ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಹತ್ಯೆ ಅತ್ಯಾಚಾರಗಳ ಬಗ್ಗೆ ನಿಮಗೆ ʼಕಲ್ಚರಲ್ ಶಾಕ್ʼ ಆಗೋದು ಯಾವಾಗ ಮೋದೀಜಿ?

Date:

ಜಂತರ್‌ ಮಂತರ್‌ನಲ್ಲಿ ಹದಿಹರೆಯದ ಬಾಲಕಿಯೊಬ್ಬಳ ಮಾತು ಕೇಳಿ ‘ಕಲ್ಚರಲ್ ಶಾಕ್’ ಅನುಭವಿಸುವಷ್ಟು ‘ಸೂಕ್ಷ್ಮ’ವಾಗಿರುವ ನಮ್ಮ ಪ್ರಧಾನಿ ಮೋದಿಯವರಿಗೆ, ದೇಶಾದ್ಯಂತ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹತ್ಯೆ, ದೌರ್ಜನ್ಯಗಳು ಕಾಣುತ್ತಿಲ್ಲ. ಸಂತ್ರಸ್ತೆಯರ ಆಕ್ರಂದನ ಕೇಳುತ್ತಿಲ್ಲ. ಹೆಣ್ಣಿನ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದರೂ ಗದ್ದುಗೆಯಲ್ಲಿ ಕುಳಿತವರು ತುಟಿ ಬಿಚ್ಚುತ್ತಿಲ್ಲ. ಹೆಣ್ಣಿನ ಉಡುಗೆ ತೊಡುಗೆ, ಮಾತುಕತೆಯ ಮೇಲೆ ಸಂಸ್ಕೃತಿಯ ಪಾಠ ಬಿಗಿಯುವವರಿಗೆ ನಿಜ ಅರ್ಥದಲ್ಲಿ ಸಾಂಸ್ಕೃತಿಕ ಆಘಾತವಾಗುವುದು ಯಾವಾಗ?

- Advertisement -

ಬಿಹಾರದ ಬೇಗುಸರಾಯ್‌ನಲ್ಲಿ ಸ್ವಸಹಾಯ ಸಂಘದ (JEEVIKA) ಮಹಿಳಾ ಕಾರ್ಯಕರ್ತೆಯೊಬ್ಬರನ್ನು ಹೋಟೆಲ್‌ನಲ್ಲಿ ಚಾಕುವಿನಿಂದ ಬೆದರಿಸಿ, ಸಾಮೂಹಿಕ ಅತ್ಯಾಚಾರವೆಸಗಿ, ಆ ಅಮಾನವೀಯ ಕೃತ್ಯದ ವೀಡಿಯೊವನ್ನು ಸಂತ್ರಸ್ತೆಯ ಮೊಬೈಲ್ ನಂಬರ್‌ನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಹೇಯ ಕೃತ್ಯ ದೇಶದ ಆತ್ಮಸಾಕ್ಷಿಯನ್ನು ಬೆಚ್ಚಿ ಬೀಳಿಸಬೇಕಿದೆ. ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿಯಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿ ಈ ಮೃಗೀಯ ಘಟನೆ ದಾಖಲಾಗಿದೆ ಎಂದರೆ, ಅಪರಾಧಿಗಳಿಗೆ ಕಾನೂನಿನ ಭಯ ಎಷ್ಟರ ಮಟ್ಟಿಗೆ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಅದೇ ಬಿಹಾರದ ಸಾರಣ್ (ಡೆರ್ನಿ) ಜಿಲ್ಲೆಯಲ್ಲಿ ನಡೆದ ದಾರುಣ ಘಟನೆಯಂತೂ ಮಾನವಕುಲ ತಲೆತಗ್ಗಿಸುವಂತದ್ದು. ಸಂಜೆ ವೇಳೆಗೆ ತನ್ನ ಹಳೆಯ ಮನೆಯ ಬಳಿ ತೆರಳಿದ್ದ 10ನೇ ತರಗತಿಯ 16 ವರ್ಷದ ಬಾಲಕಿಯನ್ನು ಗ್ರಾಮದ ಐವರು ವಿಕೃತಕಾಮಿಗಳು ಅಟ್ಟಾಡಿಸಿ, ಸಮೀಪದ ಬಾತ್‌ರೂಮ್‌ಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಾಲಕಿ ಪ್ರಾಣಭಯದಿಂದ ಸಹಾಯಕ್ಕಾಗಿ ಕಿರುಚಿದರೂ ಬಿಡದ ಆ ನರಾಧಮರು ಆ ಮಗುವಿನ ಕಾಲುಗಳನ್ನು ಹಿಡಿದು ಎಳೆದಾಡಿ, ಜೀವಂತವಾಗಿ ಸಮೀಪದ ಬಾವಿಗೆ ಎಸೆದು ಪರಾರಿಯಾಗಿದ್ದಾರೆ. ಆ ಬಡ ಬಾಲಕಿಯ ನರಕಯಾತನೆ ಮತ್ತು ನೊಂದ ತಾಯಿಯ ಆಕ್ರಂದನ ವ್ಯವಸ್ಥೆಯ ಕಿವಿಗೆ ಬೀಳಲೇ ಇಲ್ಲ. ಅಪರಾಧಿಗಳನ್ನು ರಕ್ಷಿಸಲು ಪೊಲೀಸ್ ತನಿಖೆಯನ್ನು ದಿಕ್ಕು ತಪ್ಪಿಸುವ ಯತ್ನಗಳು ನಡೆದ ವರದಿಯಾದವು. ಹೆಣ್ಣುಮಕ್ಕಳ ರಕ್ಷಣೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ದಿವಾಳಿಯಾಗಿರುವುದಕ್ಕೆ ಇಂತಹ ಅಮಾನವೀಯ ಕೃತ್ಯಗಳೇ ಸಾಕ್ಷಿ.

ಗಯಾದಲ್ಲಿ ಬಾಲಕ-ಬಾಲಕಿಯ ಮೇಲಿನ ಹಲ್ಲೆ ನಡೆಸಿ, ಬೈಕ್ ಪಂಕ್ಚರ್ ಮಾಡಿ, ಬಾಂಕಾದ ಮಂದಾರ್ ಪರ್ವತ್‌ನಲ್ಲಿ ಹಾಗೂ ಸಮಸ್ತಿಪುರದಲ್ಲಿ ಬಾಲಕಿಯರಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಿ ವಿಕೃತಿ ಮೆರೆಯಲಾಯಿತು. ಅದರ ವೀಡಿಯೊ ವೈರಲ್ ಆದವು. ದೆಹಲಿಯ ಕಾಲ್ಕಾಜಿ ಪಾರ್ಕ್ನಲ್ಲಿ ಕುಳಿತಿದ್ದ ಜೋಡಿಯನ್ನು ತಡೆದು, ತಾವೇ ಪೊಲೀಸರು ಎಂದು ಸುಳ್ಳು ಹೇಳಿ ಬಾಲಕಿಯನ್ನು ಪ್ರತ್ಯೇಕ ಸ್ಥಳಕ್ಕೆ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ, ಚಲಿಸುತ್ತಿರುವ ಬಸ್‌ನಲ್ಲೇ ಮಹಿಳೆಯೊಬ್ಬರ ಮೇಲೆ ನಡೆದ ಭೀಕರ ಲೈಂಗಿಕ ದೌರ್ಜನ್ಯದ ಗಂಭೀರತೆಯನ್ನು ಸ್ವತಃ ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕಾಗಿ ಬಂದದ್ದು, ರಕ್ಷಣೆ ನೀಡಬೇಕಾದ ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ-ಹತ್ಯೆ, ದಶಕದ ಹಿಂದೆ ನಡೆದ ನಿರ್ಭಯಾ ಪ್ರಕರಣ.. ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಈ ಪಟ್ಟಿಯ ಬಹುತೇಕ ಸಂತ್ರಸ್ತರಿಗೆ ನ್ಯಾಯ ಇನ್ನೂ ಮರೀಚಿಕೆ. ಬಿಜೆಪಿಯೇ ಗದ್ದುಗೆಯಲ್ಲಿರುವ ʼಡಬಲ್‌ ಎಂಜಿನ್‌ʼ ರಾಜ್ಯಗಳೇ ಈ ಪ್ರಕರಣಗಳಲ್ಲಿ ಮುಂದಿರುವುದು ಇಲ್ಲಿ ಗಮನಾರ್ಹ.

ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬದವರ ಕಣ್ಣೀರು ಒಣಗಿಲ್ಲ. ಆದರೆ ಈ ಅನ್ಯಾಯದ ವಿರುದ್ಧ ದನಿ ಎತ್ತಿ ಕಠಿಣ ಕ್ರಮ ಕೈಗೊಳ್ಳಬೇಕಾದವರು, ಸಾಂವಿಧಾನಿಕ ಹುದ್ದೆಗಳಲ್ಲಿ ಕುಳಿತು ‘ಬೇಟಿ ಬಚಾವೋ’ ಎಂದು ಬೊಗಳೆ ಬಿಡುವವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ.

ಅಪರಾಧಕ್ಕೂ ಜಾತಿ, ಧರ್ಮದ ಲೇಪ ಹಚ್ಚುವ ರಾಜಕಾರಣ ಇದೆಯಲ್ಲ, ಅದು ವ್ಯವಸ್ಥೆಯ ದಿವಾಳಿತನವಷ್ಟೇ ಅಲ್ಲ, ನೈತಿಕತೆಯ ಪತನ. ಹೌದು, ಇಂದಿನ ರಾಜಕೀಯ ವ್ಯವಸ್ಥೆಯ ಅತಿ ದೊಡ್ಡ ಕರಾಳ ಮುಖವೆಂದರೆ ಇಲ್ಲಿ ಅಪರಾಧಕ್ಕೂ ಧರ್ಮದ ಅಳತೆಗೋಲು ಹಾಕುವುದು. ಒಂದು ವೇಳೆ ಅತ್ಯಾಚಾರ ಎಸಗಿದ ಕಾಮುಕರು ಮುಸ್ಲಿಂ ಸಮುದಾಯದವರಾಗಿದ್ದರೆ, ಮಡಿಲು ಮಾಧ್ಯಮಗಳ ಸ್ಟುಡಿಯೋಗಳು ಬೊಬ್ಬಿಡುತ್ತವೆ, ಅವರ ‘ಮಹಿಳಾ ಕಾಳಜಿ’ ರಾತ್ರೋರಾತ್ರಿ ಜಾಗೃತಗೊಳ್ಳುತ್ತದೆ, ಮೈಕ್‌ಗಳು ಬೀದಿಗಿಳಿಯುತ್ತವೆ. ಆದರೆ, ಅದೇ ಕೃತ್ಯ ಎಸಗಿದ ಆರೋಪಿಗಳು ಅಧಿಕಾರಸ್ಥರ ಸಿದ್ಧಾಂತದವರಾಗಿದ್ದರೆ, ರಾಜಕೀಯ ಬೆಂಬಲವಿರುವ ಪ್ರಭಾವಿಗಳು ಅಥವಾ ಮೇಲ್ವರ್ಗದವರಾಗಿದ್ದರೆ ಆಗ ನೈತಿಕತೆ, ಮಹಿಳಾ ಪರ ಕಾಳಜಿ ಹೊದ್ದು ಮಲಗಿಬಿಡುತ್ತವೆ. ಅಧಿಕಾರದ ರಕ್ಷಣೆಯಲ್ಲಿರುವ ಕಟುಕರ ಹಸಿದ ಬಾಲಂಗೋಚಿ ತೋಳಗಳಿಗೆ ಅಮಾಯಕ ಹೆಣ್ಣುಮಕ್ಕಳ ಮಾನ-ಪ್ರಾಣವನ್ನೇ ಮಾಂಸವಾಗಿ ಹಂಚಿಬಿಡಲಾಗುತ್ತದೆ. ಅಧಿಕಾರದ ಲಾಭಕ್ಕಾಗಿ ಹೆಣ್ಣಿನ ರಕ್ತ ಹೀರುವ ಈ ಕೃತ್ಯ ಯಾವ ಸಂಸ್ಕೃತಿ?

ಅತ್ಯಾಚಾರದ ರಾಶಿ ರಾಶಿ ಪ್ರಕರಣಗಳು ದಾಖಲಾಗುತ್ತಿದ್ದರೂ, ದೇಶದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ (Conviction Rate) ಮಾತ್ರ ಅತ್ಯಂತ ಕಳವಳಕಾರಿಯಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಲಕ್ಷಾಂತರ ಪ್ರಕರಣಗಳು ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದು, ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಸರಿಯಾದ ಸಮಯಕ್ಕೆ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿದೆ. ಸಾಕ್ಷ್ಯಾಧಾರಗಳ ಕೊರತೆ, ಸರಿಯಾದ ತನಿಖೆಯಿಲ್ಲದಿರುವುದು, ಉದ್ದೇಶಪೂರ್ವಕವಾಗಿ ಸಾಕ್ಷಾಧಾರಗಳನ್ನು ತಿರುಚುವುದು, ರಾಜಕೀಯ ಹಾಗೂ ಹಣದ ಪ್ರಭಾವದಿಂದಾಗಿ ಸಂತ್ರಸ್ತರಿಗೆ ನ್ಯಾಯ ಸಿಗುವುದೇ ದುಸ್ತರವಾಗಿದೆ. ಈ ‘ಶಿಕ್ಷೆಯ ಭಯವಿಲ್ಲದ ವಾತಾವರಣವೇ’ ಕಾಮುಕರು ಮತ್ತೆ ಮತ್ತೆ ಇಂತಹ ಹೇಯ ಕೃತ್ಯಗಳನ್ನು ಎಸಗಲು ಧೈರ್ಯ ತುಂಬುತ್ತಿದೆ. ಇದು ಬದಲಾಗಬೇಕು.

2012ರ ನಿರ್ಭಯಾ ದುರಂತದ ಬಳಿಕ ಇಷ್ಟು ವರ್ಷಗಳು ಕಳೆದರೂ ದೇಶದಲ್ಲಿ ಏನೂ ಬದಲಾಗಿಲ್ಲ ಎಂಬ ಕಹಿ ಸತ್ಯ ದೆಹಲಿ ಮತ್ತು ಪಂಜಾಬ್‌ನ ವಿವಿಗಳ ವಿದ್ಯಾರ್ಥಿನಿಯರ ಆಕ್ರೋಶದ ಧ್ವನಿಯಲ್ಲಿ ಮೊಳಗುತ್ತಿದೆ. ಯಾವುದೇ ಲೈಂಗಿಕ ಅಪರಾಧ ನಡೆದಾಗ ಅಥವಾ ಹೆಣ್ಣುಮಕ್ಕಳಲ್ಲಿ ಆತಂಕ ಮೂಡಿದಾಗ, ವ್ಯವಸ್ಥೆ ಜತೆಗೆ ಹಲವು ಬಾರಿ ಕುಟುಂಬಗಳೂ ನೀಡುವ ಸಲಹೆಗಳೆಂದರೆ, ಕತ್ತಲಾಗುತ್ತಿದ್ದಂತೆ ಹೊರಗೆ ಹೋಗಬೇಡ, ಒಂಟಿಯಾಗಿ ಓಡಾಡಬೇಡ, ಅಪರಿಚಿತರನ್ನು ಭೇಟಿಯಾಗಬೇಡ, ಇಷ್ಟಬಂದಂತೆ ಬಟ್ಟೆ ಧರಿಸಬೇಡ, ಯಾರನ್ನೂ ಪ್ರಶ್ನಿಸಬೇಡ, ಹೊರಗೆ ದೌರ್ಜನ್ಯವಾದರೂ ಧ್ವನಿ ಎತ್ತಬೇಡ, ಆನ್‌ಲೈನ್ ತರಗತಿ ಕೇಳು, ಆದರೆ ಆನ್‌ಲೈನ್ ಪ್ರತಿಭಟನೆ ಮಾಡಬೇಡ!

ಇದನ್ನೂ ಓದಿ: ಈ ದಿನ ಸಂಪಾದಕೀಯ | ಬಿಜೆಪಿ, ಭಕ್ತರು ಮತ್ತು ಸಾರ್ವಜನಿಕ ಸಭ್ಯತೆ

ಸುರಕ್ಷತೆ ಎನ್ನುವುದು ಕೇವಲ ಹೆಣ್ಣಿನ ಜವಾಬ್ದಾರಿಯೆಂಬಂತೆ ಬಿಂಬಿಸುವ ಇವರಿಗೆ ಏನು ಹೇಳಬೇಕೋ! ಮನೆಯಲ್ಲಿಯೇ ಸುರಕ್ಷಿತವಾಗಿ ಕುಳಿತುಕೊಳ್ಳುವುದು ಹೆಣ್ಣಿನ ಸುರಕ್ಷತಾ ನೀತಿಯಾಗಲು ಸಾಧ್ಯವಿಲ್ಲ. ಸುರಕ್ಷತೆ ಎನ್ನುವುದು ಹೆಣ್ಣಿನ ಮನೆಯೊಳಗಿನ ಬಂಧನವಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಆಕೆಯ ಮುಕ್ತ ಸಂಚಾರದ ಹಕ್ಕು. ಯಾವುದೇ ಹೆಣ್ಣು ತಾನು ಸುರಕ್ಷಿತವಾಗಿ ಮನೆ ತಲುಪುತ್ತೇನೆಯೋ ಇಲ್ಲವೋ ಎಂದು ಪ್ರಶ್ನಿಸಿಕೊಳ್ಳುವ ಪರಿಸ್ಥಿತಿ ಬರಕೂಡದು. ಆದರೆ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಎಷ್ಟೋ ಹೆಣ್ಣುಮಕ್ಕಳು ಈ ಎಲ್ಲ ನಿಷೇಧಗಳನ್ನು ಮೂಕರಾಗಿ ಸಹಿಸಿಕೊಳ್ಳಬಹುದು. ಆದರೆ ಇಂದಿನ ಯುವತಿಯರು ಹಾಗಲ್ಲ. ಪುರುಷರ ಹಿಂಸೆಗೆ ಹೆಣ್ಣಿನ ನಡವಳಿಕೆಯನ್ನು ನಿಯಂತ್ರಿಸುವುದೇ ಏಕೈಕ ಪರಿಹಾರ ಎಂಬ ಮೂರ್ಖತನದ ವಾದವನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ರಸ್ತೆಗಳಲ್ಲಿ ದೀಪಗಳಿರಲಿ, ಸುರಕ್ಷಿತ ಸಾರಿಗೆ ವ್ಯವಸ್ಥೆ ಇರಲಿ, ಕಾನೂನಿನ ಭಯವಿರಲಿ ಎಂದು ಇಂದಿನ ಮಹಿಳೆಯರು ಆಗ್ರಹಿಸುತ್ತಿದ್ದಾರೆ. ಅವರ ಈ ದಿಟ್ಟ ಧ್ವನಿಯನ್ನು ಸರ್ಕಾರಗಳು ಮತ್ತು ಆಡಳಿತ ಮಂಡಳಿಗಳು ಕಡ್ಡಾಯವಾಗಿ ಆಲಿಸಲೇಬೇಕು. ಕಾಲೇಜು ಗೇಟು ಮುಚ್ಚಿದ ತಕ್ಷಣ ಹೆಣ್ಣಿನ ಸುರಕ್ಷತೆ ಕೊನೆಯಾಗಬಾರದು. ರಾತ್ರಿ 10 ಗಂಟೆಗೆ ಹಾಸ್ಟೆಲ್‌ನಿಂದ ಹೊರಬಂದು ಕಾಫಿ ಕುಡಿದು, ಸ್ನೇಹಿತರನ್ನು ಭೇಟಿಯಾಗಿ, ಯಾವುದೇ ಗಂಡಸಿನ ಕಾವಲಿಲ್ಲದೆ, ಯಾರ ಬಳಿಯೂ ಸಬೂಬು ಹೇಳದೆ ಸ್ವತಂತ್ರವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವ ಹಕ್ಕು ಪ್ರತಿ ಹೆಣ್ಣಿಗೂ ಇದೆ.

ಚುನಾವಣೆಯಲ್ಲಿ ಗೆಲ್ಲಲು ಹೆಣ್ಣಿನ ಅಸ್ಮಿತೆಯನ್ನು ಬಳಸಿಕೊಳ್ಳುವವರು, ಆಕೆ ನರಕಯಾತನೆ ಅನುಭವಿಸುತ್ತಿರುವಾಗ ಮೌನ ಮುರಿಯದಿದ್ದರೆ ಆ ಗದ್ದುಗೆ ಶಾಶ್ವತವಲ್ಲ. ಹೆಣ್ಣಿನ ಉಡುಗೆ-ತೊಡುಗೆಯ ಮೇಲೆ, ನಡವಳಿಕೆಯ ಮೇಲೆ ಅನಗತ್ಯವಾಗಿ ಸಂಸ್ಕೃತಿಯ ಪಾಠ ಮಾಡುವವರಿಗೆ, ಹೆಣ್ಣುಮಕ್ಕಳ ಮಾನ-ಪ್ರಾಣ ಕಾಯುವಲ್ಲಿ ಸೋತಿರುವ ವ್ಯವಸ್ಥೆಗೆ ಮೊದಲು ಸಾಂಸ್ಕೃತಿಕ ಹಾಗೂ ನೈತಿಕ ಆಘಾತವಾಗಲಿ. ಇನ್ನು ಮುಂದೆಯಾದರೂ ಆಡಳಿತದ ಚುಕ್ಕಾಣಿ ಹಿಡಿದವರು ಎಚ್ಚೆತ್ತುಕೊಳ್ಳದಿದ್ದರೆ, ಬೀದಿಗಿಳಿದು ಭುಗಿಲೇಳುವ ಜನತೆಯ ಆಕ್ರೋಶದ ಬಿರುಗಾಳಿಗೆ ಈ ಲಜ್ಜೆಗೆಟ್ಟ ವ್ಯವಸ್ಥೆ ಧೂಳೀಪಟವಾಗುವುದು ನಿಶ್ಚಿತ!

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ವಾರ್ಡ್ ಮಟ್ಟದ ಸಮಿತಿ ರಚನೆ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ವಿಜಯಪುರ ಜಿಲ್ಲೆಯಲ್ಲಿ ಮುಂದುವರಿದಿದ್ದು, ಅರ್ಹ...

ಚುನಾವಣಾ ಆಯೋಗದ ವಿರುದ್ಧ ‘ಇಂಡಿಯಾ’ ಒಗ್ಗಟ್ಟು ಪ್ರದರ್ಶನ: ‘ಪ್ರಜಾಪ್ರಭುತ್ವ ಉಳಿಸಿ’ ಹೋರಾಟ ಘೋಷಣೆ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆ ಮತ್ತು ಚುನಾವಣಾ...

ವಿಜಯಪುರ | ಸ್ಮಶಾನಕ್ಕೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ

ವಿಜಯಪುರ ನಗರದ ಬೊಂಬಳ ಆಗಸಿ ಪ್ರದೇಶದಲ್ಲಿರುವ ಚಲವಾದಿ ಸಮಾಜದ ಸ್ಮಶಾನಕ್ಕೆ ಅಗತ್ಯ...

ಕಾರವಾರ | ಫ್ಲೈ ಓವರ್ ಕೆಳಗಿನ ಸರ್ಕಾರಿ ಜಾಗದಲ್ಲಿ ಅನಧಿಕೃತ ನರ್ಸರಿ

ಉತ್ತರ ಕನ್ನಡ ಜಿಲ್ಲೆ ಕಾರವಾರ ನಗರದ ಹೆದ್ದಾರಿ ಫ್ಲೈ ಓವರ್ ಕೆಳಭಾಗದ...