ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು.
ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿಯವರೆಗೆ ನಿಗದಿತವಾಗಿದ್ದ ಈ ಮೆರವಣಿಗೆಯನ್ನು ತಡೆಯಲು ದೆಹಲಿ ಪೊಲೀಸರು ನೀತಿ ಆಯೋಗದ ಬಳಿ ಬೃಹತ್ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಭಾರೀ ಭದ್ರತೆ ಮತ್ತು ರಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿಯನ್ನು ನಿಯೋಜಿಸಿದ್ದರು. “ವೋಟ್ ಚೋರ್, ಗದ್ದಿ ಛೋಡ್” ಎಂಬ ಘೋಷಣೆಗಳನ್ನು ಕೂಗುತ್ತಾ ಬಂದ ವಿಪಕ್ಷ ನಾಯಕರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭಾರಿ ಗಾತ್ರದ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಹತ್ತಿ ತ್ರಿವರ್ಣ ಧ್ವಜವನ್ನು ಹಾರಿಸಿ ಮುಂದೆ ಸಾಗಲು ಯತ್ನಿಸಿದರು. ಈ ಹಂತದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಅಖಿಲೇಶ್ ಯಾದವ್, ಅಭಿಷೇಕ್ ಬ್ಯಾನರ್ಜಿ, ಡಿಎಸ್ ಒಬ್ರಿಯನ್ ಮತ್ತು ಮಹುವಾ ಮೊಯಿತ್ರಾ ಸೇರಿದಂತೆ ಹಲವು ಪ್ರಮುಖ ನಾಯಕರು ಪೊಲೀಸರ ವಶಕ್ಕೆ ಒಳಪಟ್ಟರು. ಮೋಶಾ ಜೋಡಿ ಕಟ್ಟಿದ ಪೊಲೀಸ್ ಗೋಡೆ ಕೆಡವಿ ಜನತೆಯನ್ನು ಮುಟ್ಟಿದರು ರಾಹುಲ್ ಗಾಂಧಿ.
ಪ್ರತಿಭಟನೆ ಅಲ್ಲಿಗೆ ಮುಗಿಯಲಿಲ್ಲ. ಬಂಧಿಸಿ ಬಸ್‌ಗಳಲ್ಲಿ ಕೂರಿಸಲಾಗಿದ್ದ ನಾಯಕರು ಕೆಳಗಿಳಿದು, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಚುನಾವಣಾ ಆಯೋಗದ ಕಚೇರಿಯ ಸಮೀಪವಿರುವ ಆಕಾಶವಾಣಿ ಭವನದ ಒಳಗೆ ನುಗ್ಗಿದರು. ಗೇಟ್ ನಂಬರ್ 3 ರ ಬಳಿ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳು ತಡೆಯಲು ಯತ್ನಿಸಿದರೂ, ತೀವ್ರ ವಾಗ್ವಾದದ ನಡುವೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭವನದ ಒಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. ನಂತರ ಕೆ.ಸಿ. ವೇಣುಗೋಪಾಲ್ ಮತ್ತು ಪವನ್ ಖೇರಾ ಸೇರಿದಂತೆ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಇತರ ನಾಯಕರು ಸಹ ಒಳಗೆ ಪ್ರವೇಶಿಸಿ, ಅಲ್ಲಿ ದಿನವಿಡೀ ಅಂದರೆ ಸುಮಾರು ಒಂಬತ್ತು ಗಂಟೆಗಳ ಕಾಲ ಸುದೀರ್ಘ ಧರಣಿ ಆರಂಭಿಸಿದರು.
ಆಕಾಶವಾಣಿ ಭವನದ ಒಳಗೆ ಚಾಪೆಗಳನ್ನು ಹಾಸಿ ಕುಳಿತ ನಾಯಕರಿಗೆ, ಹೊರಗಿನಿಂದ ಕುಡಿಯುವ ನೀರು, ಜ್ಯೂಸ್, ಚಿಪ್ಸ್, ಚಾಕೊಲೇಟ್‌ಗಳು, ಖಾನ್ ಚಚಾ ರೋಲ್‌ಗಳು ಮತ್ತು ಸೊಳ್ಳೆ ನಿರೋಧಕಗಳನ್ನು ತರಿಸಿಕೊಳ್ಳಲಾಯಿತು. ಸಂಜೆ ತನಕ ಮುಂದುವರಿದ ಈ ಪ್ರತಿಭಟನೆಯ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ನಾನು ಪ್ರಜಾಪ್ರಭುತ್ವವನ್ನು ರಕ್ಷಿಸಲು ಇಲ್ಲಿ ನಿಂತಿದ್ದೇನೆ. ಬಿಜೆಪಿ ಏನು ಹೇಳುತ್ತದೆ ಎಂಬುದರ ಬಗ್ಗೆ ನನಗೆ ಚಿಂತೆಯಿಲ್ಲ. ದೇಶಕ್ಕೆ ದ್ರೋಹ ಎಸಗಲಾಗಿದೆ, ಗ್ಯಾನೇಶ್ ಕುಮಾರ್ ಸೇರಿದಂತೆ ಯಾರನ್ನೂ ಬಿಡುವುದಿಲ್ಲ” ಎಂದು ಗುಡುಗಿದರು.
This video cannot be played in your browser. Open the video directly
ಮತ್ತೊಂದೆಡೆ, ಈ ಎಲ್ಲಾ ಬೆಳವಣಿಗೆಗಳನ್ನು ತೀವ್ರವಾಗಿ ಖಂಡಿಸಿದ ಆಡಳಿತರೂಢ BJP, ಮೂರು ಪ್ರತ್ಯೇಕ ಪತ್ರಿಕಾಗೋಷ್ಠಿಗಳನ್ನು ನಡೆಸಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿತು. ರಾಹುಲ್ ಗಾಂಧಿ ಅವರನ್ನು ಮರುಪ್ರಚಾರ ಮಾಡಲು ಮತ್ತು ಚುನಾವಣಾ ಸೋಲಿನ ಹತಾಶೆಯನ್ನು ತೀರಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ರಸ್ತೆಯಲ್ಲಿ ನಾಟಕವಾಡುತ್ತಿವೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಗುಡುಗಿದರು. ವಿಪಕ್ಷಗಳು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕುಂದಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.
ಸಂಜೆ ಕಳೆದರೂ ಪ್ರತಿಭಟನೆ ಸಮಾಧಾನಗೊಳ್ಳದ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆಕಾಶವಾಣಿ ಭವನದ ಒಳಗೆ ಮತ್ತು ಹೊರಗೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಸುಮಾರು 260 ಮಂದಿಯನ್ನು ವಶಕ್ಕೆ ಪಡೆದರು. ಇವರೆಲ್ಲರನ್ನೂ ಬಸ್‌ಗಳಲ್ಲಿ ಕೂರಿಸಿ ಕಿಂಗ್ಸ್‌ವೇ ಕ್ಯಾಂಪ್‌ನ ಹೊಸ ಪೊಲೀಸ್ ಲೈನ್ಸ್‌ಗೆ ಕರೆದೊಯ್ಯಲಾಯಿತು. ಸರ್ಕಾರದ ಈ ಧೋರಣೆಯು ತನ್ನ ಅಡಳಿತದ ಅಂತ್ಯದ ಮುನ್ಸೂಚನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ ಈಗಿನ ಪ್ರಶ್ನೆ
ಈ ಎಲ್ಲಾ ವಿವಾದಗಳ ನಡುವೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಯಾವುದೇ ರಾಜಕೀಯ ಪಕ್ಷವು ಅಂದು ಸಂಜೆ 4 ಗಂಟೆಯವರೆಗೆ ಭೇಟಿಗಾಗಿ ಅಧಿಕೃತವಾಗಿ ಪೂರ್ವಾನುಮತಿ ಕೋರಿರಲಿಲ್ಲ ಎಂದು ತಿಳಿಸಿತು. ಅಲ್ಲದೆ, ಒಮ್ಮೆಯೂ ಲಿಖಿತವಾಗಿ ಅಧಿಕೃತ ಮುಖಾಂತರ ಸಮಯ ಕೇಳದೆ, ಏಕಾಏಕಿ 240 ಕ್ಕೂ ಹೆಚ್ಚು ಸಂಸದರ ನಿಯೋಗವು ಸಂಸತ್ ಭವನ ಅನೆಕ್ಸ್‌ನಲ್ಲಿ ಭೇಟಿಯಾಗಬೇಕೆಂದು ಇಟ್ಟ ಪ್ರಸ್ತಾವನೆಯು ಚುನಾವಣಾ ಆಯೋಗದ ನಿಗದಿತ ಶಿಷ್ಟಾಚಾರಕ್ಕೆ ವಿರುದ್ಧವಾಗಿದ್ದುದರಿಂದ ಅದನ್ನು ಸ್ವೀಕರಿಸಲು ಸಾಧ್ಯವಿರಲಿಲ್ಲ ಎಂದಿತು.
ಆಕಾಶವಾಣಿ ಭವನದ ಒಳಗೆ ಚಾಪೆಗಳನ್ನು ಹಾಸಿ, ಹೊರಗಿನಿಂದ ಬಂದ ಉಪಹಾರ ಹಾಗೂ ಸೌಲಭ್ಯಗಳೊಂದಿಗೆ ಆರಂಭವಾದ ಈ ಸತ್ಯಾಗ್ರಹವು ಆಡಳಿತ ವ್ಯವಸ್ಥೆಯ ವಿರುದ್ಧದ ದೀರ್ಘಕಾಲದ ತಿಕ್ಕಾಟವಾಗಿ ಬದಲಾಯಿತು. ರಾತ್ರಿ ಕತ್ತಲಾಗುತ್ತಿದ್ದಂತೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಬಿಗಿ ವಾತಾವರಣ ಮುಂದುವರಿಯಿತು. ಒಂಬತ್ತು ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಅನಿರೀಕ್ಷಿತ ಮುತ್ತಿಗೆಯನ್ನು ಅಂತ್ಯಗೊಳಿಸಲು ಅಂತಿಮವಾಗಿ ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಸ್ಥಳದಲ್ಲಿದ್ದ ಪ್ರಮುಖ ನಾಯಕರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದರು. ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಮತದಾರರ ಹಕ್ಕುಗಳಿಗಾಗಿ ನಮ್ಮ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಮುಂದೆಯೂ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಹಾಗೂ INDIA ಬ್ಲಾಕ್ ನಾಯಕರು ಎಚ್ಚರಿಕೆ ನೀಡಿದ್ದಾರೆ.





