ಬ್ರಿಜ್‌ ಭೂಷಣ್ ಖುಲಾಸೆ | ಬೂಟಿನ ಏಟು ತಿಂದು ಹೋರಾಡಿದ್ದಕ್ಕೆ ಸಿಕ್ಕ ʼಪದಕʼ!

Date:

ದೇಶಕ್ಕೆ ಒಲಂಪಿಕ್ಸ್‌, ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಹೆಣ್ಣುಮಕ್ಕಳು, ಒಂದು ದಿನ ಅದೇ ದೇಶದ ರಾಜಧಾನಿಯಲ್ಲಿ ತಮ್ಮ ಘನತೆ ಮತ್ತು ನ್ಯಾಯಕ್ಕಾಗಿ ಬೀದಿಗಿಳಿದು ಕಣ್ಣೀರು ಹಾಕಬೇಕಾಯಿತು. ತಮ್ಮ ಮೇಲೆ ಲೈಂಗಿಕ ಕಿರುಕುಳ ಎಸಗಲಾಗಿದೆ ಎಂದು ಆರೋಪಿಸಿ‌ ಧ್ವನಿ ಎತ್ತಬೇಕಾಯಿತು. ವರ್ಷಗಳ ಕಾನೂನು ಸಮರದ ಬಳಿಕ ಆರೋಪಿಗೆ ಘನವೆತ್ತ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಈ ತೀರ್ಪು ಬೂಟುಕಾಲಿನ ಏಟು ತಿಂದು ಹೋರಾಡಿದ ಕ್ರೀಡಾಪಟುಗಳ ಎದೆಗೆ ಮತ್ತೊಮ್ಮೆ ಒದ್ದಿದೆ.

- Advertisement -

ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳ ಆರೋಪಗಳಿಂದ ದೇಶವ್ಯಾಪಿ ಸಂಚಲನ ಸೃಷ್ಟಿಸಿದ್ದ ಮಾಜಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್‌ (WFI) ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧದ ಪ್ರಕರಣದಲ್ಲಿ, ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯವು 2026ರ ಆಗಸ್ಟ್‌ 3ರಂದು ಮಹತ್ವದ ತೀರ್ಪು ನೀಡಿದೆ. ಸುಮಾರು ಮೂರು ವರ್ಷಗಳ ಕಾಲ ನಡೆದ ನ್ಯಾಯಾಂಗ ಹೋರಾಟದ ಬಳಿಕ, ಆರೋಪಗಳನ್ನು ಅನುಮಾನಾತೀತವಾಗಿ ಸಾಬೀತುಪಡಿಸಲು ಅಭಿಯೋಜನಾ ಪಕ್ಷ ವಿಫಲವಾಗಿದೆ ಎಂದು ಹೇಳಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಹಾಗೂ ಸಹಆರೋಪಿ, ಡಬ್ಲ್ಯುಎಫ್‌ಐ ಮಾಜಿ ಸಹ ಕಾರ್ಯದರ್ಶಿ ವಿನೋದ್‌ ತೋಮರ್‌ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ. ಈ ತೀರ್ಪಿನೊಂದಿಗೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಕುಸ್ತಿಪಟುಗಳ ಹೋರಾಟದ ಪ್ರಕರಣವು ನ್ಯಾಯಾಂಗದ ಮೊದಲ ಹಂತದಲ್ಲಿ ಅಂತ್ಯ ಕಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ:...

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ ಗುಲಾಬಿ ಎಣ್ಣೆ ತಯಾರಿಕಾ ಘಟಕ, ಪ್ರವಾಸಿ ತಾಣ ಮಾಡಬೇಕು. ಟಿಪ್ಪು ಕಾಲದ ಚಾಮನ್ ಎಂಬ ಹೆಸರನ್ನು ಉಳಿಸಬೇಕು. ಗುಲಾಬಿ ಕೇವಲ ಒಂದು...

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

2023ರ ಜನವರಿಯಲ್ಲಿ ಒಲಿಂಪಿಕ್‌ ಪದಕ ವಿಜೇತೆ ವಿನೇಶ್‌ ಫೋಗಾಟ್, ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್, ಬಜರಂಗ್‌ ಪೂನಿಯಾ ಸೇರಿದಂತೆ ದೇಶದ ಪ್ರಮುಖ ಕುಸ್ತಿಪಟುಗಳು ಪತ್ರಿಕಾಗೋಷ್ಠಿ ನಡೆಸಿ, ಭಾರತೀಯ ಕುಸ್ತಿ ಫೆಡರೇಷನ್‌ (WFI)ನ ಆಗಿನ ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಹಲವು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಮಹಿಳಾ ಆಟಗಾರ್ತಿಯರನ್ನು ತರಬೇತಿ ಶಿಬಿರಗಳು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳ ವೇಳೆ ಅನುಚಿತವಾಗಿ ಸ್ಪರ್ಶಿಸುವುದು, ಅಸಭ್ಯ ಮಾತುಗಳನ್ನಾಡುವುದು, ಮಾನಸಿಕ ಒತ್ತಡ ಹೇರುವುದು ಸೇರಿದಂತೆ ಹಲವು ಆರೋಪಗಳನ್ನು ಸಾರ್ವಜನಿಕವಾಗಿ ಮುಂದಿಟ್ಟರು.

image 2026 08 06T185407.131

ಆರೋಪಗಳು ಬಹಿರಂಗವಾಗುತ್ತಿದ್ದಂತೆಯೇ ಕುಸ್ತಿಪಟುಗಳು ದೆಹಲಿಯ ಜಂತರ್‌ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಬ್ರಿಜ್‌ ಭೂಷಣ್‌ ಅವರನ್ನು ತಕ್ಷಣ ಬಂಧಿಸಬೇಕು, ಡಬ್ಲ್ಯುಎಫ್‌ಐ ಅಧ್ಯಕ್ಷ ಸ್ಥಾನದಿಂದ ದೂರವಿಡಬೇಕು ಹಾಗೂ ಮಹಿಳಾ ಆಟಗಾರ್ತಿಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಆದರೆ ಆರಂಭದಲ್ಲಿ ಕೇಂದ್ರ ಸರ್ಕಾರವು ಭಾರತೀಯ ಒಲಿಂಪಿಕ್‌ ಸಂಸ್ಥೆಯ ಮೂಲಕ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿ ಆರೋಪಗಳ ತನಿಖೆಗೆ ಆದೇಶಿಸಿತು. ಸಮಿತಿಯು ವರದಿ ಸಲ್ಲಿಸಿದರೂ ಅದರ ವಿವರಗಳನ್ನು ಸಾರ್ವಜನಿಕಗೊಳಿಸಲಿಲ್ಲ. ಮತ್ತೊಂದೆಡೆ, ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸುವಲ್ಲಿಯೂ ವಿಳಂಬ ಮಾಡಿದರು. ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಕುಸ್ತಿಪಟುಗಳು ಸುಪ್ರೀಂ ಕೋರ್ಟ್‌ ಮೊರೆ ಹೋದರು. ಪೊಲೀಸರು ತಮ್ಮ ಕಾನೂನುಬದ್ಧ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದರು. ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ದೂರು ದಾಖಲಿಸದೆ ವಿಳಂಬ ಮಾಡಿರುವ ಬಗ್ಗೆ ಪ್ರಶ್ನೆ ಎತ್ತಿತು. ನ್ಯಾಯಾಲಯದ ಮಧ್ಯಪ್ರವೇಶದ ಬಳಿಕವೇ 2023ರ ಏಪ್ರಿಲ್‌ 28ರಂದು ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿ ಅಧಿಕೃತ ತನಿಖೆ ಆರಂಭಿಸಿದರು. ಒಂದರಲ್ಲಿ ಆರು ಮಹಿಳಾ ಕುಸ್ತಿಪಟುಗಳ ಆರೋಪಗಳಿದ್ದರೆ, ಮತ್ತೊಂದನ್ನು ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ದೂರಿನ ಆಧಾರದ ಮೇಲೆ ಪೊಕ್ಸೊ (POCSO) ಕಾಯ್ದೆಯಡಿ ದಾಖಲಿಸಲಾಗಿತ್ತು.

ಎಫ್‌ಐಆರ್‌ ದಾಖಲಾದ ನಂತರ ದೆಹಲಿ ಪೊಲೀಸರು ಮಹಿಳಾ ಕುಸ್ತಿಪಟುಗಳ ಹೇಳಿಕೆಗಳನ್ನು ದಾಖಲಿಸಿ ತನಿಖೆ ಆರಂಭಿಸಿದರು. ತನಿಖೆಯ ಭಾಗವಾಗಿ ಹಲವು ಸಂತ್ರಸ್ತೆಯರ ಹೇಳಿಕೆಗಳನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್‌ 164ರ ಅಡಿಯಲ್ಲಿ ನ್ಯಾಯಾಧೀಶರ ಎದುರು ದಾಖಲಿಸಲಾಯಿತು. ಬಳಿಕ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು, ವಿವಿಧ ರಾಜ್ಯಗಳಲ್ಲಿ ನಡೆದ ಸ್ಪರ್ಧೆಗಳು ಮತ್ತು ತರಬೇತಿ ಶಿಬಿರಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಸಂಗ್ರಹಿಸಿದರು. ಸುಮಾರು ಒಂದೂವರೆ ತಿಂಗಳ ತನಿಖೆಯ ಬಳಿಕ, 2023ರ ಜೂನ್‌ 15ರಂದು ಪೊಲೀಸರು ರೌಸ್‌ ಅವೆನ್ಯೂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದರು. ಆರು ಮಹಿಳಾ ಕುಸ್ತಿಪಟುಗಳ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 354, 354ಎ ಮತ್ತು 506 ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸಲಾಯಿತು. ಆದರೆ ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ದೂರಿನ ಕುರಿತು, ಆಕೆ ಮತ್ತು ಆಕೆಯ ತಂದೆ ತಮ್ಮ ಆರೋಪವನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಪೊಕ್ಸೊ ಪ್ರಕರಣದಲ್ಲಿ ‘ಕ್ಯಾನ್ಸಲೇಷನ್‌ ರಿಪೋರ್ಟ್‌’ ಸಲ್ಲಿಸಿದರು.

ಆರೋಪಪಟ್ಟಿ ಸಲ್ಲಿಕೆಯಾದ ಬಳಿಕ 2023ರ ಜುಲೈ 7ರಂದು ರೌಸ್‌ ಅವೆನ್ಯೂ ನ್ಯಾಯಾಲಯ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಹಾಗೂ ಡಬ್ಲ್ಯುಎಫ್‌ಐ ಮಾಜಿ ಸಹ ಕಾರ್ಯದರ್ಶಿ ವಿನೋದ್‌ ತೋಮರ್‌ಗೆ ಸಮನ್ಸ್‌ ಜಾರಿಗೊಳಿಸಿತು. ಕೆಲವೇ ದಿನಗಳ ನಂತರ, ದೂರುದಾರರು ಅಥವಾ ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಒತ್ತಡ ಹೇರಬಾರದು, ಅವರನ್ನು ಸಂಪರ್ಕಿಸಿ ಪ್ರಭಾವ ಬೀರುವ ಪ್ರಯತ್ನ ಮಾಡಬಾರದು ಹಾಗೂ ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ತೊರೆಯಬಾರದು ಎಂಬ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿ ಜುಲೈ 20ರಂದು ಇಬ್ಬರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ಬ್ರಿಜ್‌ ಭೂಷಣ್‌ ಪರ ವಕೀಲರು ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿ, ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎಂದು ವಾದಿಸಿದರೆ, ಕುಸ್ತಿಪಟುಗಳು ಮತ್ತು ಅವರ ಪರ ವಕೀಲರು ತನಿಖೆ ಮುಂದುವರಿಯುವವರೆಗೆ ಅವರನ್ನು ಯಾವುದೇ ಕ್ರೀಡಾ ಆಡಳಿತದ ಜವಾಬ್ದಾರಿಯಿಂದ ದೂರವಿಡಬೇಕು ಎಂದು ಒತ್ತಾಯಿಸಿದರು.

f871c73c a35b 4d17 a475 d8fa7b0acfc8

ಇದೇ ಅವಧಿಯಲ್ಲಿ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯಿತು. 2023ರ ಮೇ 28ರಂದು ಹೊಸ ಸಂಸತ್‌ ಭವನ ಉದ್ಘಾಟನೆಯ ದಿನ, ಆಡಳಿತದ ನಿಷ್ಕ್ರಿಯತೆ ವಿರೋಧಿಸಿ ಕುಸ್ತಿಪಟುಗಳು ಸಂಸತ್‌ನತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದರು. ನ್ಯಾಯಕ್ಕಾಗಿ ಬೀದಿಗಿಳಿದಿದ್ದ ಒಲಂಪಿಕ್‌, ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಪದಕ ಗೆದ್ದು ಕೀರ್ತಿ ತಂದ ಮಹಿಳಾ ಕುಸ್ತಿಪಟುಗಳನ್ನೇ ದೆಹಲಿ ಪೊಲೀಸರು ರಸ್ತೆಯಲ್ಲೇ ದರದರನೆ ಎಳೆದಾಡಿ ವಶಕ್ಕೆ ಪಡೆದ ದೃಶ್ಯಗಳು ದೇಶವನ್ನು ಬೆಚ್ಚಿಬೀಳಿಸಿದವು. ಹೊಸ ಸಂಸತ್‌ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸಿದ್ದ ವೇಳೆ ಪೊಲೀಸರು ಅವರನ್ನು ನೆಲಕ್ಕೆ ಬೀಳಿಸಿ ಎಳೆದೊಯ್ಯುವುದು, ಬೂಟುಗಾಲಿನಿಂದ ತುಳಿಯುವುದು, ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸುವುದು ವ್ಯಾಪಕ ಟೀಕೆಗೆ ಗುರಿಯಾಯಿತು. ಮತ್ತೊಂದೆಡೆ, ಕೇಂದ್ರ ಸರ್ಕಾರ ರಚಿಸಿದ್ದ ಮೇಲ್ವಿಚಾರಣಾ ಸಮಿತಿಯ ಮೋಸದ ವರದಿಯನ್ನು ಸಾರ್ವಜನಿಕಗೊಳಿಸದಿರುವುದು ಮತ್ತು ಆರೋಪಗಳ ಕುರಿತು ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಕುಸ್ತಿಪಟುಗಳ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು. ಕೊನೆಗೆ, “ದೇಶಕ್ಕಾಗಿ ಗೆದ್ದ ಈ ಪದಕಗಳಿಗೆ ಗೌರವವೇ ಇಲ್ಲದಿದ್ದರೆ ಅವುಗಳನ್ನು ಇಟ್ಟುಕೊಳ್ಳುವುದಕ್ಕೂ ಅರ್ಥವಿಲ್ಲ” ಎಂದು ಹೇಳಿದ ಸಾಕ್ಷಿ ಮಲಿಕ್‌, ವಿನೇಶ್‌ ಫೋಗಾಟ್‌, ಬಜರಂಗ್‌ ಪೂನಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಗೆ ವಿಸರ್ಜಿಸುವುದಾಗಿ ಘೋಷಿಸಿ ಹರಿದ್ವಾರದತ್ತ ಹೊರಟಿದ್ದರು. ರೈತ ನಾಯಕ ನರೇಶ್ ಟಿಕಾಯತ್ ಅವರ ಮನವಿಯ ಬಳಿಕ ಅವರು ಆ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡರು.

ಪ್ರಕರಣದ ವಿಚಾರಣೆ ಮುಂದುವರಿದಂತೆ 2024ರ ಮೇ 10ರಂದು ರೌಸ್‌ ಅವೆನ್ಯೂ ನ್ಯಾಯಾಲಯ ಬ್ರಿಜ್‌ ಭೂಷಣ್‌ ವಿರುದ್ಧ ಅಧಿಕೃತವಾಗಿ ಆರೋಪಗಳನ್ನು ಹೊರಿಸಿತು. ಐವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 354 ಮತ್ತು 354ಎ ಅಡಿಯಲ್ಲಿ ವಿಚಾರಣೆಗೆ ಸಾಕಷ್ಟು ಪ್ರಾಥಮಿಕ ಸಾಕ್ಷ್ಯಗಳಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಇಬ್ಬರು ದೂರುದಾರರಿಗೆ ಕ್ರಿಮಿನಲ್‌ ಬೆದರಿಕೆ ಹಾಕಿದ ಆರೋಪ ಸಂಬಂಧ ಸೆಕ್ಷನ್‌ 506(1) ಅಡಿಯಲ್ಲಿಯೂ ಆರೋಪಗಳನ್ನು ಹೊರಿಸಲಾಯಿತು. ಸಹಆರೋಪಿ ಹಾಗೂ ಡಬ್ಲ್ಯುಎಫ್‌ಐ ಮಾಜಿ ಸಹ ಕಾರ್ಯದರ್ಶಿ ವಿನೋದ್‌ ತೋಮರ್‌ ವಿರುದ್ಧವೂ ಒಬ್ಬ ಸಂತ್ರಸ್ತೆಗೆ ಬೆದರಿಕೆ ಹಾಕಿದ ಆರೋಪದಡಿ ವಿಚಾರಣೆ ನಡೆಸಲು ನ್ಯಾಯಾಲಯ ಆದೇಶಿಸಿತು.

ಇದೇ ಅವಧಿಯಲ್ಲಿ ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಆಡಳಿತವೂ ಚರ್ಚೆಯ ಕೇಂದ್ರಬಿಂದುವಾಗಿತ್ತು. 2023ರ ಡಿಸೆಂಬರ್‌ನಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆಯಾದ ಕೆಲವೇ ದಿನಗಳಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಫೆಡರೇಷನ್‌ನ ಮಾನ್ಯತೆಯನ್ನು ಅಮಾನತುಗೊಳಿಸಿತ್ತು. ನಂತರ 2024ರಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆ (United World Wrestling) ಡಬ್ಲ್ಯುಎಫ್‌ಐ ಮೇಲಿನ ತನ್ನ ಅಮಾನತನ್ನು ಹಿಂಪಡೆದರೆ, ದೇಶೀಯ ಮಟ್ಟದಲ್ಲಿ ಆಡಳಿತದ ಬಗ್ಗೆ ಕಾನೂನು ಹೋರಾಟ ಮುಂದುವರಿಯಿತು. 2025ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವೂ ಡಬ್ಲ್ಯುಎಫ್‌ಐ ಮೇಲಿನ ಅಮಾನತನ್ನು ಹಿಂಪಡೆದು ಮತ್ತೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ ಮಾನ್ಯತೆ ನೀಡಿತು. ಇದರ ನಡುವೆ ಬ್ರಿಜ್‌ ಭೂಷಣ್‌ ವಿರುದ್ಧದ ಕ್ರಿಮಿನಲ್‌ ಪ್ರಕರಣ ಮಾತ್ರ ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ಮುಂದುವರಿಯುತ್ತಲೇ ಇತ್ತು.

image 2026 08 06T185656.018

ಈ ನಡುವೆ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌, ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ ಮತ್ತು ನ್ಯಾಯಾಲಯ ಹೊರಿಸಿದ್ದ ಆರೋಪಗಳನ್ನು ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿದ ಬಳಿಕವೂ ಹಲವು ತಿಂಗಳುಗಳ ಕಾಲ ವಿಚಾರಣೆ ಮುಂದೂಡುತ್ತಲೇ ಬಂದ ಹಿನ್ನೆಲೆಯಲ್ಲಿ, 2026ರ ಜನವರಿ 29ರಂದು ದೆಹಲಿ ಹೈಕೋರ್ಟ್‌ ಅವರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. 2024ರ ಆಗಸ್ಟ್‌ನಿಂದ ಅರ್ಜಿ ಬಾಕಿಯಿದ್ದರೂ ವಾದ ಮಂಡಿಸಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿ, ಪ್ರಕರಣದ ವಿಚಾರಣೆಗೆ ಯಾವುದೇ ತಡೆ ಇಲ್ಲ ಎಂದು ಸ್ಪಷ್ಟಪಡಿಸಿತು. ಹೀಗಾಗಿ ರೌಸ್‌ ಅವೆನ್ಯೂ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ಮತ್ತು ಅಂತಿಮ ಹಂತದ ವಾದಗಳು ನಿರಂತರವಾಗಿ ಮುಂದುವರಿದವು.

ಸುದೀರ್ಘ ವಿಚಾರಣೆಯ ಬಳಿಕ 2026ರ ಜುಲೈ 2ರಂದು ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಅಶ್ವಿನಿ ಪನ್ವಾರ್‌ ಅವರು ತೀರ್ಪನ್ನು ಕಾಯ್ದಿರಿಸಿದರು. ಕಳೆದ ಆಗಸ್ಟ್‌ 3ರಂದು ಪ್ರಕಟವಾದ ತೀರ್ಪಿನಲ್ಲಿ, ಆರೋಪಗಳನ್ನು ಅನುಮಾನಾತೀತವಾಗಿ ಸಾಬೀತುಪಡಿಸಲು ಅಭಿಯೋಜನಾ ಪಕ್ಷ ವಿಫಲವಾಗಿದೆ ಎಂದು ಹೇಳಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಹಾಗೂ ಸಹಆರೋಪಿ ವಿನೋದ್‌ ತೋಮರ್‌ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಯಿತು. ಸಾಕ್ಷಿಗಳ ಹೇಳಿಕೆಗಳಲ್ಲಿ ಕಂಡುಬಂದ ವ್ಯತ್ಯಾಸಗಳು, ಆರೋಪಗಳನ್ನು ಬೆಂಬಲಿಸುವಷ್ಟು ದೃಢವಾದ ಪುರಾವೆಗಳ ಕೊರತೆ ಹಾಗೂ ಅಪರಾಧವನ್ನು ನಿಸ್ಸಂಶಯವಾಗಿ ಸಾಬೀತುಪಡಿಸಲು ಸಾಧ್ಯವಾಗದಿರುವುದನ್ನು ನ್ಯಾಯಾಲಯ ತನ್ನ ತೀರ್ಪಿನ ಪ್ರಮುಖ ಆಧಾರಗಳಾಗಿ ಉಲ್ಲೇಖಿಸಿದೆ.

ಇದನ್ನೂ ಓದಿ: ಬ್ರಿಜ್‌ಭೂಷಣ್ ಖುಲಾಸೆ: ತೀರ್ಪಿನ ವಿರುದ್ಧ ಮೇಲ್ಮನವಿಗೆ ಕುಸ್ತಿಪಟುಗಳ ನಿರ್ಧಾರ, ಹೋರಾಟ ಮುಂದುವರಿಕೆ

ಇನ್ನು ಗಂಭೀರ ಲೈಂಗಿಕ ದೌರ್ಜನ್ಯದ ಆರೋಪಗಳನ್ನೊತ್ತ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಖುಲಾಸೆಗೊಳಿಸಿದ ತೀರ್ಪಿನ ಕುರಿತು ಕುಸ್ತಿಪಟು ವಿನೇಶ್ ಫೋಗಟ್, ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬ್ರಿಜ್ ಭೂಷಣ್ ರಕ್ಷಿಸಲು ಇಡೀ ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಆಡಳಿತ ಪಕ್ಷದ ಪ್ರಭಾವಿ ನಾಯಕನ ವಿರುದ್ಧ ಎಫ್‌ಐಆರ್ ದಾಖಲಿಸಲು ನಾವು ಬೀದಿಗಿಳಿದು ಸಾಕಷ್ಟು ಹೋರಾಟ ಮಾಡಬೇಕಾಯಿತು. ಸರ್ಕಾರ ಮತ್ತು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಭೂಷಣ್, ಹಲವಾರು ಹುಡುಗಿಯರನ್ನು ಬೆದರಿಸಿ ಪ್ರಕರಣದಿಂದ ಹಿಂದೆ ಸರಿಯುವಂತೆ ಮಾಡಿದರು. ಆದರೂ, ಹಲವು ಕುಸ್ತಿಪಟುಗಳು ದೃಢವಾಗಿ ನಿಂತು ನ್ಯಾಯಾಲಯದಲ್ಲಿ ಬ್ರಿಜ್ ಭೂಷಣ್ ವಿರುದ್ಧ ಹೋರಾಡುತ್ತಿದ್ದಾರೆ ಸದ್ಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ಪ್ರಕರಣ ಆರಂಭದಿಂದಲೂ, ಇಡೀ ರಾಜ್ಯದ ಆಡಳಿತ ಯಂತ್ರ, ಸರ್ಕಾರ ಮತ್ತು ವ್ಯವಸ್ಥೆಯು ಬ್ರಿಜ್ ಭೂಷಣ್ ಅವರನ್ನು ರಕ್ಷಿಸಲು ಕೆಲಸ ಮಾಡುತ್ತಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಮಹಿಳಾ ಕುಸ್ತಿಪಟುಗಳು ಈಗಾಗಲೇ ನಮ್ಮ ವಕೀಲರಿಗೆ ಸೂಚಿಸಿದ್ದಾರೆ. ಸಾಧ್ಯವಾದಷ್ಟು ಬೇಗ ಮೇಲ್ಮನವಿ ಸಲ್ಲಿಸಲಾಗುವುದು. ನಾವು ಭರವಸೆ ಕಳೆದುಕೊಂಡಿಲ್ಲ, ಮತ್ತು ಕುಸ್ತಿಪಟುಗಳು ತಮ್ಮ ಹೋರಾಟವನ್ನು ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ.

ಮಹಿಳಾ ಕ್ರೀಡಾಪಟುಗಳು ಸುರಕ್ಷಿತವಾಗಿದ್ದಾರೆಯೇ?, ಸಮಸ್ಯೆ ಎದುರಾದಾಗ ಸುರಕ್ಷಿತವಾಗಿ ದೂರು ನೀಡಬಹುದೇ,? ಪ್ರಭಾವಿ ವ್ಯಕ್ತಿಗಳ ವಿರುದ್ಧದ ಆರೋಪಗಳನ್ನು ತನಿಖಾ ಸಂಸ್ಥೆಗಳು ಎಷ್ಟು ಸ್ವತಂತ್ರವಾಗಿ ತನಿಖೆ ನಡೆಸುತ್ತವೆ? ಮತ್ತು ಈ ದೇಶದಲ್ಲಿ ನ್ಯಾಯ ಎಲ್ಲರಿಗೂ ಸಮಾನವಾಗಿದೆಯೇ? ಸೇರಿದಂತೆ ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದೇ ಕಾರಣಕ್ಕೆ ಬ್ರಿಜ್‌ ಭೂಷಣ್‌ ಪ್ರಕರಣ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಮಹಿಳೆಯರ ಸುರಕ್ಷತೆ, ಅಧಿಕಾರದ ದುರುಪಯೋಗ ಮತ್ತು ನ್ಯಾಯಕ್ಕಾಗಿ ನಡೆದ ಅತ್ಯಂತ ಮಹತ್ವದ ಹೋರಾಟಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಸುಪ್ರೀಂ’ ನಲ್ಲಿ ವಂದೇ ಮಾತರಂ ವಿಚಾರಣೆ-  ಟಿ.ಎಂ.ಕೃಷ್ಣ ನಕ್ಸಲೈಟ್ ಎಂದು ಜರೆದ ಸಾಲಿಸಿಟರ್ ಜನರಲ್

ಮಂಗಳವಾರ ಸುಪ್ರೀಮ್ ಕೋರ್ಟಿನಲ್ಲಿ ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್  ತುಷಾರ್ ಮೆಹ್ತಾ...

‘ವಂದೇ ಮಾತರಂ’ ಹಾಡದಿದ್ದರೆ ಅಪರಾಧವಲ್ಲ, ಶಿಕ್ಷೆಯೂ ಇಲ್ಲ: ಸುಪ್ರೀಂ ಕೋರ್ಟ್

‘ವಂದೇ ಮಾತರಂ’ನ ಹಾಡುವುದು ಕಡ್ಡಾಯವಲ್ಲ. ಹಾಡದಿದ್ದ ಕಾರಣಕ್ಕೆ ಶಿಕ್ಷೆ ನೀಡಲಾಗುವುದಿಲ್ಲ ಎಂದು...

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ: ಸೆ.22 ವಿಶ್ವ ಗುಲಾಬಿ ದಿನ

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ...

ಜಗತ್ತಿನಲ್ಲೇ ಮೊದಲು: ಹಂದಿ ಮೂತ್ರಪಿಂಡದಿಂದ 9 ತಿಂಗಳು ಜೀವಿಸಿದ ವ್ಯಕ್ತಿ

ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಯೊಂದು ನಡೆದಿದೆ. ತಳಿವಿಜ್ಞಾನದ (ಜೆನೆಟಿಕ್ಸ್‌) ಮೂಲಕ...