ಫ್ರಾನ್ಸ್ ನ ಮೂರನೇ ವಿಸ್ತಾರವಾದ ಸಿನಿಮಾ ನಿರ್ಮಾಣದ ಸಮೂಹದ ನೇತೃತ್ವದ (UGC France ́s third largest cinema chain) ಬಲಪಂಥೀಯ ಬಿಲಿಯಾಧಿಪತಿ ವಿನ್ಸೆಂಟ್ ಬೊಲೋರೆ (Vincent Bollore) ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿರುವುದರ ವಿರುದ್ಧ ಸುಮಾರು ಆರು ನೂರಕ್ಕೂ ಹೆಚ್ಚು ಸಿನಿಮಾರಂಗದ ಪ್ರಮುಖರು ಪ್ರತಿಭಟಿಸಿದ್ದಾರೆ.
ಜಗತ್ತಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಒಂದಾದ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ತೆರೆ ಮೇಲೆದ್ದಿದೆ. ಹನ್ನೊಂದು ದಿನಗಳ ದೃಶ್ಯೋತ್ಸವ ಜಗತ್ತಿನ ಚಲನಚಿತ್ರ ಮಾಧ್ಯಮದ ಎಲ್ಲರ ಗಮನ ಸೆಳೆಯುತ್ತಿದೆ. ಒಂದರ್ಥದಲ್ಲಿ ಇದು ಒಂದು ಸಾಂಸ್ಕೃತಿಕ ಹಬ್ಬವೆಂದೇ ಪರಿಗಣಿಸಬಹುದು. ಇದು ಕಾನ್ ನ ಎಪ್ಪತೊಂಭತ್ತನೇ ಚಿತ್ರೋತ್ಸವ. ಈ ತಿಂಗಳ 23ರವರೆಗೆ ನಡೆಯಲಿದೆ. ಜಗತ್ತಿನ ಎಲ್ಲ ರಾಷ್ಟ್ರಗಳ ಚಿತ್ರೋದ್ಯಮದ ಗಣ್ಯರು, ಈಗಾಗಲೇ ಫ್ರೆಂಚ್ ರಿವೇರಾದ ಕಾನ್ಸ್ ನಲ್ಲಿ ಬಂದು ಸೇರಿದ್ದಾರೆ. ಸದ್ಯಕ್ಕೆ ಜಗತ್ತನ್ನು ಕಾಡುತ್ತಿರುವ ಎಡ-ಬಲಪಂಥೀಯ ಸಮರ ಕಾನ್ ನಲ್ಲಿಯೂ ಕಾಣಿಸಿಕೊಂಡಿದೆ. ಸುಮಾರು ಎಂಭತ್ತೆಂಟು ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಪ್ರಜಾಸತ್ತಾತ್ಮಕ ಚಿತ್ರ ನಿರ್ಮಾಣದ ರಾಷ್ಟ್ರಗಳು ಮಲೆತು ನಿಂತು, ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದ್ದು ಇಂದು ಇತಿಹಾಸ.
ಆ ವರ್ಷದ ತೀರ್ಪುಗಾರರ ಮುಖ್ಯಸ್ಥರಾಗಿದ್ದವರು ಫಿಲಿಪ್ ಎರ್ಲಾಂಗರ್. ತೀರ್ಪುಗಾರರು ಸರ್ವಾನುಮತದಿಂದ ಅಮೆರಿಕನ್ ಚಿತ್ರವೊಂದನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು. ಆದರೆ, ಆಗ ಹಿಟ್ಲರ್ ನ ಒತ್ತಾಯಕ್ಕೆ ಮಣಿದು, ಲೆನಿ ರಿಫೆನ್ಸ್ಥಾಲ್ ಅವರ propaganda ಚಿತ್ರವಾದ ಒಲಂಪಿಯಾ ಮತ್ತು, ಇಟಲಿಯ Luciano Serŗa Pilot ಚಿತ್ರಗಳು ಪ್ರಶಸ್ತಿಗಳನ್ನು “ಗೆದ್ದುಕೊಂಡವು” ಎನ್ನಬಹುದು. ಇದರಿಂದಾಗಿ ಪ್ರಜಾಪ್ರಭುತ್ವ ದೇಶಗಳಾದ ಫ್ರಾನ್ಸ್, ಅಮೆರಿಕ ಹಾಗಿ ಬ್ರಿಟನ್ ಮೋಸ್ತ್ರಾದಿಂದ ಹೊರಬಂದವು. ಚಿತ್ರೋತ್ಸವದ ಕೊನೆಯ ದಿನದಂದು ರೈಲಿನಲ್ಲಿ ಪ್ರಾನ್ಸ್ ಗೆ ಹಿಂದಿರುಗುತ್ತಿದ್ದ Phillippe Erlanger ಮೋಸ್ತ್ರಾದಿಂದ ದೂರಬಂದು ರಾಜಕೀಯ ಒತ್ತಡಗಳಿಂದ ಹೊರತಾದ, ಯಾವುದೇ ಪ್ರಭಾವಕ್ಕೆ ಬಗ್ಗದ, ದೃಶ್ಯ ಸಂಸ್ಕೃತಿಗೆ ಧಕ್ಕೆ ಬಾರದ ರೀತಿಯಲ್ಲಿ ಚಿತ್ರೋತ್ಸವವೊಂದನ್ನು ಸಂಘಟಿಸುವ ತೀರ್ಮಾನ ತೆಗೆದುಕೊಂಡರು. ಆಗ ಹೆಚ್ಚಿನ ಮಂದಿ ಆಸಕ್ತಿ ತೋರಲಿಲ್ಲವಾದರೂ, ಫ್ರೆಂಚ್ ಚಿತ್ರೋತ್ಸವ ಈ ಹೊಣೆಯನ್ನು ಹೊರಲು ಮುಂದಾಯಿತು. ಆಗ ನಡೆದದ್ದೇ ಈ ಕಾನ್ ಚಿತ್ರೋತ್ಸವ. ಮೊದಲ ಚಿತ್ರೋತ್ಸವ ನಡೆದದ್ದು Municipal Casinoವೊಂದರ ಹಾಲ್ ನಲ್ಲಿ. ಆಗ ಅದರ ನೇತೃತ್ವವಹಿಸಿದವರು ಸಿನಿಮಾಟೋಗ್ರಫಿಯ ಪಿತಾಮಹ ಲೂಯಿಸ್ ಲ್ಯೂಮಿಯೇರೆ. ಈ ಉತ್ಸವ Georges Huisman ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ತೆರೆದ ಪತ್ರದ ಪ್ರತಿಭಟನೆ
ಅಂಥದ್ದೇ ಮತ್ತೊಂದು ಬೆಳವಣಿಗೆ ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಕಂಡು ಬಂದಿದೆ. ಫ್ರಾನ್ಸ್ ನ ಮೂರನೇ ವಿಸ್ತಾರವಾದ ಸಿನಿಮಾ ನಿರ್ಮಾಣದ ಸಮೂಹದ ನೇತೃತ್ವದ (UGC France ́s third largest cinema chain) ಬಲಪಂಥೀಯ ಬಿಲಿಯಾಧಿಪತಿ ವಿನ್ಸೆಂಟ್ ಬೊಲೋರೆ (Vincent Bollore) ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿರುವುದರ ವಿರುದ್ಧ ಸುಮಾರು ಆರು ನೂರಕ್ಕೂ ಹೆಚ್ಚು ಸಿನಿಮಾರಂಗದ ಪ್ರಮುಖರು ಪ್ರತಿಭಟಿಸಿದ್ದಾರೆ. ಈ ಪೈಕಿ ಪ್ರಮುಖರೆಂದರೆ, Julitte Binoche, Adele Hannel, Swan Arlaud ಹಾಗೂ Damein Bonnard ಪ್ರಮುಖರು. ಇವರೆಲ್ಲರೂ ಸೇರಿ, ಕಾನ್ ಚಿತ್ರೋತ್ಸವದ ಸಂಘಟನಾ ಸಮಿತಿಗೆ ಬಹಿರಂಗ ಪತ್ರವೊಂದನ್ನು ಬರೆದು ಸಹಿ ಮಾಡಿ ಪ್ರತಿಭಟಿಸಿದ್ದಾರೆ.
ಈ ಪತ್ರವನ್ನು ಎಡಪಂಥೀಯ ಒಲವಿನ ಫ್ರೆಂಚ್ ದೈನಿಕ ʻಲಿಬರೇಷನ್ʼ ಪ್ರಮುಖವಾಗಿ ಪ್ರಕಟಿಸಿದೆ. ಫ್ರಾನ್ಸ್ ನ ಮೂರನೇ ವಿಸ್ತಾರವಾದ ಸಿನಿಮಾ ನಿರ್ಮಾಣದ ಸಮೂಹದ ನೇತೃತ್ವದ (UGC France ́s third largest cinema chain) ಬಲಪಂಥೀಯ ಬಿಲಿಯಾಧಿಪತಿ ವಿನ್ಸೆಂಟ್ ಬೊಲೋರೆ (Vincent Bollore) ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿರುವುದರ ಪರಿಣಾಮದ ಬಗ್ಗೆ ವಿಸ್ತೃತವಾಗಿ ವರದಿ ಮಾಡಿದೆ. ಸಾಮೂಹಿಕ, ಪ್ರಜಾಸತ್ತಾತ್ಮಕ, ಧರ್ಮಾತೀತ ಮೌಲ್ಯಗಳನ್ನು ಬಿಂಬಿಸುವ ಸಂಸ್ಕೃತಿಗೆ ಈ ಬೆಳವಣಿಗೆ ಧಕ್ಕೆಯಾಗುವುದಲ್ಲದೆ, ಫ್ಯಾಸಿಸ್ಟ್ ಮೌಲ್ಯಗಳನ್ನು ಮತ್ತು ಬಲಗೊಳಿಸಲು ಸಹಾಯಕವಾಗುತ್ತದೆ ಎಂದು ಎಚ್ಚರಿಸಿದೆ.
ದೃಶ್ಯ ಮಾಧ್ಯಮದ ಮೇಲಿನ ಹಿಡಿತ
ತಮ್ಮ ಮಾಧ್ಯಮ ಸಂಸ್ಥೆ Canal + France ́s Largest Pay T V Company ಮತ್ತು ಅದರ ಅಧೀನ ಸಂಸ್ಥೆಯಾದ Studio Canal ಎಂಬ ಯೂರೋಪಿನ ಪ್ರಮುಖ ಚಿತ್ರ ನಿರ್ಮಾಣ ಸಂಸ್ಥೆ Vincent Bolore ಈಗಾಗಲೇ ಚಿತ್ರ ನಿರ್ಮಾಣ, ಹಂಚಿಕೆ ಮತ್ತು ಪ್ರದರ್ಶನದ ಮೇಲೆ ತಮ್ಮ ಹಿಡಿತವನ್ನು ಗಟ್ಟಿಗೊಳಿಸಿದ್ದಾರೆ. ಕೆನಾಲ್ + ಮತ್ತು ಬೊಲಾರ್ಡ್ ಯುಜಿಸಿ ಸಿನಿಮಾದ ಮೇಲೆ ಶೇ 34ರಷ್ಟು ಹಿಡಿತ ಹೊಂದಿದ್ದರೂ, ಇವರು, 2028ರ ವೇಳೆಗೆ ಇಡೀ ಯುಜಿಸಿ ಸಿನಿಮಾದ ಮೇಲೆ ಸಂಪೂರ್ಣ ಹಿಡಿತ ಹೊಂದುವುದಾಗಿ ಪ್ರಕಟಿಸಿದ್ದು, ಇಡೀ ಫ್ರಾನ್ಸ್ ಅನ್ನು ಬೆಚ್ಚಿಬೀಳಿಸಿದೆ. ಈ ಬೊಲಾರ್ಡ್ಸ್ ಸಾಮ್ರಾಜ್ಯದ ಸಿ-ನ್ಯೂಸ್ ಫ್ರಾನ್ಸ್‌ನ ಬಹು ವೀಕ್ಷಿತ ಸುದ್ದಿ ಮಾಧ್ಯಮವಾಗಿದ್ದು ಫ್ರಾನ್ಸ್‌ನ ಬಲಪಂಥೀಯ ಅಭಿಪ್ರಾಯಗಳಿಗೆ ಬಹುತೇಕ ಪ್ರಚಾರ ನೀಡುತ್ತಿದೆ ಎಂಬುದು ಎಡಪಂಥೀಯ ಪಕ್ಷಗಳ, ಬುದ್ಧಿಜೀವಿಗಳ ಆರೋಪ.
ಸಮರ್ಥನೆ
ಬೋಲೋರೆ ವಿರುದ್ಧದ ಪ್ರತಿಭಟನೆ ಆರಂಭವಾದದ್ದು ಏಪ್ರಿಲ್ ತಿಂಗಳಲ್ಲಿ. ಮೊದಲಿಗೆ ಸುಮಾರು ನೂರು ಬರಹಗಾರರು ಮತ್ತು ಚಿಂತಕರು ಫ್ರೆಂಚ್ ಪ್ರಖ್ಯಾತ ಪ್ರಕಟಣಾ ಸಂಸ್ಥೆ ಗ್ರಾಸೆಟ್ (Grasset) ವಿರುದ್ಧ ಪ್ರತಿಭಟಿಸಿ, ಆ ಸಂಸ್ಥೆಯಿಂದ ಹೊರಬಂದರು. ಬೊಲೋರೆ ತೀವ್ರವಾದಿ ಬಲಪಂಥೀಯ ನಿಲುವುಗಳನ್ನು ಬೆಂಬಲಿಸುತ್ತಿರುವುದಾಗಿ ಅವರು ಆರೋಪಿಸಿದರಲ್ಲದೆ, ತಮ್ಮ ನಿಲುವನ್ನು ರಾಜಿನಾಮೆಯ ಮೂಲಕ ವ್ಯಕ್ತಪಡಿಸಿದರು. 2022ರ ಫ್ರಾನ್ಸ್ ನ ಸೆನೆಟ್ ನ ಸಭೆಯಲ್ಲಿ ಬೊಲೋರೆ ಲೇಖಕರ ಆರೋಪವನ್ನು ನಿರಾಕರಿಸಿದರಲ್ಲದೆ, ತಮ್ಮ ಮಾಧ್ಯಮ ಸಂಸ್ಥೆ ಯಾವುದೇ ರೀತಿಯಲ್ಲಿಯೂ ಯಾವುದೇ ಪಂಥದ ರಾಜಕೀಯ ಮತ್ತು ಸೈದ್ಧಾಂತಿಕ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲದೆ, ಚಿತ್ರರಂಗ ಮತ್ತು ಕಿರುಪರದೆ ಮನರಂಜನೆಯ ವ್ಯವಹಾರ ಆರ್ಥಿಕ ಕಾರಣಗಳಿಗಾಗಿ ಹೊಸ ರೂಪ ಪಡೆದುಕೊಳ್ಳುತ್ತಿದೆ. ಜೊತೆಯಲ್ಲಿ ಫ್ರಾನ್ಸ್ ನ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವುದು ತಮ್ಮ ಉದ್ದೇಶ ಎಂದು ಸಮರ್ಥಿಸಿಕೊಂಡಿದ್ದಾರೆ.
ʼಭ್ರಮೆ ಇಲ್ಲʼ
ತಾವು ಬರೆದಿರುವ ಪತ್ರದಲ್ಲಿ ಫ್ರಾನ್ಸ್‌ನ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು, ಪ್ರದರ್ಶಕರು, ತಂತ್ರಜ್ಞರು ಸೇರಿದಂತೆ, ವೃತ್ತಿಪರರು ಈ ಹೊಸ ಬೆಳವಣಿಗೆಯ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇವರೆಲ್ಲರೂ, ತಮ್ಮ Projects ಗಳಿಗಾಗಿ ಬೊಲೊರೆ ಅವರ ಬೆಂಬಲವನ್ನು ಅವಲಂಬಿಸಿದ್ದಾರೆ. ಈ ಹೊಸ ಬೆಳವಣಿಗೆಯಿಂದ ಅವರ ವಾಕ್ ಸ್ವಾತಂತ್ರ್ಯಕ್ಕೆ, ದೃಶ್ಯ ಮಾಧ್ಯಮದ ಅಲಿಪ್ತ ನಿಲುವಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. “ಈಗ ನಮ್ಮ ಮೌನವನ್ನು ಮುರಿಯಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಬೊಲೊರೆ ಅವರ ಈ ತೀವ್ರ ಬಲಪಂಥೀಯ ವಿಷಯ ಸೂಚಿ ತೆರೆಮರೆಯಲ್ಲಿ ಜಾರಿಯಾಗುತ್ತಿದ್ದು, ಈಗ ಅದು ಬಹಿರಂಗವಾಗಿ ನಡೆಯುತ್ತಿರುವುದರಿಂದ ಇದನ್ನು ಪ್ರತಿಭಟಿಸದೆ ಬೇರೆ ದಾರಿ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೆ ಅಲ್ಲ. “ಇದು ಇಲ್ಲಿಗೇ ನಿಲ್ಲುತ್ತದೆ ಎಂಬ ಭ್ರಮೆಯೂ ನಮಗಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹೊಸ ಬೆಳವಣಿಗೆಯಿಂದ ಬೊಲೊರೆ ಅವರಿಗೆ ಅಪರಮಿತ ಬಲ ದಕ್ಕುವುದೇ ಅಲ್ಲದೆ, ಇಡೀ ಮಾಧ್ಯಮವನ್ನು ತಮ್ಮ ಇಚ್ಛೆಯಂತೆ ಬಳಸಿಕೊಳ್ಳಲು ಸಹಾಯಕವಾಗುತ್ತದೆ. ಆಗ ಇವೆಲ್ಲ ನಮಗೆ ಗೊತ್ತಿರಲಿಲ್ಲ ಎಂದು ನಾವು ನಮ್ಮನ್ನು ಸಮರ್ಥಿಸಿಕೊಳ್ಳುವುದು ಅನೈತಿಕವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಫ್ರಾನ್ಸ್ ನ ಬಲಪಂಥೀಯ ಪಕ್ಷಗಳು ಇತ್ತೀಚೆಗೆ ನಡೆಸಿದ ಪ್ರದರ್ಶನದಲ್ಲಿ ಫ್ರಾನ್ಸ್‌ನ ಚಿತ್ರರಂಗದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶ ಮಾಡುವ ಪ್ರಯತ್ನದ ಸೂಚನೆ ನೀಡಿದೆ ಎಂದು ಅವರುಗಳು ಹೇಳಿದ್ದಾರೆ. ಇದು ನಿಜ ಕೂಡ, ಇತ್ತೀಚೆಗೆ ಬಲಪಂಥೀಯ ರಾಜಕಾರಣದ ರೂವಾರಿಗಳು, ಫ್ರಾನ್ಸ್ ಚಿತ್ರೋದ್ಯಮದ ರಾಷ್ಟ್ರೀಯ ಚಲನಚಿತ್ರ ಮಂಡಳಿ, ಸಿಎನ್‌ಸಿ ಹಾಗೂ ಫ್ರಾನ್ಸ್‌ನ ಸಾರ್ವಜನಿಕ ಪ್ರಸಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಪ್ರಯತ್ನ ನಡೆದಿದೆ.
ನಮಗೆ ಈ ಧ್ವನಿ ಕೇಳಿಸುತ್ತಿದೆಯೇ?
ಫ್ರಾನ್ಸ್‌ನ ಸಾಂಸ್ಕೃತಿಕ ರಂಗದ ಬರಹಗಾರರ, ಚಿಂತಕರ, ಪ್ರಗತಿಪರರ ಕೊನೆಯ ಮಾತು ಭಾರತದ ಮಟ್ಟಿಗಂತೂ ಎಚ್ಚರಿಕೆಯ ಘಂಟೆಯಂತಿದೆ. “ಈ ರೀತಿಯ ಬಲಪಂಥೀಯ, ವಿಚಾರಹೀನತೆಯ, ಸಂವೇದನಾರಹಿತವಾದ, ಮಾನವ ಹಿತಾಸಕ್ತಿಗಳಿಗೆ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾದ ಬಂಡವಾಳಶಾಹಿ ವ್ಯವಸ್ಥೆಯ ಹಿಡಿತಕ್ಕೆ ನಮ್ಮ ಸಂಸ್ಕೃತಿಯನ್ನು ಬಲಿಕೊಟ್ಟ ಪಾಪಪ್ರಜ್ಞೆಯಿಂದ ನಾವು ನರಳಬೇಕೇ? ಬದುಕಿನ ಅವಶ್ಯಕತೆಯ ಕಾರಣಕ್ಕಾಗಿ ನಾವು propaganda ಸಂಸ್ಕೃತಿಯನ್ನು ಬೆಂಬಲಿಸಬೇಕೇ?” ಇವು ಭಾರತದ ಮಾನವ ಮೌಲ್ಯಗಳ ಪರವಾದ ಮನಸ್ಸುಗಳಿಗೆ ಕೇಳಿಸುತ್ತಿದೆಯೇ? ಎಂಬ ಪ್ರಶ್ನೆ ಕಾಡುತ್ತದೆ.
ಭಾರತಕ್ಕೂ ಇದು ಪ್ರಸ್ತುತ
ಭಾರತದಲ್ಲಿ ಹಿಂದುತ್ವ ಪ್ರತಿಪಾದಿಸುವ ಸರ್ಕಾರ, ಎನ್ ಎಫ್ ಡಿ ಸಿ, ನ್ಯಾಷನಲ್ ಫಿಲಂ ಅರ್ಖೈವ್ಸ್ ಆಫ್ ಇಂಡಿಯಾ, ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ದೇಶನಾಲಯ ಹಾಗೂ ಮಕ್ಕಳ ಚಿತ್ರ ಸಂಸ್ಥೆಯನ್ನು ಒಂದು ಛಾತ್ರದಡಿ ತಂದು ಅವುಗಳ ಸ್ವಾಯತ್ತತೆಯನ್ನು ಕಸಿದುಕೊಂಡಾಗ, ಬಹಳ ಮಂದಿಯ ಮೌನ ಇದಕ್ಕೆ ನಿದರ್ಶನದಂತಿದೆ. ಆಗಲೂ ಚಿತ್ರರಂಗವನ್ನು ಬಲ ಪಂಥ ಮತ್ತು ಎಡ ಪಂಥ ಎಂದು ಒಡೆಯುವಲ್ಲಿ ಪ್ರಸಕ್ತ ರಾಜಕೀಯ ವ್ಯವಸ್ಥೆ ಯಶಸ್ವಿಯಾಯಿತು. ಚಿತ್ರೋತ್ಸವದಲ್ಲಿ ಬಲಪಂಥೀಯ ಚಿತ್ರಗಳಿಗೆ ಪ್ರಶಸ್ತಿಗಳ ಸುರಿಮಳೆಯಾಯಿತು. ವ್ಯವಸ್ಥೆಯ ಹುಳುಕುಗಳನ್ನು ಬಿಚ್ಚಿಡುವ ಚಿತ್ರಗಳ ಪ್ರದರ್ಶನವನ್ನು ಚಿತ್ರೋತ್ಸವಗಳಿಂದ ಹೊರಗಿಡಲಾಯಿತು. ಸೆನ್ಸಾರ್ ನಿಯಮವನ್ನು ಕಠಿಣಗೊಳಿಸಿ, ಅದರ ನಿಯಮಗಳು, ಕೇವಲ ಎಡಪಂಥೀಯವೆಂದು ಸರ್ಕಾರ ಗುರುತಿಸುವ ಚಿತ್ರಗಳನ್ನು ಕತ್ತರಿಸಿ ಛಿದ್ರ ಛಿದ್ರ ಮಾಡಿತು. ಆದರೆ ಆಗೆಲ್ಲ ಮಾತನಾಡಿದವರು, ಪ್ರತಿಭಟಿಸಿದವರೆಷ್ಟು ಮಂದಿ ಎಂದು ಪ್ರಶ್ನಿಸುವುದು ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗುತ್ತದೆ. ಕಾನ್ ನ ಈ ಪ್ರತಿಭಟನೆ ಮುಂದೆ ಬರಲಿರುವ ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಯಾವುದಾದರೂ ರೀತಿಯಲ್ಲಿ ಪ್ರತಿಧ್ವನಿಸುತ್ತದೆಯೆ? ಕಾದು ನೋಡಬೇಕಿದೆ.

ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.



