ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳಲ್ಲಿ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪ ದಾಖಲಿಸಿದ್ದರು ಎಂಬ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೊರಬಿದ್ದಿತು. ಸೆ.23ರಂದು ಸಿಡಿದ ಈ ಬಾಂಬ್, ಮತದಾರರ ಸೇರ್ಪಡೆ-ಅಳಿಸುವಿಕೆ, ಫಾರ್ಮ್-6 ಬದಲಾವಣೆ, ಡೇಟಾಬೇಸ್ ಕೇಂದ್ರೀಕರಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆಯೋಗದೊಳಗೇ ಪ್ರಶ್ನೆಗಳು ಎದ್ದಿರುವುದನ್ನು ಬಯಲಿಗೆಳೆಯಿತು. ವರದಿ ಬೆನ್ನಲ್ಲೇ ವಿರೋಧ ಪಕ್ಷಗಳ ಆಕ್ರೋಶ, ದೇಶಾದ್ಯಂತ ಪ್ರತಿಭಟನೆ, ಸಿಇಸಿ ವಿರುದ್ಧ ಸಂಸದೀಯ ಕ್ರಮದ ಸಿದ್ಧತೆ, ಮಿತ್ರಪಕ್ಷಗಳಿಂದ ಸ್ಪಷ್ಟನೆಗೆ ಒತ್ತಾಯ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಐಟಿ ತನಿಖೆಗೆ ಅರ್ಜಿ ಸಲ್ಲಿಕೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳ ಸಂಪೂರ್ಣ ಚಿತ್ರಣ ಇಲ್ಲಿದೆ.
ಸೆ.23ರಂದು ‘14 ಆಕ್ಷೇಪ’ಗಳ ಸ್ಫೋಟ
- ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ತನಿಖಾ ವರದಿ ಇಡೀ ವಿವಾದದ ಕೇಂದ್ರಬಿಂದುವಾಯಿತು. ವರದಿ ಪ್ರಕಾರ, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ, ಕಳೆದ 10 ತಿಂಗಳಲ್ಲಿ ಚುನಾವಣಾ ಆಯೋಗದ ಹಲವು ನಿರ್ಧಾರಗಳು ಮತ್ತು ಆದೇಶಗಳ ಬಗ್ಗೆ ಕನಿಷ್ಠ 14 ಬಾರಿ ಅಧಿಕೃತವಾಗಿ ಲಿಖಿತ ಆಕ್ಷೇಪ ದಾಖಲಿಸಿದ್ದರು. ಅದರಲ್ಲೂ ಒಂದೇ ದಿನ ನಾಲ್ಕು ಬಾರಿ ಆಕ್ಷೇಪ ದಾಖಲಿಸಲಾಗಿತ್ತು.
- ಮತದಾರರ ಹೆಸರು ಸೇರ್ಪಡೆ, ಹೆಸರು ಅಳಿಸುವಿಕೆ ಮತ್ತು ಮರುಸ್ಥಾಪನೆ, ಎಸ್‌ಐಆರ್ ಪ್ರಕ್ರಿಯೆ, ಫಾರ್ಮ್-6 ಬದಲಾವಣೆ ಹಾಗೂ ಮತದಾರರ ಡೇಟಾಬೇಸ್ ನಿರ್ವಹಣೆ ಪ್ರಮುಖ ವಿಚಾರಗಳಾಗಿದ್ದವು. ಕೆಲವು ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೇ ತೆಗೆದುಕೊಳ್ಳಲಾಗಿದೆ ಎಂದು ಇಬ್ಬರು ಆಯುಕ್ತರು ಆಕ್ಷೇಪಿಸಿದ್ದಾಗಿ ವರದಿ ದಾಖಲಿಸಿತು.
- ಮತದಾರರ ಡೇಟಾಬೇಸ್ ನಿರ್ವಹಣೆಯ ವಿಚಾರವೂ ಆಯೋಗದೊಳಗಿನ ಭಿನ್ನಾಭಿಪ್ರಾಯದ ಪ್ರಮುಖ ಅಂಶವಾಗಿತ್ತು. ರಾಜ್ಯ ಮಟ್ಟದ ಚುನಾವಣಾ ಅಧಿಕಾರಿಗಳ ಪಾತ್ರವನ್ನು ಬದಿಗೊತ್ತಿ ಡೇಟಾಬೇಸ್ ಪ್ರವೇಶ ಮತ್ತು ನಿಯಂತ್ರಣ ದೆಹಲಿಯಲ್ಲಿ ಕೇಂದ್ರೀಕೃತವಾಗುತ್ತಿರುವ ಬಗ್ಗೆ ಇಬ್ಬರು ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿತು.
- ಚುನಾವಣಾ ಸಾಫ್ಟ್‌ವೇರ್‌ನ ಸಮಗ್ರತೆ ಹಾಗೂ ಡೇಟಾ ಸುರಕ್ಷತೆ ಬಗ್ಗೆಯೂ ಆತಂಕ ವ್ಯಕ್ತವಾಗಿತ್ತು. ಈ ವಿಚಾರದಲ್ಲಿ ಇಬ್ಬರು ಆಯುಕ್ತರು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿಯನ್ನೂ ಸಂಪರ್ಕಿಸಿದ್ದರು.
- ಹೊಸ ಮತದಾರರ ನೋಂದಣಿಗೆ ಬಳಸುವ ಫಾರ್ಮ್-6ರಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದ ಹೊಸ ಅಂಶಗಳನ್ನು ಸೇರಿಸಿರುವುದು ಆಯೋಗದೊಳಗೇ ವಿವಾದಕ್ಕೆ ಕಾರಣವಾಗಿತ್ತು.
- ಹೊಸ ಮತದಾರರು ಅಥವಾ ಅವರ ಪೋಷಕರು/ಅಜ್ಜ–ಅಜ್ಜಿ ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಯಲ್ಲಿ ಇದ್ದಾರೆಯೇ ಎಂಬುದನ್ನು ಕೇಳುವ ಅಂಶ ಸೇರಿಸಲಾಗಿತ್ತು.
- ಕಾನೂನುಬದ್ಧ ನಿಯಮ ತಿದ್ದುಪಡಿ ಮಾಡದೆ ಫಾರ್ಮ್ ಬದಲಾಯಿಸುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಈ ಬದಲಾವಣೆ ಅನಧಿಕೃತ ಹಾಗೂ ಕಾನೂನುಬದ್ಧ ಆಧಾರವಿಲ್ಲದ್ದು ಎಂದು ಸಂಧು ಮತ್ತು ಜೋಶಿ ಆಕ್ಷೇಪಿಸಿದ್ದರು.
ಸೆ.23&24 ರಂದು ವರದಿ ಹೊರಬಂದ ಬೆನ್ನಲ್ಲೇ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಜ್ಞಾನೇಶ್ ಕುಮಾರ್ ವಿರುದ್ಧ ನೇರ ದಾಳಿ ಆರಂಭಿಸಿದವು.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ, ಚುನಾವಣಾ ಆಯೋಗದ ಇತ್ತೀಚಿನ ನಿರ್ಧಾರಗಳನ್ನು ಸಂಸದೀಯ ಸಮಿತಿಯಿಂದ ಪರಿಶೀಲಿಸಬೇಕು ಎಂದರು. ಚುನಾವಣಾ ಅಕ್ರಮಗಳ ಬಗ್ಗೆ ತಿಳಿದಿದ್ದರೂ ಕ್ರಮ ಕೈಗೊಳ್ಳದಿರುವುದು ದ್ರೋಹ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದರು. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗ್ಯಾನೇಶ್ ಕುಮಾರ್ ಅವರನ್ನು ಬಂಧಿಸಿ, ಎಸ್‌ಐಆರ್ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗ್ಯಾನೇಶ್ ಕುಮಾರ್ ಸಿಇಸಿಯಾಗಿರುವವರೆಗೆ ಚುನಾವಣೆ ನಡೆಸಬಾರದು ಎಂದರು. ಗ್ಯಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದರು. ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದರು. ಎಂ.ಕೆ. ಸ್ಟಾಲಿನ್, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಹಾಗೂ ಎಸ್‌ಐಆರ್ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ ಬಂಧಿಸಬೇಕು ಎಂದರು. ರಾಜ್ಯಸಭಾ ಸಂಸದ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್, ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೇರಿದಂತೆ ದೇಶಾದ್ಯಂತ ಹಲವಾರು ನಾಯಕರು ಸಿಇಸಿ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿದರು. ಎಸ್‌ಐಆರ್ ಬಳಿಕ ನಡೆದ ಚುನಾವಣೆಗಳನ್ನು ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸೆ.24ರಂದು ವಿರೋಧ ಪಕ್ಷಗಳು ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಸಂಸತ್ತಿನ ಎರಡೂ ಸದನಗಳಲ್ಲಿ ನೋಟಿಸ್ ನೀಡುವ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದವು. ಕಾನೂನು ತಜ್ಞರೊಂದಿಗೆ ನೋಟಿಸ್‌ನ ಕರಡು ಸಿದ್ಧಪಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದ್ದವು. ಅಂದರೆ, ಪ್ರತಿಭಟನೆ ಮತ್ತು ರಾಜಕೀಯ ಹೇಳಿಕೆಗಳ ಹಂತದಿಂದ ವಿವಾದ ಸಂಸದೀಯ ಪ್ರಕ್ರಿಯೆಯ ಹಂತಕ್ಕೆ ಕಾಲಿಟ್ಟಿತು. ಈ ಹಿಂದೆ ವಿರೋಧ ಪಕ್ಷಗಳು ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದವು. ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರಿಂದ ಸಹಿ ಸಂಗ್ರಹಿಸಿ ನೋಟಿಸ್ ನೀಡಲಾಗಿತ್ತು. ಹೀಗಾಗಿ ಸೆ.24ರಂದು ಆರಂಭವಾದ ಹೊಸ ಪ್ರಯತ್ನವನ್ನು ವಿರೋಧ ಪಕ್ಷಗಳು ಹೊಸ ರಾಜಕೀಯ ಮತ್ತು ಸಂಸದೀಯ ಒತ್ತಡದ ಹಂತವಾಗಿ ಮುಂದುವರೆಸಿದವು.
ಸೆ.24ರಂದು ವಿರೋಧ ಪಕ್ಷಗಳ ಆರೋಪಗಳ ನಡುವೆ ಚುನಾವಣಾ ಆಯೋಗ ತನ್ನ ನಿಲುವು ಸ್ಪಷ್ಟಪಡಿಸಲು ಮುಂದಾಯಿತು. ಆಯೋಗದ ಪ್ರಕಾರ, ಮೂವರು ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯ ಅಥವಾ ಆಂತರಿಕ ಟಿಪ್ಪಣಿಗಳು ಇರುವುದೇ ಅಸಾಮಾನ್ಯವಲ್ಲ. ಅವು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಭಾಗ. ಎಸ್‌ಐಆರ್ ಸೇರಿದಂತೆ ಪ್ರಮುಖ ನಿರ್ಧಾರಗಳು ಪೂರ್ಣ ಆಯೋಗದ ಅನುಮೋದನೆಯೊಂದಿಗೆ ಮತ್ತು ಸರ್ವಾನುಮತದಿಂದಲೇ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ವಾದಿಸಿತು.
ಇದನ್ನೂ ಓದಿ: ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!
ವಿವಾದ ಬೀದಿ ಹೋರಾಟಕ್ಕೂ ಇಳಿಯಿತು. ಸೆ.25ರಂದು ಕಾಂಗ್ರೆಸ್ ದೇಶದ ಹಲವು ಭಾಗಗಳಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿತು. ಗ್ಯಾನೇಶ್ ಕುಮಾರ್ ರಾಜೀನಾಮೆ, ಎಸ್‌ಐಆರ್ ವಿರುದ್ಧ ಕ್ರಮ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಆಗ್ರಹಿಸಲಾಯಿತು. ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದವು. ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಿಇಸಿ ರಾಜೀನಾಮೆಗೆ ಆಗ್ರಹಿಸಿದರು.
ವಿರೋಧ ಪಕ್ಷಗಳ ಆರೋಪಗಳಿಗೆ ಬಿಜೆಪಿ ನಾಯಕರು ಸಿಇಸಿಯನ್ನು ಬೆಂಬಲಿಸಿದರೂ, ಕೆಲವು NDA ಮಿತ್ರಪಕ್ಷಗಳ ನಾಯಕರು ಚುನಾವಣಾ ಆಯೋಗದಿಂದ ಹೆಚ್ಚಿನ ಸ್ಪಷ್ಟನೆ ಮತ್ತು ಪಾರದರ್ಶಕತೆ ಅಗತ್ಯವಿದೆ ಎಂದು ಹೇಳಿದ್ದಾರೆ. ಚಿರಾಗ್ ಪಾಸ್ವಾನ್ ಸೇರಿದಂತೆ ಕೆಲವು ಮಿತ್ರಪಕ್ಷದ ನಾಯಕರು ಮತದಾರರಲ್ಲಿ ಅನುಮಾನ ಮೂಡದಂತೆ ಆಯೋಗ ತನ್ನ ನಿಲುವನ್ನು ವಿವರಿಸಬೇಕು ಎಂದು ಹೇಳಿದ್ದಾರೆ.
ಸೆ.25ರಂದು ವಿವಾದ ಸುಪ್ರೀಂ ಅಂಗಳಕ್ಕೆ
ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಗ್ಯಾನೇಶ್ ಕುಮಾರ್ ವಿರುದ್ಧ ತನಿಖೆ ನಡೆಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿಯಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ.
- ಎಸ್‌ಐಆರ್ ಸಂದರ್ಭದಲ್ಲಿ 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13 ಕೋಟಿ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಹೊರಬಂದಿರುವ ಬಗ್ಗೆ ತನಿಖೆ.
- ಚುನಾವಣಾ ಆಯೋಗದ ಡೇಟಾಬೇಸ್‌ಗಳ ಎಂಡ್-ಟು-ಎಂಡ್ ಆಡಿಟ್.
- ಇತರ ಇಬ್ಬರು ಆಯುಕ್ತರ ಸಮ್ಮತಿಯಿಲ್ಲದೆ ತೆಗೆದುಕೊಳ್ಳಲಾಗಿದೆ ಎನ್ನಲಾದ ನಿರ್ಧಾರಗಳ ಪರಿಶೀಲನೆ.
- ಮೂಲ ಫಾರ್ಮ್-6 ಅನ್ನು ಮರುಸ್ಥಾಪಿಸುವ ಬೇಡಿಕೆ.
- ಮತದಾರರ ಪಟ್ಟಿಗೆ ಸಂಬಂಧಿಸಿದ ಸಾಫ್ಟ್‌ವೇರ್ ಬದಲಾವಣೆಗಳ ತನಿಖೆ.
- ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮದ ಬೇಡಿಕೆ.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿದ ಬಳಿಕ ಮರುಸೇರ್ಪಡೆಗಾಗಿ ದೊಡ್ಡ ಪ್ರಮಾಣದಲ್ಲಿ ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಹೊಸ ಅರ್ಜಿಯಲ್ಲೂ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗದ ಹೆಸರಿನಲ್ಲಿ 16.10 ಲಕ್ಷ ಮೇಲ್ಮನವಿಗಳನ್ನು ಸಲ್ಲಿಸಿರುವ ಕುರಿತು ಆರೋಪ ಮಾಡಲಾಗಿದೆ.
ವಿರೋಧ ಪಕ್ಷಗಳ ಪ್ರಚಾರದಲ್ಲಿ ಈಗ ‘ವೋಟ್ ಚೋರಿ’, ‘ಎಸ್‌ಐಆರ್ ಅಕ್ರಮ’, ‘ಇಸಿ ವಿಶ್ವಾಸಾರ್ಹತೆ’ ಪ್ರಮುಖ ರಾಜಕೀಯ ವಿಷಯಗಳಾಗಿ ಮುಂದುವರಿದಿವೆ.
ಸೆ.26ರಂದು ಮಮತಾ-ಸಿಪಿಐ(ಎಂ)ನ ದಶಕಗಳ ವೈಷಮ್ಯಕ್ಕೆ ಬ್ರೇಕ್
ವಿವಾದದ ಅತ್ಯಂತ ಗಮನ ಸೆಳೆದ ರಾಜಕೀಯ ಬೆಳವಣಿಗೆಗಳಲ್ಲಿ ಇದೂ ಒಂದು. ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಎದುರಾಳಿಗಳಾಗಿರುವ ಮಮತಾ ಬ್ಯಾನರ್ಜಿ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಶುಕ್ರವಾರ ದೂರವಾಣಿಯಲ್ಲಿ ಮಾತನಾಡಿದರು. ಚುನಾವಣಾ ಆಯೋಗದ ವಿಶ್ವಾಸಾರ್ಹತೆ, ಚುನಾವಣಾ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ವಿರೋಧ ಪಕ್ಷಗಳು ಒಟ್ಟಾಗಿ ಬರಬೇಕಿದೆ ಎಂಬ ವಿಚಾರ ಚರ್ಚೆಯಾಯಿತು. ಮಮತಾ, ಇಂಡಿಯಾ ಮೈತ್ರಿಕೂಟದ ಸಭೆಯನ್ನು ಶೀಘ್ರ ಕರೆಯುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿರುವುದಾಗಿ ಬೇಬಿ ಅವರಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: ಸಿಇಸಿ ಗ್ಯಾನೇಶ್ ಕುಮಾರ್ ವಜಾಕ್ಕೆ ಆಗ್ರಹ; ಸಂಸತ್ತಿನಲ್ಲಿ ‘ಮಹಾಭಿಯೋಗ’ ಸಲ್ಲಿಕೆಗೆ ವಿಪಕ್ಷಗಳ ನಿರ್ಧಾರ
ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ Cockroach Janata Party (CJP) ಕೂಡ ಅಖಾಡಕ್ಕಿಳಿದಿದೆ. ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರಾಜೀನಾಮೆ ನೀಡದಿದ್ದರೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
ಈಗ ವಿವಾದದ ಕೇಂದ್ರದಲ್ಲಿರುವ 7 ಪ್ರಶ್ನೆಗಳು
ಇಬ್ಬರು ಆಯುಕ್ತರು ದಾಖಲಿಸಿದ 14 ಆಕ್ಷೇಪಗಳಲ್ಲಿ ಎಷ್ಟು ಪರಿಹಾರಗೊಂಡವು?, ಸಿಇಸಿ ನಿಜವಾಗಿಯೂ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡರೇ?, ಎಲ್ಲ ನಿರ್ಧಾರಗಳೂ ಸರ್ವಾನುಮತದಿಂದಲೇ ಆಗಿವೆ ಎಂಬ ECIಯ ಸ್ಪಷ್ಟನೆಗೆ ಕ್ಲಾರಿಟಿ ಇದೆಯೇ?, ಫಾರ್ಮ್-6 ಅನ್ನು ಬದಲಾಯಿಸಲು ಕಾನೂನುಬದ್ಧ ಅಧಿಕಾರ ಇತ್ತೇ?, 13 ಕೋಟಿ ಹೆಸರುಗಳ ಕಥೆ ಏನು?, ಮತದಾರರ ಡೇಟಾ ಯಾರ ನಿಯಂತ್ರಣದಲ್ಲಿದೆ?, ಸಿಇಸಿ ವಿರುದ್ಧ ಸಂಸದೀಯ ಕ್ರಮ ಎಲ್ಲಿಗೆ ಹೋಗಲಿದೆ?, ಸುಪ್ರೀಂ ಕೋರ್ಟ್ ಏನು ಮಾಡಲಿದೆ? ಸಲ್ಲಿಕೆಯಾಗಿರುವ ಅರ್ಜಿಗಳ ಮೇಲಿನ ನ್ಯಾಯಾಲಯದ ಮುಂದಿನ ಕ್ರಮ ಈ ವಿವಾದಕ್ಕೆ ಮತ್ತೊಂದು ತಿರುವು ನೀಡಲಿದೆ.




