ಗೊತ್ತಿರಲಿ, ಬೋಫೋರ್ಸ್ ಹಗರಣದಲ್ಲಿ ಯಾರಿಗೂ ಶಿಕ್ಷೆಯಾಗಲಿಲ್ಲ. 2ಜಿ ಹಗರಣದಲ್ಲಿ ಖುಲಾಸೆಗೊಂಡು ಕನಿಮೋಳಿ ಮತ್ತು ರಾಜಾ ತಮ್ಮ ಸಂಸದೀಯ ವೃತ್ತಿಜೀವನವನ್ನು ಮತ್ತೆ ಪ್ರಾರಂಭಿಸಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ಕೆಳ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ಉನ್ನತ ನ್ಯಾಯಾಲಯ ರದ್ದುಗೊಳಿಸಿದೆ. ಜೈಲಿನಲ್ಲಿ ವಯಸ್ಸಾದ ಕೆಲವು ಸರ್ಕಾರಿ ಅಧಿಕಾರಿಗಳನ್ನು ಕೂಡ ಖುಲಾಸೆಗೊಳಿಸಲಾಯಿತು. ಮಾಲೆಗಾಂವ್ ಬಾಂಬ್ ಸ್ಫೋಟದ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ
ಇವತ್ತು ದೇಶದ ಉದ್ದಗಲ ಬಹು ದೊಡ್ಡ ಕೂಗೊಂದು ಕೇಳಿಬರುತ್ತಿದೆ. “ದೇಶ ಬದಲಾಗುತ್ತಿದೆ” ಎಂಬ ಮಾತು ಮಾರ್ದನಿಸುತ್ತಿದೆ. ರಸ್ತೆ ಅಭಿವೃದ್ದಿಪಡಿಸಲಾಗಿದೆ, ಬಡವರ, ಕೊಳಗೇರಿ ವಾಸಿಗಳ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ, ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ಪ್ರಾರಂಭಿಸಲಾಗಿದ, ನೂತನ ಅಣೆಕಟ್ಟುಗಳನ್ನು ಪೂರ್ಣಗೊಳಿಸಲಾಗಿದೆ, ದೇಶದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕನಿಷ್ಠ 500 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗಳನ್ನು, ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಕನಿಷ್ಠ 1 ಸಾವಿರ ವಿದ್ಯಾರ್ಥಿಗಳು ತಂಗಲುಬೇಕಾದ ವಿದ್ಯಾರ್ಥಿನಿಲಯಗಳನ್ನು ತೆರೆಯಲಾಗಿದೆ. ಹೀಗಾಗಿ ದೇಶದ ಆರ್ಥಿಕತೆ ಬೆಳೆದಿದೆ. ಕೋಟ್ಯಾಂತರ ಜನರು ಬಡತನದ ರೇಖೆಯಿಂದ ಹೊರಬಂದಿದ್ದಾರೆ. ಹಾಗಾದರೆ ಇನ್ನೇನು ಎಂಬ ಪ್ರಶ್ನೆ ತಮ್ಮಲ್ಲಿ ಮೂಡಬಹುದು. ಇವೆಲ್ಲವನ್ನೂ ಯಾರಾದರೂ ಕಂಡಿರುವರೇ ಎಂದರೆ, ಬಹುಶಃ ಯಾರೂ ಕೂಡ ಕಂಡಿಲ್ಲ ಎಂಬ ಅಚ್ಚರಿಯ ಉತ್ತರವೂ ಬರಬಹುದು. ಇದರ ಮಧ್ಯೆ ಮತ್ತಷ್ಟು ಪ್ರಶ್ನೆಗಳು ನನ್ನನ್ನು ಕಾಡುತ್ತಿದೆ.
ಅದು ರಾಹುರಿ ಮತ್ತು ಬಾರಾಮತಿ ಉಪಚುನಾವಣೆ. ಅಲ್ಲಿ ಮತದಾನಕ್ಕೆ ಒಂದು ದಿನಕ್ಕೂ ಮುನ್ನ ಪ್ರಜಕ್ತ ತನ್ಪುರೆ ಮತ್ತು ರೋಹಿತ್ ಪವಾರ್ ಅವರಿಗೆ ಜಾರಿದಳದ ವತಿಯಿಂದ ಕ್ಲೀನ್ ಚಿಟ್’ ದೊರಕಿದೆ. ಅಂದರೆ ಇವರನ್ನು ನಿರಪರಾಧಿ ಎಂದು ಘೋಷಿಸಲಾಗಿದೆ. ಇರಲಿ ಇತ್ತೀಚೆಗಷ್ಟೇ, ಹರಿಯಾಣದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. ಇದಕ್ಕೂ ಮೊದಲಿಗೆ ಶಿವಸೇನಾ ನಾಯಕ ಸಂಜಯ್ ರಾವತ್ ವಿರುದ್ಧದ ಪ್ರಕರಣಗಳನ್ನು ಕೂಡ ಕೈಬಿಡಲಾಗಿತ್ತು. ಹಾಗೆಯೇ ಪ್ರಕರಣ ಒಂದರಲ್ಲಿ ಅಪರಾಧ ಹೆಚ್ಚು ಅರ್ಥಪೂರ್ಣವಾಗಿಲ್ಲ ಎಂದು ಅನಿಲ್ ದೇಶಮುಖ್ ಅವರಿಗೆ ಜಾಮೀನು ಕೊಡಲಾಯಿತು. ಇಷ್ಟಲ್ಲದೆ, ಮಾಲೆಗಾಂವ್ ಬಾಂಬ್ ಸ್ಫೋಟದ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ. ಉತ್ತರ ಪ್ರದೇಶದ ಕುಲದೀಪ್ ಸೆಂಗಾರ್ ಸಹ ಇದೇ ಬಗೆಯಲ್ಲಿ ತಪ್ಪಿಸಿಕೊಳ್ಳಲಿದ್ದರು. ಸಾರ್ವಜನಿಕ ಅಭಿಪ್ರಾಯಕ್ಕೆ ಹೆದರಿದ್ದರಿಂದ ಅವರು ಮತ್ತೆ ಸಿಕ್ಕಿಬಿದ್ದರು.
ಹಾಗಿದ್ದರೆ ಮಾಲೆಗಾಂವ್ ಸ್ಫೋಟವನ್ನು ಮಾಡಿದವರು ಯಾರು? ಪತ್ರಾಚಾಲಿ ಪ್ರಕರಣ ಸಿವಿಲ್ ಅಥವಾ ಕ್ರಿಮಿನಲ್ ಸ್ವರೂಪದ್ದೇ? ದೇಶಮುಖ್ 100 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಡದಿದ್ದರೆ ಪ್ರಕರಣ ಹೇಗೆ ದಾಖಲಾಗುತ್ತಿತ್ತು? ಬೋಫೋರ್ಸ್, ಕಲ್ಲಿದ್ದಲು ಹಗರಣ ನಡೆದಿದೆ ಎಂದು ಕೂಗಾಡಿದ್ದ ಆಗಿನ ವಿರೋಧ ಪಕ್ಷವು ಆಡಳಿತ ಪಕ್ಷದ ವಿರುದ್ಧ ಎತ್ತಿದ್ದ ಪ್ರಶ್ನೆಗಳೇನು? ಬಹುತೇಕ ಇವೇ ಹಗರಣಗಳನ್ನು ಮುಂದಿಟ್ಟುಕೊಂಡು ಎರಡು-ಮೂರು ಮಧ್ಯಂತರ ಚುನಾವಣೆಗಳು ನಡೆದಿವೆ. ಹೀಗಾಗಿಯೇ ಅಂದು ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷ ಧೂಳೀಪಟಗೊಂಡಿದ್ದನ್ನು ಮರೆಯುವಂತಿಲ್ಲ. ಬಹುಶಃ ಇದರಿಂದ ಸುಲಭವಾಗಿ ಭಾಜಪ ಅಧಿಕಾರಕ್ಕೆ ಬರಲು ದಾರಿ ಆಯಿತು. ನಂತರದ ವರ್ಷಗಳಲ್ಲಿ ಇವೆಲ್ಲಾ ಹಗರಣಗಳು ಏನಾದವು?
ಗೊತ್ತಿರಲಿ, ಬೋಫೋರ್ಸ್‍ನಲ್ಲಿ ಯಾರಿಗೂ ಶಿಕ್ಷೆಯಾಗಲಿಲ್ಲ. 2ಜಿ ಹಗರಣದಲ್ಲಿ ಖುಲಾಸೆಗೊಂಡು ಕನಿಮೋಳಿ ಮತ್ತು ರಾಜಾ ತಮ್ಮ ಸಂಸದೀಯ ವೃತ್ತಿಜೀವನವನ್ನು ಮತ್ತೆ ಪ್ರಾರಂಭಿಸಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ಕೆಳ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ಉನ್ನತ ನ್ಯಾಯಾಲಯ ರದ್ದುಗೊಳಿಸಿದೆ. ಜೈಲಿನಲ್ಲಿ ವಯಸ್ಸಾದ ಕೆಲವು ಸರ್ಕಾರಿ ಅಧಿಕಾರಿಗಳನ್ನು ಕೂಡ ಖುಲಾಸೆಗೊಳಿಸಲಾಯಿತು.
ಆದರಿದು ಅಧಿಕಾರದ ಹೊಸ, ವಿಶಾಲವಾದ ಹೆದ್ದಾರಿಯನ್ನು ಭಾಜಪಗೆ ಸೃಷ್ಟಿಸಿಕೊಟ್ಟಿದೆ. ಇದಕ್ಕೆ ನವ-ನೈತಿಕ ಮತ್ತು ಆಯ್ದ ನೈತಿಕ ಮಧ್ಯಮ ವರ್ಗದ ಬೆಂಬಲ ದೊರಕಿ ಬಿಟ್ಟಿದೆ. ಆಗ ಆಡಳಿತಗಾರರನ್ನು ದೂಷಿಸಬೇಕಾಗಿತ್ತು. ಅಲ್ಲದೆ, ನವ-ನೈತಿಕವಾದಿಗಳನ್ನು ಬೆಂಬಲಿಸಬೇಕಾಗಿತ್ತು. ಇವರ ಸಹಾಯದಿಂದಲೇ ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕಾಯಿತು. ಇವರು ಅಧಿಕಾರಕ್ಕೆ ಬಂದ ನಂತರ, ಅವರಿಂದಲೇ ರಾಜಕೀಯ ಚದುರಂಗದಾಟ ಆಡಿಸಿದ್ದಾರೆ. ಇಂತಹದ್ದೇ ಆಟ ಕಳೆದ 12 ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ.
ಇದು ಎಷ್ಟರ ಮಟ್ಟಿಗೆ ಆಗಿದೆ ಎಂದರೆ, ಸಾಮಾನ್ಯ ಜನರಿಂದ ಹಿಡಿದು ಅಧಿಕಾರ ವರ್ಗದವರು ಕೂಡ ತಮ್ಮ ಚಿಂತನೆಯ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ನಿಜಕ್ಕೂ ಇದೊಂದು ದೊಡ್ಡ ಬದಲಾವಣೆಯೇ ಸರಿ. ಪ್ರಶ್ನಿಸುವ, ವಿಮರ್ಶಿಸುವ ಅಭ್ಯಾಸವನ್ನು ಕೈಬಿಟ್ಟಿದ್ದಾರೆ. ದೇಶದ ಎಲ್ಲೆಡೆ ಮುಗ್ಧತೆ ಕಣ್ಣಿಗೆ ಕಾಣಿಸುವಂತಾಗಿದೆ.
ದೇಶ ಬದಲಾಗುತ್ತಿದೆ ಎಂಬ ವ್ಯಾಖ್ಯಾನದ ಹಿಂದೆ ಬಹುಶಃ ಇದೇ ಅಡಗಿರಬಹುದು. ಇತ್ತೀಚಿನ ದಿನಗಳಲ್ಲಿ ಯಾರ ಮೇಲಾದರೂ ಆರೋಪ ಕೇಳಿ ಬಂದಾಗ ಮತ್ತು ಜಾರಿದಳದಂತಹ ಏಜೆನ್ಸಿಗಳು ದಾಳಿ ನಡೆಸಿದಾಗ ಸಹಜವಾಗಿ ಒಬ್ಬರು ವಿರೋಧಿಸಿದರೆ, ನಾಲ್ಕು ಜನ ಬೆಂಬಲಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಯುದ್ಧ ಭರದಿಂದ ಸಾಗುತ್ತಿದೆ. ಕೆಲವು ಅತೃಪ್ತ ಸಾಮಾನ್ಯ ಜನರು ಆರೋಪಿಗಳನ್ನು ಶಪಿಸುವ ಮೂಲಕ ಮನಸ್ಸಿನ ಶಾಂತಿಯನ್ನು ಬಯಸುತ್ತಿದ್ದಾರೆ. ಇದನ್ನು ನಿಷ್ಪಕ್ಷಪಾತ ಮನೋಭಾವದಿಂದ ಕಾಣುವ ವರ್ಗ ಕೂಡ ರಾಜಕೀಯ ಅನುರಣನವನ್ನು ಕಂಡುಕೊಂಡು ಮೌನ ವಹಿಸುತ್ತಿದೆ. ಇದೇ ಆಪಾದಿತರು ಖುಲಾಸೆಗೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಇದೇ ಆಯ್ದ ನೈತಿಕವಾದಿ ವರ್ಗವು ಉದಾರವಾಗಿ ತಮ್ಮ ಉದ್ದೇಶ ಸಾಧನೆಗಾಗಿ ಮತ ನೀಡುತ್ತಿದೆ.
ರಾಜಕೀಯ ದ್ವೇಷದಿಂದ ಉಂಟಾಗುವ ಇಂತಹ ಘಟನೆಗಳನ್ನು ಅನಿವಾರ್ಯ ಎನ್ನುತ್ತೇವೆ. ಜೊತೆಗೆ ಬಹುಪಾಲು ಜನರು ಇದನ್ನು ತಪ್ಪು ಎಂದು ಭಾವಿಸುವುದಿಲ್ಲವೆಂಬ ತೀರ್ಮಾನಕ್ಕೂ ಬಂದು ಬಿಟ್ಟಿರುತ್ತೇವೆ. ಹೀಗಾಗಿಯೇ ದೇಶದಲ್ಲಿಂದು ಅಮಾಯಕರ ಸಂಖ್ಯೆ ಅಗಾಧವಾಗಿ ಏರುತ್ತಿದೆ.

ಇದನ್ನೇಕೆ ಹೇಳುತ್ತಿರುವೆನೆಂದರೆ, ದೇಶದ ಉದ್ದಗಲ ಸಂಚಲನ ಮೂಡಿಸಿದ್ದ ಸೊಹ್ರಾಬುದ್ದೀನ್ ಶೇಖ್ ಎನ್‍ಕೌಂಟರ್ ಪ್ರಕರಣ ಕುರಿತು ಬಾಂಬೆ ಹೈಕೋರ್ಟ್ ತೀರ್ಪು ಹೊರಡಿಸಿತ್ತು. ಇದು ಹಲವರಲ್ಲಿ ಅಚ್ಚರಿ ಮತ್ತು ಆತಂಕದ ಗೆರೆಗಳನ್ನು ಮೂಡಿಸಿದೆ. ಹಾಗಂತ ಸೊಹ್ರಾಬುದ್ದೀನ್ ಪರೋಪಕಾರಿಯಲ್ಲ. ಬದಲಿಗೆ ಗುಜರಾತ್‍ನ ಕುಖ್ಯಾತ ದರೋಡೆಕೋರ.
ಇದನ್ನು ಪ್ರಸ್ತಾಪಿಸಲು ಕಾರಣ, ಇವನನ್ನು ನಕಲಿ ಎನ್‍ಕೌಂಟರ್ ಮಾಡಿದ ಪ್ರಕರಣದಲ್ಲಿ ಭಾಗಿಯಾದ 22 ಜನರನ್ನು ಖುಲಾಸೆಗೊಳಿಸಿದ್ದನ್ನು ಬಾಂಬೆ ಹೈಕೋರ್ಟ್ ಇದೀಗ ಎತ್ತಿಹಿಡಿದಿದೆ. ಸೊಹ್ರಾಬುದ್ದೀನ್ ಸಹೋದರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ಪ್ರಕರಣ ಸಂಪೂರ್ಣವಾಗಿ ಅಂತ್ಯಗೊಂಡಿದೆ. 2005ರಲ್ಲಿ ನಡೆದ ಎನ್ ಕೌಂಟರ್ ಪ್ರಕರಣದಲ್ಲಿ ಅಂದಿನ ಗೃಹ ಸಚಿವರು ಕೂಡ ಒರ್ವ ಶಂಕಿತ ಆರೋಪಿಯಾಗಿದ್ದರು. ವಿಚಿತ್ರ ಎಂದರೆ, ವಿಚಾರಣೆಗೂ ಮುನ್ನವೇ ಸೆಷನ್ಸ್ ನ್ಯಾಯಾಲಯ ಇವರನ್ನು ಖುಲಾಸೆಗೊಳಿಸಿತ್ತು. ಹಾಗಾದರೆ, ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ನಡೆದಿದ್ದೇನು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇದಾಗಿದೆ.
ನಮ್ಮಲ್ಲಿ ಪತ್ತೇದಾರಿ ಪುಸ್ತಕ ಓದುವವರೆಲ್ಲರಿಗೂ ಒಂದು ಹತ್ಯೆ, ಒಂದು ಸಾವಿಗೆ ಅಂತ್ಯವಾಗುವುದಿಲ್ಲ ಎಂಬುದು ತಿಳಿದಿರುತ್ತದೆ. ಹೌದು, ಸಾಮಾನ್ಯವಾಗಿ ಒಂದು ಅಪರಾಧದ ಹಿಂದೆ ಸರಣಿ ಅಪರಾಧವೂ ಜರಗಿರುತ್ತದೆ. ಹೌದು ಇತ್ತೀಚಗಷ್ಟೇ ಎನ್ ಕೌಂಟರ್ ಪ್ರಕರಣದಲ್ಲಿ ಭಾಗಿಯಾದ 22 ಜನರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಹಿಂದೊಮ್ಮೆ ಸುಪ್ರೀಂಕೋರ್ಟ್ ಜಸ್ಟೀಸ್ ಬಿ. ಎಚ್. ಲೋಯಾ ಸಾವಿನ ಪ್ರಕರಣ ದೇಶದ ಉದ್ದಗಲ ಸಂಚಲನ ಮೂಡಿಸಿತ್ತು. ಜಸ್ಟೀಸ್ ಲೋಯಾ ಸಾವು ಅನುಮಾನಾಸ್ಪದವಾಗಿದೆ. ಹೀಗಾಗಿ, ಸ್ವತಂತ್ರ ತನಿಖೆ ಆಗಬೇಕೆಂದು ಹಲವರು ಪಟ್ಟು ಹಿಡಿದಿದ್ದರು. ಮಹಾರಾಷ್ಟ್ರ ಸರ್ಕಾರ ಸ್ವತಂತ್ರ ತನಿಖೆಯ ಅವಶ್ಯಕತೆ ಇಲ್ಲ, ಕಾರಣ ಜಸ್ಟೀಸ್ ಲೋಯಾ ಹೃದಯ ಸ್ತಂಭದಿಂದ ಮೃತಪಟ್ಟಿದ್ದಾರೆಂದು ಹೇಳಿತ್ತು. ಒಂಬತ್ತು ವರ್ಷಗಳ ಹಿಂದೆ ನಾಗಪುರದಲ್ಲಿ ಮರಣಿಸಿದ ಜಸ್ಟೀಸ್ ಲೋಯಾ ಅವರ ಸಾವು ಸಹಜವೋ, ಅಸಹಜವೋ ಎಂಬುದು ಯಾರಿಗೂ ಗೊತ್ತಿಲ್ಲ. ಆದರೂ ಇದರ ಬಗ್ಗೆ ಮುಂದೊಮ್ಮೆ ವಿವರವಾಗಿ ವಿಶ್ಲೇಷಿಸುವೆ.
ಸದ್ಯ ಸಾರ್ವಜನಿಕವಾಗಿ ಇಲ್ಲಿಯವರೆಗೂ ನಡೆದ ಘಟನಾವಳಿಯನ್ನು ಒಗ್ಗೂಡಿಸಿ ಕಂಡಾಗ ನಡೆದಿರುವ ಸಾವುಗಳು ಏಕಾಕಿಯಾಗಿ ನಡೆದಿದೆ ಎಂದು ಒಂದೇ ಗುಕ್ಕಿನಲ್ಲಿ ಹೇಳುವುದು ಕಷ್ಟಕರವಾಗುತ್ತಿದೆ. ಇದೇನೆ ಇರಲಿ, ಸರಣಿ ಸಾವುಗಳ ಹಿಂದೆ ಭಯಾನಕ ರಕ್ತ ಸಿಕ್ತ ಘಟನಾವಳಿಗಳು ರಿಂಗಣಿಸುತ್ತಿವೆ. ಬಹುಶಃ ಜಸ್ಟೀಸ್ ಲೋಯಾ ಬದುಕಿದ್ದರೆ ಸೊಹ್ರಾಬುದ್ದೀನ್ ಸೇರಿದಂತೆ ಅವರ ಕುಟುಂಬಸ್ಥರ ಸಾವುಗಳ ಹಿಂದಿನ ರಹಸ್ಯ ಹೊರ ಬರಬಹುದಿತ್ತು.
ಸಿಬಿಐ ಪ್ರಕಾರ, ಸೊಹ್ರಾಬುದ್ದೀನ್ ಶೇಖ್ ಅವರ ಪತ್ನಿ ಕೌಸರ್ ಬಿ ಮತ್ತು ಸಹಚರ ತುಳಸಿರಾಮ್ ಪ್ರಜಾಪತಿ ಅವರನ್ನು 2005 ನವೆಂಬರ್ 23ರಂದು ಹೈದರಾಬಾದ್‍ನಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಹೋಗುವ ಮಾರ್ಗದಲ್ಲಿ ಐಷಾರಾಮಿ ಬಸ್‍ನಿಂದ ಅಪಹರಿಸಲಾಗಿತ್ತು. ಅಪಹರಿಸಿ ದಂಪತಿಯನ್ನು ಗುಜರಾತ್‍ನ ತೋಟದ ಮನೆಯೊಳಗೆ ಅಕ್ರಮವಾಗಿ ಬಂಧಿಸಿಟ್ಟರು. ಕೌತುಕ ಎಂದರೆ, ತುಳಸಿರಾಮ್ ಪ್ರಜಾಪತಿಯನ್ನು ಮೂರು ದಿನಗಳ ನಂತರ ರಾಜಸ್ಥಾನದ ಭಿಲ್ವಾರಾದ ಮನೆಯಿಂದ ಬಂಧಿಸಲಾಯಿತೆಂಬಂತೆ ತೋರಿಸಲಾಗಿದೆ. ಅಘಾತಕಾರಿ ವಿಚಾರ ಎಂದರೆ, ಗುಜರಾತ್ ಮತ್ತು ರಾಜಸ್ಥಾನದ ಹಿರಿಯ ಪೊಲೀಸ್ ಅಧಿಕಾರಿಗಳು ಸೊಹ್ರಾಬುದ್ದೀನ್ ನನ್ನು ಕೊಲ್ಲಲು ಕ್ರಿಮಿನಲ್ ಪಿತೂರಿ ರೂಪಿಸಿದ್ದರಂತೆ. ಇದಕ್ಕಾಗಿಯೇ ಪ್ರಜಾಪತಿಯನ್ನು ತಂಡದೊಳಗಡೆ ಸೇರಿಸಲಾಗಿತ್ತು. ರಾಜಕೀಯ ಒತ್ತಡದಿಂದ ಸೊಹ್ರಾಬುದ್ದೀನ್ ನನ್ನು ಬಂಧಿಸಬೇಕಾಗುತ್ತದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕಾಗುತ್ತದೆ ಎಂಬುದನ್ನು ಪ್ರಜಾಪತಿಗೆ ತಿಳಿಸಲಾಗಿತ್ತಂತೆ.
ಇದರಂತೆ, ಸೊಹ್ರಾಬುದ್ದೀನ್ ಶೇಖ್ ನನ್ನು 2005 ನವೆಂಬರ್ 26ರಂದು ಅಹಮದಾಬಾದ್‍ನಲ್ಲಿ ನಕಲಿ ಎನ್‍ಕೌಂಟರ್ ನಡೆಸಿ ಕೊಲ್ಲಲಾಗಿದೆ. ಅದೇ ಮಾಸದಲ್ಲಿ ಕೌಸರ್ ಬಿ ಅವರನ್ನು ಸಹ ಕೊಲ್ಲಲಾಗಿದೆ. ಇವರ ಶವವನ್ನು ನವೆಂಬರ್ 29 ರಂದು ವಿಲೇವಾರಿ ಮಾಡಲಾಗಿದೆ. ಒಂದು ವರ್ಷದ ನಂತರ, ಗುಜರಾತ್‍ನಲ್ಲಿ ನಡೆದ ಮತ್ತೊಂದು ಎನ್‍ಕೌಂಟರ್‍ನಲ್ಲಿ ತುಳಸಿರಾಮ್ ಪ್ರಜಾಪತಿಯನ್ನು ಸಹ ಕೊಲ್ಲಲಾಯಿತೆಂದು ಸಿಬಿಐ ಹೇಳಿಕೊಂಡಿದೆ.
ಸೊಹ್ರಾಬುದ್ದೀನ್ ಶೇಖ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ರಾಜಕೀಯ ನಾಯಕನನ್ನು ಕೊಲ್ಲುವ ಉದ್ದೇಶದಿಂದ ಅಹಮದಾಬಾದ್‍ಗೆ ಬಂದಿದ್ದನೆಂಬ ವಾದ ಪೊಲೀಸರದಾಗಿತ್ತು. ಜೊತೆಗೆ, ಪೊಲೀಸರ ಮೇಲೆ ಗುಂಡು ಹಾರಿಸಿದ್ದರಿಂದ ಎನ್ ಕೌಂಟರ್ ಮಾಡಲಾಯಿತೆಂಬುದು ಪೊಲೀಸರ ಸಬೂಬಾಗಿದೆ. 2000ರಿಂದಲೂ ಗುಜರಾತ್‍ನಲ್ಲಿ ಇದೇ ಬಗೆಯಲ್ಲಿ ಎನ್ ಕೌಂಟರ್‌ಗಳು ನಡೆಯುತ್ತಿವೆ. ಇರಲಿ, ಸೊಹ್ರಾಬುದ್ದೀನ್ ಸಹೋದರ ರುಬಾಬುದ್ದೀನ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ತನ್ನ ಸಹೋದರನ ಹತ್ಯೆ ಮತ್ತವನ ಪತ್ನಿ ಕೌಸರ್ ಬಿ ಅನುಮಾನಾಸ್ಪದವಾಗಿ ಕಾಣೆಯಾಗಿರುವ ಬಗ್ಗೆ ತನಿಖೆ ಮಾಡಲು ಆಗ್ರಹಿಸಿದ್ದ. ಆಗ ಸುಪ್ರೀಂ ಕೋರ್ಟ್ ಗುಜರಾತ್ ಪೊಲೀಸರಿಗೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲು ಸೂಚಿಸಿತ್ತು.
ಪೊಲೀಸರು ಹೇಳುವಂತೆ, ಸೊಹ್ರಾಬುದ್ದೀನ್ ಭಯೋತ್ಪಾದಕನಲ್ಲ. ಆದರೆ ಅಪರಾಧಿಕ ಚಟುವಟಿಕೆಯಲ್ಲಿ ಭಾಗಿಯಾಗಿರುವ ಭಾಗಸ್ಥ. ರಾಜಸ್ಥಾನದಲ್ಲಿ ದರೋಡೆ ಲೂಟಿ ಎಸಗುವ ಗ್ಯಾಂಗಿನ ಸದಸ್ಯ. ಮೊದಲಿಗೆ ಇವನ ಗ್ಯಾಂಗ್ ನ್ನು ಗುಜರಾತಿನ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪೋಷಣೆ ಮಾಡುತ್ತಿದ್ದರು. ದಿನ ಕಳೆದಂತೆ ಸೊಹ್ರಾಬುದ್ದೀನ್ ಅವರ ನಿಯಂತ್ರಣ ತಪ್ಪಿ ಭಸ್ಮಾಸುರನಾಗಿ ಹೋದ. ಆಗ ನಿಯಂತ್ರಿಸಲಾಗದ ಪೊಲೀಸರು ಇವನನ್ನು ಕೊಲ್ಲಲು ಸಂಚೊಂದನ್ನು ರೂಪಿಸಿದರು. ಬಹುಶ: ಇದಕ್ಕೆ ಎನ್ ಕೌಂಟರ್ ಎಂಬ ಹೆಸರಿಟ್ಟಿರಬಹುದು .
ಇನ್ನು, ಪ್ರಕರಣದ ವಿಚಾರಣೆಯ ಹೊತ್ತಲ್ಲಿ ಸೆಷನ್ಸ್ ನ್ಯಾಯಾಲಯವು ಎರಡೂ ಕಡೆಯ ವಾದಗಳನ್ನು ಆಲಿಸಿತು. 2014 ಮತ್ತು 2018 ರ ನಡುವೆ, ನ್ಯಾಯಾಲಯವು ಕೊಲೆ ಪ್ರಕರಣದ 38 ಆರೋಪಿಗಳಲ್ಲಿ 16 ಜನರನ್ನು ಖುಲಾಸೆಗೊಳಿಸಿತು. ಇವರುಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿರಿಯ ಐಪಿಎಸ್ ಅಧಿಕಾರಿಗಳಾದ ದಿನೇಶ್, ಎಂ.ಎನ್. ರಾಜ್‍ಕುಮಾರ್ ಪಾಂಡಿಯನ್, ಡಿ.ಜಿ. ವಂಜಾರಾ ಮತ್ತು ರಾಜಸ್ಥಾನದ ಮಾಜಿ ಗೃಹ ಸಚಿವ ಗುಲಾಬ್‍ಚಂದ್ ಕಟಾರಿಯಾ ಸೇರಿದ್ದಾರೆ.
ನಂತರವಷ್ಟೆ, ವಿಶೇಷ ಸಿಬಿಐ ನ್ಯಾಯಾಲಯವು ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶದ 21 ಪೊಲೀಸರು ಸೇರಿದಂತೆ ಪ್ರಕರಣದ ಎಲ್ಲಾ 22 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿತು. ಸೊಹ್ರಾಬುದ್ದೀನ್ ಸಹೋದರರು ತೀರ್ಪಿನ ವಿರುದ್ಧ ನೇರವಾಗಿ ಸುಪ್ರೀಂ ಕೋರ್ಟ್‍ನ್ನು ಸಂಪರ್ಕಿಸಿದ್ದರು. ಮೊದಲಿಗೆ, ಪ್ರಕರಣದ ತನಿಖೆಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಸಿಐಡಿ ನಡೆಸುತ್ತಿತ್ತು. ಇದರ ಮಧ್ಯೆ, ಸುಪ್ರೀಂ ಕೋರ್ಟ್ 2010ರಲ್ಲಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತು.
ಇದರ ಮಧ್ಯೆ ಕಳಂಕ ಹೊತ್ತು ಅಧಿಕಾರ ಕಳೆದುಕೊಂಡ ಬಳಿಕ, ಪುನರ್ ಸ್ಥಾಪನೆಗೊಂಡ ಮೊದಲ ಸಿ ಬಿ ಐ ಮುಖ್ಯಸ್ಥ ಎಂಬ ಖ್ಯಾತಿಗೆ ಅಲೋಕ್ ವರ್ಮ ಅವರು ಒಳಗಾಗಿದ್ದರು. ಇವರು ಅಧಿಕಾರಕ್ಕೆ ಮರಳಿದ ಕೆಲ ದಿನಗಳಲ್ಲಿಯೇ ಸಿಬಿಐ ನ ವಿಶೇಷ ನ್ಯಾಯಾಲಯ ಸೊಹ್ರಾಬುದ್ದೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಆಪಾದಿತರನ್ನು ದೋಷ ಮುಕ್ತಗೊಳಿಸಿತ್ತು. 2005ರ ನವಂಬರ್ 26ರಂದು ಭೂಗತ ಪಾತಕಿ ಸೊಹ್ರಾಬುದ್ದೀನ್ ಮತ್ತು ಆತನ ಹೆಂಡತಿ ಕೌಸರ್ ಬಿಯನ್ನು ಕೊಲೆಗೈದ ಆರೋಪದಡಿ ಬಂಧಿಸಲಾಗಿತ್ತು. ಸಿಬಿಐ ಮುಖ್ಯಸ್ಥರಾಗಿ ಮರಳಿದ ತಕ್ಷಣವೇ ಅಲೋಕ್ ವರ್ಮ ಅವರು, ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಂತಿಲ್ಲ ಎಂಬ ಕಟ್ಟೆಚ್ಚರವನ್ನು ಸುಪ್ರೀಂ ಕೋರ್ಟ್ ನೀಡಿತ್ತು. ಆದರೂ, ಇವರು ಕಟ್ಟೆಚರ ಉಲ್ಲಂಘಿಸಿ ತನ್ನ ವಿಧೇಯ ಅಧಿಕಾರಿಗಳ ವರ್ಗಾವಣೆಯನ್ನು ರದ್ದುಪಡಿಸಿದ್ದರು. ಇದೇ ಹೊತ್ತಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ಕಲಾಪಗಳನ್ನು ಪ್ರಸಾರ ಮಾಡಬಾರದೆಂದು ಸಿಬಿಐನ ವಿಶೇಷ ನ್ಯಾಯಧೀಶ ಎಸ್. ಜೆ. ಶರ್ಮಾ ನೀಡಿದ್ದ ನಿರ್ದೇಶನವನ್ನು ಮುಂಬೈ ಹೈಕೋರ್ಟ್ ರದ್ದುಗೊಳಿಸಿತ್ತು.
ಇಲ್ಲಿ ಪ್ರಕರಣವನ್ನು ಸಿಬಿಗೆ ವರ್ಗಾಯಿಸಿ ಎಂದು ಸೊಹ್ರಬುದ್ದೀನ್ ಸೋದರ ರುಬಾಬುದ್ದೀನ್ ಶೇಕ್ ಮತ್ತು ಪ್ರಜಾಪತಿಯ ತಾಯಿ ಕೋರಿದ್ದರೇ ಹೊರತು ಇದರಲ್ಲಿ ಕಾಂಗ್ರೆಸ್‍ನ ಹಸ್ತಕ್ಷೇಪ ಗೋಚರಿಸಿರಲಿಲ್ಲ. ಸಿಬಿಐ ಮುಖ್ಯಸ್ಥರ ವರ್ಗಾವಣೆಯಂತೆ ನ್ಯಾಯಮೂರ್ತಿ ಶರ್ಮ ಅವರ ತೀರ್ಪು ಸಹ ಸ್ವಯಂ ವೈರುಧ್ಯದಿಂದ ಕೂಡಿತ್ತು. ಆಪಾದಿತರನ್ನು ಖುಲಾಸೆಗೊಳಿಸಲು ಇವರ ಮುಖ್ಯ ಸಿದ್ದಾಂತವೆಂದರೆ, ಹತ್ಯೆ ಕುರಿತಂತೆ ಆಪಾದಿತನ ಸಂಬಂಧದ ಬಗ್ಗೆ ಯಾವುದೇ ಆಧಾರವಿಲ್ಲ. ಆದರೆ ಇವರ ಅಭಿಪ್ರಾಯದಲ್ಲಿಯೇ ವಿರೋಧಾಭಾಸವಿದೆ. 22 ಜನ ಕಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನಷ್ಟೇ ಮಾಡಿದ್ದಾರೆ. ಇವರನ್ನು ವಿಚಾರಣೆಯೇ ಇಲ್ಲದೆ ದೋಷ ಮುಕ್ತರನ್ನಾಗಿಸಬೇಕೆಂಬ ಅಭಿಪ್ರಾಯ ಇವರದ್ದಾಗಿರಬಹುದೆಂಬುದು ವರದಿಯಾಗಿತ್ತು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದಾಗ 22 ಜನ ಕೂಡ ಸೊಹ್ರಾಬುದ್ದೀನ್‍ನ ಹತ್ಯೆಯಲ್ಲಿ ತೊಡಗಿರಬಹುದೆಂಬ ಅನುಮಾನ ಮೂಡದಿರದು. ಇಲ್ಲಿ 700ಕ್ಕೂ ಹೆಚ್ಚು ಸಾಕ್ಷಿಗಳಲ್ಲಿ ಕೇವಲ 210 ಜನರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ 92 ಜನರನ್ನು ಪ್ರತಿಕೂಲ ಎಂದು ಘೋಷಿಸಲಾಗಿತ್ತು. ಡಿ ಜಿ ವಂಜಾರಾ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದರು. ಇವರನ್ನು ಬಂಧಿಸಿದ ಪ್ರಾಥಮಿಕ ತನಿಖಾಧಿಕಾರಿ ಹಾಗೂ ಗುಜರಾತಿನ ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಜೆ. ಸಿ. ರೈಗರ್ ಅವರ ಸಾಕ್ಷ್ಯ ಅತಿ ಮುಖ್ಯವಾಗಿತ್ತು.
ಇಲ್ಲಿ ವಿಚಿತ್ರ ಎಂದರೆ 2014ರಲ್ಲಿ ನ್ಯಾಯಾಧೀಶ ಜೆ.ಟಿ. ಉತ್ಪತ್ ಅವರನ್ನು ಪುಣೆಗೆ ವರ್ಗಾಯಿಸಲಾಯಿತು. ಎರಡನೇ ನ್ಯಾಯಮೂರ್ತಿ ಅನೂಪ್ ಲೋಯಾ ಅವರು ನಿಗೂಢವಾಗಿ ನಿಧನರಾಗಿದ್ದರು. ಈ ಸಂಬಂಧ 2014 ಡಿಸೆಂಬರ್ 1 ರಂದು ಸುಪ್ರೀಂಕೋರ್ಟಿನಲ್ಲಿ ಪಿಐಎಲ್ ಕೂಡ ದಾಖಲಾಯಿತು. ಇದನ್ನು ನ್ಯಾಯಮೂರ್ತಿ ಭೂಷಣ್ ಗವಾಯಿ ಮತ್ತು ಬಾಂಬೆ ಹೈಕೋರ್ಟ್‍ನ ಸುನಿಲ್ ಶುಕ್ರೆ ಅವರು ನಂಬಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ವಜಾಗೊಳಿಸಿದರು. ಆದರಿದನ್ನು ಪ್ರಾಮಾಣಿಕವಾಗಿ ಪರಿಶೀಲನೆ ಮಾಡಿರಲಿಲ್ಲ. ನ್ಯಾಯಮೂರ್ತಿ ಎಸ್. ಜೆ. ಶರ್ಮ ಬದಲಾಗಿ ಅಧಿಕಾರ ಸ್ವೀಕರಿಸಿದ ನ್ಯಾಯಾಧೀಶ ಎಂ. ಬಿ. ಗೋಸಾವಿ ಅವರು ಪ್ರಮುಖರಾಗಿದ್ದವರೊಬ್ಬರನ್ನು ಖುಲಾಸೆಗೊಳಿಸಿದರು. ಇದಕ್ಕೂ ಮುನ್ನವೇ ಇವರನ್ನು ಬಿಡುಗಡೆ ಮಾಡಿ ಎಂದು ಬಾಂಬೆ ಹೈಕೋರ್ಟಿನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ಒತ್ತಡ ಹೇರಿದ್ದರೆಂಬ ಆರೋಪ ಜಸ್ಟೀಸ್ ಲೋಯಾ ಅವರ ಕುಟುಂಬ ವರ್ಗದಿಂದ ಬಂದಿತ್ತು.
ಇದಕ್ಕೂ ಮುನ್ನ 2018ರಲ್ಲಿ ವಿಶೇಷ ನ್ಯಾಯಾಲಯದ ತೀರ್ಪು ಸೊಹ್ರಾಬುದ್ದೀನ್ ಶೇಖ್ ಕುಖ್ಯಾತ ಅಪರಾಧಿ ಎಂಬುದನ್ನು ಹೇಳಿತ್ತು. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಸೊಹ್ರಾಬುದ್ದೀನ್ ವಿರುದ್ಧ ಕೊಲೆ, ಸುಲಿಗೆ ಮತ್ತು ಅಪಹರಣದಂತಹ ಹಲವಾರು ಪ್ರಕರಣಗಳು ದಾಖಲಾಗಿವೆ ಎಂಬುದನ್ನು ನ್ಯಾಯಾಲಯ ಗಮನಿಸಿತ್ತು. ನ್ಯಾಯಾಲಯ ತನ್ನ 358 ಪುಟಗಳ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಜೆ. ಶರ್ಮಾ ತನಿಖಾ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಅತ್ಯಂತ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಸಾಲದಕ್ಕೆ ಸಿಬಿಐ ಮಂಡಿಸಿದ್ದ ಸಾಕ್ಷ್ಯಗಳು ಕಟ್ಟುಕಥೆ ಎಂದೇಳುವ ಮೂಲಕ ಎಲ್ಲಾ ಆರೋಪಿಗಳನ್ನು ಸಹ ಖುಲಾಸೆಗೊಳಿಸಿದ್ದರು. ಸತ್ಯವನ್ನು ಕಂಡುಹಿಡಿಯುವ ಬದಲು, ಪ್ರಕರಣದಲ್ಲಿ ರಾಜಕೀಯ ನಾಯಕರನ್ನು ಸಿಲುಕಿಸಲು ಕಥಾವಸ್ತುವನ್ನು ಸಿದ್ಧಪಡಿಸಿದೆ. ಇದಕ್ಕಾಗಿ, ತರಾತುರಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸುವಾಗ, ಅದು ಹಿಂದಿನ ತನಿಖಾ ದಾಖಲೆಗಳ ಪ್ರತಿಗಳನ್ನು ಬಳಸಿಕೊಂಡಿದೆ. ಪಿತೂರಿಯ ಬಗ್ಗೆ ತಿಳಿದಿಲ್ಲದ ಮುಗ್ಧ ಪೊಲೀಸ್ ಅಧಿಕಾರಿಗಳು ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಕಾನೂನಿನ ಪ್ರಕಾರ ನ್ಯಾಯಯುತ ತನಿಖೆ ನಡೆಸುವ ಬದಲು, ಸಿಬಿಐ ತನ್ನ ಉದ್ದೇಶವನ್ನು ಸಾಧಿಸಲು ಅಗತ್ಯವೆಂದು ಭಾವಿಸಿದ್ದನ್ನು ಮಾಡಿದೆ ಎಂದು ನ್ಯಾಯಮೂರ್ತಿ ಶರ್ಮಾ ಆರೋಪಿಸಿದ್ದರು.
ಹೀಗೆ ಒಂದು ಕೊಲೆ ಹಲವು ಕೊಲೆಗಳಿಗೆ ಕಾರಣವಾಗಿದೆ. 2005 ನವಂಬರ್ 29ರ ಸಿಬಿಐ ಚಾರ್ಜ್ ಶೀಟ್ ಹೇಳುವಂತೆ ಶ್ರೀಮತಿ ಕೌಸರ್ ಬಿ ಸೊಹ್ರಾಬುದ್ದೀನ್ ಎನ್ ಕೌಂಟರ್‌ಗೆ ಪ್ರತ್ಯಕ್ಷ ಸಾಕ್ಷಿ. ಸೊಹ್ರಾಬುದ್ದೀನ್ ಅಪಹರಣ ಈಕೆಯ ಕಣ್ಣೆದುರಲ್ಲಿಯೇ ನಡೆದಿದೆ. ಹೀಗಾಗಿ ಕೌಸರ್ ಬಿ ಅಪಾಯಕಾರಿ ಸಾಕ್ಷಿ. ಇದನ್ನು ಅಳಿಸಿ ಹಾಕಲು ಅವಳನ್ನು ಕೊಂದು ಆಕೆಯ ದೇಹವನ್ನು ಇಳೋಲ್ ಗ್ರಾಮದಲ್ಲಿ ದಹನ ಮಾಡಲಾಯಿತಂತೆ. ಮತ್ತೊಂದು ಸಾಕ್ಷಿ ತುಳಸಿ ರಾಮ್ ಪ್ರಜಾಪತಿ. ಆತನಿಗಾಗಲೇ ಮುಂದಿನ ಸರದಿ ತನ್ನದೆಂಬ ಹೆದರಿಕೆ ಇತ್ತು. ಭಯಭೀತನಾಗಿದ್ದ ತುಳಸಿರಾಮ್ ತನ್ನ ಭಯವನ್ನು ತನ್ನ ಸಹಚರ ಕೈದಿಗಳೊಂದಿಗೆ ತೋಡಿಕೊಂಡಿದ್ದನು. ಜೊತೆಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ರಕ್ಷಣೆ ನೀಡುವಂತೆಯೂ ಕೋರಿಕೊಂಡಿದ್ದನು. ಪಾಪ ಇವನ ಹೆದರಿಕೆ ಹುಸಿಯಾಗಲಿಲ್ಲ. ರಾಜಸ್ಥಾನದ ಉದಯಪುರದಿಂದ ಅಹ್ಮದಾಬಾದ್‍ಗೆ 2006 ಡಿಸೆಂಬರ್ ನಲ್ಲಿ ಕರೆತಂದು 28ರಂದು ಗುಜರಾತ್-ರಾಜಸ್ಥಾನ್ ಗಡಿಯಲ್ಲಿ ಕೊಂದು ಹಾಕಲಾಗಿತ್ತು. ಹೀಗೆ ಜಸ್ಟೀಸ್ ಲೋಯಾ ಮರಣದ ಹಿಂದೆ 3 ಭಯಾನಕ ಹತ್ಯೆಯ ಕಥೆ ಅಡಗಿದೆ. ಇಷ್ಟಕ್ಕೂ ಗುಜರಾತ್ ಪೆÇಲೀಸ್ ಮತ್ತು ಸಿಬಿಐ ಚಾರ್ಜ್‍ಶೀಟ್ ಪ್ರಕಾರ ಸೊಹ್ರಾಬುದ್ದೀನ್ ಗ್ಯಾಂಗ್ ಗುಜರಾತಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಅಣತಿಯಂತೆ ಕಾರ್ಯ ನಿರ್ವಹಿಸಿರುವ ಅನುಮಾನವೂ ಇದೆ.
ದಿನಗಳು ಉರುಳಿದಂತೆ, ಜಸ್ಟೀಸ್ ಲೋಯಾ ಪುತ್ರ ಮಾತು ಬದಲಿಸಿ LEFT ALONE ಎಂದು ಸಾರ್ವಜನಿಕವಾಗಿ ವಿನಂತಿಸಿಕೊಂಡಿದ್ದರು. ಇದೇನಾದರೂ ಆಗಿರಲಿ ನ್ಯಾಯಮೂರ್ತಿ ಶರ್ಮ ತಮ್ಮ ತೀರ್ಪು ನೀಡಲು ಎರಡು ಬಾರಿ ವಿಸ್ತರಣೆ ಪಡೆದುಕೊಂಡಿದ್ದರು. 2010ರಲ್ಲಿ ಸಿಬಿಐ ಗುಜರಾತಿನ ಸಿಐಡಿಯಿಂದ ಪ್ರಕರಣವನ್ನು ವಶಪಡಿಸಿಕೊಂಡಿತ್ತು. ಪ್ರಕರಣದಲ್ಲಿ 38 ಜನರನ್ನು ಹೆಸರಿಸಲಾಗಿತ್ತಾದರೂ, 16 ಜನರನ್ನು ಬಿಡುಗಡೆ ಮಾಡಲಾಗಿತ್ತು. 22 ಕಿರಿಯ ಪೊಲೀಸ್ ಅಧಿಕಾರಿಗಳನ್ನು ಮಾತ್ರ ಪ್ರಕರಣ ಎದುರಿಸಲು ಬಿಡಲಾಗಿತ್ತು. ಉಳಿದಂತೆ 2014 ರಿಂದ 2017ರ ನಡುವೆ ಗುಜರಾತಿನ ಗೃಹ ಸಚಿವರಾಗಿದ್ದ ಅಮಿತ್ ಶಾ, ರಾಜಸ್ಥಾನ ಗೃಹಸಚಿವರಾಗಿದ್ದ ಗುಲಾಬ್ ಚಂದ್ ಕಟಾರಿಯಾ, ಪೊಲೀಸ್ ಮಹಾ ನಿರ್ದೇಶಕ ಡಿ.ಜಿ ವಂಜಾರಾ ಸೇರಿದಂತೆ ಕೆಲವು ಐಪಿಎಸ್ ಅಧಿಕಾರಿಗಳನ್ನು ಆರೋಪ ಮುಕ್ತಗೊಳಿಸಲಾಯಿತು.
ಹೀಗೆ ಪ್ರಕರಣದ ವಿಚಾರಣೆಯನ್ನು ಮೊದಲಿಗೆ ನ್ಯಾಯಮೂರ್ತಿ ಜೆ. ಟಿ. ಉತ್ಪತ್, ಜಸ್ಟಿಸ್ ಲೋಯಾ ಅವರ ಮರಣದ ನಂತರ ನ್ಯಾಯಮೂರ್ತಿ ಎಂ. ಬಿ. ಗೋಸಾವಿ ಅವರ ಹೆಗಲಿಗೆ, ನಂತರ ಜಸ್ಟೀಸ್ ಎಸ್. ಜೆ. ಶರ್ಮ ಅವರ ಮಡಲಿಗೆ ಬಿತ್ತು. ಆಗವರು ಸಿಬಿಐ ಪೂರ್ವ ಯೋಚಿತವಾಗಿ ಕಥೆ ಹಣೆದಿದೆ. ರಾಜಕೀಯ ನಾಯಕರನ್ನು ಸಿಲುಕಿಸಲು ಉದ್ದೇಶಿಸಲಾದ ಸ್ಕ್ರಿಪ್ಟ್ ಇದಾಗಿದೆ ಎಂದು ಸಿಬಿಐಯನ್ನು ದೂಷಿಸಿ ಪ್ರಮುಖರೊಬ್ಬರಿಗೆ ಕ್ಲೀನ್ ಚಿಟ್ ಕೊಟ್ಟಿದ್ದರು. ಅಲ್ಲದೆ ಆರೋಪಿ ಸಂಖ್ಯೆ 16ರ ಅರ್ಜಿಯಲ್ಲಿ ಬಿಡುಗಡೆ ಆದೇಶವನ್ನು ನೀಡುವಾಗ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎಂದು ದಾಖಲಿಸಿದ್ದರು.
ಜೊತೆಗೆ ನನ್ನ ಮುಂದಿರುವ ಸಂಪೂರ್ಣ ದಾಖಲೆ ಮತ್ತು ಸಾಕ್ಷಿಗಳನ್ನು ಪರಿಶೀಲಿಸಿದ ನಂತರ ಸಿಬಿಐ ರಾಜಕೀಯ ನಾಯಕರನ್ನು ಹೇಗಾದರೂ ಮಾಡಿ ಸುಲುಕಿಸಲು ಪೂರ್ವ ಯೋಚಿತ ಸಿದ್ದಾಂತ ಮತ್ತು ಸ್ಕ್ರಿಪ್ಟ್ ಹೊಂದಿತ್ತೆಂದು ದಾಖಲಿಸಲು ಯಾವುದೇ ಹಿಂಜರಿಕೆ ಇಲ್ಲವೆಂದಿದ್ದರು. ಇಲ್ಲಿ ಕಾನೂನಿನ ಪ್ರಕಾರ ತನಿಖೆ ನಡೆಸಬೇಕಿತ್ತು. ಅದರ ಬದಲು ಗುರಿಯನ್ನು ತಲುಪಲು ಅಗತ್ಯ ಇರುವುದನ್ನು ಮಾಡಿದೆ ಎಂಬ ಅಭಿಪ್ರಾಯ ಪಟ್ಟಿದ್ದರು. ಜೊತೆಗೆ, ಸೊಹ್ರಾಬುದ್ದೀನ್ ಮರಣ ಗುಂಡೇಟಿನಿಂದಾಗಿದೆ. ಇದನ್ನು ಮರಣೋತ್ತರ ಪರೀಕ್ಷೆಯು ಕೂಡ ದೃಪಡಿಸಿದೆ. ಆದರೆ ಕೃತ್ಯ ಸಂಬಂಧ ಪಟ್ಟವರಿಂದಲೇ ಆಗಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಇದಕ್ಕೆ ಸಂಬಂಧಿಸಿದ ಭಾರತೀಯ ಸಾಕ್ಷ್ಯಾ ಕಾಯ್ದೆಯ ಸೆಕ್ಷನ್ 106ರಂತೆ ಸೊಹ್ರಾಬುದ್ದೀನ್‍ನನ್ನು ಏಕೆ ಮತ್ತು ಹೇಗೆ ಕೊಲ್ಲಲಾಯಿತೆಂಬುದನ್ನು ಸಾಬೀತು ಪಡಿಸುವ ಜವಾಬ್ದಾರಿ ಆತ್ಮ ರಕ್ಷಣೆಗಾಗಿ ಅಥವಾ ಇತರೆ ಕಾರಣಕ್ಕೆ ಗುಂಡು ಹಾರಿಸಿದವರ ಮೇಲಿರುತ್ತದೆ ಎಂದು ನ್ಯಾಯಾಧೀಶ ಶರ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅಂದಿನ ದುರಾದೃಷ್ಟಕರ ರಾತ್ರಿಯಲ್ಲಿ ನಡೆದಿದ್ದೇನೆಂಬುದು ಕೇವಲ ಅವರಿಗೆ ಮಾತ್ರ ಗೊತ್ತಿದೆ. ಆದರೆ ತೀರ್ಪಿನೊಳಗಿನ 1 ರಿಂದ 243ರವರೆಗಿನ ಪ್ಯಾರಾದಲ್ಲಿ ನ್ಯಾಯಾಧೀಶ ಶರ್ಮ ದಾಖಲಿಸಿದ್ದಾರೆ. ಸೊಹ್ರಾಬುದ್ದೀನ್ ಹತ್ಯೆಗೂ ಹಾಗೂ 22 ಮಂದಿ ಆಪಾದಿತರಿಗೂ ಸಂಬಂಧ ಇರುವುದಕ್ಕೆ ಯಾವುದೇ ಆಧಾರವಿಲ್ಲ. ಆದರೆ ತೀರ್ಪಿನ 244ನೇ ಪ್ಯಾರಾದಿಂದ 249ನೇ ಪ್ಯಾರಾ ಸ್ವಯಂ ನ್ಯಾಯಾಧೀಶರೇ ವಿರೋಧಾಭಾಸದಲ್ಲಿ ಸಿಲುಕಿದಂತೆ ಕಾಣುತ್ತದೆ.
ಇಲ್ಲಿ ಆಪಾದಿತನ ವಿಚಾರಣೆ ಕೈಗೊಳ್ಳಲು ಉಪಬಂಧವಿರುವ ಕಾನೂನನ್ನು ತುಂಡು ತುಂಡಾಗಿಸಲಾಗಿದೆ. ಪ್ಯಾರಾಗ್ರಾಫ್ 260ರಲ್ಲಿ ಸ್ವಯಂ ಇವರೇ ವಿರೋಧಾಭಾಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಇಲ್ಲಿಯವರೆಗೆ ನಡೆದ ವಾದ ವಿವಾದಗಳನ್ನು ಕಂಡಾಗ ಹತ್ಯೆಯ ಆರೋಪ ಹೊತ್ತ ಎಲ್ಲಾ 22 ಜನರು ಪೊಲೀಸರಾಗಿದ್ದಾರೆ. ಇಲ್ಲವರು ತಮ್ಮ ಕರ್ತವ್ಯ ನಿರ್ವಹಣೆಯಷ್ಟೇ ಮಾಡಿದ್ದಾರೆ. ಹೀಗಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್ ನ 197ರನ್ವಯ ಇವರು ನಿರ್ದೋಷಿತ್ವಕ್ಕೆ ಪಾತ್ರರಾಗಿದ್ದಾರೆ ಎಂಬ ತೀರ್ಪು ನೀಡಿದ್ದರು.
ಗೊತ್ತಿರಲಿ, ಸೊಹ್ರಾಬುದ್ದೀನ್, ಪ್ರಜಾಪತಿಯಂತೆ ಜಸ್ಟೀಸ್ ಲೋಯಾ ಅವರು ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಲ್ಲ. ಜೊತೆಗೆ ಗುಜರಾತಿಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಇವರು ಮುಂಬೈನಲ್ಲಿ ಸಿಬಿಐನ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಹುಸಿ ಎನ್ ಕೌಂಟರ್ ಪ್ರಕರಣದ ವಿಚಾರಣೆಗೆ ನೇಮಕಗೊಂಡಿದ್ದರು. ವಿಚಾರಣೆಗೆ ಹೊಸ ತಿರುವು ದೊರಕಿದ್ದು 2014ರಲ್ಲಿ ಮಾತ್ರ. ಜೆ. ಟಿ. ಉತ್ಪತ್ ಅವರು, ಅಂದಿನ ಸಚಿವರೂಬ್ಬರ ಪ್ರಕರಣದ ಮೊದಲ ನ್ಯಾಯಾಧೀಶರಾಗಿದ್ದರು. ಇವರು 2014ರ ಜೂನ್ 6 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಾಕೀತನ್ನು ಮಾಡಿದ್ದರು. ಹಾಜರಾಗದಿದ್ದಲ್ಲಿ ನ್ಯಾಯಾಲಯದ ಶಕ್ತಿಯನ್ನು ಜೂನ್ 26ರಂದು ತೋರಿಸುವೆನೆಂದು ನೇರವಾಗಿ ಎಚ್ಚರಿಸಿದ್ದರು. ಆದರೆ ಜೂನ್ 25ರಂದೇ ಜಸ್ಟೀಸ್ ಉತ್ಪತ್ತ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆಗ ಸುಪ್ರೀಂಕೋರ್ಟ್ ಮಧ್ಯಪ್ರವೇಶಸಿ ಅದೇ ನ್ಯಾಯಾಧೀಶರು ವಿಚಾರಣೆಯ ಆರಂಭದಿಂದ ಅಂತ್ಯದವರೆಗೂ ಇರಲಿದ್ದಾರೆಂಬ ಭರವಸೆ ಕೊಟ್ಟಿತ್ತಾದರೂ, ತದನಂತರ ಲೋಯಾ ಅವರನ್ನು ಜಡ್ಜ್ ಆಗಿ ನೇಮಕಗೊಳಿಸಲಾಯಿತು. ವಿಚಾರಣೆಯ ಹೊತ್ತಲ್ಲಿ 2014 ಅಕ್ಟೋಬರ್ 31ರಂದು, ಡಿಸೆಂಬರ್ 15ರ ವಿಚಾರಣೆಗೆ ಹಾಜರಾಗುವಂತೆ ಸಚಿವರಾಗಿದ್ದವರ ಸಮಾಲೋಚಕರಿಗೆ ತಾಕೀತು ಮಾಡಿದ್ದರು.
ಇದರ ಮಧ್ಯೆ ಜಸ್ಟೀಸ್ ಲೋಯಾ ಅವರು ನವಂಬರ್ 30 ರಿಂದ ಡಿಸೆಂಬರ್ 31ರವರೆಗೆ ಮದುವೆಯೊಂದರಲ್ಲಿ ಭಾಗವಹಿಸುವುದಕ್ಕಾಗಿ ನಾಗಪುರಕ್ಕೆ ತೆರಳಿದಾಗ ಹೃದಯ ಸ್ಥಂಬನದಿಂದ ಜೀವಟಿಟ್ಟರು. ಇನ್ನೂ ವಿಚಾರಣೆ ಮಾಡಿದ ಮೂರನೇ ನ್ಯಾಯಾಧೀಶ ಎಂ. ಬಿ. ಗೋಸವಿ ಸಚಿವರಾಗಿದ್ದವರನ್ನು ಪ್ರಕರಣದಿಂದ ಖುಲಾಸೆಗೊಳಿಸಿಬಿಟ್ಟರು.

ಮೊದಲಿಗೆ ಜಸ್ಟೀಸ್ ಲೋಯಾ ಸಾವಿನ ಪ್ರಕರಣ ಮುಚ್ಚಿ ಹೋಗಿತ್ತು. ಆದರೆ ಲೋಯಾ ಅವರ ತಂದೆ ಹಾಗೂ ಸೋದರಿ ಹೃದಯ ಸ್ಥಂಬನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿತ್ತು. ಇದರ ಬಗ್ಗೆ 2018ರ ಜನವರಿ 31 ರಂದು ಕಾಂಗ್ರೆಸ್ ಪಕ್ಷ ಪತ್ರಿಕಾಗೋಷ್ಠಿಯೊಂದರಲ್ಲಿ ನಾಗಪುರ ಮೂಲದ ಮಾನವಹಕ್ಕು ಕಾರ್ಯಕರ್ತ ಸತೀಷ್ ಉಕೆ ತೀಕ್ಷ್ಣ ಆಪಾದನೆ ಎಸಗಿದ್ದರು. ಇದಿಷ್ಟೇ ಅಲ್ಲದೆ, ಲೋಯಾ ಅವರ ಇಬ್ಬರು ಮಿತ್ರರಾದ ವಕೀಲ ಶ್ರೀಕಾಂತ್ ಕಂಧಾಲ್ಕರ್ ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಪ್ರಕಾಶ್ ತೊಂಬ್ರೆ ಲೋಯಾ ಪರವಾಗಿ ಸತೀಶ್ ಉಕೆಯನ್ನು 2014ರಲ್ಲಿ ಭೇಟಿ ಮಾಡಿದ್ದರು. ಆಗ ಜಸ್ಟೀಸ್ ಲೋಯಾ ಎನ್ ಕೌಂಟರ್ ಪ್ರಕರಣದಲ್ಲಿ ತೀವ್ರ ಒತ್ತಡಕ್ಕೆ ಒಳಗಾಗಿರುವರೆಂದು ಹೇಳಿಕೊಂಡಿದ್ದರು. ಸತೀಶ್ ಉಕೆ ಹೇಳುವಂತೆ, ಪ್ರಕಾಶ್ ತೊಂಬ್ರೆ ಹಾಗೂ ಶ್ರೀಕಾಂತ್ ಕಂಧಾಲ್ಕರ್ ನಡುವೆ ವಿಡಿಯೋ ಕಾನ್ಫರೆನ್ಸ್ ಕೂಡ ನಡೆದಿತ್ತು. ಅದರಲ್ಲಿ ಡ್ರಾಫ್ಟ್ ಮಾಡಿರುವ ತೀರ್ಪು ಬಂದಿದೆ. ಅದಕ್ಕೆ ಸಹಿ ಹಾಕಲು ಸೂಚಿಸಲಾಗಿತ್ತು. ನಾನದಕ್ಕೆ ನಿರಾಕರಿಸಿದೆ ಎಂದು ಲೋಯಾ ಹೇಳಿಕೊಂಡಿದ್ದಾರೆ. ಲೋಯಾ ಅವರ ಮೃತ್ಯುವಿನ ನಂತರ ಇದನ್ನು ಅಪ್ರಸ್ತುತ ಎಂದು ತಳ್ಳಿ ಹಾಕಿ ಬಿಡಬಹುದಿತ್ತು.
ದುರಂತ ಎಂದರೆ, 29ರಂದು ಶ್ರೀಕಾಂತ್ ಕಂಧಾಲ್ಕರ್ ದೇಹ ನಾಗಪುರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಂಡುಬಂದಿದೆ. ಇನ್ನೂ ದುರಂತ ಎಂದರೆ, ಆರು ತಿಂಗಳ ನಂತರ ಪ್ರಕಾಶ್ ತೊಂಬ್ರೆ ಸಹ ರೈಲಿನ ಮೇಲಿನಿಂದ ಉರುಳಿ ಬಿದ್ದು ಜೀವ ಬಿಟ್ಟಿದ್ದಾರೆ. ಇದರ ನಡುವೆ ಕಬ್ಬಿಣದ ಸರಳುಗಳ ದೊಡ್ಡ ಲೋಡು ಸತೀಶ್ ಉಕೆ ಕಚೇರಿಗೂ ಅಪ್ಪಳಿಸಿದೆ. ಅದೃಷ್ಟವಶಾತ್ ಸತೀಷ್ ಉಕೆ ಕೂದಲೆಳೆಯ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದಲ್ಲದೆ, ಸಾಕ್ಷಿಗಳ ವಿಚಾರಕ್ಕೆ ಬಂದರೆ, ಇದ್ದ 49 ಸಾಕ್ಷಿಗಳಲ್ಲಿ 33 ಜನ ಉಲ್ಟಾ ಹೊಡೆದಿದ್ದಾರೆ. 15 ಜನ ಪ್ರಮುಖ ಸಾಕ್ಷಿಗಳು ಅಂದಿನ ಗೃಹಸಚಿವರೊಂದಿಗೆ ಬಿಡುಗಡೆ ಹೊಂದಿದ್ದಾರೆ. ಇಡೀ ಪ್ರಕರಣವನ್ನು ಬಾಂಬೆ ಹೈಕೋರ್ಟ್ ನ್ಯಾಯಾಧೀಶ ಎ.ಎಂ. ತಿಪ್ಸೆ ಅವರು ಹಾಸ್ಯಾಸ್ಪದ, ಅನಿಶ್ಚಿತತೆ ಎಂದು ಪೇಲವವಾಗಿ ಬಣ್ಣಿಸಿದ್ದಾರೆ.
ಇನ್ನೂ ಬಾಂಬೆ ಹೈಕೋರ್ಟ್‍ನಲ್ಲಿ ನಡೆದ ವಿಚಾರಣೆಯಲ್ಲಿ ಎರಡೂ ಕಡೆಯವರು ನಿಖರವಾದ ವಾದಗಳನ್ನು ಮಂಡಿಸಿದ್ದಾರೆ. ಇದಕ್ಕೂ ಮುನ್ನ ವಿಶೇಷ ನ್ಯಾಯಾಲಯವು ಸೆಕ್ಷನ್ 197ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಇಲ್ಲ ಎಂಬ ಕಾರಣಕ್ಕೆ ಆರೋಪಿಗಳಿಗೆ ನಿರಾಳತೆಯನ್ನು ನೀಡಿದೆ. ಆದರೂ, ಇಂತಹ ಅಪರಾಧಗಳಿಗೆ ಯಾವುದೇ ವಿಶೇಷ ಅನುಮತಿ ಅಗತ್ಯವಿಲ್ಲ ಎಂದು ಅರ್ಜಿದಾರರ ವಕೀಲರು ವಾದಿಸಿದ್ದರು. ತುಳಸಿರಾಮ್ ಪ್ರಜಾಪತಿ ಅವರೊಂದಿಗೆ ಜೈಲಿನಲ್ಲಿದ್ದ ಸಹೋದ್ಯೋಗಿಗಳ ಸಾಕ್ಷ್ಯವನ್ನು ವಿಶೇಷ ನ್ಯಾಯಾಲಯ ನಿರ್ಲಕ್ಷಿಸಿದನ್ನು ಗಮನಿಸಬಹುದು. ತುಳಸಿರಾಮ್ ತನ್ನ ಸಹೋದ್ಯೋಗಿಗಳಿಂದ ತನ್ನ ಜೀವಕ್ಕೆ ಅಪಾಯವಿದೆ ಎಂಬ ಭೀತಿ ವ್ಯಕ್ತಪಡಿಸಿದ್ದಂತಹ ಸಾಕ್ಷ್ಯಗಳು ಸ್ವೀಕಾರಾರ್ಹವಾಗಿದ್ದವು. ಹೀಗಾಗಿ ವಿಶೇಷ ನ್ಯಾಯಾಲಯವು ಸಾಕ್ಷ್ಯಗಳನ್ನು ತಪ್ಪಾಗಿ ನಿರೂಪಿಸಿದೆ. ಜೊತೆಗೆ ಸಾಕ್ಷ್ಯಗಳ ಆಧಾರದ ಮೇಲೆ ಕೊಟ್ಟಿರುವ ತೀರ್ಪು ಸಮರ್ಥನೀಯವಲ್ಲ ಎಂದು ಅರ್ಜಿದಾರರ ವಕೀಲರು ವಾದಿಸಿದ್ದರು. ಮತ್ತೊಂದೆಡೆ, ಖುಲಾಸೆಗೊಂಡ 22 ಆರೋಪಿಗಳ ವಕೀಲರು ಈ ಅರ್ಜಿಯನ್ನು ವಜಾಗೊಳಿಸಬೇಕೆಂದು ಕೋರಿದ್ದರು. ವಿಶೇಷ ನ್ಯಾಯಾಲಯವು ಎಲ್ಲಾ ಸಾಕ್ಷಿಗಳು ಮತ್ತು ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ತನ್ನ ತೀರ್ಪು ಕೊಟ್ಟಿದೆ. ಹೀಗಾಗಿ ಇಂತಹ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಘನ ಕಾರಣವಿಲ್ಲ ಎಂದವರು ನ್ಯಾಯಾಲಯದ ಗಮನ ಸೆಳೆದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಮುಂಬೈ ಹೈಕೋರ್ಟ್ ಪ್ರಕರಣದಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸುವ ನಿರ್ಧಾರವನ್ನು ಎತ್ತಿಹಿಡಿದಿದೆ.
ಹೀಗೆ ಪ್ರಕರಣದ ಆಳಕ್ಕೆ ಇಳಿದು ಗಮನಿಸುತ್ತಿದ್ದಾಗ, ದೇಶದಲ್ಲಿ ಬದಲಾವಣೆಯನ್ನು ತರುತ್ತೇವೆ ಎಂಬ ಘೋಷಣೆ ಮತ್ತೆ ಮತ್ತೆ ಕೇಳಿ ಬಂತು. ಜೊತೆಗೆ ನೀವು ಒಳಗೆ ಬರುತ್ತೀರಾ ಅಥವಾ ಹೊರಗೆ ಹೋಗುತ್ತೀರಾ? ಎಂಬ ನೇರ ಪ್ರಶ್ನೆಯನ್ನು ಕೇಳುತ್ತಿರುವುದು ಕೂಡ ಕೇಳಿಸಿತು. ಬಹುತೇಕ ಇದರಿಂದಲೇ ಅನೇಕ ಜನ ಒಳಗೆ ಹೋಗುವುದಕ್ಕಿಂತ “ಅವರ” ಪಕ್ಷಕ್ಕೆ ಸೇರಲು ಇಷ್ಟಪಡುತ್ತಿದ್ದಾರೆ. ಅಲ್ಲವರು ಏನು ತಿಂದರೂ ಸುಲಭವಾಗಿ ಜೀರ್ಣಿಸಿಕೊಂಡು ನೆಮ್ಮದಿಯಾಗಿ ಮಲಗಬಹುದೆಂದು ಅರಿತಿದ್ದಾರೆ.
ನೀವು ಒಳಗೆ ಬರುತ್ತೀರಾ ಅಥವಾ ಹೊರಗೆ ಹೋಗುತ್ತೀರಾ ಎಂಬ ಪ್ರಶ್ನೆಯು ಎಷ್ಟು ಜನಪ್ರಿಯವಾಯಿತೆಂದರೆ ಅನೇಕ ಜನರಿಂದು ಮನೆಯಲ್ಲಿ ಪ್ರಯಾಣ ಚೀಲಗಳನ್ನು ಸಿದ್ಧಪಡಿಸಿಟ್ಟು ಕೊಂಡಿದ್ದಾರೆ. ಎರಡನೆಯ ವಿಚಾರ ಎಂದರೆ, ಈ ನ್ಯಾಯಾಲಯದಲ್ಲಿ ಹೋರಾಡಿದವರ ಬಗ್ಗೆ ಜನರಲ್ಲಿ ಸಹಾನುಭೂತಿಯ ಭಾವನೆಯೂ ಜಾಗೃತವಾಗಿದೆ. ಇಲ್ಲಿ ನಿಜಕ್ಕೂ ಭ್ರಷ್ಟಾಚಾರ ಎಸಗಿದವರಿದ್ದರೂ ಸಹಾನುಭೂತಿಗೆ ಅರ್ಹರಾಗುವ ಪರಿಪಾಠ ಬಂದು ಬಿಟ್ಟಿದೆ. ಇದರಿಂದ ಭ್ರಷ್ಟಾಚಾರ ಎಂಬ ಪದದ ಬಗ್ಗೆ ಸಾಮಾನ್ಯ ಜನರ ಮನಸ್ಸಿನಲ್ಲಿ ದ್ವೇಷ ಮತ್ತು ಕೋಪವು ತಣ್ಣಗಾಗಿದೆ.
ಇಲ್ಲಿ ಆಯ್ದ ನೈತಿಕವಾದಿಗಳು ಮತ್ತು ನವ-ನೈತಿಕವಾದಿಗಳು ಕೂಡಿ ಭಷ್ಠಾಚಾರಿಗಳನ್ನು ಪವಿತ್ರರೆಂದು ಭಾವಿಸತೊಡಗಿದರು. ಇವರೇ ದೇಶದ ಭವಿಷ್ಯವೆಂದು ಕೊಂಡಾಡಲು ಮುಂದಾಗಿದ್ದಾರೆ. ಇಂತಹ ವಾಷಿಂಗ್ ಮೆಷಿನ ನಲ್ಲಿ ಪವಿತ್ರ ಸ್ನಾನ ಮಾಡದೇ ಉಳಿದವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಸ್ಟಾಲಿನ್, ಪಿಣರಾಯಿ ವಿಜಯನ್, ಶರದ್ ಪವಾರ್ , ಅರವಿಂದ್ ಕೇಜ್ರಿವಾಲ್ ಮುಂತಾದವರು ಮಾತ್ರ.
ಒಂದೊಮ್ಮೆ ಇವರುಗಳು ವಾಷಿಂಗ್ ಮೆಷಿನ್ ನಲ್ಲಿ ಹಾಕಿಸಿಕೊಂಡರೆ ಭ್ರಷ್ಟಾಚಾರ ಎಂಬ ಪದವನ್ನು ನಿಘಂಟಿನಿಂದ ಶಾಶ್ವತವಾಗಿ ತೆಗೆದುಹಾಕಬಹುದು. ಇದು ಸಂಭವಿಸುತ್ತದೆಯೋ ಇಲ್ಲವೋ ಎಂಬುದು ನನಗೂ ಗೊತ್ತಿಲ್ಲ. ಮುಂದೆ ಬರಲಿರುವ ಚುನಾವಣೆಯಲ್ಲಿ ಇದು ಸಂಭವಿಸಲೂಬಹುದು. ಕಾರಣ 2047ರಲ್ಲಿ ಭಾರತವು ಸೂಪರ್ ಪವರ್ ಆಗಬೇಕಿದೆ. ಇಂತಹ ವಿಶೇಷಣಕ್ಕೆ ಭಾಜನರಾಗಬೇಕಾದರೆ, ಅಭಿವೃದ್ಧಿ ಹೊಂದಿದ ದೇಶ ಇತ್ಯಾದಿ ಆಗಬೇಕಾದರೆ ಇದು ಕೂಡ ಸಾಧ್ಯವಾದಷ್ಟು ಬೇಗ ಆಗಬೇಕಿದೆ. ದೇಶದಲ್ಲಿ ಇಂತಹವೆಲ್ಲವೂ ಸಂಭವಿಸಿದಾಗ ನನ್ನಂತಹ ಸಾಮಾನ್ಯನಲ್ಲಿ ಒಂದು ಪ್ರಶ್ನೆ ಎಡೆಬಿಡದೆ ಉಳಿಯುತ್ತದೆ. ಅದು ಮುಗ್ಧರ ಗುಂಪನ್ನು ಮಾಡುವುದೇನು?
ಇವೆಲ್ಲದರ ಮಧ್ಯೆ, ಸೊಹ್ರಾಬುದ್ದೀನ್ ಅವರ ಸಹೋದರರಾದ ರುಬಾಬುದ್ದೀನ್ ಮತ್ತು ನಯಾಬುದ್ದೀನ್ ಅವರು ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಏಪ್ರಿಲ್ 2019 ರಲ್ಲಿ ಬಾಂಬೆ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ವಿಶೇಷ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಲಾಗಿದೆ. ಪ್ರಕರಣವನ್ನು ಮರುವಿಚಾರಣೆ ಮಾಡಲಾಗಿದೆ. 200 ಕ್ಕೂ ಹೆಚ್ಚು ಸಾಕ್ಷಿಗಳ ಸಾಕ್ಷ್ಯವನ್ನು ದಾಖಲಿಸಲಾಗಿದೆ. ಆದರೆ ಇವರಲ್ಲಿ 92 ಜನರು ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದಾರೆ. ಇದರ ಮಧ್ಯೆ, ತನಿಖಾ ಅಧಿಕಾರಿಗಳು ಸಾಕ್ಷಿಗಳ ವೀಡಿಯೊ ರೆಕಾರ್ಡಿಂಗ್‍ಗಳನ್ನು ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾದ ಹಲವರ ಹೇಳಿಕೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಆರೋಪಿಸಿದ್ದರು. 2019 ಜೂನ್ 24 ರಂದು, ಹೈಕೋರ್ಟ್ ಅರ್ಜಿಯನ್ನು ಸ್ವೀಕರಿಸಿ, ಖುಲಾಸೆಗೊಂಡ ವ್ಯಕ್ತಿಗಳೊಂದಿಗೆ ಸಿಬಿಐಗೂ ಸಹ ನೋಟಿಸ್ ಕೊಟ್ಟಿತ್ತು. ನಂತರ, ಆಗಸ್ಟ್ 2019ರಲ್ಲಿ, ಪ್ರಕರಣದ ಸಾಕ್ಷಿಯಾಗಿದ್ದ ಮಹೇಂದ್ರ ಸಿಂಗ್ ಝಾಲಾ ಕೂಡ ಆರೋಪಿಗಳ ಖುಲಾಸೆಯನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಿದ್ದರು. ಆಗ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿ, ಪ್ರಕರಣದಲ್ಲಿ ಝಾಲಾ ಬಲಿಪಶುವಲ್ಲ ಎಂಬ ಕಾರಣ ಕೊಟ್ಟಿತು. ಇದರ ನಡುವೆ, ಸೊಹ್ರಾಬುದ್ದೀನ್ ಅವರ ಸಹೋದರರು ಸಲ್ಲಿಸಿದ ಅರ್ಜಿಯನ್ನು ಅಕ್ಟೋಬರ್ 2019ರಿಂದ ವಿಚಾರಣೆ ನಡೆಸಿರಲಿಲ್ಲ. ಅಂತಿಮವಾಗಿ, ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ನೇತೃತ್ವದ ಪೀಠವು ಡಿಸೆಂಬರ್ 2025 ಮತ್ತು ಜನವರಿ 2026 ರ ನಡುವೆ ಅರ್ಜಿಯ ವಿಚಾರಣೆ ನಡೆಸಿತ್ತು.
ನನಗೆ ಈಗಲೂ ನಂಬಿಕೆ ಇದೆ. ಅದು “ಜೈಭೀಮ್” ಸಿನಿಮಾದಲ್ಲಿ ಬರುವ ಜಸ್ಟೀಸ್ ಚಂದ್ರು ಅವರಂತೆ, ಇಲ್ಲಿಯೂ ಬರಬಹುದು. ಅದು ನಮಗಾಗಿ ಅಲ್ಲ…. ದೇಶಕ್ಕಾಗಿ ಬರಬೇಕಿದೆ.

ಡಾ ಎಂ. ಎಸ್. ಮಣಿ
ಹಿರಿಯ ಪತ್ರಕರ್ತ, ಸಾಮಾಜಿಕ ವಿಶ್ಲೇಷಕ



