ಹವಾಮಾನ ಬದಲಾವಣೆಯು ಕೇವಲ ಕೃಷಿ ಅಥವಾ ಪರಿಸರದ ಸಮಸ್ಯೆಯಲ್ಲ. ಅದರ ಪರಿಣಾಮ ಒಂದು ವಾದ್ಯದ ಮೇಲಷ್ಟೇ ಅಲ್ಲ, ಶತಮಾನಗಳಿಂದ ರೂಪುಗೊಂಡಿರುವ ಸಂಗೀತ ಪರಂಪರೆಯ ಮೇಲೂ ಬೀಳುತ್ತಿದೆ. ತಂಬೂರಿಯ ನಾದ ಶುದ್ಧವಾಗಿ ಹೊರಹೊಮ್ಮಬೇಕಾದರೆ ನಾದಪೆಟ್ಟಿಗೆಯನ್ನು ರೂಪಿಸುವ ಸೋರೆಕಾಯಿಯೂ ಉಳಿಯಬೇಕು. ಅದಕ್ಕೆ ಹವಾಮಾನ ಸ್ಥಿರವಾಗಿರಬೇಕು. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮಿತಿಗೊಳಿಸುವುದು ಸಂಗೀತಗಾರರು, ಕಾರ್ಯಕ್ರಮ ಆಯೋಜಕರು, ಸರ್ಕಾರ ಮತ್ತು ಪ್ರೇಕ್ಷಕರು—ಎಲ್ಲರ ಜವಾಬ್ದಾರಿಯೂ ಹೌದು. ʻಗ್ರೀನ್ ಪ್ರೋಟೋಕಾಲ್ʼನ್ನು ಸ್ವಯಂ ಪ್ರೇರಿತವಾಗಿ ಅಳವಡಿಸಿಕೊಂಡಾಗ ಮಾತ್ರ ಭಾರತೀಯ ನಾದ ಪರಂಪರೆಯ ಆಧಾರ ಶೃತಿ ವಾದ್ಯಗಳು ಮುಂದಿನ ಪೀಳಿಗೆಗಳಲ್ಲಿಯೂ ಮಧುಮಧುರವಾಗಿ ಅನುರಣಿಸಬಲ್ಲುದು.
ಭಾರತೀಯ ನಾದ ಪರಂಪರೆಯ ಆತ್ಮ ಸ್ವರೂಪ, ಆಧಾರ ಶೃತಿಯೇ ತಂಬೂರಿ ಅಥವಾ ಹಿಂದೂಸ್ಥಾನಿ ಸಂಗೀತದ ತಾನ್ಪುರ. ಇದರ ಶೃತಿ ಸಂಗೀತದ ರಾಗ, ಭಾವ ಮತ್ತು ತಾಳಗಳನ್ನು ಬೆಸೆಯುತ್ತದೆ. ಹೆಚ್ಚಿನ ಕಲಾವಿದರು – ಮೊದಲು ಮೆಲುವಾಗಿ ತಂತಿಗಳನ್ನು ಮೀಟುತ್ತಾ, ತಂಬೂರದ ನಾದದಲ್ಲಿ ಮನಸ್ಸನ್ನು ನೆಲೆಗೊಳಿಸಿ ನಂತರ ರಾಗ ವಿಸ್ತಾರ, ಆಲಾಪನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ.
ಆದರೆ ʻನಾದವೇ ಬ್ರಹ್ಮʼ ಎಂಬ ಪರಿಕಲ್ಪನೆಯ ನಮ್ಮ ಸಂಸ್ಕೃತಿಯ̧ಲ್ಲಿ, ನಾದೋಪಾಸನೆಯ ಆತ್ಮ ಸ್ವರೂಪಿ ಈ ನಾದಪೆಟ್ಟಿಗೆಯನ್ನು ಹವಾಮಾನ ಬದಲಾವಣೆ ಸಂಕಷ್ಟಕ್ಕೆ ಸಿಲುಕಿಸಿ ಅಪಶೃತಿ ಹೊರಡಿಸುವಂತೆ ಮಾಡುತ್ತಿದೆ.
ಈ ವಾದ್ಯದ ಕೆಳಭಾಗದಲ್ಲಿರುವ ಗುಂಡಾದ ನಾದಪೆಟ್ಟಿಗೆಯನ್ನು ತಯಾರಿಸಲು ಬಳಸುವ, ತಂಬೂರಿ, ಸಿತಾರ್, ರುದ್ರವೀಣೆ ಮುಂತಾದ ವಾದ್ಯಗಳಿಗೆಂದೇ ವಿಶೇಷವಾಗಿ ಬೆಳೆಯುವ ದೊಡ್ಡ ಗಾತ್ರದ ಸೋರೆಕಾಯಿ ಬೆಳೆ ಇತ್ತೀಚಿನ ವರ್ಷಗಳಲ್ಲಿ ಅತಿಯಾದ ತಾಪಮಾನ, ಅಕಾಲಿಕ ಮಳೆ, ಕೀಟಗಳ ದಾಳಿ ಮತ್ತು ವಿವಿಧ ರೋಗಗಳನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ ಸೋರೆಕಾಯಿ ಬೆಳೆಗಾರರ ಜೀವನೋಪಾಯ ಮಾತ್ರವಲ್ಲದೆ, ತಂಬೂರಿಯ ಭವಿಷ್ಯವೂ ಅಪಾಯದ ಅಂಚಿನಲ್ಲಿದೆ ಎಂದು ಮಾಂಗಬೆ ಇಂಡಿಯಾ (Mongabay India) ವರದಿ ಹೇಳುತ್ತದೆ.
ತಂಬೂರವನ್ನು ತಯಾರಿಸಲು ಸೂಕ್ತ ಗಾತ್ರ ಮತ್ತು ಆಕಾರದ ಸೋರೆಕಾಯಿ ಬುರುಡೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ತಂಬೂರದಂತಹ ಸಂಗೀತ ವಾದ್ಯಗಳನ್ನು ತಯಾರಿಸಲು ವಿಶೇಷವಾಗಿ ಬೆಳೆಯುವ ಸುಮಾರು 53–60 ಇಂಚುಗಳು (135–152 ಸೆಂಟಿಮೀಟರ್) ಸುತ್ತಳತೆಯನ್ನು ಹೊಂದಿರುವ ಸೋರೆಕಾಯಿ (Lagenaria siceraria)ಗಳು ಬೇಕಾಗುತ್ತವೆ. ದೊಡ್ಡ ಗಾತ್ರದ ಸೋರೆಕಾಯಿಗಳಿಂದ ಉತ್ತಮ ಪ್ರತಿಧ್ವನಿ (ರೆಸೊನನ್ಸ್) ದೊರೆಯುವುದರಿಂದ ಸಂಗೀತಗಾರರು ಅವುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದರೊಂದಿಗೆ ಹೊರಚಿಪ್ಪು ಕೂಡ ದಪ್ಪವಾಗಿ ಭಾರವಾಗಿದ್ದಾಗ ಮಾತ್ರ ಅದು ಸಂಗೀತಕ್ಕೆ ಬೇಕಾದ ಸ್ವರವನ್ನು ಹೊರಡಿಸಬಲ್ಲುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸೋರೆಕಾಯಿಗಳ ಗಾತ್ರವು ಚಿಕ್ಕದಾಗುತ್ತಾ ಬರುತ್ತಿರುವುದರಿಂದ ತಂಬೂರದ ಧ್ವನಿ ಮೊದಲಿನಂತೆ ಮಧುರವಾಗಿಲ್ಲ ಎಂಬುದು ಹಲವು ಸಂಗೀತಗಾರರ ಅಳಲು.
ಬೇಸಿಗೆಯಲ್ಲಿ ಕಟಾವಿಗೆ ಬರುವ ಇದೊಂದು ವಾರ್ಷಿಕ ಬೆಳೆ. ಅತಿಯಾದ ಬಿಸಿಲು ಹಣ್ಣುಗಳು ಸಂಪೂರ್ಣವಾಗಿ ಹಣ್ಣಾಗುವ ಮುನ್ನವೇ ಒಳಭಾಗದಲ್ಲಿ ಕೊಳೆಯುವಂತೆ ಮಾಡುತ್ತಿದೆ. ಹೆಚ್ಚುತ್ತಿರುವ ಉಷ್ಣತೆ ವಿವಿಧ ಕೀಟಗಳು ಮತ್ತು ರೋಗಗಳು ಹರಡಲು ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಇದರಿಂದ ಕೊಯ್ಲಿನ ಕೊನೆಯಲ್ಲಿ ಸೋರಕಾಯಿಗಳ ಪ್ರಮಾಣ ಮತ್ತು ಅವುಗಳ ಗುಣಮಟ್ಟ ಎರಡೂ ಅರ್ಧಕ್ಕರ್ಧ ಕುಸಿದಿದೆ.
ಹವಾಮಾನ ಬದಲಾವಣೆಯು ಕೇವಲ ಕೃಷಿ ಅಥವಾ ಪರಿಸರದ ಸಮಸ್ಯೆಯಲ್ಲ. ಅದರ ಪರಿಣಾಮ ಒಂದು ವಾದ್ಯದ ಮೇಲಷ್ಟೇ ಅಲ್ಲ, ಶತಮಾನಗಳಿಂದ ರೂಪುಗೊಂಡಿರುವ ಸಂಗೀತ ಪರಂಪರೆಯ ಮೇಲೂ ಬೀಳುತ್ತಿದೆ.
***
ಇಲ್ಲಿ ಕೇವಲ ಹವಾಮಾನ ಬದಲಾವಣೆ ಮಾತ್ರವೇ ಸಂಗೀತ ಕ್ಷೇತ್ರವನ್ನು ತಟ್ಟುತ್ತಿಲ್ಲ. Visa versa ಎಂಬಂತೆ ಸಂಗೀತ, ನೃತ್ಯ ಕಾರ್ಯಕ್ರಮಗಳು, ಲೈವ್ಶೋಗಳು, ಸಿನಿಮಾ ಚಿತ್ರೀಕರಣದಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳೂ ಯಾವುದೇ ಪರಿಸರ ಮಾನದಂಡಗಳನ್ನು ಪಾಲಿಸದೆ ಇಂಗಾಲದ ಹೊರಸೂಸುವಿಕೆಯ ಮೂಲಕ ಹಮಾವಾನ ಬದಲಾವಣೆಗೆ ಕಾರಣವಾಗುತ್ತಿವೆ.
ಹಾಗಾದರೆ ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಹವಾಮಾನ ಬದಲಾವಣೆಯ ಸಮಸ್ಯೆಯ ಭಾಗವಾಗದೆ, ಅದರ ಪರಿಹಾರದ ಭಾಗವಾಗಲು ಸಾಧ್ಯವೇ?. ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವಾಗಿ ವಿಶ್ವಸಂಸ್ಥೆಯು ಸಾಂಸ್ಕೃತಿಕ ಕ್ಷೇತ್ರದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಹೇಗೆ ಮಿತಿಗೊಳಿಸಬಹುದು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಲು ಇಂಗ್ಲೆಂಡ್ನ ಲಿವರ್ಪೂಲ್ ನಗರದಲ್ಲಿ ‘Accelerator City’ ಕಾರ್ಯಕ್ರಮವನ್ನು ಆರಂಭಿಸಿತು.
ಏನಿದು ‘Accelerator City’ ಕಾರ್ಯಕ್ರಮ?
ವಿಶ್ವಸಂಸ್ಥೆಯ ಸೂಚನೆಯಂತೆ ಲಿವರ್ಪೂಲ್ ನಗರದಲ್ಲಿ ಹಮ್ಮಿಕೊಳ್ಳಲಾದ ಒಂದು ವರ್ಷದ ಈ ಕಾರ್ಯಕ್ರಮದಡಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಮಿತಗೊಳಿಸಲು ಒಂಬತ್ತು ಪ್ರಾಯೋಗಿಕ (ಪೈಲಟ್) ಯೋಜನೆಗಳನ್ನು ಜಾರಿಗೊಳಿಸಲು ಪ್ರಸ್ತಾಪಿಸಲಾಯಿತು. ಇವು ಕಡಿಮೆ ಇಂಗಾಲ (Low-carbon) ಆಧಾರಿತ ವಿಧಾನಗಳನ್ನು ಪರೀಕ್ಷಿಸಿ, ನಂತರ ಅವುಗಳನ್ನು ನಗರಾಡಳಿ ಹಾಗೂ ಇತರೆ ಸಂಸ್ಥೆಗಳ ಕಾರ್ಯವೈಖರಿಯಲ್ಲಿ ಶಾಶ್ವತವಾಗಿ ಅಳವಡಿಸುವ ಗುರಿಯನ್ನು ಹೊಂದಿದ್ದವು.

ಈ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ತಂಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಂಗಾಲದ ಹೊರಸೂಸುವಿಕೆಗೆ ಕಾರಣವಾಗುವ ಪ್ರಮುಖ ವಿಷಯಗಳನ್ನು ಗಮನಿಸಿತು. ಮುಖ್ಯವಾಗಿ ತಂಡವು ತ್ಯಾಜ್ಯ ನಿರ್ವಹಣೆ, ಆಹಾರ ವ್ಯವಸ್ಥೆ , ವಿದ್ಯುತ್ ಬಳಕೆ ಮತ್ತು ಸಾರಿಗೆ ಮಾಲಿನ್ಯ ಮುಂತಾದ ಕ್ಷೇತ್ರಗಳನ್ನು ಗಮನಿಸಿತು. ಈ ಕ್ಷೇತ್ರಗಳಲ್ಲಿ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಪೈಲಟ್ ಯೋಜನೆಗಳನ್ನು ರೂಪಿಸಲಾಯಿತು. ನಗರಸಭೆಯ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳು ಹೆಚ್ಚು ಪರಿಸರ ಸ್ನೇಹಿಯಾಗಿರುವುದನ್ನು ಖಚಿತಪಡಿಸಲು ಹೊಸ ನಿಯಮಗಳನ್ನು ರೂಪಿಸಲಾಯಿತು.
ಹೆಚ್ಚಿನ ಸಂಖ್ಯೆಯ ವೀಕ್ಷಕ ವರ್ಗವನ್ನು ಹೊಂದಿರುವ ನೇರ (Live) ಕಾರ್ಯಕ್ರಮಗಳಿಗೆ ಪ್ರೇಕ್ಷಕರು ಹೆಚ್ಚು ಸುಸ್ಥಿರ ರೀತಿಯಲ್ಲಿ ಪ್ರಯಾಣಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಸಾರಿಗೆ ಮಾದರಿಯನ್ನು ಅಭಿವೃದ್ಧಿಪಡಿಸಲಾಯಿತು. ಕಾರ್ಯಕ್ರಮಗಳಲ್ಲಿ ಶೇ.100ರಷ್ಟು ನವೀಕರಿಸಬಹುದಾದ ಇಂಧನ ಬಳಸಲಾಯಿತು. ಡೀಸೆಲ್ ಜನರೇಟರ್ಗಳ ಬದಲಿಗೆ ಮರುಚಾರ್ಜ್ ಮಾಡಬಹುದಾದ ಬ್ಯಾಟರಿಗಳಿಂದ ವಿದ್ಯುತ್ ಪೂರೈಕೆ ಮಾಡಲಾಯಿತು. ಸ್ಥಳೀಯ ನಿವಾಸಿಗಳಿಗೆ ಟಿಕೆಟ್ನಲ್ಲಿ ಆದ್ಯತೆ ನೀಡಲಾಯಿತು. ಪ್ರೇಕ್ಷಕರು ಸಾರ್ವಜನಿಕ ಸಾರಿಗೆ ಬಳಸಲು ಪ್ರೋತ್ಸಾಹಿಸಲಾಯಿತು. ಸಸ್ಯಾಹಾರಿ ಆಹಾರ ಮಾತ್ರ ಒದಗಿಸಲಾಯಿತು. ಮರುಬಳಕೆ ಕಪ್ ಬಳಸಲು ಉತ್ತೇಜಿಸಲಾಯಿತು. ಕಾರ್ಯಕ್ರಮದಿಂದ ಭೂಪೂರಣಕ್ಕೆ ಯಾವುದೇ ತ್ಯಾಜ್ಯ ಹೋಗದಂತೆ ನೋಡಿಕೊಳ್ಳುವ ವ್ಯವಸ್ಥೆ ರೂಪಿಸಲಾಯಿತು.
ಈ ‘Accelerator City ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾದ ಬಿಬಿಸಿ ರೇಡಿಯೋ ಒನ್ ನ ವಾರಾಂತ್ಯದ ಪ್ರಸಿದ್ಧ ಬೃಹತ್ ಸಂಗೀತ ಉತ್ಸವವು ಯುಕೆ ಫೆಸ್ಟಿವಲ್ ಅವಾರ್ಡ್ನಲ್ಲಿ ʻಗ್ರೀನ್ ಅವಾʼರ್ಡ್ ಪ್ರಶಸ್ತಿಯನ್ನು ಗೆದ್ದಿತು. ಅದೇ ರೀತಿ ಇನ್ನೊಂದು ಕಾರ್ಯಕ್ರಮವೂ ಯುನೈಟೆಡ್ ಕಿಂಗ್ಡಮ್ನ ಅತ್ಯಂತ ಪರಿಸರ ಸ್ನೇಹಿ ಸಂಗೀತ ವೇದಿಕೆಗಳಲ್ಲಿ ಒಂದೆಂದು ಎ ಗ್ರೀನರ್ ಫ್ಯೂಚರ್ (A Greener Future ) ಸಂಸ್ಥೆಯಿಂದ ಪ್ರಮಾಣೀಕರಣ ಪಡೆಯಿತು. ಜೊತೆಗೆ, ದೇಶಾದ್ಯಂತ ಚಲನಚಿತ್ರ ಮತ್ತು ಟೆಲಿವಿಷನ್ ಕ್ಷೇತ್ರದಲ್ಲಿ ಸುಸ್ಥಿರತೆಯನ್ನು ಉತ್ತೇಜಿಸುವ ಉದ್ದೇಶದಿಂದ ಹೊಸ ಮಾನದಂಡಗಳನ್ನು ಪರಿಚಯಿಸಲಾಯಿತು.

Accelerator City ಕಾರ್ಯಕ್ರಮದಲ್ಲಿ ಸಿಬ್ಬಂದಿಗಳೆಲ್ಲರೂ ಸೇರಿ ಕೆಲಸ ಮಾಡಿದ್ದರಿಂದ ಪರಸ್ಪರ ಕಲಿಯುವ ವಾತಾವರಣ ನಿರ್ಮಾಣವಾಯಿತು. ಈಗ ಲಿವರ್ಪೂಲ್ ಸಭೆಗಳಲ್ಲಿ ಸುಸ್ಥಿರತೆ ಎನ್ನುವುದು ಪ್ರತಿಯೊಂದು ಸಭೆಯಲ್ಲೂ ಚರ್ಚೆಯಾಗುವ ಶಾಶ್ವತ ಅಜೆಂಡಾ ಆಗಿದೆ. ಅಂದರೆ, ಯಾವುದೇ ಹೊಸ ಕಾರ್ಯಕ್ರಮ ರೂಪಿಸುವಾಗ ಪರಿಸರದ ಪರಿಣಾಮವನ್ನು ಕಡ್ಡಾಯವಾಗಿ ಪರಿಗಣಿಸಲಾಗುತ್ತಿದೆ.
ಈ ಎಲ್ಲಾ ಕಾರ್ಯಕ್ರಮಗಳಿಂದ ಪಡೆದ ಅನುಭವಗಳಿಂದ ಇಲ್ಲಿನ ಸಿಬ್ಬಂದಿಗಳು ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವುದಾದರೂ ಪರಿಸರ ಸ್ನೇಹಿ ಪರ್ಯಾಯಗಳನ್ನು ಹುಡುಕುತ್ತಾರೆ, ಕಡಿಮೆ ಕಾರ್ಬನ್ ಆಯ್ಕೆಗಳನ್ನು ಬಳಸುತ್ತಾರೆ ಮತ್ತು ಸುಸ್ಥಿರತೆಯನ್ನು ಸಾಮಾನ್ಯ ಕಾರ್ಯವಿಧಾನವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ.
ಇಂಗಾಲದ ಹೊರಸೂಸುವಿಕೆಯನ್ನು ತಡೆಯುವಲ್ಲಿ ಸಂಗೀತ ತಂಡಗಳ ಮುಂದಾಳತ್ವ
ಇದರೊಂದಿಗೆ ಅನೇಕ ಸಂಗೀತ ತಂಡಗಳು, ಗಾಯಕರು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನೂ ಕೈಗೊಂಡಿದ್ದಾರೆ. ಪ್ರಸಿದ್ಧ ಬ್ರಿಟಿಷ್ ಸಂಗೀತ ತಂಡ ಕೋಲ್ಡ್ಪ್ಲೇ (Coldplay) ತನ್ನ ಮ್ಯೂಸಿಕ್ ಆಫ್ ಸ್ಪಿಯರ್ 2022 (Music of Spheres)ರ ಪ್ರವಾಸದ ವೇಳೆ ತನ್ನ ಮೊದಲಿನ ಕಾರ್ಯಕ್ರಮಗಳಿಗಿಂತಲೂ 50 ಶೇಕಡಾ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕು ಎಂದು ಪ್ರತಿಜ್ಞೆ ಕೈಗೊಂಡಿತ್ತು. ಚಲನಶಕ್ತಿಯಿಂದ (Kinetic Energy) ವಿದ್ಯುತ್ ಉತ್ಪಾದಿಸುವ ನೃತ್ಯ ವೇದಿಕೆಗಳು (Kinetic Dancefloors), ಮರುಬಳಕೆ ಮಾಡಬಹುದಾದ ಎಲ್ಇಡಿ ಕೈಪಟ್ಟಿಗಳು ಹಾಗೂ ಸಾಧ್ಯವಾದ ಕಡೆಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಅಳವಡಿಸಿಕೊಳ್ಳುವಂತಹ ಹಲವು ಹೊಸ ಕ್ರಮಗಳ ಮೂಲಕ ತಂಡ ಅದನ್ನು ಸಾಧ್ಯವಾಗಿಸಿದೆ.
ಕಾರ್ಯಕ್ರಮಗಳಲ್ಲಿ ಅಳವಡಿಸಲಾದ ವಿಶೇಷ ಚಲನಶಕ್ತಿ ನೃತ್ಯ ವೇದಿಕೆಗಳು ಪ್ರೇಕ್ಷಕರು ಕುಣಿದಾಗ ಉಂಟಾಗುವ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸುತ್ತವೆ. ಜೊತೆಗೆ, ಪ್ರೇಕ್ಷಕರು ಬಳಸುವ ಪವರ್ ಬೈಕ್ಗಳು, ಸೌರಶಕ್ತಿ ವ್ಯವಸ್ಥೆಗಳು ಹಾಗೂ ಈ ಚಲನಶಕ್ತಿ ವೇದಿಕೆಗಳು ಸೇರಿ ವೇದಿಕೆಯ ಕೆಲವು ಭಾಗಗಳಿಗೆ ವಿದ್ಯುತ್ ಪೂರೈಕೆ ಮಾಡುವುದರ ಜೊತೆಗೆ ಸಿಬ್ಬಂದಿಯ ಮೊಬೈಲ್, ಲ್ಯಾಪ್ಟಾಪ್ ಹಾಗೂ ಉಪಕರಣಗಳನ್ನು ಚಾರ್ಜ್ ಮಾಡಲು ಸಹ ನೆರವಾಗುತ್ತವೆ.
ಈ ಕಾರ್ಯಕ್ರಮದಲ್ಲಿ ಉತ್ಪತ್ತಿಯಾದ ಶೇ.72ರಷ್ಟು ತ್ಯಾಜ್ಯವನ್ನು ಭೂಪೂರಣ ಪ್ರದೇಶಗಳಿಗೆ (Landfill) ಕಳುಹಿಸದೆ ಮರುಬಳಕೆ, ಮರುಸಂಸ್ಕರಣೆ (Recycling) ಅಥವಾ ಕಾಂಪೋಸ್ಟ್ ಮಾಡುವ ವ್ಯವಸ್ಥೆಗೆ ಕಳುಹಿಸಲಾಗಿದೆ. ಜೊತೆಗೆ ಎರಡು ನದಿ ತ್ಯಾಜ್ಯ ಸಂಗ್ರಹ ಸಂಸ್ಥೆಗಳಿಗೆ ಸಹ ಹಣಕಾಸಿನ ನೆರವು ಸಹ ನೀಡಲಾಗಿದೆ. ಅಲ್ಲದೆ, ಮಾರಾಟವಾದ ಪ್ರತಿಯೊಂದು ಟಿಕೆಟ್ಗೆ ಒಂದು ಮರ ನೆಡುವ ಯೋಜನೆ ಜಾರಿಗೊಳಿಸಲಾಗಿದ್ದು, ಇದುವರೆಗೆ ಸುಮಾರು 70 ಲಕ್ಷ ಮರಗಳನ್ನು ನೆಡಲಾಗಿದೆ.
ಸಂಗೀತಗಾರರು ನಡೆಸುವ ಜಾಗತಿಕ ಸಂಗೀತ ಪ್ರವಾಸಗಳು, ಸಾವಿರಾರು ಕಿಲೋಮೀಟರ್ಗಳ ಪ್ರಯಾಣ, ಸರಕು ಸಾಗಣೆ ಮತ್ತು ವೇದಿಕೆ ನಿರ್ಮಾಣವು ಹೆಚ್ಚಿನ ಪ್ರಮಾಣದ ಇಂಗಾಲದ ಹೊರಸೂಸುವಿಕೆಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಕೋಲ್ಡ್ಪ್ಲೇ ಅನುಸರಿಸಿರುವ ಪರಿಸರ ಸ್ನೇಹಿ ಕ್ರಮಗಳು, ಸಾಂಸ್ಕೃತಿಕ ಲೋಕಕ್ಕೆ ಸುಸ್ಥಿರತೆಯ ಹೊಸ ಮಾದರಿಯನ್ನು ಪರಿಚಯಿಸಿವೆ.
ಬಿಲ್ಲಿ ಐಲಿಶ್ (Billie Eilish) ಎಂಬ ಅಮೆರಿಕದ ಗ್ಯಾಮಿ ಪ್ರಶಸ್ತಿ ವಿಜೇತೆ ಪಾಪ್ ಗಾಯಕಿ ಹಾಗೂ ಗೀತರಚನಾಕಾರ್ತಿ ತಮ್ಮ ಪೀಳಿಗೆಯ ಅತ್ಯಂತ ಪ್ರಭಾವಶಾಲಿ ಸಂಗೀತ ಕಲಾವಿದೆಯರಲ್ಲಿ ಒಬ್ಬರು. ಈಕೆ ತಮ್ಮ ಸಂಗೀತ ಪ್ರವಾಸಗಳಲ್ಲಿ ಅಭಿಮಾನಿಗಳು ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ಬಳಸುವಂತೆ ಪ್ರೋತ್ಸಾಹಿಸುವುದು, ಮತ್ತು ಪರಿಸರ ಜಾಗೃತಿ ಅಭಿಯಾನಗಳನ್ನು ನಡೆಸುವ ಮೂಲಕ ಸುಸ್ಥಿರ ಕಾರ್ಯಕ್ರಮಗಳ ಪರವಾಗಿ ಧ್ವನಿಯೆತ್ತಿದ್ದಾರೆ.
ಅಮೆರಿಕದ REVERB ಎಂಬ ಲಾಭರಹಿತ ಸಂಸ್ಥೆ ಹಲವಾರು ಸಂಗೀತಗಾರರು ಮತ್ತು ಸಂಗೀತ ಉತ್ಸವಗಳೊಂದಿಗೆ ಕೈಜೋಡಿಸಿ ಏಕಬಳಕೆ ಪ್ಲಾಸ್ಟಿಕ್ ಬಾಟಲಿಗಳನ್ನು ಕಡಿಮೆ ಮಾಡುವುದು, ಉಚಿತ ನೀರು ಮರುಪೂರೈಕೆ ಕೇಂದ್ರಗಳನ್ನು ಸ್ಥಾಪಿಸುವುದು, ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡುವುದು ಮತ್ತು ಪ್ರೇಕ್ಷಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಒಟ್ಟಾರೆಯಾಗಿ ಈ ಎಲ್ಲಾ ಕ್ರಮಗಳು ಅಗತ್ಯವಾದ ತಂತ್ರಜ್ಞಾನ ಮತ್ತು ವಿಧಾನಗಳು ಅಳವಡಿಸಿಕೊಂಡು ಕಾರ್ಯಕ್ರಮ ಆಯೋಜಕರು ಸ್ವಯಂಪ್ರೇರಿತವಾಗಿ ಹವಾಮಾನ ಸ್ನೇಹಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ ಎಂಬುದನ್ನು ಎಲ್ಲರಿಗೂ ಸಾಬೀತುಪಡಿಸಿದೆ.
***
ಇಲ್ಲಿ ಒಂದೆಡೆ ಭಾರತೀಯ ಶಾಸ್ತ್ರೀಯ ಸಂಗೀತದ ತಂಬೂರಿ ಹವಾಮಾನ ಬದಲಾವಣೆಯಿಂದ ತನ್ನ ನಾದವನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದರೆ, ಮತ್ತೊಂದೆಡೆ ಪಾಶ್ಚಾತ್ಯ ಸಂಗೀತ ಲೋಕವು ತನ್ನ ಕಾರ್ಯಕ್ರಮಗಳ ಇಂಗಾಲದ ಹೆಜ್ಜೆಗುರುತನ್ನು ಕಡಿಮೆಗೊಳಿಸುವ ಮಾರ್ಗಗಳನ್ನು ಹುಡುಕುತ್ತಿದೆ. ಒಂದೆಡೆ ಪ್ರಕೃತಿಯ ಮೇಲೆ ಅವಲಂಬಿತ ವಾದ್ಯಗಳ ಅಸ್ತಿತ್ವದ ಪ್ರಶ್ನೆಯಿದ್ದರೆ, ಇನ್ನೊಂದೆಡೆ ಪ್ರಕೃತಿಯ ಮೇಲೆ ಬೀಳುವ ಪರಿಣಾಮವನ್ನು ಕಡಿಮೆ ಮಾಡುವ ಪ್ರಯತ್ನವಿದೆ. ಈ ಎರಡೂ ಬೆಳವಣಿಗೆಗಳು ಸಂಗೀತ ʻಪ್ರಕೃತಿ ಸ್ವರ́ ಎಂಬುದನ್ನು ಅವೆರಡರ ನಡುವಿನ ಅವಿನಾಭಾವ ಸಂಬಂಧವನ್ನು ಮತ್ತೆ ಮತ್ತೆ ನೆನಪಿಸುತ್ತಿವೆ.
ಭಾರತದಲ್ಲಿಯೂ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಚೆನ್ನೈ ಸಂಗೀತ ಉತ್ಸವ, ಹಂಪಿ ಉತ್ಸವ, ಸವಾಯಿ ಗಂಧರ್ವ ಮಹೋತ್ಸವ, ಲೈವ್ ಶೋಗಳು ಮತ್ತು ಇನ್ನೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇಲ್ಲಿಯೂ ಲಕ್ಷಾಂತರ ಜನರು ಸೇರುತ್ತಾರೆ. ಆದರೆ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಕಾರ್ಬನ್ ಲೆಕ್ಕಾಚಾರ ಅಥವಾ ಹಸಿರು ಕಾರ್ಯಕ್ರಮ ಮಾನದಂಡಗಳನ್ನು ಇನ್ನೂ ಅಳವಡಿಸಿಕೊಳ್ಳಲಾಗಿಲ್ಲ.
ಇದನ್ನೂ ಓದಿ ಆಗುಂಬೆ ಸುರಂಗ, ಶೃಂಗೇರಿ ರೈಲು ಮಾರ್ಗ: ವಯನಾಡು ಮಾದರಿ ದುರಂತಕ್ಕೆ ಮುನ್ನುಡಿಯೇ?
ತಂಬೂರಿಯ ನಾದ ಶುದ್ಧವಾಗಿ ಹೊರಹೊಮ್ಮಬೇಕಾದರೆ ನಾದಪೆಟ್ಟಿಗೆಯನ್ನು ರೂಪಿಸುವ ಸೋರೆಕಾಯಿಯೂ ಉಳಿಯಬೇಕು. ಅದಕ್ಕೆ ಹವಾಮಾನ ಸ್ಥಿರವಾಗಿರಬೇಕು. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮಿತಿಗೊಳಿಸುವುದು ಸಂಗೀತಗಾರರು, ಕಾರ್ಯಕ್ರಮ ಆಯೋಜಕರು, ಸರ್ಕಾರ ಮತ್ತು ಪ್ರೇಕ್ಷಕರು—ಎಲ್ಲರ ಜವಾಬ್ದಾರಿಯೂ ಹೌದು. ʻಗ್ರೀನ್ ಪ್ರೋಟೋಕಾಲ್ʼನ್ನು ಸ್ವಯಂ ಪ್ರೇರಿತವಾಗಿ ಅಳವಡಿಸಿಕೊಂಡಾಗ ಮಾತ್ರ ಭಾರತೀಯ ನಾದ ಪರಂಪರೆಯ ಆಧಾರ ಶೃತಿ ವಾದ್ಯಗಳು ಮುಂದಿನ ಪೀಳಿಗೆಗಳಲ್ಲಿಯೂ ಮಧುಮಧುರವಾಗಿ ಅನುರಣಿಸಬಲ್ಲುದು.

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ



