ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

Date:

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ! ರಾಯಚೂರಿನ ತಿಡಿಗೋಳ ಘಟನೆ ಮನುಷ್ಯತ್ವ, ಸಮಾನತೆ ಮತ್ತು ಸಂವಿಧಾನದ ಆಶಯಗಳ ಕುರಿತು ನಮ್ಮ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ತುರ್ತನ್ನು ಎತ್ತಿ ತೋರಿಸಿದೆ.

ಕೆಲವೊಂದು ಹಳ್ಳಿಗಳೆಂದರೆ ಕೇವಲ ನಾಲ್ಕು ಬೀದಿಗಳ ಸಮೂಹವಲ್ಲ; ಅವು ಸಹಬಾಳ್ವೆ, ಸಹೋದರತೆ ಮತ್ತು ಸೌಹಾರ್ದದ ಜೀವಂತ ನೆಲೆಗಳಾಗಿವೆ. ಇಂದಿಗೂ ಇಂತಹ ಕೆಲವು ಹಳ್ಳಿಗಳಲ್ಲಿ ಹಿಂದೂ–ಮುಸ್ಲಿಂ ಎಂಬ ಧರ್ಮದ ಭೇದವಿಲ್ಲದೆ ಎಲ್ಲರೂ ಒಂದೇ ಊರಿನ ಮಕ್ಕಳಂತೆ ಬದುಕುತ್ತಿದ್ದಾರೆ. ಮೊಹರಂ ಬಂದರೆ ಹಿಂದೂಗಳು ತಾಬೂತಿಗೆ ಹೆಗಲು ಕೊಡುತ್ತಾರೆ; ದಸರಾ ಬಂದರೆ ಮುಸ್ಲಿಮರು ಮಂಟಪ ಕಟ್ಟಲು ಕೈಜೋಡಿಸುತ್ತಾರೆ. ಒಬ್ಬರ ಮನೆಯಲ್ಲಿ ಮದುವೆಯಾದರೆ ಮತ್ತೊಬ್ಬರ ಮನೆಯಲ್ಲೂ ಸಂಭ್ರಮ; ಯಾರಾದರೂ ಸಾವಿಗೀಡಾದರೆ ಇಡೀ ಊರೇ ದುಃಖದಲ್ಲಿ ಭಾಗಿಯಾಗುತ್ತದೆ. ಒಬ್ಬರ ಹಬ್ಬಕ್ಕೆ ಇನ್ನೊಬ್ಬರು ನೆರವಾಗುತ್ತಾರೆ. ಹೊಲದ ಬದುಗಳಲ್ಲಿ, ಗಲ್ಲಿಯ ಕಟ್ಟೆಗಳ ಮೇಲೆ ಬೆಳೆದದ್ದು ಕೇವಲ ಪರಿಚಯವಲ್ಲ, ನಿಜವಾದ ಸಹೋದರತೆ.

- Advertisement -

ಇದು ನಮ್ಮ ಹಳ್ಳಿಗಳ ಸೌಹಾರ್ದದ ಸೊಬಗು, ಸಂಸ್ಕೃತಿಯ ಸೌಂದರ್ಯ ಮತ್ತು ಮಣ್ಣಿನ ಮಮತೆಯ ಪ್ರತೀಕವಾಗಿದೆ. ಧರ್ಮಗಳು ಬೇರೆಬೇರೆಯಾಗಿದ್ದರೂ ಬದುಕಿನ ನೋವು–ನಲಿವುಗಳು ಮಾತ್ರ ಎಲ್ಲರಿಗೂ ಒಂದೇ ಆಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಆದರೆ ಇದೇ ಸಂದರ್ಭದಲ್ಲಿ ಕೆಲವು ಹಳ್ಳಿಗಳಲ್ಲಿ ಜಾತೀಯತೆಯ ಭೂತದ ಬೇರುಗಳು ಆಳವಾಗಿ ಬೇರೂರಿವೆ. ಅಲ್ಲಿ ಮನುಷ್ಯನನ್ನು ಮನುಷ್ಯನಾಗಿ ಕಾಣುವ ವಿಶಾಲ ಮನೋಭಾವಕ್ಕಿಂತ ಜಾತಿಯ ಅಹಂಕಾರವೇ ಮೇಲುಗೈ ಸಾಧಿಸಿದೆ. ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ ಆಚರಿಸುವುದು, ದೇವಸ್ಥಾನ ಪ್ರವೇಶ ನಿರಾಕರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ತಾರತಮ್ಯ ಮಾಡುವುದು, ಸಾಮಾಜಿಕ ಬಹಿಷ್ಕಾರ ಹಾಕುವುದು ಮುಂತಾದ ಅಮಾನವೀಯ ಘಟನೆಗಳು ಇಂದಿಗೂ ನಡೆಯುತ್ತಿವೆ. ಒಂದೆಡೆ ಧರ್ಮದ ಭೇದ ಮರೆತು ಹೆಗಲಿಗೆ ಹೆಗಲು ಕೊಟ್ಟು ಬದುಕುವ ಸೌಹಾರ್ದದ ಹಳ್ಳಿಗಳಿದ್ದರೆ, ಇನ್ನೊಂದೆಡೆ ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ದೂರವಿಡುವ ಮನಸ್ಥಿತಿಯೂ ಜೀವಂತವಾಗಿದೆ. ಈ ವೈರುಧ್ಯವೇ ನಮ್ಮ ಸಮಾಜದ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ.

Advertisements

ಇಂದಿಗೂ ಬೆಳಗಾದರೆ ಹಳ್ಳಿಗಳ ಗುಡಿ–ಗೋಪುರಗಳ ಮೇಲೆ ಮೈಕ್‌ಗಳಲ್ಲಿ ಸುಪ್ರಭಾತ, ದೇವರ ನಾಮಸ್ಮರಣೆ, ಭಜನೆ ಮತ್ತು ತತ್ವಪದಗಳ ಗಾಯನ ಮೊಳಗುತ್ತದೆ. ಬದುಕಿನ ಸಾರ, ಮನುಷ್ಯತ್ವದ ಮೌಲ್ಯ, ನೀತಿ–ನಿಯಮ, ಸಾವು–ಬದುಕಿನ ತಾತ್ಪರ್ಯ ಸಾರುವ ತತ್ವಪದಗಳನ್ನು ಜನರು ಮೈಮರೆತು ಆಲಿಸುತ್ತಾರೆ. ತಾಳ ಹಾಕುತ್ತಾರೆ, ತಲೆದೂಗುತ್ತಾರೆ. ಇತ್ತೀಚೆಗೆ ಹಳ್ಳಿಹಳ್ಳಿಗಳಲ್ಲೂ ಸಣ್ಣಪುಟ್ಟ ಮಠಗಳು ತಲೆಯೆತ್ತಿವೆ. ಒಂದೊಂದು ಮಠಕ್ಕೂ ಒಬ್ಬೊಬ್ಬ ಗುರುಗಳು; ಅವರ ನಿತ್ಯದ ಉಪದೇಶಗಳು, ಪ್ರವಚನಗಳು. ಅಕ್ಕಪಕ್ಕದ ಮಠಗಳಿಗೂ ತೆರಳಿ ಧಾರ್ಮಿಕ ವಿಚಾರಗಳನ್ನು ಆಲಿಸಿ ಬರುತ್ತಾರೆ.

‘ನಮ್ಮೂರು ಸಾಹುಕಾರ, ನಮ್ಮ ಸಾಹುಕಾರ’, ‘ನನ್ನ ಮಾವ, ನಮ್ಮ ಅಳಿಯ’ ಎಂಬ ಸಂಬಂಧಗಳ ಮಾತುಗಳಿಗೂ ಕಡಿಮೆಯಿಲ್ಲ. ಬಾಯಲ್ಲಿ ಎಲ್ಲರೂ ಬಂಧುಗಳು, ಮಾತಿನಲ್ಲಿ ಎಲ್ಲರೂ ಸಹೋದರರು. ಆದರೆ ಬೀದಿಗೆ ಬಂದರೆ ಮತ್ತೆ ಅದೇ ರಾಗ, ಅದೇ ಹಾಡು!

‘ಹಾಡಿದ್ದೇ ಹಾಡು ಕಿಸುಬಾಯಿ ದಾಸ’ ಎಂಬಂತೆ ಕೇಳಿದ ಉಪದೇಶಗಳೆಲ್ಲ ಕ್ಷಣಾರ್ಧದಲ್ಲಿ ಮರೆತುಹೋಗುತ್ತವೆ. ಸಣ್ಣಪುಟ್ಟ ವಿಚಾರಗಳಿಗೂ ಕೋಳಿಯಂತೆ ಕಾಲು ಕೆದರಿ ಜಗಳಕ್ಕೆ ನಿಲ್ಲುತ್ತಾರೆ. ಮಾತಿನ ಮಿತಿಯನ್ನು ಮೀರಿ ಕೈಗಳನ್ನೇ ಬೆತ್ತಗಳನ್ನಾಗಿ ಮಾಡಿಕೊಂಡು, ಕ್ಷುಲ್ಲಕ ಕಾರಣಗಳನ್ನು ದೊಡ್ಡದಾಗಿಸಿಕೊಂಡು ಮುಖಾಮುಖಿಯಾಗುತ್ತಾರೆ. ಕೆಲವೊಮ್ಮೆ ಗೂಳಿಗಳ ಕಾದಾಟವನ್ನೇ ನೆನಪಿಸುವ ರೀತಿಯಲ್ಲಿ ಪರಸ್ಪರ ಸೆಣಸಾಡುತ್ತಾರೆ.

ಒಂದು ಕಡೆ ಮನುಷ್ಯತ್ವದ ಪಾಠ; ಇನ್ನೊಂದು ಕಡೆ ಮನುಷ್ಯನನ್ನೇ ಮರೆತ ವರ್ತನೆ! ಒಂದು ಕಡೆ ತತ್ವಪದಗಳ ಗಾಯನ; ಮತ್ತೊಂದು ಕಡೆ ದ್ವೇಷದ ರಾಗ! ಒಂದು ಕಡೆ ಗುರುಗಳ ಪ್ರವಚನ; ಇನ್ನೊಂದು ಕಡೆ ಅಹಂಕಾರದ ಪ್ರದರ್ಶನ

ಮೊಹರಂನ ತಾಬೂತಿಗೆ ಹೆಗಲು ಕೊಡುವ ಕೈಗಳು, ದಸರೆಯ ಮಂಟಪ ಕಟ್ಟುವ ಕೈಗಳು, ನೆರೆಹೊರೆಯವರ ಕಷ್ಟಕ್ಕೆ ನೆರವಾಗುವ ಹೃದಯಗಳು ನಮ್ಮ ಸಮಾಜದ ನಿಜವಾದ ಸೌಂದರ್ಯವನ್ನು ಸಾರುತ್ತವೆ. ಆದರೆ ಅದೇ ಸಮಾಜದ ಕೆಲವು ಕಡೆಗಳಲ್ಲಿ ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ದೂರವಿಡುವುದು, ಸಾಮಾಜಿಕ ಬಹಿಷ್ಕಾರ ಹಾಕುವುದು, ಸಮಾನ ಹಕ್ಕುಗಳನ್ನು ನಿರಾಕರಿಸುವುದು ಯಾವ ಸಂಸ್ಕೃತಿಯ ಸಂಕೇತ?

ಇಂತಹ ಪ್ರಶ್ನೆಗಳು ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತವೆ.

 ಇಂದು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಸಂವಹನ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಮನುಷ್ಯ ಚಂದ್ರನ ಅಂಗಳಕ್ಕೆ ತಲುಪಿದ್ದಾನೆ. ಕೃತಕ ಬುದ್ಧಿಮತ್ತೆಯ ಮೂಲಕ ಜಗತ್ತಿನ ಅನೇಕ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾನೆ. ದೇಶದಿಂದ ದೇಶಕ್ಕೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸುವಷ್ಟು ತಂತ್ರಜ್ಞಾನವನ್ನು ಬೆಳೆಸಿಕೊಂಡಿದ್ದಾನೆ. ಆದರೆ ಇಷ್ಟೆಲ್ಲ ಸಾಧನೆಗಳ ನಡುವೆಯೂ ಮನುಷ್ಯನ ಮನಸ್ಸಿನಲ್ಲಿರುವ ಜಾತಿ, ಧರ್ಮ, ಅಸ್ಪೃಶ್ಯತೆ ಮತ್ತು ಮೇಲು–ಕೀಳು ಎಂಬ ಸಂಕುಚಿತ ಭಾವನೆಗಳು ಮಾತ್ರ ಸಂಪೂರ್ಣವಾಗಿ ದೂರವಾಗಿಲ್ಲ ಎನ್ನುವುದು ನಮ್ಮ ಸಮಾಜದ ದೊಡ್ಡ ದುರಂತ.

ಒಂದೆಡೆ ನಾವು ಆಧುನಿಕತೆ, ಅಭಿವೃದ್ಧಿ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೇವೆ. ಮತ್ತೊಂದೆಡೆ ಮನುಷ್ಯನ ಹುಟ್ಟಿನ ಆಧಾರದ ಮೇಲೆ ಅವನ ಸ್ಥಾನಮಾನವನ್ನು ನಿರ್ಧರಿಸುವ ಮನೋಭಾವವನ್ನು ಇನ್ನೂ ಕೆಲವು ಕಡೆಗಳಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಶಿಕ್ಷಣ ಪಡೆದವರಲ್ಲಿಯೂ ಜಾತಿಯ ಅಹಂಕಾರ ಕಾಣಿಸಿಕೊಳ್ಳುವುದು, ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಮನುಷ್ಯರನ್ನು ಪ್ರತ್ಯೇಕಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಮಾನ ಅವಕಾಶ ನಿರಾಕರಿಸುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿಗಳಾಗಿವೆ.

ಈ ಲೇಖನ ಓದಿದ್ದೀರಾ?: ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ಸಮಾಜದಲ್ಲಿ ಜಾತಿ ಮತ್ತು ಧರ್ಮಗಳು ಮನುಷ್ಯರ ನಡುವೆ ಪರಸ್ಪರ ಪ್ರೀತಿ, ಸಹಬಾಳ್ವೆ ಮತ್ತು ಸಹೋದರತ್ವವನ್ನು ಬೆಳೆಸಬೇಕೇ ಹೊರತು ದ್ವೇಷ, ಅಸಹನೆ ಮತ್ತು ಸಂಘರ್ಷಗಳಿಗೆ ಕಾರಣವಾಗಬಾರದು. ಆದರೆ ಕೆಲವು ಸಂದರ್ಭಗಳಲ್ಲಿ ಧರ್ಮದ ಹೆಸರಿನಲ್ಲಿ ಜಾತಿಯ ಗೋಡೆಗಳನ್ನು ಬಲಪಡಿಸಲಾಗುತ್ತಿದೆ.

ದೇವರು ಎಲ್ಲರಿಗೂ ಸೇರಿದವನು ಎಂದು ಹೇಳುವವರೇ ದೇವರ ಮುಂದೆ ಮನುಷ್ಯರನ್ನು ಸಮಾನವಾಗಿ ಕಾಣಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ.

ಇಂದಿಗೂ ಕೆಲವು ಗ್ರಾಮಗಳಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಲು, ಸಾರ್ವಜನಿಕ ಬಾವಿಗಳ ನೀರು ಬಳಸಲು, ಹೋಟೆಲ್‌ಗಳಲ್ಲಿ ಸಮಾನವಾಗಿ ಕುಳಿತು ಊಟ ಮಾಡಲು, ಕ್ಷೌರದಂಗಡಿಗಳಿಗೆ ಹೋಗಲು ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಪಾಲ್ಗೊಳ್ಳಲು ಅಡೆತಡೆಗಳನ್ನು ಎದುರಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇವು ಕೇವಲ ಒಂದು ಸಮುದಾಯದ ಸಮಸ್ಯೆಗಳಲ್ಲ; ಇಡೀ ಸಮಾಜದ ನಾಗರಿಕ ಪ್ರಜ್ಞೆ, ಮಾನವೀಯತೆ ಮತ್ತು ಸಂವಿಧಾನಿಕ ಮೌಲ್ಯಗಳಿಗೆ ಎದುರಾಗಿರುವ ಸವಾಲುಗಳಾಗಿವೆ.

ಇಂತಹ ಸಾಮಾಜಿಕ ವಾಸ್ತವದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತಿಡಿಗೋಳ ಗ್ರಾಮದಲ್ಲಿ ನಡೆದಿರುವ ಘಟನೆ ನಮ್ಮೆಲ್ಲರ ಗಮನ ಸೆಳೆಯುತ್ತದೆ.

ಗ್ರಾಮದ ಜಾತ್ರೆ ಮತ್ತು ರಥೋತ್ಸವದ ಸಂದರ್ಭದಲ್ಲಿ ದಲಿತ ಸಮುದಾಯದ ಯುವಕರು ಭಾಗವಹಿಸಿದ ವಿಚಾರವಾಗಿ ಸಂಘರ್ಷ ಉಂಟಾಗಿ, ದಲಿತರ ಮೇಲೆ ಹಲ್ಲೆ ನಡೆದಿರುವುದು ಹಾಗೂ ನಂತರ ಸಾಮಾಜಿಕ ಬಹಿಷ್ಕಾರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ನಿರಾಕರಣೆಯ ಆರೋಪಗಳು ಕೇಳಿಬಂದಿವೆ. ಈ ಕುರಿತು ಅಕ್ಟೋಬರ್ 18ರಂದು ನಡೆದ ಘಟನೆಯ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ. ಸಂತ್ರಸ್ತರಿಗೆ ನ್ಯಾಯ, ರಕ್ಷಣೆ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

ಜಾತ್ರೆ ಎಂದರೆ ಊರಿನ ಎಲ್ಲ ಜನರು ಒಂದಾಗಿ ಸೇರಿ ಸಂಭ್ರಮಿಸುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆ. ಅಲ್ಲಿ ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ಬೇರ್ಪಡಿಸುವುದಾದರೆ, ಆ ಆಚರಣೆಯ ಉದ್ದೇಶವೇ ಪ್ರಶ್ನಾರ್ಹವಾಗುತ್ತದೆ. ದೇವರ ಮುಂದೆ ಎಲ್ಲರೂ ಸಮಾನರು ಎಂದು ನಂಬುವ ಸಮಾಜದಲ್ಲಿ ದೇವರ ಜಾತ್ರೆಯಲ್ಲಿಯೇ ಮನುಷ್ಯರನ್ನು ಜಾತಿಯ ಆಧಾರದ ಮೇಲೆ ದೂರವಿಡುವುದು ಎಂತಹ ವಿಪರ್ಯಾಸ.

ಒಂದು ಗ್ರಾಮದ ಜಾತ್ರೆಯಲ್ಲಿ ತೇರು ಎಳೆಯುವ ಹಕ್ಕು ಅಥವಾ ದೇವರ ದರ್ಶನ ಪಡೆಯುವ ಅವಕಾಶ ಯಾರೊಬ್ಬರ ಜಾತಿಯ ಆಧಾರದ ಮೇಲೆ ನಿರ್ಧಾರವಾಗಬೇಕೆ? ದೇವರು ಎಲ್ಲರಿಗೂ ಸೇರಿದವನು ಎಂದಾದ ಮೇಲೆ ದೇವರ ಜಾತ್ರೆಯೂ ಎಲ್ಲರಿಗೂ ಸೇರಿದ್ದಲ್ಲವೇ? ಸಾರ್ವಜನಿಕವಾಗಿ ನಡೆಯುವ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರತಿಯೊಬ್ಬರಿಗೂ ಸಮಾನ ಅವಕಾಶ ಇರಬೇಕಲ್ಲವೇ?

ಜಾತಿಯ ಹೆಸರಿನಲ್ಲಿ ಮನುಷ್ಯನನ್ನು ಮನುಷ್ಯನಿಂದಲೇ ದೂರವಿಡುವ ಮನಸ್ಥಿತಿಗೆ ನಾಗರಿಕ ಸಮಾಜದಲ್ಲಿ ಯಾವುದೇ ಸ್ಥಾನವಿರಬಾರದು.

ಕರ್ನಾಟಕದಲ್ಲಿಯೂ ಮರುಕಳಿಸುತ್ತಿರುವ ಅಸ್ಪೃಶ್ಯತೆ

ತಿಡಿಗೋಳದ ಘಟನೆ ಪ್ರತ್ಯೇಕವಾಗಿ ನಡೆದ ಒಂದು ಘಟನೆ ಎಂದು ಭಾವಿಸಿ ನಿರ್ಲಕ್ಷಿಸುವಂತಿಲ್ಲ.  ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾಲಕಾಲಕ್ಕೆ ಇಂತಹ ಘಟನೆಗಳು ವರದಿಯಾಗುತ್ತಲೇ ಇವೆ.

ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದಲ್ಲಿ ದಲಿತ ಕುಟುಂಬವೊಂದಕ್ಕೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಘಟನೆ ವರದಿಯಾಗಿತ್ತು. ಮದುವೆಯ ಧಾರ್ಮಿಕ ಆಚರಣೆಯ ನಿಮಿತ್ತ ದೇವಾಲಯಕ್ಕೆ ತೆರಳಿದ್ದ ಕುಟುಂಬಕ್ಕೆ ದೇವಸ್ಥಾನದ ಬಾಗಿಲು ಮುಚ್ಚುವ ಮೂಲಕ ಅಸ್ಪೃಶ್ಯತೆ ಆಚರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಲ್ಲಾತಹಳ್ಳಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ದಲಿತರಿಗೆ ದೇವಸ್ಥಾನದ ಒಳಗೆ ಪ್ರವೇಶ ನೀಡದೆ ಹೊರಗೆ ಕೂರಿಸಿ ಪೂಜೆ ನಡೆಸಿದ ಘಟನೆ ವರದಿಯಾಗಿತ್ತು.

ಧಾರವಾಡ ಜಿಲ್ಲೆಯ ರೊಟ್ಟಿಗವಾಡ ಗ್ರಾಮದಲ್ಲಿಯೂ ದಲಿತರಿಗೆ ಹೋಟೆಲ್, ಕ್ಷೌರದಂಗಡಿ ಮತ್ತು ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಿ ಅಘೋಷಿತ ಸಾಮಾಜಿಕ ಬಹಿಷ್ಕಾರ ಹೇರಿದ ಘಟನೆಗಳ ಬಗ್ಗೆ ವರದಿಯಾಗಿದೆ.

ಇಂತಹ ಘಟನೆಗಳು ಕರ್ನಾಟಕದಂತಹ ಪ್ರಗತಿಪರ ಚಿಂತನೆ ಮತ್ತು ಸಾಮಾಜಿಕ ಸುಧಾರಣೆಯ ಪರಂಪರೆಯನ್ನು ಹೊಂದಿರುವ ರಾಜ್ಯದಲ್ಲಿ ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ. ಶಿಕ್ಷಣ ಹೆಚ್ಚಾದಂತೆ ಜಾತಿ ತಾರತಮ್ಯ ಕಡಿಮೆಯಾಗಬೇಕಿತ್ತು.

ಆದರೆ ಕೆಲವು ಕಡೆಗಳಲ್ಲಿ ಜಾತಿಯ ಅಹಂಕಾರ ಇನ್ನೂ ಸಾಮಾಜಿಕ ಸಂಬಂಧಗಳನ್ನು ನಿಯಂತ್ರಿಸುತ್ತಿರುವುದು ವಿಷಾದನೀಯ.

ಒಂದು ಸಮುದಾಯದ ಜನರು ಮತ್ತೊಂದು ಸಮುದಾಯದವರೊಂದಿಗೆ ಊಟ ಮಾಡಬಾರದು, ಒಂದೇ ಹೋಟೆಲ್‌ನಲ್ಲಿ ಕುಳಿತುಕೊಳ್ಳಬಾರದು, ಒಂದೇ ದೇವಸ್ಥಾನಕ್ಕೆ ಹೋಗಬಾರದು, ಒಂದೇ ಬಾವಿಯ ನೀರು ಕುಡಿಯಬಾರದು ಎನ್ನುವ ಮನೋಭಾವ ಯಾವ ನಾಗರಿಕತೆಯ ಲಕ್ಷಣ? ಇಂತಹ ನಡವಳಿಕೆಗಳು ಮನುಷ್ಯನ ಘನತೆಯನ್ನೇ ಅವಮಾನಿಸುತ್ತವೆ.

ಮನುಷ್ಯ ಜಾತಿ ಒಂದೇ ಎಂಬುದನ್ನು ಅರಿಯಬೇಕಿದೆ

ನಮ್ಮ ಸಮಾಜದಲ್ಲಿ ಮೇಲ್ಜಾತಿ, ಕೆಳಜಾತಿ ಎಂಬ ಭೇದಗಳೇ ಇರಬಾರದು. ಮನುಷ್ಯನನ್ನು ಜಾತಿಯಿಂದ ಅಳೆಯುವ ಬದಲು ಅವನ ವ್ಯಕ್ತಿತ್ವ, ನಡತೆ, ಮಾನವೀಯತೆ ಮತ್ತು ಸಾಧನೆಗಳಿಂದ ಗುರುತಿಸಬೇಕು.

ಪಂಪನ ಕಾವ್ಯದಲ್ಲಿ ಪ್ರತಿಧ್ವನಿಸುವ ಮಾನವಕುಲದ ಏಕತೆಯ ಆಶಯವನ್ನು ನಾವು ನೆನಪಿಸಿಕೊಳ್ಳಬೇಕು. ಮನುಷ್ಯರೆಲ್ಲರೂ ಒಂದೇ ಮಾನವಕುಲಕ್ಕೆ ಸೇರಿದವರು. ಹುಟ್ಟಿನಿಂದ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಪ್ರತಿಯೊಬ್ಬರ ದೇಹದಲ್ಲಿಯೂ ಹರಿಯುವುದು ಒಂದೇ ಕೆಂಪು ರಕ್ತ. ಆ ರಕ್ತಕ್ಕೆ ಜಾತಿಯ ಬಣ್ಣವಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ ಎಂಬ ಧಾರ್ಮಿಕ ಗುರುತುಗಳಿರಬಹುದು. ಆದರೆ ರಕ್ತಕ್ಕೆ ಧರ್ಮದ ಹಣೆಪಟ್ಟಿಯಿಲ್ಲ.

ಮಾನವೀಯತೆಯ ದೃಷ್ಟಿಯಿಂದ ನೋಡಿದರೆ ಮನುಷ್ಯರನ್ನು ವಿಭಜಿಸುವ ಕೃತಕ ಗೋಡೆಗಳಿಗಿಂತ ಅವರನ್ನು ಬೆಸೆಯುವ ಮಾನವ ಸಂಬಂಧಗಳೇ ದೊಡ್ಡವು.

ಸ್ತ್ರೀ–ಪುರುಷ ಎಂಬ ಲಿಂಗಭೇದವನ್ನು ಹೊರತುಪಡಿಸಿ, ಹುಟ್ಟಿನ ಆಧಾರದ ಮೇಲೆ ಮನುಷ್ಯರನ್ನು ಮೇಲು–ಕೀಳು ಎಂದು ವರ್ಗೀಕರಿಸುವುದಕ್ಕೆ ಯಾವುದೇ ನ್ಯಾಯವಿಲ್ಲ. ಜಾತಿ ಎನ್ನುವುದು ಮನುಷ್ಯ ನಿರ್ಮಿಸಿಕೊಂಡ ಸಾಮಾಜಿಕ ವ್ಯವಸ್ಥೆಯೇ ಹೊರತು ಪ್ರಕೃತಿ ಸೃಷ್ಟಿಸಿದ ಶ್ರೇಣೀಕರಣವಲ್ಲ.

ನಮ್ಮ ನಾಡಿನ ಅನೇಕ ಮಹನೀಯರು ಶತಮಾನಗಳ ಹಿಂದೆಯೇ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯನ್ನು ವಿರೋಧಿಸಿ ಮಾನವೀಯತೆಯ ಸಂದೇಶ ಸಾರಿದ್ದಾರೆ.

ಬಸವಣ್ಣನವರು ತಮ್ಮ ವಚನಗಳ ಮೂಲಕ ಕಾಯಕ, ದಾಸೋಹ ಮತ್ತು ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಜಾತಿ ಆಧಾರಿತ ಮೇಲು–ಕೀಳುತನವನ್ನು ಪ್ರಶ್ನಿಸಿದರು. ಅವರ ಪ್ರಸಿದ್ಧ ವಚನದ ಆಶಯ ಹೀಗಿದೆ:

‘ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’. ಈ ವಚನ ಮನುಷ್ಯನನ್ನು ಜಾತಿಯಿಂದ ಗುರುತಿಸದೆ, ನಮ್ಮವನೆಂದು ಸ್ವೀಕರಿಸುವ ವಿಶಾಲ ಮನೋಭಾವವನ್ನು ಸಾರುತ್ತದೆ.

ಬುದ್ಧನು ಕರುಣೆ, ಪ್ರೀತಿ ಮತ್ತು ಸಮಾನತೆಯ ಸಂದೇಶ ನೀಡಿದನು. ಮಹಾತ್ಮ ಜ್ಯೋತಿಬಾ ಫುಲೆ ಶಿಕ್ಷಣದ ಮೂಲಕ ಶೋಷಿತ ಸಮುದಾಯಗಳ ವಿಮೋಚನೆಗೆ ಶ್ರಮಿಸಿದರು. ಸಾವಿತ್ರಿಬಾಯಿ ಫುಲೆ ಮಹಿಳೆಯರ ಮತ್ತು ಹಿಂದುಳಿದವರ ಶಿಕ್ಷಣಕ್ಕಾಗಿ ಹೋರಾಡಿದರು.

ಕೇರಳದ ಮಹಾನ್ ಸಮಾಜ ಸುಧಾರಕ ನಾರಾಯಣ ಗುರುಗಳು ಜಾತಿ ಆಧಾರಿತ ಧಾರ್ಮಿಕ ಅಸಮಾನತೆಯನ್ನು ಪ್ರಶ್ನಿಸಿದವರು. 1888ರಲ್ಲಿ ಅರುವಿಪ್ಪುರಂನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವ ಮೂಲಕ ದೇವರು ಯಾವುದೇ ಒಂದು ಜಾತಿಯ ಸ್ವತ್ತಲ್ಲ, ಎಲ್ಲರಿಗೂ ಆರಾಧನೆಯ ಸಮಾನ ಹಕ್ಕಿದೆ ಎಂಬ ಸಂದೇಶ ಸಾರಿದರು. ‘ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಮನುಷ್ಯನಿಗೆ’ ಎಂಬ ಅವರ ತತ್ವ ಮಾನವ ಸಮಾನತೆಯ ಪ್ರತೀಕವಾಗಿದೆ. ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸದೆ, ಶಿಕ್ಷಣ, ಸಂಘಟನೆ ಮತ್ತು ಸ್ವಾಭಿಮಾನದ ಮೂಲಕ ಸಮಾನತೆಯ ಸಮಾಜ ನಿರ್ಮಿಸಬೇಕೆಂಬುದು ಅವರ ಆಶಯವಾಗಿತ್ತು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯ ವಿರುದ್ಧ ತಮ್ಮ ಇಡೀ ಬದುಕನ್ನೇ ಹೋರಾಟಕ್ಕೆ ಮುಡಿಪಾಗಿಟ್ಟರು. ಅವರು ನೀಡಿದ ಎಚ್ಚರಿಕೆ ಮತ್ತು ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತವಾಗಿದೆ.

ಇವರಷ್ಟೇ ಅಲ್ಲದೆ, ಕನ್ನಡ ಸಾಹಿತ್ಯದ ಅನೇಕ ದಿಗ್ಗಜರು ತಮ್ಮ ಸಾಹಿತ್ಯದ ಮೂಲಕ ಜಾತಿ, ಮತ, ಧರ್ಮಗಳ ಸಂಕುಚಿತತೆಯನ್ನು ಪ್ರಶ್ನಿಸಿ ಮನುಷ್ಯತ್ವದ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. ಸಾಹಿತ್ಯವು ಕೇವಲ ಮನರಂಜನೆಯ ಸಾಧನವಲ್ಲ; ಅದು ಸಮಾಜದ ತಪ್ಪುಗಳನ್ನು ತಿದ್ದುವ, ಮನುಷ್ಯನನ್ನು ವೈಚಾರಿಕವಾಗಿ ಎಚ್ಚರಿಸುವ ಮತ್ತು ಸಮಾನತೆಯ ಆಶಯವನ್ನು ಬಿತ್ತುವ ಶಕ್ತಿಯಾಗಿದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ನಾವು ವಿಶೇಷವಾಗಿ ನೆನಪಿಸಿಕೊಳ್ಳಬೇಕು. ಅವರು ತಮ್ಮ ಕಾವ್ಯದ ಮೂಲಕ ಧರ್ಮದ ಸಂಕುಚಿತ ಗಡಿಗಳನ್ನು ಮೀರಿ ಮನುಷ್ಯರೆಲ್ಲರೂ ಒಂದೇ ಎಂಬ ವಿಶಾಲ ದೃಷ್ಟಿಕೋನವನ್ನು ಸಾರಿದ್ದಾರೆ.

ಕುವೆಂಪು ಅವರ ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?’ ಎಂಬ ಪದ್ಯ ಮಾನವತಾವಾದದ ಅತ್ಯಂತ ಮಹತ್ವದ ಅಭಿವ್ಯಕ್ತಿಯಾಗಿದೆ. ಈ ಪದ್ಯದಲ್ಲಿ ಅವರು ಮನುಷ್ಯನ ಅಂತರಂಗದ ಧ್ವನಿ, ಮಾನವೀಯತೆ ಮತ್ತು ಆತ್ಮಸಾಕ್ಷಿಗಿಂತ ಯಾವುದೇ ಶಾಸ್ತ್ರ ಅಥವಾ ಸಂಪ್ರದಾಯ ದೊಡ್ಡದಲ್ಲ ಎಂಬ ವಿಚಾರವನ್ನು ಪ್ರತಿಪಾದಿಸುತ್ತಾರೆ.

ದಾಹದಿಂದ ಬಂದ ಸೋದರನಿಗೆ ನೀರು ಕೊಡುವುದಕ್ಕೂ, ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವುದಕ್ಕೂ ಶಾಸ್ತ್ರದ ಅನುಮತಿ ಬೇಕೇ ಎಂಬ ಪ್ರಶ್ನೆಯ ಮೂಲಕ ಕುವೆಂಪು ಮಾನವೀಯತೆಯ ಮಹತ್ವವನ್ನು ಎತ್ತಿಹಿಡಿಯುತ್ತಾರೆ.

ಹಾಗೆಯೇ, ಜಾತಿಯ ಕಾರಣಕ್ಕೆ ಸಂಕಷ್ಟದಲ್ಲಿರುವ ವ್ಯಕ್ತಿಗೆ ನೆರವಾಗದೆ ಸುಮ್ಮನಿರುವುದು ಯಾವ ಧರ್ಮದ ಅಥವಾ ಶಾಸ್ತ್ರದ ಆಶಯವಾಗಲು ಸಾಧ್ಯ ಎಂಬುದನ್ನು ಪ್ರಶ್ನಿಸುತ್ತಾರೆ.

ಈ ಪದ್ಯದ ಮೂರನೇ ಚರಣದಲ್ಲಿ ಜಾತಿಯ ಕಾರಣಕ್ಕೆ ಅಪಾಯದಲ್ಲಿರುವ ಮಗುವನ್ನು ಮುಟ್ಟಲು ಹಿಂಜರಿಯುವ ಮನಸ್ಥಿತಿಯನ್ನು ಕುವೆಂಪು ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ. ಇಲ್ಲಿ ಅವರು ಕೇವಲ ಅಸ್ಪೃಶ್ಯತೆಯನ್ನು ಖಂಡಿಸುವುದಿಲ್ಲ; ಮಾನವೀಯ ಕರ್ತವ್ಯವನ್ನು ನಿರ್ಲಕ್ಷಿಸುವ ಸಂಪ್ರದಾಯದ ವಿರುದ್ಧ ಮನುಷ್ಯನ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತಾರೆ.

ಕುವೆಂಪು ಅವರ ಈ ಮಾನವತಾವಾದಿ ಚಿಂತನೆ ತಿಡಿಗೋಳದ ಘಟನೆಯಂತಹ ಸಾಮಾಜಿಕ ವಾಸ್ತವಗಳ ಸಂದರ್ಭದಲ್ಲಿ ಇನ್ನಷ್ಟು ಪ್ರಸ್ತುತವಾಗುತ್ತದೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ನೊಂದವರ ಪರ ನಿಲ್ಲುವುದು ಮತ್ತು ಪ್ರತಿಯೊಬ್ಬರಿಗೂ ಸಮಾನ ಗೌರವ ನೀಡುವುದು ಯಾವುದೇ ಶಾಸ್ತ್ರದ ಅನುಮತಿಯನ್ನು ಅವಲಂಬಿಸಿರಬಾರದು. ಮಾನವೀಯತೆಯೇ ಮನುಷ್ಯನ ನಿಜವಾದ ಧರ್ಮ ಎಂಬುದನ್ನು ಈ ಪದ್ಯ ನಮಗೆ ಮನವರಿಕೆ ಮಾಡಿಕೊಡುತ್ತದೆ.

ಅದೇ ರೀತಿ ಕುವೆಂಪು ಅವರ ‘ಓ ಬನ್ನಿ ಸೋದರರೆ ಬೇಗ ಬನ್ನಿ’ ಕವನದ ಅತ್ಯಂತ ಅರ್ಥಪೂರ್ಣ ಸಾಲು: “ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ” ಎಂಬುದು.

ಇದು ಧಾರ್ಮಿಕ ನಂಬಿಕೆಗಳ ಬಗ್ಗೆ ದ್ವೇಷ ಬೆಳೆಸಿಕೊಳ್ಳುವ ಕರೆ ಅಲ್ಲ; ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ಸಂಕುಚಿತ ಮನೋಭಾವದಿಂದ ಹೊರಬಂದು ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಕರೆ. ಮೌಢ್ಯವನ್ನು ತೊರೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ಬಡತನ ಮತ್ತು ಅಜ್ಞಾನವನ್ನು ತೊಲಗಿಸಲು ಶ್ರಮಿಸಬೇಕು ಎಂಬುದು ಕುವೆಂಪು ಅವರ ಕಾವ್ಯದ ವಿಶಾಲ ಆಶಯವಾಗಿದೆ.

ಆದರೆ ವಿಪರ್ಯಾಸವೆಂದರೆ, ಇಂತಹ ಮಹಾನ್ ಮಾನವೀಯ ಸಂದೇಶಗಳನ್ನು ಸಾರಿದ ನೆಲದಲ್ಲಿಯೇ ಇಂದಿಗೂ ಜಾತಿಯ ಹೆಸರಿನಲ್ಲಿ ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ ಮತ್ತು ತಾರತಮ್ಯದ ಘಟನೆಗಳು ನಡೆಯುತ್ತಿವೆ. ತಿಡಿಗೋಳ ಗ್ರಾಮದಲ್ಲಿ ಜಾತ್ರೆಯ ತೇರನ್ನು ಎಳೆಯುವ ವಿಚಾರದಲ್ಲಿ ಉಂಟಾದ ಸಂಘರ್ಷ ಈ ವೈರುಧ್ಯವನ್ನು ಮತ್ತೊಮ್ಮೆ ನಮ್ಮ ಮುಂದೆ ತಂದು ನಿಲ್ಲಿಸಿದೆ.

ದೇವರುಗಳನ್ನು ಆರಾಧಿಸುವ ಹಕ್ಕಿಗಿಂತ ಮನುಷ್ಯರನ್ನು ಗೌರವಿಸುವ ಕರ್ತವ್ಯ ದೊಡ್ಡದು. ದೇವಾಲಯದ ತೇರನ್ನು ಎಲ್ಲರೂ ಸೇರಿ ಎಳೆಯಲು ಸಾಧ್ಯವಾಗದ ಸಮಾಜದಲ್ಲಿ ಸಮಾನತೆಯ ರಥ ಸಾಗುವುದು ಹೇಗೆ?

ಇಷ್ಟೆಲ್ಲ ಮಹನೀಯರ ಚಿಂತನೆಗಳು, ಉಪದೇಶಗಳು ಮತ್ತು ಹೋರಾಟಗಳ ನಂತರವೂ ಜಾತಿಯ ಹೆಸರಿನಲ್ಲಿ ಮನುಷ್ಯನನ್ನು ಅವಮಾನಿಸುವ ಘಟನೆಗಳು ನಡೆಯುತ್ತಿರುವುದು ನಮ್ಮ ಸಾಮಾಜಿಕ ಪ್ರಜ್ಞೆಯ ವೈಫಲ್ಯವಲ್ಲವೇ?

ಸಮಾನತೆಯ ಹಕ್ಕು ನೀಡಿರುವ ಸಂವಿಧಾನ

ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯ ಹಕ್ಕನ್ನು ನೀಡಿದೆ.

ಸಂವಿಧಾನದ ಆಶಯದ ಪ್ರಕಾರ ಯಾರನ್ನೂ ಜಾತಿ, ಧರ್ಮ, ಲಿಂಗ, ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯಕ್ಕೆ ಒಳಪಡಿಸುವಂತಿಲ್ಲ.

ಸಂವಿಧಾನದ 15ನೇ ವಿಧಿಯು ಜಾತಿ ಸೇರಿದಂತೆ ವಿವಿಧ ಆಧಾರಗಳ ಮೇಲಿನ ತಾರತಮ್ಯವನ್ನು ನಿಷೇಧಿಸುತ್ತದೆ. ವಿಶೇಷವಾಗಿ 15(2)ನೇ ವಿಧಿಯು ಅಂಗಡಿಗಳು, ಸಾರ್ವಜನಿಕ ಹೋಟೆಲ್‌ಗಳು, ಸಾರ್ವಜನಿಕ ಮನರಂಜನಾ ಸ್ಥಳಗಳು, ಬಾವಿಗಳು, ಕೆರೆಗಳು, ರಸ್ತೆಗಳು ಮತ್ತು ಸಾರ್ವಜನಿಕ ಬಳಕೆಯ ಸ್ಥಳಗಳನ್ನು ಬಳಸುವ ಹಕ್ಕಿನಲ್ಲಿ ಜಾತಿಯ ಆಧಾರದ ಮೇಲೆ ನಿರ್ಬಂಧ ವಿಧಿಸುವುದನ್ನು ತಡೆಯುತ್ತದೆ.

17ನೇ ವಿಧಿಯು ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಅಸ್ಪೃಶ್ಯತೆಯ ಆಚರಣೆಯನ್ನು ಯಾವುದೇ ರೂಪದಲ್ಲಿಯೂ ಮುಂದುವರಿಸುವುದನ್ನು ಕಾನೂನುಬಾಹಿರಗೊಳಿಸಿದೆ. 25(2)(ಬಿ)ನೇ ವಿಧಿಯು ಹಿಂದೂ ಧಾರ್ಮಿಕ ಸ್ವರೂಪದ ಸಾರ್ವಜನಿಕ ಸಂಸ್ಥೆಗಳನ್ನು ಎಲ್ಲ ವರ್ಗದ ಹಿಂದೂಗಳಿಗೂ ಮುಕ್ತಗೊಳಿಸುವ ಸಾಮಾಜಿಕ ಸುಧಾರಣೆಗೆ ಅವಕಾಶ ನೀಡುತ್ತದೆ.

ಇದಲ್ಲದೆ, ಅಸ್ಪೃಶ್ಯತೆ ಆಚರಣೆಯಿಂದ ಉಂಟಾಗುವ ನಿರ್ಬಂಧಗಳನ್ನು ತಡೆಯಲು ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ, 1955 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ಜಾರಿಯಲ್ಲಿವೆ.

ಇಷ್ಟೆಲ್ಲ ಕಾನೂನು ರಕ್ಷಣೆಗಳಿದ್ದರೂ ಜಾತಿಯ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರಾಕರಿಸುವುದು, ಸಾಮಾಜಿಕ ಬಹಿಷ್ಕಾರ ಹಾಕುವುದು, ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅಡ್ಡಿಪಡಿಸುವುದು ನಡೆಯುತ್ತಿದ್ದರೆ ಸಂವಿಧಾನದ ಆಶಯವನ್ನು ನಾವು ಎಷ್ಟರಮಟ್ಟಿಗೆ ಅನುಷ್ಠಾನಗೊಳಿಸಿದ್ದೇವೆ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.

ಸಂವಿಧಾನ ಕೇವಲ ಪುಸ್ತಕದಲ್ಲಿರುವ ಅಕ್ಷರಗಳಾಗಬಾರದು

ಸಾಮಾಜಿಕ ಬಹಿಷ್ಕಾರ ಎನ್ನುವುದು ಕೇವಲ ಒಂದು ಕುಟುಂಬ ಅಥವಾ ಸಮುದಾಯವನ್ನು ಊರಿನ ಜನರಿಂದ ದೂರವಿಡುವುದಲ್ಲ. ಅದು ಅವರ ಬದುಕಿನ ಹಕ್ಕು, ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ಸಾಮಾಜಿಕ ಅಸ್ತಿತ್ವದ ಮೇಲೆ ನಡೆಸುವ ದಾಳಿಯಾಗಿದೆ.

ಒಬ್ಬ ವ್ಯಕ್ತಿ ಯಾವ ಜಾತಿಯಲ್ಲಿ ಹುಟ್ಟಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಅವನಿಗಿಲ್ಲ. ಆದರೆ ಹುಟ್ಟಿದ ಜಾತಿಯ ಕಾರಣಕ್ಕೆ ಅವನನ್ನು ಅವಮಾನಿಸುವ ಹಕ್ಕು ಮತ್ತೊಬ್ಬರಿಗೂ ಇಲ್ಲ.

ಒಂದು ಸಮುದಾಯದವರು ಜಾತ್ರೆಯಲ್ಲಿ ಭಾಗವಹಿಸಿದರೆ, ದೇವಸ್ಥಾನಕ್ಕೆ ಹೋದರೆ, ಸಾರ್ವಜನಿಕ ಸ್ಥಳದಲ್ಲಿ ಕುಳಿತರೆ ಅಥವಾ ತಮ್ಮ ಹಕ್ಕುಗಳನ್ನು ಕೇಳಿದರೆ ಅದನ್ನು ಸಹಿಸದೆ ಬಹಿಷ್ಕಾರ ಹಾಕುವ ಮನಸ್ಥಿತಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ.

ಇಲ್ಲಿ ಒಂದು ಪ್ರಶ್ನೆಯನ್ನು ನಾವೆಲ್ಲರೂ ಕೇಳಿಕೊಳ್ಳಬೇಕು. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿರುವಾಗ, ಗ್ರಾಮಗಳಲ್ಲಿ ಜಾತಿಯ ಹೆಸರಿನಲ್ಲಿ ಪ್ರತ್ಯೇಕ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಯಾರಿಗೆ ಕೊಟ್ಟವರು?

ತಿಡಿಗೋಳದ ಸಂತ್ರಸ್ತರಿಗೆ ಬೆಂಬಲವಾಗಿ ‘ಚಲೋ ತಿಡಿಗೋಳ’

ತಿಡಿಗೋಳ ಗ್ರಾಮದಲ್ಲಿ 18-10-2026ರಂದು ನಡೆದ ಘಟನೆಯ ಹಿನ್ನೆಲೆಯಲ್ಲಿ, ಗ್ರಾಮದ ಜಾತ್ರೆಯಲ್ಲಿ ದಲಿತರು ಭಾಗವಹಿಸಬಾರದೆಂಬ ನಿರ್ಬಂಧ ಹೇರಲಾಗಿದೆ ಮತ್ತು ಬಲಿಷ್ಠ ರೆಡ್ಡಿ ಸಮುದಾಯದ ಕೆಲವರಿಂದ ದಲಿತ ಮಹಿಳೆಯರು ಹಾಗೂ ಪುರುಷರ ಮೇಲೆ ಸಾಮೂಹಿಕ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ದಲಿತ ಸಮುದಾಯದ ಮೇಲೆ ಸಾಮಾಜಿಕ ಬಹಿಷ್ಕಾರ ಘೋಷಿಸಲಾಗಿದೆ ಎಂಬ ವಿಚಾರವೂ ಆತಂಕಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ಖಂಡಿಸಿ, ಸಂತ್ರಸ್ತ ದಲಿತ ಸಮುದಾಯಕ್ಕೆ ನೈತಿಕ ಬೆಂಬಲ ನೀಡುವುದರ ಜೊತೆಗೆ ಎಲ್ಲ ರೀತಿಯಬೆಂಬಲ ನೀಡಿ ಧೈರ್ಯ ತುಂಬುವ ಉದ್ದೇಶದಿಂದ

ದಿನಾಂಕ 08-11-2026ರಂದು ತಿಡಿಗೋಳ ಗ್ರಾಮದಲ್ಲಿ ‘ಚಲೋ ತಿಡಿಗೋಳ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇದು ಕೇವಲ ಒಂದು ಗ್ರಾಮದ ಘಟನೆಯನ್ನು ಖಂಡಿಸುವ ಕಾರ್ಯಕ್ರಮವಾಗಿ ಉಳಿಯದೆ, ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರದ ವಿರುದ್ಧ ಪ್ರಜ್ಞಾವಂತ ಸಮಾಜ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕೆಂಬ ಆಶಯವನ್ನು ಪ್ರತಿನಿಧಿಸುತ್ತದೆ. ಅನ್ಯಾಯಕ್ಕೆ ಒಳಗಾದವರ ಪರವಾಗಿ ನಿಲ್ಲುವುದು, ಅವರ ಹಕ್ಕು ಮತ್ತು ಸ್ವಾಭಿಮಾನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿಯಾಗಿದೆ.

ಜಾತಿಯ ಹೆಸರಿನಲ್ಲಿ ಯಾರನ್ನೂ ಸಾರ್ವಜನಿಕ ಬದುಕಿನಿಂದ ದೂರವಿಡುವಂತಿಲ್ಲ. ಜಾತ್ರೆ, ತೇರು, ದೇವಸ್ಥಾನ ಸೇರಿದಂತೆ ಸಾರ್ವಜನಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು. ಇಂತಹ ಸಮಾನತೆಯ ಆಶಯವನ್ನು ಕಾರ್ಯರೂಪಕ್ಕೆ ತರಲು ಸಾಮಾಜಿಕ ಒಗ್ಗಟ್ಟು ಮತ್ತು ಮಾನವೀಯ ಸ್ಪಂದನೆ ಅತ್ಯಗತ್ಯ.

ಬದಲಾವಣೆಯಾಗಬೇಕಿರುವುದು ಕಾನೂನು ಮಾತ್ರವಲ್ಲ, ಮನುಷ್ಯನ ಮನಸ್ಸು ಕೂಡ

ಅಸ್ಪೃಶ್ಯತೆ ಕಾನೂನಿನ ದೃಷ್ಟಿಯಲ್ಲಿ ಅಪರಾಧವಾದರೂ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಮಾಜದ ಮನೋಭಾವ ಬದಲಾಗಬೇಕು. ಜಾತಿಯ ಅಹಂಕಾರದಿಂದ ಹೊರಬಂದು ಮಾನವೀಯತೆಯ ನೆಲೆಯಲ್ಲಿ ಬದುಕುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.

ಮಕ್ಕಳಿಗೆ ಶಾಲಾ ಹಂತದಿಂದಲೇ ಜಾತಿ, ಧರ್ಮಗಳಿಗಿಂತ ಮಾನವೀಯತೆ ದೊಡ್ಡದು ಎಂಬ ಮೌಲ್ಯವನ್ನು ಕಲಿಸಬೇಕು. ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರಗಳು ಮನುಷ್ಯರಲ್ಲಿ ಪ್ರೀತಿ, ಸಹಬಾಳ್ವೆ ಮತ್ತು ಸಹೋದರತ್ವವನ್ನು ಬೆಳೆಸುವ ಕೇಂದ್ರಗಳಾಗಬೇಕೇ ಹೊರತು ಭೇದಭಾವದ ಗೋಡೆಗಳಾಗಬಾರದು.

ಯಾವುದೇ ಧರ್ಮವಾಗಲಿ, ಅದರ ಮೂಲ ಆಶಯ ಮನುಷ್ಯನ ಒಳಿತೇ ಆಗಿರಬೇಕು. ಧರ್ಮದ ಹೆಸರಿನಲ್ಲಿ ಮನುಷ್ಯನನ್ನೇ ದ್ವೇಷಿಸುವುದು ಧರ್ಮದ ಆಶಯಕ್ಕೆ ಮಾಡುವ ಅಪಚಾರ.

ತಿಡಿಗೋಳದ ಘಟನೆ ಕೇವಲ ಒಂದು ಗ್ರಾಮದ ಸಮಸ್ಯೆಯಲ್ಲ. ಅದು ಇಡೀ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. ಇಂದು ಮತ್ತೊಂದು ಊರಿನಲ್ಲಿ ಇಂತಹ ಘಟನೆ ನಡೆದರೆ ನಾಳೆ ನಮ್ಮ ಊರಿನಲ್ಲಿಯೂ ನಡೆಯಬಹುದು. ಆದ್ದರಿಂದ ಜಾತಿ ತಾರತಮ್ಯದ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕಾಗಿದೆ.

ಜಾತ್ರೆಯ ತೇರನ್ನು ಎಳೆಯಲು ಎಲ್ಲರ ಕೈಗಳು ಒಂದಾಗಬೇಕೇ ಹೊರತು, ಜಾತಿಯ ಹೆಸರಿನಲ್ಲಿ ಕೈಗಳನ್ನು ಬೇರ್ಪಡಿಸಬಾರದು. ದೇವರ ರಥ ಸಾಗುವ ಬೀದಿಯಲ್ಲಿ ಮನುಷ್ಯನಿಗೆ ಪ್ರವೇಶವಿಲ್ಲ ಎಂದಾದರೆ ಆ ಸಮಾಜದ ಪ್ರಗತಿಗೆ ಅರ್ಥವೇನು?

ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವುದೇ ನಿಜವಾದ ಧರ್ಮ. ಹಸಿದವನಿಗೆ ಅನ್ನ ನೀಡುವುದು, ನೋವಿನಲ್ಲಿರುವವನಿಗೆ ನೆರವಾಗುವುದು, ಶೋಷಿತನ ಪರವಾಗಿ ನಿಲ್ಲುವುದು, ಮತ್ತೊಬ್ಬರ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ನಿಜವಾದ ಮಾನವೀಯತೆ.

ಜಾತಿ ಉಳಿಸುವುದಕ್ಕಿಂತ ಮಾನವೀಯತೆ ಉಳಿಸುವುದು ಮುಖ್ಯ. ಧರ್ಮದ ಹೆಸರಿನಲ್ಲಿ ಗೋಡೆ ಕಟ್ಟುವುದಕ್ಕಿಂತ ಪ್ರೀತಿಯ ಸೇತುವೆ ನಿರ್ಮಿಸುವುದು ಮುಖ್ಯ. ಮನುಷ್ಯನನ್ನು ವಿಭಜಿಸುವುದಕ್ಕಿಂತ ಮನುಷ್ಯರನ್ನು ಬೆಸೆಯುವುದು ಮುಖ್ಯ.

ಮೊಹರಂನಲ್ಲಿ ತಾಬೂತಿಗೆ ಹೆಗಲು ಕೊಟ್ಟ ಕೈಗಳು, ದಸರೆಯಲ್ಲಿ ಮಂಟಪ ಕಟ್ಟಿದ ಕೈಗಳು, ಈಗ ಜಾತಿಯ ಗೋಡೆಗಳನ್ನು ಕೆಡವಲು ಒಂದಾಗಬೇಕಿದೆ. ಏಕೆಂದರೆ ಮನುಷ್ಯನಿಗಿಂತ ದೊಡ್ಡ ಜಾತಿಯಿಲ್ಲ; ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಾರಾಷ್ಟ್ರ | ಬರದ ನಡುವೆ ಸಂಭ್ರಮದ ಸಡಗರ; ಸರ್ಕಾರದ ಆದ್ಯತೆಗೆ ತೀವ್ರ ಆಕ್ರೋಶ!

ಮಹಾರಾಷ್ಟ್ರದಾದ್ಯಂತ ಭೀಕರ ಬರಗಾಲದ ಕರಿನೆರಳು ಆವರಿಸಿದೆ. ಕಳೆದ ಐದು ದಶಕಗಳಲ್ಲೇ ಕಾಣದಂತಹ...

ಅಮೆರಿಕ | ಮಧ್ಯಂತರ ಚುನಾವಣಾ ಹಿನ್ನಡೆ; ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ನಡುವೆ ಬಿರುಕು?

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಅನುಭವಿಸಿದ ಭಾರಿ ಸೋಲಿನ ಬೆನ್ನಲ್ಲೇ,...

ಅಗ್ನಿವೀರರ ಸೇವಾ ಅವಧಿ 4ರಿಂದ 6 ವರ್ಷಕ್ಕೆ ವಿಸ್ತರಣೆ

ಕೇಂದ್ರ ಸರ್ಕಾರವು ಸೇನಾ ನೇಮಕಾತಿಯ 'ಅಗ್ನಿಪಥ' ಯೋಜನೆಗೆ ಮಹತ್ವದ ತಿದ್ದುಪಡಿ ತಂದಿದ್ದು,...

ಬೆಂಗಳೂರಿನ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಶೇ 10-15ರಷ್ಟು ಏರಿಕೆ: ಗ್ರಾಹಕರಿಗೆ ಬಿಸಿ

ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದಾಗಿ ರಾಜಧಾನಿ ಬೆಂಗಳೂರಿನಾದ್ಯಂತ ಹೋಟೆಲ್ ಮತ್ತು...