ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ದಲಿತರ ಮೇಲಿನ ಹಲ್ಲೆ, ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ, ಜಾತಿ ದ್ವೇಷದ ಕೊಲೆಗಳು ಹಾಗೂ ಅಸ್ಪೃಶ್ಯತೆ ಆಚರಣೆ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ಕೊಪ್ಪಳ, ರಾಯಚೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಸ್ಪೃಶ್ಯತೆ ಆಚರಣೆ ಮತ್ತು ದಲಿತರ ಮೇಲಿನ ಅಪರಾಧಗಳು ಮಿತಿಮೀರಿವೆ. ದೇವಸ್ಥಾನ, ಹೋಟೆಲ್, ಕ್ಷೌರದಂಗಡಿಯಂತಹ ಸಾರ್ವಜನಿಕ ಸ್ಥಳಗಳನ್ನು ಬಳಸಲು ಮುಂದಾದಾಗ ದಲಿತರ ಮೇಲೆ ಹಲ್ಲೆ, ಕೊಲೆಗಳು ನಡೆಯುತ್ತಿವೆ. ಇದು ಸಂವಿಧಾನಬದ್ಧ ಸಮಾನತೆಯ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರೆ, ಪೊಲೀಸ್ ಇಲಾಖೆ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ದೌರ್ಜನ್ಯ ತಡೆ (ಅಟ್ರಾಸಿಟಿ) ಕಾಯ್ದೆಯಡಿ ಪ್ರಕರಣ ದಾಖಲಿಸದೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮುಖಂಡರು ಪತ್ರಿಕಾ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಎಲ್ಲ ಜಾತಿಗಳ ಸಾಮಾಜಿಕ ಸ್ಥಾನಮಾನ ಒಂದೇ ರೀತಿಯಾಗಿಲ್ಲ. ಕಳೆದ ಮೂರು ವರ್ಷಗಳಿಂದ ಈ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ‘ಸ್ಪೃಶ್ಯ’ ಸಮುದಾಯಗಳೇ, ‘ಅಸ್ಪೃಶ್ಯ’ ದಲಿತ ಸಮುದಾಯಗಳ ಮೇಲೆ ಜಾತಿ ಹೆಸರಿನಲ್ಲಿ ದೌರ್ಜನ್ಯ, ಕೊಲೆಗಳನ್ನು ಎಸಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಎರಡೂ ಗುಂಪುಗಳು ಒಂದೇ ಪ್ರವರ್ಗಕ್ಕೆ (SC/ST) ಸೇರುವುದರಿಂದ ಇಂತಹ ಪ್ರಕರಣಗಳನ್ನು ಅಟ್ರಾಸಿಟಿ ಕಾಯ್ದೆಯಡಿ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಇದರ ಲಾಭ ಪಡೆದು ದೌರ್ಜನ್ಯಗಳು ಮುಂದುವರಿದಿವೆ. ಜಿಲ್ಲಾಡಳಿತಗಳು ಅಸ್ಪೃಶ್ಯತೆ ವಿರುದ್ಧ ಅರಿವು ಮೂಡಿಸುವಲ್ಲಿ ಹಾಗೂ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದ್ದಾರೆ.
ಕಳೆದ ಕೇವಲ ಎರಡು ತಿಂಗಳ ಅವಧಿಯಲ್ಲಿ ರಾಯಚೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಸರಣಿ ಹತ್ಯೆಗಳು ನಡೆದಿವೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಭೂಮಾನಂದನ ಹತ್ಯೆ, ಹುಕ್ರಾಣಿ ಗ್ರಾಮದ ದಲಿತ ಯುವತಿ ಅಶ್ವಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ, ಲಿಂಗಸೂರು ತಾಲೂಕಿನ ದಲಿತ ಯುವತಿ ರಾಣಿಯಮ್ಮ ಕೊಲೆ, ಹಾಗೂ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರದ ಸಿಂಹಾದ್ರಿ, ಐ.ಡಿ. ಹಳ್ಳಿಯ ಪುರುಷೋತ್ತಮ್ ಮತ್ತು ಪೋಲೆನಹಳ್ಳಿಯ ಆನಂದ್ ಅವರ ಕೊಲೆ ಪ್ರಕರಣಗಳು ರಾಜ್ಯದಲ್ಲಿ ದಲಿತರಿಗೆ ರಕ್ಷಣೆಯೇ ಇಲ್ಲ ಎಂಬ ಆತಂಕ ಸೃಷ್ಟಿಸಿವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ದಲಿತರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿರುವ ಮುಖಂಡರು, ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಗೃಹ ಇಲಾಖೆಯು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪ್ರಾಮಾಣಿಕ ತನಿಖೆ ನಡೆಸಬೇಕು ಹಾಗೂ ದೌರ್ಜನ್ಯ, ಅತ್ಯಾಚಾರ, ಕೊಲೆಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಒದಗಿಸುವುದರ ಜೊತೆಗೆ ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಮತ್ತು 5 ಎಕರೆ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಅತಿಹೆಚ್ಚು ದೌರ್ಜನ್ಯ ನಡೆಯುತ್ತಿರುವ ಕೊಪ್ಪಳ, ರಾಯಚೂರು, ತುಮಕೂರು ಸೇರಿದಂತೆ ಇತರ ಪ್ರದೇಶಗಳನ್ನು ‘ಅತಿಸೂಕ್ಷ್ಮ ಜಿಲ್ಲೆಗಳು’ ಎಂದು ಘೋಷಿಸಿ, ಅಪರಾಧ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲಾಡಳಿತಗಳು ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ ಎಂಬ ಬಗ್ಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದರೊಂದಿಗೆ, ಎಸ್‌ಸಿ/ಎಸ್‌ಟಿ ಪಟ್ಟಿಯಲ್ಲಿರುವ ಬಲಾಢ್ಯ ಮತ್ತು ಸ್ಪೃಶ್ಯ ಜಾತಿಗಳು, ಅಸ್ಪೃಶ್ಯ ದಲಿತರ ಮೇಲೆ ನಡೆಸುವ ದೌರ್ಜನ್ಯಗಳನ್ನು ತಡೆಯಲು ಅನುಕೂಲವಾಗುವಂತೆ ‘ದೌರ್ಜನ್ಯ ತಡೆ (ಅಟ್ರಾಸಿಟಿ) ಕಾಯ್ದೆ’ಗೆ ಸೂಕ್ತ ತಿದ್ದುಪಡಿ ತಂದು ಕಾನೂನು ರಕ್ಷಣೆ ಒದಗಿಸಬೇಕು. ಹಾಗೂ ದೌರ್ಜನ್ಯ ಮತ್ತು ಅಪರಾಧಗಳು ನಡೆಯುವ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ (DC) ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನೇ (SP) ಹೊಣೆಗಾರರನ್ನಾಗಿಸಿ, ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.
ಒಳ ಮೀಸಲಾತಿ ಹೋರಾಟಗಾರರಾದ ಬಸವರಾಜ್ ಕೌತಳ್ ಮತ್ತು ಅಂಬಣ್ಣ ಅರೋಲಿಕರ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ. ಮೋಹನ್ ರಾಜ್, ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ವೇಣುಗೋಪಾಲ್ ಮೌರ್ಯ, ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಪಿಟಿಸಿಎಲ್ ಮಂಜುನಾಥ್ ಹಾಗೂ ಗೌರವಾಧ್ಯಕ್ಷ ಬಿ.ಎಂ. ವೆಂಕಟೇಶ್ ಅವರು ಈ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.




