ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಒಂದು ದಿನದ ಹಸುಗೂಸನ್ನು ಕಸದ ರಾಶಿಯಲ್ಲಿ ಬಿಟ್ಟು ಪರಾರಿಯಾಗಲು ಯತ್ನಿಸಿದ ತಾಯಿ ಹಾಗೂ ಆಕೆಯ ತಾಯಿಯನ್ನು ಗ್ರಾಮಸ್ಥರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮಹಿಳೆ ತನ್ನ ತಾಯಿಯೊಂದಿಗೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ, ಮಗುವನ್ನು ಕಸದ ರಾಶಿಯಲ್ಲಿ ಬಿಟ್ಟು ಹೋಗಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ತಕ್ಷಣ ಆಟೋರಿಕ್ಷಾವನ್ನು ತಡೆದ ಗ್ರಾಮಸ್ಥರು ಹಸುಗೂಸನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಮಕ್ಕಳ ಸಹಾಯವಾಣಿ ಸಂಯೋಜಕ ಬಸವರಾಜ ತೆಂಗ್ಲಿ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಸಿಬ್ಬಂದಿಗೆ ಮಾಹಿತಿ ನೀಡಿ, ಮಹಿಳೆ ಹಾಗೂ ಒಂದು ದಿನದ ಮಗುವಿನ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಆಕ್ರೋಶ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ
ಪೊಲೀಸ್ ಠಾಣೆಯಲ್ಲಿ ಮಹಿಳೆಯ ತಾಯಿ ನೀಡಿದ ಮಾಹಿತಿ ಪ್ರಕಾರ, ಆಕೆಯ ಮಗಳು ಅವಿವಾಹಿತೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿನೊಂದಿಗೆ ತಾಂಡಾಕ್ಕೆ ತೆರಳಿದರೆ ಅವಮಾನ ಹಾಗೂ ಮುಜುಗರ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ಮಗುವನ್ನು ಕಸದ ರಾಶಿಯಲ್ಲಿ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.





