- ವಿವಾದಿತ ಶೀರ್ಷಿಕೆ ತಮ್ಮದೆಂದು ಕೋರ್ಟ್ ಮೆಟ್ಟಿಲೇರಿದ್ದ ರಾಜೇಂದ್ರ ಸಿಂಗ್ ಬಾಬು
- ಹಾಡಿನ ಸಾಲನ್ನು ಶೀರ್ಷಿಕೆಯಾಗಿ ಬಳಸುವುದು ಕೃತಿಚೌರ್ಯವಲ್ಲ ಎಂದ ಕೋರ್ಟ್
ಬಹುನಿರೀಕ್ಷಿತ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಶೀರ್ಷಿಕೆ ವಿವಾದಕ್ಕೆ ಸಂಬಂಧಿಸಿ ಅರ್ಜಿ ವಿಚಾರಣೆ ನಡೆಸುತ್ತಿದ್ದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಬುಧವಾರ ತೀರ್ಪು ಪ್ರಕಟಿಸಿದೆ. ಚಿತ್ರದ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿ, ನಟಿ, ನಿರ್ಮಾಪಕಿ ರಮ್ಯ ಅವರಿಗೆ ವಿವಾದಿತ ಶೀರ್ಷಿಕೆಯನ್ನು ಬಳಸಲು ಅನುಮತಿ ನೀಡಿದೆ.
ಕಳೆದ ಕೆಲ ವರ್ಷಗಳಿಂದ ನಟನೆಯಿಂದ ಅಂತರ ಕಾಯ್ದುಕೊಂಡಿದ್ದ ರಮ್ಯ, 2022ರ ಕೊನೆಯಲ್ಲಿ ‘ಆ್ಯಪಲ್ ಬಾಕ್ಸ್’ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಮರಳಿದ್ದರು. ತಮ್ಮ ನೂತನ ಚಿತ್ರ ನಿರ್ಮಾಣ ಸಂಸ್ಥೆ ಬ್ಯಾನರ್‌ನಡಿಯಲ್ಲಿ ʼಸ್ವಾತಿ ಮುತ್ತಿನ ಮಳೆ ಹನಿಯೇʼ ಎಂಬ ಚಿತ್ರವನ್ನು ಘೋಷಿಸಿದ್ದರು.
ಕನ್ನಡದ ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸುವ ಜೊತೆಗೆ ನಿರ್ದೇಶನದ ಹೊಣೆಯನ್ನು ಕೂಡ ಹೊತ್ತುಕೊಂಡಿದ್ದಾರೆ.
ʼಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾ ಘೋಷಣೆಯಾಗುತ್ತಲೇ ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಮ್ಮ ನಿರ್ದೇಶನದ ʼಬಣ್ಣದ ಗೆಜ್ಜೆʼ ಸಿನಿಮಾದ ಹಾಡಿನ ಸಾಲುಗಳನ್ನು ಬಳಸಿ ರಮ್ಯ ಅವರು ʼಸ್ವಾತಿ ಮುತ್ತಿನ ಮಳೆ ಹನಿಯೇʼ ಎಂಬ ಸಿನಿಮಾ ನಿರ್ಮಿಸುತ್ತಿದ್ದಾರೆ.
ಆ ಚಿತ್ರಕ್ಕೆ ತಡೆ ನೀಡಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದರು. ಅದಾದ ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿಂದೆ ರಾಜೇಂದ್ರ ಸಿಂಗ್ ಅವರ ಅರ್ಜಿ ವಿಚಾರಣೆ ನಡೆಸಿದ್ದ ಸಿಟಿ ಸಿವಿಲ್ ಕೋರ್ಟ್, ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದ ಶೂಟಿಂಗ್ ಮತ್ತು ಬಿಡುಗಡೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.
ದೀರ್ಘ ವಿಚಾರಣೆಯ ಬಳಿಕ ಇದೀಗ ತೀರ್ಪು ಪ್ರಕಟಿಸಿರುವ ನ್ಯಾಯಾಲಯ, “ಹಾಡಿನ ಸಾಲುಗಳನ್ನು ಸಿನಿಮಾದ ಶೀರ್ಷಿಕೆಯನ್ನಾಗಿ ಬಳಸುವುದು ಕೃತಿಚೌರ್ಯವಲ್ಲ. ವಿವಾದಿತ ಶೀರ್ಷಿಕೆಯನ್ನು ರಮ್ಯ ಅವರು ಬೇರೆಯವರಿಂದ ಪಡೆದುಕೊಂಡಿದ್ದಾರೆ. ಹೀಗಾಗಿ ಅವರು ಸಿನಿಮಾದ ಚಿತ್ರೀಕರಣ ನಡೆಸಲು ಮತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಯಾವುದೇ ಅಡ್ಡಿಗಳಿಲ್ಲ” ಎಂದು ಆದೇಶ ಹೊರಡಿಸಿದೆ.
ಈ ಸುದ್ದಿ ಓದಿದ್ದೀರಾ? ಸುದೀಪ್ ಸಿನಿಮಾ ಪ್ರದರ್ಶಿಸದಂತೆ ಚುನಾವಣಾ ಆಯೋಗಕ್ಕೆ ವಕೀಲರ ಮನವಿ
ಈಗಾಗಲೇ ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಜ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಿರಿ ರವಿಕುಮಾರ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ಗೋಪಾಲಕೃಷ್ಣ ದೇಶಪಾಂಡೆ, ರೇಖಾ ಕೂಡ್ಲಿಗಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಮಿಧುನ್ ಮುಕುಂದನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.