ಸದ್ಯ ಅಮೆರಿಕಕ್ಕೆ ಕೋಟ್ಯಂತರ ರೂಪಾಯಿ ದಂಡ ಕಟ್ಟಿ ಕ್ರಿಮಿನಲ್ ಪ್ರಕರಣ ಮುಗಿಸಿಕೊಂಡು, ಜಾಗತಿಕ ಉದ್ಯಮ ರಂಗದಲ್ಲಿ ಕ್ಲೀನ್ ಚಿಟ್ ಪಡೆಯಲು ಅದಾನಿ ಗ್ರೂಪ್ ಯತ್ನಿಸುತ್ತಿದೆ. ಬಹುತೇಕ ಪಡೆದಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮುವ ಮುನ್ಸೂಚನೆ ಸಿಕ್ಕಿದೆ.
ಇರಾನ್ ಮೇಲಿನ ಅಮೆರಿಕದ ಕಠಿಣ ಆರ್ಥಿಕ ನಿರ್ಬಂಧಗಳನ್ನು (US Sanctions) ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತದ ದೈತ್ಯ ಉದ್ಯಮ ಸಮೂಹ ʼಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ʼ (AEL), ಅಮೆರಿಕದ ಹಣಕಾಸು ಇಲಾಖೆಯೊಂದಿಗೆ ಭಾರಿ ಮೊತ್ತದ ರಾಜಿ ಸಂಧಾನಕ್ಕೆ ಮುಂದಾಗಿದೆ. ಒಟ್ಟು 32 ಬಾರಿ ನಿಯಮಗಳನ್ನು ಉಲ್ಲಂಘಿಸಿದ ಸಂಭವನೀಯ ನಾಗರಿಕ ಹೊಣೆಗಾರಿಕೆಯ (Civil Liability) ಹಿನ್ನೆಲೆಯಲ್ಲಿ, ಅದಾನಿ ಸಂಸ್ಥೆಯು ಅಮೆರಿಕಕ್ಕೆ 275 ಮಿಲಿಯನ್ ಡಾಲರ್ (ಅಂದಾಜು 2,650 ಕೋಟಿ ರೂಪಾಯಿ) ಹಣವನ್ನು ದಂಡದ ರೂಪದ ಸೆಟಲ್‌ಮೆಂಟ್ ಪಾವತಿಸಲು ಒಪ್ಪಿಕೊಂಡಿದೆ.
ಕಳೆದ ಕೆಲವು ತಿಂಗಳುಗಳಿಂದ ಅಮೆರಿಕದ ವಿವಿಧ ತನಿಖಾ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅದಾನಿ ಸಮೂಹಕ್ಕೆ, ಈ ಸೆಟಲ್‌ಮೆಂಟ್ ಒಂದು ಕಡೆ ಆರ್ಥಿಕ ಹೊರೆಯಾಗಿದ್ದರೂ, ಮತ್ತೊಂದೆಡೆ ಕಾನೂನು ಕಂಟಕದಿಂದ ಮುಕ್ತಿ ಪಡೆಯಲು ರಹದಾರಿ ನಿರ್ಮಿಸಿಕೊಟ್ಟಿದೆ.
ಏನಿದು ಇರಾನ್ ಲಿಂಕ್ ಪ್ರಕರಣ? ತನಿಖೆ ನಡೆದಿದ್ದು ಏಕೆ?
ಅಮೆರಿಕದ ಹಣಕಾಸು ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (OFAC) ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಅದಾನಿ ಎಂಟರ್‌ಪ್ರೈಸಸ್ ದುಬೈ ಮೂಲದ ವ್ಯಾಪಾರಿಯೊಬ್ಬರಿಂದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸರಕುಗಳನ್ನು ಖರೀದಿಸಿತ್ತು. ಈ ಗ್ಯಾಸ್ ಒಮಾನ್ ಮತ್ತು ಇರಾಕ್ ದೇಶಗಳಿಂದ ಸರಬರಾಜಾಗುತ್ತಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿತ್ತು. ಆದರೆ, ಅಮೆರಿಕದ ತನಿಖೆಯ ವೇಳೆ ಈ ಗ್ಯಾಸ್ ಮೂಲತಃ ಇರಾನ್ ದೇಶದಿಂದ ಬಂದಿರುವುದು ಪತ್ತೆಯಾಗಿದೆ. ಇರಾನ್‌ನಿಂದ ಯಾವುದೇ ರೀತಿಯ ತೈಲ ಅಥವಾ ಗ್ಯಾಸ್ ಉತ್ಪನ್ನಗಳನ್ನು ಖರೀದಿಸದಂತೆ ಅಮೆರಿಕ ಜಾಗತಿಕವಾಗಿ ಕಠಿಣ ದಿಗ್ಬಂಧನ ಹೇರಿದೆ.
ಆದಾಗ್ಯೂ, ಈ ವ್ಯವಹಾರದಲ್ಲಿ ಭಾಗಿಯಾಗಿದ್ದ ಯಾವುದೇ ಸಂಸ್ಥೆಗಳಾಗಲಿ ಅಥವಾ ಅದಾನಿಗೆ ನೀಡಲಾಗಿದ್ದ ಸಾಗಾಟದ ದಾಖಲೆಗಳಲ್ಲಾಗಲಿ, ಈ ಗ್ಯಾಸ್ ಇರಾನ್ ದೇಶದ್ದು ಎಂದು ಎಲ್ಲೂ ಉಲ್ಲೇಖಿಸಿರಲಿಲ್ಲ ಎಂದು OFAC ಸ್ಪಷ್ಟಪಡಿಸಿದೆ. ಆದರೆ, ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್ಸ್ ಸಂಸ್ಥೆಗಳು ಇಂತಹ ಸೂಕ್ಷ್ಮ ಜಾಗತಿಕ ವ್ಯವಹಾರಗಳನ್ನು ನಡೆಸುವಾಗ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಆರ್ಥಿಕ ನಿರ್ಬಂಧಗಳ ಅನುಸರಣಾ ನಿಯಮಗಳನ್ನು (Sanctions Compliance Program) ಸರಿಯಾಗಿ ಪಾಲಿಸಿರಲಿಲ್ಲ ಎಂದು ಅಮೆರಿಕ ಬೊಟ್ಟು ಮಾಡಿದೆ.
3,100 ಕೋಟಿ ರೂ. ತಲುಪಬೇಕಿದ್ದ ದಂಡದ ಮೊತ್ತ ಕಮ್ಮಿಯಾಗಿದ್ದು ಹೇಗೆ?
OFAC ಮಾರ್ಗಸೂಚಿಗಳ ಪ್ರಕಾರ, ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಇರಾನ್ ಮೂಲದ ಘಟಕಗಳಿಗೆ ಪರೋಕ್ಷವಾಗಿ ಹಣ ವರ್ಗಾವಣೆಯಾಗಿರುವ ಗಂಭೀರ ಉಲ್ಲಂಘನೆ ಇದಾಗಿದ್ದರಿಂದ, ಕಾನೂನುಬದ್ಧವಾಗಿ ಗರಿಷ್ಠ 384 ಮಿಲಿಯನ್ ಡಾಲರ್ (ಸುಮಾರು 3,713 ಕೋಟಿ ರೂ.) ವರೆಗೆ ದಂಡ ವಿಧಿಸಲು ಅವಕಾಶವಿತ್ತು. ಆದರೆ ಅಂತಿಮವಾಗಿ ಇದನ್ನು 275 ಮಿಲಿಯನ್ ಡಾಲರ್‌ಗೆ ಇಳಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣಗಳೂ ಇವೆ;
ಎಚ್ಚೆತ್ತ ಬಳಿಕ ತಿದ್ದುಪಡಿ ಕ್ರಮಗಳು: 2023ರ ಜೂನ್‌ನಿಂದ ನಡೆದ ವ್ಯವಹಾರಗಳ ಬಗ್ಗೆ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಅದಾನಿ ಎಂಟರ್‌ಪ್ರೈಸಸ್ ತಕ್ಷಣವೇ ಇರಾನ್ ಲಿಂಕ್ ಹೊಂದಿದ್ದ ಎಲ್ಲಾ ಎಲ್‌ಪಿಜಿ ಆಮದನ್ನು ಸ್ಥಗಿತಗೊಳಿಸಿತು ಮತ್ತು ತನ್ನ ಆಂತರಿಕ ನಿಯಂತ್ರಣ ವ್ಯವಸ್ಥೆಯನ್ನು ಬಿಗಿಗೊಳಿಸಿತು.
ಸ್ವಯಂ ವರದಿ (Self-Reporting): 2025ರಲ್ಲಿ ಮುದ್ರಾ ಬಂದರಿನಲ್ಲಿ ಇರಾನ್ ಮೂಲದ ಎಲ್‌ಪಿಜಿ ಹೊತ್ತ ಹಡಗು ಬಂದಿಳಿದ ತಕ್ಷಣ, ಅದಾನಿ ಸಮೂಹವೇ ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಅಮೆರಿಕದ OFAC ಗಮನಕ್ಕೆ ತಂದಿತ್ತು.
ಸಂಪೂರ್ಣ ಸಹಕಾರ: ತನಿಖೆ ಆರಂಭವಾಗುತ್ತಿದ್ದಂತೆ ಅದಾನಿ ಸಂಸ್ಥೆಯು ಅಮೆರಿಕದ ಕಾನೂನು ಸಲಹೆಗಾರರನ್ನು ನೇಮಿಸಿ, ಬೃಹತ್ ಪ್ರಮಾಣದ ಆಂತರಿಕ ದಾಖಲೆಗಳನ್ನು ಮುಕ್ತವಾಗಿ ಒಪ್ಪಿಸಿ, ತನಿಖಾ ಸಂಸ್ಥೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿತ್ತು.
ಹಿಂಡನ್‌ಬರ್ಗ್ ಲಂಚದ ಕೇಸ್‌ಗಳೂ ಕ್ಲೋಸ್?
ಅದಾನಿ ಸಮೂಹಕ್ಕೆ ಇದು ಎರಡನೇ ದೊಡ್ಡ ನಿರಾಳತೆ. ಕಳೆದ ವಾರವಷ್ಟೇ, ಅಮೆರಿಕದ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ಹೂಡಿದ್ದ ಸಿವಿಲ್ ಮೊಕದ್ದಮೆಯನ್ನು ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ 18 ಮಿಲಿಯನ್ ಡಾಲರ್ (ಅಂದಾಜು 150 ಕೋಟಿ ರೂ.) ಪಾವತಿಸುವ ಮೂಲಕ ಇತ್ಯರ್ಥಪಡಿಸಿಕೊಂಡಿದ್ದರು.
ಭಾರತದಲ್ಲಿ ನವೀಕರಿಸಬಹುದಾದ ಇಂಧನ (Renewables) ಯೋಜನೆಗಳ ಗುತ್ತಿಗೆ ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವ ಯೋಜನೆಯನ್ನು ಮುಚ್ಚಿಟ್ಟು, ಅಮೆರಿಕದ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಲು ಸುಳ್ಳು ಹೇಳಿದ್ದಾರೆ ಎಂಬ ಗಂಭೀರ ಆರೋಪ ಇವರ ಮೇಲಿತ್ತು. 2023ರ ಹಿಂಡನ್‌ಬರ್ಗ್ ವರದಿಯ ನಂತರ ಜಾಗತಿಕವಾಗಿ ಚರ್ಚೆಯಾಗಿದ್ದ ಈ ಲಂಚದ ಆರೋಪ ಈಗ ಸಿವಿಲ್ ಕೋರ್ಟ್‌ನಲ್ಲಿ ರಾಜಿ ಸಂಧಾನದ ಹಂತ ತಲುಪಿದೆ.
ಅಮೆರಿಕದ ಮೂಲಗಳ ಪ್ರಕಾರ, ಅಮೆರಿಕದ ನ್ಯಾಯಾಂಗ ಇಲಾಖೆಯು (DOJ) ಗೌತಮ್ ಅದಾನಿ ಮೇಲಿದ್ದ ಕ್ರಿಮಿನಲ್ ವಂಚನೆ (Criminal Fraud) ಆರೋಪಗಳನ್ನು ಸಂಪೂರ್ಣವಾಗಿ ಕೈಬಿಡಲು ಸಿದ್ಧತೆ ನಡೆಸಿದೆ. ಇದಕ್ಕೆ ಪೂರಕವೆಂಬಂತೆ, ಗೌತಮ್ ಅದಾನಿ ಮುಂಬರುವ ದಿನಗಳಲ್ಲಿ ಅಮೆರಿಕದ ಆರ್ಥಿಕತೆಯಲ್ಲಿ 10 ಬಿಲಿಯನ್ ಡಾಲರ್ (ಸುಮಾರು 96,658 ಕೋಟಿ ರೂಪಾಯಿ) ಬೃಹತ್ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಕಳೆದ ಹಲವು ತಿಂಗಳುಗಳಿಂದ ಅಮೆರಿಕದ DOJ, SEC ಮತ್ತು OFAC ಸಂಸ್ಥೆಗಳ ತ್ರಿವಳಿ ತನಿಖೆಯ ಕತ್ತಿ ಅದಾನಿ ಸಮೂಹದ ತಲೆಯ ಮೇಲೆ ತೂಗುತ್ತಿತ್ತು. ಇದರಿಂದಾಗಿ ಜಾಗತಿಕ ಹೂಡಿಕೆದಾರರು ಅದಾನಿ ಷೇರುಗಳಿಂದ ದೂರ ಸರಿಯುವ ಭೀತಿ ಇತ್ತು. ಆದರೆ ಈಗ ಒಂದರ ನಂತರ ಒಂದರಂತೆ ಮೂರೂ ಜಾಗತಿಕ ತನಿಖೆಗಳು ಇತ್ಯರ್ಥದ ಹಂತ ತಲುಪಿರುವುದು ಅದಾನಿ ಗ್ರೂಪ್ ಮೇಲಿನ “ದೊಡ್ಡ ಕಾನೂನು ಕಪ್ಪುಚುಕ್ಕೆ”ಯನ್ನು (Legal Overhang) ತೊಡೆದುಹಾಕಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇಷ್ಟೆಲ್ಲಾ ಜಾಗತಿಕ ತನಿಖೆ ಮತ್ತು ಬಿಕ್ಕಟ್ಟುಗಳ ನಡುವೆಯೂ ಅದಾನಿ ಸಮೂಹದ ಮೂಲಸೌಕರ್ಯ (Infrastructure), ಲಾಜಿಸ್ಟಿಕ್ಸ್ ಮತ್ತು ಇಂಧನ ಉದ್ಯಮಗಳು ಅಬಾಧಿತವಾಗಿ ಮುನ್ನಡೆದಿವೆ ಎನ್ನುತ್ತದೆ ಕಂಪನಿಯ ಇತ್ತೀಚಿನ ಹಣಕಾಸು ವರದಿ.
ಗೌತಮ್ ಅದಾನಿಯ ಕಂಪನಿಗಳ ವ್ಯವಹಾರಿಕ ಶೈಲಿ, ಶೇರು ಮಾರುಕಟ್ಟೆಯ ನಿಯಮಗಳ ಉಲ್ಲಂಘನೆ ಮತ್ತು ವಂಚನೆಯ ಕುರಿತ ಆರೋಪಗಳು ಅದಾನಿ ಸಮೂಹದ ಮೇಲಿದ್ದರೂ ಅದರ ವಿರುದ್ಧ ಭಾರತದಲ್ಲಿ ಯಾವುದೇ ಕ್ರಿಮಿನಲ್ ಪ್ರಪ್ರಕರಣಗಳಿಲ್ಲ.
ಭಾರತದಲ್ಲಿ ಅದಾನಿ ಸಮೂಹದ ಮೇಲಿರುವ ಪ್ರಮುಖ ಹೀಗಿವೆ..
ಹಿಂಡನ್‌ಬರ್ಗ್ ಆರೋಪ ಮತ್ತು ಸೆಬಿ (SEBI) ತನಿಖೆ
2023ರ ಜನವರಿಯಲ್ಲಿ ಅಮೆರಿಕದ ‘ಹಿಂಡನ್‌ಬರ್ಗ್ ರಿಸರ್ಚ್’ ಸಂಸ್ಥೆಯು ಅದಾನಿ ಸಮೂಹವು ಶೇರು ಮಾರುಕಟ್ಟೆಯಲ್ಲಿ ಭಾರಿ ವಂಚನೆ ಎಸಗಿದೆ ಮತ್ತು ವಿದೇಶಿ ಶೆಲ್ ಕಂಪನಿಗಳ (ನಕಲಿ ಕಂಪನಿಗಳು) ಮೂಲಕ ತನ್ನದೇ ಕಂಪನಿಯ ಶೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿದೆ ಎಂದು ಆರೋಪಿಸಿತ್ತು.
ಈ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಭಾರತದ ಶೇರು ಮಾರುಕಟ್ಟೆ ನಿಯಂತ್ರಣ ಮಂಡಳಿಯಾದ ʼಸೆಬಿ’ (SEBI) ಗೆ ಸೂಚಿಸಿತ್ತು. ಸೆಬಿ ಒಟ್ಟು 24 ವಿಷಯಗಳ ಕುರಿತು ತನಿಖೆ ನಡೆಸಿ, ಬಹುತೇಕ ವರದಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಕೆಲವು ನಿಯಮ ಉಲ್ಲಂಘನೆಗಳಾಗಿದ್ದರೂ, ವ್ಯವಸ್ಥಿತವಾದ ದೊಡ್ಡ ವಂಚನೆ ನಡೆದಿದೆ ಎಂಬುದಕ್ಕೆ ಬಲವಾದ ಸಾಕ್ಷಿ ಸಿಕ್ಕಿಲ್ಲ ಎಂದು ಸೆಬಿ ಹೇಳಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತನಿಖೆ
ಅದಾನಿ ಸಮೂಹವು ವಿದೇಶಗಳಿಂದ ಕಲ್ಲಿದ್ದಲು (Coal) ಮತ್ತು ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳುವಾಗ, ಬಿಲ್‌ಗಳಲ್ಲಿ ವಾಸ್ತವ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ತೋರಿಸಿ (Over-invoicing) ಭಾರತದಿಂದ ಹಣವನ್ನು ವಿದೇಶಕ್ಕೆ ಸಾಗಿಸಿದೆ ಎಂಬ ಆರೋಪದ ಮೇಲೆ DRI ತನಿಖೆ ನಡೆಸಿತ್ತು.
ಈ ಪ್ರಕರಣವು ಕಸ್ಟಮ್ಸ್ ನ್ಯಾಯಾಧಿಕರಣ (ಕೋರ್ಟ್) ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆಯ ನಂತರ, ಅದಾನಿ ಸಮೂಹದ ವಿರುದ್ಧದ ಓವರ್-ಇನ್ವಾಯ್ಸಿಂಗ್ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಧಿಕರಣ ಅದಾನಿ ಪರವಾಗಿ ತೀರ್ಪು ನೀಡಿತು.
ಭಾರತದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಗೌತಮ್ ಅದಾನಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಪ್ತ ಸಂಬಂಧ ಹೊಂದಿದ್ದು, ನಿಯಮಗಳನ್ನು ಗಾಳಿಗೆ ತೂರಿ ದೇಶದ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಕಲ್ಲಿದ್ದಲು ಗಣಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಿರಂತರವಾಗಿ ಆರೋಪಿಸುತ್ತವೆ. ಯಾವುದಕ್ಕೂ ದೂರಿಲ್ಲ, ತನಿಖೆ ಇಲ್ಲ.
ಇದನ್ನೂ ಓದಿ: ಅಭಿವೃದ್ಧಿ ಹೆಸರಲ್ಲಿ ಮಹಾ ವಂಚನೆ? ʼಗ್ರೇಟ್ ನಿಕೋಬಾರ್ ಯೋಜನೆʼ ವಿವಾದದ ಸುತ್ತ
ಅಮೆರಿಕದಲ್ಲಿ ದೂರು ದಾಖಲಾಗಿದ್ದು ಹೇಗೆ?
ಅಮೆರಿಕದ ಕಾನೂನಿನ ಪ್ರಕಾರ (ಲಂಚ ಮತ್ತು ವಂಚನೆ ತಡೆ ಕಾಯ್ದೆ), ಅಮೆರಿಕದ ಹೂಡಿಕೆದಾರರಿಂದ ಬಂಡವಾಳ ಪಡೆದ ಯಾವುದೇ ವಿದೇಶಿ ಕಂಪನಿಯು ಜಗತ್ತಿನ ಯಾವುದೇ ಮೂಲೆಯಲ್ಲಿ ಲಂಚ ನೀಡಿದರೂ ಅದನ್ನು ಅಮೆರಿಕದ ನ್ಯಾಯಾಲಯಗಳಲ್ಲೇ ಪ್ರಶ್ನಿಸಬಹುದು. ಹಾಗಾಗಿಯೇ ಅಮೆರಿಕದಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಭಾರತದಲ್ಲಿ, ಜಾಗತಿಕ ಹೂಡಿಕೆದಾರರನ್ನು ವಂಚಿಸಿದ ನೇರ ದೂರುಗಳು ಸಾಬೀತಾಗದ ಹೊರತು ಅಥವಾ ಭಾರತೀಯ ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡದೆ ವಂಚನೆ (Default) ಮಾಡದ ಹೊರತು ತನಿಖಾ ಸಂಸ್ಥೆಗಳು ಕ್ರಿಮಿನಲ್ ಕ್ರಮ ಕೈಗೊಳ್ಳಲು ಆಗುವುದಿಲ್ಲ.
ಸದ್ಯ ಅಮೆರಿಕಕ್ಕೆ ಕೋಟ್ಯಂತರ ರೂಪಾಯಿ ದಂಡ ಕಟ್ಟಿ ಪ್ರಕರಣ ಮುಗಿಸಿಕೊಂಡು, ಜಾಗತಿಕ ಉದ್ಯಮ ರಂಗದಲ್ಲಿ ಕ್ಲೀನ್ ಚಿಟ್ ಪಡೆಯಲು ಅದಾನಿ ಗ್ರೂಪ್ ಯತ್ನಿಸುತ್ತಿದೆ. ಬಹುತೇಕ ಪಡೆದಿದೆ. ಭಾರತೀಯ ಷೇರು ಮಾರುಕಟ್ಟೆಯ ಮೇಲೂ ಇದು ಪರಿಣಾಮ ಬೀರಲಿದೆ. ರಾಜಕೀಯ ದೈವಗಳ ಕೃಪಾಕಟಾಕ್ಷದಿಂದ ಅದಾನಿ ಗ್ರೂಪ್ ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮುವ ಮುನ್ಸೂಚನೆ ಸಿಕ್ಕಿದೆ.




