ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ. ಇದರೊಂದಿಗೆ, ಕೇರಳ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.
ಗ್ಯಾನೇಶ್ ಕುಮಾರ್ ಮೂಲಕ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿರುವ ಮೋದಿ ಸರ್ಕಾರ, ದೇಶಾದ್ಯಂತ ಎಸ್‌ಐಆರ್ ಹೇರಿಕೆ ಮಾಡಿ, ಸುಮಾರು 13 ಕೋಟಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಿದೆ ಎಂಬುದು ‘ತನಿಖಾ ವರದಿ’ಯಿಂದ ಬಹಿರಂಗವಾಗಿದೆ. ಈ ಬೆನ್ನಲ್ಲೇ, ಗ್ಯಾನೇಶ್ ಪದಚ್ಯುತಿ ಮತ್ತು ಬಂಧನ ಹಾಗೂ ತನಿಖೆಗೆ ಆಗ್ರಹಿಸಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆಯೇ, ಕೇರಳ ಸರ್ಕಾರವು ತನಿಖೆಗೆ ಆದೇಶಿಸಿರುವುದು ಕೇರಳ ಮತ್ತು ದೆಹಲಿ ನಡುವಿನ ರಾಜಕೀಯ ಪಟ್ಟು – ಪ್ರತಿಪಟ್ಟಿಗೆ ಕಾರಣವಾಗಿದೆ.
2006ರ ಪ್ರಕರಣದ ಹಿನ್ನೆಲೆ
ಗ್ಯಾನೇಶ್ ಕುಮಾರ್ ಅವರು 2006ರಲ್ಲಿ ಕೇರಳದ ಲೋಕೋಪಯೋಗಿ (PWD) ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಆ ಸಮಯಲ್ಲಿ, ಕೇರಳದ ಪ್ರಮುಖ ರಸ್ತೆ ಜಾಲವನ್ನು ಮೇಲ್ದರ್ಜೆಗೇರಿಸುವ ‘ಕೇರಳ ರಾಜ್ಯ ಸಾರಿಗೆ ಯೋಜನೆ’ಯನ್ನು (KSTP) ವಿಶ್ವಬ್ಯಾಂಕ್ ನೆರವಿನೊಂದಿಗೆ ಜಾರಿಗೊಳಿಸಲಾಗಿತ್ತು. ಈ 216 ಕೋಟಿ ರೂ. ಮೌಲ್ಯದ ಈ ಯೋಜನೆಯ ಕಾಮಗಾರಿಯನ್ನು ಇಂಡೋ-ಮಲೇಷ್ಯನ್ ಜಂಟಿ ಉದ್ಯಮ ‘PATI-BEL’ ಸಂಸ್ಥೆಗೆ ಸುಮಾರು ಗುತ್ತಿಗೆ ನೀಡಲಾಗಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ವಿವಿಧ ಆಡಳಿತಾತ್ಮಕ ತೊಡಕುಗಳಿಂದಾಗಿ ಈ ಯೋಜನೆಯ ಅನುಷ್ಠಾನ ಹಿಂದುಳಿದಿತ್ತು.
PATI-BEL ಸಂಸ್ಥೆಯ ಮುಖ್ಯ ಯೋಜನಾ ವ್ಯವಸ್ಥಾಪಕರಾಗಿದ್ದ ಮಲೇಷ್ಯಾದ ಸಿವಿಲ್ ಎಂಜಿನಿಯರ್ ಲೀ ಸೀ ಬೀನ್ ಅವರು, ಪೂರ್ಣಗೊಂಡ ಕಾಮಗಾರಿಗಳ ಬಿಲ್‌ಗಳ ಅನುಮೋದನೆ ಪಡೆಯಲು ಮತ್ತು ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲು ತೀವ್ರ ಆಡಳಿತಾತ್ಮಕ ಒತ್ತಡ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಈ ಮಾನಸಿಕ ಕಿರುಕುಳ ತಾಳಲಾರದೆ ಅವರು 2006ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿಗೆ ಸಂಬಂಧಿಸಿದ ಎರಡು ಆತ್ಮಹತ್ಯೆ ಪತ್ರಗಳಲ್ಲಿ ಗ್ಯಾನೇಶ್ ಕುಮಾರ್ ಅವರ ಹೆಸರು ನೇರವಾಗಿ ಉಲ್ಲೇಖವಾಗಿತ್ತು. ಆ ಡೆತ್‌ನೋಟ್ ಆಧರಿಸಿ ದಾಖಲಾದ ಪ್ರಕರಣದಲ್ಲಿ ಗ್ಯಾನೇಶ್ ಕುಮಾರ್ ಅವರನ್ನೂ ಆರೋಪಿಯಾಗಿ ಹೆಸರಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಕೇರಳ ವಿಜಿಲೆನ್ಸ್ ಆರಂಭಿಸಿತ್ತು.
ಆದರೆ, ಪ್ರಕರಣವು ಕಾನೂನು ತೊಡಕಿಗೆ ಸಿಲುಕಿತ್ತು. ವಿಜಿಲೆನ್ಸ್ ತನಿಖೆಯ ಪ್ರಕಾರ, ಲೀ ಸೀ ಬೀನ್ ಅವರ ಆತ್ಮಹತ್ಯೆ ಪತ್ರಗಳು ತನಿಖಾಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರವಾಗಿರಲಿಲ್ಲ. ಅಲ್ಲದೆ, ಅದರ ಸಂಪೂರ್ಣ ಸಾಕ್ಷ್ಯಾಧಾರಗಳನ್ನೂ ಪರಿಶೀಲಿಸಲು ಸಾಧ್ಯವಾಗಿರಲಿಲ್ಲ. ಪ್ರಕರಣವು ಆರಂಭದ ಹಂತದಲ್ಲಿಯೇ ಮುಚ್ಚಿಹೋಗಿತ್ತು.
2006ರಲ್ಲಿ ಕೇರಳದ ಕಾನೂನು ಸಚಿವರಾಗಿದ್ದ ಸಿಪಿಐ(ಎಂ) ನಾಯಕ ಎಂ. ವಿಜಯಕುಮಾರ್ ಪ್ರಕಾರ, “ವಿಜಿಲೆನ್ಸ್ ಪ್ರಾಥಮಿಕ ವಿಚಾರಣೆ ಆರಂಭವಾಗಿತ್ತಾದರೂ, ಆತ್ಮಹತ್ಯಾ ಪತ್ರಗಳ ಮೂಲ ಪ್ರತಿಯು ಲಭ್ಯವಾಗದ ಕಾರಣ ಪ್ರಕರಣವು ಎಫ್‌ಐಆರ್ ದಾಖಲಿಸುವ ಹಂತಕ್ಕೆ ತಲುಪಲಿಲ್ಲ” ಎಂದು ನೆನಪಿಸಿಕೊಂಡಿದ್ದಾರೆ.
ಅಂದಿನ PWD ಸಚಿವ ಎಂ.ಕೆ. ಮುನೀರ್ ಕೂಡ ಇಂತಹದೊಂದು ಪತ್ರದ ವದಂತಿ ಇತ್ತಾದರೂ ಅದರ ಪೂರ್ಣ ವಿವರಗಳು ತಮ್ಮ ಅಧಿಕೃತ ಪರಿಶೀಲನೆಗೆ ಬಂದಿರಲಿಲ್ಲ ಎಂದಿದ್ದಾರೆ.
ಲೀ ಸೀ ಬೀನ್ ಅವರ ಸಾವಿನ ನಂತರ ಗ್ಯಾನೇಶ್ ಕುಮಾರ್ ವಿರುದ್ಧ ಕೂಡ ವಿಜಿಲೆನ್ಸ್ ಪ್ರಾಥಮಿಕ ತನಿಖೆ ಆರಂಭಿಸಿತ್ತು. ತದನಂತರ, ಅವರನ್ನು PWD ಇಲಾಖೆಯಿಂದ ವರ್ಗಾಯಿಸಲಾಯಿತು. ಅವರು ಕೇಂದ್ರ ಸರ್ಕಾರಿ ಸೇವೆಗೆ ನಿಯೋಜನೆಗೊಂಡರು. ದೆಹಲಿಗೆ ತೆರಳಿದರು.
ಆದರೆ, ಈಗ ಕೇರಳ ಗೃಹ ಇಲಾಖೆಗೆ ಸಲ್ಲಿಕೆಯಾಗಿರುವ ಹೊಸ ದೂರಿನಲ್ಲಿ, “ಅಂದಿನ ತನಿಖೆಯನ್ನು ರಾಜಕೀಯ ಮತ್ತು ಉನ್ನತ ಮಟ್ಟದ ಬಾಹ್ಯ ಒತ್ತಡ ಬಳಸಿ ಮುಚ್ಚಿಹಾಕಲಾಗಿತ್ತು” ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಳೆಯ ಕಡತಗಳನ್ನು ಮರುಪರಿಶೀಲಿಸಿ ಪೂರ್ಣಪ್ರಮಾಣದ ತನಿಖೆ ನಡೆಸಲು ಕೇರಳ ಗೃಹ ಇಲಾಖೆ ಆದೇಶಿಸಿದೆ.
ಎಸ್‌ಐಆರ್ ಮತ್ತು ಆಯೋಗದೊಳಗಿನ ಭಿನ್ನಮತ
2025ರ ಫೆಬ್ರವರಿಯಲ್ಲಿ ಗ್ಯಾನೇಶ್ ಕುಮಾರ್ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ (CEC) ಅಧಿಕಾರ ವಹಿಸಿಕೊಂಡ ನಂತರ, ಬಿಹಾರದಿಂದ ಆರಂಭವಾದ ಎಸ್‌ಐಆರ್, ದೇಶಾದ್ಯಂತ ವಿಸ್ತರಿಲ್ಪಟ್ಟಿದೆ. ಈವರೆಗೆ ನಡೆದಿದ್ದ ಮತಪಟ್ಟಿ ಪರಿಷ್ಕರಣೆಗಳು ಬಿಟ್ಟುಹೋಗಿರುವ ಅರ್ಹ ಮತದಾರರನ್ನು ಮತಪಟ್ಟಿಗೆ ಸೇರಿಸುವ ಉದ್ದೇಶ ಹೊಂದಿದ್ದವು. ಆದರೆ, ಈಗಿನ ಎಸ್‌ಐಆರ್ ಪ್ರಕ್ರಿಯೆಯು ಮತಪಟ್ಟಿಯಲ್ಲಿರುವ ಅರ್ಹ ಮತದಾರರನ್ನೇ ಅನುಮಾನಿಸುವ ಮತ್ತು ಅವರನ್ನು ಮತಪಟ್ಟಿಯಿಂದ ಅಳಿಸಿಹಾಕುವ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ. ಈವರೆಗೆ, ಎಎಸ್‌ಡಿಡಿಒ (ಗೈರು, ಸ್ಥಳಾಂತರ, ನಕಲಿ, ಮೃತ ಹಾಗೂ ಇತರೆ) ವರ್ಗದಡಿ ಬರೋಬ್ಬರಿ 13 ಕೋಟಿ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ಇದರಲ್ಲಿ, ಬಹುತೇಕ ಮತದಾರರು ಅರ್ಹರಾಗಿದ್ದರೂ, ಅವರ ಹೆಸರನ್ನು ಅಳಿಸಿಹಾಕಲಾಗಿದೆ ಎಂಬ ಗಂಭೀರ ಆರೋಪಗಳಿವೆ.
ಈ ಕೃತ್ಯದಲ್ಲಿ ಗಮನಾರ್ಹ ಸಂಗತಿ ಎಂದರೆ, ಎಸ್‌ಐಆರ್ ಜಾರಿಗೊಳಿಸುವ ಮತ್ತು ನಂತರದಲ್ಲಿ ಮಾಡಲಾದ ಬದಲಾವಣೆಗಳ ನಿರ್ಧಾರವನ್ನು ಆಯೋಗದಲ್ಲಿ ಕೈಗೊಂಡವರಾರು ಎಂಬುತಾಗಿತ್ತು. ಗ್ಯಾನೇಶ್ ಕುಮಾರ್ ಅವರ ಸಹೋದ್ಯೋಗಿಗಾಳದ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಅಧಿಕೃತವಾಗಿ ಲಿಖಿತ ಆಕ್ಷೇಪ ದಾಖಲಿಸಿದ್ದರು. ತಮ್ಮ ಗಮನಕ್ಕೆ ತಾರದೆ, ಹಲವಾರು ನಿರ್ಧಾರ, ನಿಯಮ, ಬದಾವಣೆಗಳನ್ನು ಜಾರಿಗೊಳಿಸಲಾಗಿದೆ ಎಂದು ಆರೋಪಿಸಿದ್ದರು. ಈ ಪತ್ರಗಳು ತನಿಖೆಯಲ್ಲಿ ಹೊರಬಂದಿದ್ದು, ಗ್ಯಾನೇಶ್ ಕುಮಾರ್ ಅವರ ಕಾರ್ಯವೈಕರಿ, ಗ್ಯಾನೇಶ್ ಕುಮಾರ್ ನೇಮಕದ ಸಾಂವಿಧಾನಿಕತೆಯನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆ ಅರ್ಜಿಗಳನ್ನು ನ್ಯಾಯಾಲಯವು ಇಂದು (ಅಕ್ಟೋಬರ್ 5) ವಿಚಾರಣೆ ನಡೆಸಲಿದೆ.
ಎಸ್‌ಐಆರ್ ವಿರುದ್ಧದ ಹೋರಾಟದ ಸಮಯದಲ್ಲಿ ಕೇರಳ ತನಿಖೆ
ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ದೇಶಾದ್ಯಂತ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿರುವ ಈ ನಿರ್ಣಾಯಕ ಕ್ಷಣದಲ್ಲೇ, ಕೇರಳ ಸರ್ಕಾರವು ಗ್ಯಾನೇಶ್ ಕುಮಾರ್ ವಿರುದ್ಧದ 2006ರ ಪ್ರಕರಣವನ್ನು ಮುನ್ನೆಲೆಗೆ ತಂದಿದೆ. ಇದನ್ನು, ರಾಜಕೀಯವಾಗಿ ‘ದೆಹಲಿ ವಿರುದ್ಧದ ಕೇರಳದ ಪ್ರತಿದಾಳಿ’ ಎಂದೇ ವಿಶ್ಲೇಷಿಸಲಾಗಿದೆ. ಯಾಕೆಂದರೆ, ಗ್ಯಾನೇಶ್ ಕುಮಾರ್ ಅವರನ್ನು ಮುಂದಿಟ್ಟುಕೊಂಡು ದೇಶದ ಇಡೀ ಮತದಾರರನ್ನೇ ಅನುಮಾನಿಸಿ, ಬಿಜೆಪಿ ವಿರೋಧಿ ಮತಗಳನ್ನು ಅಳಿಸುವ ಷಡ್ಯಂತ್ರವನ್ನು ಮೋದಿ ಸರ್ಕಾರ ಹೆಣೆದಿತ್ತು. ಆದ್ದರಿಂದ, ಅದೇ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರಕರಣಕ್ಕೆ ಮರುಜೀವ ನೀಡಿ, ಗ್ಯಾನೇಶ್ ಕುಮಾರ್ ಅವರನ್ನು ಕಟಕಟೆಗೆ ನಿಲ್ಲಿಸಿ, ಮೋದಿ ಸರ್ಕಾರಕ್ಕೆ ತಿರುಗೇಟು ನೀಡಲು ಕೇರಳ ಸರ್ಕಾರ ಮುಂದಾಗಿದೆ.
ಕೇರಳ ಸರ್ಕಾರದ ವಿಜಿಲೆನ್ಸ್ ತನಿಖೆಯು ಲೀ ಸೀ ಬೀನ್ ಅವರ ಪತ್ರಗಳ ನೈಜತೆ, ಬಿಲ್ ಬಿಡುಗಡೆಯಲ್ಲಿ ಅಧಿಕಾರ ದುರುಪಯೋಗ ಹಾಗೂ ಹಿಂದಿನ ತನಿಖೆ ಸ್ಥಗಿತಗೊಳ್ಳಲು ಕಾರಣವಾದ ಅಂಶಗಳನ್ನು ನಿಷ್ಪಕ್ಷಪಾತವಾಗಿ ಹೊರತರಬೇಕಿದೆ. ಆದಾಗ್ಯೂ, 2023ರಲ್ಲಿ ‘ಚುನಾವಣಾ ಆಯುಕ್ತರ ಕಾಯ್ದೆ’ಗೆ ತಿದ್ದುಪಡಿ ತಂದ ಮೋದಿ ಸರ್ಕಾರವು, “ಮುಖ್ಯ ಚುನಾವಣಾ ಆಯುಕ್ತರು ಅಥವಾ ಇತರ ಚುನಾವಣಾ ಆಯುಕ್ತರು ತಮ್ಮ ಅಧಿಕೃತ ಹುದ್ದೆಯ ಕರ್ತವ್ಯ ಅಥವಾ ಜವಾಬ್ದಾರಿಯನ್ನು ನಿರ್ವಹಿಸುವಾಗ ತೆಗೆದುಕೊಂಡ ನಿರ್ಧಾರಗಳು, ಹೇಳಿಕೆಗಳು ಅಥವಾ ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ನಡಾವಳಿಗಳನ್ನು ಯಾವುದೇ ನ್ಯಾಯಾಲಯವು ವಿಚಾರಣೆ ನಡೆಸುವಂತಿಲ್ಲ” ಎಂಬ ಇಮ್ಯುನಿಟಿ ನೀಡಿದೆ.
ಆದರೂ, ಇದು ಚುನಾವಣಾ ಆಯೋಗ ಅಥವಾ ಚುನಾವಣಾ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಅಲ್ಲದೇ ಇರುವುದರಿಂದ, 2006ರ ಪ್ರಕರಣವನ್ನು ಗ್ಯಾನೇಶ್ ಕುಮಾರ್ ವಿರುದ್ಧವೂ ನಿರಾಯಾಸವಾಗಿ ತನಿಖೆ ನಡೆಸಬಹುದು ಎಂದು ಕೇರಳ ಸರ್ಕಾರ ಹೇಳಿದೆ. ಪ್ರಕರಣದ ತನಿಖೆ ನಡೆದು, ಗ್ಯಾನೇಶ್ ಕುಮಾರ್ ವಿರುದ್ಧದ ಆರೋಪಗಳಿಗೆ ಪುರಾವೆಗಳು ದೊರೆತರೆ, ಆಡಳಿತ ಯಂತ್ರವು ಮುಂದೇನು ಮಾಡಲಿದೆ ಕಾದು ನೋಡಬೇಕಿದೆ.



