ಬಾಗಲಕೋಟೆ ವಿಧಾನಸಭಾ ಕ್ಷೇತ್ರದ BJP ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಕ್ಷೇತ್ರದ ಗ್ರಾಮೀಣ ಭಾಗದ ವಿವಿಧ ತಾಂಡಾಗಳಲ್ಲಿ ಶಾಸಕರುಗಳಾದ ಚಂದ್ರು ಲಮಾಣಿ ಹಾಗೂ ಕೃಷ್ಣಾ ನಾಯಕ ಅವರು ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.
ಪ್ರಚಾರದ ವೇಳೆ ಮಾತನಾಡಿದ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಹಾಗೂ ಹೂವಿನ ಹಡಗಲಿ ಶಾಸಕ ಕೃಷ್ಣಾ ನಾಯಕ ಅವರು, “ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ವಿಷಯದಲ್ಲಿ ಬಂಜಾರಾ ಸಮುದಾಯಕ್ಕೆ ದೊಡ್ಡ ಮಟ್ಟದ ದ್ರೋಹ ಎಸಗಿದೆ. ಸಮುದಾಯದ ಹಿತದೃಷ್ಟಿಯಿಂದ ಈ ಬಾರಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ. ಬಿಜೆಪಿ ಅಭ್ಯರ್ಥಿಯ ಭರ್ಜರಿ ಗೆಲುವಿನಲ್ಲಿ ಬಂಜಾರಾ ಸಮಾಜದ ಪಾತ್ರ ನಿರ್ಣಾಯಕವಾಗಿರಬೇಕು” ಎಂದು ಮನವಿ ಮಾಡಿದರು.
ಶಾಸಕದ್ವಯರ ಮಾತಿಗೆ ಸ್ಪಂದಿಸಿದ ಸಮುದಾಯದ ನೂರಾರು ಯುವಕರು ಹಾಗೂ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ರವಿ ಪವಾರ, ರಾಜು ರಾಠೋಡ, ಜಗದೀಶ ಪವಾರ, ಕೃಷ್ಣಾ ರಾಠೋಡ, ಹುಸೈನಿ ಬೆಪಾರಿ, ಶೆಕಪ್ಪಾ ಬಾಳಿಕಾಯಿ, ಆನಂದ ಭಜಂತ್ರಿ, ಮಹೆಬೂಬ ಡಂಗಿ, ಸಚೀನ ಕಡಿವಾಲ, ಸದ್ದಾಂ ಡಂಗಿ, ಸುನೀಲ ರಾಠೋಡ ಸೇರಿದಂತೆ ಹಲವರು ಕೇಸರಿ ಶಾಲು ಹೊದಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಇದನ್ನೂ ಓದಿ: ಬಾಗಲಕೋಟೆ | ತಂದೆ ಹೆಸರಲ್ಲಿ ಕೈ ಅಭ್ಯರ್ಥಿ ಉಮೇಶ ಮೇಟಿ ಮತಯಾಚನೆ
ಈ ಸಂದರ್ಭದಲ್ಲಿ ಮುಖಂಡರಾದ ಹೂವಪ್ಪಾ ರಾಠೋಡ, ದಿಲೀಪ ರಾಠೋಡ, ಮಹಾಂತೇಶ ಲಮಾಣಿ, ಪ್ರಕಾಶ ಲಮಾಣಿ, ಶಂಕರ ಚವ್ಹಾಣ, ರಂಗನಗೌಡಾ ಗೌಡರ, ಮೋತಿಲಾಲ ರಾಠೋಡ, ಸುರೇಶ ಲಮಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಕ್ಷಕ್ಕೆ ಸೇರ್ಪಡೆಯಾದವರನ್ನು ಶಾಸಕರು ಹೃತ್ಪೂರ್ವಕವಾಗಿ ಬರಮಾಡಿಕೊಂಡರು ಎಂದು ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿಲೀಪ ರಾಠೋಡ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




