ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಮತ್ತು ಇತರ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ. ಜಂತರ್ ಮಂತರ್ ಕಡೆಗೆ ಹೊರಟಿರುವ ಎಲ್ಲರನ್ನೂ ಪೊಲೀಸರು ಬಂಧಿಸುತ್ತಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಸುಮಾರು 70ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಪರಿಣಾಮ, ನಗರದಾದ್ಯಂತ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಗೂಗಲ್ ಮ್ಯಾಪ್‌ನಲ್ಲಿ ಮಧ್ಯ ದೆಹಲಿಯ ರಸ್ತೆಗಳು ಸಂಪೂರ್ಣ ಕೆಂಪು ಬಣ್ಣದಲ್ಲಿ ಕಾಣಿಸುತ್ತಿವೆ.
ಪ್ರತಿಭಟನಾಕಾರರು ಜಂತರ್ ಮಂತರ್‌ಗೆ ಬಾರದಂತೆ ತಡೆಯಲು ದೆಹಲಿ ಪೊಲೀಸರು ರಸ್ತೆಗಳಲ್ಲಿ ಮೊಳೆಗಳ ಹಾಸುಗಳು ಮತ್ತು ಬೃಹತ್ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಹಲವಾರು ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತಡೆಯೊಡ್ಡಿ, ವಾಹನ ತಪಾಸಣೆ ನಡೆಸುತ್ತಿದ್ದಾರೆ. ಪರಿಣಾಮ, ಕನಾಟ್ ಪ್ಲೇಸ್, ಜನ್‌ಪಥ್, ಬರಾಖಂಬಾ ರಸ್ತೆ, ಅಶೋಕ ರಸ್ತೆ, ಸಂಸದ್ ಮಾರ್ಗ, ಇಂಡಿಯಾ ಗೇಟ್ ಹಾಗೂ ಸೆಂಟ್ರಲ್ ಸೆಕ್ರೆಟರಿಯೇಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನಗಳು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿವೆ. ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿ ತೊಂದರೆ ಅನುಭವಿಸುವಂತಾಗಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಡಿಜಿಟಲ್ ಸೇವೆಗಳ ಮೇಲೆಯೂ ತೀವ್ರ ನಿರ್ಬಂಧ ವಿಧಿಸಲಾಗಿದೆ. 57 ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ.
ಬೆಳಗ್ಗೆಯಿಂದಲೇ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಹುಡುಕಿ-ಹುಡುಕಿ ಬಂಧಿಸುತ್ತಿದ್ದಾರೆ. ಧೃವ್ ರಾಠಿ, ಅಭಿಜೀತ್ ದೀಪ್ಕೆ, ಅಶುತೋಷ್ ರಾಂಕಾ, ಸೌರವ್ ದಾಸ್, ರತ್ನ ಸಿಂಗ್, ನೇಹಾ ಬೋರಾ, ಯೋಗೇಂದ್ರ ಯಾದವ್, ಪಿಣರಾಯಿ ವಿಜಯನ್, ಮಮತಾ ಬ್ಯಾನರ್ಜಿ ಸೇರಿದಂತೆ ಸಾವಿರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಆದಾಗ್ಯೂ, ವಿದ್ಯಾರ್ಥಿ-ಯುವಜನರು ಜಂತರ್ ಮಂತರ್ ಕಡೆಗೆ ಧಾವಿಸುತ್ತಲೇ ಇದ್ದಾರೆ. ಅವರೆಲ್ಲರನ್ನೂ ಪೊಲೀಸರು ಬಂಧಿಸಿ, ಬಂಧನ ಕೇಂದ್ರದತ್ತ ಹೊತ್ತೊಯ್ಯುತ್ತಿದ್ದಾರೆ.



