ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಸಾಲು ಬದಲಾಯಿಸಿರುವುದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, “ಶಾಲೆಗಳೆಂದರೆ ಪವಿತ್ರ ತಾಣ. ಇದನ್ನು ಅರ್ಥೈಸಿಕೊಳ್ಳದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಮನಸ್ಥಿತಿ ತೋರುತ್ತಿದೆ” ಎಂದು ಟೀಕಿಸಿದ್ದಾರೆ.
“ಇಲಾಖೆಯ ಹಿರಿಯ IAS ಅಧಿಕಾರಿಯ ಮೂಲಕ ಸರ್ಕಾರಿ ವಸತಿ ಶಾಲೆಗಳ ದ್ವಾರದಲ್ಲಿ ಬರೆಸಲಾಗಿದ್ದ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂಬ ಘೋಷವಾಕ್ಯವನ್ನು ಬದಲಿಸಿ “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂದು ಬರೆಸಲು ಪ್ರಾರಂಭಿಸಿದೆ. ಮೊನ್ನೆಯಷ್ಟೇ ಇದೇ ಶಾಲೆಗಳಲ್ಲಿ ಧಾರ್ಮಿಕ ಹಬ್ಬ , ಪೂಜೆಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿ ಇದರಿಂದ ‘ಕೈ’ಸುಡಲು ಆರಂಭವಾದ ಬೆನ್ನಲ್ಲೇ ಆದೇಶ ಹಿಂಪಡೆದು ತನ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಅದುಮಿಟ್ಟುಕೊಂಡಿದ್ದ ಸರ್ಕಾರ ಇದೀಗ ಮತ್ತೊಂದು ಮತಿಗೇಡಿತನಕ್ಕೆ ‘ಕೈ’ಹಾಕಿ ವಿಕೃತಿ ಮೆರೆದಿದೆ. ಜೊತೆಗೇ ವಿದ್ಯಾರ್ಥಿಗಳನ್ನು ಶಿಕ್ಷಕರ ವಿರುದ್ಧ ಎತ್ತಿಕಟ್ಟಲು ಈ ಸಾಲುಗಳು ಪ್ರಚೋದನೆ ನೀಡುವಂತಿದೆ” ಎಂದು ಕಿಡಿಕಾರಿದ್ದಾರೆ.
“ಕೈ ಮುಗಿದು ಒಳೆಗೆ ಬಾ ….ಎಂಬ ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳಿಂದ ಪ್ರೇರಣೆ ಪಡೆದು ನಾಡಿನ ಅನೇಕ ಶಿಕ್ಷಣ ಸಂಸ್ಥೆಗಳು ‘”ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂದು ಘೋಷವಾಕ್ಯ ಬರೆಸಿವೆ, ಇದನ್ನೇ ಸರ್ಕಾರಿ ಶಾಲೆಗಳಲ್ಲೂ ಅನುಸರಿಸಲಾಗಿದೆ. ‘ವಿದ್ಯಾ ದದಾತಿ ವಿನಯಂ….ವಿದ್ಯೆ ಎಂದರೆ ವಿನಯ, ವಿನಯ ವಿದ್ದೆಡೆ ಮಾತ್ರ ವಿದ್ಯೆ ಒಲಿಯುವುದು, ವಿದ್ಯಾಲಯವನ್ನು ದೇಗುಲದಂತೆ ಭಾವಿಸಿ “ಕೈ ಮುಗಿದು ಒಳಗೆ ಬನ್ನಿ’’ ಎಂಬ ಸದ್ವಿನಯ, ಸಂಸ್ಕಾರ, ಶ್ರದ್ಧಾಗುಣಗಳನ್ನು ನೆನಪಿಸುವ ಈ ಸಾಲು ಯಾವ ಧರ್ಮದವರನ್ನು ನೋಯಿಸುತ್ತದೋ ತಿಳಿಯದಾಗಿದೆ? ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಜನರಿಗೆ ಸ್ಪಷ್ಟನೆ ನೀಡಬೇಕಿದೆ” ಎಂದು ಆಗ್ರಹಿಸಿದ್ದಾರೆ.
“ದೇಶದ ಆರನೇ ಹಾಗೂ ಕರ್ನಾಟಕ ರಾಜ್ಯದ ಮೊದಲನೇ ವಿಶ್ವವಿದ್ಯಾಲಯವಾಗಿರುವ ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ ‘ನಹಿ ಜ್ಞಾನೇನ ಸದೃಶಂ’ ಅಂದರೆ ‘ಜ್ಞಾನಕ್ಕೆ ಸಮನಾದುದು ಯಾವುದು ಇಲ್ಲ’ ಎಂಬುದು, ಈ ಘೋಷವಾಕ್ಯ ವಿಶ್ವವಿದ್ಯಾಲಯದ ಕಾರ್ಯಸೌಧವನ್ನು ಅಲಂಕರಿಸಿದೆ ಜತೆಗೇ ವಿದ್ಯೆಯ ಅಧಿದೇವತೆ ಸರಸ್ವತಿಯನ್ನೂ ಪಡಿಮೂಡಿಸಲಾಗಿದೆ. ತನ್ನ ಅಧೀನದಲ್ಲಿದೆ ಎಂಬ ಅಹಃ ನಿಂದ , ಭಗವದ್ಗೀತೆಯ ಈ ಶ್ಲೋಕ ಹಾಗೂ ಸರಸ್ವತಿಯನ್ನು ತೆಗೆಸುವ ಐತಿಹಾಸಿಕ ಪ್ರಮಾದ ವೆಸಗಲೂ ಈ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುವುದಿಲ್ಲ ಎನಿಸುತ್ತಿದೆ” ಎಂದು ಕುಟುಕಿದ್ದಾರೆ.
ಸರ್ಕಾರಿ ವಸತಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿದ್ದ "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ" ಎಂಬ ರಾಷ್ಟ್ರಕವಿ ಕುವೆಂಪು ಅವರ ಅರ್ಥಪೂರ್ಣವಾದ ಸಾಲುಗಳನ್ನು ತೆಗೆದುಹಾಕಿ "ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ" ಎಂದು ಬದಲಾಯಿಸುವ ಮೂಲಕ ವಿದ್ಯಾರ್ಥಿಗಳ ತಲೆಯಲ್ಲಿ ಜಿಹಾದಿ ಮಾನಸಿಕತೆಯನ್ನ pic.twitter.com/SpUfHNkE6e
— P Rajeev (@PRajeevBJP) February 19, 2024
“ವಸತಿ ಶಾಲೆಗಳ ಮೇಲೆ ಬರೆಸಲಾಗಿದ್ದ ಈ ಹಿಂದಿನ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಘೋಷ ವಾಕ್ಯ ಮತ್ತೆ ಬರೆಸದೇ ಹೋದರೆ ಹಾಗೂ ಈ ಆದೇಶದ ಹಿಂದಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೇ ಹೋದರೆ ಮುಂದಾಗುವ ಪರಿಣಾಮಗಳನ್ನು ಸರ್ಕಾರ ಎದುರಿಸಬೇಕಿದೆ” ಎಂದು ಎಚ್ಚರಿಸಿದ್ದಾರೆ.
“ಸರ್ಕಾರಿ ವಸತಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿದ್ದ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂಬ ರಾಷ್ಟ್ರಕವಿ ಕುವೆಂಪು ಅವರ ಅರ್ಥಪೂರ್ಣವಾದ ಸಾಲುಗಳನ್ನು ತೆಗೆದುಹಾಕಿ “ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ” ಎಂದು ಬದಲಾಯಿಸುವ ಮೂಲಕ ವಿದ್ಯಾರ್ಥಿಗಳ ತಲೆಯಲ್ಲಿ ಜಿಹಾದಿ ಮಾನಸಿಕತೆಯನ್ನು ತುಂಬುತ್ತಿದೆ” ಎಂದು ಪಿ ರಾಜೀವ್ ಆರೋಪಿಸಿದ್ದಾರೆ.
ಮಾಜಿ ಸಚಿವ ಅಶ್ವತ್ಥ ನಾರಾಯಣ ಟ್ವೀಟ್ ಮಾಡಿ, “ಕುವೆಂಪು ಅವರ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂಬ ಧ್ಯೇಯ ವಾಕ್ಯವನ್ನು ಕಾಂಗ್ರೆಸ್ ಸರ್ಕಾರದಲ್ಲಿ ಬಡ ಶಾಲಾ ಮಕ್ಕಳ ಬ್ರೈನ್ ವಾಶ್ ಮಾಡಲು ಬದಲಾಯಿಸಲಾಗುತ್ತಿದೆ. ಅರ್ಥಗರ್ಭಿತವಾದ ಈ ಸಾಲುಗಳನ್ನು ಬದಲಾಯಿಸಿ ವಿದ್ಯಾರ್ಥಿಗಳ ತಲೆಯಲ್ಲಿ ಜಿಹಾದಿ ಮಾನಸಿಕತೆಯನ್ನ, ನಕ್ಸಲ್ ವಿಚಾರವಾದವನ್ನ ಬಿತ್ತಲು ಹೊರಟಿರುವ ನಿಮ್ಮ ಸರ್ಕಾರದ ಉದ್ದೇಶವೇನು? ಕುವೆಂಪು ಅವರ ಸಾಲುಗಳು ನಿಮಗೆ ಬೇಡವಾದವೇ ಸಿದ್ದರಾಮಯ್ಯ ಅವರೇ” ಎಂದು ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಸುನಿಲ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿ, “ಸರ್ಕಾರಿ ವಸತಿ ಶಾಲೆ,ಕಾಲೇಜುಗಳಲ್ಲಿ ಇದ್ದ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ತೆಗೆದು ಹಾಕಿ “ಜ್ಞಾನ ದೇಗುಲವಿದು,ಧೈರ್ಯವಾಗಿ ಪ್ರಶ್ನಿಸಿ” ಎಂದು ಬದಲಾಯಿಸುವ ಮೂಲಕ ವಿದ್ಯಾರ್ಥಿಗಳ ತಲೆಯಲ್ಲಿ ಜಿಹಾದಿ ಮಾನಸಿಕತೆಯನ್ನ,ನಕ್ಸಲ್ ವಿಚಾರವನ್ನ ಬಿತ್ತಲು ಹೊರಟಿದೆ ಸಿದ್ದರಾಮಯ್ಯ ಸರ್ಕಾರ” ಎಂದು ಆರೋಪಿಸಿದ್ದಾರೆ.
“ಕುವೆಂಪು ಅವರ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂಬ ಧ್ಯೇಯ ವಾಕ್ಯವನ್ನು ಕಾಂಗ್ರೆಸ್ ಸರ್ಕಾರ ಬಡ ಶಾಲಾ ಮಕ್ಕಳ ಬ್ರೈನ್ ವಾಶ್ ಮಾಡಲು ಬದಲಾಯಿಸಿದೆ. ಈ ಮೂಲಕ ಹಿಂದುಳಿದ ಬಡ ವಿದ್ಯಾರ್ಥಿಗಳು ಹಿಂದೂ ಸಂಸ್ಕೃತಿ, ಸಂಸ್ಕಾರವನ್ನು ವಿರೋಧಿಸುವಂತೆ ವಿಷ ಬೀಜ ಬಿತ್ತಿ, ಎಡಬಿಡಂಗಿ ಸಿದ್ಧಾಂತವನ್ನು ಹೇರಲಾಗುತ್ತಿದೆ” ಎಂದು ಬಿಜೆಪಿ ತನ್ನ ಅಧಿಕೃತ ಖಾತೆಯಲ್ಲಿ ಬರೆದುಕೊಂಡಿದೆ.
“ಸಮಾಜ ಕಲ್ಯಾಣ ಇಲಾಖೆ ಮೂಲಕ ಹಿಂದುಳಿದ, ದಲಿತ ಬಡ ಮಕ್ಕಳಿಗೆ ಮದರಸಾ ಶಿಕ್ಷಣ ನೀಡಿ ಬೀದಿಗೆ ಬಿಟ್ಟು ಪಿಎಫ್ಐ ಗೂಂಡಾಗಳಂತೆ ಕಲ್ಲು ತೂರಿಸಲು ಪ್ರಚೋದನೆ ಕೊಡುವ ಉದ್ದೇಶದ ಮೊದಲ ಹಂತವೇ ಇದು! “ತಾಲಿಬಾನ್ ಮಾಡೆಲ್” ಅನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸಿದ್ದರಾಮಯ್ಯ ಅವರು ಹಂತ ಹಂತವಾಗಿ ಮುನ್ನುಡಿ ಇಟ್ಟಿದ್ದಾರೆ. ಬಡವರ ಮಕ್ಕಳನ್ನು ಹಳ್ಳಕ್ಕೆ ದೂಡಿ ಮಜಾ ತೆಗೆದುಕೊಳ್ಳುವುದೇ ಮಜಾವಾದಿ ಸರ್ಕಾರದ ಹಿಡನ್ ಅಜೆಂಡಾ!” ಎಂದು ಟೀಕಿಸಿದೆ.