- ಅಧಿವೇಶನಕ್ಕೂ ಮುನ್ನ ವಿಪಕ್ಷಗಳು ಸಭೆ
- ಫೈಜಲ್ ಲೋಕಸಭೆ ಸದಸ್ಯತ್ವ ಮರುಸ್ಥಾಪನೆ
ಸಂಸತ್ತು ಅಧಿವೇಶನ ಆರಂಭವಾದ ಮೂರನೇ ವಾರವೂ ಪ್ರತಿಪಕ್ಷಗಳು ಗದ್ದಲ ಉಂಟು ಮಾಡಿವೆ. ಇದರಿಂದ ಬುಧವಾರದ (ಮಾರ್ಚ್ 29) ಬಜೆಟ್ ಅಧಿವೇಶನದ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪ ಮಧ್ಯಾಹ್ನದ ವರೆಗೂ ಮುಂದೂಡಿಕೆಯಾಗಿದೆ.
ವಿಪಕ್ಷಗಳ ಕೋಲಾಹಲದಿಂದ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಲೋಕಸಭೆ ಕಲಾಪ ಮಧ್ಯಾಹ್ನ 12 ಗಂಟೆವರೆಗೂ ಮುಂದೂಡಿಕೆಯಾಗಿದೆ. ರಾಜ್ಯಸಭೆಯ ಕಲಾಪವೂ ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಲ್ಪಟ್ಟಿದೆ.
ಸದನ ಆರಂಭಕ್ಕೂ ಮುನ್ನ ಸಂಸತ್ತಿನ ವಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಅವರ ಕಚೇರಿಯಲ್ಲಿ ವಿಪಕ್ಷಗಳ ಸಭೆ ನಡೆಯಿತು. ಇದರಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಎಎಪಿ ನಾಯಕ ರಾಘವ್ ಚಡಾ ಮತ್ತು ಇತರರು ಭಾಗವಹಿಸಿದ್ದರು.
ಸಂಸತ್ತು ಅಧಿವೇಶನದ ಕಲಾಪದ ವೇಳೆ ಕೈಗೊಳ್ಳಬೇಕಾದ ತಂತ್ರಗಳ ಕುರಿತು ಪ್ರತಿಪಕ್ಷಗಳ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
ಎನ್‌ಸಿಪಿಯ ಮೊಹಮ್ಮದ್ ಫೈಜಲ್ ಅನರ್ಹತೆ ಹಿಂಪಡೆತ

ಬುಧವಾರ ಆರಂಭವಾದ ಲೋಕಸಭೆ ಕಲಾಪದ ವೇಳೆ ಈ ಮುನ್ನ ಅನರ್ಹಗೊಂಡಿದ್ದ ಎನ್ಸಿಪಿ ನಾಯಕ ಮೊಹಮ್ಮದ್ ಫೈಜಲ್ ಪಿ.ಪಿ. ಅವರ ಸದಸ್ಯತ್ವವನ್ನು ಲೋಕಸಭೆ ಕಾರ್ಯಾಲಯ ಮರುಸ್ಥಾಪಿಸಿದೆ.
ಅಪರಾಧ ಪ್ರಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಮೊಹಮ್ಮದ್ ಫೈಜಲ್ ಅವರನ್ನು ಕಳೆದ ಜನವರಿಯಲ್ಲಿ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.
ಮೊಹಮ್ಮದ್ ಫೈಜಲ್ ಲಕ್ಷದ್ವೀಪದ ಸಂಸದರಾಗಿದ್ದಾರೆ. ತಮಗೆ ಶಿಕ್ಷೆ ನೀಡಿರುವ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಫೈಜಲ್ ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ತಮಗೆ ಅಪರಾಧ ಹಾಗೂ ವಿಧಿಸಿರುವ ಶಿಕ್ಷೆ ಅಮಾನತುಗೊಳಿಸುವಂತೆ ಕೋರಿದ್ದರು. ಏಪ್ರಿಲ್ 13ಕ್ಕೆ ಸಂಸತ್ತು ಅಧಿವೇಶನ ಕೊನೆಗೊಳ್ಳಲಿದೆ.