ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಕಾಲಹರಣ ಮಾಡದೆ ಕಾವ್ಯ, ಕಾದಂಬರಿ ಹಾಗೂ ಕಥೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಉತ್ತರ ಕರ್ನಾಟಕದ ಹೆಮ್ಮೆಯ ಕವಿ ಡಾ. ದ. ರಾ. ಬೇಂದ್ರೆಯವರ ಸಾಹಿತ್ಯವನ್ನು ಓದಿ ಅವರ ಜೀವನಾನುಭವ ಹಾಗೂ ಕಾವ್ಯದ ಆಶಯಗಳನ್ನು ಅರಿತುಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಸ್ಥಳೀಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿರುಪಾಕ್ಷಪ್ಪ ಮಾಮನಿ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಐಕ್ಯೂಎಸಿ, ಕನ್ನಡ ವಿಭಾಗ, ಧಾರವಾಡದ ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಸವದತ್ತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಬೇಂದ್ರೆ ಕಾವ್ಯ ಓದು ಹಾಗೂ ದಿ. ವಿ. ಆರ್. ಹಿರೇಮಠ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ವಲಯದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಸುಧಾ ಕೌಜಗೇರಿ ಮಾತನಾಡಿ, ಬೇಂದ್ರೆಯವರು ಜೀವನದುದ್ದಕ್ಕೂ ಕಷ್ಟ-ಕಾರ್ಪಣ್ಯ, ನೋವು-ನಲಿವು ಹಾಗೂ ದುಃಖ-ದುಮ್ಮಾನಗಳನ್ನು ಅನುಭವಿಸಿ ಅವುಗಳನ್ನು ಕಾವ್ಯರೂಪದಲ್ಲಿ ಅಭಿವ್ಯಕ್ತಿಸಿದವರು. ಜನರು ಆಡುವ ಮಾತುಗಳಲ್ಲಿನ ಪದಗಳ ಮೂಲವನ್ನು ಹುಡುಕುವ ಸ್ವಭಾವ ಹೊಂದಿದ್ದ ಅವರು ಕವಿ, ವಿಮರ್ಶಕರಷ್ಟೇ ಅಲ್ಲದೆ ಮರಾಠಿ, ಇಂಗ್ಲಿಷ್, ಸಂಸ್ಕೃತ ಹಾಗೂ ಸಂಖ್ಯಾಶಾಸ್ತ್ರದಲ್ಲಿಯೂ ಪಾಂಡಿತ್ಯ ಹೊಂದಿದ್ದರು ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ಬೇಂದ್ರೆಯವರ ಕಾವ್ಯ ಯುವಜನರನ್ನು ತಲುಪಬೇಕಿದೆ. ಯುವಪೀಳಿಗೆ ಅವರ ಕವಿತೆಗಳನ್ನು ಓದಿ, ಅವುಗಳ ಆಶಯಗಳನ್ನು ಮನನ ಮಾಡಿಕೊಳ್ಳಬೇಕು. ಧಾರವಾಡದ ಸಾಹಿತ್ಯಕ ಬದುಕಿಗೆ ವಿಶಿಷ್ಟ ಕೊಡುಗೆ ನೀಡಿದ ಬೇಂದ್ರೆಯವರು ಸಾಗರದಂತೆ ಅಪಾರ ಸಾಹಿತ್ಯ ಸಂಪತ್ತನ್ನು ಹೊಂದಿರುವ ಅನನ್ಯ ಕವಿ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್ ಮಾತನಾಡಿ, ಕಾವ್ಯ ಓದುವುದು ಒಂದು ಕಲೆಯಾಗಿದ್ದು, ಅದನ್ನು ಸರಿಯಾಗಿ ಓದದಿದ್ದರೆ ಅದರ ಮಹತ್ವ ಓದುಗರಿಗೆ ತಲುಪುವುದಿಲ್ಲ. ಕಾವ್ಯವನ್ನು ಓದುವಾಗ ಅದು ಕೇಳುಗರ ಮನಸ್ಸನ್ನು ಮುಟ್ಟಿ, ಅವರೊಂದಿಗೆ ಸಂವಾದ ನಡೆಸುವಂತಿರಬೇಕು ಎಂದರು. ವಿದ್ಯಾರ್ಥಿಗಳಲ್ಲಿ ಕಾವ್ಯ ಓದುವ ಆಸಕ್ತಿ ಬೆಳೆಸುವ ಉದ್ದೇಶದಿಂದ ಟ್ರಸ್ಟ್ ವತಿಯಿಂದ ‘ಬೇಂದ್ರೆ ಕಾವ್ಯ ಓದು’ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಾಹಿತಿ ಡಾ. ವೈ. ಎಂ. ಯಾಕೊಳ್ಳಿ ಹಾಗೂ ಡಾ. ರಾಜಶೇಖರ ಬಿರಾದಾರ ಅವರು ಬೇಂದ್ರೆಯವರ ಸಾಹಿತ್ಯ ಮತ್ತು ಕಾವ್ಯದ ವೈಶಿಷ್ಟ್ಯಗಳ ಕುರಿತು ಉಪನ್ಯಾಸ ನೀಡಿದರು. ಗಾಯಕ ಸುನಿಲ್ ಪತ್ರಿಯವರು ಬೇಂದ್ರೆಯವರ ಕವಿತೆಗಳನ್ನು ಹಾಡಿದರು.
ಐಶ್ವರ್ಯ ಗುಡೆನವರ ಪ್ರಾರ್ಥಿಸಿದರು. ಕೆ. ರಾಮರೆಡ್ಡಿ ಸ್ವಾಗತಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್. ಆರ್. ಸವತಿಕರ, ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ವಿ. ಎಸ್. ಮೀಶಿ ಉಪಸ್ಥಿತರಿದ್ದರು. ಮೋಹನ್ ಬೆಣಚಮರಡಿ ನಿರೂಪಿಸಿದರು. ಡಾ. ಭಾರತಿ ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿ. ವಿ. ಬಿ. ನರಗುಂದ, ರಾಜಶೇಖರ ನಿಡವಣಿ, ಬಿ. ಎನ್. ಹೊಸೂರ, ಪ್ರಕಾಶ ಬಾಳಿಕಾಯಿ, ಬಿ. ಕೆ. ಕಠಾರೆ, ಜಿ. ವೈ. ಕರಮಲ್ಲಪ್ಪನವರ, ಪ್ರಕಾಶ ಕಡಪಟ್ಟಿ, ಎಂ. ಆರ್. ದೊಡ್ಡಮನಿ, ಡಾ. ಪ್ರೇಮಾ ಯಾಕೊಳ್ಳಿ, ಡಾ. ಸುಮಾ ಸಾವಂತ, ಡಾ. ಎ. ಎಫ್. ಬದಾಮಿ ಸೇರಿದಂತೆ ವಿವಿಧ ಕಾಲೇಜುಗಳ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.



