NEET ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ರಾಜಸ್ಥಾನದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ಮಾಫಿಯಾಗಳಿಗೆ ಬಿಜೆಪಿ ಸರ್ಕಾರ ಬಹಿರಂಗವಾಗಿ ರಕ್ಷಣೆ ನೀಡುತ್ತಿದೆ ಎಂದು ದೂರಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜೆಎಂಎಸ್, “ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ವ್ಯಾಪ್ತಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆಗಳು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯಾವುದೇ ಸಂವೇದನೆ ಇಲ್ಲದ ಭ್ರಷ್ಟ ಹಾಗೂ ಸ್ವಾರ್ಥಹಿತ್ತ ಶಕ್ತಿಗಳ ಕುಮ್ಮಕ್ಕನ್ನು ಪ್ರತಿಬಿಂಬಿಸುತ್ತದೆ. ಈ ವಿಶ್ವಾಸ ದ್ರೋಹವು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಕನಸುಗಳನ್ನು ಭಗ್ನಗೊಳಿಸಿದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಯಾವುದೇ ಪುರಾವೆಯಿಲ್ಲ: ಧರ್ಮೇಂದ್ರ ಪ್ರಧಾನ್
“ಈಗಾಗಲೇ ಆರ್ಥಿಕ ಹಾಗೂ ಮಾನಸಿಕ ಒತ್ತಡ ಎದುರಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಲ್ಲಿ ಭಾರೀ ಆತಂಕ, ಗೊಂದಲ ಮತ್ತು ಮಾನಸಿಕ ಆಘಾತವನ್ನು ಉಂಟುಮಾಡಿದೆ. ಇಂತಹ ನಿರಂತರ ಪ್ರಶ್ನೆ ಪತ್ರಿಕೆ ಸೋರಿಕೆಗಳು ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕುಂದಿಸುತ್ತಿದ್ದು, ಅನೇಕ ಯುವ ಮನಸ್ಸುಗಳ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿವೆ” ಎಂದು ಹೇಳಿದೆ.
“ಇದು ದೇಶದ ಯುವಜನರಿಗೆ ಮಾಡಿರುವ ಗಂಭೀರ ಅನ್ಯಾಯಕ್ಕೆ ಸಮಾನವಾದ ಕೃತ್ಯವಾಗಿದೆ. ಮೋದಿ ಸರ್ಕಾರದ ಕೇಂದ್ರೀಕರಣದ ನೀತಿ ದೇಶದ ವಿವಿಧ ಭಾಗಗಳಲ್ಲಿ ಪರೀಕ್ಷಾ ಮಾಫಿಯಾಗಳ ಬೆಳವಣಿಗೆಗೆ ಕಾರಣವಾಗಿರುವುದರಿಂದ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಲು ಪರೀಕ್ಷೆಗಳನ್ನು ವಿಕೇಂದ್ರೀಕೃತ ರೀತಿಯಲ್ಲಿ ನಡೆಸಬೇಕು” ಎಂದು ಆಗ್ರಹಿಸಿದೆ.
“ಈವರೆಗೆ ಸಿಬಿಐ ಬಂಧಿಸಿರುವ ಐದು ವ್ಯಕ್ತಿಗಳಲ್ಲಿ ರಾಜಸ್ಥಾನದ ಸಿಕಾರ್ ಜಿಲ್ಲೆಯ ಬಿಜೆಪಿ ಯುವ ಘಟಕದ ಸ್ಥಳೀಯ ನಾಯಕ ದಿನೇಶ್ ಬಿವಾಲ್ ಹಾಗೂ ಅವರ ಸಹೋದರ ಮಂಗೀಲಾಲ್ ಬಿವಾಲ್ ಸೇರಿದ್ದಾರೆ ಎಂಬುದು ಗಮನಾರ್ಹ. ಮೇ 3 ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಪರೀಕ್ಷೆಗೆ ಮುನ್ನವೇ ವಿವಿಧ ರಾಜ್ಯಗಳಲ್ಲಿ ಹರಡಿದ ಜಾಲದಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು ಎಂಬ ಶಂಕೆ ಇದೆ. ಅತ್ಯಂತ ಆಘಾತಕಾರಿ ಸಂಗತಿಯೇನೆಂದರೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದು, ಆರಂಭದಲ್ಲೇ FIR ದಾಖಲಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದೆ. ಇದು ಆರೋಪಿಗಳಿಗೆ ರಕ್ಷಣೆ ಒದಗಿಸಿದ ಸ್ಪಷ್ಟ ಉದಾಹರಣೆಯಾಗಿದೆ. ಪರೀಕ್ಷಾ ಸೋರಿಕೆ ಮಾಫಿಯಾಗಳಿಗೆ ಬಿಜೆಪಿ ಸರ್ಕಾರ ನೀಡುತ್ತಿರುವ ಇಂತಹ ಬಹಿರಂಗ ರಕ್ಷಣೆಯನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ನೀಟ್ ಪರೀಕ್ಷೆ ರದ್ದು : ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸಚಿವರ ವಾಗ್ದಾಳಿ
“ಇದು ಆಡಳಿತದಡಿಯಲ್ಲಿ ಸಂಘಟಿತ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುವಂತಾಗಿದೆ. ನಿರಂತರವಾಗಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆಗಳು ಮತ್ತು ಅಕ್ರಮಗಳು NTA ಯಲ್ಲಿನ ಆಳವಾದ ವ್ಯವಸ್ಥಿತ ದೋಷಗಳನ್ನು ಸೂಚಿಸುತ್ತದೆ” ಎಂದು ಜನವಾದಿ ಮಹಿಳಾ ಸಂಘಟನೆ ಅಭಿಪ್ರಾಯಿಸಿದೆ.
“ಆದ್ದರಿಂದ NTA ಯನ್ನು ತಕ್ಷಣವೇ ರದ್ದುಪಡಿಸಬೇಕು. ಹಿಂದೆ ಇದ್ದಂತೆ, ಪ್ರವೇಶ ಪರೀಕ್ಷೆಗಳ ಜವಾಬ್ದಾರಿಯನ್ನು ಸಂಬಂಧಿತ ಸರ್ಕಾರಿ ಸಂಸ್ಥೆಗಳಿಗೆ ಮರುಹಸ್ತಾಂತರಿಸಿ, ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಪುನಃ ಸ್ಥಾಪಿಸಬೇಕು. ಯುವಜನತೆ ದೇಶದ ಭವಿಷ್ಯವಾಗಿದ್ದು, ಯಾವುದೇ ಸರ್ಕಾರ ಅಥವಾ ಸಂಸ್ಥೆಗೆ ಅವರ ಭವಿಷ್ಯದೊಂದಿಗೆ ಆಟವಾಡುವ ಹಕ್ಕಿಲ್ಲ. ಅವರ ಕನಸುಗಳು ಮತ್ತು ಆಶಯಗಳನ್ನು ರಕ್ಷಿಸುವಲ್ಲಿ NTA ವಿಫಲವಾಗಿರುವುದರಿಂದ ಇದನ್ನು ವಿಸರ್ಜಿಸಬೇಕು ವ ವಿಶ್ವಾಸಾರ್ಹ ಸರ್ಕಾರಿ ಸಂಸ್ಥೆಯೊಂದಕ್ಕೆ ಪ್ರವೇಶ ಪರೀಕ್ಷೆಗಳ ಜವಾಬ್ದಾರಿಯನ್ನು ವಹಿಸಬೇಕು” ಎಂದು ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.
:ಪದೇ ಪದೇ ಸಂಭವಿಸುತ್ತಿರುವ ವೈಫಲ್ಯಗಳಿಗೆ ಸ್ಪಷ್ಟ ಹೊಣೆಗಾರಿಕೆ ನಿಗದಿಯಾಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಯುವಜನರಲ್ಲಿ ಮತ್ತೆ ವಿಶ್ವಾಸ ಮೂಡಿಸಲು, ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಪಾರದರ್ಶಕ ಮತ್ತು ನಂಬಿಕೆಗೆ ಅರ್ಹ ಪರಿಹಾರ ಕ್ರಮಗಳ ಅಗತ್ಯ ತುರ್ತುವಾಗಿದೆ. ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮಕ್ಕೆ ಭಾಗಿಯಾಗಿರು ಎಲ್ಲ ದರೋಡೆಕೋರು ಮತ್ತು ಮಾಫಿಯಾಗಳ ವಿರುದ್ಧ ಕಠಿಣ ಮತ್ತು ಮಾದರಿಯಾಗುವಂತಹ ಕ್ರಮಗಳನ್ನು ಕೈಗೊಂಡಾಗ ಮಾತ್ರ ಯುವ ಮನಸ್ಸುಗಳ ಭವಿಷ್ಯವನ್ನು ಕಾಪಾಡಿ, ದೇಶದ ಶಿಕ್ಷಣ ವ್ಯವಸ್ಥೆಯ ಗೌರವವನ್ನು ಉಳಿಸಬಹುದು” ಎಂದು ಹೇಳಿದೆ.




