ದೆಹಲಿಯ ಸರ್ಪಗಾವಲಿಗೂ ಜಗ್ಗದ ಯುವಜನತೆ, ಮುಂಬೈನಲ್ಲಿ ಮೊಳಗಿದ ರಣಕಹಳೆ: ಗ್ಯಾನೇಶ್ ವಜಾಕ್ಕೆ ಒಗ್ಗೂಡಿದ ಪ್ರಜಾಶಕ್ತಿ

Date:

ದೇಶದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯ ಚುನಾವಣಾ ಆಯುಕ್ತರೊಬ್ಬರ (ಸಿಇಸಿ) ವಿರುದ್ಧ ಇಷ್ಟೊಂದು ಬೃಹತ್ ಮಟ್ಟದ ಜನಾಕ್ರೋಶ ಭುಗಿಲೆದ್ದಿದೆ. ಮಹಾತ್ಮ ಗಾಂಧೀಜಿಯವರ ಜನ್ಮದಿನದಂದೇ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕರೆ ನೀಡಲಾಗಿದ್ದ ‘ಜೈಲ್ ಭರೋ’ ಪ್ರತಿಭಟನೆಯು ಶುಕ್ರವಾರ ರಾಜಧಾನಿ ನವದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತ್ತು.

- Advertisement -

ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಬೃಹತ್ ಹೋರಾಟದ ಏಕೈಕ ಗುರಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ ಪಡೆಯುವುದಾಗಿತ್ತು. ಗಾಂಧಿ ಮಾರ್ಗದಲ್ಲಿ ನಡೆದ ಈ ಹೋರಾಟವನ್ನು ಹತ್ತಿಕ್ಕಲು ದೆಹಲಿಯಲ್ಲಿ 700ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರೆ, ಮುಂಬೈನಲ್ಲಿ ಗಣ್ಯರ ಬೆಂಬಲದೊಂದಿಗೆ ಸಾವಿರಾರು ಜನರು ಬೀದಿಗಿಳಿದು ಆಯೋಗದ ವಿರುದ್ಧ ರಣಕಹಳೆ ಮೊಳಗಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

​ಈ ಇಡೀ ಪ್ರತಿಭಟನೆಯ ಪ್ರಮುಖ ಕೇಂದ್ರಬಿಂದು ಸಿಇಸಿ ಗ್ಯಾನೇಶ್ ಕುಮಾರ್ ಅವರಾಗಿದ್ದಾರೆ. ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ನೆಪದಲ್ಲಿ ದೇಶಾದ್ಯಂತ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ವ್ಯಾಪಕ ಅಕ್ರಮಗಳನ್ನು ಎಸಗಲಾಗಿದೆ ಎಂಬುದು ಅವರ ಮೇಲಿರುವ ಗಂಭೀರ ಆರೋಪ. ಚುನಾವಣಾ ಆಯೋಗದೊಳಗಿನ ಇತರ ಆಯುಕ್ತರ ಭಿನ್ನಾಭಿಪ್ರಾಯಗಳ ನಡುವೆಯೂ ಈ ಪ್ರಕ್ರಿಯೆ ನಡೆದಿದೆ ಎನ್ನಲಾಗಿದ್ದು, ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕರ ವಿಶ್ವಾಸ ಸಂಪೂರ್ಣವಾಗಿ ಕುಸಿದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಅಕ್ರಮಗಳ ಸಂಪೂರ್ಣ ಹೊಣೆಹೊತ್ತು ಗ್ಯಾನೇಶ್ ಕುಮಾರ್ ಅವರು ಕೂಡಲೇ ರಾಜೀನಾಮೆ ನೀಡಬೇಕು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಸಿಇಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಬೇಕು ಎಂದು ಸಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ.

​ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ಸೇರಿದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕೇಂದ್ರ ಸರ್ಕಾರ ಪ್ರಸ್ತಾಪಿಸುತ್ತಿರುವ ‘ಒಂದು ದೇಶ, ಒಂದು ಚುನಾವಣೆ’ (One Nation, One Election) ಎಂಬುದು ಕೇವಲ ಸಾರ್ವಜನಿಕರ ದಾರಿ ತಪ್ಪಿಸುವ ಘೋಷಣೆಯಷ್ಟೇ. ಅದರ ಹಿಂದಿರುವ ಬಿಜೆಪಿಯ ಅಸಲಿ ಉದ್ದೇಶ ದೇಶದಲ್ಲಿ ‘ಒಂದು ದೇಶ, ಒಂದು ಪಕ್ಷ’ (One Nation, One Party) ವ್ಯವಸ್ಥೆಯನ್ನು ಜಾರಿಗೆ ತರುವುದಾಗಿದೆ” ಎಂದು ದೀಪ್ಕೆ ಗಂಭೀರ ಆರೋಪ ಮಾಡಿದರು. ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಹೆಸರುಗಳನ್ನು ಅಳಿಸಿದ ಬಳಿಕವಷ್ಟೇ, ಮೋದಿ ಅಲೆಯ ಉತ್ತುಂಗದಲ್ಲೂ ಗೆಲ್ಲಲಾಗದಿದ್ದ ರಾಜ್ಯಗಳನ್ನು ಬಿಜೆಪಿ ಗೆದ್ದುಕೊಂಡಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.

​ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ, “ಈ ಸರ್ಕಾರ ಎಷ್ಟು ಅಸಮರ್ಥವಾಗಿದೆ ಎಂದರೆ, ಕೇವಲ ಎರಡು ತಿಂಗಳ ಅಂತರದಲ್ಲಿ ನಾವು ಎರಡನೇ ಬಾರಿ ಬೀದಿಗಿಳಿದು ಪ್ರತಿಭಟಿಸಬೇಕಾಗಿ ಬಂದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. (ಈ ಹಿಂದೆ ಜಂತರ್ ಮಂತರ್‌ನಲ್ಲಿ ‘ನೀಟ್’ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ಮಾಡಲಾಗಿತ್ತು). ಇದೇ ವೇಳೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ನೇರ ಸವಾಲು ಹಾಕಿದ ದೀಪ್ಕೆ, “ಶಿವಾಜಿ ಪಾರ್ಕ್‌ನಲ್ಲಿ ಸಿಇಸಿ ರಾಜೀನಾಮೆಗೆ ಆಗ್ರಹಿಸಿ ಸೇರಿರುವ ಈ ಪ್ರತಿಭಟನಾಕಾರರನ್ನು ಸಾಧ್ಯವಾದರೆ ಜೈಲಿಗೆ ಕಳುಹಿಸಿ” ಎಂದು ಗುಡುಗಿದರು. ಪ್ರತಿಭಟನಾಕಾರರನ್ನು ಹುರಿದುಂಬಿಸಿ ಭಾಷಣ ಮಾಡಿದ ಬಳಿಕ ದೀಪ್ಕೆ ಅವರು ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಿದರು.

​ಮುಂಬೈನಲ್ಲಿ ಪೊಲೀಸರು ಪ್ರತಿಭಟನೆಗೆ ಕಟ್ಟುನಿಟ್ಟಾಗಿ ಅನುಮತಿ ನಿರಾಕರಿಸಿದ್ದರು ಹಾಗೂ ದಾದರ್ ರೈಲು ನಿಲ್ದಾಣದ ಬಳಿ ಭಾರೀ ಭದ್ರತೆ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಇದರ ನಡುವೆಯೂ ಸಾವಿರಾರು ಯುವಕ-ಯುವತಿಯರು ತ್ರಿವರ್ಣ ಧ್ವಜ ಹಿಡಿದು ಶಿವಾಜಿ ಪಾರ್ಕ್‌ನಲ್ಲಿ ಜಮಾಯಿಸುವಲ್ಲಿ ಯಶಸ್ವಿಯಾದರು. ಈ ಹೋರಾಟಕ್ಕೆ ಬಾಲಿವುಡ್‌ನ ದಿಗ್ಗಜರಾದ ಹಿರಿಯ ನಟಿ ಶಬಾನಾ ಆಜ್ಮಿ, ನಟ ನಾಸಿರುದ್ದೀನ್ ಷಾ, ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಹಾಗೂ ಸಾಮಾಜಿಕ ಕಾರ್ಯಕರ್ತ ತುಷಾರ್ ಗಾಂಧಿ ಮುಂತಾದವರು ಜೊತೆ ನೀಡಿದರು. “ಬಾಲ್ಯದಿಂದಲೂ ಮತದಾನ ನಮ್ಮ ಹಕ್ಕು ಎಂದು ಕೇಳುತ್ತಾ ಬೆಳೆದಿದ್ದೇವೆ. ಆದರೆ ಆ ಹಕ್ಕನ್ನೇ ಕಸಿದುಕೊಂಡರೆ ನಾವು ಪ್ರತಿಭಟಿಸದೇ ಬೇರೇನು ಮಾಡಲು ಸಾಧ್ಯ? ಸಂವಿಧಾನ ನಮಗೆ ಈ ಹಕ್ಕನ್ನು ನೀಡಿದೆ. ಸಾರ್ವಜನಿಕರ ಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ಶಬಾನಾ ಆಜ್ಮಿ ಎಚ್ಚರಿಕೆ ನೀಡಿದರು.

​ಗ್ಯಾನೇಶ್ ಕುಮಾರ್ ವಿರುದ್ಧ ಮುಂಬೈನಲ್ಲಿ ಮೊಳಗಿದ ಘೋಷಣೆಗಳು ಸಾರ್ವಜನಿಕರ ಆಕ್ರೋಶದ ತೀವ್ರತೆಯನ್ನು ತೋರುತ್ತಿದ್ದವು. “ಗ್ಯಾನೇಶ್ ಬ್ರೋ, ಜಸ್ಟ್ ರಿಸೈನ್!” (Gyanesh bro, just resign!), “ಗ್ಯಾನು, ನಿನಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ವಾ?” ಎಂಬ ಭಿತ್ತಿಪತ್ರಗಳು ರಾರಾಜಿಸಿದವು. ಈ ನಡುವೆ ಪ್ರತಿಭಟನಾ ಸ್ಥಳದಲ್ಲಿ ಇಂಟರ್ನೆಟ್ ಸಂಪರ್ಕವನ್ನು ದಿಢೀರ್ ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಪ್ರತಿಭಟನೆಯನ್ನು ತಮ್ಮ ಯೂಟ್ಯೂಬ್‌ ವಾಹಿನಿಯಲ್ಲಿ ನೇರಪ್ರಸಾರ ಮಾಡಲು ಸಾಧ್ಯವಾಗಲಿಲ್ಲ ಎಂದು ಸಿಜೆಪಿ ಅಸಮಾಧಾನ ವ್ಯಕ್ತಪಡಿಸಿತು. ಇನ್ನು ಪ್ರತಿಭಟನೆಯ ಅಂತ್ಯದ ವೇಳೆಗೆ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯ ಎದುರು ಜಮಾಯಿಸಿದ ಕೆಲವರು, ತಮ್ಮ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಭಾರಿ ಗದ್ದಲ ಸೃಷ್ಟಿಸಿದ ಘಟನೆಯೂ ನಡೆಯಿತು.

​ಮುಂಬೈನಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ, ಇತ್ತ ರಾಜಧಾನಿ ದೆಹಲಿಯ ಜಂತರ್ ಮಂತರ್ ಸುತ್ತಮುತ್ತ ಪೊಲೀಸರು ಬಿಎನ್‌ಎಸ್‌ಎಸ್ (BNSS) ಸೆಕ್ಷನ್ 163 ಜಾರಿಗೊಳಿಸಿ ಸರ್ಪಗಾವಲು ಹಾಕಿದ್ದರು. ಪ್ರತಿಭಟನಾಕಾರರು ಸೇರುವುದನ್ನು ತಡೆಯಲು ರಾಜೀವ್ ಚೌಕ್, ಮಂಡಿ ಹೌಸ್, ಪಟೇಲ್ ಚೌಕ್ ಸೇರಿದಂತೆ ಬರೋಬ್ಬರಿ 11 ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಆಕಾಶದಲ್ಲಿ ಡ್ರೋನ್‌ಗಳ ಮೂಲಕವೂ ಪೊಲೀಸರು ಕಣ್ಗಾವಲು ಇರಿಸಿದ್ದರು. ಈ ದಬ್ಬಾಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿಜೆಪಿ ನಾಯಕ ಸೌರವ್ ದಾಸ್, “ನೀವು ಎಷ್ಟೇ ಮೆಟ್ರೋ ನಿಲ್ದಾಣಗಳನ್ನು ಮುಚ್ಚಿದರೂ ಜನರು ನಡೆದುಕೊಂಡು ಅಥವಾ ಓಡಿಕೊಂಡು ಪ್ರತಿಭಟನಾ ಸ್ಥಳಕ್ಕೆ ಬರುತ್ತಾರೆ. ನಿಮ್ಮ ನಡವಳಿಕೆ ತಿದ್ದಿಕೊಳ್ಳಿ, ಇಲ್ಲವಾದರೆ ನಾವೇ ತಿದ್ದಬೇಕಾಗುತ್ತದೆ” ಎಂದು ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದರು.

​ಪೊಲೀಸರ ಬಿಗಿ ಬಂದೋಬಸ್ತ್‌ ನಡುವೆಯೂ ಜಂತರ್ ಮಂತರ್ ಕಡೆಗೆ ನುಗ್ಗಲು ಯತ್ನಿಸಿದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು, ರಾಜಕೀಯ ನಾಯಕರು ಹಾಗೂ ಹೋರಾಟಗಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು. ದೆಹಲಿಯ ಮಾಜಿ ಸಿಎಂ ಆತಿಶಿ, ಎಎಪಿ ನಾಯಕ ಸೌರಭ್ ಭಾರದ್ವಾಜ್, ಆರ್‌ಜೆಡಿ ಸಂಸದ ಮನೋಜ್ ಝಾ, ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್, ಯೋಗೇಂದ್ರ ಯಾದವ್ ಹಾಗೂ ಐಸಾ ನಾಯಕಿ ನೇಹಾ ಬೋರಾ ಸೇರಿದಂತೆ ಹಲವರನ್ನು ಬಸ್‌ಗಳಲ್ಲಿ ತುಂಬಿ ಕರೆದೊಯ್ಯಲಾಯಿತು. ಈ ವೇಳೆ “ಗಲ್ಲಿ ಗಲ್ಲಿಯಲ್ಲಿ ಶಬ್ದವಿದೆ, ಮೋದಿ-ಗ್ಯಾನೇಶ್ ಮತಗಳ ಕಳ್ಳರು” ಮತ್ತು “ಏಕ್ ಕಚೋರಿ, ದೋ ಸಮೋಸಾ, ಗ್ಯಾನೇಶ್ ನಿನ್ನ ಮೇಲೆ ಎಲ್ಲಿಂದ ಬರಬೇಕು ಭರೋಸಾ” ಎಂಬ ಘೋಷಣೆಗಳು ಮೊಳಗಿದವು. “ಪ್ರತಿಭಟನಾಕಾರರನ್ನು ಬಂಧಿಸುವ ಬದಲು, ಜನರ ಮತಗಳನ್ನು ಕತ್ತರಿಸುವ ಕ್ರಿಮಿನಲ್ ಕೃತ್ಯವೆಸಗಿರುವ ಗ್ಯಾನೇಶ್ ಕುಮಾರ್ ಅವರನ್ನು ಮೊದಲು ಬಂಧಿಸಬೇಕು” ಎಂದು ಸಿಪಿಐ(ಎಂ) ನಾಯಕ ಎಂ.ಎ. ಬೇಬಿ ಗುಡುಗಿದರು.

​ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ತೀವ್ರವಾಗಿ ಖಂಡಿಸಿದ್ದಾರೆ. “ಲಾಠಿಯು ಜನಸಂದಣಿಯನ್ನು ತಡೆಯಬಹುದೇ ಹೊರತು, ಒಂದು ಪ್ರಶ್ನೆಯನ್ನಲ್ಲ. ಸರ್ಕಾರಕ್ಕೆ ಸತ್ಯ ಮತ್ತು ಶಾಂತಿಯುತ ಹೋರಾಟದ ಭಯ ಕಾಡುತ್ತಿದೆ” ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಒಟ್ಟಾರೆಯಾಗಿ, ಕೇವಲ ಒಂದು ರಾಜಕೀಯ ಪಕ್ಷದ ವಿರುದ್ಧ ನಡೆಯುತ್ತಿದ್ದ ಹೋರಾಟಗಳು ಇದೀಗ ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ತಿರುಗಿರುವುದು ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟವಾಗಿದೆ. ‘ಮತಗಳ ಕಳ್ಳ’ ಎಂಬ ಗಂಭೀರ ಹಣೆಪಟ್ಟಿ ಹೊತ್ತಿರುವ ಸಿಇಸಿ ಅವರು ಜನರ ಈ ಬೃಹತ್ ಆಕ್ರೋಶಕ್ಕೆ ಮಣಿದು ರಾಜೀನಾಮೆ ನೀಡುತ್ತಾರೆಯೇ ಅಥವಾ ಈ ಹೋರಾಟವು ಮುಂದಿನ ದಿನಗಳಲ್ಲಿ ದೇಶಾದ್ಯಂತ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಗೂಡ್ಸ್ ಆಟೋ ಢಿಕ್ಕಿ; ಚಿಕಿತ್ಸೆ ಫಲಿಸದೆ ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...

ಬಾಗಲಕೋಟೆ | ಗಾಂಧಿ ಜಯಂತಿ ನಿಮಿತ್ತ ಕಾಂಗ್ರೆಸ್‌ನಿಂದ ಸ್ವಚ್ಛತಾ ಅಭಿಯಾನ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...