ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ ತಂದಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆ ದೇಶದ ರಾಜಕೀಯ, ಸಾಮಾಜಿಕ ಹಾಗೂ ಕಾನೂನು ಕ್ಷೇತ್ರಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಮತ್ತು ನಕಲಿ ಮತದಾರರ ಹೆಸರುಗಳನ್ನು ಪರಿಷ್ಕರಿಸುವ ಸೋಗಿನಲ್ಲಿ ಎಸ್‌ಐಆರ್ ಆರಂಭಿಸಿದ ಆಯೋಗ, ಕೋಟ್ಯಂತರ ಅರ್ಹ ಅರ್ಜಿದಾರರ ಹಕ್ಕುಗಳನ್ನೇ ಕಸಿದುಕೊಳ್ಳುತ್ತಿದೆ.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸೂತ್ರದ ಬೊಂಬೆಯಾಗಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್, ಏಕಪಕ್ಷೀಯವಾಗಿ 2025ರ ಜೂನ್‌ನಲ್ಲಿ ಬಿಹಾರದಲ್ಲಿ ಎಸ್‌ಐಆರ್ ಆರಂಭಿಸಿದರು. ಬಿಹಾರದಲ್ಲಿ 65 ಲಕ್ಷ ಮತದಾರರ ಹೆಸರುಗಳನ್ನು ಅಳಿಸಿಹಾಕಿದರು. ಬಳಿಕ, ದೇಶದ 12 ಪ್ರಮುಖ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಅಭಿಯಾನವನ್ನು ವಿಸ್ತರಿಸಲಾಯಿತು. ಈ ರಾಜ್ಯಗಳಲ್ಲಿ 5.2 ಕೋಟಿ ಮತಗಳನ್ನು ಅಳಿಸಿ ಹಾಕಲಾಯಿತು. ಆ ನಂತರ, 17 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಜಾರಿಗೆ ತರಲಾಗಿದ್ದು, 6.15 ಕೋಟಿ ಮತದಾರರ ಹೆಸರುಗಳನ್ನು ಈಗಾಗಲೇ ಅಳಿಸಿ ಹಾಕಲಾಗಿದೆ. ಇನ್ನೂ ಹಲವರಿಗೆ ನೋಟಿಸ್ ನೀಡಲಾಗಿದೆ. ಒಟ್ಟಾರೆ, ದೇಶಾದ್ಯಂತ ಎಸ್‌ಐಆರ್ ಪ್ರಕ್ರಿಯೆಯು 13 ಕೋಟಿ ಮತದಾರರ ಹೆಸರುಗಳು ಮಾರಣಹೋಮ ನಡೆಸಿದೆ.
ಹೆಸರಿನಲ್ಲಿನ ಸಣ್ಣ-ಪುಟ್ಟ ತಪ್ಪುಗಳು, ಪೋಷಕರು-ಮಕ್ಕಳು ಮತ್ತು ಸಹೋದರ/ರಿಯರ ನಡುವಿನ ವಯಸ್ಸಿನ ವ್ಯತ್ಯಾಸಗಳು, ಬೇರೆ ಊರಿಗೆ ಸ್ಥಳಾಂತರಗೊಂಡವರು, ಬಿಎಲ್‌ಒಗಳು ಮನೆಗೆ ಹೋದಾಗ ಮನೆಯಲ್ಲಿ ಇರಲಿಲ್ಲ ಎಂಬ ಕ್ಷುಲ್ಲಕ ನೆಪವೊಡ್ಡಿ ಅರ್ಹ ಮತದಾರರ ಹೆಸರುಗಳನ್ನು ಆಯೋಗ ಅಳಿಸಿಹಾಕಿದೆ. ತಾರ್ಕಿಕ ವ್ಯತ್ಯಾಸದ ಹೆಸರಿನಲ್ಲಿ ಅರ್ಹ ಮತದಾರರನ್ನೇ ಮತಪಟ್ಟಿಯಿಂದ ಹೊರಹಾಕಿರುವ ಆಯೋಗದ ಕೃತ್ಯವನ್ನು ಪ್ರಶ್ನಿಸಿ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ADR) ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಎಸ್‌ಐಆರ್ ವಿರುದ್ಧದ ಅರ್ಜಿಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, “ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಮತ್ತು ನವೀಕರಿಸುವ ಪೂರ್ಣ ಅಧಿಕಾರವಿದೆ. ಈ ಅಧಿಕಾರವನ್ನು ಬಳಸುವಾಗ ಆಯೋಗವು ನಾಗರಿಕರಿಗೆ ಸೂಕ್ತ ನೋಟಿಸ್ ನೀಡುವುದು, ವೈಯಕ್ತಿಕ ವಿಚಾರಣೆ ನಡೆಸುವುದು, ಕಾರಣಸಹಿತ ಆದೇಶಗಳನ್ನು ಹೊರಡಿಸುವುದು ಹಾಗೂ ತೊಂದರೆಗೊಳಗಾದ ಮತದಾರರಿಗೆ ಮೇಲ್ಮನವಿ ಸಲ್ಲಿಸಲು ಸೂಕ್ತ ಅವಕಾಶ ಕಲ್ಪಿಸುವಂತಹ ಸಂವಿಧಾನಾತ್ಮಕ ನ್ಯಾಯದ ತತ್ವಗಳಿಗೆ ಬದ್ಧವಾಗಿರಬೇಕು” ಎಂದು ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಿತು.
ಆದರೆ, ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನ ಸೂಚನೆಗಳು ಮತ್ತು ಸಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಿತು. ಆಯೋಗವು ಅರ್ಥಾಥ್ ಗ್ಯಾನೇಶ್ ಕುಮಾರ್ ಅವರು ಮೋದಿ-ಶಾ ಜೋಡಿಯ ಅಣತಿಯಂತೆಯೇ ತಮಗಿಚ್ಚಿಸಿದಂತೆ ಎಸ್‌ಐಆರ್ ನಡೆಸಿದರು.
‘ERO-NET’ ಎಂಬ ಷಡ್ಯಂತ್ರ
ಈ ಇಡೀ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಗ್ಯಾನೇಶ್ ಕುಮಾರ್ ಬಳಸಿದ್ದು, ಆಧುನಿಕ ಡಿಜಿಟಲ್ ತಂತ್ರಜ್ಞಾನವುಳ್ಳ ‘ERO-NET’ ಅಪ್ಲಿಕೇಷನ್. ಈ ಅಪ್ಲಿಕೇಷನ್ ಗಂಭೀರ ತಾಂತ್ರಿಕ ಮತ್ತು ಕಾನೂನಾತ್ಮಕ ಲೋಪಗಳಿಂದ ಕೂಡಿತ್ತು. ಅಂದಹಾಗೆ, ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ‘ಸಿ-ಡಾಕ್’ ಸಂಸ್ಥೆಯು ಈ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಖಾಸಗಿ ವಲಯದ ದೈತ್ಯ ಸಂಸ್ಥೆ ‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್’ (TCS) ನಿರ್ವಹಿಸುತ್ತಿದೆ ಎಂಬ ಅತ್ಯಂತ ಪ್ರಮುಖ ಸತ್ಯವನ್ನು ಚುನಾವಣಾ ಆಯೋಗವು ಸಾರ್ವಜನಿಕರಿಂದ ಮುಚ್ಚಿಟ್ಟಿತ್ತು. ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಎಂಬ ಮಾಧ್ಯಮ ಸಂಸ್ಥೆಯು TCS ಕಂಪನಿಯ ಷೇರುದಾರರ ದಾಖಲೆಗಳನ್ನು ಮತ್ತು ಕಾಂಟ್ರಾಕ್ಟ್ ಪತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಈ ಖಾಸಗೀ ನಿರ್ವಹಣೆಯ ವಿಚಾರ ಬೆಳಕಿಗೆ ಬಂದಿತ್ತು.
ಇದರ ಮುಂದುವರಿದ ಭಾಗವಾಗಿ, 2026ರ ಜನವರಿ 22ರಂದು ‘ಇಸಿಐ-ನೆಟ್’ ಎಂಬ ನೂತನ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಆರಂಭಿಸಲಾಯಿತು. ಇದು ಸುಮಾರು 40 ಹಳೆಯ ತಾಂತ್ರಿಕ ಅಪ್ಲಿಕೇಶನ್‌ಗಳನ್ನು ಒಂದೇ ಲಾಗಿನ್ ವ್ಯವಸ್ಥೆಯಡಿಯಲ್ಲಿ ತಂದು ಮತದಾರರ ಅರ್ಜಿಗಳನ್ನು ಮತ್ತು ಹಳೆಯ ಡಿಜಿಟಲೀಕೃತ ಪಟ್ಟಿಗಳನ್ನು ಸರಿಹೂಂದಿಸಲು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅನುವು ಮಾಡಿಕೊಟ್ಟಿತು. ಬಿಎಲ್‌ಒಗಳು ತಮ್ಮ ಮೊಬೈಲ್ ಆ್ಯಪ್‌ಗಳ ಮೂಲಕ ಕೇಂದ್ರಿಕೃತ ವ್ಯವಸ್ಥೆಯಿಂದ ಬರುವ ‘ಸಂಶಯಾಸ್ಪದ ಮತದಾರರ ಪಟ್ಟಿ’ಯನ್ನು ಆಧರಿಸಿ ಕಾರ್ಯನಿರ್ವಹಿಸಲು ತೊಡಗಿದರು. ಆದರೆ, ಈ ಮೂಲ ತಂತ್ರಾಂಶದಲ್ಲಿನ ಮ್ಯಾಚಿಂಗ್ ಮಿತಿ ಮತ್ತು ನಾಗರಿಕರ ದತ್ತಾಂಶ ರಕ್ಷಣೆಯ ಮೌಲ್ಯಮಾಪನಗಳ ಕುರಿತು ಯಾವುದೇ ಮಾಹಿತಿಯನ್ನು ಆಯೋಗವು ಬಹಿರಂಗಪಡಿಸಲೇ ಇಲ್ಲ.
ಅಪೂರ್ಣ ಡಿಜಿಟಲೀಕರಣ, ಅಲ್ಗಾರಿದಮಿಕ್ ಎಡವಟ್ಟುಗಳು ಮತ್ತು ಕೃತಕ ಬುದ್ಧಿಮತ್ತೆಯ ಗೊಂದಲ
ಈ ಎಸ್‌ಐಆರ್‌ನ ಮತ್ತೊಂದು ಪ್ರಮುಖ ಷಡ್ಯಂತ್ರವೆಂದರೆ, ಅದು ಎರಡು ದಶಕಗಳಷ್ಟು ಹಳೆಯದಾದ ಕಾಗದದ ರೂಪದಲ್ಲಿದ್ದ ಮತದಾರರ ಪಟ್ಟಿಯ ಡಿಜಿಟಲ್ ಪ್ರತಿಗಳನ್ನು ಆಧಾರವಾಗಿಟ್ಟುಕೊಂಡಿದ್ದು. ಆಯೋಗವು 2002ರ ಮತದಾರರ ಪಟ್ಟಿಯನ್ನು ಮೂಲ ‘ಆಧಾರ ವರ್ಷ’ವಾಗಿ ನಿಗದಿಪಡಿಸಿತ್ತು. ಈ ಹಳೆಯ ಪಟ್ಟಿಗಳು ಕನ್ನಡ, ಬಂಗಾಳಿ, ತೆಲುಗು, ಮರಾಠಿ ಮುಂತಾದ ಪ್ರಾದೇಶಿಕ ಭಾಷೆಗಳಲ್ಲಿ ಹಸ್ತಪ್ರತಿ ಅಥವಾ ಮುದ್ರಿತ ಕಾಗದದ ರೂಪದಲ್ಲಿದ್ದವು.
ಪಶ್ಚಿಮ ಬಂಗಾಳದ ಉದಾಹರಣೆಯನ್ನು ಗಮನಿಸಿದರೆ, ಬಂಗಾಳಿ ಭಾಷೆಯಲ್ಲಿದ್ದ 2002ರ ಕಾಗದದ ಪಟ್ಟಿಗಳನ್ನು ಅತ್ಯಂತ ಅವಸರದಲ್ಲಿ ಡಿಜಿಟಲೀಕರಣಗೊಳಿಸಿ, ಪರೀಕ್ಷಿಸಲ್ಪಡದ ‘ಮೆಷಿನ್ ಟ್ರಾನ್ಸ್‌ಲೇಷನ್’ (ಯಾಂತ್ರಿಕ ಭಾಷಾಂತರ) ಸಾಫ್ಟ್‌ವೇರ್ ಮೂಲಕ ಇಂಗ್ಲಿಷ್ ಭಾಷೆಗೆ ಪರಿವರ್ತಿಸಲಾಯಿತು. ತದನಂತರ, ಅಲ್ಗಾರಿದಮ್‌ಗಳನ್ನು ಬಳಸಿ ಪ್ರಸ್ತುತ ಮತದಾರರ ವಿವರಗಳೊಂದಿಗೆ ಹೋಲಿಕೆ ಮಾಡಲಾಯಿತು. ಯಾವುದೇ ಪೂರ್ವ ಪರೀಕ್ಷೆ ಇಲ್ಲದೆ ನಡೆಸಿದ ಈ ಧಾವಂತದ ಪ್ರಕ್ರಿಯೆಯಿಂದಾಗಿ ಕೋಟ್ಯಂತರ ಹೆಸರುಗಳಲ್ಲಿ ಭಾರೀ ಕಾಗುಣಿತ ದೋಷಗಳು ಮತ್ತು ಲಿಪ್ಯಂತರ ದೋಷಗಳು ಉಂಟಾದವು.
2025ರ ಡಿಸೆಂಬರ್‌ನಲ್ಲಿ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು, “2002ರ ಪಟ್ಟಿಗಳನ್ನು ಪಿಡಿಎಫ್‌ನಿಂದ ಸಿಎಸ್‌ವಿಗೆ ಸರಿಯಾಗಿ ಪರಿವರ್ತಿಸದ ಕಾರಣ ಹೆಸರಿನಲ್ಲಿನ ಹೋಲಿಕೆ ವೈಫಲ್ಯಗಳು ಉಂಟಾಗಿವೆ. ಆಟೋಮ್ಯಾಟಿಕ್ ಫ್ಲ್ಯಾಗಿಂಗ್ ತಂತ್ರಾಂಶವು ಸಂಪೂರ್ಣವಾಗಿ ಕೆಟ್ಟುಹೋಗಿದ್ದು, ತಪ್ಪು ತೀರ್ಮಾನಗಳನ್ನು ನೀಡುತ್ತಿದೆ” ಎಂದು ಅಧಿಕೃತವಾಗಿ ಒಪ್ಪಿಕೊಂಡಿತು.
ಅಲ್ಗಾರಿದಮ್‌ಗಳು ವಿಧಿಸಿದ್ದ ನಿಯಮಗಳು ವಿಚಿತ್ರ ಮತ್ತು ಅಪ್ರಾಯೋಗಿಕವಾಗಿದ್ದವು. ಉದಾಹರಣೆಗೆ, ತಂದೆ/ತಾಯಿಗೂ ಮಗ/ಮಗಳಿಗೂ ಇರುವ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆಯಿದ್ದರೆ ಅಥವಾ 50 ವರ್ಷಕ್ಕಿಂತ ಹೆಚ್ಚಿದ್ದರೆ, ಅಥವಾ ಒಂದೇ ಮನೆಯಲ್ಲಿ 5ಕ್ಕಿಂತ ಹೆಚ್ಚು ಸಹೋದರ-ಸಹೋದರಿಯರಿದ್ದರೆ ಅವರನ್ನು ತಕ್ಷಣವೇ ‘ಸಂಶಯಾಸ್ಪದ’ ಎಂದು ಈ ಸಾಫ್ಟ್‌ವೇರ್ ಫ್ಲ್ಯಾಗ್ ಮಾಡುತ್ತಿತ್ತು. ಭಾಷಾಂತರ ದೋಷಗಳಿಂದಾಗಿ ಹೆಸರುಗಳ ಕಾಗುಣಿತದಲ್ಲಿ ಸ್ವಲ್ಪ ಬದಲಾವಣೆಗಳಿದ್ದರೂ ತಂತ್ರಾಂಶವು ಅವರನ್ನು ನಕಲಿ ಮತದಾರರು ಎಂದು ಗುರುತಿಸಿತು. ಪರಿಣಾಮವಾಗಿ, ಪಶ್ಚಿಮ ಬಂಗಾಳವೊಂದರಲ್ಲೇ 1.31 ಕೋಟಿ (17.11%) ಮತದಾರರು ಮತ್ತು ಮಧ್ಯಪ್ರದೇಶದಲ್ಲಿ 2.35 ಕೋಟಿ (41.22%) ಮತದಾರರನ್ನು ‘ತಾರ್ಕಿಕ ವ್ಯತ್ಯಾಸ’ ಹೊಂದಿರುವವರು ಎಂಬ ಪಟ್ಟಿಗೆ ತಳ್ಳಲಾಯಿತು.
ಇದಲ್ಲದೆ, ಮತದಾರರ ಪಟ್ಟಿಯನ್ನು ಪರಿಶೀಲಿಸಲು ಕೃತಕ ಬುದ್ಧಿಮತ್ತೆ (AI) ಮತ್ತು ಮುಖ ಗುರುತಿಸುವಿಕೆ (Facial Recognition) ತಂತ್ರಜ್ಞಾನವನ್ನು ಬಳಸಲಾಗುತ್ತಿದೆಯೇ ಎಂಬ ವಿಷಯದಲ್ಲೂ ಆಯೋಗವು ಪರಸ್ಪರ ವಿರೋಧಾಬಾಸವಾದ ಹೇಳಿಕೆಗಳನ್ನು ನೀಡಿತು. ಆರಂಭದಲ್ಲಿ ಎಐ ಬಳಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ, 2026ರ ಜುಲೈನಲ್ಲಿ ವಿಶ್ವಸಂಸ್ಥೆಯ ವರದಿಗಾರರಿಗೆ ಲಿಖಿತ ಉತ್ತರ ನೀಡಿದ ಆಯೋಗವು ‘ಯಾವುದೇ ಹಂತದಲ್ಲೂ ಎಐ ಬಳಕೆಯಾಗಿಲ್ಲ’ ಎಂದು ಉಲ್ಟಾ ಹೊಡೆಯಿತು.
ಆಯೋಗದೊಳಗಿನ ಆಂತರಿಕ ವಿರೋಧ ಮತ್ತು ಪ್ರಮುಖ ನಾಯಕರಿಗೆ ಮಷಿನ್ ನೋಟಿಸ್
ಹೊರಗಿನಿಂದ ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳು ಆಯೋಗವನ್ನು ಪ್ರಶ್ನಿಸುತ್ತಿದ್ದರೆ, ಆಯೋಗದ ಒಳಗಡೆಯೇ ತೀವ್ರಮಟ್ಟದ ಭಿನ್ನಾಭಿಪ್ರಾಯಗಳು ಹೊಗೆಯಾಡುತ್ತಿದ್ದವು. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದಿನಪತ್ರಿಕೆಯಲ್ಲಿ ಪ್ರಕಟವಾದ ತನಿಖಾ ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳ ಅವಧಿಯಲ್ಲಿ 14 ಆಕ್ಷೇಪಣಾ ಪತ್ರಗಳನ್ನು ಬರೆದಿದ್ದು, ಸಿಇಸಿ ಗ್ಯಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಹೊಸ ಮತದಾರರ ನೋಂದಣಿಗೆ ಸರ್ಕಾರಿ ನಿಯಮಗಳನ್ನು ತಿದ್ದುಪಡಿ ಮಾಡದೆ ಹೊಸ ಷರತ್ತು ವಿಧಿಸುವುದು ‘ಅಕ್ರಮ’, ತಂತ್ರಜ್ಞಾನದ ಹೆಸರಿನಲ್ಲಿ ಮತದಾರರ ಪಟ್ಟಿಯನ್ನು ದೆಹಲಿಯಲ್ಲಿ ಕೇಂದ್ರೀಕರಿಸಿ ದುರುಪಯೋಗಕ್ಕೆ ಹಾದಿಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಇದರ ಪರಿಣಾಮ ಗೋವಾದಲ್ಲಿ ಸ್ಪಷ್ಟವಾಗಿ ಕಂಡುಬಂದಿತು. ಸುಪ್ರೀಂ ಕೋರ್ಟ್ ಸೂಚನೆಯಂತೆ ವಿಚಾರಣೆ ನಡೆಸಿದ ಗೋವಾದ ಮತದಾರರ ನೋಂದಣಾಧಿಕಾರಿಗಳು (ERO), ನೋಟಿಸ್ ನೀಡಲಾಗಿದ್ದ 97 ಮಂದಿಯನ್ನು ಅರ್ಹ ಮತದಾರರು ಎಂದು ಗುರುತಿಸಿ, ಮತಪಟ್ಟಿಗೆ ಸೇರಿಸಲು ಮುಂದಾದರು. ಆದರೆ, ERO-NET ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡಲು ಇಆರ್‌ಒಗಳಿಗೆ ‘ಆಕ್ಸೆಸ್’ಅನ್ನೇ ನೀಡಲಾಗಲಿಲ್ಲ. ಈ ಬಗ್ಗೆ, ಗೋವಾ ಮುಖ್ಯ ಚುನಾವಣಾಧಿಕಾರಿಯು ಕೇಂದ್ರ ಚುನಾವಣಾ ಆಯೋಗಕ್ಕೆ 8 ಪತ್ರಗಳನ್ನು ಬರೆದರೂ, ಸಮಸ್ಯೆಯನ್ನು ಸರಿಪಡಿಸಲಿಲ್ಲ. ಪರಿಣಾಮ, ಆ 97 ಮಂದಿ ಅರ್ಹರು ಮತಪಟ್ಟಿಯಿಂದ ಹೊರಗುಳಿದರು. ಮತದ ಹಕ್ಕು ಕಳೆದುಕೊಂಡರು.
ಈ ಲೇಖನ ಓದಿದ್ದೀರಾ?: ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ ಭಾರತ
ಅಲ್ಗಾರಿದಮ್‌ಗಳು ಎಷ್ಟರಮಟ್ಟಿಗೆ ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದವು ಎಂದರೆ, ಅವು ನಾಯಕರು, ಸಚಿವರು ಮತ್ತು ಸ್ವತಃ ಚುನಾವಣಾ ಆಯುಕ್ತರನ್ನೂ ಬಿಡಲಿಲ್ಲ. ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ, ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ, ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಹಾಗೂ ಸ್ವತಃ ಚುನಾವಣಾ ಆಯುಕ್ತ ಎಸ್.ಎಸ್ ಸಂಧು ಅವರಿಗೇ ಯಾಂತ್ರಿಕವಾಗಿ ನೋಟಿಸ್‌ಗಳನ್ನು ಕಳಿಸಿದವು. ವಿವಿಐಪಿಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿದರಾದರೂ, ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಯಂತ್ರಜನ್ಯ ನೋಟಿಸ್ ಪಡೆದ ಸುಮಾರು 1.76 ಕೋಟಿ ಸಾಮಾನ್ಯ ನಾಗರಿಕರು ಕಚೇರಿಗಳಿಗೆ ಅಲೆಯುವಂತಾಯಿತು.
ನ್ಯಾಯಾಲಯದ ಪ್ರವೇಶ, ಆಯೋಗದಲ್ಲಿನ ಬದಾವಣೆಗಳು ಮತ್ತು ರಾಜಕೀಯ ಪರಿಣಾಮಗಳು
ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್ ಮತ್ತು ಅಮೃತಾ ಜೋಹ್ರಿ ಅವರು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2026ರ ಸೆಪ್ಟೆಂಬರ್ 22ರಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು “ಯಾವುದೇ ವಿವೇಚನೆ ಬಳಸದೆ ಸಂಪೂರ್ಣ ಯಾಂತ್ರಿಕವಾಗಿ ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಇವೆಲ್ಲವೂ ಮಷಿನ್‌ನಿಂದ ತಯಾರಾದ ನೋಟಿಸ್‌ಗಳು ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ” ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ನೋಟಿಸ್ ಪಡೆದ ಮತದಾರರಿಗೆ ದಾಖಲೆ ಸಲ್ಲಿಸಲು ವಾಟ್ಸಾಪ್/ಇಮೇಲ್‌ನಲ್ಲಿಯೂ ಅವಕಾಶ ನೀಡಬೇಕು ಮತ್ತು ಮನೆಬಾಗಿಲಲ್ಲೇ ಅಧಿಕಾರಿಗಳು ದಾಖಲೆ ಸಂಗ್ರಹಿಸಬೇಕು ಎಂದು ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.
ನ್ಯಾಯಾಲಯದ ಚಾಟಿ ಮತ್ತು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯಂತಹ ಯುವ ಸಂಘಟನೆಗಳ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಆಯೋಗವು 2026ರ ಸೆಪ್ಟೆಂಬರ್ 26 ರಂದು ತುರ್ತು ಸಭೆ ನಡೆಸಿ ಹಲವು ಸುಧಾರಣೆಗಳನ್ನು ಪ್ರಕಟಿಸಿತು. ಐಐಟಿ/ಐಐಐಟಿ ತಜ್ಞರನ್ನೊಳಗೊಂಡ ಸಮಿತಿಯಿಂದ ‘ಇಸಿಐ-ನೆಟ್’ ಪರಿಶೀಲನೆ, ಬಿಎಲ್‌ಒಗಳಿಂದ ಮನೆಮನೆ ಭೇಟಿ, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಣೆ ಹಾಗೂ ಆಂತರಿಕ ಸಭೆಗಳ ನಡಾವಳಿಗಳನ್ನು ದಾಖಲಿಸುವ ಪಾರದರ್ಶಕ ಕ್ರಮಗಳನ್ನು ಜಾರಿಗೊಳಿಸಿತು.
ಕಳೆದೊಂದು ವರ್ಷದಲ್ಲಿ ಗ್ಯಾನೇಶ್ ಕುಮಾರ್ ಎಸಗಿದ ಸರ್ವಾಧಿಕಾರಿ ಕ್ರೌರ್ಯದಿಂದಾಗಿ ಬಡವರು, ವಲಸೆ ಕಾರ್ಮಿಕರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಜನರು ಮತದಾನದ ಹಕ್ಕಿನಿಂದಷ್ಟೇ ಅಲ್ಲದೆ, ಸರ್ಕಾರಿ ರೇಷನ್, ಉಚಿತ ಚಿಕಿತ್ಸೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಿಂದಲೂ ವಂಚಿತರಾಗುವ ಭೀತಿಯಲ್ಲಿದ್ದಾರೆ.



