ಉತ್ತರ ಚಿಲಿಯ ʻಸ್ಯಾನ್ ಪೆಡ್ರೊ ಡಿʼ ಅಟಕಮದ ದಕ್ಷಿಣಕ್ಕಿರುವ ಜನಪ್ರಿಯ ಪ್ರವಾಸಿ ವೀಕ್ಷಣಾಲಯದಲ್ಲಿ ದೂರದರ್ಶಕದ ಐಪೀಸ್ ಮೂಲಕ ಕಾಣುವ ನೋಟವು ನಿಜಕ್ಕೂ ಉಸಿರುಕಟ್ಟುವಂತಿದ್ದು; ಕಪ್ಪು ವೆಲ್ವೆಟ್ ಬಟ್ಟೆಯ ಮೇಲೆ ಚೆಲ್ಲಿದ ಸಣ್ಣ ವಜ್ರಗಳಂತೆ ಲೆಕ್ಕವಿಲ್ಲದಷ್ಟು ಹೊಳೆಯುವ ನಕ್ಷತ್ರಗಳು ಅಗಾಧವಾದ ಖಾಲಿ ಜಾಗದ ಹಿನ್ನೆಲೆಯಲ್ಲಿ ನಿಶ್ಶಬ್ದವಾಗಿ ತೇಲುತ್ತಿರುವುದನ್ನು ವೀಕ್ಷಿಸಲೆಂದು ಖಗೋಳಾಸಕ್ತರು ಇಲ್ಲಿ ಝಾಂಡಾ ಹೂಡುತ್ತಾರೆ.
ಅಟಕಾಮ ಚಿಲಿ ದೇಶದ ಸುಂದರ ಮರುಭೂಮಿ, ಬರಡು ಭೂಮಿಯ ಸೂರ್ಯಾಸ್ತ ಕಾಣಲೆಂದೆ ಲಕ್ಷಾಂತರ ಪ್ರವಾಸಿಗರು ಅಟಕಮ ಪ್ರದೇಶಕ್ಕೆ ಪ್ರವಾಸ ಹೋಗುತ್ತಾರೆ. ಉಪ್ಪು ನೀರಿನ ಸರೋವರಗಳು, ಚಂದಿರನ ಅಂಗಳದಂತೆ ಕಾಣುವ ಹೊಂಡ ಗುಂಡಿಯ ಭೂ ರಚನೆ ಹಾಗೂ ವರ್ಷಪೂರ್ತಿ ವಿರಹಿಗಳೆದೆ ಕುದಿವಂತೆ ಕುದಿವ ಜ್ವಾಲಾಮುಖಿಗಳು, ಖಗೋಳಾಸಕ್ತರಿಗಿದು ನಕ್ಷತ್ರ ವೀಕ್ಷಣೆಗೆ ಹೇಳಿ ಮಾಡಿಸಿದ ಸ್ಥಳ ಹೀಗೆ ಪ್ರಕೃತಿಯ ಅವರ್ಣೀಯ ವೈಶಿಷ್ಟ್ಯಗಳು ಈ ಮರಳುಗಾಡನ್ನು ಆಕರ್ಷಣೀಯ ಪ್ರವಾಸಿ ತಾಣವನ್ನಾಗಿಸಿದೆ.
ʻವ್ಯಾಲೆ ಡೆ ಲಾ ಲೂನಾʼ ಚಂದ್ರನ ಮೇಲ್ಮೈಯಂತೆ ಕಾಣುವ ಮರಳು ದಿಬ್ಬಗಳು ಮತ್ತು ವಿಚಿತ್ರ ಕಲ್ಲಿನ ಆಕಾರಗಳಿಂದ ತುಂಬಿದ್ದು; ಭೂಮಿಯ ಮೇಲಿನ ಚಂದ್ರನ ಕಣಿವೆ ಎಂದೇ ಧ್ವನಿಸುವ ವಿಸ್ಮಯದ ತಾಣವಿದು. ಇಲ್ಲಿಗೆ ಇನ್ನೊಂದಿಷ್ಟು ದೂರದಲ್ಲಿ ಆಂಡಿಸ್ ಪರ್ವತಶ್ರೇಣಿಗಳ ಮೇಲಿರುವ ʻಟ್ಯಾಟಿಯೊ ಗೀಸರ್ʼಗಳಲ್ಲಿ ಸೂರ್ಯನ ಕಿರಣಗಳು ಮೆಲ್ಲಗೆ ಹರಡುತ್ತಿದ್ದಂತೆ, ಹೊಳೆಯುವ ಮಂಜುಗಡ್ಡೆ ಮತ್ತು ಕಪ್ಪು ಜ್ವಾಲಾಮುಖಿ ಬಂಡೆಗಳ ನಡುವಿನಿಂದ ಹತ್ತು ಮೀಟರ್ ಎತ್ತರದವರೆಗಿನ ಬಿಳಿ ಉಗಿ ಬುಗ್ಗೆಗಳು ಗಗನಮುಖಿಯಾಗಿ ಚಿಮ್ಮುತ್ತವೆ; ಆಕಾಶದ ಕೆಂಪು-ಕಿತ್ತಳೆ ಬಣ್ಣಗಳು ಉಗಿಯೊಂದಿಗೆ ಮಿಳಿತವಾಗಿ ಯಾರೋ ಕುಂಚ ಹಿಡಿದು ಪೇಂಟಿಂಗ್ ಮಾಡಿದಂತೆ ಕಾಣುವ ಈ ಪ್ರದೇಶವು ಚಿಲಿಯ ಎತ್ತರದ ಶೀತ ಸ್ಥಳಗಳಲ್ಲೊಂದು.

ಉತ್ತರ ಚಿಲಿಯ ʻಸ್ಯಾನ್ ಪೆಡ್ರೊ ಡಿʼ ಅಟಕಾಮದ ದಕ್ಷಿಣಕ್ಕಿರುವ ಜನಪ್ರಿಯ ಪ್ರವಾಸಿ ವೀಕ್ಷಣಾಲಯದಲ್ಲಿ ದೂರದರ್ಶಕದ ಐಪೀಸ್ ಮೂಲಕ ಕಾಣುವ ನೋಟವು ನಿಜಕ್ಕೂ ಉಸಿರುಕಟ್ಟುವಂತಿದ್ದು; ಕಪ್ಪು ವೆಲ್ವೆಟ್ ಬಟ್ಟೆಯ ಮೇಲೆ ಚೆಲ್ಲಿದ ಸಣ್ಣ ವಜ್ರಗಳಂತೆ ಲೆಕ್ಕವಿಲ್ಲದಷ್ಟು ಹೊಳೆಯುವ ನಕ್ಷತ್ರಗಳು ಅಗಾಧವಾದ ಖಾಲಿ ಜಾಗದ ಹಿನ್ನೆಲೆಯಲ್ಲಿ ನಿಶ್ಶಬ್ದವಾಗಿ ತೇಲುತ್ತಿರುವುದನ್ನು ವೀಕ್ಷಿಸಲೆಂದು ಖಗೋಳಾಸಕ್ತರು ಇಲ್ಲಿ ಝಂಡಾ ಹೂಡುತ್ತಾರೆ.

ಹೀಗೆ ಗುರುತಿಸಿಕೊಳ್ಳಲು, ಜಗತ್ತು ತನ್ನತ್ತ ತಿರುಗಿ ನೋಡಲು ಹಲವು ಅನುಭೂತಿಗಳ ಗುಚ್ಛ ಹುದುಗಿಸಿಕೊಂಡಿರುವ ಅಟಕಮ ಮರುಭೂಮಿ ಈಗ ಚರ್ಚೆಯಾಗುವುದು ಒಂದು ಸ್ಯಾಟಲೈಟ್ ಪಟದ ಮೂಲಕ ಎಂದರೆ ಅಂತ ಆಶ್ಚರ್ಯವೇನಾಗದು… ಮೊದಲೇ ಹೇಳಿದ್ದೇನಲ್ಲ ಚಂದ್ರನ ಅಂಗಳದಂತಹ ನೆಲ, ಕುದಿಕುದಿದು ನರ್ತಿಸುವ ಬಿಸಿ ಬುಗ್ಗೆಗಳು ಹೀಗೆ ಯಾವುದೋ ಚಿತ್ರವನ್ನು ಉಪಗ್ರಹದ ಕಣ್ಣು ಕ್ಲಿಕ್ಕಿಸಿದೆ ಅದೇನು ಮಹಾನ್ ಎನಿಸುತ್ತದೆ. ಆದರೆ, ಸ್ಯಾಟಲೈಟ್ ಮೂಲಕ ಸುದ್ದಿಯಾಗುತ್ತಿರುವುದು ಈ ಸುಡು ಮರುಭೂಮಿಯ ʻಬಟ್ಟೆ ಬೆಟ್ಟʼ. ಈ ಬೆಟ್ಟ ಫ್ಯಾಷನ್ ಲೋಕ ಅಡಗಿಸಿಡುವ ವಿಕಾರತೆಯನ್ನು ಕಣ್ಪರದೆಯ ಮುಂದೆ ತೆರೆದಿಡುತ್ತದೆ.
ಬಟ್ಟೆ ಬೆಟ್ಟ ಹೇಗಾಯ್ತು ಗೊತ್ತಾ? ಬರಡು ಭೂಮಿ, ಸುಡುವ ಮರಳು ಮತ್ತು ಪ್ರಕೃತಿಯ ವಿಸ್ಮಯಗಳಿಗೆ ಹೆಸರಾದ ಅಟಕಾಮ ಮರುಭೂಮಿಯಲ್ಲಿ ಈ ಬೃಹತ್ ‘ಬಟ್ಟೆಯ ಬೆಟ್ಟ’ ನಿರ್ಮಾಣವಾಗಿದ್ದು ಜಾಗತಿಕ ಫ್ಯಾಷನ್ ಉದ್ಯಮ ಮತ್ತು ಜವಳಿ ತ್ಯಾಜ್ಯ ತಂದ ಅವಾಂತರದಿಂದ. ಜಗತ್ತಿನ ವಿವಿಧ ಭಾಗಗಳಿಂದ ಯಾರಿಗೂ ಬೇಡದ ಬಟ್ಟೆಗಳು ಈ ಸುಂದರ ತಾಣವನ್ನು ತ್ಯಾಜ್ಯದ ಕೂಪವನ್ನಾಗಿ ಮಾಡಿದೆ.
ವೇಗವಾಗಿ ಬೆಳೆಯುತ್ತಿರುವ ಫಾಸ್ಟ್ ಫ್ಯಾಷನ್ (Fast Fashion) ಜಗತ್ತಿನಾದ್ಯಂತ ಬಟ್ಟೆಗಳ ಜಾಗತಿಕ ಉತ್ಪಾದನೆ ವಿಪರೀತವಾಗಿ ಹೆಚ್ಚಾಗಿದೆ. ‘ಫಾಸ್ಟ್ ಫ್ಯಾಷನ್’ ಉದ್ಯಮವು ಅಗ್ಗದ ಬೆಲೆಯಲ್ಲಿ ಹೊಸ ಶೈಲಿಯ ಉಡುಪುಗಳನ್ನು ಮಾರುಕಟ್ಟೆಗೆ ತರುತ್ತದೆ. ಇದರಿಂದಾಗಿ ಜನರು ಬಟ್ಟೆಗಳನ್ನು ಕೆಲವು ಬಾರಿಯಷ್ಟೇ ಬಳಸಿ ಎಸೆಯುವ ಸಂಸ್ಕೃತಿ ಹೆಚ್ಚಾಗಿದೆ.
ಉತ್ತರ ಚಿಲಿಗೆ ಸೇರುತ್ತಿರುವ ಟನ್‌ಗಟ್ಟಲೆ ತ್ಯಾಜ್ಯ ಚೀನಾ, ಬಾಂಗ್ಲಾದೇಶ, ಯುರೋಪ್ ಮತ್ತು ಅಮೆರಿಕದಂತಹ ದೇಶಗಳಿಂದ ಮಾರಾಟವಾಗದೆ ಉಳಿದ ಹಾಗೂ ಬಳಸಿದ ಲಕ್ಷಾಂತರ ಟನ್ ಬಟ್ಟೆಗಳು ಚಿಲಿಯ ಇಕ್ವಿಕ್ (Iquique) ಬಂದರಿಗೆ ಬಂದು ತಲುಪುತ್ತವೆ. ಪ್ರತಿವರ್ಷ ಸುಮಾರು 59,000 ಟನ್‌ಗಳಷ್ಟು ಬಟ್ಟೆಗಳು ಇಲ್ಲಿಗೆ ಆಮದಾಗುತ್ತವೆ.

ತ್ಯಾಜ್ಯದ ರಾಶಿಯಾಗಿ ಮಾರ್ಪಟ್ಟ ಮರುಭೂಮಿ ಆಮದಾಗುವ ಬಟ್ಟೆಗಳಲ್ಲಿ ಕೇವಲ ಭಾಗಶಃ ಬಟ್ಟೆಗಳು ಮಾತ್ರ ಮರುಮಾರಾಟವಾಗುತ್ತವೆ. ಉಳಿದ ಸುಮಾರು 39,000 ಟನ್‌ಗಳಷ್ಟು ಮಾರಾಟವಾಗದ ಮತ್ತು ಹಳೆಯ ಬಟ್ಟೆಗಳನ್ನು ಇಕ್ವಿಕ್ ಬಂದರಿನಿಂದ ʻಸ್ಯಾನ್ ಪೆಡ್ರೊ ಡಿ ಅಟಕಾಮʼ ಸಮೀಪದ ಮರುಭೂಮಿಯ ಬಯಲು ಪ್ರದೇಶಕ್ಕೆ ತಂದು ಅನಧಿಕೃತವಾಗಿ ಸುರಿಯಲಾಗುತ್ತದೆ. ಹೀಗೆ ವರ್ಷಗಳಿಂದ ಶೇಖರಣೆಯಾದ ಉಡುಪುಗಳು ಇಂದು ದೊಡ್ಡ ಬೆಟ್ಟದಂತೆ ರೂಪುಗೊಂಡಿವೆ.
ಪರಿಸರದ ಮೇಲಾಗುತ್ತಿರುವ ಗಂಭೀರ ಪರಿಣಾಮ
ವಿಷಕಾರಿ ಉರಿ: ಕೆಲವು ಬಾರಿ ಈ ಬಟ್ಟೆಗಳ ರಾಶಿಗೆ ಬೆಂಕಿ ಬಿದ್ದಾಗ, ಅವುಗಳಿಂದ ಹೊರಹೊಮ್ಮುವ ದಟ್ಟ ಹೊಗೆ ಮತ್ತು ವಿಷಕಾರಿ ಅನಿಲಗಳು ಇಡೀ ವಾತಾವರಣ ಹಾಗೂ ಗಾಳಿಯನ್ನು ಕಲುಷಿತಗೊಳಿಸುತ್ತವೆ.
ಕೊಳೆಯದ ಸಿಂಥೆಟಿಕ್ ಫ್ಯಾಬ್ರಿಕ್: ಈ ಬಟ್ಟೆಗಳಲ್ಲಿ ಹೆಚ್ಚಿನವು ಪಾಲಿಯೆಸ್ಟರ್ ಹಾಗೂ ರಾಸಾಯನಿಕಯುಕ್ತ ನೂಲುಗಳಿಂದ ಮಾಡಲ್ಪಟ್ಟಿರುವುದರಿಂದ, ಇವು ಮಣ್ಣಿನಲ್ಲಿ ಕೊಳೆಯಲು ನೂರಾರು ವರ್ಷಗಳು ಬೇಕಾಗುತ್ತವೆ.
ನಮ್ಮ ನೆಲದಲ್ಲೂ ಬೆಟ್ಟ ?
ಇದು ದೂರದ ಚಿಲಿ ದೇಶದ ಕತೆ, ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ… ಎನಲಾದೀತೆ, ನಮ್ಮ ದೇಶವೂ ಫ್ಯಾಷನ್ ಜಗತ್ತಿನ ಓಗಕ್ಕೆ ಸಿಲುಕಿದೆ. ಭಾರತವು ವರ್ಷಕ್ಕೆ ಸುಮಾರು 70.7 ಲಕ್ಷ ಟನ್‌ಗಳಷ್ಟು (7.07 million tonnes) ಜವಳಿ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಅಟಕಾಮ ಮರುಭೂಮಿಗೆ ಬೇರೆ ದೇಶಗಳಿಂದ ತ್ಯಾಜ್ಯ ಆಮದಾಗುವಂತೆ ಇಲ್ಲಿ ಆಂತರಿಕವಾಗಿ ಉತ್ಪತ್ತಿಯಾಗುವ ತ್ಯಾಜ್ಯದಲ್ಲಿ 42% ಭಾಗ ಬಟ್ಟೆ ತಯಾರಿಕಾ ಕಾರ್ಖಾನೆಗಳಿಂದ (Pre-consumer) ಮತ್ತು 58% ಭಾಗ ಜನರು ಬಳಸಿ ಎಸೆಯುವ ಬಟ್ಟೆಗಳಿಂದ (Post-consumer) ಬರುತ್ತದೆ. ಅಟಕಮದಂತೆ ಭಾರತದಲ್ಲಿ ಬಟ್ಟೆಗಳು ಕೇವಲ ಕುಳಿತು ಕೊಳೆಯುವುದಿಲ್ಲ; ಬಲವಾದ ಅಸಂಘಟಿತ ವಲಯ (Informal sector) ಇರುವುದರಿಂದ 55%ಕ್ಕೂ ಹೆಚ್ಚು ಹಳೆಯ ಬಟ್ಟೆಗಳನ್ನು ಮರುಬಳಕೆ (Recycling), ರ‍್ಯಾಗ್ಸ್ (Rags) ಅಥವಾ ‘ಪಾಣಿಪತ್’ನಂತಹ ಮರುಸಂಸ್ಕರಣಾ ಕೇಂದ್ರಗಳಲ್ಲಿ ನೂಲಾಗಿ ಪರಿವರ್ತಿಸಲಾಗುತ್ತದೆ. ಆದರೆ ಸಂಸ್ಕರಿಸಲಾಗದ 30% ಬಟ್ಟೆಗಳು ಭಾರತದ ನಗರಗಳ ಲ್ಯಾಂಡ್‌ಫಿಲ್‌ಗಳನ್ನು (ಕಸದ ಬೆಟ್ಟ) ಸೇರುತ್ತವೆ.
ಬಟ್ಟೆ ತ್ಯಾಜ್ಯ ಹೆಚ್ಚಿಸುವಲ್ಲಿ ಸೆಲೆಬ್ರಿಟಿಗಳ ಪಾತ್ರ
ಅವರಿಗೇನೋ ಬಟ್ಟೆ ಬದಲಿಸಿದಷ್ಟು ಸುಲಭ ಬಿಡು ಎಂದು ಮಾತಿನ ನಡುವೆ ಯಾರನ್ನೋ ಹೊಗಳಲೋ ತೆಗಳಲೋ ಆಡುತ್ತೇವಲ್ಲ ಬಿಲ್‌ಕುಲ್ ಹಾಗೆಯೇ ಸೆಲೆಬ್ರೆಟಿಗಳಿಗೆ ಒಂದು ಬಾರಿ ಬಳಸಿದ ಬಟ್ಟೆ ಕಸದ ಬುಟ್ಟಿಗೆ ಎಸೆಯುವುದು ಬಹು ಸುಲಭ. ಪ್ರಸಿದ್ಧ ನಟ-ನಟಿಯರು ಮತ್ತು ಇನ್‌ಫ್ಲುಯೆನ್ಸರ್‌ಗಳು ರೆಡ್ ಕಾರ್ಪೆಟ್, ಪಾರ್ಟಿ ಅಥವಾ ಫೋಟೋಶೂಟ್‌ಗಳಿಗೆ ಧರಿಸುವ ಉಡುಪುಗಳನ್ನು ಎರಡನೇ ಬಾರಿ ಧರಿಸುವುದಿಲ್ಲ; ಇದು ಸಾರ್ವಜನಿಕರಲ್ಲಿ “ಉಡುಪುಗಳನ್ನು ಪುನರಾವರ್ತಿಸಬಾರದು” (Don’t repeat outfits) ಎಂಬ ತಪ್ಪು ಕಲ್ಪನೆಯನ್ನು ಹುಟ್ಟುಹಾಕುತ್ತದೆ. ಅಲ್ಲದೆ ಅವರು ಬೃಹತ್ ಫಾಸ್ಟ್ ಫ್ಯಾಷನ್ ಬ್ರಾಂಡ್‌ಗಳ ರಾಯಭಾರಿಗಳಾಗಿ ಕೆಲಸ ಮಾಡಿ ಪ್ರತಿದಿನ ಹೊಸ ಟ್ರೆಂಡ್ ಪ್ರಚಾರ ಮಾಡುವುದರಿಂದ ಅಭಿಮಾನಿಗಳು ಪ್ರಭಾವಿತರಾಗಿ ಅಗತ್ಯವಿಲ್ಲದಿದ್ದರೂ ಹೊಸ ಬಟ್ಟೆಗಳನ್ನು ಖರೀದಿಸಿ ಹಳೆಯದನ್ನು ಎಸೆಯುತ್ತಾರೆ. ಬ್ರಾಂಡ್‌ಗಳು ಉಚಿತವಾಗಿ ಸಾವಿರಾರು ಬಟ್ಟೆಗಳನ್ನು ಇನ್‌ಫ್ಲುಯೆನ್ಸರ್‌ಗಳಿಗೆ ತಲುಪಿಸುವ ಪಿಆರ್ ಪ್ಯಾಕೇಜಿಂಗ್ ಮತ್ತು ಗಿಫ್ಟಿಂಗ್‌ನಲ್ಲಿ ಹೆಚ್ಚಿನವು ಪ್ರಚಾರದ ನಂತರ ತ್ಯಾಜ್ಯವಾಗುತ್ತವೆ.
ಇತ್ತೀಚೆಗೆ ಕೆಲವು ಸೆಲೆಬ್ರಿಟಿಗಳು ಸಸ್ಟೈನಬಲ್ ಫ್ಯಾಷನ್ (Sustainable Fashion) ಕಡೆಗೆ ಒಲವು ತೋರುತ್ತಿದ್ದಾರೆ. ಹಳೆಯ ಸೀರೆಗಳನ್ನು ಗೌನ್ ಆಗಿ ಪರಿವರ್ತಿಸುವುದು, ಮರುಬಳಕೆಯ ನೂಲಿನಿಂದ ಮಾಡಿದ ಉಡುಪು ಧರಿಸುವುದು ಹಾಗೂ ಸೆಕೆಂಡ್ ಹ್ಯಾಂಡ್ (Vintage) ಉಡುಪುಗಳನ್ನು ತೊಡುವ ಮೂಲಕ ಅಪ್‌ಸೈಕ್ಲಿಂಗ್ ಮತ್ತು ವಿಂಟೇಜ್ ಪ್ರವೃತ್ತಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಹಾಲಿವುಡ್‌ನ ಜೇನ್ ಫೋಂಡಾ ಅವರಂತಹ ತಾರೆಯರು ಪ್ರಶಸ್ತಿ ಸಮಾರಂಭಗಳಲ್ಲಿ ತಮ್ಮ ಹಳೆಯ ಉಡುಪುಗಳನ್ನು ಮರುಧರಿಸಿ (Rewearing) ಮಾದರಿಯಾಗುತ್ತಿದ್ದಾರೆ. ಇದು ಬಟ್ಟೆ ತ್ಯಾಜ್ಯ ನಿಯಂತ್ರಿಸಲು ಕಂಡುಕೊಳ್ಳಲೇ ಬೇಕಾದ ಪರಿಹಾರಗಳಲ್ಲಿ ಪರಿಣಾಮಕಾರಿಯೂ, ಸುಲಭವೂ ಆಗಬಲ್ಲ ದಾರಿ. ಬಳಸಿದ ಉಡುಪನ್ನೇ ಬಳಸುವುದರಿಂದ ಅಥವಾ ಹಳೆಯ ಉಡುಪುಗಳನ್ನು ರೀಡಿಸೈನ್ ಮಾಡಿ ತೊಡುವುದರಿಂದ ಜೇಬಿಗೂ ಕತ್ತರಿ ಬೀಳುವುದಿಲ್ಲ, ಬಟ್ಟೆ ಕಸದ ರಾಶಿ ಸೇರುವುದು ತಡವಾಗುತ್ತದೆ.
ಬಟ್ಟೆ ಕೊಳ್ಳುವ ಮುನ್ನ ಯೋಚಿಸಲೇ ಬೇಕು
ಗ್ರಾಹಕರ ಕೊಳ್ಳುಬಾಕತನ ಬಟ್ಟೆ ಉತ್ಪನ್ನಗಳ ಪ್ರಮಾಣವನ್ನು ಹೆಚ್ಚಿಸುತ್ತದೆ ಸಹಜವಾಗಿ ತ್ಯಾಜ್ಯವೂ ಹೆಚ್ಚುತ್ತದೆ. ಬಳಸಿ ಬಿಸಾಡುವ ಬಟ್ಟೆ ತ್ಯಾಜ್ಯವನ್ನು ನಾವು ಪ್ಲಾಸ್ಟಿಕ್ ತ್ಯಾಜ್ಯದಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ, ಪ್ಲಾಸ್ಟಿಕ್‌ನಂತೆಯೇ ಬಟ್ಟೆ ಕೂಡ ಕೊಳೆಯುವ ತ್ಯಾಜ್ಯವಲ್ಲ.
ಕಾಟನ್ ಬಟ್ಟೆ ಮಣ್ಣಾಗಲು 5 ವರ್ಷಗಳು ಬೇಕಾದರೆ ಉಣ್ಣೆ 1ರಿಂದ 5 ವರ್ಷ ಸಮಯ ಬೇಡುತ್ತದೆ. ನೈಲಾನ್ ಮತ್ತಿತರ ಸಿಂಥೆಟಿಕ್ ಬಟ್ಟೆಗಳು ಮಣ್ಣಾಗಲು 200 ವರ್ಷಕ್ಕೂ ಹೆಚ್ಚು ಕಾಲ ಬೇಕಾಗಬಹುದು. ಅಂದರೆ ಬಟ್ಟೆ ಕೊಂಡು ಉಟ್ಟು ಬಿಸುಟಿದ ನಾವು ಮಣ್ಣಾದರೂ ಬಳಸಿ ಎಸೆದ ಬಟ್ಟೆ ಕೊಳೆಯದ ಕಸವಾಗಿ ಬಿದ್ದಿರುತ್ತದೆ.
ಯೋಚಿಸಬೇಕಿರುವುದು ಕೊಳ್ಳುವಾಗ ಯಾವ ನಾರುಗಳಿಂದ ತಯಾರಿಸಿದ ಬಟ್ಟೆಗಳನ್ನು ಕೊಳ್ಳಬೇಕು ಎಂಬುದನ್ನು, ಉಣ್ಣೆ, ಲೆನಿನ್, ಕಾಟನ್ ಮೊದಲಾದ ನೈಸರ್ಗಿಕ ನೂಲುಗಳಿಂದ ತಯಾರಿಸಲಾದ ಉಡುಪುಗಳು ದೀರ್ಘಕಾಲದ ತ್ಯಾಜ್ಯವಾಗಿ ಭೂಮಿಯಲ್ಲಿ ಉಳಿಯದೆ, ಬೇಗ ಕೊಳೆಯುತ್ತದೆ. ಆದರೆ ಕೃತಕ ನೂಲುಗಳಾದ ಸಂಥೆಟಿಕ್, ಪಾಲಿಮರ್ ಬಟ್ಟೆ ಕರಗದೆ ಉಳಿದು ಪರಿಸರಕ್ಕೆ ತೀವ್ರ ತೆರನಾದ ಹಾನಿ ಉಂಟುಮಾಡುತ್ತದೆ.
ಒಮ್ಮೆ ಖರೀದಿಸಿದರೆ ಬಹುಕಾಲ ತೊಡುವಂತಹ, ಬಾಳಿಕೆ ಬರುವ ಮತ್ತು ಒಂದಿಷ್ಟು ವರ್ಷಗಳವರೆಗೂ ಟ್ರೆಂಡ್‌ನಲ್ಲಿ ಉಳಿಯುವ ಉಡುಪು ಪರ್ಚೇಸ್ ಮಾಡುವುದು ಭೂಮಿಗೂ ನಮಗೂ ಮಾಡಿಕೊಳ್ಳುವ ಉಪಕಾರವಾದೀತು. ಫ್ಯಾಷನ್ ಎನ್ನುವುದು ಕೇವಲ ಚಂದದ ಉಡುಪುಗಳನ್ನು ಧರಿಸುವುದಷ್ಟೇ ಅಲ್ಲ, ಅದು ಪರಿಸರದ ಮೇಲಾಗುವ ಪರಿಣಾಮದ ಜವಾಬ್ದಾರಿಯನ್ನೂ ಒಳಗೊಂಡಿರಬೇಕು. ಪ್ರಕೃತಿಯ ಸೌಂದರ್ಯಕ್ಕೆ ಹೆಸರುವಾಸಿಯಾದ ತಾಣಗಳು ಜಾಗತಿಕ ತ್ಯಾಜ್ಯದ ಕೂಪಗಳಾಗುತ್ತಿರುವುದು ದುರಂತ. ಈ ಸಮಸ್ಯೆಗೆ ಕೇವಲ ಸರಕಾರಗಳು ಅಥವಾ ಉದ್ಯಮಗಳನ್ನಷ್ಟೇ ಹೊಣೆ ಮಾಡದೆ, ಗ್ರಾಹಕರಾದ ನಾವೂ ಜಾಗೃತರಾಗಬೇಕಿದೆ.
ಇದನ್ನೂ ಓದಿ ಆಶ್ರಮ ಶಾಲೆ ಮಕ್ಕಳ ವಿಚಿತ್ರ ಕಿರುಚಾಟ: ‘ದೆವ್ವದ ನೆರಳು’ ಎಂಬ ಮೌಢ್ಯಕ್ಕೆ ಸಿಲುಕಿದ ‘ಮಾಸ್ ಸೈಕೋಜೆನಿಕ್ ಇಲ್ನೆಸ್’
ಅಗತ್ಯಕ್ಕಿಂತ ಹೆಚ್ಚು ಬಟ್ಟೆ ಕೊಳ್ಳುವುದನ್ನು ಕಡಿಮೆ ಮಾಡುವುದು, ಪರಿಸರ ಸ್ನೇಹಿ ಹಾಗೂ ಬೇಗ ಕೊಳೆಯುವ ನೈಸರ್ಗಿಕ ನೂಲಿನ ಉಡುಪುಗಳನ್ನು ಆಯ್ಕೆ ಮಾಡುವುದು ಮತ್ತು ಸೆಲೆಬ್ರಿಟಿಗಳಂತೆ ಹಳೆಯ ಉಡುಪುಗಳನ್ನು ಮರುಬಳಕೆ (Rewear & Upcycle) ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ. ‘ಕಡಿಮೆ ಕೊಳ್ಳಿ, ಗುಣಮಟ್ಟದ್ದನ್ನು ಆರಿಸಿ, ದೀರ್ಘಕಾಲ ಬಳಸಿ’ ಎಂಬ ತತ್ವವನ್ನು ಅಳವಡಿಸಿಕೊಂಡರೆ ಮಾತ್ರವೇ ನಮ್ಮ ಮುಂದಿನ ಪೀಳಿಗೆಗೆ ಸುಂದರ ಹಾಗೂ ಸ್ವಚ್ಛ ಭೂಮಿಯನ್ನು ಹಸ್ತಾಂತರಿಸಲು ಸಾಧ್ಯ.




