ಇಡೀ ಪಶ್ಚಿಮ ಬಂಗಾಳವನ್ನೇ ಬಿಜೆಪಿಗೆ ಒಪ್ಪಿಸಿರುವ ಕೇಂದ್ರ ಚುನಾವಣಾ ಆಯೋಗದ (ECI) ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರಿಗೆ ‘ಭಾರತ ರತ್ನ’ ಕೊಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ಲುಲ್ಲಾ ವಾಗ್ದಾಳಿ ನಡೆಸಿದ್ದಾರೆ.
ಆಯೋಗದಲ್ಲಿ ಗ್ಯಾನೇಶ್ ಕುಮಾರ್ ನಾಯಕತ್ವ ಮತ್ತು ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದೇ ಹೊತ್ತಿನಲ್ಲಿ, ಗ್ಯಾನೇಶ್ ಕುಮಾರ್‌ಗೆ ‘ಪದ್ಮಭೂಷಣ’ ಪ್ರಶಸ್ತಿ ನೀಡಬೇಕೆಂಬು ಬಿಜೆಪಿ ಪ್ರಸ್ತಾಪಿಸಿದೆ. ಈ ಪ್ರಸ್ತಾಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಒಮರ್ ಅಬ್ದುಲ್ಲಾ, “ಪದ್ಮಭೂಷಣಕ್ಕೆ ಏಕೆ ನಿಲ್ಲಿಸುತ್ತೀರಿ, ಇಡೀ ಪಶ್ಚಿಮ ಬಂಗಾಳವನ್ನೇ ಬಿಜೆಪಿಗೆ ಒಪ್ಪಿಸಿದ್ದಕ್ಕಾಗಿ ಅವರಿಗೆ ‘ಭಾರತ ರತ್ನ’ ಕೊಡಿ ಅಥವಾ ರಾಷ್ಟ್ರಪತಿಯನ್ನಾಗಿ ಮಾಡಿ” ಎಂದು ವ್ಯಂಗ್ಯವಾಡಿದ್ದಾರೆ.
ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗ್ಯಾನೇಶ್ ಕುಮಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಬೇಕೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಕೇವಲ ಪದ್ಮಭೂಷಣವೇಕೆ? ಅವರನ್ನು ಭಾರತ ರತ್ನ ನೀಡಿ ಗೌರವಿಸಬೇಕು. ಇನ್ನೂ ಒಂದೆರಡು ವರ್ಷಗಳಲ್ಲಿ ರಾಷ್ಟ್ರಪತಿ ಚುನಾವಣೆ ಬರಲಿದೆ, ಅವರನ್ನು ದೇಶದ ರಾಷ್ಟ್ರಪತಿಯನ್ನೇ ಮಾಡಿಬಿಡಲಿ! ಏಕೆಂದರೆ ಅವರು ಬಿಜೆಪಿಗಾಗಿ ಅಷ್ಟೊಂದು ಕೆಲಸ ಮಾಡಿದ್ದಾರೆ, ಇಡೀ ಪಶ್ಚಿಮ ಬಂಗಾಳವನ್ನೇ ಬಿಜೆಪಿಗೆ ಉಡುಗೊರೆಯಾಗಿ ತಂದುಕೊಟ್ಟಿದ್ದಾರೆ. ಹೀಗಿರುವಾಗ ಅವರಿಗೆ ಬರೀ ಪದ್ಮಭೂಷಣ ನೀಡಿದರೆ ಅದು ಅವರಿಗೆ ಮಾಡುವ ಬಹುದೊಡ್ಡ ಅನ್ಯಾಯ” ಎಂದು ಹಾಸ್ಯದ ಧಾಟಿಯಲ್ಲಿ ಲೇವಡಿ ಮಾಡಿದ್ದಾರೆ.
“ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಾಂತ್ರಿಕ ನಿಯಮಗಳ ಮೂಲಕ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗುತ್ತಿದೆ. ಚುನಾವಣಾ ಆಯೋಗವು ತಕ್ಷಣವೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಯೋಗದ ಮೇಲೆ ರಾಜಕೀಯ ಪಕ್ಷಗಳು ಮಾತ್ರ ಆರೋಪ ಮಾಡುತ್ತಿಲ್ಲ; ಆಯೋಗದ ಒಳಗೂ ಆಕ್ಷೇಪಣೆಗಳು ಪತ್ರಿಕಾ ತನಿಖೆಗಳಿಂದ ಬಹಿರಂಗಗೊಂಡಿವೆ. ತಪ್ಪನ್ನು ಮುಚ್ಚಿಹಾಕಲು ಯತ್ನಿಸುವ ಬದಲು ಆಯೋಗ ತನ್ನ ಕೆಲಸವನ್ನು ತಿದ್ದಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!
ಅಂದಹಾಗೆ, ಗ್ಯಾನೇಶ್ ಕುಮಾರ್ ಅವರ ವಜಾಕ್ಕೆ ಆಗ್ರಹಿಸಿ ದೇಶದ ನಾನಾ ಭಾಗಗಳಲ್ಲಿ ರಾಜಕೀಯ ಕಾವು ತೀವ್ರಗೊಂಡಿದೆ. ದೆಹಲಿಯಲ್ಲಿರುವ ಚುನಾವಣಾ ಆಯೋಗದ ಕೇಂದ್ರ ಕಚೇರಿಯ ಮುಂದೆ ಸಿಪಿಐ(ಎಂ) ನಾಯಕ ಎಂ.ಎ. ಬೇಬಿ, ಬೃಂದಾ ಕಾರಟ್ ಸೇರಿದಂತೆ ಎಡಪಕ್ಷಗಳ ಪ್ರಮುಖ ನಾಯಕರು ಬೃಹತ್ ಪ್ರತಿಭಟನೆ ನಡೆಸಿ, ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದರು. ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದ್ದಾರೆ.
ಅಂತೆಯೇ, ಗ್ಯಾನೇಶ್ ಕುಮಾರ್ ವಜಾಗಾಗಿ ವಿಪಕ್ಷಗಳು ಸಂಸತ್ತಿನಲ್ಲಿ ಮಹಾಭಿಯೋಗ ಪ್ರಸ್ತಾಪಿಸಲು ಮುಂದಾಗಿವೆ. ಈ ಮಹಾಭಿಯೋಗಕ್ಕೆ ತಮ್ಮ ಪಕ್ಷವು ಪೂರ್ಣಪ್ರಮಾಣದಲ್ಲಿ ಬೆಂಬಲಿಸಲಿದೆ ಎಂದು ಡಿಎಂಕೆ ನಾಯಕ ಟಿ.ಕೆ.ಎಸ್. ಇಳಂಗೋವನ್ ದೃಢಪಡಿಸಿದ್ದಾರೆ.



