“ಸಾಮಾನ್ಯ ನಾಗರಿಕರು, ಸಫಾಯಿ ಕರ್ಮಚಾರಿಗಳೂ ನೋಂದಣಿ ಮಾಡಿಸಬೇಕು, ತೆರಿಗೆ ಕಟ್ಟಬೇಕು ಎಂದಾದಾಗ ಆರ್‌ಎಸ್‌ಎಸ್‌ಗೆ ವಿನಾಯಿತಿ ಏಕೆ? ಬೃಹತ್ ಮಟ್ಟದಲ್ಲಿ ಸಾರ್ವಜನಿಕವಾಗಿ ಕಾರ್ಯಾಚರಿಸುವ ಸಂಘಟನೆಯು ಇಂದಿಗೂ ಯಾವುದೇ ಔಪಚಾರಿಕ ನೋಂದಣಿ ಮಾಡಿಕೊಳ್ಳದೆ, ಅನಾಮಧೇಯವಾಗಿ ಉಳಿದಿರುವುದರ ಹಿಂದಿನ ‘ಕಾನೂನು ಮತ್ತು ಸಾಂವಿಧಾನಿಕ’ ಆಧಾರಗಳೇನು” ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ತನ್ನ ಅಸ್ತಿತ್ವದ 100ನೇ ವರ್ಷವನ್ನು ಆಚರಿಸಿಕೊಳ್ಳುತ್ತಿದೆ. ಇದೇ ಸಮಯದಲ್ಲಿ, ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಗಂಭೀರ ಪತ್ರ ಬರೆದಿದ್ದಾರೆ. ಆರ್‌ಎಸ್‌ಎಸ್‌ನ ಕಾನೂನು ಆಧಾರವನ್ನು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ, ಆರ್‌ಎಸ್‌ಎಸ್‌ನ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ (ABPS) ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ, ಕಳೆದ ವರ್ಷ (2025) ಕರ್ನಾಟಕದಲ್ಲಿ ಆರ್‌ಎಸ್‌ಎಸ್ ದಿನನಿತ್ಯ 4,127 ಶಾಖೆಗಳು, 1,389 ವಾರದ ಸಮಾಗಮಗಳು ಹಾಗೂ 60 ಮಾಸಿಕ ಮಂಡಳಿಗಳನ್ನು ನಡೆಸಿದೆ. ಗಣವೇಷಧಾರಿಗಳಾದ 2.2 ಲಕ್ಷಕ್ಕೂ ಅಧಿಕ ಸ್ವಯಂಸೇವಕರು 562 ಪಥಸಂಚಲನಗಳನ್ನು ನಡೆಸಿದ್ದಾರೆ ಎಂದು ಹೇಳಿಕೊಂಡಿದೆ.
ಆರ್‌ಎಸ್‌ಎಸ್‌ನ ಈ ವರದಿಯನ್ನೇ ಆಧರಿಸಿ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದು, ಹಲವು ಪ್ರಶ್ನೆಗಳನ್ನು ಮೋಹನ್ ಭಾಗವತ್ ಮುಂದಿಟ್ಟಿದ್ದಾರೆ. “ಇಷ್ಟು ದೊಡ್ಡ ಪ್ರಮಾಣದಲ್ಲಿ ದಿನನಿತ್ಯ ಜನರನ್ನು ಸಜ್ಜುಗೊಳಿಸುವ, ಪಥಸಂಚಲನ ನಡೆಸುವ ಹಾಗೂ ರಾಜ್ಯಾದ್ಯಂತ ಆಳವಾಗಿ ಬೇರೂರಿರುವ ನಿಮ್ಮ ಜಾಲವನ್ನು ಕೇವಲ ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ” ಎಂದು ಖರ್ಗೆ ಹೇಳಿದ್ದಾರೆ.
“ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆಯು ಕಾನೂನಿಗಿಂತ ಮಿಗಿಲಲ್ಲ. ಆದರೂ, ನೋಂದಣಿ ಮಾಡಿಕೊಳ್ಳದ ಆರ್‌ಎಸ್‌ಎಸ್ ಅಗತ್ಯ ಮಾಹಿತಿಗಳನ್ನು ದೇಶದ ಮುಂದಿಡಬೇಕು” ಎಂದು ಆಗ್ರಹಿಸಿರುವ ಪ್ರಿಯಾಂಕ್ ಖರ್ಗೆ, 8 ಪ್ರಶ್ನೆಗಳನ್ನು ಕೇಳಿದ್ದಾರೆ.
1. ಆರ್‌ಎಸ್‌ಎಸ್‌ನ ಕಾನೂನುಬದ್ಧ ಸ್ಥಿತಿಗತಿ (Legal Status) ಮತ್ತು ಸಾಂಸ್ಥಿಕ ರಚನೆ ಏನು?
2. ಸಂಘಟನೆಯ ಅಧಿಕೃತ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಯಾರು?
3. ದೇಶ-ವಿದೇಶಗಳಿಂದ ಬರುವ ಕೋಟ್ಯಂತರ ರೂಪಾಯಿ ದೇಣಿಗೆ ಮತ್ತು ಆದಾಯದ ಮೂಲಗಳೇನು?
4. ಸಂಘಟನೆಯ ಒಟ್ಟು ವೆಚ್ಚ ಹಾಗೂ ಆಸ್ತಿಗಳ ಸಂಪೂರ್ಣ ವಿವರಗಳೇನು?
5. ಕಾನೂನಿನ ಪ್ರಕಾರ ಆರ್‌ಎಸ್‌ಎಸ್ ಅನ್ವಯವಾಗುವ ತೆರಿಗೆಗಳನ್ನು ಪಾವತಿಸುತ್ತಿದೆಯೇ?
6. ಯಾವುದೇ ಔಪಚಾರಿಕ ನೋಂದಣಿ ಇಲ್ಲದೆ ಇಷ್ಟೊಂದು ಚಟುವಟಿಕೆ ನಡೆಸಲು ಇರುವ ಕಾನೂನು ಆಧಾರವೇನು?
7. ಸಾರ್ವಜನಿಕ ಹೊಣೆಗಾರಿಕೆ ಇಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುವ ಹಕ್ಕನ್ನು ನೀಡುವ ಸಾಂವಿಧಾನಿಕ ಚೌಕಟ್ಟು ಯಾವುದು?
8. ರಾಜ್ಯದಲ್ಲಿ ನಡೆಯುವ ಪಥಸಂಚಲನಗಳು, ಬೃಹತ್ ಸಮಾವೇಶಗಳಿಗೆ ಪಡೆಯುವ ಕಾನೂನಾತ್ಮಕ ಅನುಮತಿಗಳ ವಿವರಗಳೇನು?
ಪತ್ರದಲ್ಲಿ ಅತ್ಯಂತ ತೀಕ್ಷ್ಣವಾದ ಉದಾಹರಣೆಗಳನ್ನು ನೀಡಿರುವ ಪ್ರಿಯಾಂಕ್ ಖರ್ಗೆ, “ಭಾರತದಲ್ಲಿ ಒಬ್ಬ ಸಫಾಯಿ ಕರ್ಮಚಾರಿಯೂ ಸಹ ಸರ್ಕಾರದ ಸಣ್ಣ ಸೌಲಭ್ಯ ಪಡೆಯಲು ನೋಂದಣಿ ಮಾಡಿಸಿಕೊಳ್ಳಬೇಕು. ದೇಶದ ಪ್ರತಿಯೊಂದು ಧಾರ್ಮಿಕ ಸಂಸ್ಥೆ, ಟ್ರಸ್ಟ್, ಎನ್‌ಜಿಒ ಹಾಗೂ ಸಣ್ಣ ಸಂಘಟನೆಗಳೂ ತಮ್ಮ ಲೆಕ್ಕಪರಿಶೋಧನೆ ಮಾಡಿಸಿ, ಆದಾಯದ ಮೂಲವನ್ನು ಬಹಿರಂಗಪಡಿಸಿ, ತೆರಿಗೆ ಕಟ್ಟಬೇಕು. ಹೀಗಿರುವಾಗ ಆರ್‌ಎಸ್‌ಎಸ್‌ಗೆ ಮಾತ್ರ ಈ ನಿಯಮಗಳಿಂದ ವಿನಾಯಿತಿ ಏಕೆ” ಎಂದು ಪ್ರಶ್ನಿಸಿದ್ದಾರೆ.
Dear Shri Mohan Bhagwat ji,
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 15, 2026
My letter will reach you shortly. However, I thought it was important to draw your attention to this matter early.
——————————-
Firstly, congratulations to the RSS on completing 100 years.
An organisation that claims over 60,000 shakhas and crores of… pic.twitter.com/IZy4oeKdMp
“ರಾಷ್ಟ್ರೀಯತೆ, ಶಿಸ್ತು ಮತ್ತು ಕರ್ತವ್ಯದ ಬಗ್ಗೆ ಸದಾ ಸಾರ್ವಜನಿಕರಿಗೆ ಬೋಧಿಸುವ ಆರ್‌ಎಸ್‌ಎಸ್, ಮೊದಲು ತಾನು ಸಂವಿಧಾನಕ್ಕೆ ಗೌರವ ನೀಡಿ ಆದರ್ಶಪ್ರಾಯವಾಗಿ ನಡೆದುಕೊಳ್ಳಬೇಕು. ಸಾಮಾನ್ಯ ಜನರಿಗೆ ನಿಯಮ ಪಾಲಿಸಲು ಹೇಳುವ ಸಂಸ್ಥೆ, ತನಗೆ ಮಾತ್ರ ಅದರಿಂದ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ
“ಆರ್‌ಎಸ್‌ಎಸ್ ತನ್ನ 100ನೇ ವರ್ಷದ ಆಚರಣೆಯನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ ‘ಸಾಂವಿಧಾನಿಕ ಆತ್ಮಾವಲೋಕನ’ಕ್ಕೆ ಬಳಸಿಕೊಳ್ಳಬೇಕು. ತನ್ನ 100ನೇ ವರ್ಷದಲ್ಲಿ ಆರ್‌ಎಸ್‌ಎಸ್ ಭಾರತ ದೇಶಕ್ಕೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವ ಎಂದರೆ—ತನ್ನನ್ನು ತಾನು ಕಾನೂನಿನ ಅಡಿಯಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಳ್ಳುವುದು, ತನ್ನ ಚಟುವಟಿಕೆ ಹಾಗೂ ಹಣಕಾಸಿನ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಹಾಗೂ ಭಾರತೀಯ ಕಾನೂನಿನ ಚೌಕಟ್ಟಿನೊಳಗೆ ಜವಾಬ್ದಾರಿಯುತ ಸಂಸ್ಥೆಯಾಗಿ ಕೆಲಸ ಮಾಡುವುದು” ಎಂದು ಪತ್ರದಲ್ಲಿ ಬರೆದಿದ್ದಾರೆ.
ಮಾತ್ರವಲ್ಲದೆ, “ಈ ಎಲ್ಲ ವಿಷಯಗಳ ಕುರಿತು ಮುಖಾಮುಖಿ ಚರ್ಚೆ ನಡೆಸಲು ಆರ್‌ಎಸ್‌ಎಸ್ ತನ್ನ ಅಧಿಕೃತ ಪದಾಧಿಕಾರಿಗಳನ್ನು ನಿಯೋಜಿಸಬೇಕು. ಈ ಪತ್ರಕ್ಕೆ ಔಪಚಾರಿಕ ಪ್ರತಿಕ್ರಿಯೆ ನೀಡಬೇಕು” ಎಂದು ಖರ್ಗೆ ಆಗ್ರಹಿಸಿದ್ದಾರೆ.



