ಮಂಗಳೂರು ನಗರದ ಹೊರವಲಯದ ಕುಡುಪು ಎಂಬ ಪ್ರಶಾಂತ ಹಳ್ಳಿ ಕಳೆದ ವರ್ಷದ ಹಿಂದೆ ಅಂದರೆ ಏಪ್ರಿಲ್ 27ರಂದು ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಯಿತು. ಧಾರ್ಮಿಕ ಅಸಹಿಷ್ಣುತೆ ಮತ್ತು ಮನುಷ್ಯತ್ವ ವಿರೋಧಿ ಮಾನಸಿಕತೆ ಒಂದು ಜೀವವನ್ನು ಹೇಗೆ ಬಲಿ ಪಡೆಯುತ್ತದೆ ಎಂಬುದಕ್ಕೆ ಕುಡುಪು ಗುಂಪು ಹತ್ಯೆ ಪ್ರಕರಣ ಸಾಕ್ಷಿಯಾಗಿ ನಿಂತಿದೆ. ಇಂದು ಈ ಭೀಕರ ಘಟನೆ ನಡೆದು ಭರ್ತಿ ಒಂದು ವರ್ಷ. ಆದರೆ, ಮೃತ ಅಶ್ರಫ್ ಕುಟುಂಬದ ಕಣ್ಣೀರು ಇನ್ನೂ ಮಾಸಿಲ್ಲ, ಅತ್ತ ನ್ಯಾಯ ಎಂಬುದು ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ.

ಘಟನೆಯ ಹಿನ್ನೆಲೆ: ಆ ಕರಾಳ ದಿನ ನಡೆದಿದ್ದೇನು?
ಕೇರಳ ಮೂಲದ ಅಶ್ರಫ್ ಎಂಬ ವ್ಯಕ್ತಿ ತನ್ನ ಬದುಕಿನ ಯಾವುದೋ ಅನಿವಾರ್ಯತೆಗಾಗಿ ಮಂಗಳೂರಿನ ಹೊರವಲಯಕ್ಕೆ ಬಂದಿದ್ದಿರಬಹುದು. ಆದರೆ, ಆತ ಅಂದು ಕುಡುಪುವಿನ ಭಟ್ರಕಲ್ಲುರ್ಟಿ ದೈವಸ್ಥಾನದ ಹಿಂಬದಿಯ ಮೈದಾನದಲ್ಲಿ ಅಕ್ಷರಶಃ ಸಾವಿನ ಅಟ್ಟಹಾಸವನ್ನು ಎದುರಿಸಬೇಕಾಯಿತು. ಹಾಡಹಗಲೇ ನೂರಾರು ಜನರ ಕಣ್ಣೆದುರು, ಒಂದು ಗುಂಪು ಅಶ್ರಫ್‌ನನ್ನು ಸುತ್ತುವರಿದು ಪಶುಗಳಂತೆ ವರ್ತಿಸಿತು. ಧರ್ಮದ ಅಮಲು ತಲೆಗೇರಿಸಿಕೊಂಡಿದ್ದ ಕೋಮುವಾದಿ ಮನಸ್ಥಿತಿಯ ಕಿರಾತಕರು ಅಶ್ರಫ್‌ನನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಬಡಿದು ಸಾಯಿಸಿದರು.
ಇದು ಕೇವಲ ಒಂದು ಹತ್ಯೆಯಾಗಿರಲಿಲ್ಲ; ಇದು ಕರ್ನಾಟಕದ ಇತಿಹಾಸದಲ್ಲಿ ದಾಖಲಾದ ಮೊದಲ ಗುಂಪು ಹತ್ಯೆ ಪ್ರಕರಣ. ಉತ್ತರ ಭಾರತದ ರಾಜ್ಯಗಳಲ್ಲಿ ಸಣ್ಣಪುಟ್ಟ ಕಾರಣಗಳಿಗಾಗಿ ನಡೆಯುತ್ತಿದ್ದ ಇಂತಹ ಅಮಾನುಷ ಕೃತ್ಯಗಳು ಕರಾವಳಿ ಕರ್ನಾಟಕದ ಮಣ್ಣಿಗೂ ಹಬ್ಬಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿತು.

ಹಾಗೇಯೇ ಅಶ್ರಫ್ ಮೇಲೆ ನಡೆದ ಹಲ್ಲೆ ಎಷ್ಟು ಕ್ರೂರವಾಗಿತ್ತೆಂದರೆ, ಮರಣೋತ್ತರ ಪರೀಕ್ಷೆಯ ವರದಿಯೇ ಮನುಕುಲ ಬೆಚ್ಚಿಬೀಳುವಂತಹ ಸತ್ಯಗಳನ್ನು ಹೊರಹಾಕಿದೆ. ಮರದ ಕೋಲುಗಳಿಂದ ಮನಬಂದಂತೆ ಜಜ್ಜಿದ್ದರಿಂದ ಅಶ್ರಫ್‌ನ ಮೆದುಳಿನಲ್ಲಿ ರಕ್ತಸ್ರಾವವಾಗಿ, ಮೂತ್ರಪಿಂಡಗಳು (ಕಿಡ್ನಿ) ಸಂಪೂರ್ಣ ಜಖಂಗೊಂಡು ಆತ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ ಎಂಬುದು ವಿಧಿವಿಜ್ಞಾನ ತಜ್ಞರ ವರದಿಯಲ್ಲಿ ದೃಢಪಟ್ಟಿದೆ. ಆತನ ದೇಹದ ಮೇಲಿದ್ದ ಪ್ರತಿಯೊಂದು ಗಾಯದ ಗುರುತುಗಳೂ ಆ ಕರಾಳ ಮಧ್ಯಾಹ್ನದ ಕಿರಾತಕತನಕ್ಕೆ ಸಾಕ್ಷಿ ನುಡಿಯುತ್ತಿವೆ.
ವ್ಯವಸ್ಥಿತ ಸಂಚು ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯ
ಈ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ಅಂಶವೆಂದರೆ ಪೊಲೀಸ್ ಇಲಾಖೆಯ ನಡೆ. ರಕ್ಷಣೆ ನೀಡಬೇಕಾದ ಕಾನೂನು ಪಾಲಕರು ಇಲ್ಲಿ ಭಕ್ಷಕರ ಪರವಾಗಿ ನಿಂತಿದ್ದರೇ ಎಂಬ ಅನುಮಾನ ಕಾಡುತ್ತದೆ. ಘಟನೆ ನಡೆದ ಆರಂಭದಲ್ಲಿ ಪೊಲೀಸರು ಇದನ್ನು “ಅಪರಿಚಿತ ವ್ಯಕ್ತಿಯ ಅಸಹಜ ಸಾವು” (UDR – Unnatural Death Report) ಎಂದು ದಾಖಲಿಸಿ ಕೈತೊಳೆದುಕೊಂಡಿದ್ದರು. ಒಂದು ಜೀವವನ್ನು ಗುಂಪೊಂದು ಸೇರಿ ಸಾಯಿಸಿದ್ದು ಸ್ಪಷ್ಟವಾಗಿದ್ದರೂ, ಅದನ್ನು ಮುಚ್ಚಿಹಾಕಲು ಪೊಲೀಸ್ ಇಲಾಖೆ ವ್ಯವಸ್ಥಿತವಾಗಿ ಪ್ರಯತ್ನಿಸಿತ್ತು ಎಂಬ ಆರೋಪಕ್ಕೆ ಈ ‘ಯುಡಿಆರ್’ ದಾಖಲೆಯೇ ಸಾಕ್ಷಿ. ಯಾವಾಗ ಅನಾಮಿಕ ಮೂಲಗಳಿಂದ ಮಾಹಿತಿಗಳು ಹೊರಬಂದವೋ, ಆಗ ಸಿಪಿಐಎಂ (CPIM) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಧ್ವನಿ ಎತ್ತಿತು. ಈ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತರು ಸಾಥ್ ನೀಡಿದಾಗ ಪೊಲೀಸರಿಗೆ ಪ್ರಕರಣವನ್ನು ಮರುದಾಖಲಿಸುವುದು ಅನಿವಾರ್ಯವಾಯಿತು. ವ್ಯವಸ್ಥೆಯು ಆರಂಭದಲ್ಲೇ ಈ ಕೊಲೆಯನ್ನು ಮುಚ್ಚಿಹಾಕಲು ಯತ್ನಿಸದಿದ್ದರೆ, ಇಂದು ಈ ಪ್ರಕರಣದ ದಿಕ್ಕೇ ಬದಲಾಗುತ್ತಿತ್ತು.
ಇನ್ನು ಈ ಪ್ರಕರಣದಲ್ಲಿ ಪೊಲೀಸರು ಒಟ್ಟು 23 ಮಂದಿಯನ್ನು ಆರೋಪಿಗಳೆಂದು ಗುರುತಿಸಿದರು. ಅದರಲ್ಲಿ 21 ಮಂದಿಯನ್ನು ಬಂಧಿಸಲಾಯಿತು. ಆದರೆ, ದುರಂತವೆಂದರೆ ಘಟನೆ ನಡೆದು ಒಂದು ವರ್ಷ ಕಳೆಯುವುದರೊಳಗೆ 17 ಮಂದಿ ಆರೋಪಿಗಳು ಜಾಮೀನಿನ ಮೇಲೆ ರಾಜಾರೋಷವಾಗಿ ಹೊರಬಂದಿದ್ದಾರೆ. ಒಬ್ಬ ಆರೋಪಿಗೆ ಜಾಮೀನು ಸಿಕ್ಕಿದ್ದರೂ ಭದ್ರತೆಯ ಕೊರತೆಯಿಂದ ಜೈಲಿನಲ್ಲಿದ್ದಾನೆ. ಮೂವರು ಮಾತ್ರ ಸದ್ಯಕ್ಕೆ ಜೈಲಿನಲ್ಲಿದ್ದಾರೆ. ಇನ್ನೊಬ್ಬ ಆರೋಪಿ ಇದುವರೆಗೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ಹತ್ಯೆ ಮಾಡಿದವರು ಒಬ್ಬೊಬ್ಬರಾಗಿ ಹೊರಬರುತ್ತಿದ್ದರೆ, ಅಶ್ರಫ್ ಕುಟುಂಬ ಮಾತ್ರ ತನ್ನ ಆಧಾರಸ್ತಂಭವನ್ನು ಕಳೆದುಕೊಂಡು ಬೀದಿಗೆ ಬಿದ್ದಿದೆ.

ಪ್ರಕರಣದ ಗಂಭೀರತೆ ಅರಿತ ಸರ್ಕಾರ, ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಾದಿಸಲು ಶಿವಪ್ರಸಾದ್ ಆಳ್ವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಿದೆ ಹಾಗೂ ಹೈಕೋರ್ಟ್‌ನಲ್ಲಿ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಐವರು ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಆದರೆ, ಇಷ್ಟೆಲ್ಲಾ ವೈಜ್ಞಾನಿಕ ಸಾಕ್ಷ್ಯಗಳು ಮತ್ತು ವಿಶೇಷ ಕಾನೂನು ತಂಡಗಳು ಸಜ್ಜಾಗಿದ್ದರೂ, ವರ್ಷ ಕಳೆದರೂ ಆರೋಪಿಗಳು ಒಬ್ಬೊಬ್ಬರಾಗಿ ಜಾಮೀನು ಪಡೆದು ಹೊರಬರುತ್ತಿರುವುದು ನ್ಯಾಯವ್ಯವಸ್ಥೆಯ ವಿಪರ್ಯಾಸವೇ ಸರಿ. ಸರ್ಕಾರ ಕೇವಲ ಸಮಿತಿಗಳನ್ನು ರಚಿಸಿ ಕೈತೊಳೆದುಕೊಂಡರೆ ಸಾಕೆ? ಬಡ ಅಶ್ರಫ್ ಕುಟುಂಬಕ್ಕೆ ಸಿಗಬೇಕಾದ ‘ನೈಜ ನ್ಯಾಯ’ ಕೇವಲ ಕಾಗದದ ಆದೇಶಗಳಲ್ಲಿ ಉಳಿಯಬಾರದು.
ರಾಜ್ಯ ಸರ್ಕಾರವು ಇಂತಹ ಸೂಕ್ಷ್ಮ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಗುಂಪು ಹತ್ಯೆಯಂತಹ ಪ್ರಕರಣಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ಆದರೆ, ಸರ್ಕಾರದ ನಿರ್ಲಕ್ಷ್ಯ ಮತ್ತು ತನಿಖಾ ಸಂಸ್ಥೆಗಳ ಮೃದು ಧೋರಣೆ ಅಪರಾಧಿಗಳಿಗೆ “ನಾವು ಏನೂ ಮಾಡಿದರೂ ಪಾರಾಗಬಹುದು” ಎಂಬ ಧೈರ್ಯವನ್ನು ನೀಡುತ್ತಿದೆ. ಕೋಮುವಾದಿ ಸಂಘಟನೆಗಳ ಕುಮ್ಮಕ್ಕಿನಿಂದ ನಡೆಯುವ ಇಂತಹ ಕೃತ್ಯಗಳು ಕರಾವಳಿ ಜಿಲ್ಲೆಯ ಗೌರವಕ್ಕೆ ಕಪ್ಪು ಚುಕ್ಕೆಯಾಗಿವೆ.
ಅಶ್ರಫ್ ಸಾವಿನಿಂದ ದೊಡ್ಡ ದೊಡ್ಡ ಸುದ್ದಿಗಳು ಹರಿದಾಡಿದವು. ರಾಜಕೀಯ ಚರ್ಚೆಗಳು ನಡೆದವು. ಆದರೆ ಆತನ ಮನೆಯ ಒಳಗೆ ಏನಾಗುತ್ತಿದೆ? ಒಬ್ಬ ತಾಯಿ ತನ್ನ ಮಗನನ್ನು ಕಳೆದುಕೊಂಡಿದ್ದಾಳೆ. ಅಣ್ಣ ತಮ್ಮನನ್ನ ಕಳೆದುಕೊಂಡಿದ್ದಾನೆ, ಒಬ್ಬ ತಂಗಿ ಅಣ್ಣನನ್ನ ಕಳೆದುಕೊಂಡಿದ್ದಾಳೆ. ಅವರ ಜೀವನದಲ್ಲಿ ಪ್ರತಿದಿನವೂ ಏಪ್ರಿಲ್ 27ನೇ. ಪ್ರಕರಣ ದಾಖಲಾಗಿದೆ. ಬಂಧನಗಳಾಗಿವೆ. ಜಾಮೀನುಗಳೂ ಸಿಕ್ಕಿವೆ. ಆದರೆ ಅಂತಿಮವಾಗಿ ನ್ಯಾಯ ಸಿಗುತ್ತದೆಯೇ? ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಇದೆ. ನ್ಯಾಯಾಲಯಗಳು ಇವೆ. ಆದರೆ ನ್ಯಾಯ ಸಿಗಲು ವರ್ಷಗಳ ಕಾಲ ಬೇಕಾದರೆ, ಆ ನ್ಯಾಯದ ಅರ್ಥವೇನು? ನ್ಯಾಯ ವಿಳಂಬವಾದರೆ, ಅದು ನ್ಯಾಯವಲ್ಲ—ಅದೇ ಅನ್ಯಾಯ. ಅಶ್ರಫ್ ಮತ್ತೆ ಬರುವುದಿಲ್ಲ ಸರಿ. ಆದರೆ ಅವನಿಗೆ ನ್ಯಾಯ ಸಿಗಬೇಕು. ಅವನ ಕುಟುಂಬಕ್ಕೆ ನ್ಯಾಯ ಸಿಗಬೇಕು.

ಕುಡುಪು ಅಶ್ರಫ್ ಹತ್ಯೆ ಪ್ರಕರಣವು ಸಮಾಜಕ್ಕೆ ಒಂದು ಎಚ್ಚರಿಕೆಯ ಗಂಟೆ. ಅಶ್ರಫ್ ಕುಟುಂಬದ ಕಣ್ಣೀರಿಗೆ ಬೆಲೆ ಸಿಗಬೇಕಾದರೆ, ಕ್ರೂರವಾಗಿ ಹಲ್ಲೆಗೈದವರಿಗೆ ಕಾನೂನಿನ ಅಂತಿಮ ದರ್ಶನ ಮಾಡಿಸಬೇಕು. ಈ ಜವಾಬ್ದಾರಿ ಸರ್ಕಾರದ ಮೇಲಿದೆ, ಇಲ್ಲವಾದರೆ ಈ ವಿಶೇಷ ನೇಮಕಾತಿಗಳು ಕೇವಲ ಕಣ್ಣೊರೆಸುವ ತಂತ್ರವಾಗಿ ಇತಿಹಾಸದಲ್ಲಿ ಉಳಿದುಬಿಡುತ್ತವೆ. ಸಮಾಜದಲ್ಲಿ ಇಂತಹ ‘ಗುಂಪು ನ್ಯಾಯ’ದ ಹೆಸರಿನಲ್ಲಿ ಮತ್ತಷ್ಟು ಅಶ್ರಫ್‌ಗಳು ಬಲಿಯಾಗುತ್ತಲೇ ಇರುತ್ತಾರೆ. ವ್ಯವಸ್ಥೆ ಎಚ್ಚೆತ್ತುಕೊಳ್ಳಲಿ, ಬಡವನಿಗೂ ನ್ಯಾಯ ಸಿಗಲಿ.




