ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ ವೇಳೆ ಸಂಚಾರ ನಿಯಮ ಉಲ್ಲಂಘನೆ ಆರೋಪವನ್ನು ಎದುರಿಸುತ್ತಿದ್ದಾರೆ
ಕೇರಳದ ಕೊಚ್ಚಿಯಲ್ಲಿ ರೋಡ್ ಶೋ ನಡೆಸಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಂಚಾರ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ತ್ರಿಶೂರ್ ನಿವಾಸಿ ಜಯಕೃಷ್ಣನ್ ಎಂಬುವವರು ದೂರು ನೀಡಿದ್ದಾರೆ.
ಎರಡು ದಿನಗಳ ಭೇಟಿಗಾಗಿ ಸೋಮವಾರ ಕೇರಳಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ, ಎರ್ನಾಕುಲಂನಲ್ಲಿ ಸಾಂಪ್ರದಾಯಿಕ ಸ್ಥಳೀಯ ಉಡುಗೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದರು. ಈ ವೇಳೆ ಕಾರಿನ ಬಾಗಿಲು ತೆರೆದು ಫುಟ್‌ಬೋರ್ಡ್‌ನಲ್ಲಿ ನಿಂತು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರತ್ತ ಕೈ ಬೀಸಿದ್ದರು.
ಇದು ಸಂಚಾರ ನಿಯಮ ಉಲ್ಲಂಘನೆ ಎಂದು ದೂರುದಾರ ಜಯಕೃಷ್ಣನ್ ಆರೋಪಿಸಿದ್ದಾರೆ. “ಡಿಎಲ್ 2 ಸಿಎಎಕ್ಸ್ 8624 ನೋಂದಣಿ ಸಂಖ್ಯೆಯ ವಾಹನವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ವಾಹನದ ತೆರೆದ ಬಾಗಿಲಿನಲ್ಲಿ ವ್ಯಕ್ತಿಯೊಬ್ಬರು ನೇತಾಡುತ್ತಿದ್ದರು. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಕಾರನ್ನು ಚಲಾಯಿಸುವುದು ಅಪಾಯಕಾರಿ. ಇದಲ್ಲದೆ ಕಾರಿನ ಗ್ಲಾಸ್‌ಗಳು ಹೂವುಗಳಿಂದ ಮುಚ್ಚಲ್ಪಟ್ಟಿತ್ತು. ಇದರಿಂದಾಗಿ ಚಾಲಕನ ದೃಷ್ಟಿಗೆ ಅಡ್ಡಿಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರಕ್ಕೆ ದೆಹಲಿ ವಿವಿ ನಿಷೇಧ ರದ್ದುಪಡಿಸಿದ ದೆಹಲಿ ಹೈಕೋರ್ಟ್
ಪೊಲೀಸ್ ಮಹಾನಿರ್ದೇಶಕರು ಹಾಗೂ ಮೋಟಾರು ವಾಹನ ಇಲಾಖೆಗೆ (ಎಂವಿಡಿ) ಆನ್‌ಲೈನ್ ಮೂಲಕ ಜಯಕೃಷ್ಣನ್ ದೂರು ನೀಡಿದ್ದಾರೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು. ಇಂತಹ ಚಟುವಟಿಕೆಗಳು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುವುದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಕೊಚ್ಚಿಯ ತೇವರದಲ್ಲಿ ರೋಡ್‌ಶೋ ನಡೆಸಿದ ಪ್ರಧಾನಿ ಮೋದಿ, ಆರಂಭದಲ್ಲಿ 20 ನಿಮಿಷಗಳ ಕಾಲ ಕಾಲ್ನಡಿಗೆಯಲ್ಲಿ ತೆರಳಿ ಬಳಿಕ ಕಾರಿನ ಫುಟ್‌ಬೋರ್ಡ್‌ನಲ್ಲಿ ನಿಂತು ಹೆದ್ದಾರಿಗಳ ಬದಿಗಳಲ್ಲಿದ್ದವರತ್ತ ಕೈ ಬೀಸಿದ್ದರು. ಬಿಜೆಪಿ ಆಯೋಜಿಸಿದ್ದ ಯುವಂ ಸಮಾವೇಶಕ್ಕೆ ಚಾಲನೆ, ʻವಂದೇ ಭಾರತ್ʼ ರೈಲು ಲೋಕಾರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಿದ್ದರು.