ಯಾವ ಪಕ್ಷ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿಗಳಾಗಿದ್ದರೂ ಪ್ರಕೃತಿ ವಿಕೋಪದಿಂದ ಪಾರಾಗುವುದು ಸಾಧ್ಯವಿಲ್ಲ. ಹೀಗಾಗಿ ಬರಗಾಲ ನಿರ್ವಹಣೆ ಸರ್ಕಾರಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಪ್ರತಿಪಕ್ಷಗಳಿಗೂ ಇದೆ. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿರುವುದರಿಂದ ಕೇಂದ್ರ ಸರ್ಕಾರದ ಜವಾಬ್ದಾರಿ ಇನ್ನೂ ಹೆಚ್ಚಿದೆ.
‘ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 200 ದಾಟಿದ್ದು, ಕೇಂದ್ರ ಸರ್ಕಾರದಿಂದ ಬರ ಪರಿಹಾರ ಪಡೆದುಕೊಳ್ಳಲು ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಲು ಸರ್ವಪಕ್ಷ ನಿಯೋಗ ಕರೆದೊಯ್ಯಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಆದರೆ, ಬಿಜೆಪಿ ನಾಯಕರು, ‘ಬರ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಸಚಿವರು ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ರಾಜ್ಯ ಸರ್ಕಾರ ಬರ ಪರಿಹಾರವನ್ನು ಮೊದಲು ಘೋಷಣೆ ಮಾಡಲಿ’ ಎಂದು ಪಟ್ಟು ಹಿಡಿದು ನಿಯೋಗದೊಂದಿಗೆ ತೆರಳಲು ಹಿಂದೇಟು ಹಾಕಿದ್ದಾರೆ.
ಇವೆರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಿಲುವಾದರೆ, ಜಾತ್ಯತೀತ ಜನತಾದಳದ ಮುಖಂಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು, ‘ಬರ ಸಂಬಂಧ ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ಕರೆದೊಯ್ದು ಏನು ಮಾಡುತ್ತೀರಿ, ಅನಗತ್ಯ ಖರ್ಚು. ನೀವೇ ಹೋಗಿ ಮಾತನಾಡಿಕೊಂಡು ಬರಲು ಆಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿಯವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಶಿವಕುಮಾರ್, ‘ಬರ ಪರಿಸ್ಥಿತಿಯು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ, ಇದು ರಾಜ್ಯದ ಜನರ ಹಿತಾಸಕ್ತಿಯ ವಿಷಯ. ಆದ್ದರಿಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಹ ಈ ನಿಯೋಗದಲ್ಲಿ ಭಾಗವಹಿಸಬೇಕು. ಒಂದು ವೇಳೆ ನಿಯೋಗದ ಜೊತೆ ಬರದಿದ್ದರೆ ರೈತರ ವಿಷಯದಲ್ಲಿ ಅವರದ್ದು ಕಪಟ ನಾಟಕ ಎಂಬುದು ಸಾಬೀತಾಗುತ್ತದೆ’ ಎಂದು ಕೊಂಚ ಕಟುವಾಗಿಯೇ ಹೇಳಿದ್ದಾರೆ.
ಇದನ್ನು ಓದಿದ್ದೀರಾ?: ಪ್ರಜಾಪ್ರಭುತ್ವದ ಕೊಲೆಗಾರ, ‘ಮೋಶಾ’ ಸೂತ್ರದ ಬೊಂಬೆ ಗ್ಯಾನೇಶ್ ಕುಮಾರ್ ವಜಾಗೊಳ್ಳಬೇಕು!
ಅದಕ್ಕೆ ಉತ್ತರವಾಗಿ ಕುಮಾರಸ್ವಾಮಿಯವರು, ‘2018ರಲ್ಲಿ ನಾನು ರೈತರ ಸಾಲ ಮನ್ನಾ ಮಾಡಿದಾಗ ಕಾಂಗ್ರೆಸ್ ಬೆಂಬಲಿಸಲಿಲ್ಲ. ಅದು ನಿಮ್ಮ ಭರವಸೆ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು’ ಎಂದು ಕಾಂಗ್ರೆಸ್ಸಿಗರನ್ನು ಕುಟುಕಿದ್ದಾರೆ.
ಅಂದರೆ, ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇರುವಾಗಲೂ, ಮೂರೂ ಪಕ್ಷಗಳ ರಾಜಕಾರಣಿಗಳಿಗೆ ಅವರ ಕ್ಷುಲ್ಲಕ ರಾಜಕಾರಣವೇ ಮುಖ್ಯವಾಗಿದೆ. ಮಳೆ ಬರದೆ, ಬೆಳೆ ಕೈಗೆ ಸಿಗದೆ ಆಗಿರುವ ಕಷ್ಟ-ನಷ್ಟಗಳು ಕಾಣುತ್ತಿಲ್ಲ. ಮನೆ, ಮಠ ಬಿಟ್ಟು ಗುಳೆ ಹೋಗುತ್ತಿರುವುದು, ಜನಪ್ರತಿನಿಧಿಗಳ ವೈಫಲ್ಯ ಎನಿಸುತ್ತಿಲ್ಲ. ಬರ ಕೂಡ ಆರೋಪ ಪ್ರತ್ಯಾರೋಪಕ್ಕೆ, ಮಾಧ್ಯಮಗಳ ಚಿಲ್ಲರೆ ಪ್ರಚಾರಕ್ಕೆ, ಸ್ವಾರ್ಥ ರಾಜಕಾರಣಕ್ಕೆ ಬಳಕೆಯಾಗುತ್ತಿರುವುದು ದುರಂತ.
ಅಷ್ಟಕ್ಕೂ ಬರ ಪರಿಹಾರಕ್ಕಾಗಿ ಸರ್ವಪಕ್ಷ ನಿಯೋಗ ಹೋಗುವುದು ಪ್ರಜಾಪ್ರಭುತ್ವದಲ್ಲಿ ಹಲವು ಕಾರಣಗಳಿಂದ ಮಹತ್ವದ ಸಂಗತಿಯಾಗಿದೆ. ಸರ್ವಪಕ್ಷ ನಿಯೋಗ ಎಂದರೆ ಕೇವಲ ರಾಜಕೀಯ ಕಾರ್ಯಕ್ರಮವಲ್ಲ, ವಿವಿಧ ಪಕ್ಷಗಳ ಪ್ರತಿನಿಧಿಗಳು ಒಂದಾಗಿ ಹೋಗುವುದು. ಅದು ಕೇವಲ ಒಂದು ಪಕ್ಷದ ಬೇಡಿಕೆಯಲ್ಲ, ಜನರ ಸಾಮೂಹಿಕ ಬೇಡಿಕೆ ಎಂಬ ಸಂದೇಶ ರವಾನಿಸುವುದು. ಕೇಂದ್ರದ ಮುಂದೆ ನಷ್ಟದ ಅಂಕಿಅಂಶಗಳು, ರೈತರ ಸಮಸ್ಯೆಗಳು ಮತ್ತು ಬೆಳೆ ಪರಿಹಾರದ ಅಗತ್ಯಗಳನ್ನು ಅಧಿಕೃತವಾಗಿ ಮಂಡಿಸಿ ಒಗ್ಗಟ್ಟು ಪ್ರದರ್ಶಿಸುವುದು. ರಾಜ್ಯದಿಂದ ಆಯ್ಕೆಯಾದ ಸಂಸದರು ಮತ್ತು ಕೇಂದ್ರ ಸಚಿವರೊಂದಿಗೆ ನೇರವಾಗಿ ಚರ್ಚಿಸುವುದರಿಂದ ಪರಿಹಾರದ ಬೇಡಿಕೆಗಳನ್ನು ಸಂಬಂಧಿತ ಕೇಂದ್ರ ಸಚಿವಾಲಯಗಳ ಗಮನಕ್ಕೆ ತರುವುದು. ತುರ್ತಾಗಿ ಸ್ಪಂದಿಸಲು ಒತ್ತಾಯಿಸುವುದು. ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವುದರಿಂದ ಪ್ರಜಾಪ್ರಭುತ್ವವನ್ನು ಬಲಗೊಳಿಸುವುದು.
ಈ ನಿಟ್ಟಿನಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ 28 ಮಂದಿ ಸಂಸದರು ಪಕ್ಷಭೇದ ಮರೆತು, ರಾಜಕಾರಣವನ್ನು ಪಕ್ಕಕ್ಕಿಟ್ಟು ನಾಡಿಗೆ ಎದುರಾಗಿರುವ ಭೀಕರ ಬರಕ್ಕೆ, ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ.
ಜನರ ಬದುಕಿಗೆ ನೇರವಾಗಿ ಸಂಬಂಧಿಸಿದ ತುರ್ತು ಪರಿಹಾರ ಘೋಷಿಸುವಲ್ಲಿ ರಾಜ್ಯಗಳ ಜವಾಬ್ದಾರಿ ಹೆಚ್ಚಿದೆ, ನಿಜ. ಆದರೆ ತೆರಿಗೆ ಸಂಗ್ರಹಿಸುವ ಅಧಿಕ ಅಧಿಕಾರ ಕೇಂದ್ರದ ಪಾಲಾಗಿದೆ. ಹೀಗೆ ನಮ್ಮ ಸಂವಿಧಾನವೇ ಬಲವಾದ ಕೇಂದ್ರ ಮತ್ತು ಬಲಹೀನ ರಾಜ್ಯಗಳನ್ನು ಸೃಷ್ಟಿಸಿದೆ. ಹಾಗೆಂದು ಈ ಸ್ಥಿತಿಯಲ್ಲೇ ಮುಂದುವರಿಯಬೇಕೆಂದಿಲ್ಲ. ಕೇಂದ್ರವನ್ನು ಬಲಗೊಳಿಸುವ ರಾಜ್ಯಗಳು, ರಾಜ್ಯಗಳಿಂದ ಗೆದ್ದು ಹೋಗಿ ಕೇಂದ್ರಕ್ಕೆ ಶಕ್ತಿ ತುಂಬುವ ಸಂಸದರ ಪಾತ್ರ, ಇಲ್ಲಿ ಬಹಳ ಮುಖ್ಯವಾಗಿದೆ.
ಸದ್ಯಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಗೆದ್ದವರು 19 ಸಂಸದರು. ಅವರಲ್ಲಿ ಬಿಜೆಪಿಯ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಮತ್ತು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿಯವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ನೀತಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಇವರೆಲ್ಲರೂ ಒಟ್ಟಾಗಿ ಪ್ರಧಾನಮಂತ್ರಿಗಳ ಮುಂದೆ ಹೋದರೆ, ರಾಜ್ಯದ ಜನತೆಯ ಸ್ಥಿತಿ-ಗತಿಗಳನ್ನು ಮನದಟ್ಟು ಮಾಡಿಸಿದರೆ, ಬರ ಪರಿಹಾರ ಬಿಡುಗಡೆ ಕಷ್ಟವಲ್ಲ. ಕರ್ನಾಟಕ ಹೊರತುಪಡಿಸಿ ಪ್ರಧಾನಿ ಮೋದಿಯವರು ಕೂಡ ಆಡಳಿತ ಮಾಡಲು ಸಾಧ್ಯವಿಲ್ಲ.
ಎದುರಾಗಿರುವ ಬರಗಾಲವು ಕೇವಲ ಕೃಷಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಕುಡಿಯುವ ನೀರಿನ ಕೊರತೆಯಿಂದ ಹಿಡಿದು ಜಲಾಶಯಗಳ ನೀರಿನ ಮಟ್ಟ ಕುಸಿತ, ಜಾನುವಾರುಗಳಿಗೆ ಮೇವು ಮತ್ತು ನೀರಿನ ಅಭಾವ, ಕೈಗಾರಿಕೆಗಳಿಗೆ ನೀರಿನ ಲಭ್ಯತೆಯಲ್ಲಿ ವ್ಯತ್ಯಾಸ ಹಾಗೂ ವಿದ್ಯುತ್ ಉತ್ಪಾದನೆವರೆಗೂ ಅದರ ಪರಿಣಾಮ ಬೀರುತ್ತದೆ. ಹಾಗಾಗಿ ಅದು ಪರಿಸರ, ಕೃಷಿ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಮೇಲೆ ಸಂಕೀರ್ಣ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಅಷ್ಟೇ ಅಲ್ಲ, ಆಹಾರ ಭದ್ರತೆ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ಸಾಲದ ಹೊರೆ, ನಿರುದ್ಯೋಗ, ವಲಸೆ ಮತ್ತು ಸಾಮಾಜಿಕ ಅಸಮಾನತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟದ ಮೇಲೂ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ.
ಇದನ್ನು ಓದಿದ್ದೀರಾ?: ಬಿಜೆಪಿ, ಭಕ್ತರು ಮತ್ತು ಸಾರ್ವಜನಿಕ ಸಭ್ಯತೆ
ಇಷ್ಟೆಲ್ಲ ಸಮಸ್ಯೆಗಳನ್ನು ತಂದೊಡ್ಡುವ ಬರ ಹೊಸದಲ್ಲ. ಯಾವ ಪಕ್ಷ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿಗಳಾಗಿದ್ದರೂ ಪ್ರಕೃತಿ ವಿಕೋಪದಿಂದ ಪಾರಾಗುವುದು ಸಾಧ್ಯವಿಲ್ಲ. ಹೀಗಾಗಿ ಬರಗಾಲ ನಿರ್ವಹಣೆ ಸರ್ಕಾರಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಪ್ರತಿಪಕ್ಷಗಳಿಗೂ ಇದೆ. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿರುವುದರಿಂದ ಕೇಂದ್ರ ಸರ್ಕಾರದ ಜವಾಬ್ದಾರಿ ಇನ್ನೂ ಹೆಚ್ಚಿದೆ.
ಪ್ರತಿಪಕ್ಷಗಳು ಹಾಗೂ ಕೇಂದ್ರ ಸರ್ಕಾರ ಈ ಜವಾಬ್ದಾರಿಯಿಂದ ನುಣುಚಿಕೊಂಡರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದಂತೆ, ಅವರದು ಕಪಟ ನಾಟಕ ಎನ್ನುವುದು ಸಾಬೀತಾಗುತ್ತದೆ. ಹಾಗೆಯೇ ಅವರನ್ನು ಟೀಕಿಸಲು, ವ್ಯಂಗ್ಯವಾಡಲು ಭೀಕರ ಬರಗಾಲವನ್ನೂ ಬಳಸಿಕೊಂಡರೆ, ರಾಜ್ಯ ಸರ್ಕಾರ ಕೂಡ ಸ್ಪಂದಿಸದಿದ್ದರೆ, ಇವರದು ಕೂಡ ಕಪಟ ನಾಟಕವೇ. ನಾಟಕಕ್ಕೆ ತೆರೆ ಎಳೆಯಿರಿ, ಮನುಷ್ಯರಾಗಿ.




