ಮುಂಡಗೋಡ: ವಿದ್ಯಾರ್ಥಿಗಳು ಜೀವನದ ಯಾವುದೋ ಒಂದು ಹಂತದಲ್ಲಿ ಸೋತಿದ್ದೇವೆ ಎಂದು ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಸೋಲನ್ನು ಸವಾಲಾಗಿ ಸ್ವೀಕರಿಸಿ ತಪ್ಪುಗಳನ್ನು ತಿದ್ದಿಕೊಂಡು ಹೆಚ್ಚಿನ ಪರಿಶ್ರಮದಿಂದ ಮತ್ತೆ ಪ್ರಯತ್ನಿಸಿದರೆ, ಸೋಲು ಗೆಲುವಿನ ಮೆಟ್ಟಿಲಾಗಿ ಪರಿವರ್ತನೆಯಾಗುತ್ತದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಹೇಳಿದರು.
ಮುಂಡಗೋಡ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಮ್ಮ ಜೀವನದ ಅನುಭವವನ್ನು ಹಂಚಿಕೊಂಡ ಅವರು, “ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರು ಬಾರಿ ಅನುತ್ತೀರ್ಣನಾಗಿದ್ದೆ.
ಈ ಸುದ್ದಿ ಓದಿದ್ದೀರಾ? ಶಿರಸಿಯ ಮಾಜಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ
ಆದರೆ ಯಾವುದೇ ಹಂತದಲ್ಲೂ ಪ್ರಯತ್ನವನ್ನು ಕೈಬಿಡಲಿಲ್ಲ. ಅಂದಿನ ಅಚಲ ಸಂಕಲ್ಪ ಮತ್ತು ಪರಿಶ್ರಮವೇ ಇಂದು ಈ ಸ್ಥಾನಕ್ಕೆ ತಲುಪುವಂತೆ ಮಾಡಿದೆ. ಅದರ ನಂತರ ಎದುರಿಸಿದ ಯಾವುದೇ ಪರೀಕ್ಷೆಯಲ್ಲಿ ಸೋಲು ಕಂಡಿಲ್ಲ. ನನ್ನಂತಹ ಸಾಮಾನ್ಯ ವ್ಯಕ್ತಿಗೆ ಈ ಮಟ್ಟದ ಯಶಸ್ಸು ಸಾಧ್ಯವಾಗಿದ್ದರೆ, ನಿಮ್ಮಿಂದ ಇನ್ನೂ ದೊಡ್ಡ ಸಾಧನೆ ಸಾಧ್ಯ. ಆದ್ದರಿಂದ ಧೃತಿಗೆಡದೆ ನಿಮ್ಮ ನ್ಯೂನತೆಗಳನ್ನು ಅರಿತು ಗುರಿಯತ್ತ ದೃಢವಾಗಿ ಸಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.
ಇದಕ್ಕೂ ಮುನ್ನ ಅವರು ನಗರದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಜ್ಞಾನ ಪ್ರಜ್ಞಾ ಅಂಧ ಮಕ್ಕಳ ವಸತಿಯುತ ಶಾಲೆ ಹಾಗೂ ದೇಶಪಾಂಡೆ ನಗರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆತು ಸಂವಾದ ನಡೆಸಿದರು. ಅಂಧ ಮಕ್ಕಳ ಪ್ರತಿಭೆಯನ್ನು ಮೆಚ್ಚಿದ ಅವರು, ಶಾಲೆಯ ಅಡುಗೆ ಕೋಣೆ, ದಾಸ್ತಾನು ಕೊಠಡಿ, ಗ್ರಂಥಾಲಯ, ಶೌಚಾಲಯ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಹಾಗೂ ಪ್ರಮುಖ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಯೋಜನಾ ಅಧಿಕಾರಿ ಚೋಳಪ್ಪ ಬಣಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ, ಸಿಡಿಪಿಒ ಸಂಜೀವ್ ಕುಮಾರ್, ವಾರ್ಡನ್ ಕರಿಯಪ್ಪ, ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಸತಿ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.




