ಶಾರೀರಿಕ ದೌರ್ಬಲ್ಯ ಮತ್ತು ಆತಂಕದಿಂದ ಉಂಟಾದ ಈ ಸ್ಥಿತಿಗೆ 'ದೆವ್ವದ ಕಾಟ' ಎಂಬ ಮೂಢನಂಬಿಕೆಯ ಪಟ್ಟ ಕಟ್ಟುವುದು ಸುಲಭ. ಪೋಷಕರೂ ಹೆದರಿ ಮಕ್ಕಳನ್ನು ಶಾಲೆಯಿಂದ ಬಿಡಿಸಿ, ಶೈಕ್ಷಣಿಕ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ಸರ್ಕಾರ ತಕ್ಷಣವೇ ಜಾಗೃತಗೊಂಡು ಆಶ್ರಮಶಾಲೆಗಳ ಸ್ಥಿತಿಯನ್ನು ಸುಧಾರಿಸದಿದ್ದರೆ, ಉಜ್ವಲ ಭವಿಷ್ಯ ಕಾಣಬೇಕಾದ ಸಾವಿರಾರು ಬುಡಕಟ್ಟು ಮಕ್ಕಳ ಬಾಲ್ಯ ವ್ಯವಸ್ಥೆಯ ಕೊಳೆಯಡಿಯಲ್ಲೇ ಕರಗಿಹೋಗಲಿದೆ.
ಅದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ದಟ್ಟ ಕಾಡುಗಳಿಂದ ಆವೃತ್ತವಾದ, ಹೊರಜಗತ್ತಿನ ಸಂಪರ್ಕವೇ ಅಪರೂಪವೆನ್ನಿಸುವ ‘ಮೇಲ್ಘಾಟ್’ ಬುಡಕಟ್ಟು ಸೀಮೆ. ಶಿಕ್ಷಣದ ಬೆಳಕು ಕಾಣಬೇಕಾಗಿದ್ದ ಅಲ್ಲಿನ ಸರ್ಕಾರಿ ಆಶ್ರಮಶಾಲೆಯ ಹೆಣ್ಣುಮಕ್ಕಳ ಕಣ್ಣುಗಳಲ್ಲಿ ಈಗ ಜ್ಞಾನದ ದಾಹಕ್ಕಿಂತ ಹೆಚ್ಚಾಗಿ ಅಜ್ಞಾತ ಭಯದ ನೆರಳು ಆವರಿಸಿದೆ. ಹಠಾತ್ತನೆ ನಗುವುದು, ನಿಯಂತ್ರಣವಿಲ್ಲದೆ ಅಳುವುದು, ಮೈ-ಕೈ ಮರಗಟ್ಟಿ ಮೂರ್ಛೆ ಹೋಗುವುದು—ಹೀಗೆ ಸಾಲಾಗಿ ಮಕ್ಕಳು ವಿಚಿತ್ರವಾಗಿ ಕುಸಿದುಬೀಳತೊಡಗಿದ್ದಾರೆ. ಇವೆಲ್ಲವೂ ಮಾನಸಿಕ ಒತ್ತಡ ಎಂಬ ವೈಜ್ಞಾನಿಕ ವಿಚಾರದತ್ತ ತಿರುಗುವಷ್ಟು ಉತ್ತಮ ವಾತಾವರಣ ಇಲ್ಲದ ಕಾರಣ ಇವೆಲ್ಲವನ್ನೂ ಸಹಜವಾಗಿಯೇ ‘ದೆವ್ವ’ ಎಂದು ನಂಬಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯವೇ ‘ದೆವ್ವದ ನೆರಳು’ ಎಂಬ ಮೌಢ್ಯಕ್ಕೆ ಸಿಲುಕಿ ನರಳುತ್ತಿದೆ.
ಮುಗ್ಧ ಬಾಲ್ಯವು ಈಗ ತಲ್ಲಣಿಸುತ್ತಿದೆ. ‘ಇದು ದೆವ್ವದ ಕಾಟ, ಶಾಪ’ ಎಂಬ ಕಾಡ್ಗಿಚ್ಚಿನಂತೆ ಹರಡಿದ ಭೀತಿಗೆ ಹೆದರಿ, ಸುಮಾರು 600 ಬಾಲಕಿಯರು ಈಗಾಗಲೇ ಶಾಲೆ ಬಿಟ್ಟು ಪಲಾಯನ ಮಾಡಿದ್ದಾರೆ. ತಮ್ಮದೇ ಶಾಲೆಯ ಅಂಗಳ ಅವರಿಗೆ ಸ್ಮಶಾನದಂತೆ ಭಾಸವಾಗುತ್ತಿದೆ. ಆದರೆ, ಮಕ್ಕಳ ಈ ಸ್ಥಿತಿಯ ಹಿಂದೆ ಇರುವುದು ಯಾವುದೇ ದೆವ್ವದ ನೆರಳಲ್ಲ, ಬದಲಿಗೆ ಆಡಳಿತ ವ್ಯವಸ್ಥೆಯ ಭೀಕರ ನಿರ್ಲಕ್ಷ್ಯದ ನೆರಳು ಎಂಬುದನ್ನು ವೈದ್ಯಾಧಿಕಾರಿಗಳು ಮತ್ತು ಮಾನಸಿಕ ತಜ್ಞರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಮಗನ ಕೊಂದ ಸಿಇಒ | ಮಾನಸಿಕ ಆರೋಗ್ಯ ತಪಾಸಣೆಗೆ ಗೋವಾ ಕೋರ್ಟ್ ಅನುಮತಿ
ವೈದ್ಯಕೀಯ ವಿಜ್ಞಾನದಲ್ಲಿ ಇದನ್ನು ‘ಮಾಸ್ ಸೈಕೋಜೆನಿಕ್ ಇಲ್ನೆಸ್’ ಎಂದು ಕರೆಯುತ್ತಾರೆ. ಈ ಹೆಣ್ಣು ಮಕ್ಕಳು ಸರಿಯಾದ ಊಟವಿಲ್ಲದೆ, ಒತ್ತಡ ವಾತಾವರಣದಲ್ಲಿ ಬೆಳೆದಿರುವ ಕಾರಣದಿಂದಾಗಿ ಈ ರೀತಿ ದಿಢೀರ್ ಆಗಿ ಸಾಮೂಹಿಕವಾಗಿ ಕಿರುಚಾಡುವುದು, ನಗುವುದು, ಅಳುವುದು ಮಾಡುತ್ತಿದ್ದಾರೆ. ಇದು ದೆವ್ವವೂ ಅಲ್ಲ, ಭೂತವೂ ಅಲ್ಲ ಎಂದು ವೈದ್ಯಾಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಅದನ್ನು ಅರ್ಥೈಸಿಕೊಳ್ಳುವಂತಹ ವೈಜ್ಞಾನಿಕ ದೃಷ್ಟಿಕೋನದ ವಾತಾವರಣ ಇಲ್ಲದಂತಾಗಿದೆ.
ಏನಿದು ಮಾಸ್ ಸೈಕೋಜೆನಿಕ್ ಇಲ್ನೆಸ್?
ಯಾವುದೇ ಒಂದು ಕಿರಿದಾದ ಅಥವಾ ಮುಚ್ಚಿದ ವಾತಾವರಣದಲ್ಲಿ ವಾಸಿಸುವಾಗ, ವ್ಯಕ್ತಿಗಳಲ್ಲಿ ತೀವ್ರ ಮಾನಸಿಕ ಆತಂಕ ಮತ್ತು ನಿರಂತರ ಭಯ ಉಂಟಾದಾಗ ಈ ಸ್ಥಿತಿ ಎದುರಾಗುತ್ತದೆ. ಒಬ್ಬ ಮಗುವಿನ ಮಾನಸಿಕ ನರಮಂಡಲದ ಏರುಪೇರುಗಳನ್ನು ಕಂಡು ಪಕ್ಕದಲ್ಲಿದ್ದ ಉಳಿದ ಮಕ್ಕಳು ತೀವ್ರ ಆತಂಕಕ್ಕೆ ಒಳಗಾಗುತ್ತಾರೆ. ಇಲ್ಲಿ ಯಾವುದೇ ವೈರಸ್ ಅಥವಾ ಜೈವಿಕ ರೋಗವಿರುವುದಿಲ್ಲ; ಬದಲಾಗಿ ಒಬ್ಬರಿಂದ ಒಬ್ಬರಿಗೆ ಪಸರಿಸುವುದು ಕೇವಲ ‘ಮಾನಸಿಕ ಅಭದ್ರತೆ ಮತ್ತು ಭಯ’.
ಮಹಾರಾಷ್ಟ್ರದ ‘ಮೇಲ್ಘಾಟ್’ ಬುಡಕಟ್ಟು ಸೀಮೆಯ ಸರ್ಕಾರಿ ಆಶ್ರಮಶಾಲೆಯಲ್ಲಿ ಉಸಿರಾಡಲೂ ಜಾಗವಿಲ್ಲದಷ್ಟು ಸಣ್ಣ ಕೊಠಡಿಗಳಲ್ಲಿ ನೂರಾರು ಮಕ್ಕಳು ಇದ್ದಾರೆ. ನಿರಂತರವಾಗಿ ಗಾಳಿ-ಬೆಳಕಿನ ಅಭಾವ ಅನುಭವಿಸಿದ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಅದಕ್ಕೆ ತಕ್ಕುದಾಗಿ ಊಟವೂ ಮಕ್ಕಳ ಮೇಲೆ ಪ್ರಭಾವ ಬೀರಿದೆ. ಪ್ರತಿದಿನ ಸಿಗುವ ಊಟವು ಅತಿ ಕಳಪೆ ಮಟ್ಟದ್ದಾಗಿದ್ದು ಮಕ್ಕಳ ಹಸಿವು ನೀಗಿಸಿಲ್ಲ. ಪರಿಣಾಮವಾಗಿ ಹೆಚ್ಚಿನ ಹೆಣ್ಣುಮಕ್ಕಳು ತೀವ್ರ ರಕ್ತಹೀನತೆ (Anemia) ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವಿಷ್ಟು ಮಾತ್ರವಲ್ಲದೆ ಶೌಚಾಲಯ ಮತ್ತು ವಸತಿ ನಿಲಯಗಳಲ್ಲಿ ಕನಿಷ್ಠ ಶುಚಿತ್ವವೂ ಇಲ್ಲದೆ, ದುರ್ನಾತ ಬೀರುವ ವಾತಾವರಣದಲ್ಲಿ ಮಕ್ಕಳು ದಿನ ದೂಡುತ್ತಿದ್ದರು.
ಈ ಬಗ್ಗೆ ಈ ದಿನ. ಕಾಮ್‌ಗೆ ಪ್ರತಿಕ್ರಿಯಿಸಿದ ಮಕ್ಕಳ ಮನಶಾಸ್ತ್ರಜ್ಞೆ (Child Psychologist) ಡಾ. ಅನುಪಮಾ ರಮೇಶ್, “ಇದಕ್ಕೆ ಹಲವಾರು ಕಾರಣಗಳಿವೆ. ಒಬ್ಬರಿಗೆ ಒಂದು ಸಮಸ್ಯೆ ಆದಾಗ ನಾವು ಜತೆಗೆ ಇದ್ದಷ್ಟೂ ನಾವು ಅದೇ ಲಕ್ಷಣಗಳನ್ನು ಅನುಕರಣೆ ಮಾಡುತ್ತೇವೆ. ನಾವು ಅವರನ್ನು ಅಷ್ಟೊಂದು ಹಚ್ಚಿಕೊಂಡ ಕಾರಣ ನಾವು ಆ ಅನುಕರಣೆ ಮಾಡುತ್ತೇವೆ. ಈ ಸಂದರ್ಭದಲ್ಲೇ ಹಲವು ಮಂದಿ ಅವರ ಕಾಳಜಿ ವಹಿಸಲು ಆರಂಭಿಸುತ್ತಾರೆ. ಅವರಿಗೆ ಹೆಚ್ಚು ಒತ್ತಡ ನೀಡಬೇಡಿ ಎಂದು ಹೇಳಲು ಆರಂಭಿಸುತ್ತಾರೆ. ಈ ರೀತಿ ಕಾಳಜಿ ಸಿಕ್ಕಾಗ ಮುಖ್ಯವಾಗಿ ಸಣ್ಣ ವಯಸ್ಸಿನಲ್ಲಿ ತುಂಬ ಬೇಗ ಅದನ್ನು ಅನುಕರಿಸೋಕೆ ಶುರು ಮಾಡುತ್ತಾರೆ” ಎಂದು ತಿಳಿಸಿದರು.

“ತಂದೆ, ತಾಯಿ ಹೇಗೆ ಕೋಪ ಮಾಡಿಕೊಳ್ಳುತ್ತಾರೋ ಹಾಗೆಯೇ ಮಕ್ಕಳು ಆ ಕೋಪವನ್ನು ತೋರಿಸಲು ಆರಂಭಿಸುತ್ತಾರೆ. ಇದೂ ಹಾಗೆಯೇ. ನಾವು Behavioral Science ಪ್ರಕಾರ ಹೇಳುವುದಾದರೆ ಅನುಕರಣೆ (mimicking) ಅಂತ ಹೇಳುತ್ತೇವೆ. ಕಾಳಜಿ ಸಿಗುತ್ತದೆ ಎಂಬ ಒಂದೇ ಕಾರಣ ಆಗಿರುವುದಿಲ್ಲ, ಈ ರೀತಿ ಆಗಲು ಹಲವಾರು ಕಾರಣಗಳಿರುತ್ತದೆ. ಆಹಾರ, ವಾತಾವರಣ ಎಲ್ಲವೂ ಪ್ರಮುಖ ಪರಿಣಾಮ ಬೀರುತ್ತದೆ. ನರಗಳಲ್ಲಿ ಆಗುವಂತಹ ರಾಸಾಯನಿಕ (chemical) ಬದಲಾವಣೆಗೆ ನಾವು ಏನು ಆಹಾರ ತೆಗೆದುಕೊಳ್ಳುತ್ತಿದ್ದೇವೆ? ನಾವು ಎಷ್ಟು ಸಕ್ರಿಯವಾಗಿದ್ದೇವೆ? ವ್ಯಾಯಾಮ ಮಾಡುತ್ತಿದ್ದೀವಾ? ಉತ್ತಮ ಜನಸಂಪರ್ಕ ಇದೆಯಾ? ನಮಗೆ ಹೊರಗಡೆ ಬಿಸಿಲಿಗೆ ಹೋಗುತ್ತೇವಾ? ಮಾತನಾಡಲು ಉತ್ತಮ ಜನರು ಸಿಗುತ್ತಿದ್ದಾರಾ? ಎಂಬುದು ಮುಖ್ಯವಾಗುತ್ತದೆ” ಎಂದು ಹೇಳಿದರು.
“ನಮ್ಮ ಜತೆ ಮಾತನಾಡುವವರು ಓದಿನ ವಿಚಾರದ ಬದಲಾಗಿ ದೆವ್ವ, ಭೂತ, ಪೂಜೆ-ಪುನಸ್ಕಾರ, ಈ ತರ ಒಂದು ಸಮಸ್ಯೆಯಿದೆ ಎಂದು ಬರೀ ನಕಾರಾತ್ಮಕ ವಿಚಾರಗಳನ್ನು ಮಾತಾನಾಡಿದರೆ ಮಕ್ಕಳಾಗಲಿ, ವಯಸ್ಕರಾಗಲಿ ಅದನ್ನು ನಂಬುತ್ತಾರೆ. ಅದರಲ್ಲೂ ತಮ್ಮೆದುರೇ ಒಬ್ಬರು ಆ ರೀತಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ನೋಡುತ್ತಿರುತ್ತಾರೆ ಅಲ್ವಾ? ಅದು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ನಾವು ಸಣ್ಣ ವಯಸ್ಸಲ್ಲೇ ಮಕ್ಕಳು nature vs nurture (ಜನ್ಮಜಾತ ಗುಣಗಳು ಮತ್ತು ಪರಿಸರ ಪ್ರಭಾವ) ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಅಂದರೆ ಮಗುವಿನ ಒಳಮನಸ್ಸಿನ ಗುಣಲಕ್ಷಣಗಳು ಮತ್ತು ಪರಿಸರ ಹೇಗಿದೆ ಎಂಬುದಕ್ಕೆ ನಾವು ತುಂಬ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಅದು ಮಕ್ಕಳಲ್ಲಿ ಈ ರೀತಿಯ ಅನುಕರಣೆ (mimicking) ಶುರುವಾಗಲು ಕಾರಣವಾಗಿರುತ್ತದೆ” ಎಂದು ತಿಳಿಸಿದರು.

ಮನಶಾಸ್ತ್ರಜ್ಞರು ಡಾ. ಆದರ್ಶ ಮಾತನಾಡಿ, “ಇದು ನಿಜವಾಗಿಯೂ ಅಸಹಜ. ಈ ರೀತಿ ಸಮೂಹವಾಗಿ ಆಗುವುದನ್ನು ನಾವು ಸಾಮಾನ್ಯವಾಗಿ psychological stress ಅಥವಾ hysteria ಎಂದು ಕರೆಯುತ್ತೇವೆ. ಆದರೆ ವೈದ್ಯಕೀಯ ಭಾಷೆಯಲ್ಲಿ ಇದನ್ನು possessive syndrome ಅಥವಾ dissociative ಎಂದು ಕರೆಯುತ್ತೇವೆ” ಎಂದು ತಿಳಿಸಿದರು.
“ಸಾಮಾನ್ಯವಾಗಿ ಇದು ಒತ್ತಡದಿಂದಾಗಿ ಉಂಟಾಗುತ್ತದೆ. ಯಾವ ರೀತಿಯ ಒತ್ತಡ ಬೇಕಾದರೂ ಆಗಿರಬಹುದು. ಮನೆಯ ಪರಿಸರ ಅಥವಾ ಶಿಕ್ಷಕರಿಂದ ಒತ್ತಡ ಇರಬಹುದು ಅಥವಾ ಮಹಾರಾಷ್ಟ್ರದಲ್ಲಿ ನಡೆದಿರುವಂತೆ ಇಡೀ ವಾತಾವರಣೆವೇ ಪ್ರಭಾವ ಬೀರಿರಬಹುದು. ಆದರೆ ಯಾವ ಒತ್ತಡ ಎಂಬುದನ್ನು ಹೇಳಲಾಗದು. ಆ ವಿದ್ಯಾರ್ಥಿಗಳನ್ನು ಮಾತನಾಡಿಸಿ, ಅವರು ಇರುವ ವಾತಾವರಣವನ್ನು ನೋಡಿ ಕೂಲಂಕುಷವಾಗಿ ಪರಿಶೀಲಿಸಿದಾಗ ಖಂಡಿತವಾಗಿಯೂ ಒಂದು ಇದಕ್ಕೆ ಏನು ಕಾರಣವಾಗಿರಬಹುದು ಎಂಬ ಸೂಚನೆ ಸಿಗುತ್ತದೆ” ಎಂದು ಹೇಳಿದರು.
“ಇದಕ್ಕೂ ಹೆಚ್ಚಾಗಿ ಈ ರೀತಿ ಸಮೂಹವಾಗಿ dissociative ಆದಾಗ ಒಬ್ಬರಿಂದ ಆರಂಭವಾಗುತ್ತದೆ. ಎಲ್ಲರೂ ಒಮ್ಮೆಲ್ಲೇ ಈ ರೀತಿ ಅಳಲು, ನಗಲು, ವಿಚಿತ್ರವಾಗಿ ಆಡಲು ಶುರು ಮಾಡುವುದಿಲ್ಲ. ಯಾರೋ ಒಬ್ಬರು ವಾರದ ಹಿಂದೆ ಅಥವಾ ಮೂರು ದಿನದ ಹಿಂದೆ ಬಿದ್ದು ಒದ್ದಾಡುವುದು, ತಲೆ ಕೆದರಿಕೊಂಡು ಓಡಿಹೋಗುವುದು, ಏನಾದರೂ ಮಾಡಿರಬಹುದು. ಅಂತದ್ದು ಏನೋ ಒಂದು ಆಗಿರುತ್ತದೆ. ಅದನ್ನ ನೋಡಿ ಇತರೆ ವಿದ್ಯಾರ್ಥಿನಿಯರು ತಮಗೇ ಗೊತ್ತಿಲ್ಲದೇ ಅದೇ ರೀತಿ ಮಾಡಲು ಅಥವಾ ಅನುಕರಿಸಲು ಆರಂಭಿಸುತ್ತಾರೆ” ಎಂದು ಮನಶಾಸ್ತ್ರಜ್ಞರು ಡಾ. ಆದರ್ಶ ಮಾಹಿತಿ ನೀಡಿದರು.
“ಬೇರೊಂದು ಆಯಾಮದಲ್ಲಿ ನಾವು ನೋಡಿದಾಗ ಇದು ಆ ವಿದ್ಯಾರ್ಥಿನಿಯರು ಸಹಾಯ ಮಾಡಿ (cry for help) ಎಂದು ಕೇಳಿಕೊಳ್ಳುವುದು. ಏನೋ ಅಸಹಜವಾಗಿದ್ದು ನಡೆಯುತ್ತಿದೆ, ನಮಗೆ ಸಮಸ್ಯೆ ಆಗುತ್ತಿದೆ, ನಮಗೆ ಅದರಿಂದ ಹೊರಬರಲು ಸಹಾಯ ಮಾಡಿ ಎಂದು ಈ ಮೂಲಕ ಕೇಳಿಕೊಳ್ಳುವುದು. ನಾವು ಹಂತ ಹಂತವಾಗಿ ಪರಿಹರಿಸಬೇಕಾಗುತ್ತದೆ” ಎಂದು ತಿಳಿಸಿದರು.
“ನಾವು ಹಳ್ಳಿಗಳಲ್ಲಿ ಮಹಿಳೆಯರ ಮೈಯಲ್ಲಿ ಬರುವುದು ಮೊದಲಾದವು ನೋಡಿರುತ್ತೇವೆ. ಇದು ವೈಯಕ್ತಿಕವಾದ ಮಾನಸಿಕ ಸಮಸ್ಯೆ. ಯಾರೋ ಮೈಯಲ್ಲಿ ಬಂದಂತೆ ವರ್ತಿಸಿ ಮಹಿಳೆಯರು ತಮ್ಮ ಬಯಕೆಗಳನ್ನು ಈಡೇರಿಸುವಂತೆ ಕೇಳಿಕೊಳ್ಳುವುದು ನಡೆಯುತ್ತದೆ. ದಿನನಿತ್ಯದ ಕಾರ್ಯಗಳಿಂದ ಇದರಿಂದ ಸಮಸ್ಯೆ ಆಗುತ್ತಿದೆ ಎಂಬ ಮಟ್ಟಕ್ಕೆ ತಲುಪಿದಾಗ ನಾವು ಈ ಮಾನಸಿಕ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಆ ಮಕ್ಕಳು ಸಹಾಯಕ್ಕಾಗಿ ಬೇಡುತ್ತಿದ್ದಾರೆ. ವೈದ್ಯಕೀಯ, ಮಾನಸಿಕ ಪರಿಶೀಲನೆಯ ಜತೆಗೆ ನಾವು ಸಾಮಾಜಿಕ ಅಂಶಗಳ ಪ್ರಭಾವವಿದೆ ಎಂಬುದನ್ನೂ ಪರಿಶೀಲಿಸಬೇಕಾಗುತ್ತದೆ” ಎಂದರು.
ಇಂತಹ ಘಟನೆ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಹಲವೆಡೆ ಹಲವು ವರ್ಷಗಳಿಂದ ನಡೆಯುತ್ತಿದೆ. ಕೊನೆಗೆ ಇವೆಲ್ಲವುದಕ್ಕೆ ದೆವ್ವ ಎಂಬ ನೆರಳು ಅಂಟಿಕೊಳ್ಳುತ್ತದೆ. ನನ್ನ ಬಾಲ್ಯದಲ್ಲಿ ಕಣ್ಣಾರೆ ಕಂಡಿದ್ದು ಇದನ್ನೇ. ನಾನು 7ನೇ ತರಗತಿ ಇರಬಹುದು. ಸಂಬಂಧಿಕರ ಮನೆಯಲ್ಲಿ ಅಜ್ಜಿಯಿಂದ ಹಿಡಿದು ಅತ್ತೆ, ಚಿಕ್ಕಮ್ಮ, ಅತ್ತಿಗೆ, ಅಣ್ಣ ಹೀಗೆ ಎಲ್ಲರಿಗೂ ಮೈಯಲ್ಲಿ ದೆವ್ವ ಬರುವುದು, ಕೊನೆಗೆ ತಮ್ಮಿಷ್ಟವನ್ನು ಸಾಧಿಸಿಕೊಳ್ಳುವುದು. ಅಣ್ಣನೆನೆಸಿಕೊಂಡವನು ‘ಸು ಫ್ರಮ್ ಸೋ’ನಂತೆ ತನ್ನ ಹಲವು ತಪ್ಪುಗಳಿಂದ ನುಣುಚಿಕೊಳ್ಳಲು ಬಳಸಿಕೊಂಡದ್ದು ಈ ದೆವ್ವದ ನೆರಳನ್ನು. ಒಟ್ಟಾರೆಯಾಗಿ ಇಂತಹ ಘಟನೆ ನಡೆದಲ್ಲಿ ನಾಟಕವೂ ಇರಬಹುದು, ಕಾಳಜಿಯ ಹತಾಶೆಯೂ ಇರಬಹುದು. ಆದರೆ ಮಹಾರಾಷ್ಟ್ರದ ಬುಡಕಟ್ಟು ಸೀಮೆಯ ಹೆಣ್ಣುಮಕ್ಕಳಿಗೆ ತಕ್ಷಣ ಸಹಾಯದ ಅಗತ್ಯವಿದೆ. ವೈದ್ಯರಾದ ಆದರ್ಶ್ ಅವರು ತಿಳಿಸಿದಂತೆ ಈ ಹೆಣ್ಣುಮಕ್ಕಳು ಸಮಸ್ಯೆಯಲ್ಲಿ ಸಿಲುಕಿರುವುದು ಖಂಡಿತ.
ಮುಖ್ಯವಾಗಿ ಶಿಕ್ಷಣ ಮತ್ತು ಜಾಗೃತಿಯ ಕೊರತೆ ಇರುವ ಬುಡಕಟ್ಟು ಪ್ರದೇಶವಿದು. ಶಾರೀರಿಕ ದೌರ್ಬಲ್ಯ ಮತ್ತು ಆತಂಕದಿಂದ ಉಂಟಾದ ಈ ಸ್ಥಿತಿಗೆ ‘ದೆವ್ವದ ಕಾಟ’ ಎಂಬ ಮೂಢನಂಬಿಕೆಯ ಪಟ್ಟ ಕಟ್ಟುವುದು ಸುಲಭ. ಪೋಷಕರೂ ಹೆದರಿ ಮಕ್ಕಳನ್ನು ಶಾಲೆಯಿಂದ ಬಿಡಿಸಿ, ಶೈಕ್ಷಣಿಕ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ಅದಕ್ಕೂ ಮುಖ್ಯವಾಗಿ ತಪ್ಪನ್ನು ಆ ಮಕ್ಕಳಿಗೆ ಬೇಕಿರುವುದು ದೆವ್ವ ಬಿಡಿಸುವ ಪೂಜೆಗಳಲ್ಲ; ಬದಲಿಗೆ ಹೊಟ್ಟೆಗೆ ಒಳ್ಳೆಯ ಆಹಾರ, ಉಸಿರಾಡಲು ಸ್ವಚ್ಛ ವಾತಾವರಣ, ಸುರಕ್ಷತೆಯ ಭಾವನೆ ಮತ್ತು ಪ್ರೀತಿಯ ಆರೈಕೆ. ಸರ್ಕಾರ ತಕ್ಷಣವೇ ಜಾಗೃತಗೊಂಡು ಆಶ್ರಮಶಾಲೆಗಳ ಸ್ಥಿತಿಯನ್ನು ಸುಧಾರಿಸದಿದ್ದರೆ, ಉಜ್ವಲ ಭವಿಷ್ಯ ಕಾಣಬೇಕಾದ ಸಾವಿರಾರು ಬುಡಕಟ್ಟು ಮಕ್ಕಳ ಬಾಲ್ಯ ವ್ಯವಸ್ಥೆಯ ಕೊಳೆಯಡಿಯಲ್ಲೇ ಕರಗಿಹೋಗಲಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



