ಸಿನೆಮಾ ನೋಡುವುದು: ಕಲೆಯ ಆಂತರ್ಯವನ್ನು ಗ್ರಹಿಸುವ ಕ್ರಮ

Date:

ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ ಮೇಲೆ ಕಾಣುವ ಒಂದೊಂದು ಕ್ಷಣದ ಹಿಂದೆಯೂ ನಿರ್ದೇಶಕ ಮತ್ತು ತಂತ್ರಜ್ಞರ ದೀರ್ಘ ಶ್ರಮ, ಆರ್ಥಿಕ ಮಿತಿಗಳು ಹಾಗೂ ತಾಂತ್ರಿಕ ಸವಾಲುಗಳಿರುತ್ತವೆ. ಆ ಮಿತಿಗಳ ನಡುವೆಯೇ ಕಥೆಯೊಂದರ ಆಂತರಿಕ ತಲ್ಲಣಗಳು ಬೆಳಕು, ಕ್ಯಾಮೆರಾ ಚಲನೆ, ಧ್ವನಿ ಮತ್ತು ನಟನೆಯ ಸಮಗ್ರ ಪರಿಕರಗಳ ಮೂಲಕ ಹೇಗೆ ಮೈದಳೆಯಿತು ಎಂಬುದನ್ನು ಸಹಾನುಭೂತಿಯಿಂದ ಗ್ರಹಿಸುವುದೇ ಸಿನೆಮಾ ತಂತ್ರದ ನಿಜವಾದ ಅರಿವು. 

ಚಿತ್ರಮಂದಿರದ ಕತ್ತಲಿನಲ್ಲಿ ಕೇವಲ ಕಥೆಯನ್ನಷ್ಟೇ ಕಂಡು ಹೊರಬರುವುದು ಸಹಜವಾದ ವೀಕ್ಷಣೆ. ಆದರೆ ಸಿನೆಮಾವನ್ನು ತುಸು ಆಳವಾಗಿ ಪ್ರೀತಿಸುವ ಯಾರೇ ಆದರೂ ಪರದೆಯ ಮೇಲಿನ ಪ್ರತಿ ಚಲನೆಯನ್ನೂ ಒಂದು ಭಾಷೆಯಾಗಿ ಗ್ರಹಿಸಲು ಸಾಧ್ಯ. ಹಾಗೆಂದು ಸಿನೆಮಾ ನೋಡುವುದು ಯಾವುದೇ ಬೌದ್ಧಿಕ ಹೊರೆಯಾಗಲಿ ಅಥವಾ ಕಡ್ಡಾಯ ಕರ್ತವ್ಯವಾಗಲಿ ಅಲ್ಲ. ‘ಇದು ಮಹಾನ್ ಕೃತಿ, ಹಾಗಾಗಿ ನಾನು ಇದನ್ನು ಇಷ್ಟಪಡಲೇಬೇಕು’ ಎಂಬ ಆಂತರಿಕ ಒತ್ತಡವನ್ನು ಬದಿಗಿಟ್ಟು ನೋಡಿದಾಗ ಮಾತ್ರ ಕಲೆಯೊಂದಿಗೆ ಪ್ರಾಮಾಣಿಕ ಸಂವಾದ ಸಾಧ್ಯವಾಗುತ್ತದೆ. ಕಲೆಯೊಂದನ್ನು ಮೊದಲ ನೋಟದಲ್ಲೇ ತಳ್ಳಿಹಾಕುವ ಬದಲು, ‘ಇದು ನನಗೆ ಏಕೆ ತಲುಪುತ್ತಿಲ್ಲ, ನಾನು ಏನನ್ನು ಗಮನಿಸದೆ ಬಿಟ್ಟಿರಬಹುದು?’ ಎಂಬ ಮುಕ್ತ ಕುತೂಹಲವಿರಬೇಕು. ಆದಾಗ್ಯೂ, ಸಂಪೂರ್ಣವಾಗಿ ತೆರೆದುಕೊಂಡ ನಂತರವೂ ಒಂದು ಕೃತಿ ನಿಮಗೆ ಒಗ್ಗದಿದ್ದರೆ ಅದನ್ನು ‘ಇದು ಒಂದು ಒಳ್ಳೆಯ ಪ್ರಯತ್ನವಾಗಿರಬಹುದು, ಆದರೆ ನನ್ನ ಸಂವೇದನೆಗೆ ಇದು ಒಗ್ಗುತ್ತಿಲ್ಲ’ ಎಂದು ಶಾಂತವಾಗಿ, ನಿರ್ಲಿಪ್ತವಾಗಿ ಸ್ವೀಕರಿಸಿ ಮುಂದಕ್ಕೆ ಸಾಗುವ ಹಕ್ಕು ಪ್ರತಿಯೊಬ್ಬ ವೀಕ್ಷಕನಿಗೂ ಇದೆ.

- Advertisement -

ಇದನ್ನು ಓದಿದ್ದೀರಾ?: ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ಚಲನಚಿತ್ರವೊಂದರ ನಿಜವಾದ ಸಾರ್ಥಕತೆ ಅದರ ತಾತ್ಕಾಲಿಕ ಬಾಕ್ಸ್ ಆಫೀಸ್ ಗಳಿಕೆಯಲ್ಲಾಗಲಿ ಅಥವಾ ಪ್ರಚಾರದಲ್ಲಾಗಲಿ ಅಡಗಿಲ್ಲ. ಇವತ್ತು ನಾವು ಓಜು, ಬ್ರೆಸ್ಸನ್, ಟಾರ್ಕೋವ್ಸ್ಕಿ ಅಥವಾ ರಿತ್ವಿಕ್ ಘಟಕ್‌ರ ಸಿನೆಮಾಗಳನ್ನು ಚರ್ಚಿಸುತ್ತಿರುವುದು ಅವು ಕಾಲದ ಒರೆಗಲ್ಲನ್ನು ಗೆದ್ದು ನಿಂತಿರುವ ಕಲಾತ್ಮಕ ಶಕ್ತಿಯಿಂದಾಗಿ. ಸಿನೆಮಾ ಕಲಿಯುವವನು ಚಿತ್ರವನ್ನು ಕೇವಲ ಮೇಲ್ನೋಟದ ತೀರ್ಪುಗಳಿಗೆ ಸೀಮಿತಗೊಳಿಸದೆ, ಅದರಿಂದ ಏನನ್ನು ಕಲಿಯಬಹುದು ಎಂಬ ಅಧ್ಯಯನದ ದೃಷ್ಟಿಯಿಂದ ನೋಡುತ್ತಾನೆ. ಯಾವುದೇ ಚಿತ್ರವನ್ನು ಮೊದಲ ಬಾರಿಗೆ ನೋಡುವಾಗ ಅತಿಯಾದ ತಾಂತ್ರಿಕ ಲೆಕ್ಕಾಚಾರಗಳಿಗೆ ಇಳಿಯಬೇಕಿಲ್ಲ. ಮೊದಲ ನೋಟ ಕೇವಲ ಮುಕ್ತ ಮನಸ್ಸಿನಿಂದ ಕೂಡಿರಬೇಕು. ನಿರ್ದೇಶಕ ತೆರೆಯ ಮೇಲೆ ಕಟ್ಟಿಕೊಡುವ ಭಾವನಾತ್ಮಕ ಜಗತ್ತಿಗೆ ಸಂಪೂರ್ಣವಾಗಿ ತೆರೆದುಕೊಂಡು ಆ ಅನುಭವವನ್ನು ದಕ್ಕಿಸಿಕೊಳ್ಳಬೇಕು. ಆ ಚಿತ್ರ ಮನಸ್ಸಿನಲ್ಲಿ ನಿಂತ ನಂತರ, ಅದನ್ನು ಹೇಗೆ ನಿರ್ಮಿಸಿದ್ದಾರೆ, ಅದರ ಆಂತರಿಕ ರಚನೆ ಹೇಗಿದೆ ಮತ್ತು ಅದನ್ನು ದೃಶ್ಯರೂಪಕ್ಕೆ ತರಲು ಬಳಸಿದ ಕಲೆಯ ಕ್ರಮಗಳೇನು ಎಂಬುದನ್ನು ಅರಿಯಲು ಮರುವೀಕ್ಷಣೆ ನೆರವಾಗುತ್ತದೆ. ಕಥೆ ಸಿನೆಮಾದ ಆರಂಭಿಕ ಚೌಕಟ್ಟಷ್ಟೇ. ದೃಶ್ಯ, ಧ್ವನಿ, ಬೆಳಕು, ಸಂಕಲನ, ನಟನೆ ಹಾಗೂ ನಿರ್ದೇಶನದ ಸಮಗ್ರ ಸಮ್ಮಿಲನದಲ್ಲಿ ಚಲನಚಿತ್ರ ಮಾಧ್ಯಮ ಜೀವ ಪಡೆಯುತ್ತದೆ. ಈ ಪ್ರತಿಯೊಂದು ಅಂಗವೂ ಪರದೆಯ ಮೇಲೆ ಹೇಗೆ ಮೈದಳೆಯುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವುದರಿಂದಲೇ ಸಿನೆಮಾದ ನಿಜವಾದ ಅರಿವು ತೆರೆದುಕೊಳ್ಳುತ್ತದೆ.

ದೃಶ್ಯ ವಿನ್ಯಾಸ ಮತ್ತು ಛಾಯಾಗ್ರಹಣ

ದೃಶ್ಯ ವಿನ್ಯಾಸ ಮತ್ತು ಛಾಯಾಗ್ರಹಣ ಕಥೆಯ ದೃಷ್ಟಿಕೋನವನ್ನು ನಿರ್ಧರಿಸುತ್ತದೆ. ಕ್ಯಾಮೆರಾದ ಕೆಲಸ ಕೇವಲ ಭೌತಿಕ ವಾಸ್ತವವನ್ನು ದಾಖಲಿಸುವುದಷ್ಟೇ ಅಲ್ಲ; ಅದು ಘಟನಾವಳಿಗಳ ಆಂತರ್ಯವನ್ನು ಪ್ರವೇಶಿಸುವ ಬಗೆ. ಲೆನ್ಸ್‌ನ ಆಯ್ಕೆ, ಕ್ಯಾಮೆರಾ ಇರಿಸಲಾದ ಕೋನ ಹಾಗೂ ಅದರ ನಿಶ್ಚಲತೆ ಅಥವಾ ಚಲನೆಯೇ ದೃಶ್ಯವೊಂದು ವೀಕ್ಷಕನಲ್ಲಿ ವಿಕಸನಗೊಳ್ಳುವ ಕ್ರಮವನ್ನು ರೂಪಿಸುತ್ತದೆ. ವೈಡ್ ಲೆನ್ಸ್ ಪಾತ್ರವನ್ನು ಅದರ ಪರಿಸರದ ಬಿಡಿಸಲಾಗದ ಭಾಗವಾಗಿಸಿದರೆ, ಟೆಲಿಫೋಟೋ ಹಿನ್ನೆಲೆಯನ್ನು ಸಂಕುಚಿತಗೊಳಿಸಿ ವ್ಯಕ್ತಿಯನ್ನು ಪ್ರತ್ಯೇಕತೆಯ ಚೌಕಟ್ಟಿಗೆ ತಳ್ಳುತ್ತದೆ. ಯಾಸುಜಿರೊ ಓಜು ಅವರ ಚೌಕಟ್ಟುಗಳಲ್ಲಿ ಕ್ಯಾಮೆರಾ ನೆಲಮಟ್ಟದಲ್ಲೇ ನಿಶ್ಚಲವಾಗಿ ನಿಂತು ದೈನಂದಿನ ಬದುಕಿನ ಮೌನವನ್ನು ದಾಖಲಿಸಿದರೆ, ಆಂಡ್ರೇ ಟಾರ್ಕೋವ್ಸ್ಕಿಯಲ್ಲಿ ಕ್ಯಾಮೆರಾದ ಸಾವಕಾಶ ಚಲನೆಯು ಕೇವಲ ಅವಕಾಶವನ್ನು (Space) ತೋರಿಸದೆ ನೆನಪಿನ ಆವರಣವನ್ನಾಗಿ ವಿಸ್ತರಿಸುತ್ತದೆ. ಫ್ರೇಮಿಂಗ್ ಮತ್ತು ಕಾಂಪೊಸಿಷನ್ ಚೌಕಟ್ಟಿನೊಳಗಿನ ಶೂನ್ಯವನ್ನು ಅಳೆಯುತ್ತವೆ. ಮೈಕೆಲ್ಯಾಂಜೆಲೋ ಆಂಟೋನಿಯೋನಿಯವರ ‘ಲಾ ಎಕ್ಲಿಪ್ಸ್’ನಲ್ಲಿ ಮನುಷ್ಯರು ಬೃಹತ್ ಆಧುನಿಕ ಕಟ್ಟಡಗಳು ಹಾಗೂ ನಿರ್ಜನ ಗೋಡೆಗಳ ತೀರಾ ಕೆಳಮೂಲೆಯಲ್ಲಿ ಕುಬ್ಜರಾಗಿ ಕಾಣಿಸಿಕೊಳ್ಳುತ್ತಾರೆ; ಆ ನೆಗೆಟಿವ್ ಸ್ಪೇಸ್ ಪಾತ್ರಗಳ ಪರಕೀಯತೆಯ ಭೌತಿಕ ದಾಖಲೆಯಾಗುತ್ತದೆ.

Floating Weeds
ಯಾಸುಜಿರೊ ಓಜು ಅವರ ‘ಫ್ಲೋಟಿಂಗ್ ವೀಡ್ಸ್’ (1959): ನೆಲಮಟ್ಟದ ನಿಶ್ಚಲ ಕ್ಯಾಮೆರಾ, ಜ್ಯಾಮಿತೀಯ ಕಾಂಪೊಸಿಷನ್ ಹಾಗೂ ದೈನಂದಿನ ಬದುಕಿನ ಲಯ

ಹಾಗೆಯೇ, ಬೆಳಕಿನ ಹರಿವು ಮತ್ತು ನೆರಳಿನ ಸಾಂದ್ರತೆ ಕಥೆಯ ಆಂತರಿಕ ತಾಪಮಾನವನ್ನು ನಿರ್ಧರಿಸುತ್ತವೆ. ಹಾಗೆಯೇ, ಬೆಳಕಿನ ಹರಿವು ಮತ್ತು ನೆರಳಿನ ಸಾಂದ್ರತೆ ಕಥೆಯ ಆಂತರಿಕ ತಾಪಮಾನವನ್ನು ನಿರ್ಧರಿಸುತ್ತವೆ. ವಿಕ್ಟರ್ ಎರಿಸೆ ಅವರ ‘ದಿ ಸ್ಪಿರಿಟ್ ಆಫ್ ದಿ ಬೀಹೈವ್’ ಚಿತ್ರದಲ್ಲಿ ಕಿಟಕಿಗಳ ಸಂದುಗಳಿಂದ ಜಿನುಗಿ ಬರುವ ಜೇನಿನ ಬಣ್ಣದ ಮಬ್ಬು ಬೆಳಕು ಮತ್ತು ಆವರಿಸುವ ನೆರಳುಗಳು ಕೇವಲ ಕೋಣೆಯನ್ನಷ್ಟೇ ಬೆಳಗುವುದಿಲ್ಲ; ಯುದ್ಧಾನಂತರದ ಮೌನವನ್ನೂ, ಆ ಮಗುವಿನ ಕಲ್ಪನಾ ಲೋಕದ ಆತಂಕವನ್ನೂ ದೃಶ್ಯವಾಗಿಸುತ್ತವೆ. ಅದೇ ರೀತಿ ವಾಂಗ್ ಕರ್ ವಾಯ್ ಅವರ ‘ಇನ್ ದಿ ಮೂಡ್ ಫಾರ್ ಲವ್’ನಲ್ಲಿ ಕಿರಿದಾದ ಕಾರಿಡಾರ್‌ಗಳ ಮೇಲೆ ಬೀಳುವ ಮಬ್ಬು ಹಳದಿ ಮತ್ತು ಕೆಂಪು ಬೆಳಕು, ಪಾತ್ರಗಳ ಅದುಮಿಟ್ಟ ಪ್ರೇಮದ ಸಂಕೋಚ ಹಾಗೂ ಏಕಾಂತವನ್ನೇ ದೃಶ್ಯವಾಗಿಸುತ್ತದೆ.

ಇದನ್ನು ಓದಿದ್ದೀರಾ?: ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಂಕಲನ ಮತ್ತು ದೃಶ್ಯ ಜೋಡಣೆಯ ಲಯ

ಎರಡು ಶಾಟ್‌ಗಳ ನಡುವಿನ ಮುಖಾಮುಖಿಯೇ ಹೊಸದೊಂದು ಅರ್ಥವನ್ನು ಹುಟ್ಟುಹಾಕುತ್ತದೆ. ನೇರ ಕಟ್, ನೆನಪಿನಂತೆ ಕರಗುವ ಡಿಸಾಲ್ವ್, ಕಾಲದ ಸಾಂದ್ರತೆಯನ್ನು ಕಟ್ಟಿಕೊಡುವ ಮಾಂಟಾಜ್, ಕಾಲದ ಜಿಗಿತವನ್ನು ಸಾರುವ ಜಂಪ್ ಕಟ್ ಅಥವಾ ಆಕಾರಗಳನ್ನು ಬೆಸೆಯುವ ಮ್ಯಾಚ್ ಕಟ್‌ಗಳ ಮೂಲಕ ಸಂಕಲನಕಾರ ಕಾಲದ ಹರಿವನ್ನು ಹಿಗ್ಗಿಸುತ್ತಾನೆ ಅಥವಾ ಕುಗ್ಗಿಸುತ್ತಾನೆ. ರಿತ್ವಿಕ್ ಘಟಕ್ ಅವರ ‘ಮೇಘೆ ಢಾಕಾ ತಾರಾ’ ಚಿತ್ರದಲ್ಲಿ ಕಟ್‌ಗಳು ಮತ್ತು ಶಬ್ದಗಳ ಹಠಾತ್ ಸಂಯೋಜನೆ ದೇಶವಿಭಜನೆಯ ಆಂತರಿಕ ಗಾಯವನ್ನು, ಕೌಟುಂಬಿಕ ಬಿರುಕನ್ನು ತೀವ್ರವಾಗಿ ಸೀಳಿ ದಾಖಲಿಸಿದರೆ, ಗೊದಾರ್ದ್ ಅವರ ಚಿತ್ರಗಳಲ್ಲಿ ಕಟ್ ಕೇವಲ ಪರಿವರ್ತನೆಯಾಗದೆ, ಸ್ಥಾಪಿತ ವಾಸ್ತವವನ್ನು ಹರಿದುಹಾಕುವ ಆಘಾತವಾಗುತ್ತದೆ. ಇಬ್ಬರು ಮುಖಾಮುಖಿಯಾಗಿ ಮಾತನಾಡುವಾಗ ಅವರ ನೋಟಗಳನ್ನು ಬೆಸೆಯುವ ಒಂದು ಅದೃಶ್ಯ ಅಕ್ಷರೇಖೆಯಿರುತ್ತದೆ (Axis). ಪಾತ್ರಗಳ ಈ ಐಲೈನ್ (Eyeline) ವೀಕ್ಷಕನಿಗೆ ಆ ಜಾಗದ ಭೌಗೋಳಿಕ ಸ್ಪಷ್ಟತೆಯನ್ನು ಕೊಡುತ್ತದೆ. ಸಾಂಪ್ರದಾಯಿಕ ಸಿನೆಮಾಗಳು ಈ ರೇಖೆಯನ್ನು ಕಾಯ್ದುಕೊಂಡು ನೋಟದ ದಿಕ್ಕು ಸುಲಲಿತವಾಗಿರುವಂತೆ ನೋಡಿಕೊಂಡರೆ, ಗಂಭೀರ ಸಿನೆಮಾ ಈ ನಿರಂತರತೆಯನ್ನು ಉದ್ದೇಶಪೂರ್ವಕವಾಗಿಯೇ ಕತ್ತರಿಸುತ್ತದೆ. ಪಾತ್ರಗಳ ನೋಟದ ದಿಕ್ಕು ಮುಖಾಮುಖಿಯಾಗದೆ ಹಠಾತ್ತಾಗಿ ಮುರಿದುಬಿದ್ದಾಗ ಉಂಟಾಗುವ ಆ ಸಣ್ಣ ದೃಶ್ಯ ಆಘಾತವೇ, ಸಂಬಂಧಗಳ ಆಂತರಿಕ ಬಿರುಕನ್ನು ಮುಖಾಮುಖಿಯಾಗಿಸುತ್ತದೆ. ಓಜು ಅಥವಾ ವಾಂಗ್ ಕರ್-ವಾಯ್ ಅವರಲ್ಲಿ ನೋಟಗಳು ಸಂಧಿಸದ ಈ ಚೌಕಟ್ಟೇ, ಪರಸ್ಪರ ಎದುರಾಗಲಾಗದ ಅಂತರಂಗದ ಮೌನ ತೊಳಲಾಟವಾಗಿ ಮಾರ್ಪಡುತ್ತದೆ.

ಮೇಘೆ ಢಾಕಾ ತಾರಾ
‘ಮೇಘೆ ಢಾಕಾ ತಾರಾ’ (1960): ಬೆಳಕು-ನೆರಳಿನ ತೀವ್ರತೆ ಮತ್ತು ಪಾತ್ರಗಳ ನಡುವಿನ ಅಸಹಾಯಕ ದೂರ

ಧ್ವನಿ ವಿನ್ಯಾಸ ಮತ್ತು ಶಬ್ದದ ವಿಸ್ತಾರ

ಧ್ವನಿ ಸಿನೆಮಾದ ಕೇವಲ ಪೂರಕ ಅಂಶವಲ್ಲ; ಅದು ಚಿತ್ರದ ಅರ್ಧ ಭಾಗ. ದೃಶ್ಯವು ಕಣ್ಣಿಗೆ ಕಾಣುವ ಚೌಕಟ್ಟನ್ನು ಸೀಮಿತಗೊಳಿಸಿದರೆ, ಧ್ವನಿ ಆ ಚೌಕಟ್ಟಿನ ಆಚೆಗಿನ ಅಗೋಚರ ಜಗತ್ತನ್ನು ವೀಕ್ಷಕನ ಕಲ್ಪನೆಗೆ ದಾಟಿಸುತ್ತದೆ. ಚಿತ್ರವೊಂದನ್ನು ಗ್ರಹಿಸುವಾಗ ಧ್ವನಿಯನ್ನು ಕೇವಲ ಹಿನ್ನೆಲೆ ಸಂಗೀತಕ್ಕೆ ಸೀಮಿತಗೊಳಿಸದೆ, ಪಾತ್ರಗಳ ಚಲನೆಯ ನೈಜ ಸದ್ದುಗಳು, ಪರಿಸರದ ನಾದ ಮತ್ತು ಮೌನದ ಸೂಕ್ಷ್ಮ ಬಳಕೆಯನ್ನು ಅಷ್ಟೇ ಎಚ್ಚರದಿಂದ ಆಲಿಸಬೇಕಾಗುತ್ತದೆ. ಪರಿಸರದ ನೈಜ ಶಬ್ದಗಳು ದೃಶ್ಯವನ್ನು ಆ ಜಾಗದ ವಾಸ್ತವಕ್ಕೆ ಬೆಸೆಯುತ್ತವೆ. ರಾಬರ್ಟ್ ಬ್ರೆಸ್ಸನ್ ಅವರ ‘ಎ ಮ್ಯಾನ್ ಎಸ್ಕೇಪ್ಡ್’ ಚಿತ್ರದಲ್ಲಿ ಜೈಲಿನ ಬಾಗಿಲನ್ನು ಚಮಚದಿಂದ ಕೆರೆಯುವ ಸಣ್ಣ ಶಬ್ದ, ಕಾವಲುಗಾರನ ಬೂಟಿನ ನಡಿಗೆ ಮತ್ತು ದೂರದಲ್ಲಿ ಕೇಳುವ ರೈಲಿನ ಕೂಗು ಯಾವುದೇ ಕೃತಕ ಸಂಗೀತವಿಲ್ಲದೆ ಕೇವಲ ಶ್ರಾವ್ಯ ವಿವರಗಳ ಮೂಲಕವೇ ತೀವ್ರವಾದ ಉದ್ವೇಗವನ್ನು ಕಟ್ಟಿಕೊಡುತ್ತವೆ. ‘ಪಥೇರ್ ಪಾಂಚಾಲಿ’ಯಲ್ಲಿ ಟೆಲಿಗ್ರಾಫ್ ಕಂಬಗಳ ತಂತಿಯಲ್ಲಿ ಗಾಳಿ ಬೀಸುವಾಗ ಹೊರಹೊಮ್ಮುವ ಆ ವಿಚಿತ್ರ ಝೇಂಕಾರ, ಗ್ರಾಮೀಣ ಬದುಕಿನ ಮುಗ್ಧತೆ ಮತ್ತು ಒಂಟಿತನವನ್ನು ದೃಶ್ಯಕ್ಕಿಂತ ಹೆಚ್ಚಾಗಿ ಶ್ರಾವ್ಯ ರೂಪದಲ್ಲೇ ತಲುಪಿಸುತ್ತದೆ.

ಇದನ್ನು ಓದಿದ್ದೀರಾ?: ಕೇಳುವ ಚಿತ್ರ, ಕಾಣುವ ಶಬ್ದ: ಸಿನೆಮಾದ ಆಫ್-ಸ್ಕ್ರೀನ್ ತಾತ್ವಿಕತೆ

ಎಲ್ಲಕ್ಕಿಂತ ಮುಖ್ಯವಾಗಿ, ಧ್ವನಿ ವಿನ್ಯಾಸದಲ್ಲಿ ಮೌನದ ಬಳಕೆ ಅತ್ಯಂತ ಪ್ರಬಲವಾದ ಅಸ್ತ್ರ. ಎಲ್ಲೆಡೆ ಶಬ್ದಗಳನ್ನು ತುಂಬುವುದಕ್ಕಿಂತ, ನಿರ್ಣಾಯಕ ಕ್ಷಣದಲ್ಲಿ ಧ್ವನಿಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ವೀಕ್ಷಕನಲ್ಲಿ ದಟ್ಟ ತಲ್ಲಣವನ್ನು ಸೃಷ್ಟಿಸುತ್ತದೆ. ಅಡೂರ್ ಗೋಪಾಲಕೃಷ್ಣನ್ ಅವರ ‘ಎಲಿಪತ್ತಾಯಂ’ನಲ್ಲಿ ಪಾತ್ರದ ಜಡತ್ವ ಮತ್ತು ಉಳಿಗಮಾನ್ಯ ವ್ಯವಸ್ಥೆಯ ಅವನತಿಯನ್ನು ಮಳೆಯ ಹನಿ ಹಾಗೂ ಇಲಿ ಬೋನಿನ ಸದ್ದಿನ ನಡುವೆ ಬರುವ ನಿಶ್ಯಬ್ದದ ಮೂಲಕವೇ ಪ್ರಕಟಿಸಲಾಗುತ್ತದೆ. ಅಬ್ಬಾಸ್ ಕಿಯಾರೊಸ್ತಮಿಯವರ ‘ಟೇಸ್ಟ್ ಆಫ್ ಚೆರ್ರಿ’ ಚಿತ್ರದಲ್ಲಿ ಯಾವುದೇ ಹಿನ್ನೆಲೆ ಸಂಗೀತವಿರುವುದಿಲ್ಲ; ಅಲ್ಲಿ ಕಾರಿನ ಎಂಜಿನ್ ಸದ್ದು, ರಸ್ತೆಯ ಧೂಳು ಮತ್ತು ಬೀಸುವ ಗಾಳಿಯೇ ಕಥೆಯ ಆಂತರಿಕ ಲಯವನ್ನು ರೂಪಿಸುತ್ತವೆ. ಸಂಗೀತವು ಭಾವನೆಯನ್ನು ಬಲವಂತವಾಗಿ ಹೇರಲು ಬಳಕೆಯಾಗದೆ, ಕೇವಲ ದೃಶ್ಯದ ಶೂನ್ಯತೆಯನ್ನು ಎತ್ತಿಹಿಡಿಯಲು ಬಳಕೆಯಾದಾಗ ಧ್ವನಿ ತನ್ನ ಪೂರ್ಣ ಸಾಮರ್ಥ್ಯವನ್ನು ಪ್ರಕಟಿಸುತ್ತದೆ.

ಎಲಿಪತ್ತಾಯಂ
‘ಎಲಿಪತ್ತಾಯಂ’ (1981): ಇಲಿ ಬೋನಿನ ಸಣ್ಣ ಸದ್ದು ಮತ್ತು ನಿಶ್ಯಬ್ದದ ಮೂಲಕವೇ ಪ್ರಕಟವಾಗುವ ಉಳಿಗಮಾನ್ಯ ವ್ಯಕ್ತಿಯ ಅಸಹಾಯಕತೆ

ಚಿತ್ರಕಥೆ, ರಚನೆ ಮತ್ತು ಸಾಮಾಜಿಕ ಒಳಾರ್ಥ

ಗಂಭೀರ ಸಿನೆಮಾದಲ್ಲಿ ಕಥೆ ಎನ್ನುವುದು ಕೇವಲ ಘಟನೆಗಳ ಸರಣಿಯಲ್ಲ; ಅದು ಮಾನವ ಸಂಬಂಧಗಳ, ಸಮಾಜದ ಹಾಗೂ ಆಂತರಿಕ ಮನಸ್ಥಿತಿಗಳ ಸೂಕ್ಷ್ಮ ಶೋಧನೆ. ಚಿತ್ರಕಥೆಯು ಕೇವಲ ತಾಂತ್ರಿಕ ರಚನೆಯ ಪ್ರಯೋಗವಾಗದೆ, ತನ್ನ ಕಾಲದ ಸಮಾಜದ ತಲ್ಲಣಗಳು ಮತ್ತು ಮನುಷ್ಯನ ಅಂತಃಕರಣದ ಬಿರುಕುಗಳನ್ನು ಸ್ಪರ್ಶಿಸುವುದು ಮುಖ್ಯವಾಗುತ್ತದೆ. ಪಾತ್ರಗಳ ನಡುವಿನ ಮೌನ ಹಾಗೂ ಸಂಘರ್ಷಗಳು ಮಾನವ ಸಮಾಜ ಎದುರಿಸುತ್ತಿರುವ ನೈತಿಕ ಮತ್ತು ಸಾಮಾಜಿಕ ಪ್ರಶ್ನೆಗಳಿಗೆ ಸಾಕ್ಷಿಯಾಗಿ ನಿಂತಾಗ ಚಿತ್ರಕಥೆಗೆ ಆಳವಾದ ವಿಸ್ತಾರ ದಕ್ಕುತ್ತದೆ. ಚಿತ್ರಕಥೆಯನ್ನು ವಿಶ್ಲೇಷಿಸುವಾಗ ಕಥೆಯ ಮುಖ್ಯ ತಿರುವುಗಳಷ್ಟೇ ಅಲ್ಲದೆ, ಅದರ ನಿರೂಪಣಾ ಶೈಲಿ, ಪಾತ್ರದ ವಿಕಾಸದ ಹರಿವು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಂಭಾಷಣೆಯ ಆಚೆಗಿನ ಒಳಾರ್ಥವನ್ನು ಗುರುತಿಸುವುದು ಮುಖ್ಯವಾಗುತ್ತದೆ. ಪಾತ್ರಗಳು ಮುಖಾಮುಖಿಯಾಗಿ ಆಡುವ ಮಾತುಗಳಿಗಿಂತ, ಅವುಗಳ ನಡುವೆ ಮೌನವಾಗಿ ಉಳಿಯುವ ಸಂಗತಿಗಳೇ ಒಳಾರ್ಥ. ಕ್ರಿಶ್ತೋಫ್ ಕೀಸ್ಲೋವ್ಸ್ಕಿಯವರ ‘ತ್ರೀ ಕಲರ್ಸ್: ಬ್ಲೂ’ ಚಿತ್ರದಲ್ಲಿ ಅಪಘಾತದಲ್ಲಿ ಗಂಡ ಮತ್ತು ಮಗುವನ್ನು ಕಳೆದುಕೊಂಡ ಮಹಿಳೆ ಕೆಫೆಯಲ್ಲಿ ಕುಳಿತು ಕಾಫಿಯಲ್ಲಿ ಸಕ್ಕರೆ ಕ್ಯೂಬ್ ಕರಗುವುದನ್ನು ದಿಟ್ಟಿಸುವ ದೃಶ್ಯವಿದೆ. ಅಲ್ಲಿ ಯಾವುದೇ ಅಳುವಿಲ್ಲ, ನೋವನ್ನು ವಿವರಿಸುವ ಸಂಭಾಷಣೆಯಿಲ್ಲ; ಆದರೆ ಆ ಸಕ್ಕರೆ ಕರಗುವ ಕ್ಷಣವೇ ಆಕೆಯ ಒಳಗಿನ ನಿರ್ವಾತವನ್ನು ಮತ್ತು ಕಳೆದುಹೋದ ಬದುಕಿನ ನಿರರ್ಥಕತೆಯನ್ನು ವೀಕ್ಷಕನಿಗೆ ಸಂವಹಿಸುತ್ತದೆ.

ಇದನ್ನು ಓದಿದ್ದೀರಾ?: ಸಂಕಲನವೆಂಬ ಮಾಯೆ: ಘನೀಭವಿಸಿದ ಕಾಲ ಮತ್ತು ಚಲಿಸುವ ಬಿಂಬ

ಚಿತ್ರಕಥೆಯ ರಚನೆಯು ಕಥೆಯನ್ನು ಹೇಗೆ ಬಿಚ್ಚಿಡಲಾಗಿದೆ ಎಂಬುದನ್ನು ನಿರ್ಧರಿಸುತ್ತದೆ. ಕಥೆಯನ್ನು ಆರಂಭ, ಮಧ್ಯ ಮತ್ತು ಅಂತ್ಯವೆಂಬ ನೇರ ರೇಖೆಯಲ್ಲೇ (Linear) ಹೇಳಬೇಕೆಂಬ ನಿಯಮವಿಲ್ಲ. ಅಕಿರಾ ಕುರೊಸಾವಾರ ‘ರಶೋಮನ್’ ಚಿತ್ರದಲ್ಲಿ ಒಂದೇ ಕೊಲೆಯ ಘಟನೆಯನ್ನು ನಾಲ್ಕು ಬೇರೆ ಬೇರೆ ಪಾತ್ರಗಳ ದೃಷ್ಟಿಕೋನದಿಂದ ಮರುಸೃಷ್ಟಿಸಲಾಗುತ್ತದೆ. ಪ್ರತಿಯೊಬ್ಬನ ಕಥೆಯಲ್ಲೂ ಅವನದೇ ಆದ ಸ್ವಾರ್ಥ ಮತ್ತು ನೈತಿಕ ಮುಖವಾಡಗಳಿರುತ್ತವೆ; ಆ ಮೂಲಕ ‘ಸತ್ಯ ಎನ್ನುವುದು ಸಂಪೂರ್ಣವಲ್ಲ, ಅದು ವ್ಯಕ್ತಿನಿಷ್ಠ’ ಎಂಬ ತಾತ್ವಿಕತೆಯನ್ನು ನಿರೂಪಣಾ ರಚನೆಯ ಮೂಲಕವೇ ಸಾಧಿಸಲಾಗುತ್ತದೆ. ಪಾತ್ರದ ರೂಪಾಂತರವೂ ಅಷ್ಟೇ; ರಿತ್ವಿಕ್ ಘಟಕ್ ಅವರ ‘ಸುಬರ್ಣರೇಖಾ’ದಲ್ಲಿ ನಿರಾಶ್ರಿತ ಬದುಕಿನ ನೈತಿಕ ಆದರ್ಶಗಳನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುವ ಈಶ್ವರ್‌ನ ಪಾತ್ರ, ಕಾಲದ ಕ್ರೂರ ಸತ್ಯಗಳ ಮುಂದೆ ಹರಿದು ಹಂಚಿಹೋಗುತ್ತಲೇ ತನ್ನ ಅಂತಿಮ ರೂಪಾಂತರದ ಹಾದಿಯನ್ನು ಕಂಡುಕೊಳ್ಳುತ್ತದೆ.

ರಶೋಮನ್ 1950
‘ರಶೋಮನ್’ (1950): ದೃಷ್ಟಿಕೋನಗಳ ಸಂಘರ್ಷದಲ್ಲಿ ಕರಗಿಹೋಗುವ ಸತ್ಯ ಮತ್ತು ವ್ಯಕ್ತಿನಿಷ್ಠ ಕಥನ ರಚನೆ

ನಿರ್ದೇಶಕನ ದೃಷ್ಟಿಕೋನ ಮತ್ತು ಬ್ಲಾಕಿಂಗ್

ನಿರ್ದೇಶಕ ಕೇವಲ ತಂತ್ರಜ್ಞರ ಕೆಲಸವನ್ನು ಸಂಯೋಜಿಸುವವನಲ್ಲ; ಇಡೀ ಕೃತಿಯ ತಾತ್ವಿಕತೆಯೂ, ದೃಶ್ಯದ ಲಯವೂ ಆತನ ದೃಷ್ಟಿಕೋನದಿಂದಲೇ ನಿರ್ಧಾರವಾಗುತ್ತದೆ. ಚಿತ್ರಕಥೆಯು ಕೇವಲ ಸನ್ನಿವೇಶ ಮತ್ತು ಪಾತ್ರಗಳ ಬಾಹ್ಯ ಕ್ರಿಯೆಗಳನ್ನು ವಿವರಿಸುವ ನಿರ್ಜೀವ ಲಿಖಿತ ರೂಪವಷ್ಟೇ; ಆದರೆ ಆ ಕ್ಷಣವನ್ನು ಪರದೆಯ ಮೇಲೆ ದೃಶ್ಯಾನುಭವವಾಗಿ ಹೇಗೆ ಬದಲಿಸಬೇಕೆಂಬುದು ನಿರ್ದೇಶಕನ ಆಯ್ಕೆ. ಕ್ಯಾಮೆರಾದ ಸ್ಥಾನ, ಫ್ರೇಮಿಂಗ್ ಮತ್ತು ಚಲನೆಯನ್ನು ನಿರ್ಧರಿಸುವ ಮುನ್ನ ನಿರ್ದೇಶಕ ಆ ದೃಶ್ಯದ ನಾಟಕೀಯ ತಿರುಳನ್ನು ಗ್ರಹಿಸಬೇಕಾಗುತ್ತದೆ. ಚೌಕಟ್ಟಿನೊಳಗೆ ಪಾತ್ರಗಳು ಎಲ್ಲಿವೆ, ಅವುಗಳ ನಡುವಿನ ಬಾಂಧವ್ಯವೇನು, ಆ ಸನ್ನಿವೇಶದಲ್ಲಿ ವೀಕ್ಷಕನ ಕಣ್ಣು ನಿರ್ದಿಷ್ಟವಾಗಿ ಯಾವುದನ್ನು ಗಮನಿಸಬೇಕು ಮತ್ತು ಹಿನ್ನೆಲೆಯ ಯಾವ ದೃಶ್ಯ ವಿವರಗಳು ಆ ಕ್ಷಣಕ್ಕೆ ತೀವ್ರತೆ ತರುತ್ತವೆ ಎಂಬುದರ ಆಧಾರದ ಮೇಲೆಯೇ ದೃಶ್ಯ ವಿನ್ಯಾಸ ರೂಪುಗೊಳ್ಳುತ್ತದೆ. ‘ಬ್ಲಾಕಿಂಗ್’ (Blocking) ಎನ್ನುವುದು ಚೌಕಟ್ಟಿನೊಳಗೆ ಪಾತ್ರಗಳ ಭೌತಿಕ ನೆಲೆಯನ್ನೇ ದೃಶ್ಯಭಾಷೆಯನ್ನಾಗಿಸುವ ಕಲೆ. ಪಾತ್ರಗಳು ನಿಲ್ಲುವ ಸ್ಥಳ, ಅವುಗಳ ನಡುವಿನ ಅಂತರ ಮತ್ತು ಚಲನೆಯ ದಿಕ್ಕು ಕೇವಲ ನಡಿಗೆಯಾಗಿರದೆ, ಒಳಗಿನ ಭಾವನಾತ್ಮಕ ಪ್ರತ್ಯೇಕತೆ ಹಾಗೂ ಅಧಿಕಾರದ ಸಮೀಕರಣಗಳನ್ನು ಸಂಭಾಷಣೆಯಿಲ್ಲದೆಯೇ ಬಯಲುಮಾಡುತ್ತವೆ. ಕುಳಿತಿರುವ ವ್ಯಕ್ತಿಯ ಎದುರು ಮತ್ತೊಂದು ಪಾತ್ರ ಹಠಾತ್ತಾಗಿ ಎದ್ದು ನಿಲ್ಲುವ ಸಣ್ಣ ಚಲನೆಯಲ್ಲೂ ಈ ಮಾನಸಿಕ ಪ್ರಭಾವ ದೃಶ್ಯವಾಗಿ ಮೈದಳೆಯುತ್ತದೆ.

ಇದನ್ನು ಓದಿದ್ದೀರಾ?: ಸೌಕಾರ್ ಜಾನಕಿ: ಬದುಕಿನ ಏಳುಬೀಳಿನಲ್ಲಿ ಅರಳಿದ ಕಲಾವಿದೆ

ಸತ್ಯಜಿತ್ ರೇ ಅವರ ‘ಚಾರುಲತಾ’ ಚಿತ್ರದಲ್ಲಿ, ಒಂಟಿತನದಲ್ಲಿರುವ ಚಾರುಲತಾ ಬೈನಾಕ್ಯುಲರ್ ಹಿಡಿದು ಮನೆಯ ಕಿಟಕಿಯಿಂದ ಕಿಟಕಿಗೆ ಚಲಿಸುತ್ತಾ, ಒಂದೊಂದೇ ಬಾಗಿಲುಗಳನ್ನು ಮುಚ್ಚುತ್ತಾ ಸಾಗುವ ಚಲನೆಯೇ ಅವಳ ಅಂತಃಪುರದ ಬಂಧನವನ್ನು ಸಾಂಕೇತಿಸುತ್ತದೆ. ಕೆಂಜಿ ಮಿಜೊಗುಚಿ ಅವರ ‘ಉಗೆತ್ಸು’ವಿನ ದೀರ್ಘ ಶಾಟ್‌ಗಳಲ್ಲಿ ಪಾತ್ರಗಳು ಚೌಕಟ್ಟಿನ ಒಳಗೆ ಬರುವ ಮತ್ತು ಹೊರಹೋಗುವ ಕ್ರಮ ಯುದ್ಧದ ಅನಿಶ್ಚಿತತೆಯನ್ನು ಹಿಡಿದಿಟ್ಟರೆ, ಬೇಲಾ ಟಾರ್ ಅವರ ಕೃತಿಗಳಲ್ಲಿ ನಟರು ನಿಧಾನವಾಗಿ ನಡೆದು ಕ್ಯಾಮೆರಾವನ್ನು ದಾಟಿಹೋಗುವ ಬಗೆ ಇಡೀ ಮಾನವಕುಲದ ದಣಿವನ್ನು ಭೌತಿಕವಾಗಿ ದಾಖಲಿಸುತ್ತದೆ. ಅದೇ ರೀತಿ ರಾಬರ್ಟ್ ಬ್ರೆಸ್ಸನ್ ಅವರ ‘ಪಿಕ್‌ಪಾಕೆಟ್’ ಚಿತ್ರದಲ್ಲಿ, ರೈಲ್ವೆ ನಿಲ್ದಾಣದ ಜನಜಂಗುಳಿಯ ನಡುವೆ ಕಳ್ಳರು ಮತ್ತು ಬಲಿಪಶುಗಳ ನಡುವೆ ನಡೆಯುವ ನಡಿಗೆ ಗಮನಾರ್ಹವಾದುದು. ಅಲ್ಲಿ ಯಾವುದೇ ಸಂಭಾಷಣೆಯಿಲ್ಲದೆ, ಕೇವಲ ಪಾತ್ರಗಳ ದೇಹದ ನಿಖರ ಚಲನೆ, ಭುಜ ತಾಕುವಿಕೆ ಮತ್ತು ಕೈಗಳ ಸೂಕ್ಷ್ಮ ವರ್ಗಾವಣೆಯಲ್ಲೇ ಇಡೀ ಸನ್ನಿವೇಶದ ಆತಂಕ ಹಾಗೂ ನೈತಿಕ ಪತನವನ್ನು ಕ್ಯಾಮೆರಾದ ಚೌಕಟ್ಟಿನೊಳಗೆ ಹೆಣೆಯಲಾಗುತ್ತದೆ. ಪಾತ್ರಗಳ ನಡುವಿನ ಇಂತಹ ಅಂತರ, ಸಾಮೀಪ್ಯ ಹಾಗೂ ಚೌಕಟ್ಟಿನಲ್ಲಿ ನಿರ್ದೇಶಕ ಕಾಯ್ದುಕೊಳ್ಳುವ ಆವರಣವೇ ಆತನ ದೃಷ್ಟಿಕೋನದ ಗಟ್ಟಿತನವನ್ನು ಪ್ರಕಟಿಸುತ್ತದೆ.

ನಟನೆ ಮತ್ತು ಪಾತ್ರ ನಿರ್ವಹಣೆ (Acting & Psychological Realism)

ಗಂಭೀರ ಸಿನೆಮಾಗಳಲ್ಲಿ ನಟನೆಯೆಂದರೆ ಭಾವನೆಗಳ ಬಾಹ್ಯ ಪ್ರದರ್ಶನವಲ್ಲ, ಪಾತ್ರದ ಆಂತರಿಕ ತುಡಿತಗಳನ್ನು ಅದುಮಿಟ್ಟುಕೊಳ್ಳುವ ಸಂಯಮ. ಇಲ್ಲಿ ಅಭಿನಯವು ತೀರಾ ಸ್ವಾಭಾವಿಕ ನೈಜತೆಯಲ್ಲಿದೆಯೇ ಅಥವಾ ಸೂಕ್ಷ್ಮ ಶೈಲೀಕರಣದಲ್ಲಿದೆಯೇ ಎನ್ನುವುದೇ ಪಾತ್ರದ ಮಾನಸಿಕ ತೂಕವನ್ನು ನಿರ್ಧರಿಸುತ್ತದೆ. ರಾಬರ್ಟ್ ಬ್ರೆಸ್ಸನ್ ತಮ್ಮ ಕಲಾವಿದರನ್ನು ‘ಮಾಡೆಲ್‌ಗಳು’ ಎಂದು ಕರೆದು, ಅವರ ಮುಖದಲ್ಲಿ ಯಾವುದೇ ನಾಟಕೀಯ ಹಾವಭಾವಗಳಿಲ್ಲದಂತೆ ನಿರ್ಭಾವವಾಗಿ ನಟಿಸುವಂತೆ ನೋಡಿಕೊಳ್ಳುತ್ತಿದ್ದರು. ಅವರ ‘ಮೊಶೆಟ್’ ಚಿತ್ರದಲ್ಲಿ ಬಾಲಕಿಯ ನಿಷ್ಕಪಟ, ನಿರ್ಲಿಪ್ತ ಮುಖವೇ ಆಕೆಯ ಸುತ್ತಲಿನ ಕ್ರೂರ ಸಮಾಜಕ್ಕೆ ದೊಡ್ಡ ಪ್ರತಿರೋಧವಾಗಿ ನಿಲ್ಲುತ್ತದೆ. ಇಂಗ್ಮರ್ ಬರ್ಗ್‌ಮನ್ ಅವರ ‘ಆಟಮ್ ಸೊನಾಟಾ’ ಅಥವಾ ‘ಪರ್ಸೋನಾ’ ಚಿತ್ರಗಳಲ್ಲಿ ಸಂಭಾಷಣೆಗಿಂತ ಹೆಚ್ಚಾಗಿ ಕ್ಯಾಮೆರಾ ಮುಖದ ತೀರಾ ಸಮೀಪಕ್ಕೆ ಹೋದಾಗ ಕಾಣುವ ಕಣ್ಣಿನ ಸಣ್ಣ ನಡುಕ, ತುಟಿಯ ಅಂಚಿನ ಬಿಗಿತದಂತಹ ಸೂಕ್ಷ್ಮ ಭಾವಗಳೇ ಪಾತ್ರಗಳೊಳಗಿನ ದ್ವೇಷ ಮತ್ತು ಅಪರಾಧಿ ಪ್ರಜ್ಞೆಯನ್ನು ದಾಟಿಸುತ್ತವೆ. ಸಂಭಾಷಣೆಯ ಆಚೆಗೆ ಎರಡು ಮಾತುಗಳ ನಡುವೆ ನಟ ಕಾಯ್ದುಕೊಳ್ಳುವ ಮೌನದ ವಿರಾಮಗಳಲ್ಲೇ ಆ ಪಾತ್ರದ ಆಂತರಿಕ ನಿರ್ವಾತ ಮೈದಳೆಯುತ್ತದೆ.

ಇದನ್ನು ಓದಿದ್ದೀರಾ?: ಕೈಲೊಂದು ಕ್ಯಾಮೆರಾ, ಜೀವಂತ ಬದುಕಿಗೆ ಮುಖಾಮುಖಿ

ಉದ್ದೇಶ ಮತ್ತು ನಿರ್ವಹಣೆ

ಇದು ಸಿನೆಮಾ ವಿಶ್ಲೇಷಣೆಯ ಅತ್ಯುನ್ನತ ಹಂತ. ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ ಮೇಲೆ ಕಾಣುವ ಒಂದೊಂದು ಕ್ಷಣದ ಹಿಂದೆಯೂ ನಿರ್ದೇಶಕ ಮತ್ತು ತಂತ್ರಜ್ಞರ ದೀರ್ಘ ಶ್ರಮ, ಆರ್ಥಿಕ ಮಿತಿಗಳು ಹಾಗೂ ತಾಂತ್ರಿಕ ಸವಾಲುಗಳಿರುತ್ತವೆ. ಆ ಮಿತಿಗಳ ನಡುವೆಯೇ ಕಥೆಯೊಂದರ ಆಂತರಿಕ ತಲ್ಲಣಗಳು ಬೆಳಕು, ಕ್ಯಾಮೆರಾ ಚಲನೆ, ಧ್ವನಿ ಮತ್ತು ನಟನೆಯ ಸಮಗ್ರ ಪರಿಕರಗಳ ಮೂಲಕ ಹೇಗೆ ಮೈದಳೆಯಿತು ಎಂಬುದನ್ನು ಸಹಾನುಭೂತಿಯಿಂದ ಗ್ರಹಿಸುವುದೇ ಸಿನೆಮಾ ತಂತ್ರದ ನಿಜವಾದ ಅರಿವು. ಕಥನದ ಹೂರಣಕ್ಕೂ ಪರದೆಯ ಮೇಲಿನ ಈ ದೃಶ್ಯರೂಪಕ್ಕೂ ನಡುವಿರುವ ಸಾವಯವ ಸಂಬಂಧವನ್ನು ಕಂಡುಕೊಂಡಾಗ, ಸಿನೆಮಾ ನೋಡುವುದು ಕೇವಲ ಕಥೆ ಕೇಳುವ ಪ್ರಕ್ರಿಯೆಯಾಗದೆ, ಒಂದು ಸ್ವತಂತ್ರ ಕಲಾಕೃತಿಯ ಆಂತರಿಕ ಲಯವನ್ನು ಮುಖಾಮುಖಿಯಾಗುವ ಅನುಭವವಾಗುತ್ತದೆ. ದೃಶ್ಯ ವಿನ್ಯಾಸದ ಜ್ಯಾಮಿತಿ, ಸಂಕಲನದಲ್ಲಿ ಕಾಲವನ್ನು ನಿಯಂತ್ರಿಸುವ ಕಟ್‌ಗಳ ಹಿಂದಿನ ತಾತ್ವಿಕತೆ ಹಾಗೂ ಮೌನದ ಮೂಲಕವೇ ರೂಪುಗೊಳ್ಳುವ ಧ್ವನಿಪ್ರಪಂಚ ಕೇವಲ ತಾಂತ್ರಿಕ ಪರಿಕರಗಳಲ್ಲ. ಪ್ರತಿಯೊಂದೂ ತನ್ನೊಳಗೆ ಸ್ವತಂತ್ರ ಕಲಾತ್ಮಕ ಸಾಧ್ಯತೆಗಳನ್ನು ಹುದುಗಿಸಿಕೊಂಡಿರುವ ಅಭಿವ್ಯಕ್ತಿ ಮಾರ್ಗಗಳು. ಪರದೆಯ ಭೌತಿಕ ಚೌಕಟ್ಟನ್ನು ಮೀರಿ, ಈ ದೃಶ್ಯ-ಶ್ರಾವ್ಯ ಪದರಗಳ ಆಳಕ್ಕೆ ಇಳಿಯುವುದೇ ಗಂಭೀರ ಸಿನೆಮಾ ಅಧ್ಯಯನದ ನಿಜವಾದ ಹುಡುಕಾಟ.

Babu Eshwar Prasad
ಬಾಬು ಈಶ್ವರ್ ಪ್ರಸಾದ್
+ posts

ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಬಾಬು ಈಶ್ವರ್ ಪ್ರಸಾದ್
ಬಾಬು ಈಶ್ವರ್ ಪ್ರಸಾದ್
ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆ ಸುರಕ್ಷತೆ ಕೇವಲ ಮರೀಚಿಕೆ: ರಾಜ್ಯದಲ್ಲಿ ಅಪಘಾತಗಳಿಗೆ ವರ್ಷಕ್ಕೆ 11,000 ಸಾವು

ಕರ್ನಾಟಕದಲ್ಲಿ ರಸ್ತೆ ಸುರಕ್ಷತೆಯು ಆತಂಕಕಾರಿ ಮಟ್ಟ ತಲುಪಿದ್ದು, ರಸ್ತೆ ಅಪಘಾತಗಳಲ್ಲಿ ಪ್ರತಿ...

ವಿಜಯಪುರ |ಬೆರಗು ಪ್ರಕಾಶನದ 2026ನೇ ಸಾಲಿನ ಪ್ರಶಸ್ತಿ ಪ್ರಕಟ: ನಾಲ್ವರು ಸಾಧಕರಿಗೆ ಗೌರವ

ಸಾಹಿತ್ಯ, ವಿಮರ್ಶೆ, ಕಥಾಸಾಹಿತ್ಯ ಹಾಗೂ ಪ್ರಕಾಶನ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ...