ಭಾರತವನ್ನೂ ಒಳಗೊಂಡ ಆಗ್ನೇಯ ಏಷ್ಯಾ ವಲಯದಲ್ಲಿ ಆರೋಗ್ಯಕರ ಜೀವಿತಾವಧಿ ಮಟ್ಟ ಜಾಗತಿಕ ಸರಾಸರಿಗಿಂತ ಕೆಳಗಿದೆ. ಸಾಮಾಜಿಕ ಮತ್ತು ವೈದ್ಯಕೀಯ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಲುಕಿ ತತ್ತರಿಸುತ್ತಿರುವ ಮಹಿಳೆಯರ ದುಸ್ಥಿತಿ ಈಗಲಾದರೂ ಬದಲಾಗಬೇಕು. ಹೆಣ್ಣು ಭೂಮಿಯ ಮೇಲೆ ಬದುಕಿರುವಷ್ಟೂ ದಿನವು ಆಕೆ ನೋವುರಹಿತ, ಸ್ವಾವಲಂಬಿ ಮತ್ತು ಗೌರವಯುತವಾಗಿ ಬದುಕುವಂತಾಗಬೇಕು.
ಜಾಗತಿಕ ಜನಸಂಖ್ಯಾ ಶಾಸ್ತ್ರ ಮತ್ತು ವೈದ್ಯಕೀಯ ಲೋಕದ ಇತಿಹಾಸದ ಪ್ರಕಾರ ಹೆಣ್ಣು ಜೈವಿಕವಾಗಿ ಗಂಡಿಗಿಂತ ಹೆಚ್ಚು ದೀರ್ಘಾಯುಷಿ. ಪ್ರಕೃತಿಯೇ ಆಕೆಗೆ ದೀರ್ಘಕಾಲ ಬಾಳುವ ವರ ದಯಪಾಲಿಸಿದೆ. ಹೆಣ್ಣಿಗೆ ಪ್ರಕೃತಿ ನೀಡಿರುವ ಈ ದೀರ್ಘಾಯುಷ್ಯದ ವರವೇ ಆಕೆಗೆ ಶಾಪವಾಗುತ್ತಿದೆ ಎನ್ನುತ್ತಿವೆ ಜಾಗತಿಕ ಜನಸಂಖ್ಯೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳು. ಪುರುಷರಿಗಿಂತ 4-5 ವರ್ಷ ಹೆಚ್ಚು ಬದುಕುವ ಹೆಣ್ಣಿನ ದೇಹ ಹಾಗೂ ಮನಸ್ಸು ಆಕೆಯ ಕೊನೆಯ ದಿನಗಳಲ್ಲಿ ಕಾಯಿಲೆಗಳ ಗೂಡಾಗುತ್ತಿವೆ. ಜೈವಿಕ ಬದಲಾವಣೆ, ಕೌಟುಂಬಿಕ ನಿರ್ಲಕ್ಷ್ಯ, ಲಿಂಗ ತಾರತಮ್ಯ ಹಾಗೂ ಆರ್ಥಿಕ ಪರಾವಲಂಬಿತನ ಆಕೆ ಹಾಸಿಗೆ ಹಿಡಿದು ಮೂಕವೇದನೆ ಅನುಭವಿಸುವಂತೆ ಮಾಡುತ್ತಿವೆ. ಆಕೆಯ ಮೌನ ಸಂಭಾಷಣೆಗೆ ಯಾರಾದರೂ ಕಿವಿಗೊಡಬೇಕಿದೆಯಲ್ಲವೇ?
ವಿಶ್ವ ಆರೋಗ್ಯ ಸಂಸ್ಥೆಯು ಜನಸಂಖ್ಯೆಯ ಗುಣಮಟ್ಟವನ್ನು ಅಳೆಯಲು ಎರಡು ವಿಭಿನ್ನ ಮತ್ತು ಅತ್ಯಂತ ನಿರ್ಣಾಯಕ ಪರಿಕಲ್ಪನೆಗಳನ್ನು ಬಳಸುತ್ತದೆ. ಮೊದಲನೆಯದು, ‘ಒಟ್ಟು ಜೀವಿತಾವಧಿʼ, ಎರಡನೆಯದು, ʼಆರೋಗ್ಯಕರ ಜೀವಿತಾವಧಿ’. ಇವೆರಡರ ನಡುವಿನ ಸಮತೋಲನವೇ ʼಉತ್ತಮ ಜೀವನʼದ ಮಾನದಂಡ. ಜಾಗತಿಕ ದತ್ತಾಂಶಗಳ ಪ್ರಕಾರ, ಮಹಿಳೆಯರು ಪುರುಷರಿಗಿಂತ ಸರಾಸರಿ ನಾಲ್ಕರಿಂದ ಐದು ವರ್ಷ ಹೆಚ್ಚು ಕಾಲ ಬದುಕುತ್ತಾರೆ. ಆದರೆ, ಈ ಹೆಚ್ಚುವರಿ ವರ್ಷಗಳು ಅವರನ್ನು ರೋಗರುಜಿನಗಳಿಗೆ ಈಡುಮಾಡುತ್ತಿವೆ. ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವ ತೀವ್ರ ಹೃದಯಾಘಾತದಂತಹ ಕಾಯಿಲೆಗಳು ಕ್ಷಣಾರ್ಧದಲ್ಲಿ ಜೀವ ಕಸಿಯುತ್ತವೆ. ಆದರೆ, ಮಹಿಳೆಯರನ್ನು ಕಾಡುವ ರೋಗಗಳು ಅವರ ಪ್ರಾಣವನ್ನು ತಕ್ಷಣಕ್ಕೆ ಹರಣ ಮಾಡುವುದಿಲ್ಲ. ದಶಕಗಳ ಕಾಲ ದೇಹವನ್ನು ಒಳಗಿನಿಂದಲೇ ತಿನ್ನುತ್ತಾ ಅವರನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಹೀಗಾಗಿ, ಮಹಿಳೆಯರು ಹೆಚ್ಚು ಕಾಲ ಬದುಕುತ್ತಾರೆ ಎನ್ನುವುದಕ್ಕಿಂತ, ಹೆಚ್ಚು ಕಾಲ ಕಾಯಿಲೆಯೊಂದಿಗೆ ಹೋರಾಡುತ್ತಾ, ನರಳುತ್ತಾ ಬದುಕುತ್ತಾರೆ ಎನ್ನುವುದು ಸೂಕ್ತ.
ಜೈವಿಕ ವ್ಯತ್ಯಾಸಗಳು ಮತ್ತು ಮಹಿಳೆಯರನ್ನು ಕಾಡುವ ವಿಶಿಷ್ಟ ರೋಗಗಳು
ವೈದ್ಯಕೀಯ ಜರ್ನಲ್ ‘ದಿ ಲ್ಯಾನ್ಸೆಟ್’ ಪ್ರಕಟಿಸಿದ ‘ಜಾಗತಿಕ ರೋಗಗಳ ಹೊರೆ’ (Global Burden of Disease) ಕುರಿತಾದ ದೀರ್ಘಾವಧಿ ಅಧ್ಯಯನವು ವಯಸ್ಸಾದಂತೆ ಮಹಿಳೆಯರನ್ನು ಕಾಡುವ ಕಾಯಿಲೆಗಳ ಸ್ವರೂಪ ಮತ್ತು ತೀವ್ರತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಹೆಣ್ಣಿನ ದೇಹದಲ್ಲಿ ನಿಸರ್ಗದತ್ತವಾಗಿ ಉತ್ಪತ್ತಿಯಾಗುವ ‘ಈಸ್ಟ್ರೋಜನ್’ ಹಾರ್ಮೋನ್ ಆಕೆಗೆ ಯೌವನದಲ್ಲಿ ರಕ್ಷಣಾ ಕವಚವಾಗಿರುತ್ತದೆ. ಆದರೆ, ನಲವತ್ತರ ಹರೆಯ ದಾಟಿ ಋತುಬಂಧ (Menopause) ಸಂಭವಿಸಿದ ತಕ್ಷಣ ಈ ಹಾರ್ಮೋನ್ ಮಟ್ಟ ತಳ ಮುಟ್ಟುತ್ತದೆ. ಇದರ ನೇರ ಪರಿಣಾಮ ಬೀರುವುದು ಆಕೆಯ ಅಸ್ಥಿಪಂಜರದ ಮೇಲೆ. ಮೂಳೆಗಳು ತಮ್ಮ ಸಾಂದ್ರತೆಯನ್ನು ಕಳೆದುಕೊಂಡು ಜೊಳ್ಳಾಗುವ ‘ಆಸ್ಟಿಯೋಪೊರೋಸಿಸ್’ ಕಾಯಿಲೆಗೆ ತುತ್ತಾಗುತ್ತಾರೆ. ಕೀಲುಗಳ ನಡುವಿನ ಕಾರ್ಟಿಲೇಜ್ ಸವೆದುಹೋಗುತ್ತದೆ. ಇಂತಹ ತೀವ್ರ ‘ಆರ್ಥ್ರೈಟಿಸ್’ ಸಮಸ್ಯೆಗಳು ಮಹಿಳೆಯರ ಸ್ವಾವಲಂಬಿ ಚಲನಶೀಲತೆಯನ್ನೇ ಕಸಿದುಕೊಳ್ಳುತ್ತವೆ.

ಜತೆಗೆ, ನರಮಂಡಲದ ಕ್ಷೀಣತೆಯಿಂದ ಉಂಟಾಗುವ ಆಲ್ಝೈಮರ್ಸ್ ಮತ್ತು ಡಿಮೆನ್ಶಿಯಾದಂತಹ ಘೋರ ಮರೆವಿನ ಕಾಯಿಲೆಗಳಿಂದ ಬಳಲುವವರಲ್ಲಿ ಜಾಗತಿಕವಾಗಿ ಶೇ.65ಕ್ಕೂ ಹೆಚ್ಚು ಮಂದಿ ಮಹಿಳೆಯರೇ ಇದ್ದಾರೆ ಎಂಬುದು ಇನ್ನೊಂದು ಆಘಾತಕಾರಿ ಅಂಶ. ದೇಹದ ರೋಗನಿರೋಧಕ ಶಕ್ತಿಯೇ ದಾರಿ ತಪ್ಪಿ ತನ್ನದೇ ಆರೋಗ್ಯವಂತ ಜೀವಕೋಶಗಳ ಮೇಲೆ ಮಾರಣಾಂತಿಕ ದಾಳಿ ಮಾಡುವ ‘ಆಟೋಇಮ್ಯೂನ್’ ಕಾಯಿಲೆಗಳು (ಉದಾಹರಣೆಗೆ ಲ್ಯೂಪಸ್, ರೂಮಟಾಯ್ಡ್ ಆರ್ಥ್ರೈಟಿಸ್) ಮತ್ತು ನಾವೆಲ್ಲರೂ ಗಮನಿಸಿರುವಂತೆ, ದೃಷ್ಟಿಹೀನತೆಗೆ ಕಾರಣವಾಗುವ ಕಣ್ಣಿನ ಪೊರೆಯಂತಹ ಸಮಸ್ಯೆಗಳು ಪುರುಷರಿಗಿಂತ ಮಹಿಳೆಯರಲ್ಲೇ ಗಣನೀಯವಾಗಿ ಹೆಚ್ಚಾಗಿ ಕಂಡುಬರುತ್ತವೆ. ವೃದ್ಧಾಪ್ಯದಲ್ಲಿ ಮಹಿಳೆಯ ದೇಹವು ಕೇವಲ ಒಂದು ನಿರ್ದಿಷ್ಟ ರೋಗದ ಕೇಂದ್ರವಾಗದೆ, ಮಧುಮೇಹ, ತೀವ್ರ ರಕ್ತಹೀನತೆ, ರಕ್ತದೊತ್ತಡ ಮತ್ತು ಮೂಳೆ ರೋಗಗಳಂತಹ ಹತ್ತಾರು ಕಾಯಿಲೆಗಳ ‘ಕೋಮೊರ್ಬಿಡಿಟಿ’ (Comorbidity) ಅಥವಾ ರೋಗಗಳ ಒಕ್ಕೂಟವಾಗಿ ಮಾರ್ಪಡುತ್ತದೆ.
ಕುಟುಂಬದ ನಿರ್ಲಕ್ಷ್ಯ ಮತ್ತು ತಾರತಮ್ಯ
ಮೊದಲೇ ಆಕೆಗೆ ಸಾಕೆನ್ನುವಷ್ಟು ಜೈವಿಕ ಸವಾಲುಗಳು. ಜತೆಗೆ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯೂ ಇನ್ನಷ್ಟು ಪುಷ್ಟಿ ಕೊಡುತ್ತದೆ. ಭಾರತೀಯ ಕೌಟುಂಬಿಕ ಚೌಕಟ್ಟಿನಲ್ಲಿ ಹೆಣ್ಣುಮಕ್ಕಳನ್ನು ಬಾಲ್ಯದಿಂದಲೇ ಕೇವಲ ತ್ಯಾಗದ ಪ್ರತೀಕವಾಗಿ ಮತ್ತು ಇಡೀ ಕುಟುಂಬದ ‘ಪೋಷಕರು’ (Caregivers) ಎನ್ನುವಂತೆ ಬಿಂಬಿಸಲಾಗುತ್ತದೆ. ಗಂಡ, ಮಕ್ಕಳು, ಮೊಮ್ಮಕ್ಕಳು ಅಥವಾ ಅತ್ತೆ-ಮಾವನ ಅನಾರೋಗ್ಯದ ಸಮಯದಲ್ಲಿ ಹಗಲಿರುಳು ಕರಗುವ ಮೇಣದಬತ್ತಿಯಂತೆ ಶ್ರಮಿಸುವ ಮಹಿಳೆ, ತನ್ನದೇ ದೇಹದ ಅನಾರೋಗ್ಯದ ಮುನ್ಸೂಚನೆಗಳನ್ನು ಸಾರಾಸಗಟಾಗಿ ನಿರ್ಲಕ್ಷಿಸುತ್ತಾಳೆ. ಮನೆಯವರೆಲ್ಲರೂ ಊಟ ಮಾಡಿದ ನಂತರ ಕೊನೆಯಲ್ಲಿ ತಳದಲ್ಲಿ ಉಳಿದ ಅಲ್ಪಸ್ವಲ್ಪ ಅನ್ನವನ್ನಷ್ಟೇ ಸೇವಿಸುವ ಸಂಪ್ರದಾಯ ಇಂದಿಗೂ ಅನೇಕ ಮನೆಗಳಲ್ಲಿದೆ. ಈ ದೀರ್ಘಕಾಲದ ಅಪೌಷ್ಟಿಕತೆ ಮತ್ತು ರಕ್ತಹೀನತೆಯೇ ವೃದ್ಧಾಪ್ಯದ ಕಾಯಿಲೆಗಳಿಗೆ ಮೂಲ ಕಾರಣ. ಕಾಯಿಲೆಯ ವೇದನೆ ತಡೆಯಲಾರದ ಹಂತ ತಲುಪುವವರೆಗೂ ಆಕೆ ಆಸ್ಪತ್ರೆಯ ಮೆಟ್ಟಿಲು ಹತ್ತುವುದೇ ಇಲ್ಲ. ಸತತ ಹೆರಿಗೆಗಳು, ಗೃಹಕೃತ್ಯದ ಕಠಿಣ ಪರಿಶ್ರಮ ಮತ್ತು ಮಾನಸಿಕ ಒತ್ತಡದಿಂದ ಉಂಟಾಗುವ ಇಂತಹ ದೈಹಿಕ ಹಾಗೂ ಮಾನಸಿಕ ಬಳಲಿಕೆಯನ್ನು ವೈದ್ಯಕೀಯ ಜಗತ್ತು ‘ಕೇರ್‌ಗಿವರ್ ಬರ್ನ್‌ಔಟ್’ (Caregiver Burnout) ಎಂದು ಕರೆಯುತ್ತದೆ. ಇಷ್ಟೆಲ್ಲಾ ತ್ಯಾಗ ಮಾಡುವ ಮಹಿಳೆಗೆ ವಯಸ್ಸಾಗಿ ತಾನು ಅಸಹಾಯಕಳಾಗಿ ಹಾಸಿಗೆ ಹಿಡಿದಾಗ, ಆಕೆಯನ್ನು ಪ್ರೀತಿಯಿಂದ ಅಷ್ಟೇ ತಾಳ್ಮೆಯಿಂದ ಆರೈಕೆ ಮಾಡುವವರ ಸಂಖ್ಯೆ ಮಾತ್ರ ತೀರಾ ವಿರಳ.

ವೈದ್ಯಕೀಯ ರಂಗದ ‘ವೈ-ಬಯಾಸ್’
ವೈದ್ಯಕೀಯ ಸಂಶೋಧನಾ ರಂಗದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಲಿಂಗ ತಾರತಮ್ಯ ಅಥವಾ ‘ವೈ-ಬಯಾಸ್’ (Y-Bias) ಕೂಡ ಮಹಿಳೆಯರ ಈ ದುಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂಬುದು ಬಹುಪಾಲು ಜನರಿಗೆ ತಿಳಿದಿಲ್ಲ. ವೈದ್ಯಕೀಯ ಲೋಕದ ಇತಿಹಾಸದಲ್ಲಿ ಬಹುತೇಕ ಕ್ಲಿನಿಕಲ್ ಪ್ರಯೋಗಗಳು ಮತ್ತು ಔಷಧಿಗಳ ಪ್ರಮಾಣೀಕರಣ ಸಂಶೋಧನೆಗಳು ಪುರುಷರ ದೇಹದ ತೂಕ, ಚಯಾಪಚಯ ಕ್ರಿಯೆ ಮತ್ತು ಹಾರ್ಮೋನ್‌ಗಳನ್ನೇ ಮಾನದಂಡವಾಗಿಟ್ಟುಕೊಂಡು ನಡೆದಿವೆ. ಪುರುಷ ಮತ್ತು ಮಹಿಳೆಯರ ದೇಹದ ಜೈವಿಕ ಪ್ರತಿಕ್ರಿಯೆಗಳು ಸಂಪೂರ್ಣ ಭಿನ್ನವಾಗಿರುತ್ತವೆ ಎಂಬ ಸತ್ಯವನ್ನು ವಿಜ್ಞಾನ ರಂಗ ಇತ್ತೀಚಿನವರೆಗೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಉದಾಹರಣೆಗೆ: ಹೃದಯಾಘಾತದ ಲಕ್ಷಣಗಳು ಪುರುಷರಲ್ಲಿ ಎಡಗೈ ಮತ್ತು ಎದೆನೋವಿನ ಮೂಲಕ ಅತ್ಯಂತ ಸ್ಪಷ್ಟವಾಗಿ ವ್ಯಕ್ತವಾದರೆ, ಮಹಿಳೆಯರಲ್ಲಿ ಅದು ಅತಿಯಾದ ಆಯಾಸ, ಉಸಿರಾಟದ ತೊಂದರೆ, ವಾಕರಿಕೆ ಅಥವಾ ಕೇವಲ ಬೆನ್ನುನೋವಿನ ರೂಪದಲ್ಲಿ ಗೋಚರಿಸಬಹುದು. ವೈದ್ಯಕೀಯ ಪಠ್ಯಗಳಲ್ಲಿ ಪುರುಷರ ಲಕ್ಷಣಗಳನ್ನೇ ಪ್ರಮಾಣೀಕರಿಸಿ ಬರೆದಿರುವುದರಿಂದ, ಅನೇಕ ಬಾರಿ ತಜ್ಞ ವೈದ್ಯರೇ ಮಹಿಳೆಯರ ಹೃದಯ ರೋಗಗಳನ್ನು ಸಾಮಾನ್ಯ ಆಯಾಸವೆಂದು ತಪ್ಪಾಗಿ ಭಾವಿಸಿ ನಿಖರ ರೋಗನಿರ್ಣಯ ಮಾಡಲು ವಿಫಲರಾಗುತ್ತಾರೆ. ಇದರಿಂದಾಗಿ ಮಹಿಳೆಯರ ಗಂಭೀರ ಕಾಯಿಲೆಗಳು ಆರಂಭಿಕ ಹಂತದಲ್ಲಿ ಪತ್ತೆಯಾಗದೆ, ಗುಣಪಡಿಸಲಾಗದ ಕೊನೆಯ ಹಂತಕ್ಕೆ ತಲುಪಿಬಿಡುತ್ತವೆ.
ಆರ್ಥಿಕ ಅಸಹಾಯಕತೆ ಮತ್ತು ವೃದ್ಧಾಪ್ಯದ ಒಂಟಿತನ
ಮಹಿಳೆಯರ ಈ ಸುದೀರ್ಘ ಕಾಯಿಲೆಯ ಬದುಕಿಗೆ ಮತ್ತೊಂದು ಕರಾಳ ಆಯಾಮವನ್ನು ನೀಡುವುದು ಅವರ ಆರ್ಥಿಕ ಪರಾವಲಂಬಿತನ. ಭಾರತದಂತಹ ದೇಶಗಳಲ್ಲಿ ಬಹುತೇಕ ಮಹಿಳೆಯರು ಗೃಹಿಣಿಯರಾಗಿರುವುದರಿಂದ ಅವರ ಹೆಸರಿನಲ್ಲಿ ಸ್ವಂತ ಆಸ್ತಿಯಾಗಲಿ, ಬ್ಯಾಂಕ್ ಬ್ಯಾಲೆನ್ಸ್ ಆಗಲಿ ಅಥವಾ ನಿಯಮಿತ ಪಿಂಚಣಿಯಾಗಲಿ ಇರುವುದಿಲ್ಲ. ಯೌವನದಲ್ಲಿ ಪತಿಯ ಆದಾಯದ ಮೇಲೆ, ವೃದ್ಧಾಪ್ಯದಲ್ಲಿ ಮಕ್ಕಳ ಆದಾಯದ ಮೇಲೆ ಅವಲಂಬಿತರಾಗಬೇಕಾದ ಅನಿವಾರ್ಯತೆ ಅವರದ್ದಾಗಿರುತ್ತದೆ. ವಯಸ್ಸಾದ ಕಾಲದಲ್ಲಿ ತಮಗಾಗುವ ದೈಹಿಕ ನೋವಿಗೆ ಚಿಕಿತ್ಸೆ ಪಡೆಯಲು ಕುಟುಂಬದ ಇತರರ ಮುಂದೆ ಕೈಯೊಡ್ಡಬೇಕಾದಾಗ ಉಂಟಾಗುವ ಸ್ವಾಭಿಮಾನದ ಧಕ್ಕೆಗೆ ಹೆದರಿ, ಅನೇಕ ವೃದ್ಧ ಮಹಿಳೆಯರು ತಮ್ಮ ಕಾಯಿಲೆಗಳನ್ನು ಯಾರಿಗೂ ಹೇಳದೆ ಮೌನವಾಗಿ ನುಂಗಿಕೊಳ್ಳುತ್ತಾರೆ. ಇದರೊಂದಿಗೆ, ಪುರುಷರಿಗಿಂತ ಮಹಿಳೆಯರ ಆಯುಷ್ಯ ಹೆಚ್ಚಿರುವುದರಿಂದ, ವೃದ್ಧಾಪ್ಯದಲ್ಲಿ ಅವರು ಪತಿಯನ್ನು ಕಳೆದುಕೊಂಡು ಏಕಾಂಗಿತನ ಅನುಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ (ಜಾಗತಿಕವಾಗಿಯೂ). ಆರ್ಥಿಕ ಅಸಹಾಯಕತೆ ಮತ್ತು ಒಂಟಿತನ ಒಟ್ಟಿಗೆ ಸೇರಿದಾಗ ಅದು ಅವರ ಮಾನಸಿಕ ನೆಮ್ಮದಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ, ಖಿನ್ನತೆಯ ಪ್ರಪಾತಕ್ಕೆ ತಳ್ಳುತ್ತದೆ.
ʼದ ಹಿಂದೂʼ ವರದಿ ಮಾಡಿರುವಂತೆ, ಮಹಿಳೆಯರ ಒಟ್ಟು ಆಯುಷ್ಯ 76 ವರ್ಷ, ಪುರುಷರದ್ದು 71 ವರ್ಷ. ಆದರೆ, ಕಳೆದ ಎರಡು ದಶಕಗಳಲ್ಲಿ ವೈದ್ಯಕೀಯ ರಂಗ ಎಷ್ಟು ಪ್ರಗತಿ ಸಾಧಿಸಿದರೂ ಮಹಿಳೆಯರ ‘ಆರೋಗ್ಯಕರ ಜೀವಿತಾವಧಿ’ (HALE) ಮಾತ್ರ ಕೇವಲ 64 ವರ್ಷಗಳಿಗೆ ಸೀಮಿತವಾಗಿದೆ. ಅಂದರೆ, ಮಹಿಳೆಯರು ತಮ್ಮ ಬದುಕಿನ ಕೊನೆಯ 12 ವರ್ಷಗಳನ್ನು ಕಾಯಿಲೆ, ನಿರಂತರ ನೋವು ಮತ್ತು ಅಸ್ವಸ್ಥತೆಯಲ್ಲೇ ಕಳೆಯುತ್ತಾರೆ. ಪುರುಷರು ಹೃದಯಾಘಾತ, ಅಪಘಾತ ಮತ್ತು ಆತ್ಮಹತ್ಯೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದುತ್ತಾರೆ. ಆದರೆ, ಜೈವಿಕವಾಗಿ ಮಹಿಳೆಯರಿಗೆ ಸಿಗಬೇಕಾದ್ದ ಆಯುಷ್ಯದ ಲಾಭವನ್ನು, ಅವರನ್ನು ಕಾಡುವ ದೀರ್ಘಕಾಲದ ಕಾಯಿಲೆಗಳು ಮತ್ತು ನೋವುಗಳು ಕಿತ್ತುಕೊಳ್ಳುತ್ತಿವೆ. ಬೆನ್ನು-ಕುತ್ತಿಗೆ ನೋವು, ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳು ಮಹಿಳೆಯರ ಆರೋಗ್ಯಕರ ವರ್ಷಗಳನ್ನು ಭೀಕರವಾಗಿ ನುಂಗಿಹಾಕುತ್ತಿವೆ. ಕೋವಿಡ್ ಸಾಂಕ್ರಾಮಿಕವೂ ಸಹ ಮಹಿಳೆಯರ ಮಾನಸಿಕ ಆರೋಗ್ಯವನ್ನು ಧ್ವಂಸಗೊಳಿಸಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಆರೋಗ್ಯ ಅಂಕಿ-ಅಂಶಗಳ ವರದಿ 2026ರ ಪ್ರಕಾರ, ಭಾರತದಲ್ಲಿ ಈ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿದೆ. ಇಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಅರ್ಧಕ್ಕಿಂತ ಹೆಚ್ಚು (ಶೇ. 53.7) ಮಹಿಳೆಯರು ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದು ಜಾಗತಿಕ ಸರಾಸರಿಗಿಂತ ದುಪ್ಪಟ್ಟು. ಹಾಗೆಯೇ, ಪ್ರತಿ 5 ಮಹಿಳೆಯರಲ್ಲಿ ಒಬ್ಬರು ಕೌಟುಂಬಿಕ ಹಿಂಸಾಚಾರ ಎದುರಿಸುತ್ತಿದ್ದಾರೆ. ಅಲ್ಲದೆ, ಭಾರತದ ಮೂರನೇ ಒಂದು ಭಾಗದಷ್ಟು ಕುಟುಂಬಗಳು ತಮ್ಮ ಒಟ್ಟು ಆದಾಯದ ಶೇ. 40ಕ್ಕಿಂತ ಹೆಚ್ಚು ಹಣವನ್ನು ವೈದ್ಯಕೀಯ ಚಿಕಿತ್ಸೆಗೇ ಖರ್ಚು ಮಾಡುತ್ತಿರುವುದರಿಂದ ದೀರ್ಘಕಾಲದ ಚಿಕಿತ್ಸೆಗಳು ಮಹಿಳೆಯರಿಗೆ ಕೈಗೆಟುಕದಂತಾಗಿವೆ. ಈ ಎಲ್ಲ ಸವಾಲುಗಳು ಅವರ ದೈನಂದಿನ ಜೀವನದ ಚಲನಶೀಲತೆ, ಉತ್ಪಾದಕತೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತಿವೆ.
ಇದನ್ನೂ ಓದಿ: ಡೈನೋಸಾರ್‌ಗಳಿಗಿಂತಲೂ ಪುರಾತನ, ಬಾಂಬ್ ಬಿದ್ದರೂ ಬದುಕಬಲ್ಲವು: ʼಜಿರಳೆʼ ಜಗತ್ತಿನ ವಿಸ್ಮಯಗಳು ಒಂದೆರಡಲ್ಲ!
ಮಹಿಳಾ ಆರೋಗ್ಯ ಮತ್ತು ಆರೋಗ್ಯಕರ ಜೀವಿತಾವಧಿಯ (HALE) ಪ್ರಮಾಣ ಜಗತ್ತಿನಾದ್ಯಂತ ಒಂದೇ ಸಮನಾಗಿಲ್ಲ. ಯುರೋಪಿಯನ್ ಮತ್ತು ವೆಸ್ಟರ್ನ್ ಪೆಸಿಫಿಕ್ ವಲಯದ ಮಹಿಳೆಯರು ಜಾಗತಿಕವಾಗಿ ಅತಿ ಹೆಚ್ಚು ಅಂದರೆ ಸರಾಸರಿ 68 ರಿಂದ 70.5 ವರ್ಷಗಳ ಆರೋಗ್ಯಕರ ಆಯುಷ್ಯವನ್ನು ಹೊಂದಿದ್ದರೆ, ಆಫ್ರಿಕನ್ ವಲಯದಲ್ಲಿ ಇದು ಅತ್ಯಂತ ಕನಿಷ್ಠ ಮಟ್ಟಕ್ಕೆ (56.5 ವರ್ಷ) ಕುಸಿದಿದೆ. ಭಾರತವನ್ನೂ ಒಳಗೊಂಡ ಆಗ್ನೇಯ ಏಷ್ಯಾ ವಲಯದಲ್ಲೂ ಈ ಮಟ್ಟ ಜಾಗತಿಕ ಸರಾಸರಿಗಿಂತ ಕೆಳಗಿದೆ. ಸಾಮಾಜಿಕ ಮತ್ತು ವೈದ್ಯಕೀಯ ವ್ಯವಸ್ಥೆಯ ಇಂತಹ ನಿರ್ಲಕ್ಷ್ಯದ ಸುಳಿಗೆ ಸಿಲುಕಿ ತತ್ತರಿಸುತ್ತಿರುವ ಮಹಿಳೆಯರ ಈ ದುಸ್ಥಿತಿ ಈಗಲಾದರೂ ಬದಲಾಗಬೇಕಿದೆ. ಹೆಣ್ಣು ಭೂಮಿಯ ಮೇಲೆ ಬದುಕಿರುವಷ್ಟೂ ದಿನವು ಆಕೆ ನೋವುರಹಿತ, ಸ್ವಾವಲಂಬಿ ಮತ್ತು ಗೌರವಯುತವಾಗಿ ಬದುಕುವಂತಾಗಬೇಕು.
ಇದಕ್ಕಾಗಿ ನಮ್ಮ ಒಟ್ಟಾರೆ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬರಬೇಕಿದೆ. ದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲೇ ಮಹಿಳೆಯರ ಹಾರ್ಮೋನ್ ಏರುಪೇರುಗಳು, ದೀರ್ಘಕಾಲದ ಬೆನ್ನು-ಕುತ್ತಿಗೆ ನೋವುಗಳು ಮತ್ತು ಮಾನಸಿಕ ಆರೋಗ್ಯದ ಸವಾಲುಗಳಿಗೆ ತಕ್ಕಂತೆ ವಿಶೇಷ ಸೌಲಭ್ಯಗಳನ್ನು ಹೊಂದಿದ ‘ಲಿಂಗ-ಆಧಾರಿತ ಆರೋಗ್ಯ ನೀತಿ’ ಜಾರಿಗೆ ಬರಬೇಕು. ಜತೆಗೆ, 40 ವರ್ಷ ದಾಟಿದ ಪ್ರತಿಯೊಬ್ಬ ಮಹಿಳೆಗೂ ಉಚಿತ ಮೂಳೆ ಸಾಂದ್ರತೆ ತಪಾಸಣೆ, ತೀವ್ರ ರಕ್ತಹೀನತೆ ಪರೀಕ್ಷೆ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಪತ್ತೆಯ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಬೇಕು. ವಯಸ್ಸಾದ ಮಹಿಳೆಯರ ದೈಹಿಕ, ಮಾನಸಿಕ ಸಮಸ್ಯೆಗಳಿಗೆ ಸೂಕ್ತ ಡಿಜಿಟಲ್ ಪರಿಹಾರಗಳನ್ನು ಒದಗಿಸುವ ‘FemTech’ ತಂತ್ರಜ್ಞಾನವನ್ನು ಉತ್ತೇಜಿಸಬೇಕು ಹಾಗೂ ವೃದ್ಧಾಪ್ಯದ ದಿನಗಳಲ್ಲಿ ಅವರು ಚಿಕಿತ್ಸೆಗಾಗಿ ಯಾರಿಗೂ ಹೊರೆಯಾಗದಂತೆ ಉಚಿತ ಸಾರ್ವತ್ರಿಕ ಆರೋಗ್ಯ ವಿಮೆ ಮತ್ತು ಸ್ವತಂತ್ರವಾಗಿ ಬಳಸಬಹುದಾದ ಗೌರವಯುತ ಪಿಂಚಣಿ ಯೋಜನೆಗಳನ್ನು ಸರ್ಕಾರಗಳು ರೂಪಿಸಬೇಕು. ಸಮಾಜ, ಕುಟುಂಬ ಮತ್ತು ಸರ್ಕಾರಗಳು ಜಂಟಿಯಾಗಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.




