“ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಮಾತ್ರ ಗಾಂಧಿ ಜಯಂತಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುವ ಸರ್ಕಾರ ಅವರನ್ನು ಗುಂಡಿಟ್ಟು ಕೊಂದ ದಿನವನ್ನು ಯಾಕೆ? ಮರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿಜೀ ಕಂಡ ಕನಸನ್ನು ಸೌಹಾರ್ದಗೊಳಿಸುವಲ್ಲಿ ನಾವೆಲ್ಲರೂ ಪಣತೊಡಬೇಕಿದೆ” ಡಿವೈಎಫ್ಐ ಅಖಿಲ ಭಾರತ ಸದಸ್ಯರು ಬಸವರಾಜ ಪೂಜಾರ ಹೇಳಿದರು.
ಹಾವೇರಿ ನಗರದ ಗಾಂಧಿ ವೃತ್ತದಲ್ಲಿ ಎಸ್ಎಫ್ಐ ಹಾಗೂ ಡಿವೈಎಫ್ಐ ವತಿಯಿಂದ ಮಹಾತ್ಮ ಗಾಂಧಿ ಜಯಂತಿಯನ್ನು ಅವರ ಪ್ರತಿಮೆಗೆ ಪುಷ್ಪ ನಮನ ಗೌರವ ಸಲ್ಲಿಸಿ ಮಾತನಾಡಿದರು.
“ಗಾಂಧಿಯವರು ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಸಮಾಜಕ್ಕೆ ಹಲವು ಮೌಲ್ಯಗಳನ್ನು ನೀಡಿದ್ದಾರೆ. ಮಾನವೀಯತೆಯ ಮೌಲ್ಯಗಳೆಡೆಗೆ ಸಾಗಬೇಕೆಂದು ಕರೆ ನೀಡಿದವರು. ಯುಗಪುರುಷ ಗಾಂಧಿ ಅವರ ವಿಚಾರಧಾರೆಗೆ ವಿರುದ್ಧವಾಗಿರುವ ವಿಭಿನ್ನ ಶಕ್ತಿಗಳು ಬಹಳಷ್ಟು ವಿಜೃಂಭಿಸುತ್ತಿರುವ ಕಾಲದ ಮಧ್ಯೆಯು ನಾವು ಸತ್ಯದ ದಾರಿಯಲ್ಲಿ ಸಾಗುತ್ತಿದ್ದೇವೆ” ಎಂದು ಹೇಳಿದರು.
ಎಸ್ಎಫ್ಐ – ಡಿವೈಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಗಾಂಧಿ ಅವರ ವಿಚಾರಗಳನ್ನು ಅಳವಡಿಸಲು ವಿದ್ಯಾರ್ಥಿ ಯುವಜನರ ಮುಂದಾಗಬೇಕು. ದ್ವೇಷ ಹಂಚುವ ಕಾಲದಲ್ಲಿ ಶಾಂತಿ ಸೌಹಾರ್ದತೆ ಮರಿಚಿಕೆ ಆಗದೆ ಉಳಿಸಿಕೊಳ್ಳಬೇಕು. ಗಾಂಧಿ ನಡೆಸಿದ ಹೋರಾಟದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಗಾಂಧಿ ಕೊಂದವರು ಇಂದು ದೇಶ ಆಳ್ವಿಕೆ ನಡೆಸುತ್ತಿದ್ದಾರೆ. ಜನರನ್ನು ಇಂದಿಗೂ ಸತಾಯಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಈವರೆಗೂ ನೋಟು ಪರಿಷ್ಕರಣೆ, ಮತದಾನ ಪರಿಷ್ಕರಣೆ ಹೀಗೆ ಪ್ರತಿಬಾರಿಯು ಭಾರತೀಯ ನಾಗರಿಕರನ್ನು ಬೀದಿಯಲ್ಲಿ ಅಲೆದಾಡಿಸುತ್ತಿದೆ” ಎಂದರು.
ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹಾರ, ಜಿಲ್ಲಾ ಕಾರ್ಯದರ್ಶಿ ಖಲಂದರ್ ಅಲ್ಲಿಗೌಡ್ರು, ಸಹಮತ ಸಂಸ್ಥೆಯ , ಲಕ್ಷ್ಮೀ ಹುಲ್ಲೂರ, ಉಪನ್ಯಾಸಕು ಡಾ. ರಾಧ ಎಚ್. ಎಮ್, ಎಸ್ಎಫ್ಐ ಡಿವೈಎಫ್ಐ ಮುಖಂಡರು ನಿಂಗರಾಜ ಪೂಜಾರ, ಶರಣು ಸಂಗನಾಳ, ನಿಕಿತಾ ಸಾವಕ್ಕನವರ, ನಿಕೀತಾ ಮಲ್ಲಯ್ಯನವರಮಠ, ಅನ್ವಿತ್ ವಾಲಿಶೆಟ್ಟರ್, ಬಾಲ ಸಂಘಂನ ತೇಜಸ್ ದೊಡ್ಡಮನಿ, ಅನ್ವಿಕಾ ಆರ್ ಬಿ, ಮೈನುದ್ದೀನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಚೈತ್ರಾ ಕೊರವರ ಸ್ವಾಗತಸಿ ನಿರೂಪಿಸಿದರು.




