ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ (AAP) 2025-26ನೇ ಹಣಕಾಸು ವರ್ಷದಲ್ಲಿ ಒಟ್ಟು ₹12.10 ಕೋಟಿ ದೇಣಿಗೆ ಬಂದಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪಕ್ಷದ ದೇಣಿಗೆ ಶೇ.68ರಷ್ಟು ಕುಸಿದಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಇತ್ತೀಚಿನ ವರದಿ ತಿಳಿಸಿದೆ.
ಎಎಪಿಗೆ ಬಂದ ಒಟ್ಟು ದೇಣಿಗೆಯಲ್ಲಿ ಸುಮಾರು ಶೇ.83ರಷ್ಟು ಹಣವನ್ನು ಇಬ್ಬರು ದಾನಿಗಳು ನೀಡಿದ್ದಾರೆ. ಪ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಮತ್ತು ಟ್ರೈಡೆಂಟ್ ಲಿಮಿಟೆಡ್ ತಲಾ ₹5 ಕೋಟಿ ದೇಣಿಗೆ ನೀಡಿವೆ. ಉಳಿದ ದೇಣಿಗೆ ಸುಮಾರು ₹2.10 ಕೋಟಿಯಷ್ಟಿದೆ. ಇದರಲ್ಲಿನ ಪ್ರಮುಖ ಅಂಶವೆಂದರೆ, ಟ್ರೈಡೆಂಟ್ ಲಿಮಿಟೆಡ್ ಕಂಪನಿಯನ್ನು ಎಎಪಿಯ ಮಾಜಿ ರಾಜ್ಯಸಭಾ ಸದಸ್ಯ ರಾಜಿಂದರ್ ಗುಪ್ತಾ ಸ್ಥಾಪಿಸಿದ್ದರು. ಗುಪ್ತಾ ಅವರು ಎಎಪಿ ತೊರೆದು ಬಿಜೆಪಿಗೆ ಸೇರುವ ಮುನ್ನ ಅವರ ಕಂಪನಿಯಿಂದ ಈ ₹5 ಕೋಟಿ ದೇಣಿಗೆ ಬಂದಿದೆ.
ರಾಜಿಂದರ್ ಗುಪ್ತಾ ಅವರು 2025ರ ಅಕ್ಟೋಬರ್‌ನಲ್ಲಿ ಎಎಪಿ ಟಿಕೆಟ್‌ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಟ್ರೈಡೆಂಟ್ ಕಂಪನಿಯ ₹5 ಕೋಟಿ ಚೆಕ್‌ಗೆ 2026ರ ಜನವರಿ 9ರ ದಿನಾಂಕವಿತ್ತು. ಆಗ ಗುಪ್ತಾ ಅವರು ಇನ್ನೂ ಎಎಪಿಯಲ್ಲೇ ಇದ್ದರು. ಆದರೆ, ರಾಘವ್ ಚಡ್ಡಾ ನೇತೃತ್ವದಲ್ಲಿ ನಡೆದ ಬಂಡಾಯದ ಬಳಿಕ ಗುಪ್ತಾ ಅವರು ಎಎಪಿ ತೊರೆದು 2026ರ ಏಪ್ರಿಲ್‌ನಲ್ಲಿ ಬಿಜೆಪಿಗೆ ಸೇರಿದರು. ರಾಘವ್ ಚಡ್ಡಾ ನೇತೃತ್ವದಲ್ಲಿ ಎಎಪಿಯ ರಾಜ್ಯಸಭಾ ಸದಸ್ಯರ ಪೈಕಿ ಮೂರನೇ ಎರಡರಷ್ಟು ಸದಸ್ಯರು ಬಿಜೆಪಿಯೊಂದಿಗೆ ವಿಲೀನವಾದ ಬಳಿಕ ಈ ಬೆಳವಣಿಗೆ ನಡೆದಿತ್ತು.
2024-25ರಲ್ಲಿ ಎಎಪಿಗೆ ₹38.10 ಕೋಟಿ ದೇಣಿಗೆ ಬಂದಿತ್ತು. 2023-24ರಲ್ಲಿ ಈ ಮೊತ್ತ ₹11.06 ಕೋಟಿಯಾಗಿತ್ತು. 2024-25ರಲ್ಲಿ ಪ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಪಕ್ಷದ ಅತಿ ದೊಡ್ಡ ದಾನಿಯಾಗಿದ್ದು, ₹16.40 ಕೋಟಿ ನೀಡಿತ್ತು. 2025ರ ಫೆಬ್ರವರಿಯಲ್ಲಿ ದೆಹಲಿ ಅಧಿಕಾರ ಕಳೆದುಕೊಂಡ ಬಳಿಕ ಎಎಪಿಗೆ ಬಂದ ಮೊದಲ ಪೂರ್ಣ ಹಣಕಾಸು ವರ್ಷದ ದೇಣಿಗೆ ವಿವರ ಇದಾಗಿದೆ. ಸದ್ಯ ಪಕ್ಷವು ಪಂಜಾಬ್‌ನಲ್ಲಿ ಅಧಿಕಾರದಲ್ಲಿದೆ. ಟ್ರೈಡೆಂಟ್ ಕಂಪನಿಯೂ ಪಂಜಾಬ್‌ನಲ್ಲೇ ನೆಲೆ ಹೊಂದಿದೆ. ಎಎಪಿ ಸಲ್ಲಿಸಿರುವ ವರದಿಯಲ್ಲಿ ಒಟ್ಟು 1,202 ಕ್ರಮಸಂಖ್ಯೆಯ ನಮೂದುಗಳಿವೆ. ಪಂಜಾಬ್ ಎಎಪಿ ಅಧ್ಯಕ್ಷ ಅಮನ್ ಅರೋರಾ ಅವರ ಹೆಸರಿನಲ್ಲಿ ತಲಾ ₹10,000ರಂತೆ 12 ಪಾವತಿಗಳು ದಾಖಲಾಗಿದ್ದು, ಒಟ್ಟು ₹1.20 ಲಕ್ಷವಾಗಿದೆ.
ಇತರೆ ಪ್ರಾದೇಶಿಕ ಪಕ್ಷಗಳಿಗೂ ದೇಣಿಗೆ ಇಳಿಕೆ
ಇತರೆ ಪ್ರಾದೇಶಿಕ ಪಕ್ಷಗಳ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಇತ್ತೀಚಿನ ವರದಿಗಳಲ್ಲೂ 2024-25ಕ್ಕೆ ಹೋಲಿಸಿದರೆ 2025-26ರಲ್ಲಿ ದೇಣಿಗೆ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ.
ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ತೆಲುಗು ದೇಶಂ ಪಕ್ಷ (ಟಿಡಿಪಿ) 2025-26ರಲ್ಲಿ ₹58.25 ಕೋಟಿ ದೇಣಿಗೆ ಪಡೆದಿದೆ. ಹಿಂದಿನ ವರ್ಷ ₹83.03 ಕೋಟಿ ಬಂದಿತ್ತು. ಪ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್ ₹45 ಕೋಟಿ ನೀಡಿದ್ದು, ಪಕ್ಷದ ಅತಿ ದೊಡ್ಡ ದಾನಿಯಾಗಿದೆ. 2024-25ರಲ್ಲಿ ಇದೇ ಟ್ರಸ್ಟ್ ₹40 ಕೋಟಿ ನೀಡಿತ್ತು.
ಆಂಧ್ರಪ್ರದೇಶದಲ್ಲಿ ಟಿಡಿಪಿಗೆ ಅಧಿಕಾರ ಕಳೆದುಕೊಂಡ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) 2025-26ರಲ್ಲಿ ₹24.31 ಕೋಟಿ ದೇಣಿಗೆ ಪಡೆದಿದೆ. 2024-25ರಲ್ಲಿ ಪಕ್ಷಕ್ಕೆ ₹140.04 ಕೋಟಿ ದೇಣಿಗೆ ಬಂದಿತ್ತು. ಇತ್ತೀಚಿನ ವರದಿಯಲ್ಲಿ ಗುಡ್‌ವುಡ್ ಸ್ಯಾಂಕ್ಚುರಿ ಪ್ರೈವೇಟ್ ಲಿಮಿಟೆಡ್ ₹10 ಕೋಟಿ ನೀಡಿದ್ದು, ಅತಿ ದೊಡ್ಡ ದಾನಿಯಾಗಿದೆ.
ಇದನ್ನೂ ಓದಿ: EC ಒಳಜಗಳ | ಗ್ಯಾನೇಶ್ ಕುಮಾರ್ ಎಡವಟ್ಟುಗಳಿಗೆ ಆಕ್ಷೇಪಗಳ ಸರಮಾಲೆ
ಒಡಿಶಾದಲ್ಲಿ 2024ರಲ್ಲಿ ಅಧಿಕಾರ ಕಳೆದುಕೊಂಡ ಬಿಜು ಜನತಾ ದಳ (ಬಿಜೆಡಿ), ಇತ್ತೀಚಿನ ವರದಿಯಲ್ಲಿ ₹20,000ಕ್ಕಿಂತ ಹೆಚ್ಚಿನ ಯಾವುದೇ ದೇಣಿಗೆಯನ್ನು ತೋರಿಸಿಲ್ಲ. 2024-25ರಲ್ಲಿ ಪಕ್ಷವು ₹60 ಕೋಟಿ ದೇಣಿಗೆ ಪಡೆದಿತ್ತು. ಈ ಸಂಪೂರ್ಣ ಮೊತ್ತವು 2024ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನವೇ ಬಂದಿತ್ತು. ಚುನಾವಣಾ ಬಾಂಡ್‌ಗಳು ಜಾರಿಯಲ್ಲಿದ್ದ 2022-23 ಮತ್ತು 2023-24ರಲ್ಲಿಯೂ ಬಿಜೆಡಿ ₹20,000ಕ್ಕಿಂತ ಹೆಚ್ಚಿನ ದೇಣಿಗೆಯನ್ನು ವರದಿ ಮಾಡಿರಲಿಲ್ಲ.
ನಿಯಮಗಳ ಪ್ರಕಾರ, ಒಂದು ಹಣಕಾಸು ವರ್ಷದಲ್ಲಿ ₹20,000ಕ್ಕಿಂತ ಹೆಚ್ಚಿನ ದೇಣಿಗೆ ನೀಡುವವರ ಹೆಸರುಗಳನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕು. ಆದರೆ, ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಈ ದೇಣಿಗೆ ವರದಿಗಳು ಪಕ್ಷದ ಒಟ್ಟು ವಾರ್ಷಿಕ ಆದಾಯವನ್ನು ಪ್ರತಿನಿಧಿಸುವುದಿಲ್ಲ. ಪಕ್ಷದ ಸಂಪೂರ್ಣ ವಾರ್ಷಿಕ ಆದಾಯವನ್ನು ಪ್ರತ್ಯೇಕವಾಗಿ ಸಲ್ಲಿಸುವ ಲೆಕ್ಕಪರಿಶೋಧಿತ ಖಾತೆಗಳಲ್ಲಿ (Audited Accounts) ಬಹಿರಂಗಪಡಿಸಲಾಗುತ್ತದೆ.




