ಏಳು ರಾಜ್ಯಗಳಲ್ಲಿ ಮತದಾರರ ಮರುಸೇರ್ಪಡೆಗೆ ಹೊಸ ಅವಕಾಶ ನೀಡಿರುವ ಚುನಾವಣಾ ಆಯೋಗ, ಕರ್ನಾಟಕದಲ್ಲಿ ಅದೇ ಕ್ರಮ ಅನುಸರಿಸದಿರುವುದೇಕೆ ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ಪ್ರಶ್ನಿಸಿದೆ.
ಕರ್ನಾಟಕದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ತಪ್ಪಾಗಿ ಕೈಬಿಡಲಾಗಿದೆ. ತನ್ನ ಈ ಕೃತ್ಯಕ್ಕೆ ಚುನಾವಣಾ ಆಯೋಗ ಉತ್ತರಿಸಬೇಕು ಎಂದು ಎಸ್‌ಐಆರ್ ವಿರೋಧ ಒಕ್ಕೂಟ ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ನಾಯಕ ನೂರ್ ಶ್ರೀಧರ್, “ಚುನಾವಣಾ ಆಯೋಗವು ನವೆಂಬರ್ 6ರಂದು ಸುತ್ತೋಲೆ ಹೊರಡಿಸಿದೆ. ದೆಹಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಎಸ್‌ಎಸ್‌ಆರ್ ನಡೆಸುವುದಾಗಿ ಘೋಷಿಸಿದೆ. ಆಯೋಗವು ತನ್ನ ಕೃತ್ಯವನ್ನು ಮುಚ್ಚಿಹಾಕಲು ತಂದಿರುವ ಈ ಎಸ್‌ಎಸ್‌ಆರ್‌ಅನ್ನು ಎಸ್‌ಐಆರ್ ವಿರೋಧಿ ಒಕ್ಕೂಟ ಒಕ್ಕೊರಲಿನಿಂದ ತಿರಸ್ಕರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕದಲ್ಲಿ ಎಸ್‌ಐಆರ್‌ನಿಂದಾಗಿ ಲಕ್ಷಾಂತರ ಮತದಾರರು ಮತದ ಹಕ್ಕು ಕಳೆದುಕೊಂಡಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದಾರೆ.
“ಕರ್ನಾಟಕದಲ್ಲಿ ಎಸ್‌ಐಆರ್ ಆರಂಭವಾಗುವ ಮೊದಲು ಸುಮಾರು 5.54 ಕೋಟಿ ಮತದಾರರಿದ್ದರು. ಪರಿಷ್ಕರಣೆ ಬಳಿಕ ಅಕ್ಟೋಬರ್ 27ರಂದು ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಸುಮಾರು 4.55 ಕೋಟಿ ಮತದಾರರು ಉಳಿದಿದ್ದಾರೆ. ಅಂದರೆ, ಹಿಂದಿನ ಪಟ್ಟಿಗೆ ಹೋಲಿಸಿದರೆ ಸುಮಾರು 99 ಲಕ್ಷ ಮತದಾರರಷ್ಟು ಕಡಿತವಾಗಿದೆ. ಹೀಗಿರುವಾಗಿ, ಅಂತಿಮ ಮತ ಪಟ್ಟಿಯಿಂದ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ” ಎಂದು ನೂರ್ ಶ್ರೀಧರ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ ಹಿಂದಿನ ತರ್ಕವೇನು?
‘ಮತ ಕಾವಲು ಸಮಿತಿ’ ಪರಿಶೀಲಿಸಿದ 73 ಮತಗಟ್ಟೆಗಳಲ್ಲಿಯೂ ಅರ್ಹ ಮತದಾರರ ಹೆಸರುಗಳನ್ನು ತಪ್ಪಾಗಿ ಕೈಬಿಟ್ಟಿರುವ ಉದಾಹರಣೆಗಳು ಪತ್ತೆಯಾಗಿವೆ. ಅಲ್ಲದೆ, ಅಂತಿಮ ಮತದಾರರ ಪಟ್ಟಿಯಲ್ಲಿ 9,000 ನಕಲಿ ನಮೂದುಗಳು, ಒಂದೇ ಮನೆ ಸಂಖ್ಯೆಯಲ್ಲಿ ನೂರಕ್ಕೂ ಹೆಚ್ಚು ಮತದಾರರಿರುವ 380 ಪ್ರಕರಣಗಳು ಹಾಗೂ ಸಮರ್ಪಕ ವಿಳಾಸವಿಲ್ಲದ 20 ಲಕ್ಷ ನಮೂದುಗಳನ್ನು ತಮ್ಮ ದತ್ತಾಂಶ ತಂಡ ಪತ್ತೆಹಚ್ಚಿದೆ. ಈ ಅಂಕಿಅಂಶಗಳ ಕುರಿತು ಸ್ವತಂತ್ರ ಪರಿಶೀಲನೆ ನಡೆಸಿ ಚುನಾವಣಾ ಆಯೋಗವು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.
“ನಟ ಪ್ರಕಾಶ್ ರಾಜ್ ಸೇರಿದಂತೆ, ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ಸಮಸ್ಯೆಗಳನ್ನು ಪರಿಹರಿಸಿ, ಅರ್ಹರನ್ನು ಮರಳಿ ಮತಪಟ್ಟಿಗೆ ಸೇರಿಸಬೇಕು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಪ್ಪಾಗಿ ಕೈಬಿಡಲಾದವರನ್ನು ಗುರುತಿಸಿ, ಅವರ ಹಿಂದಿನ ಮತದಾರರ ಗುರುತಿನ ದಾಖಲೆಗಳನ್ನು ಉಳಿಸಿಕೊಂಡೇ ಮರುಸೇರ್ಪಡೆ ಮಾಡಬೇಕು. ಇಲ್ಲವಾದಲ್ಲಿ, ಹೋರಾಟ ಮತ್ತಷ್ಟು ತೀವ್ರವಾಗಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಐಆರ್ ವಿರೋಧಿ ಒಕ್ಕೂಟದ ವೀರಸಂಗಯ್ಯ, ಶ್ರೀಮತಿ, ಅಮ್ಜದ್ ಪಾಶಾ, ನಾಗೇಶ್ ಅರಳಕುಪ್ಪೆ, ಹೈದರ್ ಬೇಗ್ ಸೇರಿದಂತೆ ಹಲವರು ಇದ್ದರು.


