ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮತ್ತು ಎಸ್‌ಐಆರ್ ರದ್ದತಿಗೆ ಒತ್ತಾಯಿಸಿ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿವೆ. ಸೋಮವಾರ, ಕೇಂದ್ರ ದೆಹಲಿಯಿಂದ ಸುಪ್ರೀಂ ಕೋರ್ಟ್‌ವರೆಗೆ ಬೃಹತ್ ಜಾಥಾ ನಡೆಸಿದ ವಿಪಕ್ಷಗಳ ನಾಯಕರು, ಗ್ಯಾನೇಶ್ ಕುಮಾರ್ ವಜಾ ಮತ್ತು ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ, ಜಂಟಿ ಅರ್ಜಿ ಸಲ್ಲಿಸಿದ್ದಾರೆ.
ಸಾವಿರಾರು ಜನರು ಭಾಗವಹಿಸಿದ ಈ ಜಾಥಾ ವಿರೋಧ ಪಕ್ಷಗಳ ಬಲವರ್ಧನೆ, ಕಾರ್ಯಕರ್ತರ ಸಜ್ಜುಗೊಳಿಸುವಿಕೆ ಹಾಗೂ ಸಾರ್ವಜನಿಕರ ಸ್ವಯಂಪ್ರೇರಿತ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ರಾಜಧಾನಿಯಲ್ಲಿ ಚಲನವಲನಗಳನ್ನು ನಿರ್ಬಂಧಿಸಿ, ಪತ್ರಕರ್ತರು ಸೇರಿದಂತೆ ಹಲವರನ್ನು ಬಂಧಿಸಿ ದೆಹಲಿಯನ್ನು ಕೋಟೆಯನ್ನಾಗಿ ಪರಿವರ್ತಿಸಿದ್ದ ಮೋದಿ ಸರ್ಕಾರಕ್ಕೆ ಈ ಪ್ರತಿಭಟನೆಗೆ ಸವಾಲು ಹಾಕಿದೆ.
ಕಳೆದು ಮೂರು ದಿನಗಳಿಂದ ಮೊಳೆ ಹಾಸುಗಳು, ಬ್ಯಾರಿಕೇಡ್‌ಗಳು ಹಾಗೂ ಕಬ್ಬಿಣದ ಸರಳುಗಳಿಂದ ತಡೆಗೋಡೆ ಕಟ್ಟಿಕೊಂಡಿದ್ದ ದೆಹಲಿ ಪೊಲೀಸರು, ಆರ್‌ಎಎಫ್ (Rapid Action Force) ಹಾಗೂ ಇತರ ಕೇಂದ್ರ ಪಡೆಗಳು ಸೋಮವಾರ ಪಕ್ಕಕ್ಕೆ ಸರಿದಿದ್ದು, ಜಾಥಾಗೆ ಹಾದಿ ಮಾಡಿಕೊಟ್ಟಿವೆ. ಜಾಥಾದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೆ ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎನ್‌ಸಿಪಿ(ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಸಿಪಿಐ(ಎಂ) ನಾಯಕ ಎಂ.ಎ. ಬೇಬಿ, ಸಿಪಿಐ(ಎಂಎಲ್) ನಾಯಕ ದೀಪಂಕರ್ ಭಟ್ಟಾಚಾರ್ಯ, ಟಿಎಂಸಿ ಸಂಸದೆ ಸಾಗರಿಕ ಘೋಷ್ ಹಾಗೂ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ‘ಇಂಡಿಯಾ’ ಕೂಟದ ಪ್ರಮುಖ ನಾಯಕರು ಭಾಗವಹಿಸಿದ್ದರು.
ಈ ಮೆರವಣಿಗೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಬೃಹತ್ ಜಾಥಾದಲ್ಲಿ ಭಾಗಿಯಾಗುವಂತೆ ನಾಗರಿಕರಿಗೆ ಕರೆ ನೀಡಿದ್ದರು. ಮುಖ್ಯವಾಗಿ, “ಗ್ಯಾನೇಶ್ ಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ‘ಅಪ್ರೂವರ್’ (ಸರ್ಕಾರಿ ಸಾಕ್ಷಿ) ಆಗಬೇಕು“ ಎಂದು ಆಗ್ರಹಿಸಿದ್ದರು.
“ಗ್ಯಾನೇಶ್ ಕುಮಾರ್ ಅವರಿಗೆ ನನ್ನದೊಂದು ಸಂದೇಶ: ನೀವು ಅಪ್ರೂವರ್ ಆಗಿ. ನೀವು ಅಪರಾಧ ಎಸಗಿದ್ದೀರಿ. ಸತ್ಯ ಹೇಳಬೇಕೆಂದರೆ, ನೀವು ಮುಖ್ಯ ಅಪರಾಧಿಯಲ್ಲ. ನೀವು ತಪ್ಪೆಸಗಿದ್ದೀರಿ ನಿಜ. ಆದರೆ, ಇದರ ಹಿಂದಿರುವ ಸೂತ್ರಧಾರ ನೀವಲ್ಲ. ನೀವು ಮಾಡಿದ್ದರ ಹಿಂದೆ ಯಾರಿದ್ದಾರೋ ಅವರ ಬೆನ್ನತ್ತಿ ನಾವು ಬಂದಿದ್ದೇವೆ. ರಾಜೀನಾಮೆ ನೀಡಿ ಇದರಿಂದ ಹೊರಬರುವುದು ನಿಮಗೆ ಸುಲಭದ ಹಾದಿ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ಎಸ್‌ಐಆರ್ ಅಕ್ರಮಗಳಿಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನಿಜವಾದ ಸೂತ್ರಧಾರರು ಎಂದು ಆರೋಪಿಸಿದ ರಾಹುಲ್ ಗಾಂಧಿ, “ಗ್ಯಾನೇಶ್ ಕುಮಾರ್ ಅವರಿಗೆ ರಾತ್ರಿ ನಿದ್ರೆ ಬರುತ್ತಿಲ್ಲ. ಮುಖ್ಯ ಚುನಾವಣಾ ಆಯುಕ್ತರಾಗಿ ನೀವು ಉಳಿಯುವುದಿಲ್ಲ ಎಂಬುದನ್ನು ನಾನು ಅವರಿಗೆ ನೇರವಾಗಿ ಹೇಳುತ್ತಿದ್ದೇನೆ,” ಎಂದರು.
ಅಕ್ಟೋಬರ್ 10ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 20,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದನ್ನು ಸುದ್ಧಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದ ರಾಹುಲ್ ಗಾಂಧಿ, “ದೆಹಲಿಯನ್ನು ಏಕೆ ಜೈಲಿನಂತೆ ಪರಿವರ್ತಿಸಲಾಗುತ್ತಿದೆ. ಜನರು ದೆಹಲಿ ತಲುಪದಂತೆ ತಡೆಯಲಾಗುತ್ತಿದೆ. ರೈಲು ಮತ್ತು ಬಸ್‌ಗಳನ್ನು ತಡೆಯಲಾಗುತ್ತಿದೆ. ದೆಹಲಿಯನ್ನು ಕೋಟೆಯನ್ನಾಗಿ ಮಾಡಲಾಗಿದೆ. ದೆಹಲಿ ಏಕಾಗಿ ಜೈಲಿನಂತಾಗಿದೆ” ಎಂದು ಕೇಳಿದ್ದರು.
ಪತ್ರಿಕಾಗೋಷ್ಠಿ ಬಳಿಕ ಮೆರವಣಿಗೆ ಆರಂಭವಾಗಬೇಕಿದ್ದ ಬರಖಂಬಾ ರಸ್ತೆಗೆ ಕಾನ್ಸ್ಟಿಟ್ಯೂಷನ್ ಕ್ಲಬ್‌ನಿಂದ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ನಾಯಕರು ಮತ್ತು ಸಂಸದರು ಬಸ್‌ಗಳಲ್ಲಿ ತೆರಳಿದರು. ಬಸ್‌ನಲ್ಲಿ ಗಾಂಧಿಯವರು ಒಗ್ಗಟ್ಟಿನ ಪ್ರದರ್ಶನವಾಗಿ ‘ಇಂಡಿಯಾ’ ಮೈತ್ರಿಕೂಟದ ಇತರ ನಾಯಕರೊಂದಿಗೆ ಕುಳಿತಿದ್ದರು. ಅವರೊಂದಿಗೆ ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್, ಆರ್‌ಜೆಡಿಯ ತೇಜಸ್ವಿ ಯಾದವ್, ಶಿವಸೇನೆಯ (ಯುಬಿಟಿ) ಸಂಸದ ಸಂಜಯ್ ರಾವತ್, ಎಂ.ಎ.ಬೇಬಿ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಪಿಐ ಸಂಸದ ಪಿ. ಸಂತೋಷ್ ಕುಮಾರ್ ಹಾಗೂ ಜೆಎಂಎಂ ಸಂಸದೆ ಮಹುವಾ ಮಾಂಝಿ ಇದ್ದರು. ಮಾತ್ರವಲ್ಲದೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಾದ ಕರ್ನಾಟಕದ ಡಿ.ಕೆ. ಶಿವಕುಮಾರ್ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಕೂಡ ಇದ್ದರು.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಉಪಸ್ಥಿತರಿದ್ದರೂ, ಕೋಲ್ಕತ್ತಾಗೆ ಪ್ರಯಾಣಿಸಬೇಕಿದ್ದರಿಂದ ಮಾರ್ಚ್‌ನಲ್ಲಿ ಭಾಗವಹಿಸಲಿಲ್ಲ. ಇತ್ತ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸಂಜೆ ಸುಮಾರು 4 ಗಂಟೆಗೆ ಮೆರವಣಿಗೆಯ ಅಂತಿಮ ಹಂತದಲ್ಲಿ ಜತೆಗೂಡಿದರು.
ಗಮನಾರ್ಹವಾಗಿ, ದೆಹಲಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಯವಜನರ ಪ್ರತಿಭಟನೆಯ ಪ್ರಮುಖ ಮುಖವಾಗಿ ಹೊರಹೊಮ್ಮಿರುವ AISA ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಮತ್ತು AISAಯ ಮಾಜಿ ಅಧ್ಯಕ್ಷ, ಸಿಪಿಐ(ಎಂಎಲ್) ನಾಯಕ ಎನ್. ಸಾಯಿ ಬಾಲಾಜಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ಕೂಡ ರಾಹುಲ್ ಗಾಂಧಿ ಅವರಿದ್ದ ಬಸ್‌ನಲ್ಲಿದ್ದರು.
ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಗುಂಪುಗಳು ಒಂದಾಗುತ್ತಿರುವುದನ್ನು ತೋರಿಸುವ ದೃಶ್ಯ ಅದಾಗಿತ್ತು. ರಾಹುಲ್ ಗಾಂಧಿ ಅವರ ಉದ್ದೇಶವೂ ಅದೇ ಆಗಿತ್ತು. ಆದ್ದರಿಂದಲೇ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ನೇಹಾ ಬೋರಾ ಮತ್ತು ಇತರ ವಿದ್ಯಾರ್ಥಿ ನಾಯಕರನ್ನು ಬಸ್‌ನಲ್ಲಿ ಸೇರಿಸಿಕೊಳ್ಳಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ
ಇದೇ ಎಸ್‌ಐಆರ್ ವಿರುದ್ಧ ಈ ಹಿಂದೆಯೂ ಹಲವು ಬಾರಿ ‘ಇಂಡಿಯಾ’ ಮೈತ್ರಿಕೂಟವು ದೆಹಲಿಯಲ್ಲಿ ಬೀದಿಗಿಳಿದು ಪ್ರತಿಭಟಿಸಿತ್ತು. ಚುನಾವಣಾ ಆಯೋಗಕ್ಕೆ ತೆರಳುತ್ತಿದ್ದ ಜಾಥಾವನ್ನು ತಡೆದಾಗ ಆಕಾಶವಾಣಿ ಭವನದ ಅವರಣದಲ್ಲಿ ರಾಹುಲ್ ಗಾಂಧಿ ಅವರು 8 ಗಂಟೆಗಳ ಕಾಲ ಧರಣಿ ಕುಳಿತಿದ್ದರು. ಮಾರನೇ ದಿನ, ಜಂತರ್ ಮಂತರ್ ತಲುಪಲು ಯತ್ನಿಸಿದಾಗಲೂ ಪೊಲೀಸರು ವಿಪಕ್ಷಗಳ ನಾಯಕರನ್ನು ಬಂಧಿಸಿದ್ದರು. ಅದಾದ ನಂತರ ಶುಕ್ರವಾರದಂದು ಪ್ರತಿಭಟನಾಕಾರರು ರಾಜ್‌ಘಾಟ್‌ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಸಂಕೇತವಾಗಿ ಭೇಟಿ ನೀಡಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಸೋಮವಾರದ ಪ್ರತಿಭಟನಾ ಮೆರವಣಿಗೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಮುಕ್ತಾಯಗೊಂಡಿತು. ರಾಹುಲ್ ಗಾಂಧಿ ಮತ್ತು ಇತರ ನಾಯಕರು ಬಸ್‌ನ ಮೇಲ್ಛಾವಣಿಯ ಮೇಲೆ ಕುಳಿತು ಅಲ್ಲಿಗೆ ಆಗಮಿಸಿದರು. ಜಂಟಿ ಅರ್ಜಿಯನ್ನು ಈಗಾಗಲೇ ಆನ್‌ಲೈನ್ ಮೂಲಕ ಸಲ್ಲಿಸಲಾಗಿದ್ದರೂ, ನಾಯಕರು ಖುದ್ದಾಗಿ ಬಂದು ಹಸ್ತಪ್ರತಿಗೆ ಸಹಿ ಹಾಕಿ, ಮತ್ತೊಮ್ಮೆ ಸಲ್ಲಿಸಿದರು.
ಈ ಅರ್ಜಿಯಲ್ಲಿ ‘ಎಸ್‌ಐಆರ್’ ಪ್ರಕ್ರಿಯೆಯನ್ನು ತಕ್ಷಣವೇ ಅಮಾನತುಗೊಳಿಸಬೇಕು. ಜೊತೆಗೆ, 24.6.2025ರಿಂದ ಎಸ್‍ಐಆರ್ ನಡೆಸಲು ತೆಗೆದುಕೊಂಡ ನಿರ್ಧಾರಕ್ಕೆ ಸಂಬಂಧಿಸಿದ ಎಲ್ಲ ಕಡತಗಳು ಮತ್ತು ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಬೇಕು, ಎಸ್‍ಐಆರ್ ನಡೆಸುವಾಗ ಚುನಾವಣಾ ಆಯೋಗ ತೆಗೆದುಕೊಂಡ ನಿರ್ಧಾರಗಳು ಬಹುಮತದ ನಿರ್ಧಾರಗಳಾಗಿದ್ದವೇ ಎಂಬುದನ್ನು ಪರಿಶೀಲಿಸಬೇಕು, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ಸಮಿತಿಯಿಂದ ಎಸ್‌ಐಆರ್‌ನ ಸ್ವತಂತ್ರ ಆಡಿಟ್ ನಡೆಸಬೇಕು, ಜಾಗತಿಕ ಅತ್ಯುತ್ತಮ ಮಾನದಂಡಗಳಿಗೆ ಅನುಗುಣವಾಗಿ ಇವಿಎಂ ಬಳಕೆಯನ್ನು ಪರಿಶೀಲಿಸಬೇಕು ಹಾಗೂ ‘ಫಾರ್ಮ್ 6’ ಚುನಾವಣಾ ಕಾಯ್ದೆಗಳಿಗೆ ಬದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.



