ಆದಿವಾಸಿ ಹೋರಾಟ, ಅಧ್ಯಯನ ವರದಿ ಅಲಕ್ಷಿಸಿ ಪಾರ್ಸಾ ಕೆನೆಟ್‌ ಗಣಿಗಾರಿಕೆಗೆ ಅದಾನಿಗೆ ಅವಕಾಶ ನೀಡಿದ ಮೋದಿ ಸರ್ಕಾರ

Date:

ಆದಿವಾಸಿ ಸಮುದಾಯದ ವಿರೋಧದ ನಡುವೆಯೂ ಛತ್ತೀಸ್‌ಗಢದ ಪಾರ್ಸಾ ಕೆನೆಟ್‌ ಕಲ್ಲಿದ್ದಲು ಗಣಿಗಾರಿಕೆಗೆ 3000 ಎಕರೆಗಳಷ್ಟು ಹಸ್ಡಿಯೋ ಅರಣ್ಯ ಭೂಮಿಯನ್ನು ಮೋದಿ ಸರ್ಕಾರ ಗೌತಮ್ ಅದಾನಿ ಸಮೂಹಕ್ಕೆ ಕೊಡುಗೆಯಾಗಿ ನೀಡಿದೆ.

ಛತ್ತೀಸ್‌ಗಢದ ಪಾರ್ಸಾ ಕೆನೆಟ್‌ ಕಲ್ಲಿದ್ದಲು ಯೋಜನೆಗೆ 3000 ಎಕರೆಗಳಷ್ಟು ಹೆಚ್ಚುವರಿ ಅರಣ್ಯ ಭೂಮಿಯನ್ನು ಮೋದಿ ಸರ್ಕಾರ ಗೌತಮ್ ಅದಾನಿ ಅವರ ಕಲ್ಲಿದ್ದಲು ಸಂಸ್ಥೆಯ ಗಣಿಗಾರಿಕೆಗೆ ಮಂಜೂರು ಮಾಡಿದೆ.

ಬಹುತೇಕ ಮಾಧ್ಯಮಗಳಲ್ಲಿ ಇದು ಸುದ್ದಿಯಾಗಲೇ ಇಲ್ಲ. ಕೆಲವು ಮಾಧ್ಯಮಗಳು ಗೌತಮ್ ಅದಾನಿ ಅವರ ಕಲ್ಲಿದ್ದಲು ಸಂಸ್ಥೆ ಅರಣ್ಯ ನಾಶಪಡಿಸುವ ಬಗ್ಗೆ ಸುದ್ದಿಗಳನ್ನು ಬರೆದಿವೆ. ಆದರೆ, ಹೀಗೆ ಗಣಿಗಾರಿಕೆಗೆ ಸಾವಿರಾರು ಎಕರೆ ಭೂಮಿಯನ್ನು ಮಂಜೂರು ಮಾಡುವಾಗ ಅಲ್ಲಿ ತಲೆತಲಾಂತರದಿಂದ ನೆಲೆಸಿರುವ ಬುಡಕಟ್ಟು ಜನಾಂಗದವರ ಬವಣೆಯ ಬಗ್ಗೆ ಅತೀ ಕಡಿಮೆ ಲೇಖನಗಳು ಬಂದಿವೆ.

ತಮ್ಮದೇ ಭೂಮಿಯಲ್ಲಿ ಅನಿವಾಸಿಗಳಾಗುವುದು ಹೇಗಿರುತ್ತದೆ? ‘ದಿ ಹಿಂದೂ’ ಪತ್ರಿಕೆಯಲ್ಲಿ ಜೇಖಬ್ ಕೋಶಿ ಅವರು ಬರೆದ ಲೇಖನವೊಂದರ ಪ್ರಕಾರ, ಛತ್ತೀಸ್‌ಗಢದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯಡಿ 7.4 ದಶಲಕ್ಷ ಬುಡಕಟ್ಟು ಕುಟುಂಬಗಳಿಗೆ ಪರಂಪರಾಗತವಾಗಿ ತಮ್ಮ ಭೂಮಿಯ ಹಕ್ಕನ್ನು ಗಳಿಸುವ ಅರ್ಹತೆಯಿದೆ. ಆದರೆ ಈ ಸಂಖ್ಯೆಯ ಅರ್ಧದಷ್ಟು ಮಂದಿಗೂ ಭೂಮಿಯ ಹಕ್ಕು ನೀಡಿಲ್ಲ. ಬದಲಿಗೆ, ಇವರ ಭೂಮಿಯನ್ನು ಕಸಿದು ಸಾರ್ವಜನಿಕ-ಖಾಸಗಿ ಸಂಸ್ಥೆಗಳ ಯೋಜನೆಗಳಿಗೆ ನೀಡಲಾಗಿದೆ.

ಕೋಶಿಯವರು ಬರೆದಿರುವ ಪ್ರಕಾರ ದಾಖಲೆಗಳಲ್ಲಿ ಗೊಂಡಾ ಬುಡಕಟ್ಟು ಜಾಂಗದ ಸುಂದರ್ ಸಿಂಗ್ ಕುಮೇಟಿ ಅವರು 2.5 ಎಕರೆಗಳಷ್ಟು ಅರಣ್ಯ ಭೂಮಿಯ ಮಾಲೀಕರು. ಆದರೆ ಈ ಭೂಮಿಯ ಅರ್ಧದಷ್ಟು ಭಾಗವನ್ನು ದಲ್ಲಿರಾಜಹರ-ರಾವ್‌ಘಾಟ್‌-ಜಗದಲ್‌ಪುರ ರೈಲ್ವೇ ಮಾರ್ಗಕ್ಕೆ ಕಸಿದುಕೊಳ್ಳಲಾಗಿದೆ. ಅದಾದ ಮೂರು ವರ್ಷಗಳಲ್ಲಿ ಎರಡು ತಲೆಮಾರುಗಳಿಂದ ತಮ್ಮ ಕುಟುಂಬ ನೆಲೆಸಿದ್ದ ಅರಣ್ಯದಲ್ಲಿರುವ ತಮ್ಮ ಭೂಮಿಗೆ ಹೋಗುವ ದಾರಿಯನ್ನೇ ಸುಂದರ್ ಕಳೆದುಕೊಂಡರು. 2016 ಸೆಪ್ಟೆಂಬರ್‌ನಲ್ಲಿ ಸುಂದರ್ ಮತ್ತು ಇತರ 15 ಮಂದಿಯ ಭೂಮಿಯನ್ನು ರೈಲ್ವೇ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು.

2018 ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಲೋಡ್ ಜಿಲ್ಲೆಯ ದಲ್ಲಿರಾಝರಕ್ಕೆ ಸಂಪರ್ಕಿಸುವ ಈ ರೈಲ್ವೇ ಯೋಜನೆ ಉದ್ಘಾಟಿಸಿದ್ದರು. ಈ ರೈಲ್ವೇ ಉತ್ತರ ಬಸ್ತಾರ್‌ನ ಕಬ್ಬಿಣದ ಅದಿರಿನ ಪ್ರದೇಶ ಭಾನುಪ್ರತಾಪುರಕ್ಕೂ ಸಂಪರ್ಕ ಕಲ್ಪಿಸುತ್ತಿತ್ತು. ಪ್ರಸ್ತಾಪಿತ 235 ಕಿಮೀ ಉದ್ದದ ಹಳಿ ರೋಘಾಟ್ ಗಣಿಗಳಿಗೂ ಸಂಪರ್ಕ ಕಲ್ಪಿಸುತ್ತಿತ್ತು. ಭಿಲಾಯಿ ಸ್ಟೀಲ್ ಘಟಕ ಎರಡು ವರ್ಷಗಳಷ್ಟು ಗಣಿಗಾರಿಕೆ ಬಾಕಿಯಿದ್ದ ದಲ್ಲಿರಂಝಾರ ಗಣಿಗಳಿಂದ ಅದಿರು ಪಡೆಯುತ್ತಿತ್ತು. ರಾಯ್‌ಪುರದಿಂದ ಜಗದಲ್‌ಪುರಕ್ಕೆ ರೈಲ್ವೇ ವಿಸ್ತರಿಸಿದರೆ ಗಣಿ ಸಂಪರ್ಕ ಸರಳವಾಗುತ್ತಿತ್ತು. ಬಸ್ತಾರ್ ಪ್ರದೇಶ ನಕ್ಸಲ್ ಪೀಡಿತವಾಗಿದ್ದು, ರೈಲ್ವೇ ಕೆಲಸ ನಿರೀಕ್ಷೆಯಂತೆ ಸಾಗುತ್ತಿರಲಿಲ್ಲ. ಆದರೆ 2016ರ ನಂತರ ಪರಿಸ್ಥಿತಿ ಬದಲಾಗಿ, ಕೆಲಸ ವೇಗ ಪಡೆದುಕೊಂಡಿತು.

2016 ಸೆಪ್ಟೆಂಬರ್‌ನಿಂದ ನವೆಂಬರ್ ನಡುವೆ ಕೆಲಸ ವೇಗವಾಗಿ ಸಾಗಿ 2018 ಜನವರಿಗೆ ರೈಲ್ವೇ ಯೋಜನೆ ಸಂಪನ್ನವಾಯಿತು. ಸುಂದರ್ ಮಾತ್ರವಲ್ಲ, ಅವರ ನೆರೆಹೊರೆಯ ಅನೇಕರು ಹಲವಾರು ಎಕರೆ ಪ್ರದೇಶಗಳನ್ನು ಕಳೆದುಕೊಂಡರು. ಛತ್ತೀಸ್‌ಗಢದಲ್ಲಿ ಬಸ್ತಾರ್ ಪ್ರಾಂತ್ಯ ಮಾತ್ರವಲ್ಲ, ಬುಡಕಟ್ಟು ಜನರ ಪ್ರತಿಭಟನೆಗೆ ಒಳಗಾಗಿರುವ ಮತ್ತೊಂದು ಪ್ರದೇಶವೆಂದರೆ ಹಸ್ಡಿಯೋ ಅರಣ್ಯ ಪ್ರದೇಶ. ಹಸ್ಡಿಯೋ ಅರಣ್ಯ ಉಳಿಸಲು ಅನೇಕ ಸಂಘಟನೆಗಳು, ಬುಡಕಟ್ಟು ಸಮುದಾಯದವರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಆದರೆ ಇದೀಗ ಅದೇ ಹಸ್ಡಿಯೋ ಅರಣ್ಯದ 3000 ಎಕರೆಗಳಷ್ಟು ಭೂಮಿ ಅದಾನಿ ಸಮೂಹದ ಕಂಪನಿಗಳ ಗಣಿಗಾರಿಕೆಗೆ ಬಲಿಯಾಗುತ್ತಿರುವುದು ವಿಷಾದನೀಯ.

ಛತ್ತೀಸ್‌ಗಢದ ಆದಿವಾಸಿಗಳ ಪ್ರತಿಭಟನೆ

ಛತ್ತೀಸ್‌ಗಢದಲ್ಲಿ ಹೀಗೆ ಸಾವಿರಾರು ಎಕರೆಗಳ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದು ಹೊಸತೇನಲ್ಲ. ಆದಿವಾಸಿ ಜನರು ತಮ್ಮ ಭೂಮಿ ಉಳಿಸಿಕೊಳ್ಳಲು ಪ್ರತಿಭಟಿಸುತ್ತಲೇ ಬಂದಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಹಸ್ಡಿಯೋ ಅರಣ್ಯ ಪ್ರದೇಶದಿಂದ ರಾಜಧಾನಿಗೆ 300 ಕಿಮೀ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಪಾರ್ಸಾ ಕೆನೆಟ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆ (ಪಿಇಕೆಬಿ) ಸಮುದಾಯದ ವಿರೋಧದ ನಡುವೆಯೂ ಮುಂದುವರಿದಿದೆ.

ಮುಖ್ಯವಾಗಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಪಾರ್ಸಾ ಕೆನೆಟ್‌ ಕಾಲರೀಸ್ ಲಿಮಿಟೆಡ್ ಎನ್ನುವ ಎರಡು ಸಂಸ್ಥೆಗಳು ಇಲ್ಲಿ ಗಣಿಗಳನ್ನು ನಡೆಸುತ್ತವೆ. ಹಸ್ಡಿಯೋ ಅರಣ್ಯ ಬಚಾವೋ ಸಂಘರ್ಷ ಸಮಿತಿ ಮತ್ತು ಛತ್ತೀಸ್‌ಗಢ್ ಬಚಾವೋ ಆಂದೋಲನದ ವಕ್ತಾರರು ಬುಡಕಟ್ಟು ಸಮುದಾಯದ ಪರವಾಗಿ ಹೋರಾಡುತ್ತಿದ್ದಾರೆ.

ಪಾರ್ಸಾ ಕೆನೆಟ್ ಕಲ್ಲಿದ್ದಲು ಯೋಜನೆಗಳಿಗೆ ಅದಾನಿ ಸಂಸ್ಥೆಯೇ ಗಣಿ ಅಭಿವೃದ್ಧಿ ಮತ್ತು ನಿರ್ವಹಣೆ ಜವಾಬ್ದಾರಿ ಹೊಂದಿದ್ದಾರೆ. ರಾಜಸ್ಥಾನದ ವಿದ್ಯುತ್ ಕಂಪನಿ ಈ ಗಣಿಗಳ ಗಣಿಗಾರಿಕೆ ಲೀಸ್‌ಗಳನ್ನು ಹೊಂದಿದೆ. ಈ ಯೋಜನೆಯಿಂದಾಗಿ ಆನೆಗಳ ಆವಾಸಸ್ಥಾನವಾಗಿರುವ ಹಸ್ಡಿಯೋ ಅರಣ್ಯ ನಾಶದ ಆತಂಕ ಆವರಿಸಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆ

2022 ಜೂನ್‌ನಲ್ಲಿ ರಾಜ್ಯ ಸರ್ಕಾರ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಘೋಷಿಸಿತ್ತು. ಆದರೆ ನಂತರ ಪಿಇಕೆಬಿ ವಿಸ್ತರಿತ ಯೋಜನೆಗೆ ಮರಗಳನ್ನು ಕಡಿಯುವುದು ಮುಂದುವರಿಯಿತು. ಪಿಇಕೆಬಿ ಯೋಜನೆಯಲ್ಲಿ ಕೇಂದ್ರದ ಮೋದಿ ಸರ್ಕಾರದ ಜೊತೆ ಜೊತೆಗೆ ಛತ್ತೀಸ್‌ಗಢದಲ್ಲಿ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳೂ ಕೈಜೋಡಿಸಿವೆ.

ಇದೀಗ ಮೋದಿ ಸರ್ಕಾರ ಈ ಹಸ್ಡಿಯೋ ಅರಣ್ಯದ 3000 ಎಕರೆಗಳಷ್ಟು ಭೂಮಿಯನ್ನು ಅದಾನಿ ಸಮೂಹ ನಿರ್ವಹಿಸುತ್ತಿರುವ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ನೀಡಿದೆ. ಈ ಸ್ವಾಧೀನಕ್ಕೆ ಮುನ್ನ ಸರ್ಕಾರಿ ಅನುದಾನಿತ ಅಧ್ಯಯನವೊಂದರಲ್ಲಿ ಈಗಿನ ಗಣಿಯಲ್ಲಿಯೇ ಲಕ್ಷಾಂತರ ಮೌಲ್ಯದ ಕಲ್ಲಿದ್ದಲು ತೆಗೆಯಲು ಬಾಕಿ ಉಳಿದಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದರೂ, ಹೊಸ ಸ್ವಾಧೀನಕ್ಕೆ ಅನುಮತಿ ನೀಡಿರುವುದು ಏಕೆ ಎನ್ನುವ ಪ್ರಶ್ನೆಗಳನ್ನು ಮಾಧ್ಯಮಗಳು ಎತ್ತಿವೆ.

ಹಸ್ಡಿಯೋ ಅರಣ್ಯದ ಹೆಚ್ಚುವರಿ ಭಾಗವನ್ನು ಗಣಿಗಾರಿಕೆಗೆ ಒದಗಿಸುವ ಬಗ್ಗೆ ರಾಜ್ಯ ಸರ್ಕಾರದ ಪಾಲೂ ಇದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಹಸ್ಡಿಯೋ ಅರಣ್ಯ ಕಲ್ಲಿದ್ದಲು ಪ್ರದೇಶವನ್ನು ಜನವಸತಿಯಿಲ್ಲದ ಪ್ರದೇಶವೆಂದು ಘೋಷಿಸಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಭಾರತೀಯ ವನ್ಯಜೀವಿ ಸಂಸ್ಥೆ (ಡಬ್ಲ್ಯುಐಐ) ಜೀವವೈವಿಧ್ಯ ವರದಿಯ ಹೊರತಾಗಿಯೂ ಈ ಭೂಮಿಯನ್ನು ಛತ್ತೀಸ್‌ಗಢದ ಸರ್ಕಾರ ಪಿಇಕೆಬಿ ಕಲ್ಲಿದ್ದಲು ಬ್ಲಾಕ್‌ನ ಲೀಸ್ ಹೊಂದಿರುವ ರಾಜಸ್ಥಾನದ ವಿದ್ಯುತ್ ಕಂಪನಿಗೆ ನೀಡಲು ಮುಂದಾಗಿರುವ ಬಗ್ಗೆ 2021ರಲ್ಲಿ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು.

ಎರಡು ಸರ್ಕಾರಿ ವರದಿಗಳ ಹೊರತಾಗಿಯೂ ಕೇಂದ್ರದ ಮೋದಿ ಸರ್ಕಾರ 2022 ಫೆಬ್ರವರಿಯಲ್ಲಿ ಗಣಿ ವಿಸ್ತರಣೆಗೆ ಅನುಮತಿ ನೀಡಿತ್ತು. ಆದರೆ ಆದಿವಾಸಿ ಸಮುದಾಯದ ವಿರೋಧದ ನಂತರ ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರ ಈ ವಿಸ್ತರಣೆಗೆ ತಾತ್ಕಾಲಿಕ ತಡೆಯನ್ನು ನೀಡಿತ್ತು.

ಈ ಸುದ್ದಿ ಓದಿದ್ದೀರಾ?: ನಕಲಿ ಬಿಡ್ಡರ್‌ಗಳ ಮೂಲಕ ಕಲ್ಲಿದ್ದಲು ಹರಾಜಿನಲ್ಲಿ ಏಕಸ್ವಾಮ್ಯ ಮೆರೆದ ಅದಾನಿ ಸಮೂಹ

ಜೈವಿಕ ಪರಿಣಾಮದ ಬಗ್ಗೆ ಎಚ್ಚರಿಸಿದ ಅಧ್ಯಯನ

ಛತ್ತೀಸ್‌ಗಢದ ಹಸ್ಡಿಯೋ ಅರಣ್ಯದ ಕಲ್ಲಿದ್ದಲು ಪ್ರದೇಶದ ಬಗ್ಗೆ 2019 ಮೇ ಮತ್ತು 2021 ಫೆಬ್ರವರಿಯಲ್ಲಿ ಎರಡು ಸರ್ಕಾರಿ ಸಂಸ್ಥೆಗಳಾದ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರೀಸರ್ಚ್ ಆಂಡ್ ಎಜುಕೇಶನ್ ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಜೀವ ವೈವಿಧ್ಯ ಅಧ್ಯಯನ ನಡೆಸಿದ್ದವು. ಅಧ್ಯಯನದಲ್ಲಿ ಹೇಳಿರುವ ಪ್ರಕಾರ ಅರಣ್ಯದಲ್ಲಿ ಗಣಿಗಾರಿಕೆಗೆ ಪರವಾನಗಿ ಪಡೆದಿರುವ ಪಾರ್ಸಾ ಪೂರ್ವ ಮತ್ತು ಕಾಂಟಾ ಬೇಸನ್ ಗಣಿಗಾರಿಕೆಯ ಜೈವಿಕ ಪರಿಣಾಮ ಭೀಕರವಾಗಿರಲಿದೆ. ಈ ಗಣಿಗಾರಿಕೆಯಲ್ಲಿ ಶೇ 74ರಷ್ಟು ಷೇರುಗಳು ಅದಾನಿ ಸಮೂಹದ್ದಾಗಿದೆ.

ಈಗಾಗಲೇ ಅದಾನಿ ಸಮೂಹದ ಗಣಿಗಾರಿಕೆಗೆ ಒದಗಿಸಲಾಗಿರುವ ಭೂಮಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶವಿದೆ. ಆದರೆ ಹೆಚ್ಚು ಆಳವಾಗಿ ಗಣಿಗಾರಿಕೆ ಮಾಡುವ ಹೊರೆಯನ್ನು ತಪ್ಪಿಸಲು, ಹೊಸ ಪ್ರದೇಶಗಳಲ್ಲಿ ಸಮಾಂತರ ಗಣಿಗಾರಿಕೆಗೆ ಇಳಿದು ಇನ್ನಷ್ಟು ಅರಣ್ಯ ನಾಶಕ್ಕೆ ಸರ್ಕಾರದ ಒತ್ತಾಸೆಯಲ್ಲಿ ಗಣಿ ಸಂಸ್ಥೆಗಳು ಮುಂದಾಗಿವೆ. “ವಿಸ್ತರಿತ ಗಣಿಗಾರಿಕೆಗೆ ವ್ಯಾಪಕ ಪ್ರಮಾಣದ ಅರಣ್ಯವನ್ನು ಒದಗಿಸುವುದರಿಂದ ಗಂಭೀರ ಭೂ ಕುಸಿತದ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಅದಿರು ಪ್ರದೇಶದಲ್ಲಿ ಆಳ ಗಣಿಗಾರಿಕೆಯ ಮೂಲಕ ಹೆಚ್ಚು ಅದಿರು ಪಡೆಯುವುದರಿಂದ ಇಂತಹ ಅರಣ್ಯ ನಾಶ ತಪ್ಪಿಸಬಹುದು” ಎಂದು ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರೀಸರ್ಚ್ ವರದಿ ಹೇಳಿದೆ. ಡಬ್ಲ್ಯುಐಐ ಕೂಡ ಈಗಾಗಲೇ ಪರವಾನಗಿ ನೀಡಿರುವ ಕಲ್ಲಿದ್ದಲು ಗಣಿಗಳಲ್ಲೇ ಆಳವಾಗಿ ಗಣಿಗಾರಿಕೆ ಸಾಧ್ಯವಿದೆ, ಹೊಸ ಪರವಾನಗಿ ಅಗತ್ಯವಿಲ್ಲ ಎಂದು ಹೇಳಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟರ್ಕಿ ಸಂಸತ್‌ನ ಬಳಿ ಆತ್ಮಹತ್ಯಾ ಬಾಂಬ್ ದಾಳಿ: ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯ

ಟರ್ಕಿ ದೇಶದ ಸಂಸತ್‌ 'ಅಂಕಾರ' ಬಳಿ ಇಂದು ಬೆಳಗ್ಗೆ ಆತ್ಮಹತ್ಯಾ ಬಾಂಬ್...

ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ಸಾಯಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಹಿರಿಯರ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ನಾವು ಹಿರಿಯರಿಗೆ ನೀಡುವ ಗೌರವ: ಸಿಎಂ 'ಎಷ್ಟು...

ಆರು ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನ; ರಾಜಕೀಯ ಸಮರ ಸೃಷ್ಟಿಸಿದ ಎಚ್‌ಡಿಕೆ ಹೇಳಿಕೆ

ಇನ್ನು ಆರು ತಿಂಗಳಲ್ಲಿ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂಬ ಜೆಡಿಎಸ್ ನಾಯಕ...

ಇಂದಿನಿಂದ ಭಾರತದಲ್ಲಿನ ಅಫ್ಘಾನಿಸ್ತಾನ ರಾಯಭಾರ ಕಚೇರಿ ಕಾರ್ಯಾಚರಣೆ ಸ್ಥಗಿತ

ಭಾರತ ಸರ್ಕಾರವು ಸರಿಯಾದ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿದ ರಾಯಭಾರ ಕಚೇರಿ 'ಸಾಕಷ್ಟು...