‘ಹಿಂದು ಧರ್ಮಕ್ಕೂ ಆರ್‌ಎಸ್‌ಎಸ್‌ ನೋಂದಣಿಗೂ ಎತ್ತಣಿಂದೆತ್ತ ಸಂಬಂಧ?’ ಭಾಗವತ್ ಬೂಟಾಟಿಕೆ ಬಯಲು!

Date:

ಆರ್‌ಎಸ್‌ಎಸ್‌ ಮುಖ್ಯಸ್ಥರ ಹೇಳಿಕೆಯನ್ನು ಸಹಸ್ರಾರು ಮಂದಿ ಖಂಡಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್‌ ಪರಾದರ್ಶಕವಾಗಿ ಇರಬೇಕಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಈ ದೇಶದ ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಪಡೆದ ಪ್ರತಿ ದುಡ್ಡಿನ ಲೆಕ್ಕವನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸುತ್ತಿದ್ದಾರೆ.

“ಸರ್ಕಾರದಿಂದ ಮತ್ತು ಸಾರ್ವಜನಿಕರಿಂದ ಹಣ ಪಡೆಯುವ ಯಾವುದೇ ಸಂಸ್ಥೆ ಸಾಂವಿಧಾನಿಕ ಚೌಕಟ್ಟಿಗೆ ಒಳಪಡಬೇಕು ಮತ್ತು ಕಾನೂನಿನ ಅನ್ವಯ ನೋಂದಣಿ ಮಾಡಿಕೊಳ್ಳಬೇಕು” ಎಂಬ ವಿಷಯವನ್ನು ಪ್ರಸ್ತಾಪಿಸಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿರುವುದು ಸಂಘಪರಿವಾರದ ಪಾಳೆಯದಲ್ಲಿ ತಲ್ಲಣ ಹುಟ್ಟುಹಾಕಿದೆ.

- Advertisement -

ಪಾರದರ್ಶಕತೆ ಇಲ್ಲದೆ ನಡೆಯುತ್ತಿರುವ ಆರ್‌ಎಸ್‌ಎಸ್‌ ಸಂಘಟನೆಯನ್ನು ಮೊದಲಿನಿಂದಲೂ ಪ್ರಿಯಾಂಕ್ ಪ್ರಶ್ನಿಸುತ್ತಾ ಬಂದಿದ್ದಾರೆ. ‘ನೋಂದಣಿ ಮಾಡಿಕೊಳ್ಳದೆ ತೆರಿಗೆ ವಂಚಿಸುತ್ತಿದ್ದಾರೆ’ ಎಂಬ ಆರೋಪ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭಾಗವತ್ ಈ ಸಂಬಂಧ ಪತ್ರಿಕ್ರಿಯೆ ನೀಡಲೇಬೇಕಾದ ಒತ್ತಡ ಸೃಷ್ಟಿಯಾದ ಹಿನ್ನಲೆಯಲ್ಲಿ, ಖರ್ಗೆಯವರು ತಮ್ಮ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಒಂದು ದಿನ ಮುಂಚಿತವಾಗಿಯೇ ನೋಂದಣಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಭಾಗವತ್ ನೀಡಿದ್ದಾರೆ. ಪ್ರಿಯಾಂಕ್ ಅವರು ನಿರಂತರ ಪ್ರಶ್ನಿಸುತ್ತಾ ಬಂದ ಕಾರಣ, ಈ ಬೆಳವಣಿಗೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ನೋಂದಣಿಯ ಅಗತ್ಯತೆಯನ್ನು ತಿರಸ್ಕರಿಸಿರುವ ಭಾಗವತ್, “ಸಂಘವು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದು ಸಾರ್ವಜನಿಕ ನಿಗಾದಿಂದಲೂ ದೂರ ಉಳಿದಿಲ್ಲ. ನಮ್ಮ ಕಾರ್ಯಕರ್ತರು ಜನರೊಂದಿಗೆ ಇರುತ್ತಾರೆ. ಜನರು ಅವರನ್ನು ನಿತ್ಯ ನೋಡುತ್ತಿರುತ್ತಾರೆ. ನಾವು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ರಹಸ್ಯವಾಗಿದ್ದರೆ ಇದೆಲ್ಲಾ ಸಾಧ್ಯವಾಗುವುದಿಲ್ಲ. ನಮ್ಮ ಬಳಿ ರಹಸ್ಯವಾಗಿ ಇಡುವಂಥದ್ದು ಏನೂ ಇಲ್ಲ. ನೋಂದಣಿ ವಿಷಯ ಕೇವಲ ರಾಜಕೀಯ. ಇಂತಹ ಪ್ರಯತ್ನಗಳು ಸಂಘಕ್ಕೆ ಹೊಸದೇನಲ್ಲ. ಸಂಘವು ಸ್ಥಾಪನೆಯಾಗಿ ಹತ್ತು ವರ್ಷ ಆದಾಗಿನಿಂದಲೂ ಈವರೆಗೆ ಇಂಥದ್ದನ್ನೆಲ್ಲ ಎದುರಿಸಿದ್ದೇವೆ. ಈ ರೀತಿ ಏನಾದರೊಂದು ಆಗದಿದ್ದರೆ ನಮಗೆ ಏನೋ ಕೊರತೆಯಿದೆ ಎಂದನಿಸುತ್ತದೆ. ಹಿಂದು ಧರ್ಮವೂ ನೋಂದಣಿಯಾಗಿಲ್ಲ. ಸರ್ಕಾರದ ನಿಧಿ ಪಡೆಯಲು ಬಯಸುವವರಿಗೆ ಮಾತ್ರ ನೋಂದಣಿಯಾಗುವ ಅಗತ್ಯವಿದೆ. ಸಂಘದ ಅಸ್ತಿತ್ವದ ಬಗ್ಗೆ ಸರ್ಕಾರಕ್ಕೂ ತಿಳಿದಿದೆ” ಎಂದಿದ್ದಾರೆ.

ಅಂದರೆ ಹಿಂದು ಧರ್ಮಕ್ಕೂ ನೋಂದಣಿ ಇಲ್ಲ, ಆರ್‌ಎಸ್‌ಎಸ್‌ಗೂ ನೋಂದಣಿ ಇಲ್ಲ ಎಂಬುದು ಅವರ ಸಮರ್ಥನೆ. ಜೊತೆಗೆ ಒಂದು ಸಂಘಟನೆಯನ್ನು ಧರ್ಮಕ್ಕೆ ಹೋಲಿಸಿದ್ದಾರೆ. ಇನ್ನೊಂದೆಡೆ ಸಂಘಟನೆ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಭಾಗವತರ ಈ ಪ್ರತಿಕ್ರಿಯೆ ಭಾರೀ ಟೀಕೆಗೆ ಒಳಗಾಗಿದೆ. “ಧರ್ಮದ ಮುಖವಾಡ ಹೊತ್ತು, ಏನನ್ನು ಮುಚ್ಚಿಡಲು ಭಾಗವತ್ ಯತ್ನಿಸುತ್ತಿದ್ದಾರೆ? ನೋಂದಣಿ ಮಾಡಿಕೊಂಡು ಮುಕ್ತವಾಗಿ ಇರುವುದಕ್ಕೆ ಏನು ಸಮಸ್ಯೆ? ಆರ್‌ಎಸ್‌ಎಸ್‌ ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳುತ್ತಿದೆಯೇ?” ಎಂದು ಜನ ಕೇಳುತ್ತಿದ್ದಾರೆ. ಮುಖ್ಯವಾಗಿ ಜನರು ಮುಂದಿಟ್ಟಿರುವ ಪ್ರಶ್ನೆಗಳು ಆರ್‌ಎಸ್‌ಎಸ್‌ ಮುಖ್ಯಸ್ಥರ ಬೂಟಾಟಿಕೆಯನ್ನು ಬಯಲು ಮಾಡಿದಂತೆ ಕಾಣುತ್ತಿವೆ.

“ಹಿಂದು ಧರ್ಮ ನೋಂದಣಿಯಾಗಿಲ್ಲ ಎನ್ನುವುದು ಹಿಂದು ಧರ್ಮಕ್ಕೆ ಮೋಹನ್ ಭಾಗವತ್ ಮಾಡಿದ ಅವಮಾನವಲ್ಲವೇ” ಎಂದು ಪ್ರಶ್ನಿಸಿದ್ದಾರೆ ಪತ್ರಕರ್ತ ನವೀನ್ ಸೂರಿಂಜೆ.

“ಮೋಹನ್ ಭಾಗವತ್‌ಗೆ ಹಿಂದು ಧರ್ಮ ಮತ್ತು ದೇಶದ ಸಂವಿಧಾನದ ಬಗ್ಗೆ ಕನಿಷ್ಠ ಅರಿವೂ ಇಲ್ಲ ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಹಿಂದು ಧರ್ಮವು ಸಂವಿಧಾನದ ಮಾನ್ಯತೆ ಪಡೆದಿದೆ. ಸಂವಿಧಾನದ ಮಾನ್ಯತೆ ಪಡೆದ ಯಾವುದೇ ಧರ್ಮಕ್ಕೆ ಪ್ರತ್ಯೇಕ ನೋಂದಣಿ ಅಗತ್ಯವಿಲ್ಲ. ಸಂವಿಧಾನವೇ ಈ ನೆಲದಲ್ಲಿ ಪರಮೋಚ್ಚವಾಗಿರುವುದರಿಂದ, ಅಲ್ಲಿ ಮಾನ್ಯತೆ ಪಡೆದ ಬಳಿಕ ರಿಜಿಸ್ಟ್ರೇಶನ್ ಮಾಡಬೇಕಿಲ್ಲ ಎಂಬುದು ಕಾಮನ್ ಸೆನ್ಸ್. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ದ ಧರ್ಮಗಳು ಸಂವಿಧಾನದ ಮಾನ್ಯತೆ ಪಡೆದಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ಸರ್ಕಾರೇತರ ಸಂಘಟನೆಯಾಗಿದ್ದು, ಯಾವುದೇ ಸಾಂವಿಧಾನಿಕ ಮಾನ್ಯತೆ ಹೊಂದಿಲ್ಲ. ಹಾಗಾಗಿ ಸರ್ಕಾರೇತರ ಲಾಭದಾಯಕ ಮತ್ತು ದೇಶದೆಲ್ಲೆಡೆ ಆಸ್ತಿ ಹೊಂದಿರುವ ಆರ್‌ಎಸ್‌ಎಸ್‌ ಸಂಘಟನೆಯ ನೋಂದಣಿ ಕಡ್ಡಾಯವಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂದುವರಿದು, “ಹಿಂದು ಧರ್ಮವೂ ನೋಂದಣಿಯಾಗಿಲ್ಲ ಎಂದು ಮೋಹನ್ ಭಾಗವತ್ ಹೇಳುವುದು ಕೋಟ್ಯಂತರ ಹಿಂದು ಧರ್ಮಿಯರಿಗೆ ಮಾಡುವ ಅವಮಾನವಾಗುತ್ತದೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ದ ಎಂಬ ಪದ ಸಂವಿಧಾನದಲ್ಲೇ ಹಲವು ಬಾರಿ ಉಲ್ಲೇಖಗೊಂಡು, ಪ್ರತ್ಯೇಕ ಕಾಯ್ದೆಗಳಿಗೆ ಮಾನ್ಯತೆ ನೀಡಿದೆ. ಹಿಂದು ಮ್ಯಾರೇಜ್ ಆಕ್ಟ್, ಕ್ರಿಶ್ಚಿಯನ್ ಮ್ಯಾರೇಜ್ ಆಕ್ಟ್, ಮುಸ್ಲಿಂ ಮ್ಯಾರೇಜ್ ಆಕ್ಟ್ ಸೇರಿದಂತೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ದ, ಸಿಖ್ ಧರ್ಮೀಯರ ಪ್ರತ್ಯೇಕ ಕಾಯ್ದೆಗಳು ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಸ್ತಿ ಹಕ್ಕುಗಳು, ವೈಯಕ್ತಿಕ ಕಾನೂನುಗಳು, ಆರಾಧನೆಯ ಹಕ್ಕು, ಪೂಜೆ, ಪ್ರಾರ್ಥನೆಯ ಹಕ್ಕುಗಳು, ದೇವಸ್ಥಾನ/ಮಸೀದಿ/ಚರ್ಚ್ ಹಕ್ಕುಗಳು ಪ್ರತ್ಯೇಕ ಕಾನೂನಿನ ಮೂಲಕ ಸಂವಿಧಾನಿಕ ಮಾನ್ಯತೆ ಪಡೆದಿವೆ. ‘ಧರ್ಮಗಳು ರಿಜಿಸ್ಟರ್ ಆಗದೆಯೇ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಆರ್‌ಎಸ್‌ಎಸ್‌ ಸಂಘಟನೆಯನ್ನೂ ನೋಂದಾಯಿಸದೇ ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತೇವೆ’ ಎನ್ನುವುದು ಮೋಹನ್ ಭಾಗವತ್ ವಾದ! ಹೀಗೆ ಮಾನ್ಯತೆ ಪಡೆಯದೆ ಅಥವಾ ರಿಜಿಸ್ಟರ್ ಆಗದೆ ಧರ್ಮಗಳು ಕಾರ್ಯನಿರ್ವಹಿಸುವುದಾದರೆ ಊರಿಗೊಂದು ಧರ್ಮಗಳು ಹುಟ್ಟಿಕೊಳ್ಳುತ್ತಿದ್ದವು” ಎಂದಿದ್ದಾರೆ ನವೀನ್ ಸೂರಿಂಜೆ.

“ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು ಎಂದು ರಾಜ್ಯ ಸರ್ಕಾರವೇ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೂ ಕೇಂದ್ರ ಸರ್ಕಾರ ಇನ್ನು ಕೂಡಾ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಅಧಿಸೂಚನೆ ಹೊರಡಿಸಿಲ್ಲ. ಹೀಗೆ ಅಧಿಸೂಚನೆ ಹೊರಡಿಸುವುದಕ್ಕೂ ಮೊದಲು ಹತ್ತಾರು ಪ್ರಕ್ರಿಯೆಗಳಿವೆ. ಧರ್ಮವೊಂದರ ಹುಟ್ಟಿನ ಬಗ್ಗೆ ರಾಜ್ಯದ ಶಿಫಾರಸ್ಸು, ಕೇಂದ್ರದ ಅಧಿಸೂಚನೆಗಿಂತ ದೊಡ್ಡ ರಿಜಿಸ್ಟ್ರೇಶನ್ ಪ್ರಕ್ರಿಯೆ ಏನಿದೆ? ಹೊಸದಾಗಿ ಹುಟ್ಟಿಕೊಂಡ ಧರ್ಮ ಹಾಗೆ ಅಧಿಸೂಚನೆಗೊಂಡ ಬಳಿಕ ಸಂವಿಧಾನದಲ್ಲಿ ಮಾನ್ಯತೆ ಪಡೆಯುತ್ತದೆ. ಒಂದು ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸಲು ಘನ ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲದೇ ಇರುವಾಗ ನಮ್ಮದು ‘ಸ್ವತಂತ್ರ ಸಂಘಟನೆ’ ಎಂದು ಘೋಷಿಸಿಕೊಳ್ಳಲು ಆರ್‌ಎಸ್‌ಎಸ್‌ಗೆ ಹೇಗೆ ಸಾಧ್ಯ” ಎಂದು ಪ್ರಶ್ನಿಸುತ್ತಾರೆ ಸೂರಿಂಜೆ.

ರಾಜಕೀಯ ವಿಶ್ಲೇಷಕ ಬಸವರಾಜ್ ಇಟ್ನಾಳ್ ಪ್ರತಿಕ್ರಿಯಿಸಿ, “ಈಗ ನೋಂದಣಿ ಮಾಡಿಕೊಂಡರೆ, ಸಂಘದ ಸಂವಿಧಾನ ಮತ್ತು ಸದಸ್ಯತ್ವ ವಿಧಾನವಷ್ಟೇ ಅಲ್ಲದೇ, ಪದಾಧಿಕಾರಿಗಳ ಚುನಾವಣಾ ಕ್ರಮ, ಇತ್ಯಾದಿ ಎಲ್ಲ ಹೇಳಬೇಕಾಗುತ್ತದೆ. ಹಾಗೆ ಮಾಡಿದರೆ ಇಲ್ಲಿಯವರೆಗೆ ಕೇವಲ ಚಿತ್ಪಾವನ ಬ್ರಾಹ್ಮಣರೇ ಸರಸಂಘ ಚಾಲಕ ಹುದ್ದೆಯಲ್ಲಿ ಇದ್ದಂತೆ ಮುಂದುವರೆಯುವುದು ಅಸಾಧ್ಯ ಆಗುತ್ತದೆ. ಸಂಘದಲ್ಲಿ ಸದಸ್ಯತ್ವ ಮತ್ತು ಆಂತರಿಕ ಚುನಾವಣಾ ವ್ಯವಸ್ಥೆ ಬಂದರೆ ಅಲ್ಲಿ ದಲಿತ ಮತ್ತು ಮುಸ್ಲಿಂ ಸದಸ್ಯರೂ ಕೂಡ ಸರಸಂಘ ಚಾಲಕರಾಗುವ ಅವಕಾಶ ಉಂಟಾಗುತ್ತದೆ. ಬಹಳ ಮುಖ್ಯವಾಗಿ ನಮ್ಮ ದಾಖಲೆಗಳೇ ಇಲ್ಲ ಎಂಬ ಸಬೂಬು ಹೇಳಿಕೊಂಡು ಆರೋಪಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೋಹನ ಭಾಗವತರ ಪುರಾಣಕ್ಕೆ ಸಂವಿಧಾನದಲ್ಲಿ ಜಾಗ ಇಲ್ಲ. ನೋಂದಣಿ ಇಲ್ಲದಿದ್ದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ಕಾನೂನು ಬಾಹಿರ ಸಂಘಟನೆ. ಎಲ್ಲರಿಗೂ ಪಾಠ ಹೇಳುವವರು, ಈ ನೆಲದ ಕಾನೂನಿಗೆ ಗೌರವ ಕೊಡಬೇಕು” ಎಂದು ತಿವಿದಿದ್ದಾರೆ.

ಬರೆಹಗಾರ ಕುಂಟಾಡಿ ನಿತೇಶ್ ಹೀಗೆ ಬರೆಯುತ್ತಾರೆ: “ಆರ್‌ಎಸ್‌ಎಸ್‌ ಬೆಂಬಲಿತ ಬಿಜೆಪಿ ಮಂದಿ ಆಮ್ನೆಸ್ಟಿ ಅಥವಾ ಗ್ರೀನ್ಪೀಸ್‌ನಂತಹ ಅಂತಾರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಗಳಿಂದ (NGO) ಪ್ರತಿಯೊಂದು ಪೈಸೆಗೂ ಲೆಕ್ಕ ಕೇಳುವುದು, ಎಫ್‌ಸಿಆರ್‌ಎ (FCRA) ನಿಯಮಗಳ ಹೆಸರಲ್ಲಿ ಅವುಗಳ ವಿದೇಶಿ ಧನಸಹಾಯವನ್ನು ತಡೆದು ಸಂಪೂರ್ಣ ಪಾರದರ್ಶಕತೆ ಬಯಸುವುದು ಒಂದು ದೊಡ್ಡ ಜೋಕ್. ಏಕೆಂದರೆ ಇದೇ ನೀತಿಯನ್ನು ತಮಗೆ ಅನ್ವಯಿಸಿಕೊಳ್ಳುವಾಗ ಮಾತ್ರ ಇವರು ‘ನಮ್ಮದು ಕೇವಲ ಒಂದು ಸಾಂಸ್ಕೃತಿಕ ಸಂಸ್ಥೆ, ನಮಗೆ ನೋಂದಣಿಯ ಅಗತ್ಯವೇ ಇಲ್ಲ’ ಎಂದು ನುಣುಚಿಕೊಳ್ಳುತ್ತಾರೆ! ಲಾಜಿಕ್ ನೋಡಿ ಹೇಗೆ ವರ್ಕ್ ಆಗುತ್ತೆ ಅಂದ್ರೆ ದೇಶಾದ್ಯಂತ 60,000ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, 50 ರಿಂದ 60 ಲಕ್ಷಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಮುನ್ನಡೆಸುತ್ತಾ, ದೇಶದ ರಾಜಕೀಯ ಮತ್ತು ಆಡಳಿತದ ದಿಕ್ಕನ್ನೇ ನಿರ್ಧರಿಸುವಷ್ಟು ಅಗಾಧ ಶಕ್ತಿ ಹೊಂದಿರುವ ಈ ಸಂಸ್ಥೆ ವಾರ್ಷಿಕವಾಗಿ ‘ಗುರುದಕ್ಷಿಣೆ’ಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ದೇಣಿಗೆಯನ್ನು ಯಾವುದೇ ಆಡಿಟ್ ಅಥವಾ ಆರ್‌ಟಿಐ (RTI) ವ್ಯಾಪ್ತಿಯೇ ಇಲ್ಲದೆ ತೆರಿಗೆ ಇಲಾಖೆಯ ಸೂಕ್ಷ್ಮದರ್ಶಕದಿಂದ ಇದು ಬಹಳ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತದೆ. ಅಂದರೆ, ಬೇರೆ ಎನ್‌ಜಿಒಗಳು ಒಂದು ಸಣ್ಣ ತಪ್ಪು ಮಾಡಿದರೂ ಅಥವಾ ಒಂದು ಫಾರ್ಮ್ ತಡವಾಗಿ ಸಬ್ಮಿಟ್ ಮಾಡಿದರೂ ಸಾಕು, ಅವರ ಅಕೌಂಟ್ ಫ್ರೀಜ್ ಮಾಡಿ ದೇಶದ್ರೋಹದ ಪಟ್ಟ ಕಟ್ಟಲಾಗುತ್ತದೆ. ಆದರೆ, ದೇಶದ ಅತಿ ದೊಡ್ಡ ಮತ್ತು ಶ್ರೀಮಂತ ಸಂಘಟನೆಯು ಯಾವುದೇ ಕಾಯ್ದೆ ಕಾನೂನುಗಳ ನೋಂದಣಿ ಇಲ್ಲದೆ, ವಿದ್ಯಾಭಾರತಿ ಅಥವಾ ಸೇವಾಭಾರತಿಯಂತಹ ಸಾವಿರಾರು ಅಂಗಸಂಸ್ಥೆಗಳ ಜಾಲದ ಮೂಲಕ ನಿರಾಯಾಸವಾಗಿ ಸಾವಿರಾರು ಕೋಟಿ ರೂಪಾಯಿಗಳ ಹಣದ ವಹಿವಾಟು ನಡೆಸುವುದನ್ನು ಮಾತ್ರ ದೇಶಭಕ್ತಿಯ ಪರಮಾವಧಿ ಎಂದು ಕೊಂಡಾಡಲಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಇವರ ನೀತಿ ಪಾಠದಲ್ಲಿ ಅಕೌಂಟೆಬಿಲಿಟಿ ಮತ್ತು ಸ್ಕ್ರೂಟಿನಿ ಎನ್ನುವುದು ಕೇವಲ ಸರ್ಕಾರವನ್ನು ಪ್ರಶ್ನಿಸುವವರಿಗೆ ಮಾತ್ರ ಮೀಸಲಾಗಿದೆ. ಅದೇ ಸರ್ಕಾರದ ರಿಮೋಟ್ ಕಂಟ್ರೋಲ್ ಕೈಯಲ್ಲಿಟ್ಟಿಕೊಂಡವರಿಗೆ ಕಾನೂನಿನಿಂದ ಅಘೋಷಿತ ಮುಕ್ತಿ ಸಿಕ್ಕಿಬಿಡುತ್ತದೆ”.

ಈ ವರದಿ ಓದಿದ್ದೀರಾ?: ‘ನಿಮ್ಮ ಲೀಗಲ್ ಸ್ಟೇಟಸ್ ಏನು’; ಆರ್‌ಎಸ್‌ಎಸ್‌ ಮುಖ್ಯಸ್ಥರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಖಡಕ್ ಪತ್ರ

ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಹೀಗೆ ಅಭಿಪ್ರಾಯಪಡುತ್ತಾರೆ: “RSS ಭಾರತದ ಅತಿದೊಡ್ಡ ಸರ್ಕಾರೇತರ ಸ್ವಯಂಸೇವಾ ಸಂಸ್ಥೆ, ಅಂದರೆ NGO (Non Government Organisation). ಅದರ ಮುಖ್ಯಸ್ಥ ಮೋಹನ ಭಾಗವತರು ಹೇಳ್ತಾ ಇದ್ದಾರೆ – ‘ಹಿಂದು ಧರ್ಮ ಕೂಡಾ ನೋಂದಣಿ ಆಗಿಲ್ಲ, RSS ಕೂಡಾ ನೋಂದಣಿ ಆಗುವುದು ಅಗತ್ಯವಿಲ್ಲ’. ಇದೇ ವಾದವನ್ನು ಬೇರೆ NGO ಗಳೂ ಮುಂದೆ ಮಾಡಬಹುದು. ‘ಹಿಂದು ಧರ್ಮವೂ ನೋಂದಣಿ ಆಗಿಲ್ಲ, ಹಾಗಾಗಿ ನಮ್ಮ ಸಂಸ್ಥೆಯೂ ನೋಂದಣಿ ಆಗೋದಿಲ್ಲ’ ಎಂದು ಎಲ್ಲರೂ ಹೇಳಬಹುದು.”

“ಹಿಂದು, ಸಿಖ್, ಇಸ್ಲಾಮ್, ಕ್ರೈಸ್ತ, ಜೈನ, ಬೌದ್ಧ- ಹೀಗೆ ಯಾವ ಧರ್ಮವೂ ನೋಂದಣಿ ಆಗಿಲ್ಲ. ಧರ್ಮಗಳು ನೋಂದಣಿ ಆಗಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರೂ ಹೇಳುತ್ತಿಲ್ಲ. ಅವರು ಹೇಳ್ತಾ ಇರೋದು- ‘ನಿಮ್ಮ ಸಂಸ್ಥೆ NGO ಆಗಿರೋದರಿಂದ ಸಂವಿಧಾನದ ಮತ್ತು ಈ ನೆಲದ ಕಾನೂನಿನ ಪ್ರಕಾರ ನೋಂದಣಿ ಯಾಕೆ ಮಾಡಿಲ್ಲ?’ ಖರ್ಗೆ ಹೇಳ್ತಾ ಇರೋದು ರಾಜಕೀಯವೇ ಇರಬಹುದು. ಆದರೆ ಕಾನೂನು ಮತ್ತು ಸಂವಿಧಾನದ ಪ್ರಕಾರ ಅವರು ಹೇಳುತ್ತಾ ಇರೋದು ಸರಿ ಇದೆ. ಮೋಹನ ಭಾಗವತರಿಗೆ ಕೇಂದ್ರ ಸರಕಾರ Z+ category ರಕ್ಷಣೆ ಒದಗಿಸಿದೆ. ಇದು ಕೇಂದ್ರ ಸರ್ಕಾರದ ಪ್ರಮುಖ ಮಂತ್ರಿಗಳಿಗೆ ಒದಗಿಸುವ ರಕ್ಷಣಾ ವ್ಯವಸ್ಥೆ. RSS ಮುಖ್ಯಸ್ಥರ ಸುತ್ತ 55 ಮಂದಿ NSG ಕಮಾಂಡೋಗಳು, CISF ಅಧಿಕಾರಿಗಳು, ಎಸ್ಕಾರ್ಟ್, ಸಂಪರ್ಕ ವ್ಯವಸ್ಥೆ, ಬುಲೆಟ್ ಪ್ರೂಫ್ ವಾಹನಗಳ ದಂಡೇ ಇರುತ್ತದೆ. ಈ ಭದ್ರತೆಗೆ ಸರ್ಕಾರ ವರ್ಷಕ್ಕೆ 5-6 ಕೋಟಿ ರೂಪಾಯಿ (tax payer’s money) ಖರ್ಚು ಮಾಡ್ತಾ ಇದೆ. ಭಾರತದಲ್ಲಿ ಸದ್ಯಕ್ಕೆ ಪ್ರಧಾನಿಗಿಂತಲೂ ಹೆಚ್ಚು influence ಇರೋ ವ್ಯಕ್ತಿ RSS ಮುಖ್ಯಸ್ಥ ಮೋಹನ್ ಭಾಗವತ್ ಅನ್ನಬಹುದು. ಹಾಗಾಗಿ RSS ಅನ್ನು ನೋಂದಣಿ ಮಾಡದಿದ್ದರೆ ಅವರನ್ನು ಯಾವ ಸರ್ಕಾರಿ ಅಧಿಕಾರಿಗಳೂ ಏನೂ ಮಾಡಲು ಸಾಧ್ಯವಿಲ್ಲ”.

ಆರ್‌ಎಸ್‌ಎಸ್‌ ಮುಖ್ಯಸ್ಥರ ಹೇಳಿಕೆಯನ್ನು ಸಹಸ್ರಾರು ಮಂದಿ ಖಂಡಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್‌ ಪರಾದರ್ಶಕವಾಗಿ ಇರಬೇಕಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಈ ದೇಶದ ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಪಡೆದ ಪ್ರತಿ ದುಡ್ಡಿನ ಲೆಕ್ಕವನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸುತ್ತಿದ್ದಾರೆ.

ಇತ್ತ ಆರ್‌ಎಸ್‌ಎಸ್‌ ಪಾರದರ್ಶಕವಾಗಿದೆ ಎಂದು ಭಾಗವತ್ ಪ್ರತಿಪಾದಿಸುತ್ತಿರುವುದು ನಗೆಪಾಟಲಿಗೆ ಈಡಾಗಿದೆ. ಕೆಲವು ತಿಂಗಳ ಹಿಂದೆ ‘ಕ್ಯಾರವಾನ್’ ಪತ್ರಿಕೆ ಪ್ರಕಟಿಸಿದ ಸುದೀರ್ಘ ತನಿಖಾ ವರದಿಯು ಆರ್‌ಎಸ್‌ಎಸ್‌ ಹೇಗೆ ಸಾವಿರಾರು ಸಂಘಟನೆಗಳ ಜಾಲವನ್ನು ನಿರ್ವಹಿಸುತ್ತಿದೆ ಮತ್ತು ಆ ಸಂಬಂಧವನ್ನು ಗೌಪ್ಯವಾಗಿ ಕಾಪಾಡುತ್ತಿದೆ ಎಂಬುದನ್ನು ವಿವರಿಸಿತ್ತು.

“ಸಾವಿರಾರು ಇತರ ಸಂಘಟನೆಗಳಿಂದ ‘ತಂತ್ರಗಾರಿಕೆಯ ಅಂತರ’ ಕಾಯ್ದುಕೊಳ್ಳುವ ಮೂಲಕ ಸಂಘವು ಹಲವು ರೀತಿಯಲ್ಲಿ ಲಾಭ ಪಡೆಯುತ್ತಿದೆ. ಇದರಿಂದಾಗಿ ಕಾನೂನು ಅಥವಾ ಆರ್ಥಿಕ ಪರಿಶೀಲನೆಯಿಂದ ದೂರವಿರಲು ಸಂಘಕ್ಕೆ ಅನುಕೂಲವಾಗಿದೆ. ತನ್ನ ಕೆಲಸಗಳನ್ನು ಇತರರಿಗೆ ವಹಿಸಿಕೊಡುವ ಮೂಲಕ, ಸಂದರ್ಭ ಬಂದಾಗ ‘ನಮಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಪುರಾವೆ ಸಹಿತ ನಿರಾಕರಿಸುವ ಅವಕಾಶವನ್ನು ಇದು ಒದಗಿಸುತ್ತದೆ. ನಾಯಕತ್ವದ ಪೈಪೋಟಿಗಳನ್ನು ಸರಿಹೊಂದಿಸುವ ಮೂಲಕ ಆಂತರಿಕ ಒತ್ತಡವನ್ನು ನಿರ್ವಹಿಸಲು ಇದು ನೆರವಾಗುತ್ತದೆ” ಎಂದು ಕ್ಯಾರವಾನ್ ವಿವರಿಸಿದೆ.

“ಏಕಕಾಲಕ್ಕೆ ಎಲ್ಲರಿಗೂ ಬೇಕಾದಂತೆ ಬೇರೆ ಬೇರೆ ರೀತಿಯ ಸಂದೇಶಗಳನ್ನು ನೀಡಲು ಇದು ಅನುವು ಮಾಡಿಕೊಡುತ್ತದೆ. ಇದೊಂದು ‘ಸ್ವಿಚ್ಬೋರ್ಡ್’ನಂತೆ ಕೆಲಸ ಮಾಡುತ್ತದೆ; ಅಗತ್ಯವಿದ್ದಾಗ ಈ ಸಂಘಟನೆಗಳ ಸಂಪರ್ಕವನ್ನು ಸಕ್ರಿಯಗೊಳಿಸಬಹುದು ಅಥವಾ ಮರೆಮಾಚಬಹುದು. ಈ ವಿಸ್ತೃತವಾದ, ಆದರೆ ಗುಪ್ತವಾದ ಕಾರ್ಯ ವಿಭಜನೆಯು ಸಮಾಜದಲ್ಲಿ ಸಂಘದ ವಿಸ್ತರಣೆಗೆ ನಿರ್ಣಾಯಕವಾಗಿ ಪರಿಣಮಿಸಿದೆ. ಈ ಮೂಲಕ ಅದು ಏಕಕಾಲಕ್ಕೆ ಅನೇಕ ವಲಯಗಳಲ್ಲಿ ಬಲಪಂಥೀಯ ಉಪಸ್ಥಿತಿಯನ್ನು ಖಚಿತಪಡಿಸುತ್ತವೆ, ವೈವಿಧ್ಯಮಯ ಪ್ರೇಕ್ಷಕರನ್ನು ತಲುಪುತ್ತವೆ, ಕ್ಷೇತ್ರ ವಿಸ್ತರಣೆಗೆ ಅವಕಾಶಗಳನ್ನು ತೆರೆಯುತ್ತದೆ ಮತ್ತು ಸಂಘಕ್ಕಾಗಿ ಹೊಸ ನೆಲೆಗಟ್ಟುಗಳನ್ನು ರೂಪಿಸುತ್ತದೆ” ಎಂದು ಕ್ಯಾರವಾನ್ ಬಹಿರಂಗಪಡಿಸಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...