ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಶೇಕಡಾ 70ಕ್ಕೂ ಹೆಚ್ಚು ಪಾಲು ಹೊಂದಿರುವ ಕರ್ನಾಟಕದಲ್ಲಿ ಅಡಿಕೆ ಕೇವಲ ಬೆಳೆಯಲ್ಲ; ಅದು ಲಕ್ಷಾಂತರ ಕುಟುಂಬಗಳ ಜೀವನಾಧಾರ. ಆದರೆ, ಗಡಿ ಹಾಗೂ ಬಂದರುಗಳ ಮೂಲಕ ಕಳ್ಳಸಾಗಣೆಯಾಗುತ್ತಿರುವ ಕಳಪೆ ಆಮದು ಅಡಿಕೆಯ ಹರಿವು ಸ್ಥಳೀಯ ಬೆಲೆಯನ್ನು ಕುಸಿಯುವಂತೆ ಮಾಡುತ್ತಿದ್ದು, ಬೆಳೆಗಾರರ ಅಸ್ತಿತ್ವಕ್ಕೇ ಕಂಟಕವಾಗಿದೆ.
ಕರ್ನಾಟಕದ ಅಡಿಕೆ ಬೆಳೆಗಾರರು ಈಗಾಗಲೇ ರೋಗ, ಇಳುವರಿ ಕುಸಿತ ಮತ್ತು ಬೆಲೆ ಅಸ್ಥಿರತೆಯಿಂದ ಸಂಕಷ್ಟದಲ್ಲಿರುವಾಗ, ವಿದೇಶಗಳಿಂದ ಆಮದಾಗುವ ಕಳಪೆ ಗುಣಮಟ್ಟದ ಅಡಿಕೆ ಸ್ಥಳೀಯ ಮಾರುಕಟ್ಟೆಗೆ ನುಗ್ಗುತ್ತಿರುವುದು ಹೊಸ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಆಮದು ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಬೆರೆಸಿ, ದೇಶೀಯ ಉತ್ಪನ್ನ ಎಂದು ಮಾರಾಟ ಮಾಡುವ ಪ್ರಯತ್ನಗಳು ನಡೆಯುತ್ತಿರುವುದು ಕ್ಯಾಂಪ್ಕೊ (ಸೆಂಟ್ರಲ್ ಅರೆಕನಟ್ ಅಂಡ್ ಕೋಕೋ ಮಾರ್ಕೆಟಿಂಗ್ ಅಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್) ಸೇರಿದಂತೆ ಅಡಿಕೆ ಸಹಕಾರ ಸಂಸ್ಥೆಗಳ ವಿರೋಧಕ್ಕೆ ಕಾರಣವಾಗಿದೆ.
ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್‌ಚಂದ್ರ ಈದಿನ.ಕಾಮ್ ಜೊತೆಗೆ ಮಾತನಾಡಿ, “ಆಮದು ಅಡಿಕೆಯನ್ನು ಸ್ಥಳೀಯ ಉತ್ಪನ್ನದೊಂದಿಗೆ ಬೆರೆಸಿ, ದೇಶೀಯ ಅಡಿಕೆ ಎಂದು ಪರಿಚಲನೆಗೆ ತರುವುದು ಗುಣಮಟ್ಟ, ಪತ್ತೆಹಚ್ಚುವಿಕೆ (ಟ್ರೇಸಬಿಲಿಟಿ) ಮತ್ತು ಮಾರುಕಟ್ಟೆ ಪಾರದರ್ಶಕತೆಯನ್ನು ಹಾಳುಮಾಡುತ್ತಿದೆ. ಇದರಿಂದ ಬೆಲೆ ನಿರ್ಧಾರಕ್ಕೆ ಒತ್ತಡ ಬೀಳುತ್ತಿದೆ ಮತ್ತು ಸ್ಥಳೀಯ ಬೆಳೆಗಾರರಿಗೆ ನಷ್ಟವಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
“ಕ್ಯಾಂಪ್ಕೊ ಈ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದು, ಆಮದು ನಿಯಂತ್ರಣವನ್ನು ಬಿಗಿಗೊಳಿಸುವುದು, ತಪ್ಪು ವರ್ಗೀಕರಣ ತಡೆಯುವುದು ಮತ್ತು ಆಮದು ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಬೆರೆಸುವುದನ್ನು ತಡೆಗಟ್ಟುವುದಕ್ಕೆ ಸಮನ್ವಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದೆ. ಅಡಿಕೆ ಆಮದಿಗೆ 100 ಶೇಕಡಾ ಮೂಲ ಕಸ್ಟಮ್ಸ್ ಸುಂಕ ಮತ್ತು ಕನಿಷ್ಠ ಆಮದು ಬೆಲೆ (ಎಂಐಪಿ) ನಿಯಮಗಳಿದ್ದರೂ, ಭೂತಾನ್, ಮಯನ್ಮಾರ್, ಶ್ರೀಲಂಕಾ ಮತ್ತು ಇತರ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆ ವಿವಿಧ ಮಾರ್ಗಗಳ ಮೂಲಕ ದೇಶಕ್ಕೆ ಆಮದಾಗುತ್ತಿದೆ” ಎಂದು ತಿಳಿಸಿದ್ದಾರೆ.

“ಸ್ಥಳೀಯ ಅಡಿಕೆ ಬೆಳೆಗಾರರ ಹಿತ ಕಾಯಲು, ನಮ್ಮಲ್ಲಿ ಉತ್ಪಾದನೆಯಾಗುವ ಅಡಿಕೆಯ ಗುಣಮಟ್ಟ ಸುಧಾರಣೆಯತ್ತ ಗಮನ ಹರಿಸಬೇಕಿದೆ. ಉತ್ತಮ ಬ್ರಾಂಡಿಂಗ್ ಮೂಲಕ ರಫ್ತು ಪ್ರಮಾಣ ಹೆಚ್ಚುತ್ತದೆ ಹಾಗೂ ರೈತರಿಗೆ ಈ ಕುರಿತು ಶಿಕ್ಷಿತರನ್ನಾಗಿ ಮಾಡುವ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದೇವೆ ಸರ್ಕಾರಗಳು ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿವೆ” ಎಂದು ಸತೀಶ್ಚಂದ್ರ ತಿಳಿಸಿದರು.
ಕರ್ನಾಟಕವು ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಸುಮಾರು 70-76 ಶೇಕಡಾ ಪಾಲನ್ನು ಹೊಂದಿದೆ. ರಾಜ್ಯದಲ್ಲಿ ಸುಮಾರು 6.75 ಲಕ್ಷ ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಉತ್ಪಾದನೆ ಸುಮಾರು 10 ಲಕ್ಷ ಟನ್‌ಗಳಷ್ಟಿದೆ. ಆದರೆ ರೋಗಗಳಿಂದ ಇಳುವರಿ ಕುಸಿಯುತ್ತಿರುವುದರ ಜೊತೆಗೆ, ಆಮದು ಅಡಿಕೆಯ ಹರಿವು ಸ್ಥಳೀಯ ಬೆಲೆಯನ್ನು ಒತ್ತಡಕ್ಕೊಳಪಡಿಸುತ್ತಿದೆ. ಬೆಳೆಗಾರರು ಮತ್ತು ಸಹಕಾರ ಸಂಸ್ಥೆಗಳು ಗುಣಮಟ್ಟ ಕಾಪಾಡಿಕೊಳ್ಳಲು ಆಮದು ಅಡಿಕೆಯನ್ನು ಖರೀದಿಸದಂತೆ ಮತ್ತು ಬೆರೆಸದಂತೆ ಕರೆ ನೀಡುತ್ತಿವೆ.
ಅಡಿಕೆ ಬೆಳೆಗಾರರ ಸಂಘಟನೆಗಳು ಮತ್ತು ಸಂಸದರು ಕೇಂದ್ರ ಸರ್ಕಾರಕ್ಕೆ ಪದೇಪದೇ ಮನವಿ ಸಲ್ಲಿಸಿ, ಅಕ್ರಮ ಆಮದು ಮತ್ತು ಕಳ್ಳಸಾಗಣೆಯನ್ನು ತಡೆಯುವಂತೆ, ಕನಿಷ್ಠ ಆಮದು ಬೆಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮತ್ತು ಬಂದರುಗಳಲ್ಲಿ ನಿಗಾ ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ. ಕ್ಯಾಂಪ್ಕೊ ಮತ್ತು ಇತರ ಸಂಸ್ಥೆಗಳು ಆಮದು ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಬೆರೆಸುವುದನ್ನು ತಡೆದು, ಬೆಳೆಗಾರರ ಹಿತಾಸಕ್ತಿ ರಕ್ಷಿಸುವುದಕ್ಕೆ ಸರ್ಕಾರದಿಂದ ತ್ವರಿತ ಕ್ರಮ ನಿರೀಕ್ಷಿಸುತ್ತಿವೆ.
ರಾಜ್ಯದ ಅಡಿಕೆ ಬೆಳೆಗಾರರು ಈಗ ರೋಗ, ಬೆಲೆ ಕುಸಿತ ಮತ್ತು ಆಮದು ಒತ್ತಡದಿಂದ ಅಡ್ಡಗತ್ತಿಗೆ ಸಿಕ್ಕ ಅಡಿಕೆಯಂತಾಗಿದ್ದು, ಸರ್ಕಾರಗಳು ಸಮನ್ವಯದಿಂದ ಕ್ರಮ ಕೈಗೊಳ್ಳದಿದ್ದರೆ ಅಡಿಕೆ ಕ್ಷೇತ್ರಕ್ಕೆ ದೀರ್ಘಕಾಲೀನ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಅಡಿಕೆ ಬೆಳೆಗಾರರ ಹಿತರಕ್ಷಣೆ ಬರೀ ರೈತರ ಸಮಸ್ಯೆಯಷ್ಟೇ ಅಲ್ಲ, ಅದು ರಾಜ್ಯದ ಆರ್ಥಿಕತೆಯ ಮೇಲೂ ಪ್ರಭಾವ ಬೀರುವ ವಿಚಾರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಅಕ್ರಮ ಆಮದು ಹಾಗೂ ಕಲಬೆರಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕನಿಷ್ಠ ಆಮದು ಬೆಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸ್ಥಳೀಯ ಉತ್ಪನ್ನದ ಗುಣಮಟ್ಟ ಕಾಯ್ದುಕೊಳ್ಳುವ ಜೊತೆಗೆ, ರೈತರ ಹಿತಾಸಕ್ತಿಯನ್ನು ಕಾಪಾಡುವುದು ಇಂದಿನ ತುರ್ತು ಅಗತ್ಯವಾಗಿದೆ.





