ಕೇಂದ್ರದ ಆದ್ಯತೆಯ ಕ್ಷೇತ್ರಗಳಿಗೇ ನವೀಕೃತ ಅಂದಾಜು ಗಣನೆಯ ಅನುದಾನ ಮೀಸಲಾತಿಯನ್ನು ಕಡಿತಗೊಳಿಸಲಾಗಿದೆ. ಹೀಗಿರುವಾಗ ಸಾಮಾಜಿಕ ನ್ಯಾಯ ಅಥವಾ ವಿಕಸಿತ ಭಾರತ ಎನ್ನುವ ಪದಗಳನ್ನು ಕೇಂದ್ರ ಸರ್ಕಾರ ಹೇಗೆ ವ್ಯಾಖ್ಯಾನಿಸಲಿದೆ?
ಬಿಜೆಪಿಗರು ಐತಿಹಾಸಿಕ ಬಜೆಟ್ 2024 ಎಂದು ಹೆಸರಿಸುತ್ತಿರುವ ಲೋಕಸಭಾ ಚುನಾವಣೆಗೆ ಮೊದಲ ಕೊನೆಯ ಬಜೆಟ್‌ನಲ್ಲಿ ʼಸಾಮಾಜಿಕ ನ್ಯಾಯʼ ಎನ್ನುವ ಹೆಸರಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಅನೇಕ ಯೋಜನೆಗಳನ್ನು ಮತ್ತೆ ಸಣ್ಣ ಬದಲಾವಣೆಗಳೊಂದಿಗೆ ಘೋಷಿಸಲಾಗಿದೆ.
ವಿತ್ತೀಯ ಕೊರತೆ ಮತ್ತು ಜಿಡಿಪಿ ಪ್ರಗತಿ ಕಡಿಮೆ ಇರುವುದನ್ನು ಘೋಷಿಸಿದ ನಂತರ ನವೀಕೃತ ಹಣಕಾಸು ವಿನಿಯೋಗದ ಅಂದಾಜನ್ನು ಮಾಡಲಾಗಿತ್ತು. ಆದರೆ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಆದ್ಯತೆಯಾಗಿ ಮುಂದಿಟ್ಟಿರುವ ವರ್ಗಗಳಿಗೇ ಅಂದಾಜು ಅನುದಾನ ಮೀಸಲಿನಲ್ಲಿ ಕಡಿತಗೊಳಿಸಿ ಅನುದಾನ ಮೀಸಲಿಟ್ಟಿರುವುದು ಕೇಂದ್ರ ಸರ್ಕಾರದ ಐತಿಹಾಸಿಕ ಬಜೆಟ್‌ಗೆ ಉತ್ತಮ ವ್ಯಾಖ್ಯಾನ ನೀಡುತ್ತದೆ.
ಆದ್ಯತೆಯ ಕ್ಷೇತ್ರಗಳಿಗಿಲ್ಲ ವಿಶೇಷ ಯೋಜನೆ
ಪ್ರಧಾನಿ ನರೇಂದ್ರ ಮೋದಿ ಬಡವರು, ಮಹಿಳೆಯರು, ಯುವಕರು ಮತ್ತು ರೈತರನ್ನು ನಾಲ್ಕು ಅತಿದೊಡ್ಡ ಜಾತಿಗಳು ಎಂದು ಕರೆದಿರುವುದು ನನ್ನ ಮಟ್ಟಿಗೆ ಅತಿ ಹೆಚ್ಚಿನ ಆದ್ಯತೆ ನೀಡುವ ವರ್ಗವಾಗಿದ್ದು, ಅವರ ಕಲ್ಯಾಣಕ್ಕಾಗಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಆದರೆ ಕೇಂದ್ರ ಸರ್ಕಾರ ಬಜೆಟ್ 2024ರಲ್ಲಿ ಈ ವರ್ಗಗಳಿಗೆ ವಿಶೇಷವಾದ ಪ್ರತ್ಯೇಕ ಯೋಜನೆಗಳನ್ನು ಘೋಷಿಸಿಲ್ಲ. ಮಹಿಳೆಯರ ಕಲ್ಯಾಣದ ಹೆಸರಿನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರಿಗೆ ವಿಸ್ತರಿಸಲಾಗಿದೆ. ಮುದ್ರಾ ಯೋಜನೆಯಲ್ಲಿಯೇ ಮಹಿಳೆಯರಿಗೆ ವಿಶೇಷ ಉದ್ಯಮ ಸಾಲದ ಅವಕಾಶದ ಬಗ್ಗೆ ಮತ್ತು 30 ಕೋಟಿ ಮಹಿಳೆಯರಿಗೆ ಉದ್ಯಮ ಸಾಲ ನೀಡಿರುವುದನ್ನೇ ಸಾಧನೆಯೆಂದು ಬಜೆಟ್ ತಿಳಿಸಿದೆ.
ಉದ್ಯಮ ಪರಿಸರದಲ್ಲಿ ಮಹಿಳೆಯರ ಏಳಿಗೆಗೆ ವಿಶೇಷ ಸೌಲಭ್ಯಗಳ ಘೋಷಣೆ ಇಲ್ಲ. ಹಾಗೆಯೇ ವೃತ್ತಿಪರಿಸರದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ವಿಶೇಷವಾದ ಯೋಜನೆ ಅಥವಾ ಚುನಾವಣಾ ಭರವಸೆ ಎನ್ನುವಂತಹ ಕಾರ್ಯಕ್ರಮಗಳು ಬಂದಿಲ್ಲ.
ಹಿಂದಿನ ಯೋಜನೆಗಳ ವಿಸ್ತರಣೆ
ಬಡವರಿಗೆ ಈಗಾಗಲೇ ಇರುವ ಪ್ರಧಾನಮಂತ್ರಿ ವಸತಿ ಯೋಜನೆಗೆ ಅನುದಾನ ಮೀಸಲಿಟ್ಟಿರುವುದನ್ನೆ ಬಡವರ ಕಲ್ಯಾಣವೆಂದು ತಿಳಿಸಲಾಗಿದೆ. ಯುವಕರಿಗೆ ಪ್ರಧಾನಮಂತ್ರಿ ರೋಜ್‌ಗಾರ್ ಯೋಜನೆ, ಸ್ಟಾರ್ಟಪ್ ಉದ್ಯಮ ಸಾಲ ಯೋಜನೆಗಳು ಅದಾಗಲೇ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುತ್ತಿವೆ. ಖಾಸಗಿ ತಂತ್ರಜ್ಞಾನ ಸ್ಟಾರ್ಟಪ್‌ಗೆ ಅನುದಾನ ಮೀಸಲಿಟ್ಟಿರುವುದನ್ನೇ ವಿಶೇಷ ಯೋಜನೆ ಎನ್ನುವಂತೆ ಕೇಂದ್ರ ಸರ್ಕಾರ ಘೋಷಿಸಿಕೊಂಡಿದೆ, ಬಡ್ಡಿರಹಿತ ಸಾಲಕ್ಕಾಗಿ ಒಂದಷ್ಟು ಅನುದಾನ ಮೀಸಲಿಟ್ಟಿರುವುದೇ ಯುವಕರ ಕಲ್ಯಾಣ ಯೋಜನೆಯಾಗಿದೆ.
ಆರೋಗ್ಯ, ಶಿಕ್ಷಣದ ವೆಚ್ಚ ಕಡಿತ
ಬಜೆಟ್‌ಗಳಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಮಾಡುವ ವೆಚ್ಚವನ್ನು ಭಾರತದ ಅಗತ್ಯಕ್ಕಿಂತ ಕಡಿಮೆಯೇ ಇಡಲಾಗುತ್ತಿದೆ. ಆದರೆ ಇದೀಗ ಪ್ರಸ್ತುತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ನವೀಕೃತ ಅಂದಾಜು ಗುರಿ ತಲುಪಿಲ್ಲ ಎನ್ನುವುದನ್ನು ತೋರಿಸಿದೆ. ಸರ್ಕಾರ ಶಿಕ್ಷಣಕ್ಕೆ ರೂ 1,16,417 ಕೋಟಿ ಮೀಸಲಿಡಲು ನಿರ್ಧರಿಸಿತ್ತಾದರೂ, ಅಂತಿಮವಾಗಿ ರೂ 1,08,878 ಕೋಟಿ ಮೀಸಲಿಡಲಾಗಿದೆ. ಹಾಗೆಯೇ ಆರೋಗ್ಯದ ಬಜೆಟ್ ರೂ 88,956 ಕೋಟಿಯ ಅಂದಾಜಿಗೆ ಬದಲಾಗಿ ರೂ 79,221 ಕೋಟಿಗೆ ಕಡಿತಗೊಳಿಸಲಾಗಿದೆ.
ಬಜೆಟ್‌ನಲ್ಲಿ ‘ವಿಕಾಸ ಭಾರತ’ ಅಥವಾ ಎಲ್ಲರ ಪ್ರಗತಿ ಎನ್ನುವ ಪದಗಳು ಬಳಕೆಯಾಗಿವೆ. ಸಾಮಾಜಿಕ ನ್ಯಾಯದ ಮಾತನಾಡಲಾಗಿದೆ. ಆದರೆ ಬಜೆಟ್‌ನಲ್ಲಿ ಅದಕ್ಕೆ ತಕ್ಕ ಅನುದಾನ ಮೀಸಲಿಡಲಾಗಿಲ್ಲ. ಬಡವರು ಮತ್ತು ದುರ್ಬಲ ವರ್ಗದವರಿಗೆ ಉದ್ದೇಶಿತ ಅನುದಾನ ಮೀಸಲಾತಿಯನ್ನೂ ಕಡಿತಗೊಳಿಸಲಾಗಿದೆ.
ಎಲ್ಲರ ವಿಕಾಸ ಬರೀ ಮಾತು
ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ವರ್ಗದವರಿಗೆ ನವೀಕೃತ ಅಂದಾಜಿನ ರೂ 9,409 ಕೋಟಿ ಮೀಸಲಿಡುವ ಉದ್ದೇಶವಿತ್ತಾದರೂ, ಇದೀಗ ರೂ 6,780 ಕೋಟಿ ಮೀಸಲಿಡಲಾಗಿದೆ. ಪರಿಶಿಷ್ಟ ವರ್ಗದವರಿಗೆ ಉದ್ದೇಶಿತ ಮೀಸಲು ರೂ 4,295 ಕೋಟಿ ಬದಲಿಗೆ ರೂ 3,286 ಕೋಟಿಗೆ ಇಳಿಸಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಅನುದಾನದಲ್ಲಿ ಏರಿಕೆಯಾಗಿಲ್ಲ. ಅಲ್ಪಸಂಖ್ಯಾತ ವರ್ಗದವರಿಗೆ ಮೀಸಲಿರಿಸಬೇಕಾಗಿದ್ದ ರೂ 610 ಕೋಟಿ ಬದಲಾಗಿ ರೂ 555 ಕೋಟಿ, ದುರ್ಬಲ ವರ್ಗದವರ ಏಳಿಗೆಯ ಯೋಜನೆಗೆ ರೂ 2,194 ಕೋಟಿ ಬದಲಾಗಿ ರೂ 1,918 ಕೋಟಿ ಮೀಸಲಿರಿಸಲಾಗಿದೆ.
ಗ್ರಾಮೀಣಾಭಿವೃದ್ಧಿಗೆ ಆರನೇ ಸ್ಥಾನ
ಬಜೆಟ್‌ನ ಅತ್ಯಧಿಕ ಮೊತ್ತ ರಕ್ಷಣಾ ಸಚಿವಾಲಯಕ್ಕೆ ಹೋದರೆ, ಎರಡನೇ, ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿ ರಸ್ತೆ, ರೈಲ್ವೇ, ಆಹಾರ ಸಚಿವಾಲಯಗಳಿವೆ. ರಕ್ಷಣೆಗೆ ರೂ 6.1 ಲಕ್ಷ ಕೋಟಿ ಮೀಸಲಿಟ್ಟರೆ, ಮೀಸಲು ಪಾಲಿನಲ್ಲಿ ಆರನೇ ಸ್ಥಾನದಲ್ಲಿರುವ ಗ್ರಾಮಿಣಾಭಿವೃದ್ಧಿ ಸಚಿವಾಲಯಕ್ಕೆ 1.77 ಲಕ್ಷ ಕೋಟಿ ಮೀಸಲಿಡಲಾಗಿದೆ. ಈ ಅನುದಾನ ಮೀಸಲಿನ ವ್ಯತ್ಯಾಸದಲ್ಲೇ ಬಿಜೆಪಿ ಸರ್ಕಾರದ ಆದ್ಯತೆಗಳು ಸ್ಪಷ್ಟವಾಗುತ್ತದೆ.