ರಾಹುಲ್ ವಿರುದ್ಧ ಗುಲಾಂ ನಬಿ ವಾಗ್ದಾಳಿ; ಅಧಿಕಾರ ಅನುಭವಿಸಿ ಹೊರ ಹೋದವರು ಎಂದ ಕಾಂಗ್ರೆಸ್

Date:

ಕಾಂಗ್ರೆಸ್ ಪಕ್ಷ ರಿಮೋಟ್ ಕಂಟ್ರೋಲ್ ಅಡಿಯಲ್ಲೇ ಇದೆ ಎಂದು ಕುಟುಕಿದ ಆಝಾದ್ ವಿರುದ್ಧ, ಅಧಿಕಾರ ಅನುಭವಿಸಿ ಹೊರ ಹೋದವರು ಎಂದು ಟೀಕಿಸಿದ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್.

ಅದಾನಿ ಸಮೂಹದ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ತೀವ್ರ ವಾಗ್ದಾಳಿ ಮತ್ತು ಸಾಕ್ಷ್ಯ ಸಮೇತ ಪ್ರಶ್ನೆಗಳನ್ನು ಮುಂದಿಡುತ್ತಿರುವಾಗ, ಕೇಂದ್ರ ಸರ್ಕಾರ ಕಾಂಗ್ರೆಸ್‌ನಿಂದ ಹೊರ ಹೋಗಿ ಬಿಜೆಪಿಗೆ ಆಪ್ತರಾದ ಗುಲಾಂ ನಬಿ ಆಝಾದ್ ಅವರಂತಹ ಪ್ರಮುಖ ರಾಜಕಾರಣಿಗಳನ್ನು ಬಳಸಿಕೊಂಡು ಮಾರುತ್ತರ ನೀಡುತ್ತಿದೆ.

ಬಿಜೆಪಿಯ ಅಂತಹ ತಿರುಗೇಟಿನ ಪ್ರಯತ್ನವಾಗಿ ಮಾಜಿ ಕೇಂದ್ರ ಸಚಿವರಾದ ಗುಲಾಂ ನಬಿ ಆಝಾದ್ ಮತ್ತು ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದ, ಈಗ ಬಿಜೆಪಿ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅಖಾಡಕ್ಕೆ ಧುಮುಕಿ ರಾಹುಲ್ ಗಾಂಧಿ ವಿರುದ್ಧ ಟೀಕೆಯ ಸುರಿಮಳೆ ಸುರಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಇಂದಿಗೂ ರಿಮೋಟ್ ಕಂಟ್ರೋಲ್ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದೆ ಎಂದು ಹಿರಿಯ ರಾಜಕಾರಣಿ ಹಾಗೂ ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಝಾದ್ ಕುಟುಕಿದ್ದಾರೆ.

ನವದೆಹಲಿಯ ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯಲ್ಲಿ ತಮ್ಮ ಆತ್ಮಚರಿತ್ರೆ ʻಆಝಾದ್ʼ ಬಿಡುಗಡೆ ಕಾರ್ಯಕ್ರಮದಲ್ಲಿ‌ ಮಾತನಾಡಿದ ಗುಲಾಂ ನಬಿ, “ಪುರಾತನ ಪಕ್ಷ ಕಾಂಗ್ರೆಸ್‌ನಲ್ಲಿ ಬೆನ್ನುಮೂಳೆ ಇಲ್ಲದವರು ಮಾತ್ರ ಇರಲು ಸಾಧ್ಯ” ಎಂದಿದ್ದಾರೆ.

ಟ್ವೀಟ್ ಮೂಲಕ ಅವರಿಗೆ ಉತ್ತರಿಸಿದ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, “ಗುಲಾಂ ನಬಿ ಆಜಾದ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಇಬ್ಬರೂ ಕಾಂಗ್ರೆಸ್ ಸಿಸ್ಟಂ ಮತ್ತು ಪಕ್ಷದ ನೇತೃತ್ವದಿಂದ ದೊಡ್ಡ ಲಾಭ ಪಡೆದವರು. ಆದರೆ ಈಗ ಅವರು ಆಡುವ ಮಾತುಗಳಿಂದ ಅವರಿಗೆ ಸಿಕ್ಕ ಅವಕಾಶಗಳಿಗೆ ಅವರು ಅನರ್ಹರಾಗಿದ್ದರು ಎನ್ನುವುದು ಖಚಿತವಾಗುತ್ತದೆ. ಈಗ ಅವರು ಧೀರ್ಘಕಾಲದವರೆಗೆ ಹುದುಗಿಸಿಟ್ಟಿದ್ದ ತಮ್ಮ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಚುನಾವಣೆಯ ನಂತರ ಬಿಜೆಪಿಯೊಂದಿಗೆ ಕೈಜೋಡಿಸುವ ಮುನ್ಸೂಚನೆಯನ್ನು ಇದೇ ವೇಳೆ ಆಝಾದ್ ನೀಡಿದ್ದಾರೆ. “ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಬಳಿಕ ಸರ್ಕಾರ ರಚಿಸುವ ಅವಕಾಶ ಉದ್ಭವವಾದರೆ ಅಂತಹ ಸಂದರ್ಭದಲ್ಲಿ ಬಿಜೆಪಿಯ ಜೊತೆ ಹೋಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಈಗಿನ ರಾಜಕಾರಣದಲ್ಲಿ ಯಾರೂ ಅಸ್ಪೃಶ್ಯರಲ್ಲ” ಎಂದು ಆಝಾದ್‌ ತಮ್ಮ ಮನದಾಳದ ಆಲೋಚನೆಯನ್ನು ಬಹಿರಂಗಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕುರಿತು ಮೆಚ್ಚುಗೆ ಸೂಚಿಸಿದ ಆಝಾದ್‌, “ಮೋದಿ ಅವರು ದ್ವೇಷ ರಾಜಕಾರಣ ಮಾಡುವುದಿಲ್ಲ. ರಾಹುಲ್​ ಗಾಂಧಿ ಕೇಳಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ನನ್ನ ಮಾತನ್ನು ಮೋದಿ ಅವರೇ ಆಲಿಸಿದ್ದಾರೆ. ಅವರಿಗೆ ಕೇಳಿಸಿಕೊಳ್ಳುವ ತಾಳ್ಮೆ ಇದೆ” ಎಂದಿದ್ದಾರೆ.

“ಯುಪಿಎ-2 ಅವಧಿಯಲ್ಲಿ ಶಿಕ್ಷೆಗೊಳಗಾಗಿರುವ ಸಂಸದ ಹಾಗೂ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶದಿಂದ ರಕ್ಷಿಸಲು ಸರ್ಕಾರವು ಸುಗ್ರೀವಾಜ್ಞೆ ಜಾರಿಗೆ ಮುಂದಾಗಿತ್ತು. ಆದರೆ ಪಕ್ಷದ ಅಂದಿನ ಉಪಾಧ್ಯಕ್ಷರಾಗಿದ್ದ ರಾಹುಲ್ ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದು ಕಸದ ಬುಟ್ಟಿಗೆ ಹಾಕಿದ್ದರು. ಅಂದು ಅವರು ಹಾಗೆ ಮಾಡದಿರುತ್ತಿದ್ದರೆ ಇಂದು ಅನರ್ಹರಾಗುತ್ತಿರಲಿಲ್ಲ. ರಾಹುಲ್ ಅವ​ರನ್ನು ಎದುರಿಸುವ ಶಕ್ತಿ ಅಂದಿನ ಸಚಿವ ಸಂಪುಟಕ್ಕೆ ಇರಲಿಲ್ಲ. ಆಗ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ರಾಹುಲ್ ಮುಂದೆ ತಲೆಬಾಗಬಾರದಿತ್ತು” ಎಂದು ಆಝಾದ್‌ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ತಾಜ್‌ಮಹಲ್‌ ಧ್ವಂಸಗೊಳಿಸಿ ದೇವಸ್ಥಾನ ನಿರ್ಮಾಣಕ್ಕೆ ಬಿಜೆಪಿ ಶಾಸಕನ…

ವಿಶ್ವಾಸಘಾತಕ ಹೇಳಿಕೆಗೆ ಸಿಂಧಿಯಾ ತಿರುಗೇಟು

ಇದೇ ವೇಳೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಜೈರಾಂ ರಮೇಶ್ ನಡುವೆಯೂ ಟ್ವಿಟರ್ ವಾಗ್ವಾದ ನಡೆದಿದೆ.

ರಾಹುಲ್ ಗಾಂಧಿ ಅವರನ್ನು ವೈಯಕ್ತಿಕವಾಗಿ ಟೀಕಿಸಿದ ಜ್ಯೋತಿರಾದಿತ್ಯ ವಿರುದ್ಧ ಹರಿಹಾಯ್ದ ಜೈರಾಂ ರಮೇಶ್ ಕವಿತೆಯೊಂದರ ಸಾಲನ್ನು ಮುಂದಿಟ್ಟು ‘ವಿಶ್ವಾಸಘಾತಕ’ ಎಂದು ಆರೋಪಿಸಿದ್ದಾರೆ. ಕವಿತೆಯ ಮೂಲಕ ಸೂಚ್ಯವಾಗಿ ವಿಶ್ವಾಸಘಾತಕತನ ಸಿಂಧಿಯಾ ಕುಟುಂಬದಲ್ಲೇ ಇದೆ ಎಂದು ಜೈರಾಂ ರಮೇಶ್ ಹೇಳಿದ ನಂತರ ಇಬ್ಬರ ನಡುವೆ ಟ್ವಿಟರ್ ಜಗಳವಾಗಿದೆ.

ಸಿಂಧಿಯಾ ಕುಟುಂಬ ಬ್ರಿಟಿಷರ ಜೊತೆಗೆ ಸ್ನೇಹ ಮಾಡಿದರೆ ರಾಣಿ ಝಾನ್ಸಿ ಅವರ ವಿರುದ್ಧ ಹೋರಾಡಿದ್ದಳು ಎನ್ನುವ ಅರ್ಥ ಬರುವ ರೀತಿಯಲ್ಲಿ ಜೈರಾಂ ರಮೇಶ್ ಕವಿತೆ ಬರೆದಿದ್ದರು. ಉತ್ತರವಾಗಿ ಜ್ಯೋತಿರಾಧಿತ್ಯ, ತಮ್ಮ ಕುಟುಂಬ ಚರಿತ್ರೆಯ ಬಗ್ಗೆ ಜವಾಹರಲಾಲ್ ನೆಹರು ಬರೆದ ವಿವರಗಳನ್ನು ಟ್ವೀಟ್ ಮಾಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್‌ | ಒಂದೂವರೆ ವರ್ಷದ ಬಳಿಕ ಬೆಳಕಿಗೆ ಬಂದ ‘ನಕಲಿ ಟೋಲ್ ಪ್ಲಾಜಾ’: ₹82 ಕೋಟಿ ಸಂಗ್ರಹಿಸಿದ್ದ ದುರುಳರು!

ಈಗಿನ ಅಂತರ್ಜಾಲ ಯುಗದಲ್ಲಿ ಸುದ್ದಿಗಳು ನಕಲಿ ಎಂದು ಕೇಳುವುದು ಸಾಮಾನ್ಯವಾಗಿ ಬಿಟ್ಟಿದೆ....

ಬರ ಪರಿಹಾರಕ್ಕಾಗಿ ಕರ್ನಾಟಕಕ್ಕೆ 18,171 ಕೋಟಿ ರೂ. ಬಿಡುಗಡೆಗೆ ಕೇಂದ್ರಕ್ಕೆ ಖರ್ಗೆ ಮನವಿ

ಭೀಕರ ಬರಗಾಲದಿಂದ ತತ್ತರಿಸಿರುವ ಕರ್ನಾಟಕಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್)...

ಶೂದ್ರರು, ದಲಿತರಿಗೆ ಆರ್‌ಎಸ್‌ಎಸ್‌ ಗರ್ಭಗುಡಿಗೆ ಪ್ರವೇಶ ಇಲ್ಲ ಎಂಬುದು ಮತ್ತೆ ಸಾಬೀತು: ಸಿದ್ದರಾಮಯ್ಯ

ಹೊರಬಾಗಿಲಲ್ಲಿ ನಿಂತು 'ಜೀ..ಜೀ..ಹುಜೂರ್' ಎಂದಷ್ಟೇ ಹೇಳಬೇಕು:‌ ಸಿದ್ದರಾಮಯ್ಯ ಗೂಳಿಹಟ್ಟಿ ಶೇಖರ್...

ಪಿಒಕೆ ವಿಷಯದಲ್ಲಿ ನೆಹರು ಮಾಡಿದ್ದು ಐತಿಹಾಸಿಕ ಪ್ರಮಾದ ಎಂದ ಅಮಿತ್ ಶಾ

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ)...