ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಾಗಲಕೋಟೆ ನಗರದ ಸೆಟಲ್‌ಮೆಂಟ್ ಕಾಲೋನಿ, ಸಕ್ರಿ ಹೈಸ್ಕೂಲ್ ಸಮೀಪ ಸ್ವಚ್ಛತಾ ಅಭಿಯಾನ ಹಾಗೂ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಬಾಗಲಕೋಟೆ ಶಾಸಕ ಉಮೇಶ ಮೇಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ದಯಾನಂದ ಪಾಟೀಲ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಎಸ್. ಹದ್ಲಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮೇಶ ಮೇಟಿ, ಮಹಾತ್ಮ ಗಾಂಧೀಜಿಯವರ ಜೀವನ ಹಾಗೂ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಸ್ವಚ್ಛತೆ, ಶಿಸ್ತು ಹಾಗೂ ಸಾರ್ವಜನಿಕ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಚ್ಛ ಪರಿಸರ ನಿರ್ಮಾಣ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ದಯಾನಂದ ಪಾಟೀಲ ಮಾತನಾಡಿ, ಗಾಂಧೀಜಿಯವರ ಸ್ವಚ್ಛತಾ ಪರಿಕಲ್ಪನೆಯನ್ನು ಜನರ ಜೀವನದ ಭಾಗವಾಗಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಎಸ್. ಹದ್ಲಿ ಮಾತನಾಡಿ, ಸ್ವಚ್ಛತಾ ಅಭಿಯಾನ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ ನಿರಂತರ ಜನಚಳವಳಿಯಾಗಬೇಕು. ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಅಕ್ಬರ ಮುಲ್ಲಾ, ಎಸ್.ಎನ್. ರಾಮಪುರ, ಬುಡಾ ಅಧ್ಯಕ್ಷ ಅಬ್ದುಲರಜಾಕ್ ಬೇಣೂರ, ಪ್ರಚಾರ ಸಮಿತಿ ಬ್ಲಾಕ್ ಅಧ್ಯಕ್ಷ ಸುನೀಲ ಬಾಲಗಾವಿ, ಜಿಲ್ಲಾ ಮುಖ್ಯ ಸಂಯೋಜಕ ಶ್ರೀಧರ ನೀಲನಾಯಕ, ಮುಖಂಡರಾದ ಮಲ್ಲಿಕಾರ್ಜುನ ಮೇಟಿ, ಎನ್.ಬಿ. ಗಸ್ತಿ, ಹನಮಂತ ರಾಕುಂಪಿ, ಬಾಲರಾಜ ಚವ್ಹಾಣ, ಲಕ್ಷ್ಮಿ ಚವ್ಹಾಣ, ಇಮಾಮಸಾಬ ಬಳಬಟ್ಟಿ, ವಿಜಯ ಮುಳ್ಳೂರ, ವೀರಣ್ಣ ಹುಂಡೆಕಾರ, ಅಭಿಷೇಕ ತಳ್ಳಿಕೇರಿ, ರೇಣುಕಾ ನ್ಯಾಮಗೌಡ, ರೇಣುಕಾ ನಾರಾಯಣಕರ, ಮಂಜುಳಾ ಭುಸಾರೆ, ಮುಮತಾಜ ಸುತಾರ, ಜಯಶ್ರೀ ಗುಳಬಾಳ, ಬಾನುಬಿ ಇಲಕಲ್ಲ, ಶಂಕರ ನಾಯಕ, ಅಜೇಯ ಕಪಾಟೆ, ಸುರೇಶ ಝಿಂಗಾಡೆ, ಮಲ್ಲು ಲಮಾಣಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.




