ಜೆನ್‌ ಝೀಗಳನ್ನು ಅರ್ಥಮಾಡಿಕೊಳ್ಳದೆ ಬಿಜೆಪಿ ‘ಔಟ್‌ ಡೇಟೆಡ್’ ಆಗುತ್ತಿದೆಯೇ?

Date:

ಹಳೆಯ ಕೋಮು ಅಜೆಂಡಾಗಳಿಗೆ ಮರಳಲು ಬಿಜೆಪಿ ನಾಯಕರು ಯತ್ನಿಸುತ್ತಿರುವಾಗ, ಜೆನ್ ಝೀಗಳು ಬೇರೆ ದಿಕ್ಕಿನಲ್ಲಿಯೇ ನಡೆಯುತ್ತಿದ್ದಾರೆ. ಈ ಪೀಳಿಗೆಯನ್ನು ಅರಿತುಕೊಳ್ಳುವಲ್ಲಿ ಬಿಜೆಪಿ ಎಡವಿರುವುದು ಹೇಗೆ?

ಒಂದಂತೂ ಸ್ಪಷ್ಟವಾಗುತ್ತಿದೆ: ಈ ಬಿಜೆಪಿಯರಿಗೆ `ಜೆನ್ ಝೀಗಳು’ ಮತ್ತು ಅವರ ಮನಸ್ಥಿತಿ ಸ್ವಲ್ಪವೂ ಅರ್ಥವಾದಂತೆ ಕಾಣುತ್ತಿಲ್ಲ. ಮತ್ತದೇ ಹಳಸಲು ಕೋಮು ಅಜೆಂಡಾವನ್ನು ಹಿಡಿದುಕೊಂಡು ಹೊರಟಿರುವ ಇವರು, “ಈ ಪ್ರತಿಭಟನೆಯ ಹಿಂದೆ ಮುಲ್ಲಾಗಳಿದ್ದಾರೆ, ಚೀನಿಯರಿದ್ದಾರೆ, ಪಾಕಿಸ್ತಾನಿಯರಿದ್ದಾರೆ” ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಾಯಿಚಪಲಕ್ಕೋ, ಹತಾಷೆಯ ಕಾರಣಕ್ಕೋ, ಹಳೆಯ ಕಾಯಿಲೆ ಉಲ್ಬಣಿಸುತ್ತಿರುವುದರಿಂದಲೋ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಇವುಗಳು ಬಿಜೆಪಿಗೆ ಭಾರೀ ನಷ್ಟವನ್ನೇ ಉಂಟು ಮಾಡುತ್ತವೆಯೇ ಹೊರತು, ಯಾವುದೇ ಉಪಯೋಗಕ್ಕೂ ಬಾರದು!  

- Advertisement -

ಬಿಜೆಪಿ ನಾಯಕರಿಗೆ ಮುಖ್ಯವಾಗಿ ಅರ್ಥವಾಗಬೇಕಿರುವ ಸಂಗತಿ ಏನು? ಜೆನ್‌ ಝೀಗಳು ‘ಬಾಬ್ರಿ ಮಸೀದಿ- ರಾಮ ಮಂದಿರ ಗಲಭೆ’ಯನ್ನು ನೋಡಿಕೊಂಡು, ಮಂಡಲ-ಕಮಂಡಲ ರಾಜಕಾರಣ ಉಚ್ಛ್ರಾಯ ಅವಧಿಯಲ್ಲಿದ್ದಾಗ ಬೆಳೆದು ಬಂದವರಲ್ಲ. ಅವುಗಳ ಬಗ್ಗೆ ಕೇಳಿದರೂ, ಪ್ರಭಾವಕ್ಕೆ ಒಳಗಾದವರಲ್ಲ. ಮಿಲೆನಿಯಲ್ಸ್ ಪೀಳಿಗೆ ರೀತಿಯಲ್ಲಿ ಕೋಮು ಪ್ರಚಾರಗಳಿಗೆ ಬಲಿಯಾದವರೂ ಅಲ್ಲ. “ಈ ಹಿಂದೆ ಹಿಂದೂ-ಮುಸ್ಲಿ‌ ಗಲಭೆ ಮಾಡ್ತಾ ಇದ್ದಿರಿ, ಈಗಲೂ ಅದನ್ನೇ ಎಷ್ಟು ದಿನ ಹೇಳ್ತೀರಾ ಸ್ವಾಮಿ, stop it yaar, ಇವತ್ತಿನ ಪ್ರಾಬ್ಲಮ್ ಕೇಳಿ” ಅನ್ನೋ ಹೊಸ ತಲೆಮಾರು ಇದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

1997ರಿಂದ 2012ರ ನಡುವೆ ಜನಿಸಿರುವ ತಲೆಮಾರನ್ನು ಜೆನ್‌ಝೀಗಳೆಂದು ಕರೆದಿದ್ದೇವೆ. ಈ ಪೀಳಿಗೆಯಲ್ಲಿನ ಮೊದಲ ಬ್ಯಾಚ್‌, ಅಂದರೆ 1997ರಲ್ಲಿ ಹುಟ್ಟಿದವರು 2015ರ ವೇಳೆಗೆ ಮತ ಹಾಕುವ ಅರ್ಹತೆ ಪಡೆದರು. ಅವರಿಗೆ ಸ್ಪಷ್ಟ ಚುನಾವಣೆ ಎದುರಾಗಿದ್ದೇ 2019ರಲ್ಲಿ. ಆ ವೇಳೆಗೆ ಪುಲ್ವಾಮಾ ಹತ್ಯಾಕಾಂಡ ನಡೆದಿತ್ತು. ದೇಶದ ಭದ್ರತಾ ವಿಚಾರವನ್ನು ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಸಶಕ್ತವಾಗಿ ಬಳಸಿಕೊಂಡ ಅವಧಿಯದು. ಈ ಪ್ರಚಾರ ತಂತ್ರದ ಪ್ರಭಾವಕ್ಕೆ ದೊಡ್ಡ ಮಟ್ಟದಲ್ಲಿ ಒಳಗಾಗಿದ್ದು ‘ಜೆನ್‌ ಝೀ’ಗಳು. 2019ರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಬಹುಮತವನ್ನು ಪಡೆಯುವುದಕ್ಕೆ ಈ ಹೊಸ ಮತದಾರರ ದೇಶಪ್ರೇಮವೂ ಕಾರಣವಾಗಿತ್ತು. ಸರ್ಕಾರಿ ಯಂತ್ರಾಂಗವು ಸೇನಾ ವಿಚಾರವನ್ನು ಮುನ್ನಲೆಗೆ ತಂದಿದ್ದು ಆಗಿನ್ನೂ ರಾಜಕಾರಣದತ್ತ ಕಣ್ಣುಬಿಡುತ್ತಿದ್ದ ಜೆನ್‌ ಝೀಗಳನ್ನು ಆಕರ್ಷಿಸಿತ್ತು.

special

ಹಾಗೆ ನೋಡಿದರೆ, ಮೊದಲ ಜೆನ್ ಝೀ ತಲೆಮಾರು ಆಗಷ್ಟೇ ಪದವಿ ಹಂತಕ್ಕೆ ಕಾಲಿಟ್ಟಿತ್ತು. 2024ರ ಚುನಾವಣೆ ವೇಳೆಗೆ ಬಹುತೇಕ ಸ್ನಾತಕ ಪದವಿ ಮುಗಿಸಿರುವ ಈ ಜೆನ್‌ಝೀ ಪೀಳಿಗೆ, ಈಗ ಜವಾಬ್ದಾರಿಗಳ ಹೊಸ್ತಿಲಲ್ಲಿ ಬಂದು ನಿಂತಿದೆ. ಓದುತ್ತಲೇ ಕಳೆದವರ ಕೈಗಳಿಗೆ ಈಗ ಉದ್ಯೋಗ ಬೇಕು, ನೆಲೆ ಬೇಕು, ಭವಿಷ್ಯದ ಬಗ್ಗೆ ಖಚಿತ ಭರವಸೆ ಬೇಕು. ಅವರಿಗೆ ಕೇವಲ ದೇಶಪ್ರೇಮದ ಉಪದೇಶ ಬೇಕಿಲ್ಲ. ಅವರ ಭವಿಷ್ಯವನ್ನು ಉಳಿಸುವುದೇ ನಿಜವಾದ ದೇಶಪ್ರೇಮ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿರಿ: ವಿದ್ಯಾರ್ಥಿಗಳೇನೋ ಬೀದಿಯಲ್ಲಿದ್ದಾರೆ; ವಿಶ್ವದ ನಂ.1 ವಿದ್ಯಾರ್ಥಿ ಸಂಘಟನೆ ABVP ಎಲ್ಲಿದೆ?

ತಂತ್ರಜ್ಞಾನ ಬೆಳೆದಂತೆ, ಅದರೊಂದಿಗೆ ಬರುವ ತಲೆಮಾರಿನ ಬುದ್ಧಿಮತ್ತೆಯೂ ವೇಗವಾಗಿರುತ್ತದೆ. ಈ ಜೆನ್‌ ಝೀಗಳು ಕನಸುಗಳನ್ನು ಹೊತ್ತು ಸಾಗಿದ್ದಾರೆ. ದುರಾದೃಷ್ಟವಶಾತ್ ಬುದ್ಧಿ ಬೆಳೆದಾಗಿನಿಂದಲೂ ಪರೀಕ್ಷಾ ಪ್ರಶ್ನೆಪತ್ರಿಕೆ ಲೀಕ್‌ ಸುದ್ದಿಗಳನ್ನು ಕೇಳುತ್ತಲೇ ಬಂದಿದ್ದಾರೆ; ಕೊನೆಗೊಮ್ಮೆ ಅವರ ಆಕ್ರೋಶ ಸ್ಫೋಟಿಸುತ್ತದೆ ಎಂದು ಸರ್ಕಾರ ನಿರೀಕ್ಷಿಸಿರಲಿಲ್ಲ.

ಇಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಿಮಿತ್ತ ಮಾತ್ರ. ಸಿಜೆಪಿ ಸೃಷ್ಟಿಕರ್ತರ ಹಿಡಿತವನ್ನೂ ದಾಟಿ ಚಳವಳಿ ಮುಂದಕ್ಕೆ ಸಾಗಿದೆ, ಈ ಹೋರಾಟದ ನಡುವೆ ಬಂದು ಹೋದ ಉಪವಾಸ ಸತ್ಯಾಗ್ರಹಿಗಳ ಹಿಡಿತವನ್ನೂ ತಪ್ಪಿಸಿಕೊಂಡು- ಈಗ ಸಂಪೂರ್ಣವಾಗಿ ಯಾವುದೇ ನಾಯಕತ್ವವಿಲ್ಲದ ಯುವಜನ ಆಂದೋಲನವಾಗಿ ಮುಂದೆ ಸಾಗುತ್ತಿದೆ.

‘ಸ್ಮಾರ್ಟ್‌ಫೋನ್‌ಗಳು, ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾಗಳು ಎಲ್ಲೆಡೆ ಲಭ್ಯವಿರುವ ತಂತ್ರಜ್ಞಾನದ ಯುಗದಲ್ಲಿ ಬೆಳೆದ ಮೊಟ್ಟಮೊದಲ ತಲೆಮಾರು- ಈ ಜೆನ್‌ ಝೀಗಳು’. ದೇಶಪ್ರೇಮ ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಬಿಜೆಪಿ ಮಾಡಿದ ಭಾರೀ ಪ್ರಚಾರ ಯಂತ್ರಾಂಗವನ್ನು ಮೆಚ್ಚಿ, ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಗೆ ಮತ ಹಾಕಿದವರೂ ಈ ಜೆನ್‌ಝೀಗಳೇ. ಆದರೆ ಇಂತಹ ಸಮುದಾಯದ ಚಳವಳಿಯನ್ನು ‘ದೇಶದ್ರೋಹಿಗಳ ಹೋರಾಟ, ನುಸುಳುಕೋರರ ಹೋರಾಟ’ ಎಂದು ಜರಿದರೆ ಈ ಜೆನ್‌ಝೀಗಳಿಗೆ ಏನನ್ನಿಸಬಹುದು? ಯಾರು ದೇಶಪ್ರೇಮದ ಹೆಸರಲ್ಲಿ ತಮ್ಮಿಂದ ಮತಪಡೆದರೋ, ಅವರೇ ಇಂದು ತಮ್ಮನ್ನು ದೇಶದ್ರೋಹಿಗಳೆಂದರೆ ಏನನ್ನಿಸಬಹುದು? ಇಷ್ಟು ಸರಳ ಪ್ರಶ್ನೆಯನ್ನು ಬಿಜೆಪಿ ನಾಯಕರು ಕೇಳಿಕೊಂಡಿದ್ದರೂ ಅತಿರೇಕದ ಟೀಕೆಗಳಿಗೆ ಹೋಗುತ್ತಿರಲಿಲ್ಲ.

ಭಾರತದಲ್ಲಿ 37 ರಿಂದ 40 ಕೋಟಿಯಷ್ಟು ಜೆನ್‌ಝೀಗಳಿದ್ದಾರೆ ಎನ್ನುತ್ತವೆ ವರದಿಗಳು. ಹಾಗೆ ನೋಡಿದರೆ ವಿಶ್ವದಲ್ಲೇ ಅತಿ ಹೆಚ್ಚು ಜೆನ್‌ ಝೀಗಳನ್ನು ಹೊಂದಿರುವ ರಾಷ್ಟ್ರ- ನಮ್ಮದು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಜೆನ್‌ ಝೀ ಪೀಳಿಗೆಯ ಪಾಲು ಶೇಕಡಾ 28ರಷ್ಟು ಇದೆ. ಭಾರತದ ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ದೇಶದ ಒಟ್ಟು ನೋಂದಾಯಿತ ಮತದಾರರಲ್ಲಿ (ಸುಮಾರು 96.8 ಕೋಟಿ), 18 ರಿಂದ 29 ವರ್ಷ ವಯಸ್ಸಿನ ಯುವ ಮತದಾರರು ಅಂದಾಜು 20 ರಿಂದ 22 ಕೋಟಿಗಳಷ್ಟಿದ್ದಾರೆ. ಇದು ದೇಶದ ಒಟ್ಟು ಮತದಾರರ ಪಟ್ಟಿಯ ಶೇಕಡಾ 20 ರಿಂದ 22ರಷ್ಟು ಭಾಗವನ್ನು ಹೊಂದಿದೆ. ಇಷ್ಟು ದೊಡ್ಡ ಸಂಖ್ಯೆಯ ಪೀಳಿಗೆಯ ಚಳವಳಿಯನ್ನು ‘ದೇಶದ್ರೋಹಿಗಳ ಹೋರಾಟ’ ಎಂದು ಮೂದಲಿಸುವವನು ರಾಜಕೀಯ ಅನರಕ್ಷರಸ್ಥನಷ್ಟೇ.

ಜೆನ್‌ ಝೀಗಳ ಕುರಿತು ಆಗಿರುವ ಸಮೀಕ್ಷೆ ವಿವರಗಳನ್ನು ನೋಡಿದರೆ, ಇದು ನಿರ್ಲಕ್ಷಿಸಬಹುದಾದ ಸಮುದಾಯವಲ್ಲ ಎಂದೂ, ಅವರ ಆದ್ಯತೆಗಳು ಏನು ಎಂಬುದೂ ಗೊತ್ತಾಗುತ್ತದೆ. CSDS-ಲೋಕನೀತಿ ಸಂಸ್ಥೆಯು ಜರ್ಮನಿಯ ಫ್ರೀಡ್ರಿಕ್ ಎಬರ್ಟ್ ಸ್ಟಿಫ್ಟುಂಗ್ (FES) ಸಂಸ್ಥೆಯೊಂದಿಗೆ ಜಂಟಿಯಾಗಿ ಭಾರತದ ಯುವಜನರ ಮೇಲೆ ಬೃಹತ್ ಸಮೀಕ್ಷೆಗಳನ್ನು ನಡೆಸಿತು. ಇದರ ಪ್ರಮುಖ ವರದಿಗಳು 2016 ಮತ್ತು 2021 ರಲ್ಲಿ ಪ್ರಕಟವಾದವು (2021ರ ಸಮೀಕ್ಷೆಯು ಜೆನ್ ಝೀ ಪೀಳಿಗೆಯ ಆರಂಭಿಕ ಮನಸ್ಥಿತಿಯನ್ನು ಹಿಡಿದಿಡಲು ಅತಿ ಮುಖ್ಯ ಆಧಾರವಾಗಿದೆ). 2019 ಮತ್ತು 2024ರ ಲೋಕಸಭಾ ಚುನಾವಣೆಗಳ ನಂತರ CSDS ನಡೆಸಿದ ದೇಶವ್ಯಾಪಿ ಸಮೀಕ್ಷೆಗಳಲ್ಲಿ, ಮೊದಲ ಬಾರಿಗೆ ಮತದಾನ ಮಾಡಿದ ಜೆನ್ ಝೀ (18-22 ವರ್ಷದ ಯುವಜನರು) ಮತದಾರರ ಪ್ರವೃತ್ತಿಯನ್ನು ಮೌಲ್ಯಮಾಪನ ಮಾಡಲಾಗಿತ್ತು.

ಇದನ್ನೂ ಓದಿರಿ: ಪ್ರಧಾನ್‌ ರಾಜೀನಾಮೆ ಯಾಕಿಲ್ಲ? ಇದೇನಾ ಬಿಜೆಪಿಯ ರಾಜಕೀಯ ಲೆಕ್ಕಾಚಾರ?

CSDS ಅಧ್ಯಯನದ ಪ್ರಕಾರ, ಭಾರತೀಯ ಜೆನ್ ಝೀ ಯುವಜನರನ್ನು ಕಾಡುತ್ತಿರುವ ಅತಿ ದೊಡ್ಡ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆ ಎಂದರೆ ‘ನಿರುದ್ಯೋಗ’. ಸಮೀಕ್ಷೆಯಲ್ಲಿ ಭಾಗವಹಿಸಿದ 40%ಕ್ಕಿಂತ ಹೆಚ್ಚು ಯುವಜನರು ದೇಶ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ನಿರುದ್ಯೋಗ ಎಂದು ನೇರವಾಗಿ ಹೇಳಿದ್ದಾರೆ. ಇವರ ರಾಜಕೀಯ ಒಲವುಗಳು ಯಾವುದೇ ಪಕ್ಷದ ಸಿದ್ಧಾಂತಕ್ಕಿಂತ ಹೆಚ್ಚಾಗಿ, “ಯಾವ ಸರ್ಕಾರ ನಮಗೆ ಉದ್ಯೋಗ ಭದ್ರತೆ ನೀಡುತ್ತದೆ?” ಎಂಬ ಪ್ರಾಯೋಗಿಕ ಯೋಚನೆಯ ಮೇಲೆ ನಿರ್ಧಾರವಾಗುತ್ತದೆ ಎಂದು ವರದಿ ಸ್ಪಷ್ಟಪಡಿಸುತ್ತದೆ. ಜೆನ್ ಝೀಗಳು ನಿರುದ್ಯೋಗದ ಸಮಸ್ಯೆಯನ್ನು ಚುನಾವಣಾ ವಿಷಯವಾಗಿ ತೆಗೆದುಕೊಂಡು ಮುನ್ನಡೆದರೆ ಆಡಳಿತ ಪಕ್ಷಕ್ಕೆ ಪೆಟ್ಟುಬೀಳುವುದು ಖಚಿತ.

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಬಹುದೊಡ್ಡ ಪಕ್ಷವಾಗಿ ಹೊಮ್ಮಿತು. ವಿಜಯ್ ಮುಖ್ಯಮಂತ್ರಿಯೂ ಆದರು. ಇದಕ್ಕೆ ಪ್ರಮುಖ ಕಾರಣ ‘ಜೆನ್ ಝೀ’ಗಳು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ತಮಿಳುನಾಡಿನ ಒಟ್ಟು ಮತದಾರರಲ್ಲಿ 18 ರಿಂದ 29 ವರ್ಷದೊಳಗಿನ ಯುವಜನರ ಸಂಖ್ಯೆ 1.2 ಕೋಟಿಗೂ (ಸುಮಾರು ಶೇ. 21) ಹೆಚ್ಚಾಗಿತ್ತು. ಇದರಲ್ಲಿ 14 ಲಕ್ಷಕ್ಕೂ ಹೆಚ್ಚು ಮಂದಿ ಮೊದಲ ಬಾರಿಗೆ ಮತದಾನ ಮಾಡಿದ ‘ಜೆನ್ ಝೀ’ಗಳಾಗಿದ್ದರು. ಈ ಇಡೀ ಯುವ ಸಮೂಹವು ಒಟ್ಟಾಗಿ ವಿಜಯ್ ಅವರ ಬೆನ್ನಿಗೆ ನಿಂತಿತು. ಜೆನ್ ಝೀ ಯುವಕರಿಗೆ ಕರುಣಾನಿಧಿ ಅಥವಾ ಜಯಲಲಿತಾ ಅವರ ಕಾಲದ ಹಳೆಯ ರಾಜಕೀಯ ಹೋರಾಟಗಳ ನೆನಪುಗಳಿಲ್ಲ. ಅವರು ಕಣ್ಣಾರೆ ಕಂಡ ಸದ್ಯದ ನಿರುದ್ಯೋಗ ಮತ್ತು ಭ್ರಷ್ಟಾಚಾರಕ್ಕೆ ಬೇಸತ್ತು ‘ಬದಲಾವಣೆ’ಗಾಗಿ ಟಿವಿಕೆ ಪಕ್ಷವನ್ನು ಬೆಂಬಲಿಸಿದರು. ಜೆನ್‌ ಝೀಗಳು ಯೋಚಿಸುವುದೇ ಹೀಗೆ. ಅವರಿಗೆ ಹಳೆಯ ರಾಜಕೀಯ ಮಾದರಿ ಅಪಥ್ಯ. ಬದುಕಿನ ಭರವಸೆಗಳಷ್ಟೇ ಮುಖ್ಯ. ಸಂಶೋಧನೆಗಳು, ಸಮೀಕ್ಷೆಗಳು ಹೇಳುತ್ತಿರುವುದು ಇದನ್ನೇ. ಹೀಗಿದ್ದರೂ ಸರ್ಕಾರ ಮತ್ತು ಅದರ ಬೆಂಬಲಿಗರು ಸವಕಲು ತಂತ್ರಗಳಲ್ಲೇ ಮುಳುಗೇಳುತ್ತಿರುವುದು ಏತಕ್ಕೆ? ನಿಜಕ್ಕೂ ಬಿಜೆಪಿ ಈಗ ಔಟ್ ಡೇಟೆಡ್ ಆಗಿದೆಯೇ?

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ 11 ಜಿಲ್ಲೆಗಳಲ್ಲಿ ಇನ್ನೂ 7 ದಿನ ಭಾರೀ ಮಳೆ

ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದೆ. ಪರಿಣಾಮ ರಾಜ್ಯದ ಹವಾಮಾನದಲ್ಲಿ ದಿಢೀರ್...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ ಜಿಯೋ ಸಾಮ್ರಾಜ್ಯ ರಕ್ಷಣೆಗೆ ನಿಂತಿತೇ RSS?

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್...