ದುರ್ಗಾ ಮಾತಾ ದೌಡ ದೇವಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ವಾಹನಕ್ಕೆ ಹಿಂಬದಿಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಹಾಗೂ ಹತ್ತರಗಿ ಟೋಲ್‌ಗೇಟ್ ಸಮೀಪ ರವಿವಾರ ಬೆಳಗ್ಗೆ ಸಂಭವಿಸಿದೆ.
ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಹುಂಚ್ಯಾನಟ್ಟಿ ಗ್ರಾಮದಿಂದ ಬೆಳಗಾವಿಗೆ ಬಂದು ಮರಳುತ್ತಿದ್ದ ದೇವಿ ಮೆರವಣಿಗೆಯಲ್ಲಿದ್ದವರ ಮೇಲೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ದುರಂತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಪ್ರಕಾಶ, ಮಹೇಶ್ ಹಾಗೂ ದಾನೇಶ್ವರಿ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಗಾಯಗೊಂಡವರ ಸಂಪೂರ್ಣ ವಿವರ ಇನ್ನೂ ಲಭ್ಯವಾಗಿಲ್ಲ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.



