ಪ್ರಿಯಾಂಕ್ ಖರ್ಗೆಯವರನ್ನು ಬೆತ್ತಲೆಯಾಗಿ ಚಿತ್ರಿಸಿ, ‘ಲೋ ಕರಿಯಾ’ ಎಂದು ನಿಂದಿಸುವ ಅಶೋಕ್ ಅಣವೇಕರ್ ಮೂಲತಃ ಆರ್‌ಎಸ್‌ಎಸ್ ಕಾರ್ಯಕರ್ತ. ಈತ ಕಳೆದ ಆರು ವರ್ಷಗಳಿಂದ ಕಾರ್ಟೂನ್ ಮೂಲಕ ನಿರಂತರ ಕೋಮುದ್ವೇಷ ಬಿತ್ತುತ್ತಿರುವುದು ಕಂಡುಬಂದಿದೆ.
2025ರ ಅಕ್ಟೋಬರ್ 18ರಂದು ಸಂಘಪರಿವಾರ ಹಿನ್ನೆಲೆಯ ಅಶೋಕ್ ಅಣವೇಕರ್ ಎಂಬ ವಕೀಲರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕಾರ್ಟೂನ್ ನಲ್ಲಿ ಬಳಸಿರುವ ಸಾಲು ಹೀಗಿತ್ತು: “ಲೋ ಕರಿಯ.. ಚಡ್ಡಿ ತಂಟೆಗೆ ಹೋದ್ರೆ ಲಂಗೋಟಿನೂ ಇರಲ್ಲ…!” ರಾಜ್ಯದ ಪ್ರಭಾವಿ ದಲಿತ ನಾಯಕ ಪ್ರಿಯಾಂಕ್ ಖರ್ಗೆ ಅವರನ್ನು ‘ಲೋ ಕರಿಯ’ ಎಂದು ಇಲ್ಲಿ ಜರಿಯಲಾಗಿದೆ ಎಂದು ಯಾರೂ ಬೇಕಾದರೂ ಊಹಿಸಬಲ್ಲರು!
ಅಣವೇಕರ್ ಅವರು ತಮ್ಮನ್ನು ಹವ್ಯಾಸಿ ವ್ಯಂಗ್ಯಚಿತ್ರಕಾರ ಎಂದು ಗುರುತಿಸಿಕೊಂಡಿದ್ದಾರೆ. ಅವರ ಕಾರ್ಟೂನ್‌ಗಳಲ್ಲಿ ಮತೀಯವಾದದ ಪ್ರಚೋದನೆ, ಕಾಂಗ್ರೆಸ್ ನಾಯಕರ ನಿಂದನೆಗಳೇ ಮುಖ್ಯವಾಗಿ ಕಾಣಿಸುತ್ತವೆ. ಬಿಜೆಪಿಯೊಳಗಿನ ಬಣರಾಜಕಾರಣವನ್ನು ಟೀಕಿಸುವ ಕೆಲವೊಂದು ಕಾರ್ಟೂನ್ ಗಳನ್ನು ಇವರು ರಚಿಸಿದ್ದರೂ, ಆದ್ಯತೆ ನೀಡಿರುವುದು ಮಾತ್ರ ಮುಸ್ಲಿಂ ದ್ವೇಷ ಸಾಧನೆಗಷ್ಟೇ ಎಂಬುದು ಇವರ ಕಾರ್ಟೂನ್‌ಗಳನ್ನು ಸೂಕ್ಷ್ಮವಾಗಿ ನೋಡಿದಾಗ ಅರ್ಥವಾಗುತ್ತದೆ.
ಪ್ರಿಯಾಂಕ್ ಖರ್ಗೆಯವರನ್ನು ಬೆತ್ತಲಾಗಿ ಚಿತ್ರಿಸಿ, ಎರಡು ಕೈಯಿಂದಲೂ ಮರ್ಮಾಂಗವನ್ನು ಮುಚ್ಚಿಕೊಂಡಿರುವಂತೆ ತೋರಿಸಿ ಪೋಸ್ಟ್ ಮಾಡಲಾದ ವ್ಯಂಗ್ಯಚಿತ್ರವನ್ನು ‘ಕಾರ್ಟೂನ್ ಪಂಚ್’ (Cartoon punch) ಎಂಬ ಪೇಜ್‌ನಲ್ಲಿ 2025ರ ಅಕ್ಟೋಬರ್ 18 ರಂದು ಪ್ರಕಟಿಸಲಾಗಿದೆ. ಅದನ್ನು ಅದೇ ದಿನ ‘ಅಶೋಕ್ ಅಣವೇಕರ್’ (Ashok Anvekar) ಎಂಬ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಲಾಗುತ್ತದೆ. ‘ಕಾರ್ಟೂನ್ ಪಂಚ್’ನಲ್ಲಿ ಬರುವ ಎಲ್ಲ ವ್ಯಂಗ್ಯಚಿತ್ರಗಳನ್ನು ಅಣವೇಕರ್ ಅವರೇ ಬರೆಯುತ್ತಾರೆ. ಈ ಪೇಜ್‌ನ ಮೂಲಸೃಷ್ಟಿಕರ್ತ ಕೂಡ ಇವರೇ ಆಗಿದ್ದಾರೆ.
This video cannot be played in your browser. Open the video directly
“ಇಲ್ಲಿ ಕರಿಯಾ ಎನ್ನುತ್ತಿರುವುದು ಪ್ರಿಯಾಂಕ್ ಅವರಿಗೆ ಎಂದು ಹೇಗೆ ವಾದಿಸುತ್ತೀರಿ?” ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಪ್ರಿಯಾಂಕ್ ಅವರು ಆರ್‌ಎಸ್‌ಎಸ್‌ನ ನೋಂದಣಿ ಮತ್ತು ಉತ್ತರದಾಯಿತ್ವ ಸಂಬಂಧ ಕಳೆದೊಂದು ವರ್ಷದಿಂದಲೂ ನಿರಂತರ ದನಿ ಎತ್ತುತ್ತಿದ್ದಾರೆ. 2025ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಪ್ರಿಯಾಂಕ್ ಅವರು ಈ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದರು. ಆಗಿನ್ನೂ ಅವರು ಗೃಹ ಖಾತೆಯನ್ನು ವಹಿಸಿಕೊಂಡಿರಲಿಲ್ಲ. ಸೈದ್ಧಾಂತಿಕವಾಗಿ ಪ್ರತಿರೋಧ ಒಡ್ಡಿರುವ ಪ್ರಿಯಾಂಕ್ ಅವರು ಆರ್‌ಎಸ್‌ಎಸ್‌ಗೆ ಸವಾಲಾಗಿರುವುದು ಸ್ಪಷ್ಟ. ವೈಚಾರಿಕವಾಗಿ ಎದುರಿಸಲಾಗದ ಸಂಘಪರಿವಾರದ ಮುಖಂಡರು ಪ್ರಿಯಾಂಕ್ ಅವರನ್ನು ವೈಯಕ್ತಿಕವಾಗಿ ನಿಂದಿಸುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಬಹುದು.
ಅಣವೇಕರ್ ಅವರ ಇತ್ತೀಚಿನ ಪೋಸ್ಟ್‌ಗಳು ಕೂಡ ಖರ್ಗೆ ಕುಟುಂಬವನ್ನೇ ಟಾರ್ಗೆಟ್ ಮಾಡಿವೆ. ಗೃಹ ಸಚಿವರಾದ ಮೇಲೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪ್ರಿಯಾಂಕ್ ಪತ್ರ ಬರೆದರು. ಅದು ಬಹುದೊಡ್ಡ ಚರ್ಚೆಗೆ ನಾಂದಿಹಾಡಿತು. ಈ ಬೆಳವಣಿಗೆ ಹಿನ್ನಲೆಯಲ್ಲಿ ಅಣವೇಕರ್ ಅವರು 2026ರ ಜೂನ್ 18ರಂದು ತಮ್ಮ ಹಳೆಯ ಕಾರ್ಟೂನ್ ಮರುಪ್ರಕಟಿಸಿದರೂ, ‘ಲೋ ಕರಿಯಾ’ ಎಂಬ ನಿಂದನಾತ್ಮಕ ಪದವನ್ನು ಅಳಿಸಿ ಹಾಕಿದ್ದರು! ‘ಚಡ್ಡಿ ತಂಟೆಗೆ ಹೋದ್ರೆ ಲಂಗೋಟಿನೂ ಇರಲ್ಲ’ ಎಂಬ ಸಾಲನ್ನಷ್ಟೇ ಉಳಿಸಿಕೊಂಡಿದ್ದರು. ಪ್ರಿಯಾಂಕ್ ಅವರನ್ನು ನಿಂದನೆ ಮಾಡಿದ್ದ ಸುಧೀರ್ ಬಂಗೇರ ಎಂಬ ವ್ಯಕ್ತಿ ಮೇಲೆ ಪ್ರಕರಣ ದಾಖಲಾಗಿರುವ ಭಯ ಅಣವೇಕರ್ ಅವರಿಗೆ ಇದ್ದಂತೆ ಕಾಣುತ್ತದೆ. ಹೀಗಾಗಿಯೇ ಮೈಬಣ್ಣವನ್ನು ಉದ್ದೇಶಿಸಿ ನಿಂದಿಸುವುದು ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಆಸ್ಪದ ನೀಡಿದಂತೆ ಎಂಬ ಎಚ್ಚರಿಕೆ ವಕೀಲರಾದ ಅಣವೇಕರ್ ಅವರಿಗೆ ಇದ್ದಂತೆ ತೋರುತ್ತದೆ. ಹೀಗಾಗಿಯೇ ಬೆತ್ತಲೆ ಕಾರ್ಟೂನ್‌ನ ಮರುಪ್ರಕಟಣೆ ವೇಳೆ ‘ಕರಿಯ’ ಪದಕ್ಕೆ ಕತ್ತರಿ ಹಾಕುತ್ತಾರೆ!
ಖರ್ಗೆಯವರನ್ನಷ್ಟೇ ಬೆತ್ತಲೆಗೊಳಿಸಿ, ಅವರು ಚಿತ್ರ ಬರೆದಿಲ್ಲ. ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಇಂತಹದ್ದೇ ಪೋಸ್ಟ್ ಅನ್ನು 2022ರ ಮಾರ್ಚ್ 26ರಂದು ಪ್ರಕಟಿಸಿರುವುದನ್ನು ‘ಈದಿನ.ಕಾಮ್’ ಕಂಡುಕೊಂಡಿದೆ.

ಆರ್‌ಎಸ್‌ಎಸ್ ಮೂಲದವರಾದ ಅಣವೇಕರ್, ಹುಬ್ಬಳ್ಳಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗಿರುವುದಾಗಿ ಅವರ ಫೇಸ್‌ಬುಕ್ ಪೋಸ್ಟ್‌ಗಳು ಹೇಳುತ್ತವೆ. ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರೊಂದಿಗೆ ಇರುವ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ಆರ್‌ಎಸ್‌ಎಸ್ ಧರಿಸುವ ಫ್ಯಾಸಿಸ್ಟ್ ಸಮವಸ್ತ್ರದಲ್ಲೂ ಅವರು ಕಾಣಿಸಿಕೊಂಡಿರುವ ಚಿತ್ರವು ಫೇಸ್‌ಬುಕ್‌ನಲ್ಲಿ ಲಭ್ಯವಿದೆ. ಮತೀಯವಾದವನ್ನು ಪ್ರಚೋದಿಸುವುದು, ಸಂಘಪರಿವಾರದ ಸಿದ್ಧಾಂತವನ್ನು ವಿರೋಧಿಸುವವರ ಮೇಲೆ ಕೆಟ್ಟದ್ದಾಗಿ ನಿರಂತರ ವ್ಯಂಗ್ಯಚಿತ್ರ ಬರೆಯುವುದು ಅವರ ಹವ್ಯಾಸ. ಆದರೆ ಸೈದ್ಧಾಂತಿಕ ವಿರೋಧದ ನೆಪದಲ್ಲಿ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಹಾನಿಯಾಗುವಂತೆ ಚಿತ್ರಿಸುವುದು, ಕಾಂಗ್ರೆಸ್ ನಾಯಕರ ಮೇಲೆ ದ್ವೇಷ ಹುಟ್ಟು ಹಾಕುವುದು ಇವರ ಕಾರ್ಟೂನ್ ಗಳಲ್ಲಿ ಕಂಡುಬರುವ ಪ್ರಮುಖ ಅಂಶ.
ವ್ಯಂಗ್ಯಚಿತ್ರಕಾರರು ರಾಜಕೀಯ ವಿಡಂಬನೆ ಮಾಡುವುದು, ರಾಜಕಾರಣಿಗಳನ್ನು ಗೇಲಿ ಮಾಡುವುದು ಸಾಮಾನ್ಯ. ಮೋದಿ ಮತ್ತು ಬಿಜೆಪಿ ನಾಯಕರನ್ನು ಟೀಕಿಸದ, ಕೇವಲ ಕಾಂಗ್ರೆಸ್ ನಾಯಕರನ್ನಷ್ಟೇ ವಿಡಂಬನೆ ಮಾಡುವ ನೂರಾರು ಕಾರ್ಟೂನಿಸ್ಟ್‌ಗಳಿದ್ದರೂ, ತಮ್ಮ ಮಿತಿಗಳನ್ನು ದಾಟಿ, ಸಂವಿಧಾನ ವಿರೋಧಿ ನಡೆಯನ್ನು ಪ್ರದರ್ಶಿಸಿರುವುದು ಕಡಿಮೆ. ಆದರೆ ಅಣವೇಕರ್ ಅವರು ಮುಸ್ಲಿಂದ್ವೇಷ ಬಿತ್ತಲು ಕೊಂಚವೂ ಹಿಂಜರಿಯದ ವ್ಯಕ್ತಿ.
ಪ್ರತಿ ನಾಗರಿಕನಿಗೆ ಸಿಕ್ಕಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅದಕ್ಕಿರುವ ಕೆಲವು ನಿರ್ಬಂಧಗಳು ವ್ಯಂಗ್ಯಚಿತ್ರಕಾರರಿಗೂ ಅನ್ವಯಿಸುತ್ತವೆ. ಅದನ್ನು ಮೀರಿ ವಿಶೇಷ ಸ್ಥಾನಮಾನವೇನೂ ಕಾರ್ಟೂನಿಷ್ಟರಿಗೆ ಇಲ್ಲ. ಅಭಿವ್ಯಕ್ತಿಯನ್ನು ದಮನ ಮಾಡಲು ಕೆಲವೊಮ್ಮೆ ಸರ್ಕಾರಗಳು ಕಾರ್ಟೂನಿಸ್ಟರ ಮೇಲೆ ಕ್ರಮ ತೆಗೆದುಕೊಂಡ ಉದಾಹರಣೆಗಳೂ ಇವೆ. ಆದರೆ ಉದ್ದೇಶಪೂರ್ವಕವಾಗಿ ಇನ್ನೊಬ್ಬರ ಮಾನಹಾನಿ ಮಾಡುವ, ಕೋಮುದ್ವೇಷವನ್ನು ಉದ್ದೀಪಿಸುವ, ಜನಾಂಗೀಯ ನಿಂದನೆಯನ್ನೇ ಉಸಿರಾಡುವ ಕಾರ್ಟೂನುಗಳನ್ನು ಬರೆಯುವುದು ಸಂವಿಧಾನಕ್ಕೆ ತೋರುವ ಅಗೌರವವಾಗುತ್ತದೆ.

2019ನೇ ಇಸವಿಯಿಂದ ಈವರೆಗೆ ಅಶೋಕ್ ಅಣವೇಕರ್ ಅವರು ಪೋಸ್ಟ್ ಮಾಡಿರುವ ಎಲ್ಲ ಕಾರ್ಟೂನ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆಘಾತಕಾರಿ ಅಂಶಗಳು ಕಂಡುಬಂದಿವೆ. “ಮುಸ್ಲಿಂ ಸಮುದಾಯವನ್ನು ಪದೇಪದೇ ಅಣಕಿಸಿರುವುದು” ಇವರ ಉದ್ದೇಶ ಎಂಬುದು ಮೊದಲಿಗೆ ಸ್ಪಷ್ಟವಾಗುತ್ತದೆ. 2020ನೇ ಇಸವಿ ಸಂದರ್ಭದಲ್ಲಿ ಅಪ್‌ಲೋಡ್ ಮಾಡಲಾಗಿರುವ ಬಹುತೇಕ ಕಾರ್ಟೂನ್‌ಗಳು, “ಕೋವಿಡ್ ಹರಡಲು ಮುಸ್ಲಿಮರೇ ಕಾರಣ” ಎಂದು ಪ್ರತಿಪಾದಿಸಿವೆ. “ಚಿಕಿತ್ಸೆ ನೀಡಲು ಬಂದ ವೈದ್ಯನಿಗೆ ತಿವಿಯಲು ಹಿಂಬದಿಯಲ್ಲಿ ಚಾಕು ಹಿಡಿದು ನಿಂತ ಗಡ್ಡದಾರಿ (03, ಏಪ್ರಿಲ್, 2020); ಕೊರೊನಾ ಹರಡಿಸಲೆಂದೇ ಮುಸ್ಲಿಂ ವ್ಯಕ್ತಿ ಉಗುಳುತ್ತಿರುವಾಗ ಹಸಿರು ಬಣ್ಣದ ವೈರಾಣುಗಳು ತೇಲಿ ಹೋಗುತ್ತಿರುವುದು (13, ಏಪ್ರಿಲ್, 2020); ‘ಇವರೇ ನಮ್ಮ ಯಜಮಾನರು- ಇವರ ಹೆಸರು ‘ಕೋವಿಡ್’ ಅಂತ; ನನ್ನ ಮಕ್ಕಳು ‘ಶಂಕಿತ’ ಹಾಗೂ ಸೋಂಕಿತ’ ಎಂದು ಮುಸ್ಲಿಂ ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಗೆ ಪರಿಚಯಿಸುತ್ತಿರುವ ಚಿತ್ರ (28, ಏಪ್ರಿಲ್, 2020)”- ಹೀಗೆ ಮುಸ್ಲಿಂ ಸಮುದಾಯವನ್ನೇ ಸಂಪೂರ್ಣ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ವಿಕೃತಿ ಮೆರೆದಿರುವುದು ಇವರ ಕಾರ್ಟೂನ್‌ಗಳಲ್ಲಿ ಢಾಳಾಗಿ ಕಾಣಿಸುತ್ತದೆ.

ಅಶೋಕ್ ಅಣವೇಕರ್ ಅವರು ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲೆಂದೇ ಹಂದಿ ಚಿತ್ರವನ್ನು ಉದ್ದೇಶಪೂರ್ವಕವಾಗಿ ಕಾರ್ಟೂನ್‌ಗಳಲ್ಲಿ ಬಳಸುತ್ತಾರೆ. ಕೋವಿಡ್ ಹರಡಲು ಮುಸ್ಲಿಮರೇ ಕಾರಣವೆಂದು ಬಿಂಬಿಸಲು 2020ರ ಏಪ್ರಿಲ್ 24ರಂದು ಎರಡು ಹಂದಿ ಚಿತ್ರಗಳನ್ನು ಬಳಸಿ ಬರೆದ ವ್ಯಂಗ್ಯಚಿತ್ರ ವಿಕೃತಿಯ ಪರಮಾವಧಿಯಂತಿದೆ. “ಹಂದಿಜ್ವರ ಹರಡುತ್ತೇವೆ ಎಂಬ ಕಾರಣಕ್ಕೆ ನಮಗೆ ಕಂಡಲ್ಲಿ ಗುಂಡಿಕ್ಕಿ ಹೊಡೆಯುತ್ತಾರೆ.. ಆದರೆ…” ಎಂಬ ಸಾಲನ್ನು ಹಂದಿಗಳು ಹೇಳುತ್ತಿರುವಂತೆ ಆ ವ್ಯಂಗ್ಯಚಿತ್ರದಲ್ಲಿ ಬಳಸಲಾಗಿತ್ತು. “ಕೋವಿಡ್ ಹರಡುತ್ತಿರುವ ಹಂದಿಗಳಿಗೆ ಗುಂಡು ಹೊಡೆಯಿರಿ” ಎಂದು ಪ್ರಚೋದಿಸುವುದು ಈ ಕಾರ್ಟೂನ್‌ನ ಉದ್ದೇಶವಾಗಿತ್ತು.

2024ರ ಏಪ್ರಿಲ್ 27ರಂದು ಪ್ರಕಟಿಸಲಾಗಿರುವ ಕಾರ್ಟೂನ್‌ನಲ್ಲಿ ಪ್ರಚೋದಿಸಲಾದ ಮತ್ತೊಂದು ವಿಕೃತಿ ಹೀಗಿತ್ತು: “ಖುರ್ಚಿಯೊಂದರ ಕೆಳಗೆ ಹಂದಿಯೊಂದು ಅವಿತು ಕುಳಿತಿದೆ. ಆ ಹಂದಿಗೆ ಗಡ್ಡವಿದೆ. ಕುರ್ಚಿಯ ಮೇಲೆ ಕುಳಿತಿರುವ ಪೊಲೀಸ್, ತನ್ನ ಕೈಯಲ್ಲಿ ಬೂದುಗನ್ನಡಿಯೊಂದನ್ನು ಹಿಡಿದು ಹಂದಿಯನ್ನು ಸರ್ಚ್ ಮಾಡುತ್ತಿದ್ದಾನೆ. ಆ ಚಿತ್ರದ ಮೇಲ್ಭಾಗದಲ್ಲಿ- ‘ಕೊರೊನಾ ಹಂದಿಯನ್ನು ಹುಡುಕುತ್ತಿರುವ ದೆಹಲಿ ಪೊಲೀಸರು’ ಎಂದು ಬರೆಯಲಾಗಿದೆ.”

2021ರಿಂದ ಆಚೆಗೆ ಸಿದ್ದರಾಮಯ್ಯನವರಿಗೆ ಸಂಬಂಧಿಸಿದ ಕಾರ್ಟೂನ್‌ಗಳಲ್ಲಿ ಅಣವೇಕರ್ ಅವರು ಬೇಕಂತಲೇ ಹಂದಿ ಚಿತ್ರವನ್ನು ಸೇರಿಸಿರುವುದನ್ನು ಗಮನಿಸಬಹುದು. ‘ಮುಂದಿನ ಜನ್ಮದಲ್ಲಿ ……. ಆಗಿ ಹುಟ್ಟುತ್ತೇನೆ’ ಎಂದು ಸಿದ್ದರಾಮಯ್ಯ ಅವರು ಹೇಳಿರುವಂತೆಯೂ, ಮುಸ್ಲಿಂ ವ್ಯಕ್ತಿಯೊಬ್ಬ ಹಂದಿ ಜೊತೆಯಲ್ಲಿ ಕತ್ತರಿ ಹಿಡಿದುಕೊಂಡು ‘ನಮ್ದುಕೆದಲ್ಲಿ ಪುನರ್ಜನ್ಮ ಇಲ್ಲಾ…’ ಎಂದು ಸಿದ್ದರಾಮಯ್ಯರನ್ನು ಓಡಿಸಿಕೊಂಡು ಹೋಗುತ್ತಿರುವಂತೆಯೂ ಮಾರ್ಚ್ 13ರ 2024ರಂದು ಪೋಸ್ಟ್ ಮಾಡಲಾದ ಕಾರ್ಟೂನ್‌ನಲ್ಲಿ ಚಿತ್ರಿಸಲಾಗಿತ್ತು. ಸಿದ್ದರಾಮಯ್ಯನವರ ಪಕ್ಕದಲ್ಲಿ ಹಂದಿ ಚಿತ್ರವನ್ನು ಉದ್ದೇಶಪೂರ್ವಕವಾಗಿ ಪದೇಪದೇ ಬರೆದು, ಮುಸ್ಲಿಮರನ್ನು ಪ್ರಚೋದಿಸಿರುವುದು ಸಾಮಾನ್ಯವಾಗಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ನ ವಿರುದ್ಧ ಬರೆಯಲಾದ ಬಹುತೇಕ ಕಾರ್ಟೂನ್‌ಗಳಲ್ಲಿ ಹಂದಿಯನ್ನು ಬೇಕಂತಲೇ ಸೇರಿಸಲಾಗಿದೆ. ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ಮುಸ್ಲಿಮರನ್ನು ನೇರಾನೇರ ಉದ್ದೇಶಿಸುವ ಚಿತ್ರಗಳಲ್ಲಿಯೂ ‘ಹಂದಿ’ ಚಿತ್ರವನ್ನು ಬಳಸಲಾಗಿದೆ.

ಸಿದ್ದರಾಮಯ್ಯನವರು ಎದೆಬಗೆದು ತೋರಿಸುವಾಗ ಪಾಕಿಸ್ತಾನದ ಬಾವುಟ ಕಾಣಿಸುತ್ತಿರುವಂತೆ 2024ರ ಜನವರಿ 3ನೇ ತಾರೀಕು ಪೋಸ್ಟ್ ಮಾಡಲಾದ ಕಾರ್ಟೂನ್‌ನಲ್ಲಿ ಚಿತ್ರಿಸಲಾಗಿತ್ತು. ಆ ವ್ಯಂಗ್ಯಚಿತ್ರದ ಮೇಲೆ ‘ನಾನೂ ರಾಮಾಂಜನೇಯ ಭಕ್ತ- ಸಿದ್ದರಾಮುಲ್ಲಾ’ ಎಂದು ಬರೆಯಲಾಗಿತ್ತು.

2024ರ ಫೆಬ್ರವರಿ 16ರಂದು ಪ್ರಕಟಿಸಿರುವ ಕಾರ್ಟೂನ್‌ನಲ್ಲಿ ‘ಶುಕ್ರಿಯಾ ಅಬ್ಬಾ ಜಾನ್’ ಎಂಬ ಸಾಲು ಬರೆದು ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ಭರಪೂರ ಹಣ ನೀಡಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿತ್ತು. 2024ರ ಫೆಬ್ರವರಿ 28ರಂದು, “ಕಾಂಗ್ರೆಸ್ ಬೆಂಬಲಿಸುವ ವ್ಯಕ್ತಿಯ ತಲೆಯಲ್ಲಿ ಪಾಕಿಸ್ತಾನದ ಮೆದುಳು ಇದೆ” ಎಂದು ಚಿತ್ರಿಸಿ ಪೋಸ್ಟ್ ಮಾಡಲಾಗಿತ್ತು.
2024ರ ನವೆಂಬರ್‌ನಲ್ಲಿ ಕರ್ನಾಟಕದ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಇದರ ಹಿನ್ನೆಲೆಯಲ್ಲಿ ಹಿಂದೂ ಮುಸ್ಲಿಮರನ್ನು ಪ್ರಚೋದಿಸುವಂತೆ ‘ಹಂದಿ ಮತ್ತು ಗೋವಿನ ಚಿತ್ರವಿರುವ ಕಾರ್ಟೂನ್ ಬರೆಯಲಾಗಿತ್ತು. ಹಂದಿ ಚಿತ್ರದ ಬಳಿ- ‘ನಾನು ಉಳಿಯಬೇಕೆಂದರೆ ಮೂರು ಕ್ಷೇತ್ರ ಗೆಲ್ಲಬೇಕು’ ಎಂಬ ಸಾಲಿತ್ತು. ಹಂದಿ ನಗುತ್ತಿರುವಂತೆ ತೋರಿಸಲಾಗಿತ್ತು. ಅಳುತ್ತಿರುವ ರೀತಿಯಲ್ಲಿ ಗೋವನ್ನು ಚಿತ್ರಿಸಿ, ‘ಅವನು ತೊಲಗಬೇಕು ಅಂದ್ರೆ ನೂರಕ್ಕೆ ನೂರು ಮತ ನೀವು ಚಲಾಯಿಸಬೇಕು’ ಎಂಬ ಸಾಲು ಅದರ ಕೆಳಗೆ ಬರೆಯಲಾಗಿತ್ತು. ಈ ವ್ಯಂಗ್ಯಚಿತ್ರವನ್ನು 2024ರ ನವೆಂಬರ್ 6ರಂದು ಪೋಸ್ಟ್ ಮಾಡಲಾಗಿತ್ತು.
ನಿರಂತರ ಕೋಮುದ್ವೇಷ ಬಿತ್ತಲು ಪ್ರಯತ್ನಿಸಿರುವ ಅಣವೇಕರ್, ತಮ್ಮ ವ್ಯಂಗ್ಯಚಿತ್ರಗಳಲ್ಲಿ ಕೋಮು ಆಯಾಮಗಳಿವೆ ಎಂಬುದನ್ನು ನಿರಾಕರಿಸುತ್ತಾರೆ. “ಆರ್‌ಎಸ್‌ಎಸ್ ವಿಚಾರಧಾರೆ ನಂಬಿದವರು ಯಾರಿಗೂ ಹೆದರುವುದಿಲ್ಲ” ಎಂಬ ಮಾತನ್ನು ಸುಳ್ಳು ಮಾಡುವ ಅವರು, ಸೈದ್ದಾಂತಿಕ ಧೈರ್ಯವನ್ನು ತೋರಲು ಹಿಂಜರಿಯುತ್ತಾರೆ. ಕೋಮುದ್ವೇಷ ವಿರೋಧಿ ಕಾನೂನುಗಳಿಂದ ತಪ್ಪಿಸಿಕೊಳ್ಳಲು ಕಾನೂನಿನಲ್ಲಿ ಸಿಗುವ ಕಳ್ಳಗಿಂಡಿಗಳಲ್ಲಿ ಅಡಗಿ ಕೂರಲು ಯತ್ನಿಸುತ್ತಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಿರುವ ಕಾರ್ಟೂನ್‌ಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಲು ‘ಈದಿನ ಡಾಟ್ ಕಾಮ್’ ಇವರನ್ನು ಸಂಪರ್ಕಿಸಿದಾಗ ವೈರುಧ್ಯಗಳಿಂದ ಕೂಡಿದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಪ್ರಶ್ನೋತ್ತರ ಮಾದರಿಯಲ್ಲಿಯೇ ಆ ಮಾತುಗಳನ್ನು ನಿಮ್ಮ ಮುಂದೆ ಇಡುವುದು ಸೂಕ್ತವೆನಿಸುತ್ತದೆ.
ಈದಿನ: ಪ್ರಿಯಾಂಕ್ ಖರ್ಗೆಯವರನ್ನು ‘ಕರಿಯ’ ಎಂದು ನಿಂದಿಸಿದ್ದೀರಿ..
ಅಶೋಕ್: ನೀವು ಉಲ್ಲೇಖಿಸುತ್ತಿರುವ ಕಾರ್ಟೂನ್ ಹಳೆಯದ್ದು. ನಾನು ಯಾರ ಹೆಸರನ್ನೂ ಅದರಲ್ಲಿ ಬರೆದಿಲ್ಲ. ಈ ಚಿತ್ರದಲ್ಲಿರುವುದು ಪ್ರಿಯಾಂಕ್ ಖರ್ಗೆ ಎಂದು ನೀವು ಹೇಳಲು ಸಾಧ್ಯವಿಲ್ಲ. ಅದು ನಿಮ್ಮ ಅಭಿಪ್ರಾಯವಷ್ಟೇ. ಅವರಿಗೆ ಹೋಲಿಕೆ ಆಗಿರಬಹುದು. ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ.
ಈದಿನ: ಹೋಲಿಕೆ ಮಾಡುವುದಕ್ಕಾಗಿಯೇ ಅಲ್ಲವೇ ನೀವು ಬರೆಯುವುದು?
ಅಶೋಕ್: ಖಂಡಿತ ಇಲ್ಲ. ನಾನು ವಕೀಲ. ಕಾನೂನನ್ನು ಉಲ್ಲಂಘಿಸಬಾರದೆಂಬುದು ಗೊತ್ತಿದೆ.
ಈದಿನ: ವಕೀಲರಾಗಿರುವ ಕಾರಣದಿಂದಲೇ ಕಾನೂನಿನ ಕುಣಿಕೆಗೆ ಸಿಲುಕದೆ ನುಳುಚಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದೀರಿ. ಇರಲಿ. ಆರ್‌ಎಸ್‌ಎಸ್ ಸಂಘಟನೆಯನ್ನು ಪ್ರಿಯಾಂಕ್ ಖರ್ಗೆಯವರು ನಿರಂತರ ಪ್ರಶ್ನಿಸುತ್ತಿದ್ದಾರೆ. ಅವರನ್ನು ಉದ್ದೇಶಿಸಿ ನೀವು ‘ಕರಿಯ’ ಎಂದಿದ್ದೀರಿ ಎಂಬುದು ಸ್ಪಷ್ಟವಾಗುತ್ತಿದೆ.
ಅಶೋಕ್: ಉತ್ತರ ಕರ್ನಾಟಕದಲ್ಲಿ ಕರಿಯ ಎಂಬುದು ಬಹಳ ಮೌಲ್ಯ ಇರುವ ಹೆಸರು. ಕರಿಯ, ಕರಿಯಪ್ಪ, ಕರಿಯಣ್ಣ- ಹೀಗೆ ಬಳಸುವುದು ರೂಢಿಯಲ್ಲಿದೆ. ಕರಿಯಪ್ಪ ಎಂಬ ದೇವಾಲಯಗಳೂ ಇವೆ. ಕರಿಯ ಎಂದರೆ ತಪ್ಪೆಂದು ಭಾವಿಸಬೇಡಿ. ಕರಿಯ ಎಂಬುದು ಅಸಾಂವಿಧಾನಿಕ ಪದವಲ್ಲ.
ಈದಿನ: ‘ಕರಿಯ’ ಎಂಬುದು ಗೌರವ ಸೂಚಕ ಎನ್ನುತ್ತಿದ್ದೀರಿ. ಹಾಗಾದರೆ 2025ರ ಅಕ್ಟೋಬರ್‌ನಲ್ಲಿ ಪೋಸ್ಟ್ ಮಾಡುವಾಗ ‘ಕರಿಯ’ ಎಂದು ಬಳಕೆ ಮಾಡಿ, ಅದೇ ಪೋಸ್ಟ್‌ಅನ್ನು ಮರುಪ್ರಕಟಿಸುವಾಗ ‘ಕರಿಯ’ ಎಂಬುದನ್ನು ಅಳಿಸಿ ಹಾಕುತ್ತೀರಿ. ಅಂದರೆ ಗೃಹಸಚಿವರನ್ನು ‘ಗೌರವಸೂಚಕ’ವಾಗಿ ಕರೆದು ಬಚಾವಾಗುವುದು ಕಷ್ಟ ಎಂದೇ? ಯಾಕಿಷ್ಟು ಭಯ?
ಅಶೋಕ್: ಆ ಕಾರ್ಟೂನೇ ಬೇರೆ, ಈ ಕಾರ್ಟೂನೇ ಬೇರೆ.
ಈದಿನ: ಇದು ಸುಳ್ಳು. ಎರಡೂ ಕಾರ್ಟೂನ್ ಕೂಡ ಒಂದೇ. ಅದರಲ್ಲಿ ಬಳಸಿರುವ ವಾಕ್ಯ ಮಾತ್ರ ಎಡಿಟ್ ಮಾಡಿದ್ದೀರಿ. ಇನ್ನೊಂದು ಕಾರ್ಟೂನ್ ನಲ್ಲಿ ಸಿದ್ದರಾಮಯ್ಯನವರ ಎದೆಬಗೆದರೆ ಪಾಕಿಸ್ತಾನದ ಬಾವುಟ ಇರುವಂತೆ ಚಿತ್ರಿಸಿದ್ದೀರಿ. ಅಹಿಂದ ನಾಯಕನನ್ನು ಅವಹೇಳನ ಮಾಡಿದ್ದಿರಲ್ಲವೇ?
ಅಶೋಕ್: ಅದು ಸಿದ್ದರಾಮಯ್ಯನವರ ಚಿತ್ರವಲ್ಲ.
ಈದಿನ: ಅದೇ ಚಿತ್ರದಲ್ಲಿ ಸಿದ್ರಾಮುಲ್ಲಾ ಅಂತ ಬರೆದಿದ್ದೀರಿ.
ಅಶೋಕ್: ಸಿದ್ರಾಮುಲ್ಲಾ ಅಂತ ವಿರೋಧ ಪಕ್ಷದ ನಾಯಕರೆಲ್ಲರೂ ಮಾತನಾಡುತ್ತಾರಲ್ಲವೇ? ಟಿ.ವಿಯಲ್ಲೂ ಆ ಹೆಸರು ಬಳಕೆಯಾಗುತ್ತದೆ. ಆದ್ರೇ ನಾನು ಬರೆದದ್ದು ಸಿದ್ದರಾಮಯ್ಯನವರಿಗೆ ಸಂಬಂಧಿಸಿದ ಚಿತ್ರವಲ್ಲ.
ಈದಿನ: ನೀವು ಬರೆದ ವ್ಯಂಗ್ಯಚಿತ್ರವನ್ನು ಸಮರ್ಥಿಸಿಕೊಳ್ಳುವ ಸೈದ್ಧಾಂತಿಕ ಬದ್ಧತೆ ನಿಮಗೆ ಇಲ್ಲವೇ? ಆರ್‌ಎಸ್‌ಎಸ್ ನಲ್ಲಿ ಕಲಿತ ನಿಮಗೆ ಸೈದ್ಧಾಂತಿಕ ಬದ್ಧತೆ ಇಲ್ಲವೆ? ತಮ್ಮ ಚಿತ್ರಕ್ಕೆ ಜವಾಬ್ದಾರರಾಗಲು ಆರ್‌ಎಸ್‌ಎಸ್ ಸ್ವಯಂ ಸೇವಕರಾದ ನಿಮಗೆ ಯಾಕಿಷ್ಟು ಭಯ?
ಅಶೋಕ್: ಸಾಮಾಜಿಕ ವಿಡಂಬನೆಗಾಗಿ ಬರೆದ ಚಿತ್ರಗಳವು. ಬೇರೆಯವರಿಗೆ ಹೋಲಿಕೆಯಾದರೆ ನಾನೇನು ಮಾಡಲಿ?
ಈದಿನ: ಸಿದ್ದರಾಮಯ್ಯನವರ ಬಗ್ಗೆ ವ್ಯಂಗ್ಯಚಿತ್ರ ಬರೆಯುವಾಗ ಉದ್ದೇಶಪೂರ್ವಕವಾಗಿ ಹಂದಿ ಚಿತ್ರವನ್ನು ಪಕ್ಕದಲ್ಲಿ ಸೇರಿಸುತ್ತೀರಿ. ಏನು ನಿಮ್ಮ ಉದ್ದೇಶ?
ಅಶೋಕ್: ಹಂದಿ ಚಿತ್ರವನ್ನು ಅಷ್ಟು ಕೀಳಾಗಿ ನೋಡಬೇಡಿ. ಅದಕ್ಕೆ ಪಂಜುರ್ಲಿ ಅಂತಾರೆ. ಅದು ವಿಷ್ಣುವಿನ ಅವತಾರ.
ಈದಿನ: 2020ರ ಏಪ್ರಿಲ್ 24ರಲ್ಲಿ ಬರೆದಿರುವ ವ್ಯಂಗ್ಯಚಿತ್ರದಲ್ಲಿ, ‘ಕೋವಿಡ್‌ಗೆ ಕಾರಣವಾಗಿರುವ ಹಂದಿಗಳನ್ನು ಹೊಡೆದು ಸಾಯಿಸಬೇಕು’ ಎಂದು ಬಿಂಬಿಸುತ್ತೀರಿ. ಪಂಜುರ್ಲಿ ಅಥವಾ ವಿಷ್ಣು ದೇವರನ್ನು ಹೊಡೆಯಬೇಕು ಅಂತ ನಿಮ್ಮ ಮಾತಿನ ಅರ್ಥವೇ?
ಅಶೋಕ್: ಅದು ಕೊರೊನಾ ಸನ್ನಿವೇಶದ ವ್ಯಂಗ್ಯಚಿತ್ರವಷ್ಟೇ. ಹಂದಿಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ಧಾರ್ಮಿಕ ಕಲ್ಪನೆ ಇಟ್ಟುಕೊಂಡು ನೋಡಬೇಡಿ. ಭಯೋತ್ಪಾದಕರ ಬಗ್ಗೆ ಬರೆದಿದ್ದೇನೆ. ಯಾವ ಮುಸ್ಲಿಮರೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಈವರೆಗೆ ನನ್ನ ವಿರುದ್ಧ ಪ್ರಕರಣ ದಾಖಲಿಸಿಲ್ಲ.
ಈದಿನ: ಯಾರೂ ಪ್ರಶ್ನಿಸಿಲ್ಲದೆ, ಪ್ರಕರಣ ದಾಖಲಿಸಿಲ್ಲದೆ ಇರಬಹುದು. ಜವಾಬ್ದಾರಿಯುತ ಮಾಧ್ಯಮವಾಗಿ ನಾವು ಪ್ರಶ್ನಿಸದೆ ಇರುವುದಿಲ್ಲ. ನೀವು ವಕೀಲರು. ಕಾನೂನಿನ ಅನ್ವಯ ತಪ್ಪಿಸಿಕೊಳ್ಳಲು ಇರುವ ದಾರಿಗಳನ್ನು ಹುಡುಕುತ್ತಿದ್ದೀರಿ. ನೀವು ಆರ್‌ಎಸ್‌ಎಸ್ ಕಾರ್ಯಕರ್ತರಿದ್ದೀರಿ. ಆರ್‌ಎಸ್‌ಎಸ್‌ನಲ್ಲಿ ಬೆಳೆದಿರುವ ನಿಮಗೆ, ಸೈದ್ಧಾಂತಿಕವಾಗಿ ಸಮರ್ಥಿಸುವ ಧೈರ್ಯವಿಲ್ಲವೆ? ಒಂದು ಪೋಸ್ಟ್ ಹಾಕಿ, ಅದಕ್ಕೆ ಉತ್ತರದಾಯಿತ್ವ ತೋರುವುದಕ್ಕೆ ಯಾಕಿಷ್ಟು ಹೆದರಿಕೆ?
ಅಶೋಕ್: ಮನರಂಜನೆಗಾಗಿ ಬರೆದ ವ್ಯಂಗ್ಯಚಿತ್ರಗಳಷ್ಟೇ. ಅಶಾಂತಿ ಮೂಡಿಸುವ ಉದ್ದೇಶವಿಲ್ಲ.
ಹೀಗೆ ಸಾಗುತ್ತದೆ ಅಶೋಕ್ ಅವರ ಪ್ರತಿಕ್ರಿಯೆ. ತಮ್ಮ ಕೋಮು ಅಜೆಂಡಾಗಳನ್ನು ಒಪ್ಪಿಕೊಳ್ಳದೆ, ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಮಾತುಗಳನ್ನಷ್ಟೇ ಅವರು ಹೇಳುತ್ತಾರೆ. ದ್ವೇಷ ಬಿತ್ತನೆ ಮಾಡುವ ವ್ಯಕ್ತಿಗಳು ತಪ್ಪಿಸಿಕೊಳ್ಳಲು ಹೇಗೆ ಯತ್ನಿಸುತ್ತಾರೆ ಎಂಬುದಕ್ಕೆ ಅಶೋಕ್ ಅವರ ಪ್ರತಿಕ್ರಿಯೆ ದೃಷ್ಟಾಂತವಾಗಿ ಕಾಣುತ್ತದೆ.




