ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿರುವುದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪಿನ ಶ್ರಮವಲ್ಲ. ಇದು ಇಡೀ ದೇಶದ ಜನರ ಸಾಮೂಹಿಕ ಪ್ರಯತ್ನ ಮತ್ತು ಸಂಕಲ್ಪದ ಫಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಭಾಗವತ್ ಬಣ್ಣಿಸಿದ್ದಾರೆ.
500 ವರ್ಷಗಳ ಸುದೀರ್ಘ ಕಾಯುವಿಕೆ, ಕನಸು, ಶ್ರಮದ ನಂತರ, ಪ್ರತಿಯೊಬ್ಬ ಭಾರತೀಯನ ಭಕ್ತಿ ಮತ್ತು ಹೋರಾಟದ ಫಲವಾಗಿ ಇಂದು ರಾಮಲಲ್ಲಾ ತನ್ನ ಮೂಲ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
“ಭಾರತವು ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಈಗಾಗಲೇ ಒಂದು ಹಿಂದೂ ರಾಷ್ಟ್ರ. ಇದೇ ಈ ದೇಶದ ಮೂಲ ಸತ್ವವಾಗಿದೆ. ಇಲ್ಲಿ ವಾಸಿಸುವ ಮತ್ತು ಈ ದೇಶದ ಸಂಸ್ಕೃತಿಯನ್ನು ಗೌರವಿಸುವ ಪ್ರತಿಯೊಬ್ಬರೂ ಈ ಪರಂಪರೆಯ ಭಾಗವಾಗಿದ್ದಾರೆ.” ಎಂದು ಅವರು ಹೇಳಿದ್ದಾರೆ.
ನಾಗ್ಪುರದ ರೇಶಿಂಬಾಗ್‌ನಲ್ಲಿ ಡಾ.ಹೆಡ್ಗೆವಾರ್ ಸ್ಮಾರಕ ಸಮಿತಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಶ್ರೀರಾಮನ ಇಚ್ಛೆಯಿಂದ ರಾಮಮಂದಿರ ನಿರ್ಮಾಣ ಸಾಧ್ಯವಾಯಿತು ಎಂದು ಹೇಳಿದರು.
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬ ಬಿಜೆಪಿ ನಾಯಕರ ರಾಜಕೀಯ ಹೇಳಿಕೆಗಳ ನಡುವೆ ಭಾಗವತ್ ಅವರ ಈ ಹೇಳಿಕೆ ನೀಡಿರುವುದು ರಾಜಕೀಯ ಚರ್ಚೆಗೂ ಕಾರಣವಾಗಿದೆ.
ಇದನ್ನೂ ಓದಿ : ಪಶ್ಚಿಮ ಬಂಗಾಳದ ಸುಂದರಬನಗಳ ‘ವ್ಯಾಘ್ರ ವಿಧವೆ’ಯರ ನೆರಳು ಚುನಾವಣೆ ಮೇಲೆ ಚಾಚಿತೇ?
ಇನ್ನು, ಸಮಾಜದಲ್ಲಿನ ಮೇಲು-ಕೀಳು ಎಂಬ ಭೇದಭಾವಗಳನ್ನು ತೊಡೆದುಹಾಕಲು ಅವರು ಕರೆ ನೀಡಿದರು. “ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡದ ಹೊರತು ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ. ಜಾತಿ ಮತ್ತು ವರ್ಗಗಳ ಆಧಾರದ ಮೇಲೆ ವಿಭಜನೆಯಾಗುವುದನ್ನು ನಿಲ್ಲಿಸಿ, ಒಗ್ಗಟ್ಟಿನಿಂದ ಸಾಗಬೇಕಿದೆ,” ಎಂದು ಅವರು ಒತ್ತಿ ಹೇಳಿದರು.
ವಿಶ್ವ ಇಂದು ಸಂಘರ್ಷಗಳಿಂದ ಕೂಡಿದೆ. ಇಂತಹ ಸಮಯದಲ್ಲಿ ಭಾರತದ ‘ವಸುಧೈವ ಕುಟುಂಬಕಂ’ (ಇಡೀ ಜಗತ್ತೇ ಒಂದು ಕುಟುಂಬ) ಎಂಬ ತತ್ವವು ಜಗತ್ತಿಗೆ ಶಾಂತಿಯ ಹಾದಿಯನ್ನು ತೋರಿಸಬಲ್ಲದು. ರಾಮಮಂದಿರದ ಉದ್ಘಾಟನೆಯು ಭಾರತದ ಆತ್ಮಗೌರವದ ಪುನರುತ್ಥಾನದ ಸಂಕೇತವಾಗಿದೆ. ರಾಮಮಂದಿರವು ಕೇವಲ ಒಂದು ಧಾರ್ಮಿಕ ಕಟ್ಟಡವಲ್ಲ, ಅದು ಭಾರತೀಯರ ಏಕತೆಯ ಸಂಕೇತ. ಭಾರತ ಸೈದ್ಧಾಂತಿಕವಾಗಿ ಈಗಾಗಲೇ ಹಿಂದೂ ರಾಷ್ಟ್ರವಾಗಿದ್ದು, ಈಗಿನ ಅಗತ್ಯವೆಂದರೆ ಸಮಾಜದಲ್ಲಿನ ಆಂತರಿಕ ಭೇದಭಾವಗಳನ್ನು ಮರೆತು ರಾಷ್ಟ್ರ ನಿರ್ಮಾಣದಲ್ಲಿ ತೊಡಗುವುದಾಗಿದೆ ಎಂದು ಅವರು ಹೇಳಿದರು.
ಮತ್ತೆ ಮೋದಿ ಕಾಲೆಳೆದ ಭಾಗವತ್ : ಮೋಶಾ ‘ಸರ್ವಾಧಿಕಾರಿ’ ಧೋರಣೆಗೆ ಸಂಘದ ಲಗಾಮು
ರಾಮ ಮಂದಿರ ನಿರ್ಮಾಣದ ಸಂಪೂರ್ಣ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಳ್ಳುತ್ತಿರುವುದು ಆರ್‌ಎಸ್‌ಎಸ್ ಸಂಘಟನೆಗೆ ಸುತಾರಾಂ ಇಷ್ಟ ಇಲ್ಲ. ಸಂಘಟನೆಯನ್ನು ಮೀರಿ ಒಬ್ಬ ವ್ಯಕ್ತಿ ಬೆಳೆಯುವುದನ್ನು ಆರ್‌ಎಸ್‌ಎಸ್ ಒಪ್ಪುವುದಿಲ್ಲ. ಮೋದಿ ನಿಲುವನ್ನು ಆಗಾಗ ಪರೋಕ್ಷವಾಗಿ ಖಂಡಿಸುತ್ತಾ ಬಂದಿರುವ ಭಾಗವತ್ ಈಗ ಮತ್ತೊಮ್ಮೆ ತಿವಿದಿದ್ದಾರೆ.
ರಾಮಮಂದಿರ ನಿರ್ಮಾಣವು ಕೇವಲ ಒಬ್ಬ ವ್ಯಕ್ತಿಯ ಸಾಧನೆಯಲ್ಲ, ಅದು ಇಡೀ ಸಮಾಜದ ಸಾಮೂಹಿಕ ಪ್ರಯತ್ನದ ಫಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ʼವ್ಯಕ್ತಿಪೂಜೆಯ ರಾಜಕಾರಣʼಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇದು ಬಿಜೆಪಿಯೊಳಗೆ ಬೆಳೆಯುತ್ತಿರುವ ‘ಸರ್ವಾಧಿಕಾರಿ’ ಧೋರಣೆಗೆ ಸಂಘ ಪರಿವಾರವೇ ಹಾಕಿದ ಲಗಾಮು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಮತ್ತು ಕೇಂದ್ರ ಸರ್ಕಾರವು ಪ್ರತಿಯೊಂದು ಯೋಜನೆಯನ್ನು ಕೇವಲ ಮೋದಿ ಅವರ ಹೆಸರಿನಲ್ಲೇ ಪ್ರಚಾರ ಮಾಡುತ್ತಾ ಬಂದಿದೆ. ರಾಮಮಂದಿರದ ವಿಚಾರದಲ್ಲೂ ಮೋದಿ ಅವರನ್ನೇ ‘ಮೋಕ್ಷದಾತ’ ಎಂಬಂತೆ ಬಿಂಬಿಸಲಾಗಿತ್ತು. ಆದರೆ, ಭಾಗವತ್ ಅವರ “ಸಮೂಹ ಪ್ರಯತ್ನ” ಎಂಬ ಮಾತು, ಮಂದಿರದ ಹೆಸರಿನಲ್ಲಿ ನಡೆಯುತ್ತಿರುವ ವೈಯಕ್ತಿಕ ಪ್ರಚಾರದ ಪರಮಾವಧಿಯನ್ನು ಪ್ರಶ್ನಿಸಿದಂತಿದೆ.
ಇನ್ನು, ಸರ್ಕಾರ ಮತ್ತು ಪಕ್ಷದ ಮೇಲೆ ಮೋದಿ-ಶಾ ಜೋಡಿಯ ಹಿಡಿತ ಅತಿಯಾದಾಗ, ಸಂಘದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಭೀತಿ ನಾಗ್ಪುರದಲ್ಲಿ ಶುರುವಾಗಿದೆ. ಭಾಗವತ್ ಅವರ ಹೇಳಿಕೆಯು ಮೋದಿಯವರನ್ನು ಸಂಘದ ಮಿತಿಯಲ್ಲೇ ಇರಿಸಲು ಭಾಗವತ್ ಅವರು ಬಳಸಿದ ಅಸ್ತ್ರ ಎನ್ನಲಾಗುತ್ತಿದೆ. ಮಾತ್ರವಲ್ಲದೇ, ಧರ್ಮ ಮತ್ತು ರಾಜಕಾರಣದ ಅಪವಿತ್ರ ಮೈತ್ರಿಯ ನಡುವೆಯೂ ವ್ಯಕ್ತಿ ಕೇಂದ್ರಿತ ಅಧಿಕಾರ ನಡೆಸುತ್ತಿರುವ ಮೋದಿ ಅವರಿಗೆ ಸಂಘದಿಂದಲೇ ಮತ್ತೊಮ್ಮೆ ಬಂದ ಕಠಿಣ ಎಚ್ಚರಿಕೆ ಎಂದು ಹೇಳಲಾಗುತ್ತಿದೆ.




