ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಇದರ ಬೆನ್ನಲ್ಲೇ, ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್ ಮಂತರ್ ಸುತ್ತಮುತ್ತ ಶುಕ್ರವಾರ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಮತ್ತೊಂದೆಡೆ, ಅಸ್ಸಾಂನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೌರವ್ ಗೊಗೊಯ್ ಸೇರಿದಂತೆ ಹಲವು ಹಿರಿಯ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನಾಕಾರರನ್ನು ನಿರ್ಬಂಧಿಸಲು ಹಲವು ಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಪ್ರವೇಶ ದ್ವಾರಗಳನ್ನು ಮುಚ್ಚಲು ಬಸ್‌ಗಳನ್ನು ಅಡ್ಡಲಾಗಿ ನಿಲ್ಲಿಸಲಾಗಿದೆ ಹಾಗೂ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ರಾಯ್ಸಿನಾ ರಸ್ತೆಯಿಂದ ಜಂತರ್ ಮಂತರ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು.
ಸಿಇಸಿ ಜ್ಞಾನೇಶ್ ಕುಮಾರ್ ಅವರು ಶನಿವಾರದೊಳಗೆ ರಾಜೀನಾಮೆ ನೀಡದಿದ್ದರೆ, ಅಕ್ಟೋಬರ್ 2ರಂದು ದೇಶಾದ್ಯಂತ ‘ಜಂತರ್ ಮಂತರ್ 2.0’ ಮಾದರಿಯ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್ – SIR) ಪ್ರಕ್ರಿಯೆ ವಿರೋಧಿಸಿ ದೆಹಲಿ ಕಾಂಗ್ರೆಸ್ ಕೂಡ ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಕಚೇರಿಯ ಹೊರಭಾಗದಲ್ಲೂ ಭದ್ರತೆ ಹೆಚ್ಚಿಸಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿತ್ತು. ಮತದಾರರ ನೋಂದಣಿ, ಹೆಸರು ಕೈಬಿಡುವುದು ಮತ್ತು ಮರುಸೇರ್ಪಡೆ, ಹಾಗೂ ಡೇಟಾಬೇಸ್ ಪ್ರವೇಶಕ್ಕೆ ಸಂಬಂಧಿಸಿದ ನಿರ್ಧಾರಗಳ ಕುರಿತು ಆಯುಕ್ತರು ಕಳವಳ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಚುನಾವಣಾ ಆಯೋಗದೊಳಗಿನ ಈ ಆಂತರಿಕ ಭಿನ್ನಾಭಿಪ್ರಾಯದ ವರದಿಯ ಬೆನ್ನಲ್ಲೇ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಿಇಸಿ ನಡೆಯನ್ನು ತೀವ್ರವಾಗಿ ಟೀಕಿಸಿದ್ದರು.
ಮತ್ತೊಂದೆಡೆ, ಅಸ್ಸಾಂನಲ್ಲಿ ರಾಜೀವ್ ಭವನದಿಂದ (ಕಾಂಗ್ರೆಸ್ ಕಚೇರಿ) ಸಿಇಸಿ ಕಚೇರಿಯತ್ತ ತೆರಳಿ ಪ್ರತಿಕೃತಿ ದಹಿಸಲು ಮುಂದಾದ ಕಾಂಗ್ರೆಸ್ ನಾಯಕರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದ ರಾಜ್ಯಾಧ್ಯಕ್ಷ ಗೌರವ್ ಗೊಗೊಯ್, ಎಐಸಿಸಿ ಕಾರ್ಯದರ್ಶಿ ಮನೋಜ್ ಚೌಹಾಣ್, ಸೇವಾದಳದ ಅಧ್ಯಕ್ಷ ದೀಪ್ ಬಯಾನ್ ಮತ್ತು ಎಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಿತ್ ಭಾನು ದಾಸ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ.
ನಾಯಕರನ್ನು ಬಲವಂತವಾಗಿ ಬಂಧಿಸಿರುವುದು ‘ಪ್ರಜಾಪ್ರಭುತ್ವದ ಮೇಲಿನ ಬೆದರಿಕೆ’ ಎಂದು ಕಾಂಗ್ರೆಸ್ ವಕ್ತಾರ ಬೆದಬ್ರತಾ ಬೋರಾ ಆರೋಪಿಸಿದ್ದಾರೆ. ಇದೇ ವೇಳೆ, ಚಂಡೀಗಢ ಮತ್ತು ಪಾಟ್ನಾಗಳಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ (ವಾಟರ್ ಕ್ಯಾನನ್) ಬಳಸಿದ ಘಟನೆಗಳೂ ನಡೆದಿವೆ.




