದವರು, ಹಕ್ಕುಪತ್ರಕ್ಕಾಗಿ ವರ್ಷಗಳಿಂದ ಅಲೆದಾಡುತ್ತಿರುವವರು ದಾಖಲೆಗಳನ್ನು ಹೇಗೆ ಒದಗಿಸಬೇಕು? ಎಂದು ಪ್ರಶ್ನಿಸಿದರು. “ಇಂದಿಗೂ ಆದಿವಾಸಿಗಳಿಗೆ ಮನೆ ಇಲ್ಲ, ಜಾಗವಿಲ್ಲ, ಹಕ್ಕುಪತ್ರಕ್ಕಾಗಿ ಅಲೆಯುತ್ತಿದ್ದಾರೆ. ಉತ್ತರ ಕರ್ನಾಟಕದಿಂದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಾರೆ. ಕೇರಳ, ವಯನಾಡು ಭಾಗಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಉದ್ಯೋಗಕ್ಕಾಗಿ ಬೇರೆ ಕಡೆಗೆ ಹೋದರೆ ‘ಶಿಫ್ಟ್’ ಎಂದು ಗುರುತಿಸಿ ಮತಪಟ್ಟಿಯಿಂದಲೇ ಹೆಸರು ಕೈಬಿಡುವುದೇ?” ಎಂದು ಪ್ರಶ್ನಿಸಿದರು.
ಚಿಕ್ಕ ವಯಸ್ಸಿನ ಮದುವೆ, ಶಾಲಾ ದಾಖಲೆಗಳ ಕೊರತೆ, ವಯಸ್ಸಿನ ತಪ್ಪು ನಮೂದು, ಹೆಸರು ಬದಲಾವಣೆ ಮುಂತಾದವು ಗ್ರಾಮೀಣ ಮತ್ತು ಆದಿವಾಸಿ ಸಮಾಜದ ವಾಸ್ತವ ಸ್ಥಿತಿಯ ಭಾಗವಾಗಿವೆ. ಇವುಗಳನ್ನು ಕೇವಲ ದಾಖಲೆಗಳ ಮಾನದಂಡದಲ್ಲಿ ನೋಡದೆ ಸಾಮಾಜಿಕ ಹಿನ್ನೆಲೆಯಲ್ಲಿಯೂ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕದಲ್ಲಿ 1.08 ಕೋಟಿ ASDDO; 43.8 ಲಕ್ಷ ಮಂದಿಗೆ ನೋಟಿಸ್

SIRನ ಅತ್ಯಂತ ಚರ್ಚಿತ ಅಂಶವಾಗಿರುವ ASDDO -Absent, Shifted, Dead, Duplicate and Other ಪಟ್ಟಿಯ ಬಗ್ಗೆಯೂ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಕರ್ನಾಟಕದ 5.54 ಕೋಟಿ ಮತದಾರರ ಪೈಕಿ 1,07,96,415 ಮಂದಿಯನ್ನು ASDDO ವರ್ಗದಲ್ಲಿ ಗುರುತಿಸಲಾಗಿತ್ತು. ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 4.47 ಕೋಟಿ ಮತದಾರರು ಇದ್ದರು. ಸುಮಾರು 43.8 ಲಕ್ಷ ಮಂದಿಗೆ ‘logical discrepancy’ ಅಥವಾ ಹಿಂದಿನ ಮತದಾರರ ಪಟ್ಟಿಯೊಂದಿಗೆ mapping ಸಮಸ್ಯೆಗಳ ಹಿನ್ನೆಲೆಯಲ್ಲಿ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ಈ ಅಂಕಿಅಂಶವೇ SIR ಪ್ರಕ್ರಿಯೆಯ ಪ್ರಮಾಣ ಮತ್ತು ಅದರ ಪರಿಣಾಮವನ್ನು ತೋರಿಸುತ್ತದೆ ಎಂದು ಪ್ರಕಾಶ್ ರಾಜ್ ಹೇಳಿದರು.
ಆದರೆ, ಇಲ್ಲಿ ಒಂದು ಪ್ರಮುಖ ಅಂಶವೂ ಇದೆ: ASDDO ಪಟ್ಟಿಗೆ ಸೇರ್ಪಡೆಗೊಂಡಿರುವುದೇ ಅಂತಿಮವಾಗಿ ಮತದಾರರ ಹೆಸರನ್ನು ಅಳಿಸಲಾಗಿದೆ ಎಂದರ್ಥವಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ನೋಟಿಸ್, ವಿಚಾರಣೆ, ಆಕ್ಷೇಪಣೆ ಮತ್ತು ಮೇಲ್ಮನವಿ ಸೇರಿದಂತೆ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದಕ್ಕೆಲ್ಲ ರಾಜ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ಉತ್ತರಿಸಬೇಕಿದೆ ಎಂದರು.
“ನ್ಯಾಯಾಲಯಕ್ಕೆ ಹೋದರೆ ವರ್ಷಗಳ ಕಾಲ ಕಾಯಬೇಕಾಗುತ್ತದೆ”
SIRನಿಂದಾಗಿ ಹೆಸರು ಕೈಬಿಟ್ಟರೆ ಅಥವಾ ಮತದಾನದ ಹಕ್ಕಿನ ಬಗ್ಗೆ ವಿವಾದ ಉಂಟಾದರೆ ಸಾಮಾನ್ಯ ಬಡ ನಾಗರಿಕರು ನ್ಯಾಯಾಲಯದ ಮೆಟ್ಟಿಲೇರುವುದು ಸುಲಭದ ಕೆಲಸವಲ್ಲ. “ನ್ಯಾಯಾಲಯಕ್ಕೆ ಹೋದರೆ ನ್ಯಾಯ ಪಡೆಯಲು ವರ್ಷಗಳೇ ಬೇಕಾಗಬಹುದು. ಅಲ್ಲಿಯವರೆಗೆ ಆ ವ್ಯಕ್ತಿ ತನ್ನ ಹಕ್ಕುಗಳನ್ನು ಕಳೆದುಕೊಂಡು ಕಾಯಬೇಕೇ? ಚುನಾವಣೆ ಬಂದಾಗ ಕೋಟ್ಯಂತರ ಜನರ ಹೆಸರುಗಳ ಬಗ್ಗೆ ಸಮಸ್ಯೆ ಸೃಷ್ಟಿಸಿ, ನಂತರ ಕೋರ್ಟ್ ಕೇಸ್‌ಗಳಲ್ಲಿ ವರ್ಷಗಳನ್ನು ಕಳೆಯುವ ಪರಿಸ್ಥಿತಿ ಬರಬಾರದು”. ಇದರಿಂದಾಗಿಯೇ ಸವಲತ್ತುಗಳನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.
“ಯಾವ ಪಕ್ಷವೂ ಬೇಡ; ಸಂತ್ರಸ್ತರಿಗೆ ನ್ಯಾಯ ಬೇಕು”
SIR ವಿರೋಧಿ ಹೋರಾಟವನ್ನು ಯಾವುದೇ ಒಂದು ರಾಜಕೀಯ ಪಕ್ಷದ ಹೋರಾಟವಾಗಿ ಪರಿಗಣಿಸಬಾರದು ಎಂದು ಪ್ರಕಾಶ್ ರಾಜ್, “ನಮಗೆ ಯಾವ ಪಕ್ಷವೂ ಅಗತ್ಯವಿಲ್ಲ. ಯಾವ ರಾಜಕಾರಣಿಯೂ ಅಗತ್ಯವಿಲ್ಲ. ಬೇಕಿರುವುದು ಸಂತ್ರಸ್ತರಿಗೆ ನ್ಯಾಯ. ಜನರ ಕಾಲಿಗೆ ಬಿದ್ದು ಮತ ಕೇಳಿದ ಸಂಸದರು ಈಗ ಜನರ ಜೊತೆ ನಿಲ್ಲಬೇಕು. ಸಂತ್ರಸ್ತರ ಪರವಾಗಿ ಧ್ವನಿ ಎತ್ತಬೇಕು” ಎಂದು ಅವರು ಹೇಳಿದರು. SIR ಪ್ರಕ್ರಿಯೆಯ ಕುರಿತು ನಾಳೆ ನಡೆಯುವ ವಿಧಾನಸಭಾ ಸಭೆಯಲ್ಲಿ ವಿಷಯವನ್ನು ಚರ್ಚೆಗೆ ತರುವುದಾಗಿ, ಮುಂದಿನ ಹಂತದಲ್ಲಿ ದೆಹಲಿಗೂ ತೆರಳಿ ಹೋರಾಟವನ್ನು ವಿಸ್ತರಿಸುವುದಾಗಿ ಅವರು ತಿಳಿಸಿದರು.
ಅಕ್ಟೋಬರ್ 1ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ
ಕರ್ನಾಟಕದಲ್ಲಿ ಆರಂಭವಾಗಿರುವ ಸಾಮಾಜಿಕ ಪರಿಶೀಲನೆ ಮತ್ತು ಸಾರ್ವಜನಿಕ ವಿಚಾರಣೆಗಳು ದೇಶದ ಗಮನ ಸೆಳೆಯುತ್ತಿವೆ ಎಂದು ಹೇಳಿದ ಪ್ರಕಾಶ್ ರಾಜ್, ಅಕ್ಟೋಬರ್ 1ರಂದು ದೆಹಲಿಯಲ್ಲಿ ವಿವಿಧ ರಾಜ್ಯಗಳ ಪ್ರಮುಖರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮುಂದಿನ ಹೋರಾಟಕ್ಕೆ ಕರೆ ನೀಡಲಾಗುವುದು ಎಂದರು. SIR ಕುರಿತು ದೇಶದ ವಿವಿಧ ರಾಜ್ಯಗಳಲ್ಲಿ ನಾಗರಿಕ ಸಂಘಟನೆಗಳು ಪ್ರಶ್ನೆಗಳನ್ನು ಎತ್ತುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಿದರು.
“SIR ಅವೈಜ್ಞಾನಿಕ, ಅಸಂವಿಧಾನಿಕ ಎಂದು ತೋರಿಸುತ್ತೇವೆ”
SIR ಪ್ರಕ್ರಿಯೆಯನ್ನು “ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಅವೈಜ್ಞಾನಿಕ” ಎಂದು ಪ್ರಕಾಶ್ ರಾಜ್ ಬಣ್ಣಿಸಿದರು. ಈ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು. “ಪ್ರಜೆಗಳ ಹಕ್ಕನ್ನು ಕಸಿಯುವುದು ಅಷ್ಟು ಸುಲಭದ ಮಾತಲ್ಲ. ರಾಜ್ಯದಲ್ಲಿ ಮಾತ್ರವಲ್ಲ, ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ. SIR ಪ್ರಕ್ರಿಯೆ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ನಾಗರಿಕ ಸಮಾಜದ ಹೋರಾಟ ಮುಂದುವರಿಯಲಿದೆ” ಎಂದು ಎಚ್ಚರಿಸಿದರು.
ಕೊಡಗಿನಲ್ಲಿ ಕೇಳಿಬಂದದ್ದು ಕೇವಲ ಅಹವಾಲಲ್ಲ; ಮುಂದಿನ ಹೋರಾಟದ ಮುನ್ಸೂಚನೆ
ಪಾಲೆಮಾಡುವಿನ ಪಬ್ಲಿಕ್ ಹಿಯರಿಂಗ್‌ನಲ್ಲಿ ಹೊರಬಂದ ಪ್ರಶ್ನೆಗಳು ಕೇವಲ ಒಂದು ಜಿಲ್ಲೆಯ ಸಮಸ್ಯೆಗಳಾಗಿ ಉಳಿದಿಲ್ಲ. ದಾಖಲೆಗಳಿಲ್ಲದ ಸಮುದಾಯಗಳು, ವಲಸೆ ಕಾರ್ಮಿಕರು, ಆದಿವಾಸಿಗಳು, ಗ್ರಾಮೀಣ ಬಡವರು, ದಾಖಲೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಹೊಂದಿರುವ ಮತದಾರರು ಮತ್ತು ಆಡಳಿತಾತ್ಮಕ ತಪ್ಪುಗಳಿಂದ ಸಮಸ್ಯೆ ಎದುರಿಸುವವರು SIR ಪ್ರಕ್ರಿಯೆಯಲ್ಲಿ ಹೇಗೆ ರಕ್ಷಿಸಲ್ಪಡುತ್ತಾರೆ ಎಂಬುದೇ ಈಗ ಪ್ರಮುಖ ಪ್ರಶ್ನೆಯಾಗಿದೆ.
ಇದೇ ವೇಳೆ ಕರ್ನಾಟಕದಲ್ಲಿ SIR ಕುರಿತು ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ Form-6 ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿರುವುದು ಕೂಡ ಗಮನಾರ್ಹ ಬೆಳವಣಿಗೆಯಾಗಿದೆ. ಮತದಾರರ ಪಟ್ಟಿಯ ಶುದ್ಧೀಕರಣ ಮತ್ತು ಅರ್ಹ ಮತದಾರರ ಹಕ್ಕಿನ ರಕ್ಷಣೆ-ಈ ಎರಡರ ನಡುವೆ ಸಮತೋಲನ ಹೇಗೆ ಸಾಧಿಸಲಾಗುತ್ತದೆ ಎಂಬುದು ಮುಂದಿನ ಹಂತದಲ್ಲಿ ಚುನಾವಣಾ ಆಯೋಗ, ಸರ್ಕಾರ, ನ್ಯಾಯಾಂಗ ಹಾಗೂ ನಾಗರಿಕ ಸಮಾಜದ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.
ಪಾಲೆಮಾಡುವಿನಲ್ಲಿ ಇಂದು ಕೇಳಿಬಂದ ಧ್ವನಿ ಒಂದೇ-“ಮತದಾನದ ಹಕ್ಕು ಕೇವಲ ಒಂದು ದಾಖಲೆ ಅಲ್ಲ; ಅದು ಪ್ರಜಾಪ್ರಭುತ್ವದಲ್ಲಿ ನಾಗರಿಕನ ಅಸ್ತಿತ್ವದ ಹಕ್ಕು. ಆ ಹಕ್ಕಿನ ರಕ್ಷಣೆಗೆ ಹೋರಾಟ ಮುಂದುವರಿಯಲಿದೆ.”
ಈ ವಿಶೇಷ ಸುದ್ದಿ ಓದಿದ್ದೀರಾ? ‘ಗೃಹಲಕ್ಷ್ಮಿ’ಗೆ 17 ಪ್ರಶ್ನೆಗಳ ಪರೀಕ್ಷೆ: ₹2 ಸಾವಿರದ ಯೋಜನೆಗೆ ಇಷ್ಟೆಲ್ಲಾ ದಾಖಲೆ ಬೇಕೇ?
ಸಭೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮೊಣ್ಣಪ್ಪ, ಕಾಮ್ರೇಡ್ ನಿರ್ವಾಣಪ್ಪ, ಅಮೀನ್ ಮೋಸಿನ್, ಕೆವಿಎಸ್ ಸಂಘಟನೆಯ ಸರೋವರ್ ಬೆಂಕಿನಕೆರೆ, ಹೇಮಂತ್ ಕುಮಾರ್ ಸೇರಿದಂತೆ ನೂರಾರು ಸಂತ್ರಸ್ತರು ಭಾಗವಹಿಸಿ ತಮ್ಮ ಅಹವಾಲುಗಳನ್ನು ಮಂಡಿಸಿದರು.





